ನವಂಬರ್‍ 9,10,11: ದಿಲ್ಲಿಗೆ ಲಕ್ಷ-ಲಕ್ಷ ಕಾರ್ಮಿಕರ ಲಗ್ಗೆ

ಸಂಪುಟ: 
11
ಸಂಚಿಕೆ: 
34
Tuesday, 8 August 2017
 

ಜನ-ವಿರೋಧಿ, ಕಾರ್ಮಿಕ-ವಿರೋಧಿ ಧೋರಣೆಗಳ ವಿರುದ್ಧ ಮೂರು ದಿನಗಳ ಮಹಾಧರಣಿ ಅನಿರ್ದಿಷ್ಟಾವಧಿ
ಸಾರ್ವತ್ರಿಕ ಮುಷ್ಕರಕ್ಕೆ ಸಿದ್ಧತೆ- ರಾಷ್ಟ್ರೀಯ ಕಾರ್ಮಿಕ ಸಮಾವೇಶದ ನಿರ್ಧಾರ

ಆಗಸ್ಟ್ 8ರಂದು ದಿಲ್ಲಿಯಲ್ಲಿ ಸೇರಿದ ರಾಷ್ಟ್ರೀಯ ಕಾರ್ಮಿಕರ ಸಮಾವೇಶ  ಈ ವರ್ಷದ ನವಂಬರ್‍ 9,10 ಮತ್ತು 11ರಂದು ಸಂಸತ್ತಿನ ಮುಂದೆ ಎನ್‍ ಡಿಎ ಸರಕಾರದ ಜನ-ವಿರೋಧಿ, ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಲಕ್ಷಾಂತರ ಕಾರ್ಮಿಕರನ್ನು ಅಣಿನೆರೆಸಿ ಮೂರು ದಿನಗಳ ಧರಣಿ ನಡೆಸಲು ಮತ್ತು ಅದನ್ನನುಸರಿಸಿ ಅನಿರ್ದಿಷ್ಟಾವಧಿ ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಧರಿಸಿದೆ.

ಎಲ್ಲ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಈ ಸಮಾವೇಶವನ್ನು ಸಂಘಟಿಸಿತ್ತು. ಐಎನ್‍ ಟಿಯುಸಿ, ಎಐಟಿಯುಸಿ, ಹೆಚ್‍ ಎಂ ಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‍ ಇಡಬ್ಲ್ಯುಎ, ಎಐಸಿಸಿಟಿಯು, ಯುಟಿಯುಸಿ ಮತ್ತು ಎಲ್‍ ಪಿಎಫ್ ಈ ಹತ್ತು ಕೇಂದ್ರೀಯ ಕಾಮಿಕ ಸಂಘಟನೆಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರೀ ನೌಕರರು, ಬ್ಯಾಂಕ್‍, ವಿಮಾ, ರಕ್ಷಣಾ ವಲಯಗಳ ನೌಕರರ ಮತ್ತು ಸ್ಕೀಮ್‍  ನೌಕರರ ರಾಷ್ಟ್ರೀಯ ಒಕ್ಕೂಟಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ರೈಲ್ವೆ, ಟೆಲಿಕಾಂ, ವಿದ್ಯುತ್, ಕಲ್ಲಿದ್ದಲು, ಉಕ್ಕು, ಇಂಧನ, ಪೆಟ್ರೋಲಿಯಂ, ರಸ್ತೆ ಸಾರಿಗೆ, ವಿಮಾನ ಸಾರಿಗೆ, ಜಲ ಸಾರಿಗೆ, ಬಂದರು ಮತ್ತು ಹಡಗುಕಟ್ಟೆಗಳು, ಲೋಹ ಮತ್ತು ಗಣಿಗಾರಿಕೆ, ಮಾಹಿತಿ ತಂತ್ರಜ್ಞಾನ, ಔಷಧಿ ಕಂಪನಿಗಳು, ನಿರ್ಮಾಣ, ತೋಟಗಾರಿಕೆ ಮುಂತಾದ ಎಲ್ಲ ವಲಯಗಳ ಕಾರ್ಮಿಕರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸರಕಾರ ದೇಶದ ಸಮಸ್ತ ಕಾರ್ಮಿಕ ಆಂದೋಲನ ಒಂದುಗೂಡಿ ಕನಿಷ್ಟ ಕೂಲಿ, ಸಾಮಾಜಿಕ ಭದ್ರತೆ, ಸ್ಕೀಮ್‍ ನೌಕರರಿಗೆ ಕಾರ್ಮಿಕರೆಂಬ ಸ್ಥಾನಮಾನ, ಸಂಬಳ-ಸಾರಿಗೆ, ಖಾಸಗೀಕರಣಕ್ಕೆ ಮತ್ತು ಸಾಮೂಹಿಕ ಪ್ರಮಾಣದ ಕಾಂಟ್ರಾಕ್ಟೀಕರಣಕ್ಕೆ ವಿರೋಧ ಮುಂತಾದವುಗಳನ್ನು ಕುರಿತಂತೆ ಮುಂದಿಟ್ಟಿರುವ 12 ಅಂಶಗಳ ಆಗ್ರಹ ಪಟ್ಟಿಯ ಬಗ್ಗೆ ಭಂಡ ಉಪೇಕ್ಷೆಯನ್ನು ಮುಂದುವರೆಸುತ್ತ್ತಲೇ ಎಂದು ಈ ಸಮಾವೇಶ ಗಮನಿಸಿತು. ಕೋಟ್ಯಂತರ ಕಾರ್ಮಿಕರು ಹಲವಾರು ರಾಷ್ಟ್ರವ್ಯಾಪಿ ಜಂಟಿ ಮುಷ್ಕರ ಕಾರ್ಯಾಚರಣೆಗಳ ಮೂಲಕ ತಮ್ಮ  ಆಗ್ರಹಗಳತ್ತ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಇದನ್ನು ಪರಿಶೀಲಿಸುವ ಬದಲು ಕೇಂದ್ರದಲ್ಲಿ ಆಳುತ್ತಿರುವವರು ದೇಶದ ದುಡಿಯುವ ಜನಗಳ  ಹಕ್ಕುಗಳು ಮತ್ತು ಜೀವನಾಧಾರಗಳ ಮೇಲೆ ಹೆಚ್ಚೆಚ್ಚು ಪ್ರಹಾರಗಳನ್ನು ನಡೆಸುತ್ತಿದ್ದಾರೆ ಎಂಬುದನ್ನೂ ರಾಷ್ಟ್ರೀಯ ಸಮಾವೇಶ ಗಮನಿಸಿತು.

