ಸ್ವತಂತ್ರ ಲಿಂಗಾಯತ ಧರ್ಮ ವಚನಕಾರರ ಮೌಲ್ಯಗಳ ಪರವಾಗಿರುತ್ತಾ?

ಸಂಪುಟ: 
33
ಸಂಚಿಕೆ: 
11
date: 
Sunday, 6 August 2017
Image: 

-ಪ್ರೊ. ರಾಜೇಂದ್ರ ಚೆನ್ನಿ

ಮುಖ್ಯವಾದ ಪ್ರಶ್ನೆಯೆಂದರೆ ತನ್ನನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಿಕೊಳ್ಳುವ ಧರ್ಮವು ವಚನಕಾರರ ಮೌಲ್ಯಗಳ ಪರವಾಗಿರುತ್ತದೆಯೆ? ವಚನಕಾರರ ಚಿಂತನೆಗೆ ಸಂಪೂರ್ಣ ವಿರೋಧಿಯಾಗಿರುವ ಹಿಂದುತ್ವ ಸಿದ್ಧಾಂತವನ್ನು ದೂರವಿಡುತ್ತದೆಯೆ? ಎಲ್ಲಾ ಬಗೆಯ ಸಮಾನತೆಗಳನ್ನು ಒಪ್ಪಿಕೊಂಡ ವಚನಕಾರರ ಜೀವನ ದೃಷ್ಟಿಯನ್ನು ಸಮರ್ಥಿಸುತ್ತದೆಯ? ಏಕೆಂದರೆ ಈಗಿರುವ ಸ್ಥಿತಿಯಲ್ಲಿ ವೀರಶೈವ-ಲಿಂಗಾಯತ ಧರ್ಮವು ಹಲವಾರು ಉಪಜಾತಿಗಳುಳ್ಳ ಜಾತಿ ಮಾತ್ರವಾಗಿದೆ. ಕೇವಲ ಅಲ್ಪಸಂಖ್ಯಾತ ಪ್ರತ್ಯೇಕ ಧರ್ಮದ ಸರಕಾರಿ ಸವಲತ್ತುಗಳಿಗಾಗಿ ಇಂದಿನ ಪ್ರಯತ್ನಗಳು ಸೀಮಿತಗೊಂಡರೆ 12ನೇ ಶತಮಾನದ ಜಗತ್ತೇ ಕಂಡರಿಯದ ಸಾಮಾಜಿಕ ಕ್ರಾಂತಿಯ ಮೌಲ್ಯಗಳು ಈ ಹೊಸಧರ್ಮದ ಪ್ರಜ್ಞೆ ಹಾಗೂ ನಡುವಳಿಕೆಗಳಿಂದ ದೂರವಾಗಿಯೇ ಉಳಿಯುತ್ತವೆ.

ಇತ್ತೀಚೆಗೆ ವೀರಶೈವ-ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವೇ ಎನ್ನುವ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇದು ಹೊಸದೇನಲ್ಲ. ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಕರ್ನಾಟಕದಲ್ಲಿ ಅನೇಕ ಜಾತಿ ಸಂಸ್ಥೆಗಳು, ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಶಿಕ್ಷಣ ಹಾಗೂ ಆಧುನಿಕತೆಗಳ ಪ್ರವೇಶದಿಂದಾಗಿ ಜಾಗೃತಗೊಂಡ ಈ ಜಾತಿಗಳು ತಮ್ಮ ಸದಸ್ಯರನ್ನು ಒಗ್ಗಟ್ಟಾಗಿಸಿ ಸರಕಾರದಿಂದ ಉದ್ಯೋಗದ ಅವಕಾಶಗಳನ್ನು ಪಡೆಯಲು ಪ್ರಯತ್ನಿಸಿದವು. ಆಯಾ ಜಾತಿಯ ವಿದ್ಯಾರ್ಥಿಗಳಿಗಾಗಿ ಶಿಷ್ಯವೇತನ, ಧನಸಹಾಯ ಹಾಗೂ ಉಚಿತ ವಿದ್ಯಾರ್ಥಿನಿಲಯಗಳನ್ನು ಒದಗಿಸುವ ಪ್ರಯತ್ನಗಳು ನಡೆದವು. ಉದಾಹರಣೆಗೆ ಕನ್ನಡ ಮಾಧ್ಯಮಕ್ಕಾಗಿ, ಕನ್ನಡ ಶಾಲೆಗಳಿಗಾಗಿ ಹೋರಾಡಿದ ಡೆಪ್ಯೂಟಿ ಚೆನ್ನಬಸಪ್ಪನವರು ಲಿಂಗಾಯತ ವಿದ್ಯಾರ್ಥಿಗಳಿಗಾಗಿ ಬೆಳಗಾವಿ, ಧಾರವಾಡಗಳಲ್ಲಿ ಅನುಕೂಲಗಳನ್ನು ಮಾಡಿಸಿಕೊಟ್ಟರು. ಹಲವು ಮಠಗಳು ಕೂಡ ಇಂಥ ಕೆಲಸವನ್ನು ಮಾಡಿದವು. ಇದರಿಂದಾಗಿ ಜಾತಿಯ ಬಗ್ಗೆ ಪ್ರಜ್ಞೆಯು ಬೆಳೆಯಿತು. ಜಾತಿ ಸಂಘಟನೆಗಳು ಕ್ರಿಯಾಶೀಲವಾದವು. ಆಧುನಿಕವಾದ ಮುದ್ರಣ ಮಾಧ್ಯಮದ ಮೂಲಕ ವಚನಗಳು ವ್ಯಾಪಕವಾಗಿ ಲಭ್ಯವಾಗಿ ಲಿಂಗಾಯತ ಪರಂಪರೆಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದವು. ಅದುವರೆಗೆ ಜ್ಞಾನ, ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ಬ್ರಾಹ್ಮಣ ಜಾತಿಯೊಂದಿಗೆ ಪೈಪೋಟಿಗೆ ಬೀಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಆ ಕಾಲದ ಉತ್ತರ ಕರ್ನಾಟಕದ ಸಾಂಸ್ಕøತಿಕ ಚರಿತ್ರೆಯಲ್ಲಿ ಮತ್ತು ಮುಂದೆ ರಾಜಕೀಯದಲ್ಲಿ ಲಿಂಗಾಯತರು ಬ್ರಾಹ್ಮಣರ ಮಧ್ಯದ ಪೈಪೋಟಿ, ಜಗಳಗಳು ಒಳಪ್ರವಾಹದಂತೆ ಕೆಲಸ ಮಾಡಿವೆ. ಈಗಲೂ ಧಾರವಾಡವೂ ಸೇರಿದಂತೆ ಉತ್ತರ ಕರ್ನಾಟಕವು ಈ ಸಂಘರ್ಷದಿಂದ ಮುಕ್ತವಾಗಿಲ್ಲ. ಈ ಸಂಘರ್ಷದ ಬಗೆಗಿನ ಅನೇಕ ಕತೆಗಳನ್ನು ನನ್ನ ತಂದೆ ಹಾಗೂ ಅಜ್ಜಂದಿರ ತಲೆಮಾರಿನವರಿಂದ ಕೇಳಿದ್ದೇನೆ.

