Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಭಾಷೆ, ರಾಜ್ಯದ ಸ್ವಾಯತ್ತತೆಗಳ ಮೇಲೆ ದಾಳಿಗೆ ತುರ್ತು ಪ್ರತಿರೋಧ ಬೇಕು

ಸಂಪುಟ: 
11
ಸಂಚಿಕೆ: 
31
Sunday, 23 July 2017

ಕರ್ನಾಟಕಕ್ಕೆ ಅಧಿಕೃತ ನಾಡ ಬಾವುಟ ಸೂಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 9 ಮಂದಿಯ ಸಮಿತಿ ರಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ``ನಮ್ಮ ಮೆಟ್ರೊ'', ರೈಲ್ವೇ, ಬ್ಯಾಂಕು ಮುಂತಾಧ ಹಲವೆಡೆ ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶದ ಹಿನ್ನೆಲೆಯಲ್ಲಿ ಇದಕ್ಕೆ ರಾಜ್ಯದಲ್ಲಿ ಬೆಂಬಲ-ವಿರೋಧ ಎರಡೂ ವ್ಯಕ್ತವಾಗಿದೆ. ಚರ್ಚೆ ರಾಜ್ಯದಲ್ಲಿ ಮಾತ್ರವಲ್ಲ, ರಾ?ಷ್ಟ್ರೀಯ ಮಟ್ಟದಲ್ಲಿ ಕೂಡಾ ದೊಡ್ಡ ವಿವಾದ ಎಬ್ಬಿಸಿದೆ. ಬಿಜೆಪಿ ಕೇಂದ್ರೀಯ ಮತ್ತು ರಾಜ್ಯದ ನಾಯಕರು ಮತ್ತು ಸಂಘ ಪರಿವಾರದ ಪಡೆಗಳೂ ಬೆಂಬಲಿಗರು ಕರ್ನಾಟಕ ಸರಕಾರವನ್ನು ಬಡಿಯಲು ಇನ್ನೊಂದು ಬಡಿಗೆ ಸಿಕ್ಕಿತು ಎಂದು ಹಿಗ್ಗಿ, ಈ ವಿವಾದ ಬಳಸಿ ಕಾಂಗ್ರೆಸ್ ಮತ್ತು ಕರ್ನಾಟಕ ಸರಕಾರಕ್ಕೆ  ``ದೇಶದ್ರೋಹಿ' `ಸಂವಿಧಾನ-ವಿರೋಧಿ" ``ಕಾಶ್ಮೀರ ಮಾದರಿ ಪ್ರತ್ಯೇಕತಾವಾದಿ'', ಎಂದೆಲ್ಲಾ ಲೇಬಲ್ಲು ಹಚ್ಚತೊಡಗಿದರು. ಈಗ ಬಿಜೆಪಿಯ ಮಾತುಗಳನ್ನೇ ಮಾರ್ದನಿಸುವ ಇಂಗ್ಲಿಷ್, ಹಿಂದಿ ಟಿವಿ/ಪತ್ರಿಕಾ ಮಾಧ್ಯಲಮಗಳಲ್ಲಿ, ಕರ್ನಾಟಕದ ನಾಡಬಾವುಟದ ವಿರುದ್ಧ ನಡೆದ ದಾಳಿ ಕನ್ನಡಿಗರನ್ನು ಕೆರಳಿಸಿದೆ. ಸಾಮಾಜಿಕ ಮಾಧ್ಯಲಮಗಳಲ್ಲಿ ಕರ್ನಾಟಕ ಸರಕಾರದ ಕ್ರಮದ ವಿರುದ್ಧ ಟ್ರೆಂಡಿಂಗ್ ನಲ್ಲಿ ಬಂದ #OneNationOneFlag ಎಂಬ ಕೇಸರಿ ಪಡೆಗಳ, ಹುಸಿ ರಾಷ್ಟ್ರವಾದಿಗಳ  ಮತ್ತು ಹಿಂದಿ ಭಾಷಾಂಧರ ಆಂದೋಲನದ ವಿರುದ್ಧ, ರಾಜ್ಯದಲ್ಲಿ ಪ್ರತಿ-ಚಳುವಳಿ  ನಡೆದು, #MyStateMyFlag  ಟ್ರೆಂಡಿಂಗ್ ನಲ್ಲಿ ಬಂತು. 

