Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಏಕರೂಪದ ಬೀಡಿ ಮಜೂರಿ ಜಾರಿ ಮಾಡಿ : ದೇಬಾಶಿಸ್ ರಾಯ್

ಸಂಪುಟ: 
11
ಸಂಚಿಕೆ: 
32
Sunday, 30 July 2017

ವಾಸುದೇವ ಉಚ್ಚಿಲ

ಮೂಡಬಿದರೆಯಲ್ಲಿ ಕರ್ನಾಟಕ ಬೀಡಿ ಕಾರ್ಮಿಕರ 9ನೇ ರಾಜ್ಯ ಸಮ್ಮೇಳನ

ದೇಶದ ಹಲವು ರಾಜ್ಯಗಳಲ್ಲಿ ಬೀಡಿ ಕಟ್ಟುವ ಉದ್ದಿಮೆಯನ್ನು ಮನೆ ಮನೆಯಲ್ಲಿ ಕಾರ್ಮಿಕರು ಬೀಡಿ ಕಟ್ಟುವ ಮೂಲಕ ಮಾಡುತ್ತಿದ್ದರೂ, ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಮಿಕರಿಗೆ ಬೇರೆ ಬೇರೆ ಪ್ರಮಾಣದ ಕೂಲಿ ಇದೆ. ಬೀಡಿ ಕಾರ್ಮಿಕ ಸಂಘಟನೆಗಳು ಇದ್ದಲ್ಲಿ ಕೂಲಿ ಸ್ವಲ್ಪ ಹೆಚ್ಚಿರುತ್ತದೆ. ಎಲ್ಲಿ ಕಾರ್ಮಿಕರ ಸಂಘಟನೆಗಳು ಇಲ್ಲದೆ ಕೂಲಿ ಕಡಿಮೆ ಆಗಿರುತ್ತದೋ ಅಲ್ಲಿಗೆ ಮಾಲಕರು ವಲಸೆ ಹೋಗುತ್ತಾರೆ. ಕೇರಳದಿಂದ ಕರ್ನಾಟಕಕ್ಕೆ ಒಂದು ಕಾಲದಲ್ಲಿ ಬೀಡಿ ಮಾಲಿಕರು ವಲಸೆ ಬಂದಿದ್ದರು. ಬೇರೆ ರಾಜ್ಯ ಜಿಲ್ಲೆಗಳಲ್ಲೂ ಇದು ನಡೆಯುತ್ತಿದೆ. ಕಾರ್ಮಿಕರಿಗೆ ಆಗುವ ಅನ್ಯಾಯವನ್ನು ತಪ್ಪಿಸಲು, ಏಕರೂಪದ ಬೀಡಿ ಮಜೂರಿ ಎಲ್ಲಾ ರಾಜ್ಯಗಳಲ್ಲೂ ದೊರೆಯಬೇಕು ಎಂಬುದಾಗಿ ಸಿಐಟಿಯು ಸಂಯೋಜಿತ ಅಖಿಲ ಭಾರತ ಬೀಡಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾ|ದೇಬಾಶಿಸ್ ರಾಯ್ ಆಗ್ರಹಿಸಿದರು.

ಅವರು ಜುಲಾಯಿ 24 ರಂದು ಮೂಡಬಿದರೆ ಸಮಾಜ ಮಂದಿರದ ಕಾ|ಪ್ರಸನ್ನ ಕುಮಾರ್ ವೇದಿಕೆಯಲ್ಲಿ ಆರಂಭವಾದ ಎರಡು ದಿನಗಳ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ 9ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ಎರಡನೇ ಅತೀ ದೊಡ್ಡ ಕಾರ್ಮಿಕ ಸಂಘಟನೆ ಬೀಡಿ ಕಾರ್ಮಿಕರ ಸಂಘಟನೆಯಾಗಿದೆ. ಬೀಡಿ ನಿರ್ಮಾಣದಂಥಹ ಉದ್ದಿಮೆಯಲ್ಲಿರುವ ಕಾರ್ಮಿಕರು ಅಸಂಘಟಿತರಾಗಿದ್ದಾರೆ ಮತ್ತು ಅತ್ಯಂತ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರದ ಕೈಗಾರಿಕಾ ಹಾಗೂ ಕಾರ್ಮಿಕ ನೀತಿಗಳು ಬಂಡವಳಿಗರ ಪರವಾಗಿದೆ. ಇದರಿಂದ ಅಸಂಘಟಿತ ಕಾರ್ಮಿಕರ ಮೇಲಿನ ಹೊರೆ ಹೆಚ್ಚಾಗಿದೆ.

