Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬೀಡಿ ಉದ್ಯಮದ ಕೊಡುಗೆ ಅಪಾರ : ವಸಂತ ಆಚಾರಿ

ಸಂಪುಟ: 
11
ಸಂಚಿಕೆ: 
32
date: 
Sunday, 30 July 2017

 

ದಕ್ಷಿಣ ಕನ್ನಡ ಜಿಲ್ಲೆಯನ್ನು ಆರ್ಥಿಕವಾಗಿ ಬಲಿಷ್ಟಗೊಳಿಸಿದ್ದು ಬೀಡಿ ಉದ್ದಿಮೆ. ಬಡ ಬೀಡಿ ಕಾರ್ಮಿಕ ಮಹಿಳೆಯರು ತಮ್ಮ ದುಡಿಮೆಯ ಅತ್ಯಲ್ಪ ಗಳಿಕೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಕಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಇವತ್ತು ಬೀಡಿ ಕಾರ್ಮಿಕರ ಮಕ್ಕಳು ಉನ್ನತ ವಿದ್ಯಾಭ್ಯಾಸ, ಉತ್ತಮ ಉದ್ಯೋಗ ಹೊಂದಿ ಜಿಲ್ಲೆಯನ್ನು ಆರ್ಥಿಕವಾಗಿ ಬಲಿಷ್ಟವಾಗಿ ಮಾಡುವುದರಲ್ಲಿ ಬೀಡಿ ಉದ್ದಿಮೆ ಮತ್ತು ಕಾರ್ಮಿಕರ ದುಡಿಮೆ ಕಾರಣವಾಗಿದೆ ಎಂಬುದಾಗಿ ದ.ಕ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೂಡಬಿದ್ರಿಯಲ್ಲಿ ಜುಲೈ 24ರಂದು ನಡೆದ 9ನೇ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಸಮ್ಮೇಳನದ ಭಾಗವಾಗಿ ನಡೆಸಲಾಗಿದ್ದ “ಬೀಡಿ ಉದ್ದಿಮೆ ಮತ್ತು ಕಾರ್ಮಿಕರ ಸಮಸ್ಯೆಗಳು” ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಡೀ ಜಿಲ್ಲೆಯ ಬದುಕನ್ನು ಕಾಪಾಡಿದ ಬೀಡಿ ಉದ್ದಿಮೆ ಇಂದು ಅವನತಿಯ ಕಡೆ ಸಾಗಿದೆ. ವಿಚಾರ ಮಂಡಿಸಿದ ಪರಿಣತರ ಮಾತಿನಿಂದಲೇ ತಿಳಿಯುವಂತೆ ಇದಕ್ಕೆ ಬೀಡಿ ಕಾರ್ಮಿಕರು ಕಾರಣವಲ್ಲ, ಬೀಡಿ ಗುತ್ತಿಗೆದಾರರು ಕಾರಣರಲ್ಲ. ಇದಕ್ಕೆ ಬೀಡಿ ಉದ್ದಿಮೆಯ ಇಂದಿನ ಮಾಲಕರು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ಕಾರಣ. ಧೂಮಪಾನ ನಿಷೇಧ ಕಾಯಿದೆ ಜಾರಿಗೊಳಿಸಲು ಕೇಂದ್ರ ಸರಕಾರ ಹೊಗೆಬತ್ತಿ ಸೇವನೆಯಿಂದ ಕ್ಯಾನ್ಸರ್ ಬರಲಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ ಕಾರಣವನ್ನು ಮುಂದಕ್ಕೆ ಒಡ್ಡುತ್ತಿದೆ; ಆದರೆ ಕ್ಯಾನ್ಸರ್‍ನಿಂದ ಸತ್ತವರಲ್ಲಿ ಹೊಗೆಬತ್ತಿ ಸೇದುವವರು ಎಷ್ಟಿದ್ದಾರೆ ಎಂಬ ಬಗ್ಗೆ ಯಾವ ಸಮೀಕ್ಷೆ ನಡೆದಿದೆ ? ಕೊಟ್ಪಾ ಕಾಯಿದೆಯನ್ನು ಜಾರಿಗೊಳಿಸುವಾಗ, ಬೀಡಿ ಕಟ್ಟುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆ ಮಾಡಬೇಕು ಎಂಬುದನ್ನು ಕಾಯಿದೆ ನಿರ್ದಿಷ್ಟಪಡಿಸಿತ್ತಾದರೂ, ಕೇಂದ್ರ ರಾಜ್ಯ ಸರಕಾರಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳದೆ ಬೀಡಿ ದಾಸ್ತಾನು ತಾಣಗಳ ಮೇಲೆ ದಾಳಿ ಮಾಡುತ್ತಿರುವುದು, ಈ ಸರಕಾರಗಳಿಗೆ ಈ ಉದ್ದಿಮೆಯಲ್ಲಿ ದುಡಿಯುವ ಕಾರ್ಮಿಕರ ಮೇಲೆ ಕಾಳಜಿಯಿಲ್ಲ ಎಂಬುದನ್ನು ತಿಳಿಸುತ್ತದೆ ಎಂದು ಅವರು ವಿವರಿಸಿದರು.

