Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅಂಬೇಡ್ಕರ್ 126 : ಚಿಂತನೆಗಳ ಪುನರವಲೋಕನ : ‘ಸಮಾನತೆಯ ಅನ್ವೇಷಣೆ’ಯಲ್ಲಿ..

ಸಂಪುಟ: 
11
ಸಂಚಿಕೆ: 
32
Sunday, 30 July 2017

ನಾಗರಾಜ ನಂಜುಂಡಯ್ಯ

ಅಂಬೇಡ್ಕರ್‌ರವರ 126ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆದ ಸಮಾನತೆಗಾಗಿ ಅನ್ವೇಷಣೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, 2019 ರಲ್ಲಿ ಕಾಂಗ್ರೇಸ್ ನಾಯಕತ್ವದಲ್ಲಿ ಎಲ್ಲಾ ಇತರೆ ಪಕ್ಷಗಳು ಕೋಮುವಾದಿ, ಫ್ಯಾಸಿಸ್ಟ್ ಸ್ವರೂಪದ ಪ್ರತಿಗಾಮಿ ಬಿಜೆಪಿಯನ್ನು ಸೋಲಿಸಲು ಪಣತೊಡಬೇಕೆಂಬ ಮನೋಭಾವನೆಗಳು ವ್ಯಕ್ತವಾದವು. ಪ್ರಭಾತ್ ಪಟ್ನಾಯಕ್ ಹೇಳಿದಂತೆ ಕಾಂಗ್ರೆಸ್ ಅಂಬೇಡ್ಕರ್ ರವರ ವಿಚಾರಗಳಿಗೆ-ಚಿಂತನೆಗಳಿಗೆ ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆ ಹಾಗೂ ಒಕ್ಕೂಟ ಪ್ರಭುತ್ವದ ರಕ್ಷಣೆಗಳಿಗೆ ನೈಜವಾದ ಸೈದ್ಧಾಂತಿಕವಾದ ಬದ್ಧತೆಯಿಂದ ಪ್ರಾಮಾಣಿಕವಾಗಿ ನಡೆದುಕೊಳ್ಳದೆ ಅದು ಸಾಧ್ಯವಿಲ್ಲ. ಕಳೆದ ಎರಡುವರೆ ದಶಕಗಳ ಮತ್ತು ಇಂದಿಗೂ ಅದರ ನೀತಿಗಳೂ ಸಂಘಟನಾ-ಸೈದ್ಧಾಂತಿಕ ನೆಲೆಗಳನ್ನು ನೋಡಿದರೆ ಕಾಂಗ್ರೆಸ್ ಇದನ್ನು ಮಾಡಿತೇ ಎಂಬುದು ಇಡೀ ಸಮ್ಮೇಳನದ ನಂತರ ನನಗೆ ಪ್ರಶ್ನೆಯಾಗಿ ಕಾಡಿತು.

‘ಸಮಾನತೆಯ ಅನ್ವೇಷಣೆ’ (Quest for Equity)ಯಲ್ಲಿ  ಡಾ|| ಬಿ.ಆರ್. ಅಂಬೇಡ್ಕರ್ ರವರ ಚಿಂತನೆಗಳ ಪುನರವಲೋಕನ (Re-Visiting Ambedkar Ideas) ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಜುಲೈ 21 ರಿಂದ 23 ರವರೆಗೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ನಡೆಯಿತು. ಸಮ್ಮೇಳನ ಅಂತರರಾಷ್ಟ್ರೀಯ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ ‘ಮಾರ್ಟಿನ್ ಲೂಥರ್ ಕಿಂಗ್-3’ ರವರ ಉದ್ಘಾಟನೆಯ ಮೂಲಕ ವಿದ್ಯುಕ್ತವಾಗಿ ಚಾಲನೆಯಾಯಿತು. ಉದ್ಘಾಟನಾ ಸಮಾರಂಭ, ಪ್ಲಿನರಿ ಅಧಿವೇಶನಗಳು, ಕೀನೋಟ್ ಅಧಿವೇಶನಗಳು, ಪ್ರಮುಖ ಗೋಷ್ಠಿಗಳು, ಚರ್ಚೆಗಳು, ಕವಿಗೋಷ್ಠಿಗಳು, ವಿಚಾರ ಸಂಕಿರಣಗಳು, ವಿಮರ್ಶೆಗಳು ಹಾಗೂ ಮುಖ್ಯ ಮಂತ್ರಿಗಳೊಂದಿಗೆ ನಡೆದ ಸಂವಾದ, ಕೊನೆಯಲ್ಲಿ ಸಮಾರೋಪ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ಸಮ್ಮೇಳನದ ಘೋಷಣೆಗಳು, ಹೀಗೆ ಸುಮಾರು ೯೦ ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಿತು. ಭಾಗವಹಿಸಿದ್ದ ನನ್ನಂತಹ ಪ್ರತಿನಿಧಿಗಳಿಗೆ (ಸುಮಾರು 5000 ಕ್ಕೂ ಹೆಚ್ಚು-ಮೂರು ದಿನಗಳ ಕಾಲ) ಅವುಗಳಲ್ಲಿ ಆರಿಸಿಕೊಳ್ಳುವುದೇ ಕಷ್ಟವಾಗಿತ್ತು. ಈ ಅಂತರರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ಮೂರು ದಿನಗಳಲ್ಲಿ ೩೦೦ಕ್ಕೂ ಹೆಚ್ಚು ವಿದೇಶಿ ದೇಶಿಯ ಹಾಗೂ ನಮ್ಮ ರಾಜ್ಯದ ವಿದ್ವಾಂಸರ ಭಾಷಣಗಳು, ಚರ್ಚೆಗಳು ಭಾಗವಹಿಸಿದ್ದವರಲ್ಲಿ ಸ್ಪಲ್ಪ ಮಟ್ಟಿನ ಪ್ರಭುದ್ಧತೆಯನ್ನು ಪಡೆಯಲು ಒಂದು ಅಭೂತಪೂರ್ವ ಅವಕಾಶವಾಗಿತ್ತು ಎಂದು ಹೇಳಲು ನನಗೆ ಮುಜುಗರವೇನೂ ಇಲ್ಲ.

ನನ್ನಲಿದ್ದ ಓದಿನ ಹಸಿವನ್ನು ನೀಗಿಸಲು, ಆಹಾರವನ್ನು ಒದಗಿಸಿಕೊಟ್ಟ ಸಮ್ಮೇಳನವಿದಾಗಿತ್ತು. ಆಯೋಜಿಸಿದ್ದು ಕರ್ನಾಟಕ ಸರ್ಕಾರವಾಗಿತ್ತು. ಇದರ ಹಿಂದೆ ಮುಳುಗುತ್ತಿರುವ ಕಾಂಗ್ರೇಸ್ ಗೆ ಅಂಬೇಡ್ಕರ್ ರವರ ಚಿಂತನೆಗಳ ಮರು-ಭೇಟಿ ಪ್ರಸ್ತುತ ಅಗತ್ಯತೆಯ ಬಗ್ಗೆ ಹಲವಾರು ವಿದ್ವಾಂಸರು ಮಾತನಾಡಿದ್ದು ಉಂಟು. ಇದು ಕಾಂಗ್ರೆಸಿನ ಚುನಾವಣಾ ತಂತ್ರವೆಂಬುದನ್ನು, ತಳ್ಳಿ ಹಾಕುವಂತಿಲ್ಲ. ಏಕೆಂದರೆ, ದೇಶವು ಇಂದು ಕೋಮುವಾದಿ-ಪ್ರತಿಗಾಮಿ ಶಕ್ತಿಗಳ ಆಡಳಿತದಿಂದ ಗಂಡಾಂತರಕ್ಕೆ ಸಿಲುಕುವ ಅಪಾಯ ಎದುರಾಗುತ್ತಿದೆ. ಸಂವಿಧಾನದ ಅಡಿಪಾಯ-ಆಶಯಗಳಾದ, ಸಮಾನತೆ, ಜಾತ್ಯಾತೀತತೆ ಸ್ವರೂಪ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ಪ್ರಭುತ್ವಗಳ ವಿನಾಶಕ್ಕೆ ಪ್ರಸ್ತುತ ರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆರ್.ಎಸ್.ಎಸ್. ನ ಅಂಗ ಪಕ್ಷವಾದ ಬಿಜೆಪಿ ತಮ್ಮ ಕಾರ್ಯಕ್ರಮಗಳನ್ನು ರೂಪಿಸಿದೆ. ಅವರ ಹಿಂದುತ್ವದ ಪ್ರತಿಪಾದನೆಗೆ ಅಡ್ಡಲಾಗಿರುವುದು - ‘ಸಂವಿಧಾನ’. ಆದ್ದರಿಂದ ಇದರ ಅಡಿಪಾಯವನ್ನೂ ಸಡಿಲಗೊಳಿಸಲು, ಪ್ರಜಾಪ್ರಭುತ್ವದ ಬಹುಮತವನ್ನು ಬಳಸಲು ಮುಂದಾಗಿದ್ದಾರೆ.