ಅಂದು ಉತ್ತರ ಕರ್ನಾಟಕವು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿ ಸದರ್ನ್ ಮರಾಠಾ ಕಂಟ್ರಿಯೆಂದು ಅದನ್ನು ಕರೆಯಲಾಗುತ್ತಿತ್ತು. ಆದರೆ ಮಹಾರಾಷ್ಟ್ರದಲ್ಲಿ ನಡೆದ, ಹತ್ತಿರ ತಮಿಳುನಾಡಿನಲ್ಲಿ ನಡೆದ ಬ್ರಾಹ್ಮಣ ವಿರೋಧಿ ಚಳುವಳಿಯು ಇಲ್ಲಿ ನಡೆಯಲಿಲ್ಲ. ಆದರೆ ಸುಪ್ತವಾಗಿದ್ದ ಬ್ರಾಹ್ಮಣ ವಿರೋಧವು ಲಿಂಗಾಯತ ಗುರುತನ್ನು (identity) ಕಟ್ಟಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಚಿದಾನಂದ ಮೂರ್ತಿಯವರೇ ದಾಖಲಿಸಿದಂತೆ ಪರಸ್ಪರ ಮೂದಲಿಕೆ, ವಾಕ್ ಸಮರಗಳು ಪತ್ರಿಕೆಗಳಲ್ಲಿ ನಡೆದು ಅನೇಕ ವ್ಯಾಜ್ಯಗಳು ಕೋರ್ಟಿಗೆ ತಲುಪಿದವು. ನಾವು ಬ್ರಾಹ್ಮಣರಿಗಿಂತ ಕಡಿಮೆಯಿಲ್ಲ ಎಂದು ಲಿಂಗಾಯತ ಜಾತಿಯ ಪುರೋಹಿತ ವರ್ಗವಾಗಿರುವ ಉಪಜಾತಿಗಳು ವಾದಿಸತೊಡಗಿದವು. ಇದನ್ನು ಸಂಸ್ಕøತೀಕರಣದ ಉದಾಹರಣೆಯಾಗಿ ನೋಡಬಹುದು. ಅದರಲ್ಲೂ ಒಂದು ಉಪಜಾತಿಯವರು ತಾವು ಶೈವ ಬ್ರಾಹ್ಮಣರೇ ಎಂದು ವಾದಿಸಿದರು.  ಇದರ ಭಾಗವಾಗಿಯೇ ಲಿಂಗಾಯತ ಧರ್ಮವು ಪುರಾತನವಾದುದು; ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹಾಗೂ ಇತರ ವಚನಕಾರರು ಪುರಾತನ ಶೈವ ಧರ್ಮದಲ್ಲಿ ಸುಧಾರಣೆಯನ್ನು ಮಾತ್ರ ತಂದರು ಎನ್ನುವ ವ್ಯಾಖ್ಯಾನಗಳು ಹುಟ್ಟಿಕೊಂಡವು.

