ಕಾರ್ಪೊರೇಟ್ ಸುಸ್ತಿಸಾಲಗಳು: ರಾಷ್ಟ್ರೀಯ ಚರ್ಚೆಯಿಂದ ಹೊರಗಿಡುವ ಹುನ್ನಾರ

ಸಂಪುಟ: 
11
ಸಂಚಿಕೆ: 
30
date: 
Sunday, 16 July 2017

ಜೂನ್ 14 ರಂದು ಕೇಂದ್ರ ಸಂಪುಟ ಮತ್ತೊಂದು ಕರಾಳ ಮಸೂದೆಯನ್ನು ಸಂಸತ್ತಿನ ಮುಂದೆ ತರಲು ನಿರ್ಧರಿಸಿದೆ. ‘ಹಣಕಾಸು ಇತ್ಯರ್ಥ ಮತ್ತು ಠೇವಣಿ ವಿಮಾ ಮಸೂದೆ 2016’ ಅಥವ ಸಂಕ್ಷಿಪ್ತವಾಗಿ ಎಫ್‍ಆರ್‍ಡಿಐ ಮಸೂದೆ ಎಂಬುದು ಇದರ ಹೆಸರು. ಇದು ರಾತ್ರಿ ಬೆಳಗಾಗುವಷ್ಟರಲ್ಲಿ ಒಂದು ಬ್ಯಾಂಕು ಅಥವ ವಿಮಾ ಕಂಪನಿಯನ್ನು ಮುಚ್ಚಿ ಬಿಡುವ ಕಾನೂನು ತರುವ ಉದ್ದೇಶದ ಮಸೂದೆ. ಇದು ಲಕ್ಷಾಂತರ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ನೌಕರರನ್ನು ಬೀದಿಗೆಸೆಯಲು ಮಾತ್ರವಲ್ಲ, ಕೋಟ್ಯಂತರ ಠೇವಣಿದಾರರನ್ನೂ ಮುಳುಗಿಸಿ ಬಿಡಲು ಅವಕಾಶ ಕಲ್ಪಿಸುವ ಮಸೂದೆ ಎಂದು ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‍ಐ) ಜೂನ್ 29ರಂದು ನೀಡಿರುವ ಹೇಳಿಕೆಯಲ್ಲಿ ಬಲವಾಗಿ ಖಂಡಿಸಿದೆ.

ಈ ಮಸೂದೆಯ ಪ್ರಕಾರ ಒಂದು ‘ರೆಸೊಲ್ಯುಶನ್ ಕಾರ್ಪೊರೇಶನ್’ ಅಂದರೆ ಇತ್ಯರ್ಥ ನಿಗಮವನ್ನು ರಚಿಸಲಾಗುವುದು. ಇದರ ಆಡಳಿತ ಮಂಡಳಿಯಲ್ಲಿ ಕೇವಲ ಸರಕಾರದ ಪ್ರತಿನಿಧಿಗಳು ಇರುತ್ತಾರೆ. ಈ ಮಂಡಳಿಗೆ ಅಪಾರ ಅಧಿಕಾರಗಳನ್ನು ಕೊಡಲಾಗಿದೆ. ಅದು ಸುಸ್ಥಿತಿಯಲ್ಲಿಲ್ಲ ಎಂದು ಭಾವಿಸುವ ಯಾವುದೇ ಬ್ಯಾಂಕ್ ಅಥವ ವಿಮಾಕಂಪನಿಯನ್ನು ಅಥವ ಇತರ ಹಣಕಾಸು ಸಂಸ್ಥೆಗಳನ್ನು ವಿಲೀನಗೊಳಿಸುವ, ಮುಚ್ಚುವ, ಸ್ವಾಧೀನ ಪಡಿಸಿಕೊಳ್ಳುವ ಅಥವ ಇತರ ಖಾಸಗಿ ಅಥವ ಸಾರ್ವಜನಿಕ ಕಂಪನಿ/ಸಂಸ್ಥೆಗಳಿಗೆ ವಹಿಸುವ ಅಧಿಕಾರವನ್ನು ಹೊಂದಿದೆ. ಹಣಕಾಸು ಸಂಸ್ಥೆ ಎಂದರೆ  ಸ್ಟೇಟ್ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪೇಮೆಂಟ್ ಬ್ಯಾಂಕುಗಳು, ಎಲ್‍ಐಸಿ ಕೂಡ ಸೇರಿದಂತೆ ಸಾರ್ವಜನಿಕ ವಲಯದ ವಿಮಾಕಂಪನಿಗಳು ಕೂಡ ಸೇರಿರುತ್ತವೆ.