ಕೇಂದ್ರದಲ್ಲಿ ಸದ್ಯ ಆರೆಸ್ಸೆಸ್ ಬಿಜೆಪಿ ಪಾಲ್ಗೊಳ್ಳುತ್ತಿರುವ ಸರಕಾರವಿದ್ದು ಕಾರ್ಮಿಕರ ಪ್ರಶ್ನೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿಲ್ಲ. ಜನತೆಯ ಪ್ರಶ್ನೆಗಳನ್ನು ಬಿಟ್ಟು ಗೋವು, ಆಹಾರ, ರಾಷ್ಟ್ರೀಯತೆ ಇತ್ಯಾದಿ ವಿಷಯಗಳನ್ನೇ ಮುಂದಿಟ್ಟು ಒಂದು ಮತೀಯರನ್ನು ಇನ್ನೊಂದು ಮತೀಯರ ವಿರುದ್ಧ ಪ್ರಚೋದಿಸುತ್ತಿದ್ದಾರೆ.

ಬಿಜೆಪಿ ಕೇಂದ್ರ ಸರಕಾರದ ಆರ್ಥಿಕ ಚಟುವಟಿಕೆಗಳಲ್ಲಿ ಸ್ವಲ್ಪ ಹಿಂದೆ ನೋಟು ಅಮಾನ್ಯೀಕರಣ ಮಾಡಿದರು. ಇದರಿಂದ ತೊಂದರೆಯಾದುದು ಬಡವರಿಗೆ. ಭರವಸೆ ನೀಡಿದಂತೆ ಕಪ್ಪು ಹಣವು ಹೊರಬರಲಿಲ್ಲ, ಭ್ರಷ್ಟಚಾರವೂ ನಿಲ್ಲಲಿಲ್ಲ, ಭಯೋತ್ಪಾದನೆಯನ್ನೂ ನಿಲ್ಲಿಸಲಾಗಲಿಲ್ಲ. ಅವರು ಹೇಳಿದ ಅಚ್ಚೇ ದಿನಗಳು ಬಡವರಿಗೆ ಬರಲೇ ಇಲ್ಲ. ಹಣಕಾಸು ವ್ಯವಹಾರವನ್ನು ನಗದು ರಹಿತ ಬ್ಯಾಂಕಿಂಗ್‍ಗೆ ಪರಿವರ್ತಿಸಲು ಮುಂದಾದರು. ಇದರಿಂದ ಬಡ ಬೀಡಿ ಕಾರ್ಮಿಕರಿಗೆ ತಮ್ಮ ಅತ್ಯಲ್ಪ ಮಜೂರಿಯನ್ನು ನಗದಾಗಿ ಪಡೆಯುವುದೂ ಕಷ್ಟವಾಗಿದೆ. ಈಗಾಗಲೇ ಬೀಡಿ ಉದ್ದಿಮೆಯಿಂದ ಹೇರಳ ಲಾಭ ಗಳಿಸಿರುವ ಮಾಲಕರು ಉದ್ದಿಮೆಯನ್ನೇ ನಿಲ್ಲಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಜಿಎಸ್‍ಟಿ ಎಂಬ ನವೀನ ಮಾದರಿ ತೆರಿಗೆ ಪದ್ಧತಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಬೀಡಿ ಉದ್ದಿಮೆಯಲ್ಲಿ ಹಲವು ಕಚ್ಚಾ ವಸ್ತುಗಳಿಗೆ ತೆರಿಗೆಯನ್ನು ತೀವ್ರ ಪ್ರಮಾಣದಲ್ಲಿ ಏರಿಸಲಾಗಿದೆ. ಇದರಿಂದ ಬೀಡಿ ಮಾರಾಟ ನಿಂತು ಹೋಗಿದೆ. ಬೀಡಿ ಕಟ್ಟುವ ಚಟುವಟಿಕೆಯನ್ನು ಎಲ್ಲಾ ದಿನಗಳಲ್ಲಿ ಮಾಲಕರು ಮಾಡಿಸುತ್ತಿಲ್ಲ ಮತ್ತು ಇದರಿಂದ ತೊಂದರೆಯಾಗಿರುವುದು ಅಸಂಘಟಿತ ಬೀಡಿ ಕಾರ್ಮಿಕರಿಗೆ.

