ಕುಂಕುಮ, ಬಳೆಗಳಿಗೆ ಜಿಎಸ್‍ಟಿ ವಿನಾಯ್ತಿ ‘ದಿವ್ಯಾಂಗ’ರ ಸಬಲೀಕರಣ ಸಾಧನಗಳಿಗೇಕಿಲ್ಲ ?

ಸಂಪುಟ: 
11
ಸಂಚಿಕೆ: 
30
Sunday, 16 July 2017

 

ಪ್ರಧಾನಿಗಳು ಅಂಗವಿಕಲತೆ ಇರುವ ವ್ಯಕ್ತಿಗಳನ್ನು‘ದಿವ್ಯಾಂಗ’ರೆಂದೇ ಕರೆಯಬೇಕೆಂದು ಹೇಳಿದ್ದರು. ಆದರೆ ಈ ಕಾಳಜಿ ಅವರಿಗೆ ಅನಿವಾರ್ಯವಾದ ಉಪಕರಣಗಳಿಗೆ  ಜಿಎಸ್‍ಟಿ ದರಗಳನ್ನು ವಿಧಿಸುವಾಗ  ಕಾಣಿಸುತ್ತಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಬ್ರೈಲ್ ಟೈಪ್‍ರೈಟರ್‍ಗಳು, ಕಾಗದ, ವ್ಹೀಲ್ ಚೆಯರ್‍ಗಳು, ಇತರ ನೆರವು ಉಪಕರಣಗಳಿಗೆ 5ರಿಂದ 18ಶೇ. ತೆರಿಗೆ, ಊರುಗೋಲು, ಸರ್ಜಿಕಲ್ ಬೆಲ್ಟ್, ದೇಹದ ಕೃತಕ ಭಾಗಗಳು, ಕಿವಿಗೆ ಬಳಸುವ ಉಪಕರಣಗಳು ಇತ್ಯಾದಿಗಳಿಗೆ 12% ಮತ್ತು ಅಂಗವಿಕಲರ ವಾಹನಗಳಿಗೆ,ಸಂವಹನ ಮುಂತಾದವುಗಳ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುವ ಉಪಕರಣಗಳು/ಸಾಧನಗಳಿಗೆ 18% ಜಿಎಸ್‍ಟಿ ವಿಧಿಸಲಾಗಿದೆ.

ಮಾತು ಮತ್ತು ಕೃತಿಯ ನಡುವೆ ಇಂತಹ ಅಂತರಕ್ಕೆ ಆಕ್ರೋಶಕ್ಕೆ ಸ್ಪಷ್ಟೀಕರಣವಾಗಿ ಜುಲೈ 4ರಂದು ಜಿಎಸ್‍ಟಿ ಮಂಡಳಿಯ ಪರವಾಗಿ ಒಂದು ಹೇಳಿಕೆಯನ್ನು ಪ್ರಕಟಿಸಲಾಗಿದೆ. ಆದರೆ ಇದು ಸ್ಪಷ್ಟೀಕರಣ ನೀಡುವ ಬದಲು ಹುಸಿ ದಾವೆಗಳನ್ನೇ ಮುಂದಿಟ್ಟಿದೆ ಎಂದು ಅಂಗವಿಕಲರ ನಡುವೆ ಕೆಲಸ ಮಾಡುತ್ತಿರುವ ಸಂಘಟನೆಗಳು ದಿಗಿಲು ವ್ಯಕ್ತಪಡಿಸಿವೆ.

5% ‘ರಿಯಾಯ್ತಿ ದರ’ವೇ ಎಂದು ಜಿಎಸ್‍ಟಿ ಮಂಡಳಿಯ ಹೇಳಿಕೆಯಲ್ಲಿರುವುದನ್ನು ಪ್ರಶ್ನಿಸುತ್ತ ಇದು ದಾರಿ ತಪ್ಪಿಸುವ ಮಾತು, ಜಿಎಸ್‍ಟಿಯ ಮೊದಲು ಅಂಗವಿಕಲರ ಕಾರುಗಳನ್ನು ಬಿಟ್ಟರೆ ಬೇರೆ ಯಾವ ಉಪಕರಣಕ್ಕೂ ಕರ, ತೆರಿಗೆ ಇರಲಿಲ್ಲ ಎಂಬ ಸಂಗತಿಯತ್ತ ಈ ಸಂಘಟನೆಗಳು ಮಂಡಳಿಯ ಗಮನ ಸೆಳೆದಿವೆ.