ಹೀಗೆ ಮಾಡಿದಾಗ ಸಂಬಂಧಪಟ್ಟ ಕಂಪನಿಗಳ ನೌಕರರ ಸೇವೆಯನ್ನು ನಿಲ್ಲಿಸುವ, ಅಂದರೆಅವರನ್ನು ಕೆಲಸದಿಂದ ತೆಗೆದು ಹಾಕುವ, ವರ್ಗಾಯಿಸುವ ಅಥವ ಅವರ ಸಂಬಳ-ಸಾರಿಗೆಯಲ್ಲಿ ಕಡಿತ ತರುವ ಅಧಿಕಾರವನ್ನೂ ಈ ನಿಗಮಕ್ಕೆ ಕೊಡಲಾಗುತ್ತದೆ.

1961ರಲ್ಲಿ ಬ್ಯಾಂಕುಗಳಲ್ಲಿ ಅಥವ ಇತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಉಳಿತಾಯಗಳಿಗೆ ವಿಮಾ ರಕ್ಷಣೆ ನೀಡಲು ಡಿಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಎಂಬ ಸಂಸ್ಥೆಯನ್ನು ರಚಿಸಲಾಗಿತ್ತು. ಮೋದಿ ಸಂಪುಟ ಮಂಜೂರು ಮಾಡಿರುವ ಈ ಹೊಸ ಮಸೂದೆ ಆ ಸಂಸ್ಥೆಯನ್ನು ಮುಚ್ಚುವ ನಿರ್ದಾರ ಮಾಡಿದೆ ಮತ್ತು ಅದರ ಬದಲು  ಹೊಸ ‘ಇತ್ಯರ್ಥ ನಿಗಮ’ವೇ ಠೇಣಿಗಳಿಗೆ ವಿಮಾರಕ್ಷಣೆ ಕೊಡುತ್ತದೆ ಎಂದು ಹೇಳಲಾಗಿದೆ. ಆದರೆ ಇದು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವಿಮೆಯನ್ನು ಕೊಡುವುದಿಲ್ಲ, ಅದನ್ನು ಕೂಡ ಕಂತುಗಳಲ್ಲಿ, ಯಾವುದೇ ಸಮಯ ಮಿತಿಯಿಲ್ಲದೆ ತನಗೆ ಅನುಕೂಲವಾದಾಗ ಕೊಡುವ ಅಧಿಕಾರವನ್ನು ಅದು ಹೊಂದಿರುತ್ತದೆ.

ಈಗ ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕುಗಳು ‘ಎನ್‍ಪಿಎ’ ಅಂದರೆ ಕಾರ್ಯನಿರ್ವಹಿಸದ ಆಸ್ತಿಗಳು ಎಂದು ಹೆಸರಿಸಿರುವ ವಾಪಾಸು ಬಾರದ ಕೆಟ್ಟ ಸಾಲಗಳ ಹೊರೆಯಿಂದ ನರಳುತ್ತಿದ್ದು, ಈ ಮಸೂದೆ ಹೇಳುವ ಅಪಾಯದ ಸ್ಥಿತಿಯಲ್ಲಿವೆ ಎಂಬದು ಈಗ ಸರ್ವ ವಿದಿತ. ಯಾವುದೇ ಉತ್ಪಾದಕ ಕಂಪನಿಯಲ್ಲಿ ‘ಕಸರು’, ಅಥವ ಹಾಳಾದ ಅಂಶಗಳು ಸ್ವಲ್ಪಮಟ್ಟಿಗೆ ಇರುತ್ತವೆ. ಅದೇ ರೀತಿಯಲ್ಲಿ ಬ್ಯಾಂಕುಗಳಲ್ಲಿಯೂ ನೀಡಿದ ಸಾಲಗಳು ಹಿಂದಕ್ಕೆ ಬರದ್ದು ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ.

ನಿಜ, ಈಗ ರಾಷ್ಟ್ರೀಕೃತ ಬ್ಯಾಂಕುಗಳ ಕೆಟ್ಟ ಸಾಲಗಳ ಹೊರೆ ಅಪಾಯಕಾರಿ ಮಟ್ಟಕ್ಕೆ ಏರಿದೆ. ಆದರೆ ಇದಕ್ಕೆ ಆ ಬ್ಯಾಂಕುಗಳ ನೌಕರರ ಕಾರ್ಯದಕ್ಷತೆ ಕಾರಣವಾಗಿಲ್ಲ, ಬದಲಿಗೆ ಕೆಲವು ದೊಡ್ಡ ಕಾರ್ಪೊರೇಟ್‍ಗಳು, ಕೆಲವು ರಾಜಕಾರಣಿಗಳು ಮತ್ತು ಬ್ಯಾಂಕಿನ ಉನ್ನತ ಅಧಿಕಾರಿಗಳ ಶಾಮೀಲು ಕಾರಣವಾಗಿದೆ ಎಂಬುದು ಕೂಡ ಈಗ ಎಲ್ಲರಿಗೂ ತಿಳಿದಿರುವ ಸಂಗತಿ. ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಎನ್‍ಪಿಎಗಳಲ್ಲಿ 5 ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾಲ ಪಡೆದ ಕಾರ್ಪೊರೇಟ್‍ಗಳ ಪಾಲು 88.4% ಎಂಬ ಸಂಗತಿಯತ್ತ ಬಿಇಎಫ್‍ಐ ಗಮನ ಸೆಳೆದಿದೆ. ಇದರಲ್ಲಿ 25%ದಷ್ಟು ಕೇವಲ 12 ಅತಿ ದೊಡ್ಡ ಕಾಪೊರೇಟ್ ಗುಂಪುಗಳದ್ದು ಎಂಬುದೂ ಗಮನಾರ್ಹ.

ಈ ಎನ್‍ಪಿಎ ಹೊರೆ ಪ್ರಸಕ್ತ ಸರಕಾರದ ಅಡಿಯಲ್ಲಿ ಭಾರೀ ವೇಗದಿಂದ ಹೆಚ್ಚಿದೆ ಎಂಬುದೂ ಎಲ್ಲರೂ ಕಾಣುತ್ತಿರುವ ಸಂಗತಿ. ಆದರೆ, ಬಿಇಎಫ್‍ಐ ಟೀಕಿಸಿರುವಂತೆ,  ಈ ಸರಕಾರಕ್ಕೆ ಸುಸ್ತಿದಾರ ಕಾರ್ಪೊರೇಟ್‍ಗಳಿಂದ ವಸೂಲಿ ಮಾಡುವ ರಾಜಕೀಯ ಇಚ್ಚಾಶಕ್ತಿ ಇಲ್ಲ. ಬದಲಿಗೆ ಸಾಲ ಪುನರ್ರಚನೆ, ಆಸ್ತಿ ಪುನರ್ರಚನೆ ಇತ್ಯಾದಿಯಿಂದ ಸಾಲಮನ್ನಾದ ವರೆಗೂ  ವಿವಿಧ ರೀತಿಗಳಲ್ಲಿ ಅವಕ್ಕೆ ಪೋಷಣೆ ನೀಡುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದೆ, ಈ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ ಕೊನೆಗೆ ಅವನ್ನು ಈ ಹೊಸ ಮಸೂದೆಯ ಮೂಲಕ  ಮುಚ್ಚಿ ಬಿಡುವುದು ಅಥವ ಖಾಸಗಿ ಕುಳಗಳಿಗೆ ಕೊಡ ಬಯಸುತ್ತದೆ.

