Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಮೃದ್ಧ- ಸಮಗ್ರ- ಸೌಹಾರ್ದ ಕರ್ನಾಟಕ ಜಾಗೃತಿ ಜಾತಾ : ಉತ್ಸಾಹದಿಂದ ಸಂಘರ್ಷದೆಡೆಗೆ

ಸಂಪುಟ: 
11
ಸಂಚಿಕೆ: 
33
date: 
Tuesday, 8 August 2017

ಕೆ.ಎನ್. ಉಮೇಶ್

ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ

ಸ್ವಾತಂತ್ರ್ಯೋತ್ಸವ 70ರ ಅಂಗವಾಗಿ, ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಕರ್ನಾಟಕವು ಸಮೃದ್ಧವಾಗಿ, ಸಮಗ್ರವಾಗಿ ಹಾಗೂ ಸೌಹಾರ್ದಯುತವಾಗಿರಬೇಕೆಂಬ ಘೋಷಣೆಯೊಂದಿಗೆ 2017ರ ಜುಲೈ 29 ರಿಂಧ ಆಗಸ್ಟ್ 13 ರವರೆಗೆ ಜಾಗೃತಿ ಜಾತಾ ಹಮ್ಮಿಕೊಂಡಿದೆ. 1938 ಏಪ್ರೀಲ್ 23 ರಂದು ಕರ್ನಾಟಕದ ಜಾಲಿಯಾನ್‍ವಾಲಾ ಬಾಗ್ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವಥದ ಹುತಾತ್ಮ ಸ್ಥಳ ವೀರ ಸೌಧದಿಂದ ಪ್ರಾರಂಭವಾದ ಜಾಥಾ, ರಾಜ್ಯ ಕಾರ್ಮಿಕ ಚಳುವಳಿಗೆ ನಾಂದಿ ಹಾಡಿ ಕೆಜಿಎಫ್ ಮೂಲಕ ಸ್ವತಂತ್ರ ಹೋರಾಟದ ವೇಳೆ ಮಹಾತ್ಮ ಗಾಂಧಿ ಸಭೆ ನಡೆಸಿದ್ದ ಬೆಂಗಳೂರಿನ ಬನ್ನಪ್ಪ ಪಾರ್ಕ್ ಹುತಾತ್ಮ ಚೌಕದ ಮೂಲಕ, ಮಂಡ್ಯಾದ ಸತ್ಯಾಗ್ರಹ ಸೌಧದ ಮೂಲಕ ಹಾದು ರಾಜ್ಯದ ಉದ್ದಗಲ ಎಲ್ಲಾ ಜಿಲ್ಲೆಗಳಿಗೂ ಸಂಚರಿಸಿ, ಕುಂದಾಪುರದಲ್ಲಿ ಆಗಸ್ಟ್ 13 ರಂದು ಸಮಾರೋಪಗೊಳ್ಳಲಿದೆ. ಜಾತಾ ಆಗಸ್ಟ್ 4ರ ವರೆಗೆ 13 ಜಿಲ್ಲೆಗಳಲ್ಲಿ 20 ಸ್ಥಳಗಳನ್ನು ತಲುಪಿದೆ.

ಅದರ ಬೆನ್ನಲ್ಲೇ ಆಗಸ್ಟ್ 14 ರಂದು ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಸಂಜೆ 6 ರಿಂದ ಮುಂಜಾನೆ 6ರವರೆಗೆ “ಸ್ವಾತಂತ್ರ್ಯೋತ್ಸವ-ಸತ್ಯಾಗ್ರಹ” ವನ್ನು ನಡೆಸಿ ಸೆಪ್ಟಂಬರ್ ಮೊದಲ ವಾರದಲ್ಲಿ ಸ್ಥಳೀಯ ಜಾಥಾಗಳ ಮೂಲಕ ಸೆಪ್ಟಂಬರ್ 14ರಂದು ಲಕ್ಷಾಂತರ ಕಾರ್ಮಿಕರ “ನಮ್ಮ ನಡೆ ಬೆಂಗಳೂರಿನೆಡೆ ಮಹಾನಡೆ” ಯೊಂದಿಗೆ ಮಾರ್ಧನಿಸಲಿದೆ.

ರಾಜ್ಯದ ಕಾರ್ಮಿಕ ವರ್ಗ ಹಾಗೂ ದುಡಿಯುವ ಜನತೆಯ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇರಿಸಿದ್ದರೂ ಸಹಾ ದಶಕಗಳಿಂದ ಅವುಗಳ ಈಡೇರಿಕೆಗೆ ಸಮರ್ಪಕ ಕ್ರಮಗಳನ್ನು ಸರ್ಕಾರಗಳು ವಹಿಸಿಲ್ಲ. ಪ್ರಸಕ್ತ ರಾಜ್ಯ ಸರ್ಕಾರವು ತನ್ನ ನಾಲ್ಕು ವರ್ಷಗಳನ್ನು ಪೂರೈಸಿ 5ನೇ ವರ್ಷದೆಡೆಗೆ “ಸಾರ್ಥಕ ನಾಲ್ಕು ವರ್ಷಗಳು - ನುಡಿದಂತೆ ನಡೆದಿದ್ದೇವೆ” ಎಂಬ ಘೋಷವಾಕ್ಯದೊಂದಿಗೆ ಮುನ್ನಡೆದಿದೆ.

1.        ಈ ಸರ್ಕಾರ ಅಧಿಕಾರಕ್ಕೆ ಬಂದ 9 ನೇ ತಿಂಗಳಲ್ಲಿ ಸಿಐಟಿಯು ನಡೆಸಿದ ಬೃಹತ್ ವಿಧಾನ ಸೌಧ ಚಲೋ ನಂತರ 2014 ಜನವರಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಂದಿನ ಕಾರ್ಮಿಕ ಸಚಿವರು ಹಾಗೂ ಸಿಐಟಿಯು ರಾಜ್ಯ ನಿಯೋಗದೊಂದಿಗೆ ನಡೆದಿಂದ್ದ ಸಭೆಯಲ್ಲಿ ಮುಖ್ಯಮಂತ್ರಿಗಳೇ ನೀಡಿದ್ದ ನಿರ್ಧೇಶನದಂತೆ “ಗುತ್ತಿಗೆ ಹಾಗೂ ಇತರೆ ಕಾಯಮೇತರರನ್ನು ಕಾಯಂಗೊಳಿಸಲು” ತಮಿಳುನಾಡು ಹಾಗೂ  ಅಸ್ಸಾಂ ಮಾದರಿಯ ಶಾಸನಕ್ಕೆ ಕರಡು ತಯಾರಾಗಿ ಕಾರ್ಮಿಕ ಭವನದಲ್ಲಿದೆ. ಆದರೆ ಮೂರೂವರೆ ವರ್ಷಗಳಾದರೂ ಸಹಾ ಆ ಕರಡು ಮಸೂದೆಯು ವಿಕಾಸ ಸೌಧ-ವಿಧಾನ ಸೌಧ ತಲುಪುವ ಭಾಗ್ಯ ಪಡೆಯಲಿಲ್ಲ.

