Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಜಿಎಸ್‍ಟಿ: ಮೋದಿಯವರ ಒಂದು ಅಪಾಯಕಾರಿ ಹೋಲಿಕೆ

ಸಂಪುಟ: 
11
ಸಂಚಿಕೆ: 
30
date: 
Sunday, 16 July 2017
Image: 

ಮೋದಿಯವರು ನೆಹರೂರವರ ಅನುಕರಣೆ ಮಾಡುವ ಪ್ರಯತ್ನದಲ್ಲಿ ತಮ್ಮ ಜಿಎಸ್‍ಟಿ ಮಧ್ಯರಾತ್ರಿ ಭಾಷಣದಲ್ಲಿ ಅವರ ಹೆಸರನ್ನು ಪ್ರಸ್ತಾಪಿಸಿದ್ದು ಒಂದು ಸಲ ಮಾತ್ರ. ಮತ್ತೆ-ಮತ್ತೆ ಅವರು ನೆನಪಿಸಿಕೊಂಡ ವ್ಯಕ್ತಿಯೆಂದರೆ ವಲ್ಲಭಭಾಯಿ ಪಟೇಲ್. ಪಟೇಲರು ಮಾಡಿದ ಭಾರತೀಯ ಸಂಘದೊಡನೆ ದೇಶೀ ರಾಜರುಗಳ ಸಂಸ್ಥಾನಗಳ ಸಮಗ್ರೀಕರಣ ಭಾರತವನ್ನು ಒಂದುಗೂಡಿಸುವಲ್ಲಿ ಯಾವ ಪಾತ್ರವನ್ನು ವಹಿಸಿತೋ ಅದೇ ಪಾತ್ರವನ್ನು ಜಿಎಸ್‍ಟಿ ವಹಿಸುತ್ತಿದೆ ಎಂಬುದೇ ಅವರು ತಮ್ಮ ಭಾಷಣದಲ್ಲಿ ಹೇಳಲು ಶ್ರಮಪಟ್ಟಿರುವ ಅಂಶ.  ಆದರೆ ಮೋದಿಯವರ ಈ ಹೋಲಿಕೆ ಸಂಪೂರ್ಣ ತಪ್ಪು. ದೇಶದ ಪ್ರಜಾಸತ್ತಾತ್ಮಕ ಕ್ರಾಂತಿಯ ಕಿಂಚಿತ್ತೂ ತಿಳುವಳಿಕೆ ಇಲ್ಲದ ಒಬ್ಬ ವ್ಯಕ್ತಿ ಮಾತ್ರವೇ ಇಂತಹ ತಪ್ಪು ಮಾಡಲು ಸಾಧ್ಯ. ಇದರ ಹಿಂದಿರುವ ಕೇಂದ್ರೀಕರಣ ಮತ್ತು ಏಕರೂಪತೆಯ ಮೋದಿ ಮತ್ತು ಹಿಂದುತ್ವ  ಗೀಳು ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಒಂದು ತೀವ್ರ ಬೆದರಿಕೆಯನ್ನು ಒಡ್ಡಿದೆ ಎನ್ನುತ್ತಾರೆ  -                                                     ಪ್ರೊ.ಪ್ರಭಾತ್ ಪಟ್ನಾಯಕ್

ಜುಲೈ 1 ರಂದು ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಸರಕು ಮತ್ತು ಸೇವೆಗಳ ತೆರಿಗೆಯನ್ನು ಉದ್ಘಾಟಿಸುತ್ತ ನರೇಂದ್ರ ಮೋದಿಯವರು ಮಧ್ಯರಾತ್ರಿ ಭಾಷಣ ಕೊಡುತ್ತ ಜವಹರಲಾಲ್ ನೆಹರೂರವರ ಅನುಕರಣೆ ಮಾಡಲು ಪಟ್ಟ ಪ್ರಯತ್ನವನ್ನು ಬಹುಶಃ ಒಂದು ವಿಲಕ್ಷಣ ತಮಾಷೆ ಎಂದು ತಳ್ಳಿ ಬಿಡಬಹುದಾಗಿತ್ತು. ಅವರು ಒಂದು ಯಃಕಶ್ಚಿತ್ ತೆರಿಗೆ ಸುಧಾರಣೆಯನ್ನು ಭಾರತದ ಸ್ವಾತಂತ್ರ್ಯ ಗಳಿಕೆಯಂತಹ ಮಹಾನ್ ಘಟನೆಯೊಂದಿಗೆ ಹೋಲಿಸಿದ್ದು ಅಥವ ಅದೇ ಮಟ್ಟದಲ್ಲಿಟ್ಟು ಮಾತನಾಡಿದ್ದು ತಾನೇ ತೆರಿಗೆ ಸುಧಾರಣೆಯ ಕರ್ತೃ ಎಂದು ಹೆಮ್ಮೆ ಪಡುವ ಒಬ್ಬ ವ್ಯಕ್ತಿಯ ಸ್ವಪ್ರತಿಷ್ಠೆಯ ನಿರುಪದ್ರವಿ ಪ್ರದರ್ಶನವಷ್ಟೇ ಎಂದೂ ಬದಿಗೆ ತಳ್ಳಬಹುದಾಗಿತ್ತು. ಆದರೆ ಅವರು ಈ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕೊಟ್ಟಿರುವ ಹೋಲಿಕೆ ಅತ್ಯಂತ ಅಪಾಯಕಾರಿ, ಅದಕ್ಕೆ ಸವಾಲು ಹಾಕದಿರಲು ಸಾಧ್ಯವಿಲ್ಲ, ಏಕೆಂದರೆ ಅದು ನಮ್ಮ ಭವಿಷ್ಯವನ್ನು ಬಾಧಿಸುವ ಒಂದು ಮಾನಸಿಕ ನಿಲುವನ್ನು ಪ್ರತಿನಿಧಿಸುತ್ತದೆ.

