ಅಚ್ಛೇ ದಿನ್ ಅಂದರೆ ‘ಫೇಕ್’ನ ದಿನಗಳು!

ಸಂಪುಟ: 
11
ಸಂಚಿಕೆ: 
30
date: 
Sunday, 16 July 2017
Image: 

ಪಶ್ಚಿಮ ಬಂಗಾಲದ ಬದುರಿಯ/ಬಸಿರ್ಹಾಟ್ ಮೂರು ದಿನಗಳು ಹೊತ್ತಿ ಉರಿಯುವಂತೆ ಮಾಡಿದ ಫೇಸ್‍ಬುಕ್‍ನ ಒಂದು ಅಪಮಾನಕರ ಕಾರ್ಟೂನ್ ದೇಶದ ಒಳಿತಿನ ಬಗ್ಗೆ ಪ್ರಾಮಾಣಿಕ ಕಾಳಜಿಯಿರುವವರು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಎಚ್ಚರಿಕೆಯಿಂದ ಬಳಸುವಂತೆ ಮಾಡಬೇಕಿತ್ತು. ಆದರೆ, ತದ್ವಿರುದ್ಧವಾಗಿ, ಅದರಿಂದ ಹುಸಿ(ಫೇಕ್) ಫೋಟೋಗಳ ಸರಣಿಯೇ ಆರಂಭವಾಗಿರುವುದು ಬಹುಶಃ ಅಚ್ಛೇದಿನ್‍ಗಳು ನಿರ್ಮಿಸುತ್ತಿರುವ ‘ನವಭಾರತ’ಕ್ಕೆ ಅನುಗುಣವಾಗಿಯೇ ಇದೆ. ಏಕೆಂದರೆ ಈ ಎಲ್ಲ ಫೇಕ್‍ಗಳನ್ನು ಹಾಕಿರುವುದು ಕೇಂದ್ರದಲ್ಲಿ ಆಳುತ್ತಿರುವ ಪಕ್ಷದ ಮುಖಂಡರೇ. ಇವರು ಯಾರೂ 17 ವರ್ಷದ ಬಾಲಕ ಶೌಬಿಕ್‍ನ ಫೇಸ್‍ಬುಕ್ ಕಾರ್ಟೂನನ್ನು (ಇದು ತಾನು ಹಾಕಿದ್ದಲ್ಲ ಎಂದು ಆತ ಪೋಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ) ಚಕಾರವೆತ್ತದಿರುವುದೂ ಆಶ್ಚರ್ಯದ ಸಂಗತಿಯೇನಲ್ಲ.

ಬದಲಿಗೆ, ಹಲ್ಲೆಗೊಳಗಾದ ಒಬ್ಬ ಹೆಂಗಸು ಮತ್ತು ಗಂಡಸಿನ ಫೊಟೋ ಹಾಕಿ ಇದು ಶೌಬಿಕ್‍ನ ತಂದೆ-ತಾಯಿಗಾದ ಪರಿಸ್ಥಿತಿ ಎಂದು ಗೀತಾಎಸ್‍ಕಪೂರ್ ಹೆಸರಿನ ಟ್ವೀಟ್ ಸಾರಿತು. ಅದನ್ನು ಬಹಳ ಮಂದಿ ರಿಟ್ವೀಟ್ ಮಾಡಿದರು. ಶೌಬಿಕ್‍ನ ತಾಯಿ ಆತ ಮಗುವಾಗಿದ್ದಾಗಲೇ ತೀರಿಕೊಂಡಿದ್ದಳಂತೆ. ವಾಸ್ತವವಾಗಿ ಆಕೆ(?) ಹಾಕಿದ್ದ ಫೋಟೋ ಬಾಂಗ್ಲಾದೇಶದ್ದು ಎಂದು ಕಂಡು ಬಂದಿದೆ.