ಬಹಳಷ್ಟು ಪೂಜಾ ವಸ್ತುಗಳಿಗೆ ಸಂಪೂರ್ಣ ವಿನಾಯ್ತಿ ನೀಡಿರುವಾಗ, ಕುಂಕುಮ, ಬಳೆ ಬಿಂದಿ ಇತ್ಯಾದಿಗಳಿಗೂ ಜಿಎಸ್‍ಟಿ ವಿನಾಯ್ತಿ ನೀಡಿರುವಾಗ  ವಿಕಲತೆ ಇರುವ ವ್ಯಕ್ತಿಗಳಿಗೆ  ಅದನ್ನು ಮೀರಲು ಅಗತ್ಯವಾದ ಸಾಧನಗಳು/ ಉಪಕರಣಗಳು ಸಿಗದಿದ್ದರೆ ಅವರ ಚಲನೆ, ಶಿಕ್ಷಣ, ಉದ್ಯೋಗ, ಹಕ್ಕುಗಳ ಚಲಾವಣೆ, ಕರ್ತವ್ಯಗಳ ಪಾಲನೆ ಎಲ್ಲವೂ ಕುಂಠಿಗೊಳ್ಳುವುದಾದರೂ, ಅವಕ್ಕೆಲ್ಲ 5% ಜಿಎಸ್‍ಟಿ ವಿಧಿಸಿರುವ ಬಗ್ಗೆ ಅವು ಆಶ್ಚರ್ಯ ವ್ಯಕ್ತಪಡಿಸಿವೆ.

ನಯಗೊಳಿಸದ ವಜ್ರಗಳಿಗೆ 0.25%, ನುಣುಪುಗೊಳಿಸಿದ ವಜ್ರ ಮತ್ತು ಬಂಗಾರಕ್ಕೆ 3% ಜಿಎಸ್‍ಟಿ ನಿಗದಿ ಪಡಿಸಿರುವ ಮಂಡಳಿ ಅಂಗವಿಕಲರು ಮತ್ತು ವಯಸ್ಸಾದವರು ಬಳಸುವ ಡಯಾಪರ್‍ಗಳಿಗೆ 12% ಜಿಎಸ್‍ಟಿ ವಿಧಿಸಿದೆ! ಇವೆಲ್ಲ ಈ ಸರಕಾರದ ಆದ್ಯತೆಗಳು ಏನು ಎಂಬುದನ್ನು ಬಯಲುಗೊಳಿಸಿವೆ ಎಂದು ಈ ಸಂಘಟನೆಗಳು ಖೇದ ವ್ಯಕ್ತಪಡಿಸಿವೆ.

ವಾಸ್ತವವಾಗಿ ಅಂಗವಿಕಲರ ಬಳಕೆಯ ಸಾಧನಗಳಿಗೆ  5ರಿಂದ 18ಶೇ.ದ ವರೆಗೆ ಜಿಎಸ್‍ಟಿ ವಿಧಿಸಲಾಗಿತ್ತು. ಜೂನ್11ರ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಕೇರಳ ಮತ್ತು ತ್ರಿಪುರಾದ ಹಣಕಾಸು ಮಂತ್ರಿಗಳು ಇದನ್ನು ಎತ್ತಿದ ಮೇಲೆಯೇ ಈ 5ಶೇ.ದ ‘ರಿಯಾಯ್ತಿ’ ದರವನ್ನು ನಿಗದಿಪಡಿಸಲಾಯಿತು ಎಂಬ ಸಂಗತಿಯತ್ತವೂ ಈ ಸಂಘಟನೆಗಳು ಗಮನ ಸೆಳೆದಿವೆ.

ಜಿಎಸ್‍ಟಿ ಮಂಡಳಿ ನೀಡಿದ ಮತ್ತೊಂದು ಸಮಜಾಯಿಷಿ ಎಂದರೆ ಈ ಉಪಕರಣಗಳ ದೇಶೀ ಉತ್ಪಾದಕರಿಗೆ ನೆರವಾಗಲು ಈ ದರ’ಗಳನ್ನು ಅನಿವಾರ್ಯವಾಗಿ ವಿಧಿಸಲಾಗಿದೆ ಎಂಬುದು. ಆದರೆ ಇವುಗಳಲ್ಲಿ ಬಹಳಷ್ಟು ಆಧುನಿಕ ಉಪಕರಣಗಳು ಆಮದಾಗುವಂತವು. ಇಲ್ಲಿ ಉತ್ಪಾದಿಸುವ ಸಾಧನಗಳ ವಿಷಯದಲ್ಲೂ ಇದಕ್ಕಾಗಿ ಬಡ ಬಳಕೆದಾರರ ಮೇಲೆ ಹೊರೆ ಹಾಕಬೇಕಿಲ್ಲ, ಈ ಮೊದಲು ಕೂಡ ದೇಶೀ ಉತ್ಪಾದಕರ ಹಿತಗಳಿಗೆ ಗಮನ ನೀಡಲಾಗಿತ್ತು, ಅವರು ಬಳಸುವ ಅಲುಮಿನಿಯಂ ಇತ್ಯಾದಿ ಕಚ್ಚಾಸಾಮಗ್ರಿಗಳಿಗೆ ವಿನಾಯ್ತಿ ನೀಡಲಾಗಿತ್ತು  ಎಂದೂ ಅಂಗವಿಕಲರ ನಡುವೆ ಕೆಲಸ ಮಡುವ ಸಂಘಟನೆಗಳು ಜಿಎಸ್‍ಟಿ ಮಂಡಳಿಯ ಈ ಸಮಜಾಯಿಷಿಯ ಮತ್ತೊಂದು ಹುಸಿ ತರ್ಕವನ್ನು ಬಯಲಿಗೆಳೆದಿದೆ.