ಇಂತಹ ಅಪಾಯದ ಮುನ್ಸೂಚನೆಯನ್ನು ಕಾಂಗ್ರೆಸ್ ತಡವಾಗಿಯಾದರೂ ಅರ್ಥ ಮಾಡಿಕೊಂಡು, ಅಂಬೇಡ್ಕರ್ ರವರ ಚಿಂತನೆಗಳ ಮರು ಸ್ಥಾಪನೆಗೆ ಕರ್ನಾಟಕದಲ್ಲಾದರೂ ಆರಂಭಿಸಿರುವುದು ಉತ್ತಮವಾದ ಹೆಜ್ಜೆಯಾಗಿದೆ ಎಂದು ಗುರುತಿಸಬಹುದು.

ಉದ್ಘಾಟನಾ ಸಮಾರಂಭ

ಮಾನವ ಹಕ್ಕುಗಳ ವಿಶ್ವ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್-೩, ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ಅಮೆರಿಕಾದ ಕಪ್ಪು ಜನತೆಯ ವಿಮೋಚನಾ ಹೋರಾಟಕ್ಕೂ - ಭಾರತದಲ್ಲಿನ ದಲಿತರ ಧಮನದ ವಿರುದ್ಧದ ಹೋರಾಟಗಳನ್ನು ಹೋಲಿಸುತ್ತಾ, ಟ್ರಂಪ್ ಮತ್ತು ಮೋದಿ ಈ ಎರಡು ವಿಚಾರಗಳಲ್ಲಿಯೂ ಒಂದೇ ನೀತಿಯನ್ನು ಹೊಂದಿದ್ದಾರೆ ಎಂದು ತಮ್ಮ ನೇರ ಅನುಭವವನ್ನು ಬಿಚ್ಚಿಟ್ಟರು. ಇಡೀ ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಅಭಿವೃದ್ಧಿ-ಪ್ರಗತಿ ಹೊಂದಿದ್ದರೂ ಸಹ, ನಾಗರೀಕ ಸಮಾಜದ ಇಂತಹ ಹೀನಾಯ-ಅವಮಾನ-ಅಮಾನವೀಯ ‘ಸ್ಥಿತಿ-ಗತಿ’ಗಳ ನಿರ್ಮೂಲನೆ ಸಾಧ್ಯವಾಗದಿರುವುದು ವಿಪರ್ಯಾಸವೆನಿಸುತ್ತದೆ ಎಂದರು. ಈ ಸಭೆಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿಯವರು ಉಪಸ್ಥಿತರಿದ್ದು, ಮೋದಿಯವರ ಆಡಳಿತದ ಬಗ್ಗೆ ಕಟುಟೀಕಾ ಪ್ರಸಾರದ ಭಾಷಣ ಮಾಮೂಲಾಗಿತ್ತು.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ

ಎರಡನೇ ದಿನವೂ ಪ್ರಧಾನ ಆವರಣವು ಕಿಕ್ಕಿರಿದು ತುಂಬಿತ್ತು. (3000ಕ್ಕೂ ಹೆಚ್ಚು), ಅರ್ಥಶಾಸ್ತ್ರಜ್ಞ ಹಾಗೂ ಪ್ರೊ. ಸುಖದೇವ್ ಧೋರತ್, ಪ್ರೊ. ಸ್ಯಾಮ್ಯುಯಲ್ ಮೈಯ್ಯರ್‍ಸ್, ವಿದೇಶದ ಲಾರ್ಡ್ ಭಿಕ್ಯು ಪರೇಖ್ ರ ಪ್ರಸ್ತಾವನೆಗಳು ನೆರೆದಿದ್ದವರನ್ನು ಆಕರ್ಷಿಸಿತ್ತು. ಪ್ರೊ. ಥೋರಟ್ ಮಾತನಾಡುತ್ತಾ, ಜಾಗತೀಕರಣ ಪ್ರಕ್ರಿಯೆಗಳ ಜಾರಿಯಿಂದಾಗಿ, ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ, ಜಾತಿ-ಧರ್ಮದ ಹೆಸರಿನಲ್ಲಿ ಹೆಚ್ಚಾಗಿರುವುದನ್ನು ಅಂಕಿ-ಅಂಶಗಳ ಮೂಲಕ ತೆರೆದಿಟ್ಟರು. ಶಿಕ್ಷಣ, ಆರೋಗ್ಯ ಮುಂತಾದ ಮೂಲ ಸೌಕರ್ಯಗಳು ಖಾಸಗೀಕರಣಗೊಂಡಿರುವುದರಿಂದ, ದಲಿತರ, ಹಿಂದುಳಿದವರ ಅಲ್ಪಸಂಖ್ಯಾತರ ಜೀವನ ಅಧೋಗತಿಗಿಳಿದಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಅಗತ್ಯವಿದೆ ಎಂದರು. ದಲಿತರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯವಿರುವುದರಿಂದ ಈ ಸಮುದಾಯದ ಧ್ವನಿ ಸ್ವಲ್ಪ ಕೇಳಿಸುತ್ತಿದೆ. ಇಲ್ಲದಿದ್ದರೆ ಇವರನ್ನು ಧ್ವಂಸಗೊಳಿಸುತ್ತಿದ್ದರು. ಆದಾಗ್ಯೂ, ದಲಿತ ಸಮುದಾಯಕ್ಕೆ ನೈಜ-ಪ್ರತ್ಯೇಕ ಪ್ರಾತಿನಿಧ್ಯ ಇರಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಅದಕ್ಕಾಗಿ ಪ್ರತ್ಯೇಕ ಕ್ಷೇತ್ರಗಳು ಬೇಕೆಂದು ಧೋರತ್ ಪ್ರತಿಪಾಧಿಸಿದರು. ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರನ್ನು ದಲಿತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಬೇಕು. ಅಸ್ಪೃಶ್ಯತೆಯನ್ನು ದೇಶದ ಸಂವಿಧಾನವೇ ನಿಷೇದಿಸಿದ್ದರೂ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಇದು ಜಾತಿ ವ್ಯವಸ್ಥೆಯ ಕ್ರೂರ ಮುಖವಾಣಿಗೆ ಸಾಕ್ಷಿಯಾಗಿದೆ. 2014 ರಲ್ಲಿ ಎನ್‌ಸಿಆರ್‌ಬಿ ಪ್ರಕಾರ, ದೇಶದಲ್ಲಿ ೨.೪೦ ಲಕ್ಷ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಅನಿಷ್ಠ ಪದ್ಧತಿಯ ಬೇರು ಪಾಳೇಗಾರಿ ಮೌಲ್ಯಗಳು, ಇದನ್ನು ಕೇವಲ ಕಾನೂನಿನಿಂದ ಹೋಗಲಾಡಿಸಲು ಅಸಾಧ್ಯವೆಂದು ಖೇದದಿಂದ ಹೇಳಿದರು.