ಬೀಡಿ ಕಾರ್ಮಿಕರು ಹೋರಾಟದಿಂದ ಸವಲತ್ತುಗಳನ್ನು ಪಡೆಯುವ ಕಾನೂನು ಬರುವಂತೆ ಮಾಡಿದ್ದರೂ, ಆ ಸವಲತ್ತುಗಳನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಬೀಡಿ ಕಾರ್ಮಿಕರಿಗೆ ಕನಿಷ್ಟ ರೂ.1000/ ಪಿಂಚಣಿ ಸಿಗಬೇಕು. ಕೆಲವು ಮಾಲಕರು ಕಾರ್ಮಿಕರ ಪ್ರಾವಿಡೆಂಟ್ ಫಂಡ್ ವಂಚಿಸಿ, ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕುಂಠಿತವಾಗುವಂತೆ ಮಾಡಿದ್ದಾರೆ. ಸವಲತ್ತುಗಳು ಕಾನೂನು ಪುಸ್ತಕದಲ್ಲಿ ಮಾತ್ರ. ಅದರ ಅನುಷ್ಟಾನ ಸರಿಯಾಗಿ ಆಗುತ್ತಿಲ್ಲ. ಬೀಡಿ ಕಾರ್ಮಿಕರ 15 ಬೇಡಿಕೆಗಳನ್ನು ಮುಂದಿಟ್ಟು ಬರುವ ಆಗಸ್ಟ್ 15ರ ವರೆಗೆ ದೇಶದಾದ್ಯಂತ ಸಹಿ ಸಂಗ್ರಹ ನಡೆಯಲಿದ್ದು, ಬಳಿಕ ಪ್ರಧಾನಿಯವರಿಗೆ ನಿಯೋಗ ಹೋಗಿ ಮನವಿ ಸಲ್ಲಿಸಲಿದ್ದೇವೆ ಎಂಬುದಾಗಿ ದೇಬಾಶಿಸ್ ರಾಯ್ ತಿಳಿಸಿದರು.

ಕಾರ್ಮಿಕರು ಕೆಂಬಾವುಟ ಹಿಡಿದು ವರ್ಗವಾಗಿ ಹೋರಾಟಕ್ಕೆ ತೊಡಗಿರುವಾಗ ಮತ ಜಾತಿಗಳ ಅಸ್ಮಿತೆಯ ನೆಲೆಯಲ್ಲಿ ಅವರನ್ನು ವಿಂಗಡಿಸುವ ಪ್ರಯತ್ನಗಳು ನಡೆಯುತ್ತಿವೆ. ಕಾರ್ಮಿಕರಿಗೆ ಮೆರವಣಿಗೆಗೂ ಕೆಲವೆಡೆ ಅವಕಾಶವಿಲ್ಲ. ಪಶ್ಚಿಮ ಬಂಗಾಳದಲ್ಲೂ ಆಳುವ ತೃಣಮೂಲ ಕಾಂಗ್ರೆಸ್ ಬಿಜೆಪಿಯೊಡನೆ ಒಳ ಒಪ್ಪಂದ ಮಾಡಿಕೊಂಡು ಎಡಪಕ್ಷಗಳ ಮೇಲೆ ದಮನ ನಡೆಸುತ್ತಿದೆ, ಕಾರ್ಮಿಕರ ಮೆರವಣಿಗೆ ಮೇಲೂ ದಾಳಿ ನಡೆಸುತ್ತಿದೆ. ಕಳೆದ 6 ವರ್ಷಗಳಿಂದ ನಡೆದಿರುವ ದಮನಕಾರಿ ಆಡಳಿತದಲ್ಲಿ 3500 ಬೀಡಿ ಕಾರ್ಮಿಕರನ್ನು ನಿರ್ಬಂಧದಲ್ಲಿ ಇರಿಸಲಾಗಿತ್ತು. 2000 ಜನರ ಮೇಲೆ ಬರ್ಬರ ದಾಳಿ ನಡೆದಿತ್ತು ಎಂದು ವಿವರಿಸಿದ ರಾಯ್ ಅವರು ಬೀಡಿ ಕಾರ್ಮಿಕ ವರ್ಗ ಈ ಎಲ್ಲಾ ದಮನವನ್ನು ಎದುರಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕರೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಬೀಡಿ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಹಂತದಲ್ಲಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ತಮಿಳುನಾಡಿನಲ್ಲಿ ಇಂಥ ಸಮಸ್ಯೆ ಎದುರಾದಾಗ, ಜನಪ್ರತಿನಿಧಿಗಳು ಪಕ್ಷಭೇದ ಮರೆತು ಬೀಡಿ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ. ಇದರಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ಹಿಂದಿದ್ದಾರೆ.