ಕೇಂದ್ರ ಸರಕಾರವು ಜಾರಿಗೆ ತರುತ್ತಿರುವ ಆರ್ಥಿಕ ಉದಾರೀಕರಣದ ನೀತಿಗಳು ಕಾರ್ಪೋರೇಟ್ ಹಿತವನ್ನು ರಕ್ಷಿಸುವುದಾಗಿದೆ. ಇದರ ಭಾಗವಾಗಿ ಕೇಂದ್ರ ಸರಕಾರ ಕೈಗೊಂಡ ನೋಟು ಅಮಾನ್ಯೀಕರಣ, ನಗದುರಹಿತ ವ್ಯವಹಾರ ಮತ್ತು ಇತ್ತೀಚೆಗೆ ಜಾರಿಗೆ ತಂದ ಜಿಎಸ್‍ಟಿ - ಎಲ್ಲವೂ ಬೀಡಿ ಉದ್ದಿಮೆಯ ಮೇಲೆ ದಾಳಿ ನಡೆಸಿದ್ದು, ಬ್ಯಾಂಕ್ ವ್ಯವಹಾರವನ್ನೇ ಅಷ್ಟಾಗಿ ತಿಳಿದಿರದ ಬಡ ಬೀಡಿ ಕಾರ್ಮಿಕರನ್ನು ನಗದುರಹಿತ ಬ್ಯಾಂಕಿಂಗ್‍ಗೆ ಒಳಪಡಿಸಿ ಇಡೀ ಉದ್ದಿಮೆಯ ಗುತ್ತಿಗೆದಾರರನ್ನು, ಕಾರ್ಮಿಕರನ್ನು ಸಂಕಷ್ಟಕ್ಕೆ ಒಳಪಡಿಸಿದೆ. ಬೀಡಿ ಕಾರ್ಮಿಕರು ದೀರ್ಘ ಕಾಲದಿಂದ ನಡೆಸಿದ ಹೋರಾಟಗಳಿಂದ ಪಡೆದಿರುವ ಸವಲತ್ತುಗಳನ್ನು ಎಂದಿಗೂ ಬಿಟ್ಟು ಬಿಡಲಾರರು. ಪ್ರಾವಿಡೆಂಟ್ ಫಂಡ್, ತುಟ್ಟಿಭತ್ತ್ಯೆ, ಕಲ್ಯಾಣ ನಿಧಿ, ಪಿಂಚಣಿ, ಸಾಮಾಜಿಕ ಭದ್ರತೆ ಇವುಗಳನ್ನು ಉಳಿಸಿಕೊಳ್ಳಲು ಬೀಡಿ ಕಾರ್ಮಿಕರು ಸಮಾನ ಬೇಡಿಕೆಯ ಆಧಾರದಲ್ಲಿ ಗುತ್ತಿಗೆದಾರರನ್ನೂ ಸೇರಿಸಿಕೊಂಡು ಬಲವಾದ ಹೋರಾಟಗಳನ್ನು ಮುಂದೆ ನಡೆಸಲಿರುವರು ಎಂಬುದಾಗಿ ವಸಂತ ಆಚಾರಿ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನಿನ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ವಿಚಾರ ಮಂಡನೆ ಮಾಡಿ, ಕರ್ನಾಟಕದಲ್ಲಿ ಸುಮಾರು 9 - 10ಲಕ್ಷ ಬೀಡಿ ಕಾರ್ಮಿಕರಿದ್ದಾರೆ; ತಂಬಾಕು ಕೃಷಿ ಸೇರಿದಂತೆ ಬೀಡಿ ಉದ್ದಿಮೆಯ ವಿವಿಧ ಹಂತಗಳಲ್ಲಿ ಒಳಗೊಂಡ ದುಡಿಮೆಗಾರರನ್ನು ಸೇರಿಸಿಕೊಂಡರೆ ಸರಿಸುಮಾರು 12 - 13ಲಕ್ಷ ಜನ ತಂಬಾಕು ಹಾಗೂ ಅದರ ಉತ್ಪನ್ನಗಳ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಉದ್ದಿಮೆಗಳಂತೆಯೇ ಬೀಡಿ ಉದ್ದಿಮೆಯು ಒಂದು ಶಿಸ್ತು ಬದ್ದ ಉದ್ದಿಮೆಯಲ್ಲ. ಇದರಲ್ಲಿ ಯಾವ ಕಾನೂನಿನ ಅಡಿಯಲ್ಲೂ ಬಾರದ ಗುತ್ತಿಗೆದಾರರಿದ್ದಾರೆ. ಯಾವ ಕಾನೂನಿನಡಿಯಲ್ಲೂ ಬಾರದ ಮಾಲಿಕರೂ ಇದ್ದಾರೆ. ಈ ಎಲ್ಲಾ ಕೊರತೆಗಳ ಮಧ್ಯೆಯೂ ದ.ಕ ಜಿಲ್ಲೆಯ ಆರ್ಥಿಕ ಸಂಚಲನಕ್ಕೆ ಬೀಡಿ ಉದ್ದಿಮೆ ಕಾರಣವಾಗಿದೆ. ಮಾಲಕರು ಹೇರಳ ಲಾಭ ಪಡೆದಿದ್ದರೂ, ಲಾಭಾಂಶದ ಪಾಲನ್ನು ಕಾರ್ಮಿಕರಿಗೆ ನೀಡುತ್ತಿಲ್ಲ. ಅತ್ಯಂತ ಕನಿಷ್ಟ ಕೂಲಿ ಇರುವುದೂ ಬೀಡಿ ಉದ್ದಿಮೆಯಲ್ಲೇ ಎಂದು ಸೈಯದ್ ಮುಜೀಬ್ ತಿಳಿಸಿದರು.