2.        ಕಾರ್ಮಿಕ ಸಂಘ ಮಾನ್ಯ ಮಾಡುವ ಶಾಸನಕ್ಕೆ ಕರಡು ತಯಾರಾಗಿ, ಕಾನೂನು, ಹಣಕಾಸು ಇಲಾಖೆ ಅನುಮೋದನೆ ಪಡೆದು ಕ್ಯಾಬಿನೆಟ್ ವಿಭಾಗದಲ್ಲಿದೆ. ಆದರೆ ಮಾಲಿಕರ ಒತ್ತಡಕ್ಕೆ ಮಣಿದು ಸರ್ಕಾರ, ಸಿಐಟಿಯು ನಿಯೋಗದೊಂದಿಗೆ ಚೌಕಾಸಿ ಮಾಡುತ್ತಾ, ಹೊರಗಿನವರು ಯಾರು ಇರಬಾರದು ಎಂಬ ಷರತ್ತಿಗೆ ಒಪ್ಪಿಕೊಂಡರೆ, ಮಸೂದೆ ಅಂಗೀಕರಿಸುವ ಪ್ರಸ್ತಾಪವನ್ನು 2017 ಜನವರಿಯಲ್ಲಿ ಸಿಐಟಿಯು ನಡೆಸಿದ ಅಹೋರಾತ್ರಿ ಧರಣಿಯ ನಂತರ ಹಾಲಿ ಕಾರ್ಮಿಕ ಸಚಿವರು ಪ್ರಸ್ತಾಪಿಸುತ್ತಾರೆ. ಮಹಾರಾಷ್ಟ್ರ ಮಾದರಿಯ ಕಾರ್ಮಿಕ ಸಂಘ ಮಾನ್ಯತೆ ಹಾಗೂ ಅಕ್ರಮ ಕಾರ್ಮಿಕ ನಡಾವಳಿಕೆ ತಡೆ ಕಾಯ್ದೆಗೆ ಸಿಐಟಿಯು ಒತ್ತಾಯಿಸಿದರೆ ರಾಜ್ಯದ ಕರಡು ಕೇವಲ ಕಾರ್ಮಿಕ ಸಂಘ ಮಾನ್ಯತೆಗೆ ಮಾತ್ರ ಕರಡು ಮಸೂದೆ ಸಿದ್ಧಪಡಿಸಿದೆ.

3.        ಪಶ್ಚಿಮ ಬಂಗಾಳ ಮಾದರಿಯಲ್ಲಿ “ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆಯ ಶಾಸನಕ್ಕೆ” ಕರಡು ಸಹಾ ಸಿದ್ಧವಾಗಿದೆ. ಆದರೆ ಅದಕ್ಕೆ ಅನುಮೋದನೆ ನೀಡಿ ಸಮಗ್ರ ಭವಿಷ್ಯದ ನಿಧಿ ಯೋಜನೆ ರೂಪಿಸುವ ಬದಲು, ಅದನ್ನು ಶಾಸನಬದ್ದಗೊಳಿಸುವ ಬದಲು ಆಂಶಿಕವಾಗಿ ಕೆಲವು ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರು, ಕಟ್ಟಡಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಟೈಲರ್‍ಗಳಿಗೆ ಮಾತ್ರ ಅಲ್ಪ ಪ್ರಮಾಣದ ಭವಿಷ್ಯನಿಧಿ ಭಾಗ್ಯ ನೀಡಿದೆ.