ಶೌಬಿಕ್‍ನ ಫೇಸ್‍ಬುಕ್ ಚಿತ್ರದಿಂದ ‘ಉದ್ರೇಕಗೊಂಡ ಮುಸ್ಲಿಂ ಜನಜಂಗುಳಿಯಿಂದ ಶೌಬಿಕ್‍ನ ಕುಟುಂಬವನ್ನು ಕಾಪಾಡಿದ್ದು ಅಮಿರುಲ್ ಎಂಬ ಸ್ಥಳೀಯ ಮುದುಕ, ಫೈರ್‍ಬ್ರಿಗೇಡಿಗೆ ಫೋನ್ ಮಾಡಿದ್ದು ಮಕ್ಸೂದ್ ಎಂಬ ಹುಡುಗ, ಅವರನ್ನು ಸುರಕ್ಷಿತ ಆಶ್ರಯತಾಣಕ್ಕೆ ಒಯ್ದದ್ದು ರಫಿಕುಲ್, ದ್ವೇಷ ಹರಡುವವರೇ ಇದನ್ನು ಗಮನಿಸಿ’  ಎಂಬ  ಎಂಬ ದೀಪಾ ಖದರ್ ಎಂಬವರ ಟ್ವೀಟ್‍ನ್ನು ಇವರೆಲ್ಲ ಗಮನಿಸಲೇ ಇಲ್ಲ, ಸಹಜ ತಾನೇ?

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಇನ್ನೊಂದು ಹುಸಿ ಫೋಟೋವನ್ನು ಹಾಕಿದ್ದು ಹಿರಿಯ ಬಿಜೆಪಿ ನಾಯಕರಾದ ವಿಜೇತಾ ಮಲಿಕ್. ಅವರು ‘ಬದುರಿಯಾದಲ್ಲಿ ಹಿಂದು ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿದೆ’ ಎಂದು ಹಾಕಿದ ಫೋಟೋ ನಿಜವಾಗಿ ಭೋಜ್ಪುರಿ ಸಿನೆಮಾವೊಂದರ ದೃಶ್ಯ! ಈ ಫೇಕ್ ಚಿತ್ರದ ಆಧಾರದಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಕೂಡ ‘ಹಿಂದೂ ಸೋದರಿಯರು, ಪುತ್ರಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಎಂದು ಟ್ವಿಟ್ ಮಾಡಿದ್ದಾರಂತೆ!

ಅಚ್ಛೇ ದಿನ್ ಮಂದಿಯ ಈ ಫೇಕ್ ಚಳುವಳಿಯನ್ನು ಒಂದು ತಮಾಷೆಯ ಮಟ್ಟಕ್ಕೇರಿಸಿದ್ದು  ರಾಷ್ಟ್ರದ ರಾಜಧಾನಿಯಲ್ಲಿ  ಜಂತರ್ ಮಂತರ್‍ನಲ್ಲಿ ‘ಬಂಗಾಲ ಉಳಿಸಿ’ ಪ್ರತಿಭಟನೆಗೆ ಫೇಸ್‍ಬುಕ್ ಕರೆ ನೀಡಿದ ಬಿಜೆಪಿಯ ಒಬ್ಬ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ. ಇದರಲ್ಲಿ ಆಕೆ ಬದುರಿಯಾದ ಹಿಂಸಾಚಾರವನ್ನು ತೋರಿಸಲು ಹಾಕಿದ ಚಿತ್ರ 15 ವರ್ಷಗಳ ಹಿಂದಿನದ್ದು, ಅಷ್ಟೇ ಅಲ್ಲ, ಅವರ ಮಾದರಿ ರಾಜ್ಯ ಗುಜರಾತಿನದ್ದು. ಹೌದು, ಈಗಿನ ಪ್ರಧಾನಿ ಅಲ್ಲಿನ ಮುಖ್ಯಮಂತ್ರಿಗಳಾಗಿದ್ದಾಗ ನಡೆದ 2002ರ ಭೀüಕರ ಹತ್ಯಾಕಾಂಡದ್ದು! ‘ಮೋದಿಯವರ ಸಾಧನೆಗಳ ಕೀರ್ತಿಯನ್ನು ಮಮತಾರವರಿಗೆ ಕೊಟ್ಟಿದ್ದಾರೆ’ ಎಂದೊಬ್ಬರು ಇದಕ್ಕೆ ಟಿಪ್ಪಣಿ ಮಾಡಿದ್ದಾರೆ.

ಬದುರಿಯ ಹಿಂಸಾಚಾರದ ಕುರಿತ ಒಂದು ಗಂಭೀರ ವ್ಯಂಗ್ಯಚಿತ್ರವನ್ನೇ ಶುದ್ಧ ಕೋಮುವಾದಿ ವ್ಯಂಗ್ಯಚಿತ್ರವಾಗಿ ಫೇಕ್ ಮಾಡಿದ್ದನ್ನು ಪ್ರತೀಕ್ ಸಿನ್ಹ ಬಯಲಿಗೆಳೆದಿದ್ದಾರೆ.