ಎಐಟಿಯುಸಿ ಸಂಯೋಜಿತ ದ.ಕ ಜಿಲ್ಲಾ ಬೀಡಿ ಪೆಡರೇಶನ್ ಮುಖಂಡರಾದ ಸೀತಾರಾಮ್ ಬೇರಿಂಜ ಮಾತನಾಡಿ, ಮಾಲಿಕರು ಬೀಡಿ ಉದ್ದಿಮೆಯಲ್ಲಿ ಗಳಿಸಿದ ಹೇರಳ ಲಾಭದಿಂದ ತಮ್ಮ ಬಂಡವಾಳವನ್ನು ಬೇರೆ ಉದ್ದಿಮೆಗಳಲ್ಲಿ ತೊಡಗಿಸಿದ್ದಾರೆ. ಬೀಡಿ ಸೇವನೆಯಿಂದಲೇ ಕ್ಯಾನ್ಸರ್ ಎಂಬ  ಸಂಶೋಧಿಸಿ ದೃಢಪಡಿಸದ ವಿಚಾರಗಳನ್ನು ಪ್ರಚಾರ ಮಾಡಿ ಬೀಡಿ ಕೈಗಾರಿಕೆ ಹಾಗೂ ಅದನ್ನು ನಂಬಿದ ಕಾರ್ಮಿಕರಿಗೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ. ಬೀಡಿ ಕಾರ್ಮಿಕರಲ್ಲದೆ ಇಡೀ ಉದ್ದಿಮೆಗೆ ಸಂಬಂಧಿಸಿದ ಎಲ್ಲಾ ದುಡಿಮೆಗಾರರನ್ನೂ ಸರಕಾರದ ನೀತಿಗಳು ಅತಂತ್ರವಾಗಿಸಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ ಎಂದು ಸೀತಾರಾಮ ಬೇರಿಂಜ ತಿಳಿಸಿದರು.