ಪ್ರೊ. ಸ್ಯಾಮ್ಯುಯಲ್ ಮಾತನಾಡಿ, ಭಾರತದ ಹಾಗೂ ಅಮೆರಿಕಾದಲ್ಲಿ ಅಸಮಾನತೆ ಒಂದೇ ಸ್ವರೂಪದಲ್ಲಿದೆ., ಅಸಮಾನತೆ ನಿವಾರಣೆಗೆ ಮೀಸಲಾತಿ ಸಿದ್ಧ ಔಷದವಾಗಿದೆ. ಜಾತಿ ವಿನಾಶ, ವರ್ಣಬೇದ ವಿನಾಶ ಎರಡು ಒಂದೇ ಮಗ್ಗಲಿನ ಹೋರಾಟಗಳು ಎಂದರು. ಮನೆಯಲ್ಲಿಯೇ ರಕ್ಷಣೆಯಿಲ್ಲ ಇದೇ ಸಂದರ್ಭದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಕೈಲಾಸ ಸತ್ಯಾರ್ಥಿಯವರ ಪ್ರಕಾರ, ದೇಶದಲ್ಲಿ ಬಹಳಷ್ಟು ಹೆಣ್ಣು ಮಕ್ಕಳಿಗೆ ಮನೆಯಲ್ಲೆ ಸೂಕ್ತ ರಕ್ಷಣೆಯಿಲ್ಲದಿರುವುದು ನಿಜಕ್ಕೂ ಅವಮಾನಕರ, ಇದು ಭಾರತದ ಸಾಮಾಜಿಕ ಅನಿಷ್ಠತೆಗೆ ಹಿಡಿದ ಕನ್ನಡಿಯಾಗಿದೆ ಎಂದರು. ಮಕ್ಕಳ ಮೇಲೆ, ಮಹಿಳೆಯರ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಅವಕಾಶವಿಲ್ಲದಂತೆ, ಬೃಹತ್ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು. ಇನ್ನೊಂದೆಡೆ, ಕೆಲವು ಮತೀಯ ಶಕ್ತಿಗಳು, ಮಕ್ಕಳನ್ನು, ಯುವಕ-ಯುವತಿಯರನ್ನು ಹಿಂಸಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ದೊಡ್ಡ ಸವಾಲಿನ ಸಮಸ್ಯೆಯಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳು, ಕಾಶ್ಮೀರದಲ್ಲಿನ ಹಲವು ಹಿಂಸಾಕೃತ್ಯಗಳ ಬಗ್ಗೆ ಉದಾಹರಣೆ ಕೊಟ್ಟರು.

ಬ್ರಾಹ್ಮಣಶಾಹಿ ಹಾಗೂ ಠಾಕೂರ್‌ಶಾಹಿ

ಮತ್ತೊಂದು ಪ್ರಧಾನ ಆವರಣದಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಆಶೀಶ್ ನಂದಿಯವರು, ದಲಿತರ ಮೇಲಿನ ದೌರ್ಜನ್ಯದ ಮೂಲ ಬ್ರಾಹ್ಮಣಶಾಹಿ ಹಾಗೂ ಠಾಕೂರ್‌ಶಾಹಿ - ದಲಿತರ ಏಳಿಗೆಯಿಂದ ತಮ್ಮ ಸ್ಥಾನ-ಮಾನ ಸೌಲಭ್ಯಗಳಿಗೆ ಕುತ್ತು ಬರಬಹುದು ಎಂಬ ಆತಂಕ, ಇವರಿಗೆ ಮಾತ್ರವಲ್ಲದೆ, ರೆಡ್ಡಿ, ಪಟೇಲ್, ಜಾಟ್, ಯಾದವ ಜಾತಿಗಳಲ್ಲಿಯೂ ಆಭದ್ರತೆಯ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಎಲ್ಲರೂ ಮೀಸಲಾತಿಗಾಗಿ ಬೀದಿಗೆ ಧುಮುಕಿ, ಹಿಂಸಾತ್ಮಕ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ಆಯಾ ಬಿಜೆಪಿ ಆಡಳಿತಗಳು, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಹರಿಯಾಣಗಳಲ್ಲಿ ಪುಷ್ಠಿ ಒದಗಿಸುತ್ತಿದ್ದಾರೆ ಎಂದರು. ಇವರೆಲ್ಲರೂ ಚಾತುರ್ವರ್ಣದ ಶೂದ್ರರೇ ಆಗಿದ್ದಾರೆ ಎಂದರು.

ಈ ಸಂದರ್ಭದಲ್ಲಿಯೇ ದಕ್ಷಿಣ ಆಫ್ರಿಕಾದ ಕ್ವಾಜಲ್ ನೇಟಲ್, ಪ್ರೊ| ಗುಲಾಂ ವಹೀದ್ ಮಾತನಾಡಿ, ಅಂಬೇಡ್ಕರರವರ ಚಿಂತನೆಗಳು ದಕ್ಷಿಣ ಆಪ್ರಿಕಾದ ಕರಿಯ ಜನರ ವಿಮೋಚನೆಗೆ ಅಗತ್ಯವಾಗಿದೆ. ನಾವುಗಳು ಇದನ್ನು ಕೊಂಡೊಯ್ಯುತ್ತೇವೆ ಎಂದರು.

‘ಕಾಂಗ್ರೆಸ್’ ನ ಮಾಜಿ-ಹಾಲಿ ನಾಯಕರು

ಕಾಂಗ್ರೆಸ್‌ನಲ್ಲಿನ ಮಣಿ ಶಂಕರ್ ಅಯ್ಯರ್, ಶಶಿ ತರೂರ್, ಜಯರಾಮ್ ರಮೇಶ್ ಹಾಗೂ ಬಾಲ ಚಂದ್ರ ಮುಂಗೇಕರ್ ರವರು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಅವರ ಭಾಷಣಗಳಲ್ಲಿ ಒಂದೇ ರೀತಿಯ ’ರಾಗ’ವಿತ್ತು. ಭಾರತದ ಸಂವಿಧಾನದ ರಚನಾ ಸಮಿತಿ ಮೊದಲು ಸಭೆ ನಡೆದಿದ್ದು, ೧೯೪೬ ರ ಡಿಸೆಂಬರ್ ೯ ರಂದು, ಅದೇ ದಿನ ಇಟಲಿಯಲ್ಲಿ ಸೋನಿಯಾಗಾಂಧಿ ಅವರು ಹುಟ್ಟಿದ್ದು ಎಂದು ಮಣಿ ಶಂಕರ್ ಅಯ್ಯರ್ ಪ್ರಸ್ತುತ ಪಡಿಸುತ್ತಾ, ಭಾರತದ ಪ್ರಜಾಪ್ರಭುತ್ವ ರೂಪುಗೊಳ್ಳುವುದಕ್ಕೂ, ಕಾಂಗ್ರೆಸ್‌ನ ಈಗಿನ ಅಧ್ಯಕ್ಷರಾದ ಸೋನಿಯಾ ಗಾಂಧಿಯವರಿಗೂ ಇರುವ ಸಂಬಂಧವನ್ನು ಕಲ್ಪಿಸಿದ್ದು. ಅಂಬೇಡ್ಕರನ್ನು ತಿರಸ್ಕರಿಸಿದ್ದ ಅಂದಿನ ಕಾಂಗ್ರೆಸ್ ನಿಲುವನ್ನು ಮರೆಮಾಚಿಸಲು ಪಟ್ಟ ಶ್ರಮವೇನೋ ಎಂದೆನಿಸಿತು.

