ತುಮಕೂರು ಜಿಲ್ಲಾಧಿಕಾರಿಗೆ ಮುತ್ತಿಗೆ

ಸಂಪುಟ: 
11
ಸಂಚಿಕೆ: 
30
Sunday, 16 July 2017

ಡೆಂಗ್ಯೂ, ಇತ್ಯಾದಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಒತ್ತಾಯಿಸಿ

ಡೆಂಗ್ಯೂ, ಚಿಕೂನ್‍ಗುನ್ಯ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬೇಕು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಬೇಕು, ಖುದ್ದು ಜಿಲ್ಲಾಧಿಕಾರಿಗಳು ವಾರ್ಡ್‍ಗಳಿಗೆ ಭೇಟಿ ನೀಡಿ ವಾಸ್ತವಗಳನ್ನು ತಿಳಿಯಬೇಕು, ಈ ಕೂಡಲೇ ಮಹಾನಗರಪಾಲಿಕೆ ತುರ್ತು ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಸಿಪಿಐ(ಎಂ), ಸಿಐಟಿಯು, ಡಿ.ವೈ.ಎಫ್.ಐ ಸಂಘಟನೆಗಳು ಜಿಲ್ಲಾ ಪಂಚಾಯತ್ ಕಛೇರಿ ಎದುರು ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಬಿ.ಎಸ್.ಎನ್.ಎಲ್. ಕಛೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ನಗರ ಕಾರ್ಯದರ್ಶಿ ಎಸ್. ರಾಘವೇಂದ್ರ ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಸಾಕಷ್ಟು ಮಂದಿ  ಬಲಿಯಾಗಿದ್ದಾರೆ. ತುಮಕೂರು, ಸಿರಾ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕು ಸೇರಿದಂತೆ ಹತ್ತು ತಾಲೂಕುಗಳಲ್ಲೂ ಡೆಂಗ್ಯೂ ಚಿಕನ್‍ಗುನ್ಯಾ, ಮಲೇರಿಯಾ ಸೇರಿದಂತೆ ಅಪಾಯಕಾರಿ ರೋಗಗಳಿಂದ ಸಾವಿರಾರು ಮಂದಿ ಬಳಲುತ್ತಿದ್ದು, ನಿತ್ಯವೂ ಖಾಸಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಒಂದೆಡೆ ಮಳೆ ಇಲ್ಲದೆ ಬರಗಾಲ ಆವರಿಸಿದೆ.