ಮೋದಿಯವರು ಜವಹರಲಾಲ್ ನೆಹರೂರವರ ಹೆಸರನ್ನು ಪ್ರಸ್ತಾಪಿಸಿದ್ದು ಒಂದು ಸಲ ಮಾತ್ರ. ಮತ್ತೆ-ಮತ್ತೆ ಅವರು ನೆನಪಿಸಿಕೊಂಡ ವ್ಯಕ್ತಿಯೆಂದರೆ ವಲ್ಲಭಭಾಯಿ ಪಟೇಲ್. ಈ ಹಿಂದೆ ಪಟೇಲರು ಮಾಡಿದ ಭಾರತೀಯ ಸಂಘದೊಡನೆ ದೇಶೀ ರಾಜರುಗಳ ಸಂಸ್ಥಾನಗಳ ಸಮಗ್ರೀಕರಣ ಭಾರತವನ್ನು ಒಂದುಗೂಡಿಸುವಲ್ಲಿ ಯಾವ ಪಾತ್ರವನ್ನು ವಹಿಸಿತೋ ಅದೇ ಪಾತ್ರವನ್ನು ಜಿಎಸ್‍ಟಿ ವಹಿಸುತ್ತಿದೆ ಎಂಬುದೇ ಅವರು ತಮ್ಮ ಭಾಷಣದಲ್ಲಿ ಹೇಳಲು ಶ್ರಮಪಟ್ಟಿರುವ ಅಂಶ. 

ಭಾರತೀಯ ಸಂಘ ದೊಡನೆ ದೇಶೀ ರಾಜರುಗಳ ಸಂಸ್ಥಾನಗಳ ಸಮಗ್ರೀಕರಣ ಭಾರತದ ಪ್ರಜಾಪ್ರಭುತ್ವ ಕ್ರಾಂತಿಯ ಭಾಗವಾಗಿತ್ತು. ದೇಶದ ಜನತೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದತ್ತ ಜಾಗೃತ ರಾಗಬೇಕಾದರೆ ಅವರು ದೇಶೀ ರಾಜರುಗಳ ಪಾಳೆಯಗಾರೀ ಶೋಷಣೆಯನ್ನು ಕಿತ್ತೆಸೆಯ ಬೇಕಾಗಿತ್ತು. ‘ಬ್ರಿಟಿಶ್ ಭಾರತ’ದಲ್ಲಿ ವಸಾಹತುಶಾಹಿ-ವಿರೋಧಿ ಹೋರಾಟ ನಡೆಯುತ್ತಿರುವಾಗಲೇ, ಸಂಸ್ಥಾನಗಳಲ್ಲಿ ದೇಶೀ ಆಳರಸರ ಆ ಶೋಷಣೆಯ ವಿರುದ್ಧ ಜನ ಮಹಾನ್ ಬಂಡಾಯ ನಡೆಸಿದ್ದರು. ಆದ್ದರಿಂದ ಸಮಗ್ರೀಕರಣ ಎಂಬುದನ್ನು ನಡೆಸದಿದ್ದರೆ ಕೆಲವು ಭಾರತೀಯರು ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತ, ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆರಿಸುತ್ತಿರುವಾಗ, ಪಕ್ಕದಲ್ಲೇ ಇನ್ನು ಕೆಲವು ಭಾರತೀಯರು ಹೆಚ್ಚಿನ ದೇಶೀ ಸಂಸ್ಥಾನಗಳಲ್ಲಿದ್ದ ಮಧ್ಯಯುಗೀನ ಬರ್ಬರತೆಯ ಅಡಿಯಲ್ಲಿ ನರಳುತ್ತಲೇ ಇರುವಂತಹ ಒಂದು ಅಸಂಬದ್ಧ ಪರಿಸ್ಥಿತಿ ಇರುತ್ತಿತ್ತು.