4.        ಸಮಾನ ಕನಿಷ್ಟ ವೇತನ ರೂಪಿಸಲು ರಾಜ್ಯದ ಕಾರ್ಮಿಕರು 2008ರಿಂದಲೂ ಸಿಐಟಿಯು ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಂದಿನ ಮುಖ್ಯಮಂತ್ರಿಗಳು ಹೋರಾಟದ ತೀವ್ರತೆಗೆ ಮಣಿದು ರಚಿಸಿದ್ದ ಕನಿಷ್ಟ ವೇತನ ಕಾಯ್ದೆ-1936 ರಡಿಯ ಕಲಂ 5(1)(ಎ) ಸಭೆಯನ್ನೇ ಸೇರಿಲ್ಲ. ಆ ಸಮಿತಿಯನ್ನು ಸೇರಿಸಿ ವರದಿ ಪಡೆದು ರಾಜ್ಯವ್ಯಾಪಿ ಸಮಾನ ಕನಿಷ್ಟ ವೇತನ ರೂಪಿಸಿ, ರೂ.18,000/- ಕನಿಷ್ಟ ವೇತನ ನಿಗದಿ ಮಾಡುವ ಬದಲು, ಒಂದೊಂದೆ ಅಧಿಸೂಚಿತ ಉದ್ಯೋಗಗಳಿಗೆ ಪ್ರತ್ಯೇಕವಾಗಿ ಕನಿಷ್ಟ ವೇತನವನ್ನು ಹತ್ತು ಸಾವಿರದಿಂದ 14,000/- ರೂಗಳವರೆಗೆ ನಿಗದಿಗೊಳಿಸಲು ಮುಂದಾಗಿದೆ. ಮೊದಲು ಪರಿಷ್ಕರಣೆಗೆ ಒಳಪಟ್ಟ ಉದ್ಯೋಗದ ಕನಿಷ್ಟ ವೇತನ 1-4-2015 ರಿಂದ ಜಾರಿಯಾಗಬೇಕಿತ್ತು. ಆದರೆ ಅದನ್ನು ಮಾಲಿಕರ ಸಂಘವು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ತಡೆ ಆಜ್ಞೆ ಪಡೆದುಕೊಂಡಿತು. ಆದರೆ ನ್ಯಾಯಾಲಯದ ಆದೇಶದಂತೆ ಕೇವಲ 75 ಶೇಕಡಾ ನಿಗಧಿತ ಕನಿಷ್ಟ ವೇತನವನ್ನು ತಡೆ ಆಜ್ಞೆ ಸಮಯದಲ್ಲಿ ನೀಡಲು ಆದೇಶಿಸಿತು. ಪರಿಣಾಮವಾಗಿ ಕನಿಷ್ಟ ವೇತನ ರೂ.10,000/- ವಾದರೂ ಸಹಾ ಕೈಗೆ ಬಂದಿದ್ದು ಮಾತ್ರ ರೂ.7,500/-, ವಿಚಾರಣೆ ಮುಕ್ತಾಯ ಹಂತಕ್ಕೆ ಬಂದಾಗ ಮಾಲಿಕರು ತಾಂತ್ರಿಕ ಲೋಪವೆತ್ತಿ ಅಧಿಸೂಚನೆಗೂ ಮನ್ನ ಸಂಬಂಧಿತ ಸಚಿವರ ಅಂಕಿತ ಪಡೆದಿಲ್ಲ ಎಂಬ ಕ್ರಮಾಲೋಪವನ್ನು ನ್ಯಾಯಾಲಯ ಪರಿಶೀಲಿಸಿದಾಗ ರಾಜ್ಯ ಸರ್ಕಾರದ ಸಂಬಂಧಿತ ಕಡತಗಳಲ್ಲಿ ಅಂದಿನ ಕಾರ್ಮಿಕ ಸಚಿವರ ಅಂಕಿತ ಇರುವ ಪುಟವೇ ನಾಪತ್ತೆ ಆಗಿರುವುದು ಕಂಡು ಬಂದ ಕಾರಣ, ಕ್ರಮಾನುಸಾರ ಅಧಿಸೂಚನೆ ಹೊರಡಿಸಲು ನಿಗದಿತ ಕನಿಷ್ಟ ವೇತನವನ್ನು ಕುರಿತು ಮಾಲಿಕರ ತಕರಾರನ್ನು ತಿರಸ್ಕರಿಸಿತು. 2016ರ ನವಂಬರ್ ಒಳಗೆ ಪುನರ್ ಅಧಿಸೂಚನೆ ಹೊರಡಿಸಲು ಹಾಗೂ ಪುಟ ನಾಪತ್ತೆ ಕಾರಣರಾದವರ ಮೇಲೆ ವಹಿಸಲಾದ ಕ್ರಮವನ್ನು ಡಿಸೆಂಬರ್ 2016 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಿತು.

ರಾಜ್ಯ ಸರ್ಕಾರವು ಜನವರಿ 2017ರಿಂದ ಜಾರಿಗೆ ಬರುವಂತೆ ಸಂಬಂಧಿತ ಉದ್ಧಿಮೆಗಳ ಅಧಿಸೂಚನೆ ಹೊರಡಿಸಿದೆ. ಮೊದಲಿಗೆ 1-4-2016 ರಿಂದ ಹೆಚ್ಚಳವಾಗಿರುವ ತುಟ್ಟಿ ಭತ್ಯ ನೀಡಬೇಕೆಂದು ಆದೇಶಿಸಿದ್ದ ಸರ್ಕಾರ ಅನಂತರ ಮತ್ತೊಂದು ಅಧಿಸೂಚನೆ ಹೊರಡಿಸಿ ಅದನ್ನು ಹೊರತು ಪಡಿಸಿದೆ.

ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಒಂದೆಡೆ ಸರ್ಕಾರದ ಆಡಳಿತ ವೈಪಲ್ಯ ಕಂಡುಬಂದರೆ, ತನ್ನದೇ ಆದೇಶವನ್ನು ಪ್ರತಿಪಾದಿಸಿಕೊಳ್ಳುವಲ್ಲಿ  ಜಾಣ ವೈಪಲ್ಯವನ್ನು ತೋರಿ 1-4-2015 ರಿಂದ 1-1-2017ರವರೆಗೆ 20 ತಿಂಗಳುಗಳ ಕಾಲ ರಾಜ್ಯದ ಸಂಬಂಧಿತ ಕಾರ್ಮಿಕರಿಗೆ ಮಾಸಿಕ 3000/- ರೂ ಕನಿಷ್ಟ ವೇತನ ಸಿಗದಂತಾಗಿದೆ, ಮಾತ್ರವಲ್ಲ 1-4-2016 ರಿಂದ 31-3-2017ರ ವರೆಗೆ 12 ತಿಂಗಳು ಸಿಗಬೇಕಿದ್ದ ತುಟ್ಟಿ ಭತ್ಯೆ ಬಾಬ್ತು ಪ್ರತಿ ತಿಂಗಳಿಗೆ ಸುಮಾರು ರೂ.350 ಸಿಗದಂತಾಗಿದೆ. ಒಟ್ಟಾರೆ ಪ್ರತಿ ಕಾರ್ಮಿಕನಿಗೆ ಸುಮಾರು 75,987 ರೂ.ಗಳು ಸಿಗದಂತಾಗಿದೆ. ಅದನ್ನು ಒಟ್ಟು ಕಾರ್ಮಿಕರಲ್ಲಿ ಗುಣಿಸಿದಲ್ಲಿ ಎಂತಹ ದೊಡ್ಡ ಮೊತ್ತದ ಹಣವನ್ನು, ಕಾರ್ಮಿಕರ ವೇತನದ ಪಾಲನ್ನು ರಾಜ್ಯದಲ್ಲಿನ ಮಾಲಿಕರಿಗೆ- ಬಂಡವಾಳಗಾರರಿಗೆ ಈ ರಾಜ್ಯ ಸರ್ಕಾರ ಉಳಿಸಿದೆ? ಕನಿಷ್ಟ 10 ಲಕ್ಷ ಕಾರ್ಮಿಕರು ಸಂಬಂಧಿತ ಉದ್ದಿಮೆಗಳಲ್ಲಿದ್ದಾರೆ. ಎಂದು ಅಂದಾಜಿಸಿದರೂ ಸಹಾ 7500/-  ಕೋಟಿ ರೂಗಳ ಹಗರಣವಿದು,  ಇದರ ಕುರಿತು ಮಾತ್ರ ವಿಧಾನ ಸಭೆಯಲ್ಲಿ ಯಾವುದೇ ಪಕ್ಷವು ಚಕಾರವೆತ್ತುತ್ತಿಲ್ಲ. !!