ಮೊದಲನೆಯದಾಗಿ ಕೇಸರಿ ಪಡೆಗಳು ಮತ್ತು ಅವರ ಬೆಂಬಲಿಗ ``ರಾಷ್ಟ್ರವಾದಿಗಳು'' ನಾಡ ಬಾವುಟದ ಬಗ್ಗೆ ಮಾಡಿದ ಕೆಲವು ವಾದಗಳು ಮತ್ತು ಧೋರಣೆಗಳನ್ನು ವಿಶ್ಲೇಷಿಸಬಹುದು. ಅಧಿಕೃತವಾಗಿ ಅಥವಾ ಅನಧಿಕೃತವಾಗಿ ನಾಡ ಬಾವುಟ ಹೊಂದುವುದು ``ದೇಶದ್ರೋಹ'' ಅಥವಾ ``ಪ್ರತ್ಯೇಕತಾವಾದಿ'' ಖಂಡಿತಾ ಅಲ್ಲ. ಅಮೆರಿಕ, ಜರ್ಮನಿ, ಬ್ರಿಟನ್, ಸೋವಿಯೆಟ್ ಒಕ್ಕೂಟ ಮುಂತಾದ ದೇಶಗಳ ರಾಜ್ಯಗಳಿಗೆ ಪ್ರತ್ಯೇಕ ಬಾವುಟ ಇತ್ತು. ಅಥವಾ ಈಗಲೂ ಇದೆ. ಯುರೋಪಿಯನ್ ಫುಟ್ ಬಾಲ್ ಪಂದ್ಯದಲ್ಲಿ ಬ್ರಿಟನಿನ ರಾಜ್ಯಗಳಾಧ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಗಳು ಪ್ರತ್ಯೇಕ ತಂಡಗಳಾಗಿ ಸಹ ಸ್ಪರ್ಧಿಸುತ್ತವೆ ಎಂದೂ ನಮ್ಮ ``ಕ್ರಿಕೆಟ್-ರಾಷ್ಟ್ರವಾದಿ''ಗಳು ಗಮನಿಸಬೇಕು. ಒಂದು ರಾಜ್ಯ ಅದರ ಚರಿತ್ರೆ, ಸಂಸ್ಕೃತಿ, ಅಸ್ಮಿತೆಗಳ ಸಂಕೇತವಾಗಿ ಒಂದು ಬಾವುಟ ಹೊಂದುವುದು ಜಗತ್ತಿನಾದ್ಯಂತ ಸಹಜ ಸಂಗತಿ.  

ಭಾರತದಂತಹ ದೇಶದಲ್ಲಿ ಇದು ಇನ್ನೂ ಸಹಜವಾಗಬೇಕಾಗಿತ್ತು. ಯಾಕೆಂದರೆ ಭಾರತ ಬಹು-ರಾಷ್ಟ್ರೀಯತೆಗಳು ಇರುವ ಒಂದು ದೇಶ ಮತ್ತು ಪ್ರಭುತ್ವ. ಹಿಂದಿ ಒಂದೇ ರಾ?ಷ್ಟ್ರಭಾಷೆ ಅಲ್ಲ. ಎಲ್ಲಾ ಭಾರತದ ಭಾಷೆಗಳೂ ರಾಷ್ಟ್ರಭಾಷೆಗಳೇ. ಬಲಯುತವಾದ ಭಾಷಾವಾರು ರಾಜ್ಯಗಳ ಬಲವಾದ ಒಕ್ಕೂಟವೇ ನಮ್ಮ ದೇಶದ ಬುನಾದಿ. ಇದನ್ನೇ ಒಕ್ಕೂಟ ತತ್ವವಾಗಿ ನಾವೆಲ್ಲರೂ ಒಪ್ಪಿಕೊಂಡಿರುವುದು. ಭಾಷಾವಾರು ರಾಜ್ಯಗಳ ರಚನೆಯ ಒತ್ತಾಯ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿತ್ತು. ಕಾಂಗ್ರೆಸ್, ಕಮ್ಯುನಿಸ್ಟ್ ಮುಂತಾದ ರಾಷ್ಟ್ರೀಯವಾದಿ ಪಕ್ಷಗಳು (ಆಗ ಅಂತಹ ರಾಜಕೀಯ-ಆಡಳಿತ ಘಟಕಗಳು ಇಲ್ಲದಿದ್ದರೂ) ಭಾಷಾವಾರು ರಾಜ್ಯಗಳ ಆಧಾರದ ಮೇಲೆ ಘಟಕಗಳನ್ನು ಹೊಂದಿದ್ದವು, ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಭಾಷಾವಾರು ರಾಜ್ಯಗಳ ವಿಂಗಡಣೆ ಆದಾಗ ಆಗಲಿ, ಆ ಮೇಲಾಗಲಿ ರಾಜ್ಯಕ್ಕೆ ಒಂದು