ಈ ಮಸೂದೆಯ ಕರಾಳ ಸ್ವರೂಪ ಜನರ ಠೇವಣಿಗಳ ಭದ್ರತೆ ಮತ್ತು ನೌಕರರ ಸೇವಾಭದ್ರತೆಗೆ ಧಕ್ಕೆ ತರುವುದಂತೂ ಖಂಡಿತಾ ಇದೆ. ಇದು ಮೇಲ್ನೋಟಕ್ಕೇ ಸ್ಪÀಷ್ಟ. ಆದರೆ ಇನ್ನೂ ಹೆಚ್ಚು ಅಪಾಯಕಾರಿ ಸಂಗತಿಯೆಂದರೆ ಈ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಅಸ್ತಿತ್ವದ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಯ ವ್ಯಾಪ್ತಿಯಿಂದ ಹೊರತೆಗೆದು ಅಧಿಕಾರಶಾಹಿ ನಿರ್ದೇಶನಗಳಿಗೆ ಒಳಪಡಿಸಲಾಗುತ್ತದೆ. ಇದನ್ನು ಶಾಸನವಾಗಿಸುವ ಪ್ರಕ್ರಿಯೆಯನ್ನು ರಾಷ್ಟ್ರಪತಿ ಚುನಾವಣೆಗಳ ನಂತರ ತ್ವರಿತಗೊಳಿಸಬಹುದು ಎಂಬ ಸಂದೇಹವನ್ನು ಬಿಇಎಫ್‍ಐ ವ್ಯಕ್ತಪಡಿಸಿದೆ.

ಇದು ರಾಷ್ಟ್ರ-ವಿರೋಧಿ ಮಸೂದೆ ಎಂಬ ಬಗ್ಗೆಯಾವುದೇ ಸಂದೇಹವಿಲ್ಲ ಎಂದಿರುವ ಬಿಇಎಫ್‍ಐ  ಇದರ ವಿರುದ್ಧ ಬ್ಯಾಂಕ್ ನೌಕರರೆಲ್ಲ  ಬಲವಾದ ಐಕ್ಯತೆಯೊಂದಿಗೆ ಬಂಡೆಗಲ್ಲಿನಂತೆ ಒಂದಾಗಿ ದೃಢತೆಯಿಂದ, ಧೈರ್ಯವಾಗಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದೆ.

ಜೂನ್ 28ರಂದು ಮುಂಭೈಯಲ್ಲಿ ನಡೆದ ಯುಎಫ್‍ಬಿಯು(ಬ್ಯಾಂಕ್ ನೌಕರರ ಐಕ್ಯ ವೇದಿಕೆ) ಕೂಡ ಇದನ್ನು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣದ ಇತರ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಿ ಆಗಸ್ಟ್ 22ರಂದು ಅಖಿಲ ಭಾರತ ಮುಷ್ಕರ ನಡೆಸಲು ನಿರ್ಧರಿಸಿದೆ. ಇದರ ನಂತರ ಸಪ್ಟಂಬರ್ 15ರಂದು ದಿಲ್ಲಿಯಲ್ಲಿ ಒಂದು ಬೃಹತ್ ಧರಣಿ ನಡೆಸಲು ಮತ್ತು ಅಕ್ಟೋಬರ್/ನವಂಬರ್‍ನಲ್ಲಿ ಎರಡು ದಿನಗಳ ಮುಷ್ಕರ ನಡೆಸಲು ನಿರ್ಧರಿಸಿದೆ.

ಇಂತಹ ಒಂದು ಕರಾಳ ಕಾನೂನು ತರುವ ಪ್ರಯತ್ನವನ್ನು ಪ್ರತಿರೋಧಿಸಲು ತಮ್ಮ ದನಿಯನ್ನು ಎತ್ತಬೇಕು ಎಂದು ದೇಶದ ಎಲ್ಲ ಪ್ರಜಾಪ್ರಭುತ್ವವಾದಿಗಳಿಗೆ ಮತ್ತು ಜನತೆಗೆ ಬಿಇಎಫ್‍ಐ ಮನವಿ ಮಾಡಿದೆ.
 

 

- ವೇದರಾಜ ಎನ್ ಕೆ.