ಆನಂತರ ಉಳಿದ 380 ಉದ್ದಿಮೆಗಳಿಗೆ ಇತ್ತೀಚೆಗೆ ಹೊರಡಿಸಿರುವ ಕರಡು ಅಧಿಸೂಚನೆಗಳಲ್ಲಿ ವೇತನ ಪರಿಷ್ಕರಣೆಯನ್ನು ಮಾರುಕಟ್ಟೆಯಿಂದ ಸಂಗ್ರಹಿಸಲಾಗಿರುವ ಬೆಲೆಗಳ ಧಾರಣೆ ಆಧರಿಸಿ ನಡೆಸುವ ಬದಲು ಆಯಾಯ ಉದ್ಯೋಗಳಿಗೆ ಹಾಲಿಯಿರುವ ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ರೂ.10,000/- ಕ್ಕೆ ಸಮದೂಗಿಸಿ ಕನಿಷ್ಟವೇತನ ನಿಗದಿಗೆ ಅನುಸರಿಸಲಾಗುವ ಶಾಂತಪ್ಪ ಸಮಿತಿಯ ಶಿಪಾರಸ್ಸುಗಳ ಪುನರ್ ಪರಿಶೀಲನೆಗೆ ಒಂದು ಸಮಿತಿ ರಚಿಸಿದೆ. ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗೆ ಅಗತ್ಯ ಅನುದಾನ ನೀಡಿ, ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಲಿಲ್ಲ, ಕೇಂದ್ರ ಸರ್ಕಾರವಂತೂ ಅದರ ಬಗ್ಗೆ ಚಿಂತಿಸುತ್ತಲೂ ಇಲ್ಲ!

7. ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ತೆರೆಯಲು ಕ್ರಮವಹಿಸುತ್ತಿಲ್ಲ. “ಮನೆ ಬಾಗಿಲಿಗೆ ನ್ಯಾಯ”ದ ಹೆಸರಿನಲ್ಲಿ ಕೈಗಾರಿಕಾ ವಿವಾದಗಳನ್ನು ಸ್ಥಳೀಯ ಸಿವಿಲ್ ನ್ಯಾಯಾಲಯಗಳಿಗೆ ವಹಿಸಲಾಗುತ್ತಿರುವ ಕಾರಣ ಕೈಗಾರಿಕಾ ವಿವಾದಗಳ ಕಾಯ್ದೆ-1947 ರ ಉದ್ದೇಶಕ್ಕೆ ಗಂಡಾಂತರ ಒದಗಿ ಬಂದಿದೆ. ಕಾಯ್ದೆಯಂತೆ ಪ್ರತಿ ವಿವಾದವು 6 ತಿಂಗಳ ಒಳಗಾಗಿ ಇತ್ಯರ್ಥವಾಗಬೇಕಿದೆ. ಕೈಗಾರಿಕಾ ವಿವಾದಗಳನ್ನು ಇತ್ಯರ್ಥ ಪಡಿಸಲೆಂದೇ ಇರುವ ನ್ಯಾಯಾಲಯಗಳಲ್ಲಿ ಕನಿಷ್ಟ ಮೂರು ವರ್ಷ ನಡಿಯುತ್ತಿರುವಾಗ, ಸಿವಿಲ್ ನ್ಯಾಯಾಲಲಯಗಳಲ್ಲಿ ಎಷ್ಟು ವರ್ಷ ಹಿಡಿಯಬಹುದು ಎಂಬುದನ್ನು ಅರಿತು, ಕಾರ್ಮಿಕ ನ್ಯಾಯಾಲಯಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ತೆರೆಯಬೇಕಿತ್ತು.

8. ಕಾರ್ಮಿಕ ಸಂಘವನ್ನು ಕಟ್ಟಿಕೊಂಡು ಹೋರಾಟಗಳ ಮೂಲಕ ವೇತನಗಳನ್ನು ಕನಿಷ್ಟ ವೇತನಕ್ಕಿಂತ ಹೆಚ್ಚು ಪಡೆದುಕೊಂಡಿರುವ ಕಾರ್ಮಿಕರಿಗೆ ನ್ಯಾಯೋಚಿತ ವೇತನವನ್ನು ಸಂವಿಧಾನದ 42 ಮತ್ತು 43 ನೇ ವಿಧಿ ಅನುಸಾರ “ಸುಖಿ ಜೀವನ ವೇತನ- ಬದುಕುವ ವೇತನ” ನೀಡಲು ಕ್ರಮವಹಿಸಬೇಕಿದೆ. ಆದರೆ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಆ ನಿಟ್ಟಿನಲ್ಲಿ ಚಿಂತಿಸುತ್ತಲೂ ಇಲ್ಲ.

9. ಕಾರ್ಮಿಕ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಬದಲಾಗಿ “ಸುಲಲಿತ ವ್ಯವಹಾರ” (Ease of doing Business) ಹೆಸರಿನಲ್ಲಿ ಇರುವ ಕಾನೂನುಗಳನ್ನೆ ಸಡಿಲಗೊಳಿಸಲು ಮುಂದಾಗಿದೆ. ನೂತನ ಕೈಗಾರಿಕಾ ನೀತಿಯಲ್ಲಿ 30 ಶೇಕಡಾ ಗುತ್ತಿಗೆ ಕಾರ್ಮಿಕರನ್ನು ನಿರಂತರ ಉತ್ಪಾದನಾ ಕೆಲಸಗಳಲ್ಲಿ ತೊಡಗಿಸಲು ಅನುವುಗೊಳಿಸಿದೆ. ಗುತ್ತಿಗೆ ಕಾರ್ಮಿಕರ (ಕ್ರಮೀಕರಣ ಮತ್ತು ನಿಷೇಧ) ಕಾಯ್ದೆ-1970 ರ ಅನುಸಾರ ನಿರಂತರ ಹಾಗೂ ಕಾಯಂ ಕೆಲಸಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸುವಂತಿಲ್ಲ. ಕೇಂದ್ರ ಸರ್ಕಾರದ “ಸ್ಕಿಲ್ ಇಂಡಿಯಾ” ಭಾಗವಾಗಿ ಕೌಶಲ್ಯ ಅಭಿವೃದ್ಧಿ ಹೆಸರಲ್ಲಿ “ಸ್ಕಿಲ್ ಕರ್ನಾಟಕ” ಯೋಜನೆ ರೂಪಿಸಿದೆ.