ಜೈರಾಮ್ ರಮೇಶ್ ರವರು ಕಾಂಗ್ರೇಸ್ ಅಧಿಕಾರದ ಅವಧಿಯಲ್ಲಿ ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’(ಮನರೇಗಾ) ಆದಿವಾಸಿ ಹಕ್ಕುಗಳ ರಕ್ಷಣೆ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಎಡಪಕ್ಷಗಳ ಬೆಂಬಲವಿತ್ತು ಎಂದರು. ಇದೀಗ ಇದರಿಂದ ಗ್ರಾಮೀಣ ದಲಿತರಿಗೆ ಬುಡಕಟ್ಟು ಪಂಗಡಗಳಿಗೆ ಉದ್ಯೋಗದ ಖಾತ್ರಿಯಾಯಿತು. ಆದರೀಗ ಬಿಜೆಪಿ ಇವುಗಳ ವಿನಾಶಕ್ಕೆ ಕೈ ಹಾಕಿದೆ. ಅಂಬೇಡ್ಕರರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಬಿಜೆಪಿ ಅವರನ್ನು ಹೈಜಾಕ್ ಮಾಡಿದೆ. ಮೋದಿಯವರು ಹಿಂದುತ್ವ ರಾಷ್ಟ್ರ ಮಾಡಲು ಸೂಕ್ತ ರಾಜಕೀಯ ಸಮಯವಿದಾಗಿದೆ ಎಂದು ಚಿಂತಿಸುತ್ತಿದ್ದಾರೆ ಎಂದರು.

‘ರಾಷ್ಟ್ರೀಯವಾದ ಭಾರತದ ಕಲ್ಪನೆ’ ಕುರಿತಂತೆ ಮಾತನಾಡಿದ ಸಂಸದ ಶಶಿತರೂರ್ ಭಾರತದ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್‌ರವರು ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಆದರ್ಶವಾಗಿದ್ದಾರೆ. ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿದೆ. ಇಂದು ಬಿಜೆಪಿ ದಮನಿತರ, ಅಲ್ಪಸಂಖ್ಯಾತರ, ದಲಿತರ ಅಭಿವ್ಯಕ್ತಿಯ ಮೇಲೆ ಧಾಳಿ ನಡೆಸುತ್ತಿದೆ. ಅಸಹಿಷ್ಟುತೆ ಇವರ ಆಡಳಿತದ ಪ್ರಮುಖ ಅಂಶವಾಗಿದೆ. ನಮ್ಮ ಸಂವಿಧಾನವು ದೇಶದಲ್ಲಿ ಪ್ರತಿಯೊಬ್ಬರಿಗೂ ಎಲ್ಲಾ ವಿಚಾರಗಳಲ್ಲಿಯೂ ಅಭಿವ್ಯಕ್ತಿಯ ಸ್ವಾತಂತ್ರ್ಯ ಒದಗಿಸಿದೆ. ಜಾತಿ, ಧರ್ಮ, ಮತಗಳ ಹೆಸರಿನಲ್ಲಿ ದೇಶದ ಏಕತೆಯನ್ನು ಧಮನ ಮಾಡುವುದು ಸರಿಯಲ್ಲ. ಪ್ರತ್ಯೇಕ ನಾಡಧ್ವಜ, ದೇಶದ ಏಕತೆಗೆ ಧಕ್ಕೆ ತರುವುದಿಲ್ಲ, ರಾಜ್ಯಗಳು ನಾಡಧ್ವಜ ಹೊಂದಲು ಯಾವುದೇ ನಿರ್ಬಂರ್ಧವಿಲ್ಲ ಎಂದರು.

ಕಾಂಗ್ರೆಸ್‌ನ ಮಾಜಿ ರಾಜ್ಯ ಸಭೆ ಸದಸ್ಯರಾದ ಪ್ರೊ. ಎಂ.ವಿ. ರಾಜೀವ್‌ಗೌಡ, ಕೇಂದ್ರದ ಮಾಜಿ ಸಚಿವರಾಗಿದ್ದ, ಸಲ್ಮಾನ್ ಖುರ್ಷಿದ್ ಇನ್ನೂ ಅನೇಕರು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯವಾದ, ಭಾರತದ ಪರಿಕಲ್ಪನೆ, ಜಾಗತೀಕರಣ, ಹಿಂದುತ್ವವಾದ ಮೇಲಿನ ಗೋಷ್ಠಿಗಳಲ್ಲಿ - ಉನ್ನತ ಮಟ್ಟದ ಚರ್ಚೆಗಳು:

ಖ್ಯಾತ ಅಂಕಣಗಾರ್ತಿ ಹಾಗೂ ಪ್ರೊಫೆಸರ್ ಕಲ್ಪನ ಕನ್ನಾಬಿರನ್, ಅಮೆರಿಕಾ ಇಂಡಿಯಾನ ಯುನಿವರ್ಸಿಟಿಯ ಕಾನೂನು ಪ್ರಾದ್ಯಪಕರಾದ ಕೆವಿನ ಬ್ರೌನ್ ಖ್ಯಾತ ಚಿಂತಕ ಅರುಣಾ ರಾಯ್  ಭಾಗವಹಿಸಿದ್ದ ಗೋಷ್ಠಿಯು ಸಮ್ಮೇಳನದ ಮತ್ತೊಂದು ಉನ್ನತ ಮಟ್ಟದ ಗೋಷ್ಟಿಯಾಗಿತ್ತು. ಅಮೆರಿಕದಲ್ಲಿನ ಆಪ್ರಿಕನ್ನರ ಹೋರಾಟ ಮತ್ತು ಬಾರತದ ದಲಿತರ ಹೋರಾಟಗಳ ಮಧ್ಯೆ ಇರುವ ಹಲವು ಸಾಮತ್ಯೆಯನ್ನು ಅವರು ಬಿಚ್ಚಿ ಹೇಳಿದರು.

ಅಸಮಾನತೆ, ವರ್ಣ-ತಾರತಮ್ಯ ಅಮೆರಿನ್ ಆಪ್ರಿಕನ್‌ರಿಗೆ ಮುಂದುವರಿಯುತ್ತಲೆ ಇದೆ. ಅವರ ಧ್ವನಿ ಅಡಗಿಸುವ ನಿಟ್ಟಿನಲ್ಲಿ ಬಿಳಿಯರ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ಅದೇ ರೀತಿ ಭಾರತದಲ್ಲಿಯೂ ಅಸ್ಪೃಶ್ಯತೆ ವರ್ಗ ತಾರತಮ್ಯ ಜೀವಂತವಾಗಿದೆ. ಅಂಬೇಡ್ಕರ್ ರವರು ಈ ದಮನಕ್ಕೆ ಸಿಕ್ಕ ಜನರ ಕಣ್ಮಣಿಯಾಗಿದ್ದಾರೆ. ಸ್ವತಂತ್ರ ಭಾರತದ ೬೫ ನೇ ವರ್ಷದ ಗಣರಾಜ್ಯೋತ್ಸದಲ್ಲಿ ‘ಒಬಾಮ ಆಹ್ವಾನಿತರಾಗಿದ್ದರು. ಆದರೆ, ಅಮೇರಿಕಾದ ಬಿಳಿಯರು ಕರಿಯರ ನಡುವಿನ ವರ್ಣಭೇದ, ಅಸಮಾನತೆ ಭಾರತದಷ್ಟೆ ಕ್ರೂರವಾಗಿದೆ ಎಂದರು. ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿದ್ದರೂ ಸಹ, ಅನೇಕ ರಾಜಕೀಯ ಪಕ್ಷಗಳು ಮೌನವಾಗಿರುವುದು ಸ್ವತಂತ್ರ ಭಾರತದ ದುರಂತವೆಂದರು.