ಅಧಿಕೃತ ಬಾವುಟದ ಪ್ರಶ್ನೆ ಎಲ್ಲೂ ಎದ್ದಿರಲಿಲ್ಲ. ಅನಧಿಕೃತವಾಗಿಯೂ ಕರ್ನಾಟಕ ಬಿಟ್ಟರೆ ಇತರ ರಾಜ್ಯಗಳಲ್ಲಿ ಯಾವುದೇ ಬಾವುಟ ಹೊಂದಿರುವುದು ಕಂಡು ಬರುವುದಿಲ್ಲ. ಆದ್ದರಿಂದ ಸಂವಿಧಾನ ಈ ಬಗ್ಗೆ ಏನೂ ಹೇಳುವುದಿಲ್ಲ. ರಾಜ್ಯ ಅಧಿಕೃತ ಭಾವುಟ ಹೊಂದಿರಬಾರದು ಎಂದೂ ಹೇಳುವುದಿಲ್ಲ. ಆದ್ದರಿಂದ ನಾಡ ಬಾವುಟದ ಬಗ್ಗೆ ಚರ್ಚೆಯೇ ``ಸಂವಿಧಾನ-ವಿರೋಧಿ'' ಎಂಬುದೂ ಸರಿಯಲ್ಲ. 

ಇಂತಹ ಆಪಾದನೆಗಳನ್ನು ಮಾಡುತ್ತಿರುವ ಬಿಜೆಪಿ ರಾಜ್ಯ ಸರಕಾರದ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ 2012ರಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ `ನವೆಂಬರ್ 1 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ' ಎಂದು  ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಸುತ್ತೋಲೆಯನ್ನೂ ಹೊರಡಿಸಲಾಗಿತ್ತು. ಹೈಕೋಟ್ರ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ಪ್ರಕಾಶ ಶೆಟ್ಟಿ ಎಂಬುವರು, `ಕನ್ನಡ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು' ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ  ಹೈಕೋರ್ಟ್, ಕನ್ನಡ ಧ್ವಜ ಅಧಿಕೃತವೇ ಎಂಬ ಬಗ್ಗೆ  ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.  2012ರ ಅಕ್ಟೋಬರ್ 4ರಂದು ಕೋಟ್ರ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದ  ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, `ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಿದ ಆದೇಶ ವಾಪಸ್ ಪಡೆಯಲಾಗಿದೆ' ಎಂದು ಹೇಳಿತ್ತು. ಈಗ ರಾಜ್ಯ ಬಿಜೆಪಿ ``ದೇಶದ್ರೋಹ'', ``ಪ್ರತ್ಯೇಕತಾವಾದಿ'', ``ಸಂವಿಧಾನ-ವಿರೋಧಿ'' ಎಂದೆಲ್ಲಾ ಪ್ರಲಾಪ ಮಾಡುವುದು ಎರಡು-ನಾಲಗೆಗಳ ಮಾತಿನ ಪರಮಾವಧಿ.