ಇದರ ಹಿಂದೆ ವಿರಕ್ತಮಠಗಳು ಹಾಗೂ ಪಂಚಪೀಠಗಳ ಮಧ್ಯದ ಸುದೀರ್ಘವಾದ ಘರ್ಷಣೆಗಳ ಇತಿಹಾಸವೂ ಇತ್ತು. ಆಧುನಿಕ ಸಮಾಜದಲ್ಲಿ ವಚನಕಾರರ ಸಮಾನತೆಯ ಆಶಯಗಳು, ಜಾತಿವ್ಯವಸ್ಥೆಯ ತಿರಸ್ಕರಣ ಇವುಗಳು ಲಿಂಗಾಯತ ಧರ್ಮಕ್ಕೆ ಒಂದು ಸುಧಾರಕ, ಕ್ರಾಂತಿಕಾರಕ ಧಾರ್ಮಿಕ ಗುರುತನ್ನು ತಂದು ಕೊಟ್ಟವು. ಆದರೆ ವಾಸ್ತವದಲ್ಲಿ ಅನೇಕ ಉಪಜಾತಿಗಳ ಮಧ್ಯ ತೀವ್ರವಾದ ಶ್ರೇಣೀಕರಣವಿದ್ದು, ಪುರೋಹಿತ ಉಪಜಾತಿಗಳು ತಮ್ಮನ್ನು ಬ್ರಾಹ್ಮಣೀಕರಣಗೊಳಿಸಿಕೊಂಡಿದ್ದವು. ಇನ್ನೊಂದು ಕಡೆಗೆ ಪಂಚಪೀಠಗಳು ಬಸವನ ವರ್ಚಸ್ಸನ್ನು ಆಳದಲ್ಲಿ ಎಂದೂ ಸ್ವೀಕರಿಸಲಿಲ್ಲ. ಬದಲಾಗಿ ವಚನಕಾರರು ವಿರೋಧಿಸಿದ್ದ ಅನೇಕ ಆಚರಣೆಗಳನ್ನು ಪಾಲಿಸತೊಡಗಿದವು. ಸಾರ್ವಜನಿಕವಾಗಿ ಈ ಸತ್ಯಗಳನ್ನು ಯಾರೂ ಹೇಳುವುದಿಲ್ಲ. ನಿಜವೇನೆಂದರೆ ಪಂಚಪೀಠಗಳು ಬಸವಣ್ಣನನ್ನು ಒಪ್ಪಿಕೊಂಡೇ ಇಲ್ಲ. ಎಲ್ಲಿಯವರೆಗೆ ಅಂದರೆ ಯಾವುದೇ ಕಾರ್ಯಕ್ರಮದಲ್ಲಿ ಪೀಠಾಚಾರ್ಯದ ಸಿಂಹಾಸನಕ್ಕಿಂತ ಎತ್ತರದಲ್ಲಿ ಬಸವಣ್ಣನ ಭಾವಚಿತ್ರ ಇತ್ಯಾದಿ ಇರುವಂತಿಲ್ಲವೆನ್ನುವ ಅಲಿಖಿತ ಕಟ್ಟಳೆ ಹಿಂದೆ ಇತ್ತಂತೆ. ಹೀಗಾಗಿ ಈ ಘರ್ಷಣೆಯು ಯಾವ ಕಾಲಕ್ಕೂ ಮುಗಿಯುವುದಿಲ್ಲ. ಈ ಎರಡು ಪಂಥಗಳು ಒಟ್ಟಾಗುವುದು ಅಸಾಧ್ಯ. ಏನೇ ಇದ್ದರೂ ಇಂದಿನ ರಾಜಕೀಯ ಅವಶ್ಯಕತೆಗಳಿಂದಾಗಿ ಲಿಂಗಾಯತ ಧುರೀಣರು ಎರಡೂ ಬಣಗಳನ್ನು ವೀರಶೈವ-ಲಿಂಗಾಯತ ಎನ್ನುವ Patch work ಮೂಲಕ ಒಂದಾದಂತೆ ತೋರಿಸಿ ಪ್ರತ್ಯೇಕ ಧರ್ಮದ ಹಣೆಚೀಟಿಗಾಗಿ ಪ್ರಯತ್ನಿಸಬೇಕಾಗಿದೆ. ಅಥವಾ ಪ್ರತ್ಯೇಕ ಧರ್ಮವಾದರೆ ಅಲ್ಪಸಂಖ್ಯಾತವೆನ್ನುವ ಸರಕಾರಿ ಸವಲತ್ತುಗಳು ಸಿಗುವುದಾದರೆ ಆ ಕಾರಣಕ್ಕಾಗಿ ಸಂಘರ್ಷಗಳನ್ನು ಚಾಪೆಯ ಕೆಳಗೆ ತಳ್ಳಿ ಮುಂದುವರೆಯುವ ಸಾಧ್ಯತೆ ಇದೆ.