ನೂತನ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಮೊಟ್ಟ ಮೊದಲ ಕಾರ್ಮಿಕ ಕಾನೂನು ತಿದ್ದುಪಡಿಯಾದ “ಅಪ್ರೆಂಟಿಶಿಪ್ ಕಾಯ್ದೆ-1961”  ಮಾಡಿದ ತಿದ್ದುಪಡಿಯಂತೆ ಕಾರ್ಖಾನೆಯ ಒಟ್ಟು ಉದ್ಯೋಗಿಗಳ 30 ಶೇಕಡ ಟ್ರೈನಿಗಳ ನೇಮಕಕ್ಕೆ ಅವಕಾಶವಿದೆ. ಅದರಂತೆ NETAP-ಅಪ್ರೆಂಟಿಸ್ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಉದ್ಯೋಗ ಎಂಬ ಟ್ರೈನಿಂಗ ಕಾರ್ಯಕ್ರಮವನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಅಡಿ ಮತ್ತು NEEM-“ರಾಷ್ಟ್ರೀಯ ಉದ್ಯೋಗ ವರ್ಧನೆಯ ಧ್ಯೇಯ” ಎಂಬ ಟ್ರೈನಿಂಗ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಇಲಾಖೆಯ ಮೂಲಕ ಕೇಂದ್ರ ಸರ್ಕಾರ ರೂಪಿಸಿ ಜಾರಿಗೊಳಿಸುತ್ತಿದೆ. ಪರಿಣಾಮವಾಗಿ ಕಾಯಂ ಕಾರ್ಮಿಕರ ಜಾಗದಲ್ಲಿ ಈ ಟ್ರೈನಿಗಳ ಮೂಲಕ ಕೆಲಸ ಮಾಡಿಕೊಳ್ಳಲು ಮಾಲೀಕರು ಮುಂದಾಗಿದ್ದಾರೆ. ಆ ಮೂಲಕ ಗುತ್ತಿಗೆ ಕಾರ್ಮಿಕರನ್ನು, ಕಾರ್ಯ ಕಾರ್ಮಿಕರನ್ನು ನೆಪ ಮಾತ್ರಕ್ಕೆ ಇರಿಸಿಕೊಂಡು ಉಳಿದಂತ ಅವರ ಮೂಲಕ ಕೆಲಸ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ಕನಿಷ್ಟ ವೇತನದ ಶೇಕಡ 70 ರಷ್ಟು ಭತ್ಯೆ ನೀಡಿದರೆ ಸಾಕು. ಅದರಲ್ಲಿ 50 ಶೇಕಡ ಅಂದರೆ 3,500/- ಸ್ಕಿಲ್ ಇಂಡಿಯಾ ಅನುಧಾನವಾಗಿರಲಿದೆ. ಅಂದರೆ ಕೌಶಲ್ಯ ಅಭಿವೃದ್ಧಿ ಹೆಸರಲ್ಲಿ ಮಾಲಿಕರ ಉತ್ಪಾದನಾ ವೆಚ್ಚವನ್ನು ಜನತೆಯ ತೆರಿಗೆ ಹಣದಿಂದ ಸಬ್ಸಿಡೈಸ್ ಮಾಡುವ ಕ್ರಮವಾಗಿದೆ.

ರಾಜ್ಯದ ಇಂತಹ ಕ್ರಮಗಳ ನಡುವೆ ಕೇಂದ್ರ ಸರ್ಕಾರವು ರಾಷ್ಟ್ರದಲ್ಲಿನ 44 ಕೇಂದ್ರ 4 ಸಂಹಿತೆಗಳನ್ನಾಗಿ ನೋಟಿಫಿಕೇಷನ್‍ಗೆ ಮುಂದಾಗಿದೆ. ಆ ಮೂಲಕ 1). ಕೈಗಾರಿಕಾ ಸಂಬಂಧಗಳ ಸಂಹಿತೆ. 2) ವೇತನ ಸಂಹಿತೆ 3) ಸಾಮಾಜಿಕ ಭದ್ರತಾ ಸಂಹಿತೆ 4) ಕೈಗಾರಿಕಾ ಸುರಕ್ಷತಾ  ಸಂಹಿತೆ ಎಂಬ 4 ಸಂಹಿತೆಗಳಲ್ಲಿ ಇಡೀ ಕಾರ್ಮಿಕ ಕಾನೂನುಗಳನ್ನು ಸಂಹಿತೆಗೊಳಿಸಲು ಮುಂದಾಗಿದೆ. ಆ ಮೂಲಕ ಇದುವರೆಗೆ ಲಭ್ಯವಿದ್ದ ಹಲವಾರು ಹಕ್ಕುಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳಲು ಮುಂದಾಗಿದೆ. ಸಂಘ ನೋಂದಾವಣೆಯನ್ನು ಕಠಿಣಗೊಳಿಸುವ, ಮುಷ್ಕರಗಳನ್ನು ಇಲ್ಲವಾಗಿಸುವ, ಮುಷ್ಕರ ನಡೆಸಿದಲ್ಲಿ ಜೈಲು ಹಾಗೂ ದಂಡದ ಶಿಕ್ಷೆ ಹೆಚ್ಚಿಸುವ, ಹೊರಗಿನವರು ಸಂಘಗಳಿಗೆ ನೇತೃತ್ವ ನೀಡುವುದನ್ನು ನಿಯಂತ್ರಿಸುವ ಅಂಶಗಳನ್ನು ಈ ಸಂಹಿತೆಗಳಲ್ಲಿ ಒಳಗೊಳಿಸಲು ಯತ್ನಿಸಲಾಗಿದೆ. ಅಂತೆಯೇ ವೇತನ ಪಾವತಿ ದಿನಾಂಕ ಇಲ್ಲವಾಗಿಸುವ, ಗುತ್ತಿಗೆ ಕಾರ್ಮಿಕರ ವೇತನ ಮುಂತಾದ ವಿಷಯಗಳಲ್ಲಿ ಪ್ರಧಾನ ಮಾಲಿಕರ ಪಾತ್ರ ಇಲ್ಲವಾಗಿಸುವ, ಗುತ್ತಿಗೆ ಕಾರ್ಮಿಕ ಪರವಾನಿಗೆಗೆ ಕಾರ್ಮಿಕರ ಸಂಖ್ಯೆಯ ಮಿತಿಯನ್ನು ಹೆಚ್ಚಿಸುವ ಅಂಶಗಳನ್ನು ಒಳಪಡಿಸಲಾಗುತ್ತಿದೆ.

