ಜಂಟಿ ನೌಕಾಸೇನೆ ಕವಾಯತು ಯಾರ ಹಿತಕ್ಕಾಗಿ?

ಸಂಪುಟ: 
31
ಸಂಚಿಕೆ: 
11
date: 
Sunday, 23 July 2017
Image: 

ಪ್ರಕಾಶ್ ಕಾರಟ್

ಮಲಬಾರ್ ಸೇನಾ ಕವಾಯತು, ಭಾರತವು ಚೀನಾವನ್ನು ತಡೆಯುವ ಗುರಿಯೊಂದಿಗೆ ಏಷ್ಯಾದಲ್ಲಿ ವ್ಯೂಹ ರಚಿಸುತ್ತಿರುವ ಅಮೆರಿಕದ ಪೂರ್ಣ ಪ್ರಮಾಣದ ಪಾಲುದಾರ ಆಗಿರುವುದರ ಸಂಕೇತವಾಗಿದೆ. ಇದು ಹೇಗೆ ಭಾರತದ ರಾಷ್ಟ್ರೀಯ ಹಿತಗಳಿಗೆ ಅನುಕೂಲವಾಗಲಿದೆ ಎನ್ನುವುದನ್ನು ಮೋದಿ ಸರಕಾರವೇ ಉತ್ತರಿಸಬೇಕು. ಅಮೆರಿಕದೊಂದಿಗೆ ಮಿಲಿಟರಿ ಮೈತ್ರಿ ಭಾರತದ ಸಾರ್ವಭೌಮತೆ ಮತ್ತು ವ್ಯೂಹಾತ್ಮಕ ಸ್ವಾಯತ್ತೆಗೆ ಅಡ್ಡಿಯಾಗಲಿದೆ.

ಚೆನ್ನೈ ಕರಾವಳಿಯಾಚೆ ನಡೆದ ಮಲಬಾರ್ ಜಂಟಿ ನೌಕಾಸೇನೆ ಕವಾಯತುಗಳು ಮುಕ್ತಾಯಗೊಂಡಿವೆ. ಮಲಬಾರ್ ಕವಾಯತುಗಳ 21ನೇ ಆವೃತ್ತಿಯಲ್ಲಿ ಅಮೆರಿಕ, ಭಾರತ ಮತ್ತು ಜಪಾನಿ ನೌಕಾಪಡೆಗಳು ಭಾಗವಹಿಸಿದ್ದವು. ಈ ಮೂರೂ ದೇಶಗಳ 16 ನೌಕೆಗಳು, ಎರಡು ಜಲಾಂತರ್ಗಾಮಿ ನೌಕೆಗಳು ಮತ್ತು 95 ವಿಮಾನಗಳನ್ನು ಒಳಗೊಂಡಿದ್ದ ಈ ಜಂಟಿ ಕವಾಯುತು ಈ ವಲಯದ ಅತ್ಯಂತ ದೊಡ್ಡ ಸೇನಾ ಕಸರತ್ತುಗಳಲ್ಲಿ ಒಂದಾಗಿದೆ.

ಅಮೆರಿಕ ಮತ್ತು ಭಾರತ ನಡುವೆ ಜಂಟಿ ನೌಕಾಸೇನಾ ಕವಾಯತು 1992ರಲ್ಲಿ ಆರಂಭವಾಗಿತ್ತು. ಅದು ಉಭಯ ದೇಶಗಳ ನಡುವಣ ಮಿಲಿಟರಿ ಸಹಕಾರದ ಆರಂಭದ ದ್ಯೋತಕವಾಗಿತ್ತು. 2002ರ ನಂತರ ಅದು ವಾರ್ಷಿಕ ಕಾರ್ಯಕ್ರಮವಾಯಿತು. ಅದನ್ನೀಗ 2009ರಿಂದ ಭಾರತ ಮತ್ತು ಪೆಸಿಫಿಕ್ ವಲಯದಲ್ಲಿ ಪರ್ಯಾಯವಾಗಿ ನಡೆಸಲಾಗುತ್ತಿದೆ.