ಆದರೆ ಇಲ್ಲಿ ದೊಡ್ಡ ಸಮಸ್ಯೆಯೆಂದರೆ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲವೆಂದು ವಾದಿಸಲು ವೇದಪ್ರಮಾಣ್ಯದ ತಿರಸ್ಕರಣ, ವರ್ಣಾಶ್ರಮಗಳ, ಪುರೋಹಿತಶಾಹಿಯ ತಿರಸ್ಕರಣ ಇವೆಲ್ಲವುಗಳನ್ನು ವಚನಗಳ ಆಧಾರದ ಮೇಲೆ ವಾದಿಸಬೇಕಾಗುತ್ತದೆ. ಪಂಚಪೀಠಗಳು ತಮ್ಮ ಪುರಾತನತೆಯನ್ನು ಸಮರ್ಥಿಸುವ ವಾದದಲ್ಲಿ ಶೈವವೂ ಹಿಂದೂ ಧರ್ಮದ ಭಾಗವೇ ಆಗಿತ್ತು ಎನ್ನುವ ವಾದದ ಕಡೆಗೆ ಹೋಗಿಬಿಡುವ ಸಾಧ್ಯತೆ ಇದೆ. ಏಕೆಂದರೆ ಪೂರ್ವದ, ಪುರಾತನ ಶೈವವು ವೈದಿಕ ಪರಂಪರೆಗಳಿಂದ ಖಂಡಿತವಾಗಿಯೂ ಭಿನ್ನವಾಗಿತ್ತು. ಆದರೆ ಭಾರತೀಯ ಚರಿತ್ರೆಯ ಅನೇಕ ಸಂಕರಗಳು, ಗೋಜಲುಗಳಿಂದಾಗಿ ಯಾವ ಸಮರ್ಪಕವಾದ ವಾದವೂ ಅಸಾಧ್ಯವಾಗುತ್ತದೆ. ಅಲ್ಲದೆ ಇಂದಿನ ಲಿಂಗಾಯತ ಸಮಾಜವು ವಚನಕಾರರ ಚಿಂತನೆಗಳಿಂದ ಬಹುದೂರ ಹೋಗಿಬಿಟ್ಟಿದೆ. ಅದು ಜಾತಿವ್ಯವಸ್ಥೆಯ ವಿರೋಧಿಯೂ ಅಲ್ಲ, ಸಮಾನತೆಯ ಪರವಾಗಿಯೂ ಇಲ್ಲ.

ಬಲಿಷ್ಠ ಉಪಜಾತಿಗಳು ತಮ್ಮ ಸಂಘಟನೆಗಳ ಮೂಲಕ ಉಪಜಾತೀಯತೆಯನ್ನು ಪ್ರಬಲಗೊಳಿಸಿವೆ. ಅತ್ಯಂತ ಆಧುನಿಕ, ಶಿಕ್ಷಿತ ಹಾಗೂ ಅಮೇರಿಕವಾಸಿ ಲಿಂಗಾಯತ ವರ/ವಧುಗಳ ಬಗೆಗಿನ ದಾಖಲೆಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ನೋಡಿದರೂ ಅವು ಬರೀ 'B P S’ ಹೀಗೆ ಎನ್ನುವ ಅಕ್ಷರಗಳ ಮೂಲಕ ಉಪಜಾತಿಗಳನ್ನು ಸೂಚಿಸುತ್ತವೆ. ಲಿಂಗಾಯತ ಉಪಜಾತಿಗಳ ಮಧ್ಯ ವಿವಾಹ ಸಂಬಂಧಗಳು ತುಂಬಾ ಕಷ್ಟಕರವಾಗುತ್ತಿವೆ. ಮುಖ್ಯವೆಂದರೆ ಶ್ರೇಣಿಯಲ್ಲಿ ತುಂಬಾ ಕೆಳಗಿರುವ ಉಪಜಾತಿಗಳಂತೂ ಲಿಂಗಾಯತವೆನ್ನುವ ಹೆಸರು ಮಾತ್ರ ಹೊಂದಿವೆ. ಉದಾಹರಣೆಗೆ ನಾನು ಹುಟ್ಟಿದ್ದು ಶಿವನಿಂಪಿಗ ಅಥವಾ ಜವಳಿ ಎನ್ನುವ ಹಿಂದುಳಿದ ಉಪಜಾತಿಯಲ್ಲಿ. ಉಪಜಾತಿಯ ಹೆಸರೇ ಹೇಳುವಂತೆ ಈ ಉಪಜಾತಿಯ ಸಮುದಾಯ ಬಟ್ಟೆ ತಯಾರಿಸುವ ಅಥವಾ ಅದನ್ನು ಮಾರುವ ಕಸುಬಿನವರು. ನನಗೆ ಗೊತ್ತಿರುವ ಮಟ್ಟಿಗೆ ಈ ಉಪಜಾತಿಯು ಶಿಕ್ಷಣ, ಶ್ರೀಮಂತಿಕೆ, ರಾಜಕೀಯ ಶಕ್ತಿ ಇದಾವುದು ಹೆಚ್ಚಾಗಿ ಇಲ್ಲದ ಸಮುದಾಯವನ್ನು ಹೊಂದಿದೆ. ಹೀಗಾಗಿ ಬಲಿಷ್ಠ ಲಿಂಗಾಯತ ಉಪಜಾತಿಗಳು ಅದನ್ನು ಕನಿಷ್ಠವಾಗಿಯೇ ನೋಡುತ್ತವೆ. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ನಾನು ನಾಸ್ತಿಕನಾಗಿ, ಜಾತಿ ಧರ್ಮಗಳ ಬಗ್ಗೆ ಕುತೂಹಲವನ್ನೇ ತೋರಿಸದೇ ಬೆಳೆದು ಬಂದೆ. ಅಲ್ಲದೆ ಪುಸ್ತಕಗಳ ಪ್ರಪಂಚದಲ್ಲಿಯೇ ಮುಳುಗಿದ್ದೆ. ಹೀಗಾಗಿ ಕೆಲವು ವರ್ಷಗಳ ಹಿಂದೆ ಈ ಉಪಜಾತಿಯ ಬಗ್ಗೆ ಕುತೂಹಲದಿಂದ ಕೇಳಿದಾಗ “ಸರಳವಾಗಿ ಹೇಳುವುದಾದರೆ ನಾವು ಲಿಂಗಾಯತರಲ್ಲಿಯೇ ದಲಿತರ ಹಾಗೆ” ಎಂದು ಉತ್ತರ ಬಂದಿತು.

ಆದರೆ ನನ್ನ ಬಾಲ್ಯದ ನೆನಪುಗಳನ್ನು ಆಧರಿಸಿ ಹೇಳುವುದಾದರೆ ಶ್ರೀಮಂತ ಹಾಗೂ ಶಿಕ್ಷಿತ ಕುಟುಂಬದಿಂದ ಬಂದ ನನ್ನ ತಾಯಿ ಯಾವ ಕರ್ಮಠ ಸಂಪ್ರದಾಯಗಳೇ ಇಲ್ಲದ ‘ಲಿಬರಲ್’ ರೀತಿಯಲ್ಲಿ ನಮ್ಮನ್ನು ಬೆಳೆಸಿದರು. ನನ್ನ ತಾಯಿಯ ಸೋದರ ಮಾವನವರು ಬರಹಗಾರರು, ಕ್ರಿಯಾಶೀಲರು ಆಗಿದ್ದರಿಂದ ಅನೇಕ ಅಂತರ್‍ಧರ್ಮೀಯ ವಿವಾಹಗಳು ನಮ್ಮ ಹತ್ತಿರದ ಸಂಬಂಧಗಳಲ್ಲಿ ನಡೆದವು. ಆಗ ವರದಕ್ಷಿಣೆ, ವೈಭವದ ಮದುವೆಗಳು ನಿಷಿದ್ಧವಾಗಿದ್ದವು. ನಾನು ಕೇಳಿದ ಕನ್ನಡದ ಮೊದಲ ಕಾವ್ಯದ ಸಾಲುಗಳೆಂದರೆ ಅವ್ವ ಹೇಳುತ್ತಿದ್ದ ವಚನಗಳು. ಅವು ನಮ್ಮ ಮನಸ್ಸನ್ನು ತಟ್ಟಿದವು. ಆದರೆ ಅಲ್ಲಿಂದಾಚೆಗೆ ಈ 50 ವರ್ಷಗಳಲ್ಲಿ ಈ ಲಿಬರಲ್ ಆದ ಅಂಶಗಳೆಲ್ಲ ಮರೆಯಾಗಿ ಪ್ರತಿಯೊಂದು ಲಿಂಗಾಯತ ಉಪಜಾತಿಯು ಒಂದು ದ್ವೀಪವಾಗಿದೆ. ಪರಧರ್ಮ ದ್ವೇಷವೇ ಆಧಾರವಾಗಿರುವ ಆರ್.ಎಸ್.ಎಸ್ ನ ರಾಜಕೀಯ ಪಕ್ಷವಾದ ಬಿ.ಜೆ.ಪಿ ಗೆ ಲಿಂಗಾಯತರಿಂದ ಬೆಂಬಲ ದೊರೆತಿರುವುದು ಚರಿತ್ರೆಯ ಮಹಾನ್ ದುರಂತವಾಗಿದೆ. ಇದು ಬಸವ ದ್ರೋಹವಲ್ಲದೆ ಮತ್ತೇನು?

