6 ಲಕ್ಷ ಅಂಗನವಾಡಿ ನೌಕರರ ದೇಶವ್ಯಾಪಿ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
30
Sunday, 16 July 2017

ಜುಲೈ 10 ರಂದು ದೇಶಾದ್ಯಂತ ಅಂಗನವಾಡಿ ನೌಕರರು ಮೋದಿ ಸರಕಾರದ ವಚನ ಭಂಗದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತ ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ಒಕ್ಕೂಟ (ಎಐಎಫ್‍ಎಡಬ್ಲ್ಯುಹೆಚ್) ಕರೆಯ ಓಗೊಟ್ಟು 24 ರಾಕ್ಯಗಳಲ್ಲಿ 6 ಲಕ್ಷಕ್ಕೂ ಹೆಚ್ಚು ನೌಕರರು ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು.

ಹಲವು ರಾಜ್ಯಗಳಲ್ಲಿ ನೋಟೀಸುಗಳನ್ನು ಜಾರಿ ಮಾಡಿ, ಪರವಾನಿಗೆಗಳನ್ನು ನಿರಾಕರಿಸಿ ಮತ್ತಿತರ ವಿಧಾನಗಳಿಂದ ಪ್ರತಿಭಟನೆಗಳನ್ನು ತಡೆಯಲು ಪ್ರಯತ್ನಿಸಿದರೂ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ನೌಕರರು ಬೀದಿಗಿಳಿದು ಪ್ರತಿಭಟಿಸುವುದನ್ನು ನಿಲ್ಲಿಸಲಾಗಲಿಲ್ಲ ಎಂದು ಎಐಅಡಬ್ಲ್ಯುಹೆಚ್ ಹೇಳಿದೆ.  ಜಮ್ಮು-ಕಾಸ್ಮೀರದ ರಾಜಧಾನಿ ಶ್ರೀನಗರದಲ್ಲಿಯೂ ಪ್ರತಿಭಟನೆ ನಡೆಯಿತು. ಅಸ್ಸಾಂನಲ್ಲಿ ಬಾರೀ ಮಳೆಯನ್ನೂ ಲೆಕ್ಕಿಸದೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ಹಲವು ಕಡೆಗಳಲ್ಲಿ ಬಂಧನಗಳೂ ನಡೆದವು.

ಅಂಗನವಾಡಿ ನೌಕರರು ಮತ್ತು ಸಹಾಯಕಿಯರಿಗೆ ಇದ್ದ ಏಕೈಕ ಸಾಮಾಜಿಕ ಭದ್ರತಾ ಕ್ರಮವಾದ ‘ಅಂಗನವಾಡಿ ಕಾರ್ಯಕರ್ತಿ ಬಿಮಾ ಯೋಜನಾ’ವನ್ನು ಹಿಂತೆಗೆದುಕೊಂಡದ್ದು, ಮತ್ತು ಅಂಗನವಾಡಿಗಳನ್ನು ವೆದಾಮತ ಎಂಬ ದೊಡ್ಡ ಕಾರ್ಪೊರೇಟ್ ಕಂಪನಿಗೆ  ಕೌಶಲ ಅಭಿವೃದ್ಧಿಗೆಂದು ವಹಿಸಿಕೊಡುವ ಒಪ್ಪಂದ ಇವೆರಡರ ವಿರುದ್ಧ ವಿಶೇಷವಾಗಿ ಆಕ್ರೋಶ ವ್ಯಕ್ತವಾಯಿತು.

ಮೋದಿಯವರ ಸರಕಾರ ‘ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಪರಿಸ್ಥಿತಿಗಳ ಪರಾಮರ್ಶೆ ನಡೆಸಲಾಗುವುದು ಮತ್ತು ಪ್ರಿಫಲವನ್ನು ಹೆಚ್ಚಿಸಲಾಗುವುದೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ‘ಪ್ರತಿಫಲವನ್ನು ಹೆಚ್ಚಿಸುವುದಿಲ್ಲ” ಎಂದು ಸ್ಪಷ್ಟವಾಗಿ ಸಆರಿದೆ. ಸರಕಾರದ ಪ್ರತಿನಿಧಿಗಳೂ ಇರುವ ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್‍ಸಿ)ಯ 45ನೇ ಅಧಿವೇಶನ ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಕನಿಷ್ಟ ಸಂಬಳ ಮತ್ತು ಪೆನ್ಶನ್‍ಗೆ ಅವರು ಅರ್ಹರಾಗಬೇಕು ಎಂದು ನಿರ್ಧರಿಸಿದ್ದರೂ ಅದನ್ನು ಕಡೆಗಣಿಸಲಾಗಿದೆ.  2011ರ ನಂತರ ಪ್ರತಫಲವೆಂಬ ಮೊತ್ತವನ್ನು ಪರಿಷ್ಕರಿಸಲಾಗಿಲ್ಲ, ಆದರೆ ಕೆಲಸದ ಅವಧಿಯನ್ನು ಮಾತ್ರ ಹೆಚ್ಚಿಸಿ, ಅಲ್ಪಾವಧಿ ಇದ್ದದ್ದನ್ನು ಪೂರ್ಣಾವಧಿ ಮಾಡಲಾಗಿದೆ.

ಈ ಬೇಡಿಕೆಗಳನ್ನು ನೆನಪಿಸಿರುವ ಈ ಯಶಸ್ವಿ ಪ್ರತಿಭಟನೆಗೆ ಅಂಗನವಾಡಿ ನೌಕರರನ್ನು ಅಭಿನಂದಿಸುತ್ತ ಎಐಅಡಬ್ಲ್ಯುಹೆಚ್ ಈ ಮೇಲಿನ ಹಂತಗಳ ಹೋರಾಟಗಳಿಗೆ ಅಣಿಯಾಗಬೇಕು ಎಂದು ಕರೆ ನೀಡಿದೆ. ದಿಲ್ಲಿಯಲ್ಲಿ ಅನಿರ್ದಿಷ್ಟ ಕಾಲದ ಧರಣಿ(ಪಡಾವ್) ನಡೆಸುವ ಬಗ್ಗೆ ಯೋಚಿಸುತ್ತಿರುವ ಒಕ್ಕೂಟ ಮಕ್ಕಳ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಹಕ್ಕನ್ನು ರಕ್ಷಿಸಲು ಐಸಿಡಿಎಸ್ ಉಳಿಸುವ ಅಂಗನವಾಡಿ ನೌಕರರ ಹೋರಾಟವನ್ನು ಬೆಂಬಲಿಸಬೇಕು ವಿವಿಧ ಜನವಿಭಾಗಗಳ ಸಾಮೂಹಿಕ ಮತ್ತು ವರ್ಗಸಂಘಟನೆಗಳಿಗೆ ಮನವಿ ಮಾಡಿದೆ.