ರಾಜ್ಯದಲ್ಲಿ 10 ಕೋಟಿ ಕೆ.ಜಿ. ತಂಬಾಕು ಉತ್ಪಾದನೆಯಾಗಿದೆ. ಇಷ್ಟೊಂದು ತಂಬಾಕು ಬೆಳೆದಿರುವಾಗ, ಸಹಜವಾಗಿ ದೊಡ್ಡ ಪ್ರಮಾಣದಲ್ಲಿ ಬೀಡಿ ಉತ್ಪಾದನೆಯಾಗಿದೆ. ಬೀಡಿ ಮಾಲಕರಿಗೆ ಹಲವು ಪಟ್ಟು ಲಾಭವಾಗಿದ್ದರೂ, ನಷ್ಟ ಎಂದು ಸುಳ್ಳು ಹೇಳಿ, ನೀಡಬೇಕಿದ್ದ ಹೆಚ್ಚುವರಿ ತುಟ್ಟಿಭತ್ತೆಯನ್ನು ನೀಡದೆ ಬಾಕಿ ಇರಿಸಿದ್ದಾರೆ. ಸರಕಾರವೂ ಕೂಡಾ ಅವರಿಗೆ ವಿನಾಯತಿ ಕೊಟ್ಟಿತ್ತು. ಕೇಂದ್ರ ರಾಜ್ಯ ಸರಕಾರಗಳೂ ಮಾಲಕರ ಪರವಾಗಿ ಇವೆಯೇ ಹೊರತು ಬಡ ಬೀಡಿ ಕಾರ್ಮಿಕರ ಪರವಾಗಿ ಇಲ್ಲ ಎಂದವರು ತಿಳಿಸಿದರು.

ಕೇಂದ್ರದಲ್ಲಿ ಆಳುವ ಬಿಜೆಪಿ ಪಕ್ಷದ ಸದಸ್ಯರು ದ.ಕ. ಮತ್ತು ಉಡುಪಿಯಲ್ಲಿ ಸಂಸದರಾಗಿದ್ದಾರೆ. ಅವರು ಯಾವತ್ತೂ ಬೀಡಿ ಕಾರ್ಮಿಕರ ಪ್ರಶ್ನೆಯನ್ನು ಇಲ್ಲವೇ ಉದ್ದಿಮೆಯ ಸಮಸ್ಯೆಯನ್ನು ಸಂಸತ್ತಿನಲ್ಲಿ ಚರ್ಚಿಸಿಯೇ ಇಲ್ಲ. ದ.ಕ. ಜಿಲ್ಲೆಯಲ್ಲಿ ಕೋಮುವಾದಿ ಪ್ರಚೋದನೆ ನೀಡುವಲ್ಲಿ ಭೀಕರ ಭಾಷಣ ನೀಡುವಲ್ಲಿ ಅವರು ಆರೆಸ್ಸೆಸ್ ನಾಯಕರ ಜೊತೆಗೂಡಿದ್ದಾರೆ. ಬೀಡಿ ಕಟ್ಟುವ ಕರಾವಳಿಯ ಜನತೆ ಬಿಜೆಪಿ ನಾಯಕರ ಪ್ರಚೋದಕ ಮಾತುಗಳಿಗೆ ಬಲಿಬೀಳದೆ, ಸೌಹಾರ್ದವನ್ನು ಕಾಪಾಡಬೇಕೆಂದು ಎಸ್.ವರಲಕ್ಷ್ಮಿ ಕರೆ ನೀಡಿದರು.

