“ಒಂದು ತೆರಿಗೆ ಒಂದು ಭಾರತ”: ಪಡೆಯುವವರು ಮತ್ತು ಕಳೆದುಕೊಳ್ಳುವವರು

ಸಂಪುಟ: 
11
ಸಂಚಿಕೆ: 
31
date: 
Sunday, 23 July 2017
Image: 

- ಅರ್ಚನಾ ಪ್ರಸಾದ್

ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಸರಕು ಮತ್ತು ಶ್ರಮದ ಮಾರುಕಟ್ಟೆಯಲ್ಲಿ ಸಣ್ಣ ಸಂಸ್ಥೆಗಳು ಮತ್ತು ಕಾರ್ಮಿಕರಿಗೆ ಅನಾನೂಕೂಲವಾದ ರೀತಿಯಲ್ಲಿ ಬದಲಾವಣೆಗಳನ್ನು ತರಲಿದೆ. ಈಗ ಈ ಮಾರುಕಟ್ಟೆಯಲ್ಲಿ ಇರುವ ಅಸಮಾನ ಮತ್ತು ಅಧಿಕಾರದ ಸಂಬಂಧಗಳ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಸಂಸ್ಥೆಗಳಿಗೆ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆಯಿಂದ ಅನುಕೂಲ ಆಗುವ ಸಾಧ್ಯತೆ ಇಲ್ಲ. ಅನಾನುಕೂಲ ಆಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಯಾವ ಸಂಸ್ಥೆಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗೆಗೆ ಅಧ್ಯಯನ ಮಾಡಿ, ಸಾಮೂಹಿಕ ಪ್ರಜಾಸತ್ತಾತ್ಮಕ ಸಂಘಟನೆಗಳು ಜಿ.ಎಸ್.ಟಿ. ತೆರಿಗೆ ವ್ಯವಸ್ಥೆಗೆ ಬದಲಾವಣೆ ಸೂಚಿಸಬೇಕು ಎನ್ನುತ್ತಾರೆ ಅರ್ಚನಾ ಪ್ರಸಾದ್.

30 ಜೂನ್ 2017 ರಂದು ಮಧ್ಯರಾತ್ರಿ ಮೋದಿ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದಿದ್ದು, ಈ ಅತಿ ದೊಡ್ಡ ಆರ್ಥಿಕ ಸುಧಾರಣೆ ಸಂಬಂಧಿಸಿದ ಎಲ್ಲಾ ಪಾಲುದಾರರಿಗೂ ಅನುಕೂಲವಾಗಲಿದೆ ಎಂದು ಮೋದಿ ಸರ್ಕಾರ ಪ್ರಚಾರ ಮಾಡುತ್ತಿದೆ. ಗ್ರಾಹಕರಿಗೆ ಪರೋಕ್ಷ ತೆರಿಗೆಯು ಒಟ್ಟಾರೆ ಹೊರೆ ಕಡಿಮೆ ಆಗುವುದು. ಭಾರತಕ್ಕೆ ಒಂದು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ರಚಿಸಲು ಸಹಾಯವಾಗುತ್ತದೆ. ಮೇಕ್ ಇನ್ ಇಂಡಿಯಾಕ್ಕೆ ಮತ್ತು ವಿದೇಶೀ ಬಂಡವಾಳದಾರರಿಗೆ ಉತ್ತಮ ಉತ್ತೇಜನ ನೀಡುವುದು ಎಂದೆಲ್ಲಾ ಮಾಧ್ಯಮಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಮುಂದುವರೆದು, ಮುಕ್ತ ಮಾರುಕಟ್ಟೆಯಲ್ಲಿ ಎಲ್ಲ ಸಣ್ಣ, ಮಧ್ಯಮ ಅಥವಾ ದೊಡ್ಡ ಉತ್ಪಾದಕರನ್ನು ಸಮಾನವಾಗಿ ಪೈಪೋಟಿಯಲ್ಲಿ ಮಾಡಬಲ್ಲವರು ಎಂದು ನೋಡುವ ಜಿಎಸ್‍ಟಿ ನೀತಿಯಿಂದಾಗಿ, ಈ ವ್ಯವಸ್ಥೆಯಿಂದ ಯಾರಿಗೆ ಲಾಭವಾಗಿದೆ ಯಾರಿಗೆ ನಷ್ಟವಾಗಿದೆ ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಭಾರತದಲ್ಲಿ ಇರುವ ಸರಕುಗಳ ಮತ್ತು ಶ್ರಮದ ಮಾರುಕಟ್ಟೆಯ ಒಳಗಿರುವ ಅಸಮಾನತೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ಅದರ ಮೇಲೆ ಹೊಸ ಏಕೀಕೃತ ಸಮಾನ ತೆರಿಗೆ ವ್ಯವಸ್ಥೆಯ ಪರಿಣಾಮಗಳ ಬಗ್ಗೆ ಗಮನ ಹರಿಸುವುದರ ಮೂಲಕ ಮಾತ್ರವೇ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.