ನಿರುದ್ಯೋಗ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ, ಹೆಚ್ಚು ಶ್ರಮಶಕ್ತಿ ಬೇಕಾಗುವ ವಲಯಗಳಲ್ಲೂ ಉದ್ಯೋಗಾವಕಾಶ ನಿರ್ಮಾಣ ಹೆಚ್ಚುವ ಬದಲು ಇಳಿಯುತ್ತಿದೆ. ಸರಕಾರ ಕಾರ್ಮಿಕ ಕಾನೂನುಗಳ ಸುಧಾರಣೆಯ ಹೆಸರಲ್ಲಿ ಮಾಲಕರ ಪರವಾದ ಮತ್ತು ಪಕ್ಕಾ ಕಾರ್ಮಿಕ-ವಿರೋಧಿ ಕಾರ್ಯಕ್ರಮವನ್ನು ಆಕ್ರಾಮಕ ರೀತಿಯಲ್ಲಿ ಮುಂದೊತ್ತುತ್ತಿದೆ. ಇತ್ತೀಚಿನ ಇಂತಹ ಪ್ರಹಾರವೆಂದರೆ ಈಗಿರುವ ಶಾಸನಾತ್ಮಕ ಸಾಮಾಜಿಕ ಭದ್ರತಾ ಮೂಲರಚನೆಯನ್ನು ಕಳಚಿ ಹಾಕಿ ಮತ್ತು ಧ್ವಂಸಮಾಡಿ ಒಂದು ‘ಸಾಮಾಜಿಕ ಭದ್ರತಾ ಸಂಹಿತೆ’ಯನ್ನು ವಿಕಾಸಗೊಳಿಸಲು ಪ್ರಯತ್ನಿಸುತ್ತಿರುವುದು.