ಪ್ರತಿ ಕಾರ್ಖಾನೆಯೊಳಗಿನ, ಪ್ರತಿ ಉತ್ಪಾಧನ ಲೈನ್ ನ್ನು ಪ್ರತ್ಯೇಕ ಕಾರ್ಖಾನೆ ಎಂದು ಪರಿಗಣಿಸುವ, ದಿನದ ಕೆಲಸದ ಅವಧಿ ಹೆಚ್ಚಿಸುವ, ಕಾರ್ಖಾನೆ ನಿರೀಕ್ಷಣೆಯನ್ನು ಇಲ್ಲವಾಗಿಸುವ ಪ್ರಸ್ತಾಪಗಳು ಇವೆ.

ಭವಿಷ್ಯನಿಧಿ ಕಲ್ಯಾಣ ಮಂಡಳಿಗಳ ನಿಧಿ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳನ್ನೆಲ್ಲ ಒಂದು ಗೂಡಿಸಿ ರಾಷ್ಟ್ರೀಯ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ ಅದಕ್ಕೆ ಪ್ರದಾನಿಗಳನ್ನು ಅಧ್ಯಕ್ಷರನ್ನಾಗಿಸಿ ಅದರಲ್ಲಿ ಕಾರ್ಮಿಕ ಪ್ರತಿನಿಧಿಗಳ ಸಂಖ್ಯೆ ಕಡಿತಗೊಳಿಸುವ ಯತ್ನ ನಡೆದಿದೆ.

ಅದೇ ವೇಳೆ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗ ರಚಿಸಿರುವ ಕೇಂದ್ರ ಸರ್ಕಾರವು, ಅದರ ಶಿಪಾರಸ್ಸಿನಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿದೆ. 1.25 ಲಕ್ಷ ಕೋಟಿ ರೂಗಳ ಆಸ್ತಿ ಹೊಂದಿರುವ ಬಿಇಎಂಎಲ್ ಕೈಗಾರಿಕೆಯನ್ನು 125 ಕೋಟಿ ರೂ.ಗಳಿಗೆ ಮಾರಲು ಹೊರಟಿದೆ.

ರಾಜ್ಯದ ಹೆಮ್ಮೆಯ ಸಂಕೇತವಾಗಿದ್ದ ಎಸ್‍ಬಿಎಂ ಅನ್ನು ಎಸ್‍ಬಿಐನಲ್ಲಿ ವಿಲೀನಗೊಳಿಸಿ ಅದನ್ನು ಇಲ್ಲದಾಗಿಸಿದೆ. ಲಾಭದಾಯಕ ಹೆಚ್.ಎ.ಎಲ್. ಅನ್ನು ಖಾಸಗೀಕರಣಗೊಳಿಸಲು, ಏರ್ ಇಂಡಿಯಾ, ಬಿ.ಎಸ್.ಎನ್.ಎಲ್. ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಲು ಮುಂದಾಗಿದೆ.

ಜೊತೆಗಿದ್ದೇವೆ, ವಿಶ್ವಾಸವಿದೆ, ಅಭಿವೃದ್ಧಿಯೂ ಆಗುತ್ತಿದೆ. ಎಂಬ ಘೋಷವಾಕ್ಯದೊಂದಿಗೆ ತನ್ನ ಮೂರು ವರ್ಷಗಳ ಆಡಳಿತವನ್ನು ಆಚರಿಸುತ್ತಿರುವ ಕೇಂದ್ರ ಸರ್ಕಾರವು ಅಂಗನವಾಡಿ ಹೋರಾಟದ ಸಮಯದಲ್ಲಿ ತಾನು ಐಸಿಡಿಎಸ್ ಯೋಜನೆಗೆ ಹಣ ಕೊಡುವುದಿಲ್ಲ ರಾಜ್ಯ ಸರ್ಕಾರಗಳು ಕೊಡಬಹುದು ಎಂದಿದೆ. ರೈತರ ಸಾಲ ಮನ್ನಾಕ್ಕೆ ಇಲ್ಲಾ ಎಂದಿದೆ. 18,000/- ರೂ ಕನಿಷ್ಠ ವೇತನ ನಿಗದಿಗೆ ಮುಂದಾಗಿಲ್ಲ. ಗೃಹ ಬಳಕೆ ಅಡುಗೆ ಅನಿಲದ ಸಬ್ಸಿಡಿ ಕಡಿತಕ್ಕೆ ಮುಂದಾಗಿದೆ. ಪಡಿತರ ವ್ಯವಸ್ಥೆಯ ಬದಲು ನೇರ ನಗದು ವರ್ಗಾವಣೆ ಮಾಡುವ ಮಾತನಾಡುತ್ತಿದೆ. ಅಂದರೆ ಈ ದೇಶ ದುಡಿಯುವ ಜನತೆಯ ಜೊತೆಯಲ್ಲಿ ಇಲ್ಲ, ಅವರ ವಿಶ್ವಾಸವು ಇಲ್ಲ ಅವರ ಅಭಿವೃದ್ಧಿಯೂ ಆಗುತ್ತಿಲ್ಲ. ಬದಲಾಗಿ ಈ ಸರ್ಕಾರ ಅದಾನಿ, ಅಂಬಾನಿ ಮುಂತಾದ ಗುತ್ತೇದಾರಿ ಬಂಡವಾಳಗಾರರು. ಬಹುರಾಷ್ಟ್ರೀಯ ಬಂಡವಾಳಗಾರರು, ಅಂತರಾಷ್ಟ್ರೀಯ ಹಣಕಾಸು ಬಂಡವಾಳಗಾರರ ಜೊತೆಯಲ್ಲಿದೆ. ಅವರ ವಿಶ್ವಾಸವೂ ಇದೆ. ಅವರ ಅಭಿವೃದ್ಧಿಯೂ ಆಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಸಿಐಟಿಯು ರಾಜ್ಯ ಸಮಿತಿಯು ಸ್ವಾತಂತ್ರ್ಯೋತ್ಸವ 70ರ ಅಂಗವಾಗಿ, ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಕರ್ನಾಟಕವು ಸಮೃದ್ಧವಾಗಿ, ಸಮಗ್ರವಾಗಿ ಹಾಗೂ ಸೌಹಾರ್ದಯುತವಾಗಿರಬೇಕೆಂಬ ಘೋಷಣೆಯೊಂದಿಗೆ 2017ರ ಜುಲೈ29 ರಿಂಧ ಆಗಸ್ಟ್ 13 ರವರೆಗೆ ಜಾಗೃತಿ ಜಾತಾ ಹಮ್ಮಿಕೊಂಡಿದೆ.