ಅಸಮಾನತೆ ಮತ್ತು ಅನೌಪಚಾರಿಕತೆ

ಇತ್ತೀಚಿನ ಅಂಕಿಅಂಶಗಳನ್ನು ಗಮನಹರಿಸಿದರೆ ಕೈಗಾರಿಕಾ ಉತ್ಪನ್ನ, ವ್ಯಾಪಾರ ಮತ್ತು ಇತರ ಸೇವೆಗಳ ಅನೌಪಚಾರೀಕರಣ ಭರದಿಂದ ಸಾಗಿರುವುದು ತಿಳಿದುಬರುತ್ತಿದೆ. ದೇಶದ ಕೈಗಾರಿಕಾ ಆರ್ಥಿಕತೆಯು ಸಂಘಟಿತ ಮತ್ತು ಅಸಂಘಟಿತ ಉದ್ಯಮಗಳಿಂದ ಕೂಡಿದೆ. ಕಂಪನಿ ಕಾಯಿದೆ ಅಡಿಯಲ್ಲಿ ಖಾಸಗೀ ಅಥವಾ ಸಾರ್ವಜನಿಕ ಉದ್ಯಮ ಎಂದು ಗುರುತಿಸಲಾದವುಗಳು ಸಂಘಟಿತ ಉದ್ಯಮಗಳೆನಿಸಿಕೊಳ್ಳುತ್ತವೆ. ಉಳಿದೆಲ್ಲವೂ ಕೂಡ ಅಸಂಘಟಿತ ಉದ್ಯಮಗಳು ಮತ್ತು ಅನೌಪಚಾರಿಕ ವಲಯದ ಒಳಗಡೆ ಬರುತ್ತದೆ.

ಮೇಲ್ಕಂಡ ಚೌಕಟ್ಟಿನ ಒಳಗಡೆ 0.3 ಪ್ರತಿಶತ ಸುಮಾರು ಕೃಷಿಯೇತರ ವಲಯದಲ್ಲಿರುವ ಸಂಸ್ಥೆಗಳನ್ನು, ಎನ್.ಎಸ್.ಎಸ್.ಓ. ಮತ್ತು ವಾರ್ಷಿಕ ರಾಷ್ಟ್ರೀಯ ಕೈಗಾರಿಕಾ ಸಮೀಕ್ಷೆ (ಎ.ಎಸ್.ಐ) ಕ್ರೋಢಿಕರಿಸಿದ ಪ್ರಸಕ್ತ ಅಂಕಿ ಅಂಶಗಳ ಪ್ರಕಾರ, ನೊಂದಾಯಿತ `ಸಂಘಟಿತ ವಲಯ ಉದ್ಯಮಗಳು” ಎಂದು ಕರೆಯಲಾಗಿದೆ. 2011 ಮತ್ತು 2016 ಅವಧಿಯ ಒಳಗಡೆ ಈ ವಿಭಾಗ ಶೇ. 0.03 ರಷ್ಟು ಮಾತ್ರ ಏರಿತು. ಒಟ್ಟಾರೆಯಾಗಿ ಕೇವಲ ಕಾಲು ಭಾಗದಷ್ಟು ಕಂಪನಿಗಳು ಮಾತ್ರ ರಿಜಿಸ್ಟರ್ ಆಗಿವೆ. ಅದೇ ವೇಳೆ ಅಸಂಘಟಿತ ವಲಯದ ಕೇವಲ 30% ರಷ್ಟು ಉದ್ಯಮಗಳೂ ಕಾರ್ಖಾನೆ ಕಾಯಿದೆಯಡಿ ರಿಜಿಸ್ಟರ್ ಆಗಿವೆ. ಹಾಗಾಗಿ 61% ಸಂಸ್ಥೆಗಳು ಇತ್ತ ಕಾರ್ಖಾನೆ ಅಥವಾ ಅತ್ತ ಕಂಪನಿ ಕಾಯಿದೆಗಳಡಿಯೂ ನೊಂದಾಯಿತವಾಗದಿರುವುದು. ಇವು ಹೆಚ್ಚಾಗಿ ಬಹಳ ಸಣ್ಣ ಉದ್ಯಮಗಳು. ಒಟ್ಟು ಕೃಷಿಯೇತರ ಸಂಘಟಿತ ಸಂಸ್ಥೆಗಳಲ್ಲಿ ಸುಮಾರು 84.2% ಸಂಸ್ಥೆಗಳ `ಸ್ವಂತ ಖಾತೆಯ ಸಂಸ್ಥೆಗಳು’ ಅಂದರೆ ಉದ್ಯಮದ ಮುಖ್ಯಸ್ಥ ಅಥವಾ ಮಾಲಿಕರೇ ಅಥವಾ ಆತನ ಕುಟುಂಬದ ಸದಸ್ಯರೇ ಕೆಲಸ ಮಾಡುತ್ತಾರೆ. ಎನ್.ಎಸ್.ಎಸ್.ಐ ಸಮೀಕ್ಷೆ ಪ್ರಕಾರ ಇಂತಹ ಸಂಸ್ಥೆಗಳಲ್ಲಿ ಅಪರೂಪಕ್ಕೆ ತುಂಬಾ ಕೆಲಸವಿದ್ದಾಗ  ಮಾತ್ರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅಥವಾ ಕೃಷಿ ಕೆಲಸದ ಅವಧಿಯಲ್ಲಿ ತುಂಬಾ ಒತ್ತಡವಿದ್ದಲೂ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. 2011 ರಿಂದ 2016 ರ ಅವಧಿಯೂ ಈ ವಿಭಾಗದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