ರಾಜ್ಯಗಳು ಬಲವಾಗಿರುವುದು ಮತ್ತು ಎಲ್ಲ ರಾಷ್ಟ್ರಭಾಷೆಗಳು ಶಿಕ್ಷಣದ , ನ್ಯಾಯಾಂಗದ, ಆಡಳಿತದ ಜನಜೀವನದ ವಿವಿಧ ಆಯಾಮಗಳಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಉಪಯೋಗಿಸುವುದು, ಉಪಯೋಗಿಸುವ ಸಾಮಥ್ರ್ಯವನ್ನು ಬೆಳಸುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿತ್ತು. ವಿವಿಧ ರಾಜ್ಯಗಳಲ್ಲಿ ಅಲ್ಲಿಯ ಉದ್ಯಮಗಳು ಬೆಳೆದು ಅಲ್ಲಿಯ ಜನರಿಗೆ ಕೆಲಸ ದೊರೆಯಲು ಇದರಿಂದ ಪ್ರಯೋಜನವಾಗುತ್ತಿತ್ತು. ಆದರೆ ಇದು ದೊಡ್ಡ ಕಾರ್ಪೋರೆಟ್ ಗಳು ಭಾರತಾದ್ಯಂತ ವಿಸ್ತರಿಸಿ ಬೃಹತ್ತಾಗಿ ಬೆಳೆಯಲು ದೊಡ್ಡ ಅಡ್ಡಿ ಎಂದು ಭಾವಿಸಿದುವು. ಈ ಕಾರ್ಪೊರೇಟ್ ಗಳ ಮರ್ಜಿ ಹಿಡಿದ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ರಾಜ್ಯಗಳಿಗೆ ಸ್ವಾಯತ್ತ ಅಧಿಕಾರ ನೀಡಲಿಲ್ಲ. ಬದಲಾಗಿ ಇದ್ದ ಸ್ವಲ್ಪ ಅಧಿಕಾರವನ್ನು ಕಿತ್ತುಕೊಂಡವು, ಭಾಷಾ ಬೆಳವಣಿಗೆಯನ್ನೂ ಹತ್ತಿಕ್ಕಿದವು. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ನೇತೃತ್ವದ ಕೇಂದ್ರ ಸರಕಾರಗಳು ಸತತವಾಗಿ ರಾಜ್ಯಗಳ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ ನಡೆದಿವೆ. ರಾಜ್ಯಗಳ ಸ್ವಾಯತ್ತತೆಯ ಆರ್ಥಿಕ್ಕು ಅಡಿಪಾಯವನ್ನೇ ನಾಶ ಮಾಡಿದ ಯೋಜನಾ ಆಯೋಗದ ವಿಸರ್ಜನೆ ಕಾಂಗ್ರೆಸ್ ಆರಂಭಿಸಿ ಬಿಜೆಪಿ ಜಾರಿ ಮಾಡಿದ ಕ್ರಮ. ಮೋದಿ ಸರಕಾರ ಮುಂದುವರೆದು ಜಿ.ಎಸ್.ಟಿ. ಮೂಲಕ ರಾಜ್ಯಗಳ ಸ್ವಾಯತ್ತತೆಗೆ ಮಾರಣಾಂತಿಕ ಏಟು ಕೊಟ್ಟಿದೆ. ರೇಗಾ, ರೈತರ ಬೆಂಬಲ ಬೆಲೆ, ಐಸಿಡಿಎಸ್ ಗೆ ಅನುದಾನ ಮುಂತಾದ ಜನಕಲ್ಯಾಣ ಯೋಜನೆಗಳನ್ನು ಮಾಡಬಹುದಾದ ಅಧಿಕಾರ/ಸಾಮಥ್ರ್ಯಗಳನ್ನು ಕಿತ್ತುಕೊಂಡಿದೆ.  