1938 ಏಪ್ರೀಲ್ 23ರಂದು ಕರ್ನಾಟಕದ ಜಾಲಿಯಾನ್‍ವಾಲಾ ಬಾಗ್ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವಥದ ಹುತಾತ್ಮ ಸ್ಥಳ ವೀರ ಸೌಧದಿಂದ ಪ್ರಾರಂಭವಾದ ಜಾಥಾ, ರಾಜ್ಯ ಕಾರ್ಮಿಕ ಚಳುವಳಿಗೆ ನಾಂದಿ ಹಾಡಿ ಕೆ.ಜಿ.ಎಫ್. ಮೂಲಕ ಸ್ವತಂತ್ರ ಹೋರಾಟದ ವೇಳೆ ಮಹಾತ್ಮ ಗಾಂಧಿ ಸಭೆ ನಡೆಸಿದ್ದ ಬೆಂಗಳೂರಿನ ಬನ್ನಪ್ಪ ಪಾರ್ಕ್ ಹುತಾತ್ಮ ಚೌಕದ ಮೂಲಕ, ಮಂಡ್ಯಾದ ಸತ್ಯಾಗ್ರಹ ಸೌಧದ ಮೂಲಕ ಹಾದು ರಾಜ್ಯದ ಉದ್ದಗಲ ಎಲ್ಲಾ ಜಿಲ್ಲೆಗಳಿಗೂ ಸಂಚರಿಸಿ, ಕುಂದಾಪುರದಲ್ಲಿ ಆಗಸ್ಟ್ 13 ರಂದು ಸಮಾರೋಪಗೊಳ್ಳಲಿದೆ.

ಅದರ ಬೆನ್ನಲ್ಲೇ ಆಗಸ್ಟ್ 14 ರಂದು ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಸಂಜೆ 6 ರಿಂದ ಮುಂಜಾನೆ 6ರವರೆಗೆ “ಸ್ವಾತಂತ್ರ್ಯೋತ್ಸವ-ಸತ್ಯಾಗ್ರಹ” ವನ್ನು ನಡೆಸಿ ಸೆಪ್ಟಂಬರ್ ಮೊದಲ ವಾರದಲ್ಲಿ ಸ್ಥಳೀಯ ಜಾಥಾಗಳ ಮೂಲಕ ಸೆಪ್ಟಂಬರ್ 14 ರಂದು ಲಕ್ಷಾಂತರ ಕಾರ್ಮಿಕರ “ನಮ್ಮ ನಡೆ ಬೆಂಗಳೂರಿನೆಡೆ ಮಹಾನಡೆ” ಯೊಂದಿಗೆ ಮಾರ್ಧನಿಸಲಿದೆ.

ಸಮೃದ್ಧ ಕರ್ನಾಟಕ

ರಾಜ್ಯದಲ್ಲಿನ ತಲಾ ವಾರ್ಷಿಕ ಆದಾಯ ರೂ. 1,45,791/- ಅಂದರೆ ತಲಾ ಮಾಸಿಕ ಆದಾಯ ರೂ.12,149/- ಕನಿಷ್ಠ ವೇತನ ನಿಗಧಿಗೆ ಗಂಡ, ಹೆಂಡತಿ, ಮತ್ತು 2 ಮಕ್ಕಳನ್ನು ಒಳಗೊಂಡ ಒಂದು ಕುಟುಂಬವನ್ನು ಒಟ್ಟಾರೆಯಾಗಿ 3 ಯುನಿಟ್ಟಾಗಿ ಪರಿಗಣಿಸಲಾಗುತ್ತದೆ. ಅಂದರೆ ಒಂದು ಕುಟುಂಬದ ನಾಲ್ವರಿಗೆ ತಲಾ ಮಾಸಿಕ ಆದಾಯವನ್ನು ರಾಜ್ಯ ವಾರ್ಷಿಕ ತಲಾ ಆದಾಯ ಆಧಾರದಲ್ಲಿ ಲೆಕ್ಕ ಹಾಕಿದಲ್ಲಿ ಒಂದು ಕುಟುಂಬದ ಮಾಸಿಕ ಆದಾಯವು ರೂ 48,597/- ಆಗುತ್ತದೆ. ಆದರೆ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಮಾಸಿಕ ರೂ 10,400/- ರಿಂದ ರೂ 14,000/- ಕ್ಕೆ ನಿಗಧಿಗೊಳಿಸಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯಾದ ಮಾಸಿಕ ರೂ 18,000/- ಕನಿಷ್ಠ ವೇತನ ನಿಗಧಿಗೆ ತಯಾರಿಲ್ಲ.

ಕನಿಷ್ಠ ವೇತನವನ್ನು ಹೆಚ್ಚಾಗಿ ನಿಗಧಿಮಾಡಿದಲ್ಲಿ ಕಾರ್ಖಾನೆಗಳು ಮುಚ್ಚಿ ಹೋಗಲಿವೆ. ಇಲ್ಲ ವಲಸೆ ಹೋಗಲಿವೆ ಎಂಬ ವಾದ. ಅದೇ ವೇಳೆ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ ಶೇ.7.9ರಷ್ಟಿದೆ. ರಾಷ್ಟ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುವುದರಲ್ಲಿ 3ನೇ ಸ್ಥಾನದಲ್ಲಿದೆ, ಎಂದೆಲ್ಲಾ ಬಣ್ಣಿಸಲಾಗುತ್ತಿದೆ. ಅದರ ಜೊತೆಯಲ್ಲಿಯೇ ರಾಜದಲ್ಲಿನ ಕಾರ್ಖಾನೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿನ ಒಟ್ಟು ಮೌಲ್ಯ ವರ್ಧನೆ ರೂ 2,34,204/- ಅದರಲ್ಲಿನ ವೇತನದ ಪಾಲು ರೂ 38,604/- ಅಂದರೆ 16.45 ಶೇಕಡವಾದರೆ, ನಿವ್ವಳ ಲಾಭವು ರೂ 1,41,463/- ಅಂದರೆ 60.40 ಶೇಕಡವಾಗಿದೆ.