ದ.ಕ.ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ನಿನ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಕಾರ್ಮಿಕರು ಕೂಡಾ ರಾಜಕೀಯದ ಬಗ್ಗೆ ಮಾತನಾಡಬೇಕು. ಕೇಂದ್ರ ಸರಕಾರ ಆದೇಶ ನೀಡಿ ಪ್ರಾವಿಡೆಂಟ್ ಫಂಡ್ ಹಿಂತೆಗೆದುಕೊಂಡಾಗ, ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರು ಬೀದಿಗೆ ಬಂದರು. ಒಂದೇ ದಿನದಲ್ಲಿ ಪ್ರಧಾನಿ ಮೋದಿಯವರು ತಮ್ಮ ಆದೇಶವನ್ನು ಹಿಂತೆಗೆಯಬೇಕಾಯಿತು. ಅಂಗನವಾಡಿ ನೌಕರರು 4 ದಿನ ಬೆಂಗಳೂರಿನ ರಸ್ತೆ ಬಂದ್ ಮಾಡಿದಾಗ ರಾಜ್ಯ ಸರಕಾರ ಅವರ ಬೇಡಿಕೆಗಳಿಗೆ ಬಾಗಬೇಕಾಯಿತು. ಸರ್ಕಾರ ಕಾಂಗ್ರೆಸ್ಸಿದ್ದಾಗಲೀ, ಬಿಜೆಪಿಯದ್ದಾಗಲಿ, ಜೆಡಿಎಸ್‍ನದ್ದೇ ಆಗಿರಲಿ ಬೀಡಿ ಕಾರ್ಮಿಕರ ಬಗ್ಗೆ ಅವು ಏನೂ ಮಾಡಿಲ್ಲ. ಕೋಟ್ಪಾ ಕಾಯಿದೆಯೋ ಇನ್ನೊಂದೋ, ಬೀಡಿ ಕಾರ್ಮಿಕ ವಿರೋಧಿ ನೀತಿಗಳನ್ನು ಬೀಡಿ ಕಾರ್ಮಿಕರು ಒಗ್ಗಟ್ಟಿನ ಹೋರಾಟದಿಂದ ಕೈಬಿಡುವಂತೆ ಮಾಡಬೇಕಾಗಿದೆ ಎಂದು ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.

ರಾಜ್ಯ ಬೀಡಿ ಕಾರ್ಮಿಕ ಫೆಡರೇಶನ್ನಿನ ಉಪಾಧ್ಯಕ್ಷರಾದ ಪದ್ಮಾವತಿ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಗೌರವಧ್ಯಕ್ಷರಾದ ಕೆ.ಯಾದವ ಶೆಟ್ಟಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ರಮಣಿ ಮೂಡಬಿದರೆ, ಸಿಐಟಿಯು ಮುಖಂಡರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಬೀಡಿ ಕಾರ್ಮಿಕ ರಾಜ್ಯ ಸಮಿತಿ ಮುಖಂಡರಾದ ಯು.ಬಿ.ಲೋಕಯ್ಯ, ಮಹಾಬಲ ವಡೇರಹೋಬಳಿ, ಕೋದಂಡರಾಮ್, ಸಿ.ಕುಮಾರಿ, ಗಿರಿಜ ಮೂಡಬಿದರೆ, ರಾಧಾ ಮೂಡಬಿದರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಮ್ಮೇಳನ ಉದ್ಘಾಟನೆಗೂ ಮೊದಲು ಮೂಡಬಿದರೆ ಹಳೇ ಪೋಲೀಸ್ ಠಾಣೆ ಬಳಿಯಿಂದ ಸಮಾಜ ಮಂದಿರದ ವರೆಗೆ ಬೀಡಿ ಕಾರ್ಮಿಕರ ಮೆರವಣಿಗೆ ನಡೆಯಿತು. ಬಳಿಕ ಸಮ್ಮೇಳನದ ಧ್ವಜವನ್ನು ಹಿರಿಯ ಬೀಡಿ ಕಾರ್ಮಿಕ ಮುಖಂಡ ಯು.ಬಿ.ಲೋಕಯ್ಯ ಆರೋಹಣ ಮಾಡಿದರು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಡಿದ ಕಾರ್ಮಿಕ, ರಾಜಕೀಯ ಹಾಗೂ ಸಾಂಸ್ಕøತಿಕ ಮುಖಂಡರಿಗೆ ಶ್ರದ್ಧಾಂಜಲಿ ನಿರ್ಣಯವನ್ನು ವಡೇರಹೋಬಳಿ ಮಂಡಿಸಿದರು. ಸಮ್ಮೇಳನ ಸಭಾಂಗಣ ಕಿಕ್ಕಿರಿದು ಬೀಡಿ ಕಾರ್ಮಿಕ ಮಹಿಳೆಯರು ವೇದಿಕೆಯ ಅಕ್ಕಪಕ್ಕಗಳನ್ನು ಆಕ್ರಮಿಸಿದ್ದರು.