ಹಿಂದಿ ಹೇರಿಕೆಯಲ್ಲೂ ಕಾಂಗ್ರೆಸ್, ಬಿಜೆಪಿ ಕೇಂದ್ರ ಸರಕಾರಗಳ ಧೋರಣೆಗಳಲ್ಲಿ ಯಾವುದೇ ವ್ಯತ್ಯಾಸಗಳು ಇರಲಿಲ್ಲ. ಕೇಂದ್ರ ಸರಕಾರದ ಇಲಾಖೆಗಳು, ಕೇಂದ್ರೀಯ ವಿದ್ಯಾಲಯಗಳು, ರೈಲ್ವೇ, ಬ್ಯಾಂಕುಗಳ ಮೂಲಕ ಹಿಂದೀ ಹೇರಿಕೆ ಸತತವಾಗಿ ನಡೆದಿದೆ. ಇವೆಲ್ಲದರಿಂದ ಆಕ್ರೋಶಕ್ಕೆ ಒಳಗಾದ ಕನ್ನಡಿಗರು ನಾಡ ಬಾವುಟದ ವಿವಾದಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಸಹಜವೇ ಆಗಿದೆ.

ರಾಜ್ಯ ಸರ್ಕಾರದ ಈ ಕ್ರಮ ರಾಜ್ಯಗಳ ಸ್ವಾಯತ್ತತೆ, ಭಾಷೆಯ ಬೆಳವಣಿಗೆ, ಹಿಂದಿ ಹೇರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದು ಒಳ್ಳೆಯ ಬೆಳವಣಿಗೆಯೇ. ಯಾಕೆಂದರೆ ನಾಡ ಬಾವುಟ ಇವೆಲ್ಲದರ  ಸಂಕೇತವಾಗಬಲ್ಲುದು. ಆದರೆ ರಾಜ್ಯಗಳ ಸ್ವಾಯತ್ತತೆ, ಭಾಷೆಯ ಬೆಳವಣಿಗೆ, ಹಿಂದಿ ಹೇರಿಕೆ ಬಗ್ಗೆ ನಿರ್ದಿಷ್ಟ ದೂರಗಾಮಿ ನೀತಿ, ಸ್ಪಷ್ಟ ಕಾರ್ಯಕ್ರಮ ಇಲ್ಲದೆ ಬರಿಯ ಬಾವುಟದ ಬೋರ್ಡುಗಳ ಬಗ್ಗೆ ಗುದ್ದಾಟ  ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಗೆ ಪೂರಕವಾಗದು. 

ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಕನ್ನಡದ ಹಿರಿಯ ಮನಸ್ಸುಗಳು ಹೇಳಿದಂತೆ  ``ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಕನ್ನಡ ಭಾಷಾ ಬಳಕೆಯ ಪ್ರಮಾಣ ಮತ್ತು ಗುಣಮಟ್ಟಗಳೆರಡೂ ಅವನತಿಯ ಹಾದಿ ಹಿಡಿದಿವೆ. ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿಯೇ  ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡ ಮಾಧ್ಯಮದ ಮೂಲಕ ಒದಗಿಸಲಾಗದ ದುಃಸ್ಥಿತಿ ನಮ್ಮ ಸರ್ಕಾರಕ್ಕೆ ಎದುರಾಗಿದೆ. ಕರ್ನಾಟಕ ಸರ್ಕಾರ ಹೊರಡಿಸಿದ ಶಿಕ್ಷಣ ಮಾಧ್ಯಮ ಕುರಿತ ಆಜ್ಞೆಯನ್ನು,  ಎರಡೂವರೆ ವರ್ಷಗಳ ಹಿಂದೆ  ಸರ್ವೋಚ್ಚ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕಿನ ಹೆಸರಲ್ಲಿ ಅಸಿಂಧುಗೊಳಿಸಿದೆ.  