ಚಿಂತಕಿ ಅರುಣಾ ರಾಯ್ ರವರು ರಾಜಸ್ತಾನದಲ್ಲಿ ಹೆಬ್ಬೆಟ್ಟು ಗುರುತು ಕಂಪ್ಯೂಟರ್‌ನಲ್ಲಿ ಸರಿಯಾಗಿ ಬಂದಿಲ್ಲವೆಂಬ ಕಾರಣಕ್ಕೆ ೩ ಲಕ್ಷಕ್ಕೂ ಹೆಚ್ಚಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ, ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾಗಿದ್ದಾರೆ. ತಂತ್ರಜ್ಞಾನವು ಮುಂದೊಂದು ದಿನ, ನಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ನಾಶಮಾಡುವ ಕಾಲ ದೂರವಿಲ್ಲವೆಂದರು. ಸರ್ಕಾರಗಳಿಗೆ ಸಾಮಾಜಿಕ ಕಾಳಜಿ ಇಲ್ಲ. ಕನಿಷ್ಠ ವೇತನ ನೀಡಲು, ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ಹಿಂದು - ಮುಂದು ನೋಡುತ್ತದೆ, ಆದರೆ ಕಾರ್ಪೋರೇಟುಗಳ ಕೈಗೊಂಬೆಗಳಾಗಿ ಅವರ ಮಾತನ್ನು ಪಾಲಿಸುತ್ತದೆ. ಇದಕ್ಕೆಲ್ಲಾ ವಿಸ್ತಾರವಾದ ಚಳುವಳಿಗಳು ಮಾತ್ರ ಉತ್ತರಕೊಡಬಲ್ಲವು, ಇದನ್ನೆ ಅಂಬೇಡ್ಕರ್‌ರವರು ನಂಬಿದ್ದರು. ಶೋಷನಾ ರಹಿತ - ದಮನ ಮುಕ್ತ ಸಮಾಜ ಅವರ ಭಾರತದ ಪರಿಕಲ್ಪನೆಯಾಗಿತ್ತು. ನಾನಂತು ಅಂಬೇಡ್ಕರ್ ರವರ ಚಿಂತನೆಗಳಿಂದ ಆಕರ್ಷಿತಳಾಗಿಯೇ, ನನ್ನ ಜೀವನ ಶೈಲಿಯನ್ನೂ ರೂಪಿಸಿಕೊಂಡಿದ್ದೇನೆ ಎಂದರು.

ಮಾರ್ಕ್ಸ್‌ವಾದ-ಅಂಬೇಡ್ಕರ್ ವಾದಗಳ ನಡುವೆ ಸಂವಾದ

ಪ್ರೊ|| ಜಿ. ಹರಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನ ಗೋಷ್ಠಿಗಳಲ್ಲಿ ಅತ್ಯನ್ನತ ಮಟ್ಟದ್ದು, ಕಿಕ್ಕಿರಿದು ಸಭಾಂಗಣ ತುಂಬಿತ್ತು. ನೂರಾರು ಜನರು ನಿಂತು ಆಲಿಸಿದರು. ಪ್ರಮುಖ ಪ್ರಬಂಧಕರಾಗಿ, ಪ್ರೊ|| ಪ್ರಭಾತ್ ಪಟ್ನಾಯಕ್, ಅರ್ಥಶಾಸ್ತ್ರಜ್ಞರು, ಪೊಲ್ಯಾಂಡಿನ ಆರ್ಥಿಕತಜ್ಞ, ಪ್ರೊ| ಭೋನಿಸ್ಲಾ ಜಾರ್‌ನೋಚ್ಛಾ ಹಾಗೂ ಹಾಗೂ ಅಂಬೇಡ್ಕರ್ ಕುಟುಂಬದ ಚಿಂತಕ, ಬರಹಗಾರ ಪ್ರೊ. ಆನಂದ್ ತೇಲ್ತ್ಂಬ್ಧೆ, ಸಮ್ಮೇಳನದಲ್ಲಿ ಭಾಷಣಕಾರರಾಗಿ ಆಗಮಿಸಿದ್ದು, ನೂರಾರು ಪ್ರತಿನಿಧಿಗಳನ್ನು ಆಕರ್ಷಿಸಿದ ಗೋಷ್ಠಿ ಇದಾಗಿತ್ತು.

ಕಾರ್ಲ್‌ಮಾರ್ಕ್ಸ್ ಮತ್ತು ಅಂಬೇಡ್ಕರ್ ವಿಚಾರಗಳು ಪ್ರಸ್ತುತವೆಂದು ಬಿಂಬಿಸಿದ ಗೋಷ್ಠಿಯಾಗಿ ಮಾರ್ಪಾಡಾಗಿತ್ತು. ಪ್ರೊ| ಭೋನಿಸ್ಲಾ ತಮ್ಮ ವಿಚಾರವನ್ನು ಸ್ಲೈಡ್ ಮೂಲಕ ಪರದೆಯ ಮೇಲೆ ಬಿಂಬಿಸುತ್ತಾ ತಮ್ಮ ವಿಚಾರ ಮಂಡಿಸಿದ್ದು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ತಮ್ಮ ಪೋಲಾಂಡಿನ ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಅಂಬೇಡ್ಕರ್ ಚಿಂತನೆ, ಭಾತದ ಸಂವಿಧಾನದ ಅನೇಕ ಅಂಶಗಳನ್ನು ಅಳವಡಿಸಿಕೊಂಡ ಬಗ್ಗೆ ಬಗ್ಗೆ ವಿಶ್ಲೇಷಣೆ ನೀಡಿದರು. ಭಾರತದ ಮಾರ್ಕ್ಸಿಸ್ಟ್‌ರೊಂದಿಗೆ ದಲಿತ ಚಳುವಳಿ ಐಕ್ಯವಾಗಬೇಕೆಂದರು. ಮಾರ್ಕ್ಸ್‌ವಾದದಲ್ಲಿ ಆರ್ಥಿಕ ಸಮಾನತೆ ಇದೆ. ಬಂಡವಾಳ ಶಾಹಿ ಪದ್ಧತಿಯ ಶೋಷಣೆಯ ನೀತಿಗಳಿಗೆ, ಮಾರ್ಕ್ಸ್‌ವಾದದಲ್ಲಿ ದುಡಿಯುವ ಜನತೆಗೆ ನ್ಯಾಯ ದೊರಕುತ್ತದೆ. ಅದೇ ರೀತಿ ಅಂಬೇಡ್ಕರ್‌ರವರ ಸಂವಿಧಾನದಲ್ಲಿ ಆರ್ಥಿಕ-ಸಾಮಾಜಿಕ ನ್ಯಾಯ ಅಡಗಿದೆ. ಈ ಸಮ್ಮೇಳನದ ಮೂಲ ಆಶಯವು ‘ಸಮಾನತೆಯ ಅನ್ವೇಷಣೆ’ಯಾಗಿದೆ. ಸ್ವಷ್ಟವಾದ ಗುರಿಗಳು ನಮ್ಮ ಮುಂದೆ ಇರುವುದು ಈ ಎರಡು ವೈಜ್ಞಾನಿಕ ವಾದಗಳಲ್ಲಿದೆ. ಆಲೋಚಿಸಿರಿ. ದಲಿತರು-ಮಾರ್ಕ್ಸಿವಾದಿಗಳಲ್ಲಿ ಸಾಮ್ಯತೆ ಮೂಡಲಿ ಎಂಬ ಅಭಿಪ್ರಾಯ ನೆರೆದಿದ್ದವರಲ್ಲಿ ಆಲೋಚಿಸುವಂತೆ ಮಾಡುವಲ್ಲಿ ಗಮನಾರ್ಹವಾಗಿತ್ತು.

