ಹಗರಣಗಳ ಬೆನ್ನಟ್ಟಿರುವ ಸಿಬಿಐ: ನಿಜವಾಗಿಯೂ ಭ್ರಷ್ಟಾಚಾರದ ವಿರುದ್ಧ ಹೋರಾಟವೇ?

ಸಂಪುಟ: 
11
ಸಂಚಿಕೆ: 
30
date: 
Sunday, 16 July 2017
Image: 

ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದವರ ಹಗರಣಗಳ ಸಾಲು-ಸಾಲು, ಅದನ್ನು ಹೊರಗೆಳೆಯಲೆಂದು ಸಿಬಿಐ ಸರಣಿ ದಾಳಿಗಳು ದೇಶದ ಗಮನ ಸೆಳೆದಿದೆ. ಅವರ ಕಾಮಿಡಿಯನ್ ಇಮೇಜಿನಿಂದಾಗಿ ಹಲವರಿಗೆ ಮನರಂಜನೆಯ ಸುದ್ದಿಗಳೂ ಆಗಿವೆ. ಆದರೆ ನಿಜವಾಗಿಯೂ ಇದು ಮೋದಿ ಸರಕಾರದ ಭ್ರಷ್ಟಾಚಾರ-ವಿರೋಧಿ ಸಮರದ ಭಾಗವೇ ಎಂಬ ಬಗ್ಗೆ ಹಲವರಿಗೆ ಸಂದೇಹಗಳಿವೆ.

ಈ ಸಂದೇಹ ಬಂದಿರುವುದು ಬಿಹಾರದ ಬಿಜೆಪಿ ಘಟಕ ಅಲ್ಲಿಯ ಜೆಡಿ(ಯು) ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಹೇಳಿರುವ ಸುದ್ದಿಯಿಂದ ಮಾತ್ರವೇ ಅಲ್ಲ. ಸಿಬಿಐ ಕೇವಲ  ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರ ಸಕ್ರಿಯವಾಗಿರುವುದೇಕೆ ಎಂಬ ಪ್ರಶ್ನೆಯಿಂದಾಗಿ ಕೂಡ.

ಉದಾಹರಣೆಗೆ, ಕಳೆದ ವರ್ಷ ಭಾರೀ sಸುದ್ದಿ ಮಾಡಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿಗಳನ್ನು ಸುತ್ತಿಕೊಂಡ ‘ವ್ಯಾಪರ’ ಹಗರಣದ ಸದ್ಯದ ಕತೆ ಏನು? ಬಾಬಾ ರಾಂದೆವ್ ಕಂಪನಿಗೆ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಭಾರೀ ಡಿಸ್ಕೌಂಟಿನಲ್ಲಿ ಭೂಸ್ವಾಧೀನ ಮಾಡಿಕೊಟ್ಟ ಆಪಾದನೆ ಇತ್ತೀಚೆಗೆ ಬಂದಿದೆ. ಅದರ ತನಿಖೆ ನಡೆಯುತ್ತದೆಯೇ? ಅಷ್ಟೇ ಏಕೆ, ಇತ್ತೀಚೆಗೆ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‍ಗಳ ಅಸೀಮಿತ ಅನಾಮಧೇಯ ವಂತಿಗೆಗೆ ಅವಕಾಶ ಕಲ್ಪಿಸುವ ಚುನಾವಣಾ ಬಾಂಡ್ ಚುನಾವಣಾ ಆಯೋಗವೇ ಒಂದು ಪ್ರತಿಗಾಮಿ ಹೆಜ್ಜೆಯೆಂದಿರುವಾಗ ಸಿಬಿಐ ದಾಳಿಗಳು ಭ್ರಷ್ಟಾಚಾರ-ವಿರೋಧಿ ಸಮರದ ಭಾಗ ಎಂದು ನಂಬಲು ಸಾಧ್ಯವೇ?

ವಾಸ್ತವವಾಗಿ ಇದು ಅಧಿಕಾರ ಕಸಿದುಕೊಳ್ಳುವ ಹೊಸದೊಂದು ‘ಮೋದಿ ಅಧಿಕಾರ ಮಾದರಿ’ ಎಂದೊಬ್ಬ ವಿಶ್ಲೇಷಕರು ಹೇಳಿದ್ದಾರೆ. ಇದು ಯೋಚಿಸಬೇಕಾದ ಸಂಗತಿ.

 

 

- ವೇದರಾಜ ಎನ್ ಕೆ.