2011 ರಲ್ಲಿ ಒಂದು ಸಂಸ್ಥೆಯ ಗಾತ್ರವನ್ನು ಅಂದಾಜಿಸಿದಾಗ ಸರಾಸರಿ ಕೆಲಸ ಮಾಡುವ/ ನೇಮಕಗೊಂಡ ಕಾರ್ಮಿಕರು 1.42% ಇತ್ತು. 2015-16 ರ ವೇಳೆಗೆ ಪ್ರತಿ ಸಂಸ್ಥೆಗೆ 1.28% ಕಾರ್ಮಿಕರ ಪ್ರಮಾಣಕ್ಕೆ ಇಳಿಯಿತು. ಸಣ್ಣ ಪ್ರಮಾಣದ ಆದಾಯ ಹೊಂದಿರುವ ಏಕ ಕಾರ್ಮಿಕ ನೊಂದಣಿ ರಹಿತ ಸಂಸ್ಥೆಗಳು ವಿಸ್ತøತಗೊಳ್ಳುವುದರ ಬದಲಾಗಿ ದಿನೇ ಕುಗ್ಗುತ್ತಿವೆ. ಅದೇ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿರುವ ನೊಂದಣಿಯಾಗಿರುವ ಸಂಘಟಿತ ಮತ್ತು ಅಸಂಘಟಿತ ಸಂಸ್ಥೆಗಳು ದೊಡ್ಡ ಪ್ರಮಾಣದ ಬಂಡವಾಳವನ್ನು ನಿಯಂತ್ರಿಸುತ್ತಿದ್ದು, ಜಿಡಿಪಿಗೆ 60% ಕೊಡುಗೆ ನೀಡುತ್ತಿವೆ. ಈ ಅಧ್ಯಯನವನ್ನು 2015 ರಲ್ಲಿ ಹಣಕಾಸು ಇಲಾಖೆ ಮಾಡಿತ್ತು.