ನಂತರ ಭಾರತದ ಮಾರ್ಕ್ಸಿಸ್ಟ್ ಚಿಂತಕ ಹಾಗೂ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಮಾತನಾಡಿ ದೇಶವು ಇಂದು ಹಿಂದುವಾದಿಗಳ ಹಿಡಿತದಲ್ಲಿ ಗಂಡಾಂತರದಲ್ಲಿದೆ, ನಾವೆಲ್ಲ ಗಂಭೀರವಾಗಿ ರಾಜಕೀಯ ಸನ್ನಿವೇಶವನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಕಂಡ ಭಾರತ ಇಂದು ಹಿಂದುತ್ವ ಪರಿಕಲ್ಪನೆಯವರ ಆಡಳಿತದಲ್ಲಿ ನುಚ್ಚುನೂರಾಗುತ್ತಿದೆ. ಪ್ರತಿಗಾಮಿ ಬೂರ್ಜ್ವಾ ರಾಷ್ಟ್ರೀಯವಾದದ ವೈಭವೀಕರಣಗೊಳ್ಳುತ್ತಿದೆ. ಭಾರತದ ಸ್ವತಂತ್ರ ಸಂಗ್ರಾಮದ ಹೋರಾಟ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಸೀಮಿತವಾಗಿರಲಿಲ್ಲ. ದೇಶವನ್ನು ಒಂದು ಪಾಲೇಯಗಾರಿ ಜಾತಿವ್ಯವಸ್ಥೆ-ಗ್ರಸ್ತ ಸಾಮಾಜಿಕ ಅಸಮಾನತೆಯಿಂದ ‘ಸಮಾನತೆಯ ನಾಗರೀಕ ಸಮಾಜದ ಸಾಮಾಜಿಕ ನ್ಯಾಯದ ಪರಿಕಲ್ಪನೆ’ಯನ್ನೂ ಹೊಂದಿತ್ತು. ಆದರೆ ಇಂದು ರಾಷ್ಟ್ರೀಯವಾದವು ಕೇವಲ ಹಿಂದುತ್ವ ಅಜೆಂಡಾಕ್ಕೆ ಸೀಮಿತವಾಗಿ ಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ-ನವ ಉದಾರವಾದದ ಪ್ರಕ್ರಿಯೆಗಳು ಆರ್ಥಿಕ ಅಸಮಾನತೆಯ ಕಂದಕವನ್ನೂ ತೀವ್ರ ಆಳಗೊಳಿಸಿದೆ. ಶಿಕ್ಷಣ-ಆರೋಗಗಳನ್ನ್ಯು ಇಂದು ಸರಕುಗಳಾಗಿ ಮಾರ್ಪಾಡು ಮಾಡಲು ಹೊರಟಿದ್ದಾರೆ. ಇದರಿಂದ ಎಷ್ಟು ಹಣವನ್ನು ದೋಚಲು ಸಾಧ್ಯವೆಂಬುದು ವ್ಯವಸ್ಥೆಯ ಭಾಗವಾಗಿದೆ. ದೇಶದ ಶಿಕ್ಷಣ ಸಂಸ್ಥೆಗಳ ಮೇಲೆ ಹಿಂದುತ್ವವಾದಿಗಳು ಅಸಹಿಷ್ನುತೆಯ ಹೆಸರಿನಲ್ಲಿ ಆಕ್ರಮಣ ನಡೆಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಆನಂದ್ ತೇಲ್ತುಂಬ್ಧೆ ಮಾತನಾಡುತ್ತಾ ಪ್ಯಾಸಿಸಂ ಈಗಾಗಲೇ ಭಾರತದಲ್ಲಿ ಹಿಂದುತ್ವವಾದ ಪ್ರತಿಪಾದಿಸುವ ನರೇಂದ್ರ ಮೋದಿ ಆಡಳಿತದಲ್ಲಿ ಅಡಕವಾಗಿ ಬಿಟ್ಟಿದೆ. ಸಂವಿಧಾನವನ್ನು ಒಪ್ಪದ ಘೋರ ಶಕ್ತಿಗಳು ಸ್ವಾತಂತ್ರ್ಯ, ಬ್ರಾತೃತ್ವ, ಸೋದರತ್ವಗಳನ್ನು ವಿನಾಶಗೊಳಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಂವಿಧಾನದ ಅಡಿಪಾಯಗಳು, ಇವುಗಳನ್ನು ಸಡಿಲಗೊಳಿಸುವ ನಿಲುವು ಹಿಂದುತ್ವ ಪರಿಕಲ್ಪನೆಯದ್ದಾಗಿದೆ. ಭಾರತವು ಅಸಮಾನತೆಯಲ್ಲಿ, ಜಗತ್ತಿನಲ್ಲಿಯೇ ಎರಡನೆ ಸ್ಥಾನದಲ್ಲಿದೆ. ದಕ್ಷಿಣ ಆಪ್ರಿಕಾ ಮೊದಲನೆ ಸ್ಥಾನದಲ್ಲಿದೆ. ಅಲ್ಲಿ ಕರಿಯರ ಧಮನ, ಇಲ್ಲಿ ದಲಿತರ-ಅಲ್ಪಸಂಖ್ಯಾತರ ಧಮನ ಹೆಚ್ಚಾಗಿದೆ. ಕಾಂಗ್ರೆಸ್ ಗೆ ಇದೀಗ ಅಂಬೇಡ್ಕರ್ ಪುನಃ ನೆನಪಾಗಿದ್ದಾರೆ. ಇದೇ ಕಾಂಗ್ರೆಸ್ ಸ್ವಾತಂತ್ರ್ಯ ನಂತರ, ಸಂವಿಧಾನವನ್ನೂ ಕೊಟ್ಟಂತಹ ಅಂಬೇಡ್ಕರ್ ರವರಿಗೆ ಕೊಟ್ಟಂತ ಅಗೌರವ, ಮಾಡಿದ ಅವಮಾನ ಇಲ್ಲಿ ನೆರೆದಿರುವ ಯಾರು ಮರೆತಿಲ್ಲ. ದೇಶವಿಂದು ಫ್ಯಾಸಿಸ್ಟ್ ಶಕ್ತಿಗಳ ಕೈ ಹಿಡಿತದಲ್ಲಿ ಅಪಾಯಕ್ಕೆ ಸಿಲುಕಿದೆ. ಕಾಂಗ್ರೆಸ್ ಕೇವಲ ಶೇ. ೧೩ ರಷ್ಟು ರಾಜ್ಯಗಳ ರಾಜಕೀಯದಲ್ಲಿ ಇಂದು ಆಡಳಿತ ನಡೆಸುತ್ತಿದೆ. ಆದರೆ ಬಿಜೆಪಿ ಶೇ.೫೧ ರಷ್ಟು ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅದಕ್ಕೆ ಕಾಂಗ್ರೆಸ್‌ನವರ ಆಡಳಿತದ ನೀತಿಗಳೇ ಕಾರಣವೆಂದರು.

ಭಾರತದ ಮಾರ್ಕ್ಸಿಸ್ಟ್‌ರು ಕೂಡ ಹಿಂದೆ ಅಂಬೇಡ್ಕರ್ ಬಗ್ಗೆ ಅವರ ವಿಚಾರಗಳ ಬಗ್ಗೆ ತಪ್ಪು ಮಾಡಿದ್ದಾರೆ. ಅದನ್ನು ಕಮ್ಯೂನಿಸ್ಟ್‌ರು ಒಪ್ಪಿಕೊಂಡು ಮುಂದಿನ ಕಾರ್ಯ ನಿರ್ವಹಿಸಬೇಕು. ಕಾರ್ಮಿಕರ ವರ್ಗ ಹೋರಾಟದೊಳಗೆ ಸಾಮಾಜಿಕ ಧಮನದ ವಿರುದ್ಧದ ಹೋರಾಟ ನೈಜವಾಗಿ ಸೇರ್ಪಡೆಗೊಳ್ಳಬೇಕು. ದಲಿತರ ಕುರಿತಂತೆ ಕಮ್ಯುನಿಸ್ಟ್‌ರ ಹೊಸ ಸ್ವರೂಪದ ಹೋರಾಟಗಳು, ಧಮನಕ್ಕೆ ತುತ್ತಾದ ದಲಿತರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು, ಉತ್ಪಾದನಾ ಶಕ್ತಿಗಳು ಒಂದಾಗಬೇಕು. ಆರ್ಥಿಕ ಅಸಮಾನತೆಯ ವಿರುದ್ಧದ ಹೋರಾಟವು - ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಬೇಕು. ತೇಲ್ತುಂಬ್ದೆಯವರ ವಿಶ್ಲೇಷಣೆ ನೆರೆದಿದ್ದವರಲ್ಲಿ ಗಾಂಭೀರ್ಯ ತುಂಬಿತು.

ಭೂಒಡೆತನ ದಲಿತರಿಗೆ ದೊರಕದೆ ರಾಜಕೀಯ ಸಬಲೀಕರಣ ಅಥವಾ ಸಾಮಾಜಿಕ ನ್ಯಾಯ ಮರೀಚಿಕೆ : ಜಿ.ವಿ.ಎಸ್.