ಸಮಗ್ರ ಕರ್ನಾಟಕ

ಹರಿದು ಹಂಚಿ ಹೋಗಿದ್ದ ಕರ್ನಾಟಕ ಭೂ ಪ್ರದೇಶ ದೀರ್ಘ ಹೋರಾಟದ ಪರಿಣಾಮವಾಗಿ ಒಂದುಗೂಡಿ ರಾಜ್ಯವಾಗಿ ರೂಪಿತವಾಗಿದೆ. ಆದರೆ ಇಲ್ಲಿನ ಸರ್ಕಾರಗಳ ನೀತಿಗಳ ಪರಿಣಾಮವಾಗಿ ಸಮಗ್ರ ಭೂ ಸುಧಾರಣೆಯ ಕೊರತೆಯಿಂದಾಗಿ, ಬಂಡವಾಳಸಾಹಿ ಅಭಿವೃದ್ಧಿ ಪಥದ ಫಲವಾಗಿ ರಾಜ್ಯದ ಉತ್ತರ ಭಾಗ ಹಾಗೂ ಇತರೆ ಭಾಗಗಳು ದಕ್ಷಿಣ ಭಾಗದಷ್ಟು ಅಭಿವೃದ್ಧಿ ಹೊಂದದೆ ಹಿಂದುಳಿದಿದೆ. ಇದನ್ನೇ ಬಂಡವಾಳವಾಗಿಸಿಕೊಂಡು, ವಿಚ್ಛಿದ್ರಕಾರಿ ಶಕ್ತಿಗಳು ಪ್ರತ್ಯೇಕ ರಾಜ್ಯದ ಕೂಗುಗಳನ್ನು ಆಗಿಂಧಾಗ್ಗೆ ಎತ್ತುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಕಾರ್ಮಿಕ ಸಂಘಗಳ ಅವಿರತ ಹೋರಾಟಗಳ ಪರಿಣಾಮವಾಗಿ ಅವರ ವೇತನ ಹೆಚ್ಚಳವಾಗಿ, ಕಂಪನಿಗಳ ತಲಾ ಕಾರ್ಮಿಕ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ತಮ್ಮ ಕಾರ್ಖಾನೆಗಳಲ್ಲಿನ ಉತ್ಪಾಧನೆಯನ್ನು ವಿಸ್ತøತ ಉತ್ಪಾದನ ಸ್ಥಳಗಳನ್ನು ಇತರೆ ಪ್ರದೇಶಗಳಲ್ಲಿ ತೆರೆದು, ಕನಿಷ್ಟ ವೇತನ ನೀಡಿ ದುಡಿಸಿಕೊಳ್ಳುವ ಮೂಲಕ ತಮ್ಮ ಉತ್ಪಾದನ ವೆಚ್ಚ ಕಡಿತ ಮಾಡುತ್ತಾ, ಹಂತ-ಹಂತವಾಗಿ ಹೆಚ್ಚು ವೇತನ ಪಡೆಯುವ ಕಾರ್ಮಿಕರನ್ನು ಒಳಗೊಂಡ ಘಟಕಗಳನ್ನು ಮುಚ್ಚಿ ಕಾರ್ಮಿಕರನ್ನು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿವೆ. ಈ ಹಿನ್ನಲೆಯಲ್ಲಿ ಬಂಡವಾಳಗಾರರ ಈ ಕ್ರಮಗಳನ್ನು ಪ್ರತಿರೋಧಿಸಿದರೆ, ಅದನ್ನೇ ಉತ್ತರ ಕರ್ನಾಟಕದ ವಿರೋಧಿ ಎಂದು ಭಾವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಮಗ್ರ ಕರ್ನಾಟಕ ಒಂದಾಗಿ ಒಟ್ಟಾಗಿರುವ ಅಗತ್ಯ ಅನಿವಾರ್ಯವಾಗಿದೆ.

ಸೌಹಾರ್ದ ಕರ್ನಾಟಕ

ದುಡಿಯುವ ಜನರ ಹಕ್ಕುಗಳಿಗಾಗಿ, ಸಂಕಷ್ಟಕ್ಕೀಡಾಗಿರುವ ವಾರ್ಷಿಕ ಪರಿಸ್ಥಿತಿಯಲ್ಲಿ ರೈತರ- ಕೂಲಿಕಾರರ ಹಿತರಕ್ಷಣೆಗೆ ಜನತೆಯ ಹೋರಾಟವು ಹೆಚ್ಚುತ್ತಿರುವ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಜನತೆಯ ಒಗ್ಗಟ್ಟನ್ನು ಮರಿಯಲು ಹಲವಾರು ಕಡೆ ಕೋಮುವಾದಿ, ಮೂಲಭೂತವಾದಿ ಶಕ್ತಿಗಳು ಜನತೆಯನ್ನು ವಿಭಜಿಸಲು ಯತ್ನಿಸಿವೆ.

ಇದು ಬಸವಣ್ಣ, ಕನಕದಾಸರು, ಕುವೆಂಪು ಆದಿಯಾಗಿ ಹಲವು ಚಿಂತಕರು, ಸುಧಾರಕರು, ಪ್ರತಿಪಾದಿಸಿದ ಸೌಹಾರ್ದ ಪರಂಪರೆಗೆ ಅಡ್ಡಿಯಾಗಿ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಸೌಹಾರ್ದ ಕರ್ನಾಟಕವನ್ನಾಗಿ ಉಳಿಸಬೇಕಿದೆ.

ಈ ಎಲ್ಲಾ ಕಾರಣಗಳಿಂದಾಗಿ “ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಸಮೃದ್ದ ಸಮಗ್ರ ಸೌಹಾರ್ದ ಕರ್ನಾಟಕ” ಘೋಷವಾಕ್ಯವನ್ನು ಸಿಐಟಿಯು ಜಾಗೃತಿ ಜಾಥಾ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಹಕ್ಕುಗಳನ್ನು ಇಲ್ಲದಾಗಿಸಲು ಕೇಂದ್ರ ಸರ್ಕಾರ ಮುಂದಾಗಿರುವಾಗ ಕಾರ್ಮಿಕ ಹಕ್ಕುಗಳನ್ನು ಬಲ ಪಡಿಸಲು ಕಾರ್ಮಿಕ ಹಕ್ಕುಗಳನ್ನು ಉಳಿಸಬೇಕೆಂಬ ಘೋಷಣೆಯನ್ನು ಸಿಐಟಿಯು ಜಾಥಾದಲ್ಲಿ ಒಳಗೊಳ್ಳಲಾಗಿದೆ.