ಮಲಬಾರ್ ಕವಾಯತುಗಳನ್ನು ಚೀನಾದ ಬೆಳೆಯುತ್ತಿರುವ ಬೃಹತ್ ನೌಕಾ ಬಲ ಮತ್ತು ಭಾರತ-ಪೆಸಿಫಿಕ್ ವಲಯದಲ್ಲಿ ಅದರ ಹೆಚ್ಚುತ್ತಿರುವ ಪಾತ್ರದ ವಿರುದ್ಧ ನಿರ್ದೇಶಿತವಾಗಿದೆ ಎಂದೇ ಕಾಣಲಾಗುತ್ತಿದೆ. 2015ರಿಂದ ಈ ಕಸರತ್ತಿನಲ್ಲಿ ಭಾರತವು ಜಪಾನನ್ನ್ನು ಒಂದು ಕಾಯಂ ಪಾಲುದಾರನನ್ನಾಗಿ ಮಾಡಿರುವುದರಿಂದ ಇದು ಹೆಚ್ಚು ಸ್ಪಷ್ಟವಾಗಿದೆ. ಅಮೆರಿಕ, ಭಾರತ ಮತ್ತು ಜಪಾನ್ ನಡುವಣ ತ್ರಿಪಕ್ಷೀಯ ಭದ್ರತಾ ಮೈತ್ರಿಯು ಏಷ್ಯಾದಲ್ಲಿ ಅಮೆರಿಕದ ಭೌಗೋಳಿಕ-ರಾಜಕೀಯ ವ್ಯೂಹದ ಇನ್ನೊಂದು ಆಯಾಮವಾಗಿದೆ. 

ಭಾರತ-ಅಮೆರಿಕ ರಕ್ಷಣಾ ಸಹಯೋಗವು ಮಲಬಾರ್ ಕಸರತ್ತುಗಳ ನಂತರ ಹೆಚ್ಚು ಬಲಗೊಂಡಿದೆ.  ಭಾರತದ ನೆಲೆಗಳಲ್ಲಿ ಅಮೆರಿಕ್ಕೆ ವಾಯು ಮತ್ತು ನೌಕಾ ಪಡೆಗಳ ರಿಪೇರಿ, ನಿರ್ವಹಣೆ ಹಾಗೂ ಸರ್ವಿಸ್ ಸೌಲಭ್ಯಗಳನ್ನು ಒದಗಿಸಲು ಅನುವು ಮಾಡುವ ಲಾಜಿಸ್ಟಿಕ್ಸ್ ಎಕ್ಸ್‍ಚೇಂಜ್ ಮೆಮೊರಾಂಡಮ್ ಅಗ್ರಿಮೆಂಟ್ (ಎಲ್‍ಇಎಂಓಎ)ಗೆ ಭಾರತ ಸಹಿ ಹಾಕಿದೆ. ಭಾರತವು ತನ್ನ ಒಂದು ಪ್ರಮುಖ ರಕ್ಷಣಾ ಪಾಲುದಾರ ಎಂಬ ಸ್ಥಾನಮಾನವನ್ನು ಅಮೆರಿಕ ನೀಡಿದೆ.