ಪ್ರಮುಖವಾದ ಮತ್ತಷ್ಟು ಗೋಷ್ಠಿಗಳೆಂದರೆ, ‘ರಾಜಕೀಯ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ’ ಇದರಲ್ಲಿ ಸಿಪಿಐ(ಎಂ) ಪಕ್ಷದ ಮಾಜಿ ಶಾಸಕರಾದ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರದಿಂದ ದಲಿತರಿಗೆ ‘ಸಾಮಾಜಿಕ ನ್ಯಾಯ’ ಎಂದೆಂದಿಗೂ ಅಸಾಧ್ಯವೆಂದರು. ದೇಶದ ಒಟ್ಟು ಸಂಪತ್ತಿನಲ್ಲಿ ಶೇ ೫೮ ರಷ್ಟು, ಕೇವಲ ಶೇ ೧ ರಷ್ಟು, ದೊಡ್ಡ ಕುಳಗಳು ಹೊಂದಿವೆ. ರೈತರನ್ನು - ಅಂಬಾನಿಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಕೊಡುಗೆ ನೀಡದ ಸಂಘ ಪರಿವಾರದವರಿಂದ, ಸಂವಿಧಾನದ ಆಶಯಗಳನ್ನು ಸಂರಕ್ಷಿಸಲು ರಾಜಕೀಯ ಇಚ್ಛಾಶಕ್ತಿ ಕಿಂಚಿತ್ತು ಇಲ್ಲ, ದಲ್ಲಿತರಿಗೆ ಭೂಮಿ ಹಂಚಿಕೆಯಾಗಿ ಅದರ ಒಡೆತನ ದೊರಕದೆ, ರಾಜಕೀಯ ಸಬಲೀಕರಣ ಅಥವಾ ಸಾಮಾಜಿಕ ನ್ಯಾಯ ಮರೀಚಿಕೆಯಾಗಿರುತ್ತದೆ ಎಂದರು. ನವ-ಉದಾರವಾದ ನೀತಿಗಳು ಆರ್ಥಿಕ ಅಸಮಾನತೆಯನ್ನು ಹೆಚ್ಚು ಮಾಡಿದೆ. ಉದ್ಯೋಗದಲ್ಲಿರುವ ಮೀಸಲಾತಿಗೆ ಧಕ್ಕೆ ಬಂದೊದಗಿದೆ. ಆದ್ದರಿಂದ ಅಂಬೇಡ್ಕರ್ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ಬೃಹತ್ ಜನತಾ ಚಳುವಳಿಯ ಅಗತ್ಯತೆಯ ಬಗ್ಗೆ ತಿಳಿಸಿದರು.

ಒಟ್ಟಾರೆಯಾಗಿ ನಡೆದ ೮೦ ಕ್ಕೂ ಹೆಚ್ಚು ಗೋಷ್ಠಿಗಳಲ್ಲಿ ೩೦೦ ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸಿದ್ದರು. ಪ್ರಗತಿಪರ ಚಿಂತಕರಾದ ಲೋಲಾಕ್ಷ, ರುದ್ರಪ್ಪ ಹನಗನವಾಡಿ, ಟಿ. ವಿಜಯಕುಮಾರ್, ಜಿ.ಎನ್.ನಾಗರಾಜ್, ಜಿ. ರಾಮಕೃಷ್ಣ, ರಚನಾ ಬಾಜಪೈ, ರಂಜಾನ್ ದರ್ಗ, ಪ್ರದೀಪ್ ರಾವತ್, ಆಶಾಲತ, ನಿಡುಮಾಮುಡಿ ಸ್ವಾಮೀಜಿ, ಬಂಜೆಗೆರೆ ಜಯಪ್ರಕಾಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೊ| ಜಿ. ಸಿದ್ದರಾಮಯ್ಯ, ಅರ್ಚನಾ ಸಿಂಗ್, ತೀಸ್ತಾ ಸೆಟಲ್ವಾಡ್, ವೆಲೆರಿಯನ್ ರೋಡ್ರಿಗುಸ್, ಮಾರ್ಟಿನ್ ಪುಚ್ಚಾಸ್, ದಲಿತ ಮುಖಂಡರು ಹೋರಾಟಗಾರರಾದ ವೆಂಕಟಸ್ವಾಮಿ, ಮಾವಳ್ಳಿ ಶಂಕರ್, ಮೋಹನ್‌ರಾಜು, ಮೂರ್ತಿ, ಮುನಿಸ್ವಾಮಿ, ಲಕ್ಷ್ಮಿನಾರಾಯಣ ನಾಗವಾರ, ಡಿ.ಜಿ. ಸಾಗರ, ಹಿಂದೂದರ ಹೊನ್ನಾವರ, ಬೇಜವಾಡ ವಿಲ್ಸನ್ ಇನ್ನಿತರರು ಭಾಗವಹಿಸಿದ್ದರು. ಮಹಿಳಾ ಹೋರಾಟಗಾರರು, ಲೇಖಕರಾದ ಕಮಲಾ ಹಂಪನ, ಕೆ.ಎಸ್. ವಿಮಲ, ಆಶಾಲತ, ಶೈಲಜಾ ಮೆನನ್, ಏಂಜಿಲಾ ಹರೀಶ್, ವಾಣಿ ಕಾಂತ, ಮೋನಾ ಕವಿಗಳಾದ ಎಲ್. ಹನುಮಂತಯ್ಯ, ಸಿದ್ದಲಿಂಗಯ್ಯ, ಕೋಟಿಗನಾ ಹಳ್ಳಿ ರಾಮಯ್ಯ, ವಡ್ಡಗೆರೆ ನಾಗರಾಜಯ್ಯ, ಯಲ್ಲಪ್ಪ, ನೇತ್ರಾವತಿ, ವಕೀಲರು, ನ್ಯಾಯವಾದಿಗಳು, ಇನ್ನಿತರರು ಭಾಗವಹಿಸಿದ್ದರು.

ಇವುಗಳ ಮಧ್ಯೆ ನಿವೃತ್ತ ನ್ಯಾಯದೀಶರಾದ ನಾಗಮೋಹನ್ ದಾಸ್, ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಆಡಳಿತದಲ್ಲಿ ಕಾನೂನು ಎಂಬ ಗೋಷ್ಠಿಯು ಹಲವರ ಗಮನಕ್ಕೆ ಬರಲಿಲ್ಲ. ಕೆಲವೇ ಕೆಲವು ಯುವ ವಕೀಲರು, ಕಾನೂನು ವಿದ್ಯಾರ್ಥಿಗಳೂ ಮಾತ್ರ ಭಾಗವಹಿಸಿದ್ದರು. ಆಂಧ್ರದ ಸುಕುಮಾರ್ ನಾರಾಯಣ್, ಅರವಿಂಧ್ ಹಾಗೂ ರೋಹಿತ್ ಡೆ ಮಾತನಾಡಿದರು. ರಾಜಕೀಯದಲ್ಲಿ ಕುಸಿಯುತ್ತಿರುವ ನೈತಿಕತೆಯ ಬಗ್ಗೆ ಮಾತನಾಡಿದ ಭಾಷಣಕಾರರು ರೋಹಿತ್ ವೆಮುಲ್ಲಾರ ಪ್ರಕರಣ, ಜೆ.ಎನ್.ಯು ಪ್ರಕರಣ ಹಾಗೂ ಊನ ದಲಿತರ ಪ್ರಕರಣ, ಉತ್ತರ ಪ್ರದೇಶ, ಗುಜರಾತ್, ಛತ್ತೀಸ್‌ಗರ್‌ನಲ್ಲಿ ನಡೆದ ಅಸಹಿಷ್ಣುತೆ ಪ್ರಕರಣಗಳು, ನರೇಂದ್ರ ದಾಬೋಲ್ಕರ್, ಪನ್ಸಾರೆ ಹಾಗೂ ಕಲಬುರಗಿ ಪ್ರಕರಣ ಹೀಗೆ ದೇಶದಲ್ಲಿ ಕಾನೂನು ಉಲಂಘನೆಗಳು ಕಾನೂನು ಪರಿಪಾಲಕರಿಂದಲೇ ನಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಮ್ಮ ಸಂವಿಧಾನ ಭವ್ಯವಾದದ್ದು, ಇದರ ತಳಪಾಯಕ್ಕೆ ಆಪತ್ತು ಬರುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿಯೇ ಇದರ ಆಶಯಗಳನ್ನು ಸರ್ವನಾಶ ಮಾಡಲಾಗುತ್ತಿದೆ ಎಂಬ ಹಲವು ಅಂಶಗಳು ಇಲ್ಲಿ ಚರ್ಚೆಯಾಯಿತು.