ಬೀಡಿ ಕಾರ್ಮಿಕರ ಮೇಲೆ ಸಂಘಿ ದಾಳಿ

ಮಂಗಳೂರಿನ ಮೂಡಬಿದ್ರೆಯಲ್ಲಿ ಬೀಡಿ ಕಾರ್ಮಿಕರ ರಾಜ್ಯ ಸಮ್ಮೆಳನದಲ್ಲಿ ಭಾಗವಹಿಸಿ ತುಮಕೂರಿಗೆ ಹಿಂದಿರುಗುವಾಗ ಮತಾಂದ, ಕೋಮುವಾದಿ ಕಿಡಿಗೆಡಿಗಳು ಧರ್ಮಸ್ಥಳದಿಂದ ಸುಮಾರು 30 ಕಿಲೋಮೀಟರ್ ವರೆಗೆ ಮಹಿಳಾ ಕಾರ್ಮಿಕರೇ ಹೆಚ್ಚಿದ್ದ, ಕೆಂಬಾವುಟ ಹಾಕಿದ್ದ ವಾಹನ ಹಿಂಬಾಲಿಸಿ ಅಡ್ಡಗಟ್ಟಿ ದಾಂದಲೆ ಮಾಡಲು ಎತ್ನಿಸಿದರು. ವಾಹನ ನಿಲ್ಲಿಸದ ಕಾರಣ ಒಂದೇ ಬೈಕಿನಲ್ಲಿದ್ದ 3 ಯುವಕರು ಕಲ್ಲುಗಳನ್ನು ತೂರಿದ ಪರಿಣಾಮವಾಗಿ ವಾಹನದ ಹಿಂದಿನ ಗಾಜು ಹೊಡೆದಿದೆ ಹಾಗೂ ಇಂಡಿಕೇಟರ್ ಸಹ ಒಡೆದು ಹೋಗಿದೆ. ಅವರ ಜೊತೆ ಒಂದು ಆಲ್ಟೊ ಕಾರು ಸಹ ಹಿಂಬಾಲಿಸುತ್ತಿತ್ತು. ಉಪ್ಪಿನಂಗಡಿ-ಸಕಲೇಶಪುರದ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ವರ್ಗದವರು ಬಂದು ಸಹಕರಿಸಿದರು. ಕತ್ತಲಲ್ಲಿ ನಿರ್ಜನ ಹೆದ್ದಾರಿಯಲ್ಲಿ ನಡೆದ ಈ ದಾಳಿಯಿಂದ ಮಹಿಳಾ ಕಾರ್ಮಿಕರು ಭೀತಿಯಿಂದ ಅಲ್ಲೇ ಉಳಿದಿದ್ದಾರೆ.  ಬೀಡಿ ಕಟ್ಟಿ ಕುಟುಂಬ ಸಾಗಿಸುವ ಮಹಿಳಾ ಕಾರ್ಮಿಕರ ಮೇಲೆ ನಡೆದ ಈ ದಾಳಿ ಅತ್ಯಂತ ಹೀನಾಯವಾದದ್ದು. ಪ್ರತಿಯೊಬ್ಬರು ಕಟು ಶಬ್ದಗಳಲ್ಲಿ ಖಂಡಿಸಬೇಕಾದದ್ದು.