ಹಾಗಾಗಿ ಕನ್ನಡಿಗರನ್ನು ಪ್ರತಿನಿಧಿಸುವ ಕರ್ನಾಟಕ ಸರ್ಕಾರದ ಮೊದಲ ಆದ್ಯತೆ, ಈ ಸಾಂವಿಧಾನಿಕ ಸಂಕಷ್ಟದಿಂದ ಕನ್ನಡವನ್ನು ಹೇಗೆ ಪಾರು ಮಾಡುವುದು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಆಗಿರಬೇಕಿತ್ತು. ಆದರೆ ನ್ಯಾಯಾಲಯದ ತೀರ್ಪು ಬಂದ ಹೊಸತರಲ್ಲಿ, ಅದಕ್ಕೆ ಪರಿಹಾರ ರೂಪಿಸುವ ಪ್ರಯತ್ನಗಳ ಬಗ್ಗೆ ಔಪಚಾರಿಕ ಮಾತುಗಳನ್ನಾಡಿದ ಸರ್ಕಾರ ಈಗ ಕನ್ನಡಿಗರನ್ನು ಗಾಬರಿಪಡಿಸುವಂತಹ ಮೌನವನ್ನು ತಳೆದಿದೆ. ಕನ್ನಡ ಪ್ರಾಥಮಿಕ ಶಿಕ್ಷಣ ಎಂದರೆ ಕನ್ನಡ ಸಂಸ್ಕೃತಿಯ, ಪ್ರಜ್ಞೆಯ  ಅಡಿಗಲ್ಲು ಇದ್ದಂತೆ. ಆದರೆ ಅದಕ್ಕೇ ಧಕ್ಕೆ ಒದಗಿರುವಾಗ ಆ ಬಗ್ಗೆ ಕಾಳಜಿಯನ್ನೇ ವಹಿಸದೆ ಸರ್ಕಾರ'' ಬರಿಯ ಬಾವುಟ, ವಿಶ್ವ ಕನ್ನಡ ಸಮ್ಮೇಳನ ಮುಂತಾದ ಸಂಕೇತಗಳಲ್ಲಿ ಮುಳುಗಿದೆ. ಯೋಜನಾ ಆಯೋಗದ ವಿಸರ್ಜನೆ, ಆರ್ಥಿಕ ಅಧಿಕಾರಗಳ ಮೇಲೆ ಜಿ.ಎಸ್,ಟಿ.ಯ ಪ್ರಹಾರ, - ಇವುಗಳ ಬಗ್ಗೆ ಜನಜಾಗೃತಿ ಮೂಡಿಸದೆ ಬರಿಯ ಸಂಕೇತಗಳ ಬಗ್ಗೆ ಗುಲ್ಲೆಬ್ಬಿಸುವುದು ಬಿಜೆಪಿಯ ಹುಸಿ ರಾಷ್ಟ್ರಪ್ರೇಮದಂತೆ ಚುನಾವಣೆಗಾಗಿ ಹುಸಿ ಭಾಷಾಫ್ರೇಮ, ಹುಸಿ ಸ್ವಾಯತ್ತತೆ ಯ ಆಪಾದನೆಗೆ ಒಳಗಾಗುತ್ತದೆ.

ಭಾಷೆಯ ಬೆಳವಣಿಗೆ, ಹಾಗೂ ಸ್ವಾಯತ್ತತೆ ಮೇಲೆ ದಾಳಿ ಮತ್ತು  ಹಿಂದಿ ಹೇರಿಕೆಗಳ ವಿರುದ್ಧ ಪ್ರತಿರೋಧಧ ನೀತಿಗಳನ್ನು  ಕ್ರಮಗಳನ್ನು ಎತ್ತಿ ಹಿಡಿಯುವ ಚಳುವಳಿಯ ಸಂಕೇತವಾಗಿ  ಮಾತ್ರ ಅಧಿಕೃತ ಅಥವಾ ಅನಧಿಕೃತ ನಾಡ ಬಾವುಟದ ಬಗ್ಗೆ ಅಭಿಮಾನ, ಅರ್ಥಪೂರ್ಣವಾಗುತ್ತದೆ, ಇಲ್ಲದಿದ್ದರೆ  ಅದು ಬರಿಯ ಟೊಳ್ಳು ಸಂಕೇತವಾಗಿ ಉಳಿಯುತ್ತದೆ.