ಮುಖ್ಯ ಮಂತ್ರಿಗಳ ಜೊತೆ ಸಂವಾದ:  ಬೆಂಗಳೂರು ಘೋಷಣೆ

ಪ್ರೊ. ರಾಜೇಂದ್ರ ಚೆನ್ನಿ ಯವರ ನೇತೃತ್ವದಲ್ಲಿ ನಡೆಸಿದ ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಕೆ.ಬಿ. ಸಿದ್ದಯ್ಯ, ಕೆ. ನೀಲಾ, ಡಿ. ಉಮಾಪತಿ, ಬೋಳುವಾರು ಮಹ್ಮದ್ ಕುಂಞ, ನಟರಾಜ್ ಹುಳಿಯಾರ್ ಹಾಗೂ ರೋಡ್ರಿಗ್ರಸ್ ಭಾಗವಹಿಸಿದ್ದರು. ದೇವದಾಸಿ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಏನು ಕ್ರಮ ಕೈಗೊಂಡಿದ್ದೀರಿ? ಕಲಬುರಗಿ ಹಂತಕರನ್ನು ಇನ್ನು ಬಂಧಿಸಿಲ್ಲವೇಕೆ? ಜಾತಿ ವಿನಾಶ ತಡೆಗೆ ನಿಮ್ಮ ಸರ್ಕಾರ ಯಾವ ಕಾರ್ಯಕ್ರಮ ರೂಪಿಸುತ್ತಿದೆ? ಕನ್ನಡ ಶಿಕ್ಷಣ ಮಾಧ್ಯಮಗಳಿಗೆ ನಿಮ್ಮ ಪ್ರಯತ್ನಗಳೇನು? ಅಹಿಂದಕ್ಕೆ ಒಂದು ತಾತ್ವಿಕತೆಯ ಸ್ವರೂಪ ಏಕೆ ಬಂದಿಲ್ಲ? ದ.ಕ. ದಲ್ಲಿ ಮುಸ್ಲಿಂ ರಕ್ಷಣೆಗಾಗಿ ಬೇರೊಂದು ಪಕ್ಷ ಹುಡುಕುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು? ಹೀಗೆ ಹತ್ತು-ಹಲವು ಪ್ರಶ್ನೆಗಳಿಗೆ ಮಾನ್ಯ ಸಿದ್ದರಾಮಯ್ಯ ತಮ್ಮ ರಾಜಕೀಯ ಅನುಭವದ ಮಾತುಗಳನ್ನು ನೆರೆದಿದ್ದ ಜನರ ಪ್ರಶಂಸೆಗೆ ಪಾತ್ರರಾಗುವಂತೆ ಉತ್ತರಿಸಿದರು. ಸಭಿಕರಿಂದಲೂ ಪ್ರಶ್ನೆಗಳು ಬಂದವು.

ಸಮಾರೋಪ ಸಮಾರಂಭದಲ್ಲಿ ೪೧ ಅಂಶಗಳ ಬೆಂಗಳೂರು ಘೋಷಣೆಗಳನ್ನು ಅಂಗೀಕರಿಸಲಾಯಿತು. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ

  • ಎಸ್.ಸಿ/ಎಸ್.ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಮಹಿಳೆಯರಿಗೆ ಸಮಾನ ಅವಕಾಶ ಕಲಿಸುವ ನಿಟ್ಟಿನಲ್ಲಿ ಆಯೋಗ.
  • ಶಾಲಾ ಪಠ್ಯದಲ್ಲಿ ಅಂಬೇಡ್ಕರ್, ಜ್ಯೋತಿ ಭಾ ಪುಲೆ, ಸಾವಿತ್ರಿ ಬಾ ಪುಲೆ ಕುರಿತ ಪಠ್ಯ ಅಳವಡಿಸುವಿಕೆ.
  • ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಸ್.ಸಿ/ಎಸ್.ಟಿ/ಒಬಿಸಿಗಳಿಗೆ ಹಾಗೂ ಖಾಸಗೀ ಕ್ಷೇತ್ರಗಳಲ್ಲಿಯೂ ಮೀಸಲಾತಿ ಅಗತ್ಯತೆ.
  • ಪರಿಶಿಷ್ಟರಿಗೆ ಭೂ ಒಡೆತನ ಖಾತ್ರಿ ಹೊಸ ಕಾನೂನು. ಪರಿಶಿಷ್ಟರ ಭೂಮಿ ರಕ್ಷಣೆ

ಘೋಷಣೆಯ ನಂತರ ತಮ್ಮ ಸಮಾರೋಪ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೋಮುವಾದಿಗಳು ಜನರ ನಡುವೆ ಕಂದಕ ಸೃಷ್ಠಿಸುತ್ತಿದ್ದಾರೆ. ಸಂಘಪರಿವಾರದವರು ಯುವಕರನ್ನು ಅಡ್ಡದಾರಿಗೆ ನೂಕುತ್ತಿದ್ದಾರೆ. ನನ್ನ ಸರ್ಕಾರವು ಕೋಮುವಾದಿಗಳನ್ನು ಮಟ್ಟ ಹಾಕುವಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ. ಅವರ ಬಲಿ ನಿಶ್ಚಿತವೆಂದು ನೇರವಾಗಿ ಹೇಳಿದರು.

ಒಟ್ಟಾರೆಯಾಗಿ ಅಂಬೇಡ್ಕರ್‌ರವರ ೧೨೬ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆದ ಸಮಾನತೆಗಾಗಿ ಅನ್ವೇಷಣೆ ಅಂತರರಾಷ್ಟ್ರೀಯ ಸಮ್ಮೇಳನವು 2019 ರಲ್ಲಿ ಕಾಂಗ್ರೇಸ್ ನಾಯಕತ್ವದಲ್ಲಿ ಎಲ್ಲಾ ಇತರೆ ಪಕ್ಷಗಳು ಕೋಮುವಾದಿ, ಫ್ಯಾಸಿಸ್ಟ್ ಸ್ವರೂಪದ ಪ್ರತಿಗಾಮಿ ಬಿಜೆಪಿಯನ್ನು ಸೋಲಿಸಲು ಪಣತೊಡಬೇಕೆಂಬ ಮನೋಭಾವನೆಗಳು ವ್ಯಕ್ತವಾದವು. ಪ್ರಭಾತ್ ಪಟ್ನಾಯಕ್ ಹೇಳಿದಂತೆ ಕಾಂಗ್ರೆಸ್ ಅಂಬೇಡ್ಕರ್ ರವರ ವಿಚಾರಗಳಿಗೆ-ಚಿಂತನೆಗಳಿಗೆ ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆ ಹಾಗೂ ಒಕ್ಕೂಟ ಪ್ರಭುತ್ವದ ರಕ್ಷಣೆಗಳಿಗೆ ನೈಜವಾದ ಸೈದ್ಧಾಂತಿಕವಾದ ಬದ್ಧತೆಯಿಂದ ಪ್ರಾಮಾಣಿಕವಾಗಿ ನಡೆದುಕೊಳ್ಳದೆ ಅದು ಸಾಧ್ಯವಿಲ್ಲ. ಕಳೆದ ಎರಡುವರೆ ದಶಕಗಳ ಮತ್ತು ಇಂದಿಗೂ ಅದರ ನೀತಿಗಳೂ ಸಂಘಟನಾ ನೆಲೆಗಳನ್ನು ನೋಡಿದರೆ ಕಾಂಗ್ರೆಸ್ ಇದನ್ನು ಮಾಡಿತೇ ಎಂಬುದು ಇಡೀ ಸಮ್ಮೇಳನದ ನಂತರ ನನಗೆ ಪ್ರಶ್ನೆಯಾಗಿ ಕಾಡಿತು.