ಮೇಲ್ಕಂಡ ಪಟ್ಟಿಯ ಪ್ರಕಾರ ಸರಿಸುಮಾರು 93.5% ವಹಿವಾಟನ್ನು 8.7% ತೆರಿಗೆ ಪಾವತಿಸುವ ಸಂಸ್ಥೆಗಳು ನಿಯಂತ್ರಿಸುತ್ತಿದೆ. ಅದೇ ಸಂದರ್ಭದಲ್ಲಿ 79% ತೆರಿಗೆ ಪಾವತಿಸುವ ಸಂಸ್ಥೆಗಳ 6.5% ಕ್ಕಿಂತ ಕಡಿಮೆ ವಹಿವಾಟನ್ನು ನಿಯಂತ್ರಿಸುತ್ತಿವೆ. ಇದರಿಂದಾಗಿ ವಿವಿಧ ಸಂಸ್ಥೆಗಳಲ್ಲಿ ಆದಾಯದ ಉತ್ಪಾದನೆ ಮತ್ತು ಸ್ವತ್ತಿನ ನಿಯಂತ್ರಣದಲ್ಲಿ ಇರುವ ಥಳುಕಿನ ಅಸಮಾನತೆ ಕಂಡುಬರುತ್ತದೆ. ಬೃಹತ್ ಸಂಖ್ಯೆಯ ಏಕಕಾರ್ಮಿಕ ಮಾಲೀಕತ್ವದ ಸಂಸ್ಥೆಗಳು ಮೇಲಿನ ಪಟ್ಟಿಯ ಮೊದಲೆರಡು ವರ್ಗಿಕರಣದ ಒಳಗೆ ಬರುತ್ತವೆ ಮತ್ತು ಸರಕು ಮಾರುಕಟ್ಟೆಯನ್ನು ನಿಯಂತ್ರಿಸುವ ವಿಷಯಕ್ಕೆ ಸಂಬಂಧ ಪಟ್ಟಂತೆ. ಅತಿಹೆಚ್ಚು ಅನಾನುಕೂಲಕ್ಕೆ ಒಳಗಾಗುತ್ತವೆ.

ಯಾಕೆ ಸಣ್ಣ ಸಂಸ್ಥೆಗಳು ಅನಾನುಕೂಲಕ್ಕೆ ಒಳಗಾಗುತ್ತವೆ?

ಜಿ.ಎಸ್.ಟಿ ಯು ನೊಂದಣಿ ಆದ ಅಥವಾ ಆಗದೇ ಇರುವ ಸಂಸ್ಥೆಗಳಿಂದ ಉತ್ಪಾದಿತವಾದ ಸರಕು ಮತ್ತು ಸೇವೆಗಳಿಗೆ ಅದರ ಮೂಲಸ್ಥಾನದಲ್ಲಿಯೇ ತೆರಿಗೆ ವಿಧಿಸುವುದನ್ನು ಕಡ್ಡಾಯ ಎಂದಿದೆ. ಹಾಗಾಗಿ ಜಿ.ಎಸ್.ಟಿ ಕಾಯ್ದೆಯನ್ನು ಅನುಸರಿಸಲು 6.34 ಕೋಟಿ ಅಸಂಘಟಿತ ಸಂಸ್ಥೆಗಳು ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. ಇದರಿಂದಾಗಿ 4.5 ಕೋಟಿ ಸಣ್ಣ ಮತ್ತು ಅತಿಸಣ್ಣ ಸಂಸ್ಥೆಗಳಿಗೆ ಆನ್-ಲೈನ್ ರಿಜಿಸ್ಟರ್ ಮಾಡಿಕೊಳ್ಳಲು ಮೂಲಭೂತ ಸೌರ್ಕರ್ಯ ಹೆಚ್ಚಿಸಿಕೊಳ್ಳಲು ಹೆಚ್ಚಿನ ಖರ್ಚು ಮಾಡಲು ಬಲಾತ್ಕಾರ ಮಾಡಲಾಗುತ್ತದೆ. (60% ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಂತರ್ಜಾಲ ಸೌಲಭ್ಯ ಇಲ್ಲವಾಗಿದ್ದು, ಲೆಕ್ಕಪತ್ರಗಳನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಮಾಡುತ್ತಿದ್ದಾರೆ). ಜಾಗತಿಕ ಬ್ಯಾಂಕ್‍ನ ಗುಂಪೊಂದು ಮಾಡಿದ ಅಧ್ಯಯನ ಪ್ರಕಾರ, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವ್ಯಾಟ್ ಮತ್ತು ಜಿ.ಎಸ್.ಟಿ. ಯಂತಹ ತೆರಿಗೆಯು ಅಂಗಿಕಾರದ ವ್ಯಚ್ಚವನ್ನು ಸಣ್ಣ ಮತ್ತು ಅತಿಸಣ್ಣ ಸಂಸ್ಥೆಗಳು ತಮ್ಮ ಉತ್ಪಾದನಾ ವೆಚ್ಚದ 3.15% ರಷ್ಟು ಭರಿಸಬೇಕು. ಆದರೆ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಇದು ಕೇವಲ 0.5% ರಷ್ಟು ಮಾತ್ರ. 

ಇದರ ಅರ್ಥ ಜಿ.ಎಸ್.ಟಿ ಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಣ್ಣ ಮತ್ತು ಅತಿಸಣ್ಣ ಸಂಸ್ಥೆಗಳು ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ದೊಡ್ಡ ಸಂಸ್ಥೆಗಳಿಗಿಂದ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗುತ್ತದೆ. 