ರಕ್ಷಣಾ ಉತ್ಪಾದನೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ವಿಮೆ, ರೈಲ್ವೆ, ಸಾರ್ವಜನಿಕ ರಸ್ತೆ ಸಾರಿಗೆ, ತೈಲ, ವಿದ್ಯುತ್ ಇತ್ಯಾದಿ ಎಲ್ಲ ಆಯಕಟ್ಟಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಹೂಡಿಕೆಗಳ ಹಿಂಪಡಿಕೆಗಳ ಮೂಲಕ ಖಾಸಗೀಕರಣ, ಆಯಕಟ್ಟಿನ ಮಾರಾಟ, ಖಾಸಗೀ ವಲಯಕ್ಕೆ ಅನುಕೂಲವಾಗುವಂತೆ ಹೊರಗುತ್ತಿಗೆ, ಹಲವು ಆಯಕಟ್ಟಿನ, ಮಹತ್ವದ ವಲಯಗಳಲ್ಲಿ 100% ಎಫ್‍ ಡಿಐ ಗೆ ಉತ್ತೇಜನೆ  ಇವೆಲ್ಲ ದಿನಗಳೆದಂತೆ ಹೆಚ್ಚುತ್ತ ಹೋಗುತ್ತಿದೆ. ವಿವಿಧ ಶಾಸನಾತ್ಮಕ ಮತ್ತು ಕಾರ್ಯಾಂಗದ ಕ್ರಮಗಳ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಸರಕಾರ ರಸ್ತೆ ಸಾರಿಗೆಯ ಸಾರಾಸಗಟು ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ, 2017ನ್ನು ಪ್ರಸಕ್ತ ಸಂಸತ್‍ ಅಧಿವೇಶನದಲ್ಲಿ  ಪಾಸು ಮಾಡಿಸಿಕೊಳ್ಳುವ ತರಾತುರಿಯಲ್ಲಿದೆ ಎಂದು ರಾಷ್ಟ್ರೀಯ ಕಾರ್ಮಿಕ ಸಮಾವೇಶ ಹೇಳಿದೆ.

ರೈತರು ವಿವಿಧ ರಾಜ್ಯಗಳಲ್ಲಿ ಮತ್ತು ರೈತ ಸಂಘಟನೆಗಳ ರಾಷ್ಟ್ರೀಯ ವೇದಿಕೆಗಳ ಅಡಿಯಲ್ಲಿ ಹೋರಾಡುತ್ತಿದ್ದಾರೆ. ಅವರ ಹೋರಾಟಗಳಿಗೆ  ರಾಷ್ಟ್ರೀಯ ಕಾರ್ಮಿಕರ ಸಮಾವೇಶ ಸಂಪೂರ್ಣ ಸೌಹಾರ್ದವನ್ನು ವ್ಯಕ್ತಪಡಿಸಿದೆ. ನಮ್ಮ ಸಮಾಜದ ಮೇಲೆ  ಕೋಮುವಾದಿ ಮತ್ತು ವಿಭಜನಕಾರಿ ಕುತಂತ್ರಗಳಿಗೆ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಸರಕಾರೀ ಯಂತ್ರ ಸಕ್ರಿಯ  ಪೋಷಣೆ ನೀಡುತ್ತಿದೆ ಎಂದಿರುವ ರಾಷ್ಟ್ರೀಯ ಕಾರ್ಮಿಕ ಸಮಾವೇಶ ಇದನ್ನು ಬಲವಾಗಿ ಖಂಡಿಸಿದೆ.

ಇಂದಿನ ಕಾರ್ಪೊರೇಟ್‍-ಸ್ನೇಹಿ ಸರಕಾರ ಕಾರ್ಮಿಕ ವರ್ಗ ಮತ್ತು ಒಟ್ಟಾರೆಯಾಗಿ ಶ್ರಮಜೀವಿ ಜನತೆಯ ಹಕ್ಕುಗಳು ಮತ್ತು ಜಿವನಾಧಾರಗಳ ಮೇಲೆ ಹೆಚ್ಚೆಚ್ಚು ಸರ್ವತೋಮುಖ ದಾಳಿಗಳನ್ನು ನಡೆಸುತ್ತಿರುವಂತಹ ಸನ್ನಿವೇಶ ದೇಶದ ಮುಂದಿದೆ ಎಂದಿರುವ ರಾಷ್ಟ್ರೀಯ ಕಾರ್ಮಿಕ ಸಮಾವೇಶ.