ಇಂತಹ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣವಿಲ್ಲದೆ ತಮಗೆ ಬಂದಿರುವ ಜ್ವರ ಮೊದಲಾದ ಕಾಯಿಲೆಗಳನ್ನು ವೈದ್ಯರಿಗೆ ತೋರಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು ಜಿಲ್ಲಾಧಿಕಾರಿಗಳು ಖುದ್ದು ವಾರ್ಡ್‍ಗಳಿಗೆ ಭೇಟಿ ನೀಡಿ ವಾಸ್ತವತೆಯನ್ನು ತಿಳಿಯಬೇಕು ಮತ್ತು ಕಾಯಿಲೆ ಪೀಡಿತ ಜನರಿಗೆ ಸೂಕ್ತ ಚಿಕಿತ್ಸೆಗಳನ್ನು ಕೊಡಿಸಬೇಕು ಹಾಗೂ ಈ ಕೂಡಲೇ ಮಹಾನಗರಪಾಲಿಕೆ ತುರ್ತು ಸಭೆಯನ್ನು ಕರೆಯಬೇಕು. ನಗರ ಸ್ವಚ್ಚತೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಅಗತ್ಯಕ್ಕೆ ತಕ್ಕಂತೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಲಬೇಕು. ಈಗ ಇರುವ ಪೌರಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು. ಅವರ ಆರೋಗ್ಯದ ಕಡೆಯೂ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಆಗ್ರಹಿಸಿದ ಅವರು ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರಿಗೆ ಪ್ಲೇಟ್‍ಲೆಟ್‍ಗಳು ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಇದೆ. ರೋಗಪೀಡಿತರು ಆಸ್ಪತ್ರೆಗಳಿಗೆ ಬಂದರೆ ಅವರಿಗೆ ಉಚಿತವಾಗಿ ಔಷಧಿ ಮತ್ತು ಪ್ಲೇಟ್‍ಲೆಟ್‍ಗಳು ಸಿಗುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ. ಇದಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರ ಸಮಿತಿ ಸದಸ್ಯ ಇ. ಶಿವಣ್ನ ಮಾತನಾಡಿ ಜ್ವರ ಬಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಸ್ಪತ್ರೆಗಳಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದಂತಹ ಸನ್ನಿವೇಶ ಒದಗಿದೆ. ಡೆಂಗ್ಯೂ ಪೀಡತರು ತುಮಕೂರು ಜಿಲ್ಲೆಯ ಯಾವುದೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ಪ್ಲೇಟ್‍ಲೆಟ್ ಸಿಗದೆ ದೂರದ ಬೆಂಗಳೂರಿಗೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಹಣವಿಲ್ಲದವರು ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಮತ್ತು ಮಾತ್ರೆ ಪಡೆದು ಮನೆಯಲ್ಲಿ ಕೂರುವಂತಾಗಿದೆ. ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು ದಿಕ್ಕುತೋಚದೆ ತಲೆಮೇಲೆ ಕೈ ಹೊತ್ತು ಕೂತಿದ್ದು ಅವರ ನೆರವಿಗೆ ಜಿಲ್ಲಾಡಳಿತ ಬರಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೆಶ್ ಮಾತನಾಡಿ ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸವಾಗಿರುವವರು ಇಂತಹ ಸಾಂಕ್ರಾಮಿಕ ರೋಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಲಾರ್ವಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದಕ್ಕೆ ವ್ಯಾಪಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ತುಮಕೂರು ನಗರದ ಬಹುತೇಕ ಬಡಾವಣೆಗಳಲ್ಲಿ ಚರಂಡಿಗಳ ಸಮಸ್ಯೆ ಇದ್ದು ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯಿದೆ, ನಗರವನ್ನು ಸೊಳ್ಳೆಮುಕ್ತಗೊಳಿಸುವಂತೆ ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಪತ್ರಗಳನ್ನು ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲದೆ ಇರುವುದರಿಂದ ರೋಗಗಳು ಉಲ್ಬಣಗೊಳ್ಳಲು ಕಾರಣವಾಗಿದೆ. ನಗರದ ಸ್ವಚ್ಚತೆ ಸುಮಾರು 750 ಮಂದಿ ಪೌರಕಾರ್ಮಿಕರ ಅವಶ್ಯಕತೆ ಇದ್ದು ಈಗ ಕೇವಲ 350 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೂಕ್ತ ಸುರಕ್ಷತಾ ಸಲಕರಣಗಳು ಇಲ್ಲದೆ ಪೌರಕಾರ್ಮಿಕರಿಗೆ ಕೆಲಸ ಒತ್ತಡ ಇದ್ದು ಅವರು ಕೂಡ ರೋಗಗಳಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಪೌರಕಾರ್ಮಿರನ್ನು ನೇಮಕ ಮಾಡಿಕೊಂಡು ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಆದ್ಯತೆ ನೀಡಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ : ಡೆಂಗ್ಯೂ ನಿಯಂತ್ರಣಕ್ಕೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು ಜೂನ್ 27-28 ರಲ್ಲಿ ಡೆಂಗ್ಯೂ ಹೆಚ್ಚಿವ ಬಗ್ಗೆ ಮಾಹಿತಿ ಬಂದಿದ್ದು ಈಗಾಗಲೇ ಜಿಲ್ಲಾಡಳಿತ ಎಲ್ಲಾ ಅಧಿಖಾರಿಗಳನ್ನು ಕರೆದು ಸಭೆಯನ್ನು ನಡೆಸಲಾಗಿದೆ. ಮತ್ತೆ ಜುಲೈ 14, 2017ರಂದು ಜಿಲ್ಲಾಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರರವರ ಅಧ್ಯಕ್ಷತೆಯಲ್ಲಿ ಎಲ್ಲಾ ಶಾಸಕರುಗಳ ಮತ್ತು ಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಆರೋಗ್ಯಾಧಿಕಾರಿಗಳ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಉಪಾಧ್ಯಕ್ಷ ರವೀಂದ್ರ, ಸಂಘಟನಾ ಕಾರ್ಯದರ್ಶಿ ಜಿ. ದರ್ಶನ್, ಟಿ.ಹೆಚ್. ರಾಮು, ಸಿಡಬ್ಲ್ಯೂಎಫ್‍ಐನ ಜಿಲ್ಲಾ ಖಜಾಂಚಿ, ರಾಮಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಾಪಣ್ಣ, ಶಂಕರಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ, ಸಿ. ಅಜ್ಜಪ್ಪ, ಖಲೀಲ್ ಸೇರಿದಂತೆ ಮುಂತಾದವರು ನೇತೃತ್ವಹಿಸಿದ್ದರು.