ಸರ್ಕಾರ ಯಾವುದೇ ರೀತಿಯ ಸಬ್ಸಿಡಿಯನ್ನು ಇಂತಹ ವೆಚ್ಚಗಳನ್ನು ಭರಿಸಲು ನೀಡುವುದಿಲ್ಲ - ಸರ್ಕಾರ ಜಿ.ಎಸ್.ಟಿ. ಬಗ್ಗೆ ದೂರದರ್ಶನದಲ್ಲಿ ಮೂರು ಘಂಟೆಗಳ ತರಬೇತಿ ನೀಡಬಹುದು ಅಥವಾ 100 ಸಹಾಯಕ ಬೂತ್‍ಗಳನ್ನು ಸ್ಥಾಪಿಸಬಹುದು ವಿನಹ ಹಣಕಾಸಿನ ಸಹಾಯ ಅಲ್ಲ. ಇವ್ಯಾವುವೂ ಸಣ್ಣ ಅತಿ ಸಣ್ಣ ಸಂಸ್ಥೆಗಳ ಜಿ.ಎಸ್.ಟಿ. ಜಾರಿಯ ಖರ್ಚನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡುವುದಿಲ್ಲ. ಈಗ ರಿಜಿಸ್ಟರ್ ಆಗದಿರುವ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಜಿ.ಎಸ್.ಟಿ.ಗೆ ರಿಜಿಸ್ಟರ್ ಮಾಡಲು ಸಾಧ್ಯವಾಗದಿದ್ದರೆ ಏನಾಗುತ್ತದೆ? ಜಿ.ಎಸ್.ಟಿ. ನಿಯಮಗಳ ಪ್ರಕಾರ ರಿಜಿಸ್ಟರ್ ಆದ ಸಂಸ್ಥೆ ರಿಜಿಸ್ಟರ್ ಆಗದ ಸಂಸ್ಥೆಯಿಂದ ಸರಕು/ಸೇವೆ ಖರೀದಿಸಿದರೆ ಅದನ್ನು ಖರೀದಿ ಮಾಢಿದ ಸಂಸ್ಥೆ ಅನ್ವಯವಾಗುವ ಜಿ.ಎಸ್.ಟಿ. ತೆರಬೇಕು. ಇದು ರಿಜಿಸ್ಟರ್ ಆಗದಿರುವ ಸಂಸ್ಥೆಗಳಿಂದ ಸರಕು/ಸೇವೆ ಖರೀದಿಸದಂತೆ ಒತ್ತಡ. ಇನ್ನೊಂದು ಕಡೆ ತಮ್ಮ ಉತ್ಪಾದನಾ ಖರ್ಚು ತಗ್ಗಿಸಲು ದೊಡ್ಡ ಪ್ರಮಾಣದಲ್ಲಿ ಬಟ್ಟೆ, ಇಲೆಕ್ಟ್ರಾನಿಕ್ಸ್, ವಾಹನ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಸಣ್ಣ ಅತಿ ಸಣ್ಣ ಸಂಸ್ಥೆಗಳಿಗೆ ಹೊರಗುತ್ತಿಗೆ ಕೊಡುತ್ತವೆ. ಅವನ್ನು ಬಹುಶಃ ನಿಲ್ಲಿಸುವುದು ಸಾಧ್ಯವಾಗಲಿಕ್ಕಿಲ್ಲ. ಅವು ಇಂತಹ ರಿಜಿಸ್ಟರ್ ಆಗದಿರುವ ಸಂಸ್ಥೆಗಳಿಂದ ಸರಕು/ಸೇವೆ ಖರೀದಿಸಿ ಅನ್ವಯವಾಗುವ ಜಿ.ಎಸ್.ಟಿ.ಯನ್ನು ಅವುಗಳ ಹಣ ಪಾವತಿಯಿಂದ ಕಡಿತ ಮಾಡುವ ಸಾಧ್ಯತೆ ಹೆಚ್ಚು. ಇದರರ್ಥ ಜಿ.ಎಸ್.ಟಿ.ಯಿಂದಾಗಿ ಸರಕು/ಸೇವೆ ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳು ಸಣ್ಣ ಮತ್ತು ಅತಿ ಸಣ್ಣ ಸಂಸ್ಥೆಗಳ ಜತೆ ಇನ್ನಷ್ಟು ಪ್ರತಿಕೂಲವಾದ ವ್ಯಾಪಾರದ ಶರತ್ತುಗಳನ್ನು ಹಾಕುವ ಅವಕಾಶ ಮಾಡಿಕೊಡುತ್ತದೆ.