ಈ ಸನ್ನಿವೇಶವನ್ನು ಎದುರಿಸಲು ಈ ಕೆಳಗಿನ ನಿರ್ಧಾರಗಳನ್ನು ಮಾಡಿದೆ:

  • ಆರ್ಥಿಕ ವ್ಯವಸ್ಥೆಯ ಎಲ್ಲ ವಲಯಗಳಲ್ಲಿ ಐಕ್ಯ ಹೋರಾಟಗಳನ್ನು ಸಾಧಿಸುವುದು ಮತ್ತು ತ್ವರಿತಗೊಳಿಸುವುದು. ಇದು ಈಗಾಗಲೇ ಆರಂಭವಾಗಿದೆ.
  • ಬ್ಲಾಕ್/ಜಿಲ್ಲಾ/ಕೈಗಾರಿಕಾಕೇಂದ್ರ/ರಾಜ್ಯಮಟ್ಟಗಳಲ್ಲಿ ಬೃಹತ್‍ ಪ್ರಮಾಣದಲ್ಲಿ ಕಾರ್ಮಿಕರನ್ನು ಅಣಿನೆರೆಸಿ  ಪ್ರಚಾರಾಂದೋಲನ ಮತ್ತು ಪೂರ್ವಭಾವಿ ಸಮಾವೇಶಗಳನ್ನು ನಡೆಸುವುದು.
  • ರಾಷ್ಟ್ರೀಯ ರಾಜಧಾನಿಯಲ್ಲಿ ನವಂಬರ್‍ 9,10 ಮತ್ತು 11ರಂದು ಮೂರು ದಿನಗಳ ಬೃಹತ್‍ ಧರಣಿ- ದೇಶದೆಲ್ಲೆಡೆಗಳಿದ ಲಕ್ಷಾಂತರ ಕಾರ್ಮಿಕರು ಇದರಲ್ಲಿ ಭಾಗವಹಿಸುತ್ತಾರೆ.
  • ಸರಕಾರದ ಜನ-ವಿರೋಧಿ, ರಾಷ್ಟ್ರ-ವಿರೋಧಿ ಚಟುವಟಿಕೆಗಳ ವಿರುದ್ಧ ದೇಶವ್ಯಾಪಿ ಅನಿರ್ದಿಷ್ಟ ಅವಧಿಯ ಮುಷ್ಕರ ಕಾರ್ಯಾಚರಣೆಗೆ ಸಿದ್ಧಗೊಳ್ಳುವಂತೆ ದುಡಿಯುವ ಜನಗಳಿಗೆ ಕರೆ .

ಸಮಾವೇಶವನ್ನು ನಡೆಸಿಕೊಟ್ಟ ಅಧ್ಯಕ್ಷಮಂಡಳಿಯಲ್ಲಿ ಅಶೋಕ್‍ ಸಿಂಗ್‍(ಐಎನ್‍ ಟಿಯುಸಿ), ರಾಮೇಂದ್ರ ಕುಮಾರ್(ಎಐಟಿಯುಸಿ), ಎಸ್‍ ಎನ್‍ ಪಾಠಕ್(ಹೆಚ್‍ ಎಂಎಸ್), ಡಾ.ಕ.ಹೇಮಲತಾ(ಸಿಐಟಿಯು), ಸತ್ಯವಾನ್‍ ಸಿಂಗ್(ಎಐಯುಟಿಯುಸಿ), ಲತಾ(ಎಸ್‍ ಇಡಬ್ಲ್ಯುಎ), ಉದಯ್‍ ಭಟ್(ಎಐಸಿಸಿಟಿಯು), ಶತ್ರುಜಿತ್‍ ಸಿಂಗ್(ಯುಟಿಯುಸಿ) ಮತ್ತು ವಿ.ಸುಬ್ಬರಾಮನ್(ಎಲ್‍ ಪಿಎಫ್) ಇದ್ದರು.  ಜಿ.ಸಂಜೀವ ರೆಡ್ಡಿ( ಐಎನ್‍ ಟಿಯುಸಿ), ಅಮರ್‍ ಜಿತ್‍ ಕೌರ್(ಎಐಟಿಯುಸಿ), ಹರ್‍ ಭಜನ್‍ ಸಿಂಗ್‍ ಸಿದ್ದು(ಹೆಚ್‍ ಎಂಎಸ್), ತಪನ್‍ ಸೆನ್‍(ಸಿಐಟಿಯು), ಶಂಕರ್‍ ಸಾಹಾ(ಎಐಯುಟಿಯುಸಿ), ಮಣಾಲಿ(ಎಸ್‍ ಇಡಬ್ಲ್ಯುಎ), ರಾಜೀವ್‍ ದಿಮ್ರಿ(ಎಐಸಿಸಿಟಿಯು), ಅಶೋಕ್‍ ಘೋಷ್(ಯುಟಿಯಸಿ) ಮತ್ತು ಎಂ. ಷನ್ಮುಗಂ(ಎಲ್‍ ಪಿಎಫ್)  ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.