ಬೀಡಿ ಗುತ್ತಿಗೆದಾರರ ಪ್ರಶ್ನೆಗಳನ್ನು ಗುತ್ತಿಗೆದಾರರ ಸಂಘದ ಮುಖಂಡರಾದ ಖಾದರ್ ಕಿನ್ನಿಗೋಳಿ ಮತ್ತು ಅಬ್ಬು ಮೂಡಬಿದ್ರಿ ವಿವರಿಸಿದರು. ಅನಧಿಕೃತ ಖಾಸಗಿ ಬೀಡಿ ಮಾಲಕರು ಕಟ್ಟಿಸುತ್ತಿರುವ ಬೀಡಿ ಚಲಾವಣೆಯಲ್ಲಿ ಇದ್ದು, ಕೆಲವೇ ಗುತ್ತಿಗೆದಾರರನ್ನು ಅವರು ಕೈವಶ ಮಾಡಿ ತಮ್ಮ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಮಾರುತ್ತಿರುವುದರಿಂದ, ಅಧಿಕೃತ ಬೀಡಿ ಉದ್ದಿಮೆಗಳ ಗುತ್ತಿಗೆದಾರರು ಸೋಲುವಂತಾಗಿದೆ. ಗುತ್ತಿಗೆದಾರರಿಗೆ ಪೂರೈಕೆಯಾಗುವ ಎಲೆಗಳು ಗುಣಮಟ್ಟದ್ದಾಗಿಲ್ಲ. ನೋಟು ಅಮಾನ್ಯೀಕರಣ ಹಾಗೂ ನಗದುರಹಿತ ವ್ಯವಹಾರವನ್ನು ಕೇಂದ್ರ ಸರಕಾರ ಜಾರಿಗೊಳಿಸಿದ ನಂತರದಲ್ಲಿ ಕಾರ್ಮಿಕರಿಗೆ ಕೂಲಿಕೊಡಲು ಕೂಡ ಪರದಾಡಬೇಕಾಗಿದೆ. ದಾರ, ಲೇಬಲ್, ಬೀಡಿ ಎಲೆ, ತಂಬಾಕು, ಬೀಡಿ ಎಲ್ಲದಕ್ಕೂ ವಿವಿಧ ದರಗಳಲ್ಲಿ ಜಿಎಸ್‍ಟಿಯನ್ನು ಕೇಂದ್ರ ಸರಕಾರ ಇತ್ತೀಚೆಗೆ ಜಾರಿ ಮಾಡಿದ್ದರಿಂದ ಬೀಡಿಗೆ ಮುಂದೆ ಯಾವ ಮಾರಾಟ ದರ ನಿಗದಿಯಾಗುವುದೋ ತಿಳಿಯದಾಗಿದೆ - ಎಂದು ಉದ್ದಿಮೆಯ ಸಮಸ್ಯೆಗಳನ್ನು ವಿವರಿಸಿದರು. ಮಾಲಕರು ಉದ್ದಿಮೆ ತೊರೆಯಲೂ ಸಿದ್ದರಿದ್ದಾರೆ; ಕಾರ್ಮಿಕರು ಮತ್ತು ಗುತ್ತಿಗೆದಾರರು ಬದುಕುವ ದಾರಿ ಹೇಗೆ ಎಂಬ ಪ್ರಶ್ನೆ ಮುಂದಿಟ್ಟರು.

ದ.ಕ ಜಿಲ್ಲಾ ಬೀಡಿ ಫೆಡರೇಶನ್‍ನ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಯಾದವ ಶೆಟ್ಟಿ, ಅಧ್ಯಕ್ಷೆ ರಮಣಿ ಮೂಡಬಿದ್ರಿ, ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್‍ದಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ ಬೋಳಾರ ಹಾಗೂ ಗುತ್ತಿಗೆದಾರರ ಸಂಘದ ಮುಖಂಡರು ವೇದಿಕೆಯ ಮೇಲಿದ್ದರು. ಯಾದವ ಶೆಟ್ಟಿ ವಂದಿಸಿದರು.

 

 

ಜೆ. ಬಾಲಕೃಷ್ಣ ಶೆಟ್ಟಿ