ಸಣ್ಣ ಸಂಸ್ಥೆಗಳು ಇನ್ನೊಂದು ರೀತಿಯಲ್ಲಿ ಜಿ.ಎಸ್.ಟಿ.ಯಿಂದಾಗಿ ಸಂಕಷ್ಟಕ್ಕೆ ಒಳಗಾಗುತ್ತವೆ. ಅವು ಉತ್ಪಾಧಿಸುವ ಉತ್ಪನ್ನಗಳಿಗೆ ತೆರಿಗೆ ಹೆಚ್ಚಾದಾಗ ಅವನ್ನು ಖರೀದಿಸುವ ದೊಡ್ಡ ಸಂಸ್ಥೆಗಳು ಹೆಚ್ಚಿದ ಉತ್ಪಾದನಾ ವೆಚ್ಚ ತೂಗಿಸಲು ಸಣ್ಣ ಸಂಸ್ಥೆಗಳ ಉತ್ಪನ್ನಗಳ ಬೆಲೆಯ ಕಡಿತ ಮಾಡಬಹುದು. ಉದಾಹರಣೆಗೆ ಬಟ್ಟೆ ಉದ್ಯಮ ಶೇ. 96 ನೂಲನ್ನು ಸಣ್ಣ ಸಂಸ್ಥೆಗಳಿಂದ ಖರೀದಿ ಮಾಡುತ್ತದೆ. ಸಿಂಥೆಟಿಕ್ ನೂಲಿನ ಮೇಲೆ ಶೇ. 18 ತೆರಿಗೆ ಹಾಕಿದ್ದು ಬಟ್ಟೆಯ ಬೆಲೆ ಬಳಕೆದಾರರಿಗೆ ಹೆಚ್ಚಾಗಬಹುದು. ನೂಲು ಪೂರೈಕೆ ಮಾಡುವ ಸಣ್ಣ ಸಂಸ್ಥೆಗಳ ಲಾಭಾಂಶ ಕಡಿಮೆ ಮಾಡುವ ಬೆಲೆ ಹೇರಿಕೆ ಮಾಡಬಹುದು. ಇದೇ ರೀತಿ ವಾಹನ ಬಿಡಿ ಭಾಗಗಳ ತೆರಿಗೆ ಶೇ. 12ರಿಂದ 28ಕ್ಕೆ ಏರಿಸಿದ್ದು ದೊಡ್ಡ ವಾಹನ ಕೈಗಾರಿಕೆ ಬಿಡಿ ಭಾಗಗಳ ಬೆಲೆಯನ್ನು ಚೌಕಾಶಿ ಮಾಡಿ ಕಡಿಮೆ ಮಾಡಬಹುದು. 

ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಸರಕು ಮತ್ತು ಶ್ರಮದ ಮಾರುಕಟ್ಟೆಯಲ್ಲಿ ಸಣ್ಣ ಸಂಸ್ಥೆಗಳು ಮತ್ತು ಕಾರ್ಮಿಕರಿಗೆ ಅನಾನೂಕೂಲವಾದ ರೀತಿಯಲ್ಲಿ ಬದಲಾವಣೆಗಳನ್ನು ತರಲಿದೆ. ಈಗ ಈ ಮಾರುಕಟ್ಟೆಯಲ್ಲಿ ಇರುವ ಅಸಮಾನ ಮತ್ತು ಅಧಿಕಾರದ ಸಂಬಂಧಗಳ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಸಂಸ್ಥೆಗಳಿಗೆ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆಯಿಂದ ಅನುಕೂಲ ಆಗುವ ಸಾಧ್ಯತೆ ಇಲ್ಲ. ಅನಾನುಕೂಲ ಆಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಯಾವ ಸಂಸ್ಥೆಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗೆಗೆ ಅಧ್ಯಯನ ಮಾಡಿ, ಸಾಮೂಹಿಕ ಪ್ರಜಾಸತ್ತಾತ್ಮಕ ಸಂಘಟನೆಗಳು ಜಿ.ಎಸ್.ಟಿ. ತೆರಿಗೆ ವ್ಯವಸ್ಥೆಗೆ ಬದಲಾವಣೆ ಸೂಚಿಸಬೇಕು.

 

ಅನುವಾದ : ಭಾರತಿ ಗಾಂವ್ಕರ್