ಉಭಯ ಸಶಸ್ತ್ರ ಪಡೆಗಳ ನಡುವಿನ ಅಂತರ್-ಕಾರ್ಯಾಚರಣೆಗೆ (ಇಂಟರ್-ಆಪರೆಬಿಲಿಟಿ) ಹೆಚ್ಚಿನ ಒತ್ತನ್ನು ನೀಡಲಾಗಿದೆ. ಉಭಯ ಸಶಸ್ತ್ರ ಪಡೆಗಳು ಮತ್ತು ಅವುಗಳ ಉಪಕರಣಗಳು ಜಂಟಿಯಾಗಿ ಕಾರ್ಯಾಚರಿಸಬಹುದು ಎನ್ನುವುದು ಇದರ ಅರ್ಥವಾಗಿದೆ. ಈ ಅಂತರ್-ಕಾರ್ಯಾಚರಣೆಯನ್ನು ಸಾಧಿಸಲು ಮಲಬಾರ್ ಕಸರತ್ತುಗಳು ಒಂದು ಪ್ರಮುಖ ವೇದಿಕೆಯಾಗಿದೆ. ಭಾರತದ ಹೆಚ್ಚಿನ ಯುದ್ಧ ನೌಕೆಗಳು ಮತ್ತು ಸಬ್‍ಮೆರಿನ್‍ಗಳನ್ನು ಸೋವಿಯತ್ ಒಕ್ಕೂಟ ಹಾಗೂ ನಂತರ ರಷ್ಯಾ ಸರಬರಾಜು ಮಾಡಿರುವುದರಿಂದ ಇದು ಅಮೆರಿಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮಲಬಾರ್ ಸೇನಾ ಕವಾಯತಿನಲ್ಲಿ ಅಮೆರಿಕದ ಪಡೆಗಳ ನೇತೃತ್ವವನ್ನು ಯುಎಸ್‍ಎಸ್ ನಿಮಿಟ್ಜ್ ವಹಿಸಿಕೊಂಡಿತ್ತು. ಅದು ಅಣುಶಕ್ತಿ ಚಾಲಿತ ಯುದ್ಧನೌಕೆಯಾಗಿದ್ದು ಅದರಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಇವೆ. ಪರಮಾಣು ಶಸ್ತ್ರಗಳಿರುವ ನೌಕೆಗಳು ತನ್ನ ಬಂದರುಗಳಿಗೆ ಪ್ರವೇಶಿಸುವುದನ್ನು ಭಾರತ ಮೊದಲೆಲ್ಲ ವಿರೋಧಿಸುತ್ತಿತ್ತು. ಆದರೆ ಈಗ ಭಾರತದ ನೌಕಾಪಡೆಯ ನೌಕೆಗಳು ಅಂಥ ಅಣ್ವಸ್ತ್ರಯುಕ್ತ ನೌಕೆಗಳ ಜತೆಯಲ್ಲೇ ಕಸರತ್ತು ನಡೆಸುತ್ತಿವೆ. 

ಮಲಬಾರ್ ಕಸರತ್ತುಗಳಲ್ಲಿ ಆಸ್ಟ್ರೇಲಿಯಾ ಕೂಡ ಭಾಗವಹಿಸಬೇಕೆನ್ನುವುದು ಅಮೆರಿಕದ ಆಸೆಯಾಗಿತ್ತು. ಈ ವರ್ಷವೇ ಈ ಕಸರತ್ತಿನ ಭಾಗವಾಗಬೇಕು ಎನ್ನುವುದು ಆಸ್ಟ್ರೇಲಿಯಾ ಸರಕಾರದ ಬಯಕೆಯಾಗಿತ್ತು. ಆಸ್ಟ್ರೇಲಿಯಾ ಪ್ರವೇಶ ಮಾಡುವಂತೆ ಮಾಡುವುದು ಮೋದಿ ಸರಕಾರದ ಮುಂದಿನ ತಾರ್ಕಿಕ ಹೆಜ್ಜೆಯಾಗಲಿದೆ. ಅಲ್ಲಿಗೆ ಇದು ಚತುಷ್ಕೋಣ ಮೈತ್ರಿ ಆಗಲಿದೆ. ಅದು ಅಮೆರಿಕದ ಗುರಿಯೂ ಆಗಿದೆ.

ಮಲಬಾರ್ ಸೇನಾ ಕವಾಯತು, ಭಾರತವು ಚೀನಾವನ್ನು ತಡೆಯುವ ಗುರಿಯೊಂದಿಗೆ ಏಷ್ಯಾದಲ್ಲಿ ವ್ಯೂಹ ರಚಿಸುತ್ತಿರುವ ಅಮೆರಿಕದ ಪೂರ್ಣ ಪ್ರಮಾಣದ ಪಾಲುದಾರ ಆಗಿರುವುದರ ಸಂಕೇತವಾಗಿದೆ. ಇದು ಹೇಗೆ ಭಾರತದ ರಾಷ್ಟ್ರೀಯ ಹಿತಗಳಿಗೆ ಅನುಕೂಲವಾಗಲಿದೆ ಎನ್ನುವುದನ್ನು ಮೋದಿ ಸರಕಾರವೇ ಉತ್ತರಿಸಬೇಕು. ಅಮೆರಿಕದೊಂದಿಗೆ ಮಿಲಿಟರಿ ಮೈತ್ರಿ ಭಾರತದ ಸಾರ್ವಭೌಮತೆ ಮತ್ತು ವ್ಯೂಹಾತ್ಮಕ ಸ್ವಾಯತ್ತೆಗೆ ಅಡ್ಡಿಯಾಗಲಿದೆ.