ಮುಖ್ಯವಾದ ಪ್ರಶ್ನೆಯೆಂದರೆ ತನ್ನನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಿಕೊಳ್ಳುವ ಧರ್ಮವು ವಚನಕಾರರ ಮೌಲ್ಯಗಳ ಪರವಾಗಿರುತ್ತದೆಯೆ? ಜಾತಿ ವಿನಾಶವಂತೂ ಇಂದಿನ ಭಾರತದಲ್ಲಿ ಕಲ್ಪಿಸಲೂ ಆಗದ ಸಂಗತಿಯಾಗಿದೆ. ಆದರೆ ಜಾತಿಯಾಗಿ ಉಳಿದುಕೊಂಡರೂ ಉಳಿದ ಜಾತಿಗಳ ಬಗ್ಗೆ ಸೆಕ್ಯೂಲರ್ ಅಥವಾ ಉದಾರ ಮನೋಭಾವವನ್ನು ತೋರಿಸುತ್ತದೆಯೆ? ವಚನಕಾರರ ಚಿಂತನೆಗೆ ಸಂಪೂರ್ಣ ವಿರೋಧಿಯಾಗಿರುವ ಹಿಂದುತ್ವ ಸಿದ್ಧಾಂತವನ್ನು ದೂರವಿಡುತ್ತದೆಯೆ? ಎಲ್ಲಾ ಬಗೆಯ ಸಮಾನತೆಗಳನ್ನು ಒಪ್ಪಿಕೊಂಡ ವಚನಕಾರರ ಜೀವನ ದೃಷ್ಟಿಯನ್ನು ಸಮರ್ಥಿಸುತ್ತದೆಯ? ಏಕೆಂದರೆ ಈಗಿರುವ ಸ್ಥಿತಿಯಲ್ಲಿ ವೀರಶೈವ-ಲಿಂಗಾಯತ ಧರ್ಮವು ಹಲವಾರು ಉಪಜಾತಿಗಳುಳ್ಳ ಜಾತಿ ಮಾತ್ರವಾಗಿದೆ. ಮತ್ತು ಈ ಜಾತಿಯ ಮಧ್ಯಮ ಹಾಗೂ ಮೇಲ್‍ವರ್ಗಗಳು ಸಂಸ್ಕøತೀಕರಣಗೊಳ್ಳುವ ಭರಾಟೆಯಲ್ಲಿ ಅನೇಕ ವೈದಿಕ ಆಚರಣೆಗಳನ್ನು ಅನುಕರಿಸುತ್ತಿವೆ. ಕೇವಲ ಅಲ್ಪಸಂಖ್ಯಾತ ಪ್ರತ್ಯೇಕ ಧರ್ಮದ ಸರಕಾರಿ ಸವಲತ್ತುಗಳಿಗಾಗಿ ಇಂದಿನ ಪ್ರಯತ್ನಗಳು ಸೀಮಿತಗೊಂಡರೆ 12ನೇ ಶತಮಾನದ ಜಗತ್ತೇ ಕಂಡರಿಯದ ಸಾಮಾಜಿಕ ಕ್ರಾಂತಿಯ ಮೌಲ್ಯಗಳು ಈ ಹೊಸಧರ್ಮದ ಪ್ರಜ್ಞೆ ಹಾಗೂ ನಡುವಳಿಕೆಗಳಿಂದ ದೂರವಾಗಿಯೇ ಉಳಿಯುತ್ತವೆ.