ಆಗ, ಎಲ್ಲ ಭಾರತೀಯರು ಸಮಾನರು ಎಂದು ಸಂವಿಧಾನದ ಘೋಷಣೆಗೆ ಒಂದು ನಿರ್ಬಂಧ ಉಂಟಾಗುತ್ತಿತ್ತು. ಅದೆಂದರೆ ಬ್ರಿಟಿಶರು ಕಿತ್ತುಕೊಳ್ಳಬಯಸದ ಕೆಲವು ಪ್ರದೇಶಗಳಲ್ಲಿ ಹುಟ್ಟಿದ, ಮತ್ತು ಒಂದು ಪಾಳೆಯಗಾರಿ ವ್ಯವಸ್ಥೆಯ ಭೀಕರ ಅಸಮಾನತೆಯ ಅಡಿಯಲ್ಲಿ ನರಳುತ್ತಲೇ ಇರಬೇಕಾದ ನಿರ್ಬಂಧ.

ನಿಜ, ಅದೊಂದು ವಿಡಂಬನೆಯಾಗುತ್ತಿತ್ತು. ಅದಕ್ಕಿಂತ ಮಹತ್ವದ್ದೆಂದರೆ, ದೇಶೀ ಸಂಸ್ಥಾನಗಳನ್ನು ಭಾರತೀಯ ಸಂಘದೊಡನೆ ಸಮಗ್ರೀಕರಿಸದಿದ್ದಿದ್ದರೆ ಆ ಸಂಸ್ಥಾನಗಳು ಮೂಲಭೂತವಾಗಿ ಯಾವ ಅಸಮಾನತೆಯ ಮೇಲೆ ನಿಂತಿದ್ದವೋ, ಅದು ಭಾರತೀಯ ಸಂವಿಧಾನದ ಅಡಿಯಲ್ಲಿ ಕೊಡಮಾಡಿದ  ಸಮಾನತೆಯನ್ನೂ ಕೊರೆದು ಹಾಕುತ್ತಿತ್ತು. ಅಂದರೆ ಪ್ರಜಾಪ್ರಭುತ್ವ ಕ್ರಾಂತಿ ದೇಶೀ ಸಂಸ್ಥಾನಗಳಲ್ಲಿ ಇರುತ್ತಿರಲಿಲ್ಲ ಮಾತ್ರವಲ್ಲ, ಇಡೀ ದೇಶದಲ್ಲಿ ಎಲ್ಲ ಭಾರತೀಯರಿಗೂ ಪ್ರಜಾಪ್ರಭುತ್ವ ಬುಡಮೇಲಾಗುತ್ತಿತ್ತು. ಆದ್ದರಿಂದ ಸ್ವತಂತ್ರ ಭಾರತದ ಗೃಹಮಂತ್ರಿಯಾಗಿ ಪಟೇಲರ ಕಾರ್ಯಾಚರಣೆಗಳು ಪ್ರಜಾಪ್ರಭುತ್ವ ಕ್ರಾಂತಿಯ ಅಜೆಂಡಾಕ್ಕೆ ಅನುಗುಣವಾಗಿಯೇ ಇದ್ದವು.

ಈಗ, ಸರಕು ಮತ್ತು ಸೇವೆಗಳ ತೆರಿಗೆ ಎಂಬುದು ಒಂದು ತೆರಿಗೆ ವ್ಯವಸ್ಥೆಯ ಬದಲು ಇನ್ನೊಂದು ತೆರಿಗೆ ವ್ಯವಸ್ಥೆಯನ್ನು ತರುವುದಷ್ಟೇ. ಅದು ಒಂದು ಪ್ರಜಾಪ್ರಭುತ್ವ ಸಂವಿಧಾನವನ್ನು ಆಧರಿಸಿದ ಭಾರತದೊಳಗೆ ಈ ಹಿಂದೆ ಇದ್ದ ಇತರ ತೆರಿಗೆಗಳ ಬದಲು ಒಂದು ತೆರಿಗೆಯನ್ನು ಆರಂಭಿಸುವಂತದ್ದು ಮಾತ್ರ. ಭಾರತದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಮುಂದೊಯ್ಯುವಂತದ್ದು ಇದರಲ್ಲಿ ಏನೇನೂ ಇಲ್ಲ. ಇದರ ಪ್ರತಿಪಾದಕರು ಕೂಡ ಇದರ ‘ದಕ್ಷತೆ’, ‘ಸರಳತೆ’, ‘ಅಭಿವೃದ್ಧಿಗೆ ಕೊಡುಗೆ’ ಇತ್ಯಾದಿ ಪದಪುಂಜಗಳಲ್ಲೇ ಅದರ ಪ್ರಯೋಜನಗಳನ್ನು ಚರ್ಚಿಸುತ್ತಾರೆಯೇ ಹೊರತು ಎಂದೂ ಅದು ಪ್ರಜಾಪ್ರಭುತ್ವ ಅಂಶವನ್ನು ಹೊಂದಿದೆ ಎಂದೇನೂ ಹೇಳಿಲ್ಲ.

ನಿಜ ಹೇಳಬೇಕೆಂದರೆ, ಇದನ್ನು ವಿರೋಧಿಸುವವರು (ನಾನು ಇದರಲ್ಲಿ ಸೇರಿದ್ದೇನೆ, ಅಮತ್ರ್ಯ ಸೆನ್‍ರಂತಹ ಗಣ್ಯರೂ ನನ್ನ ಜತೆಗಿದ್ದಾರೆ, ಆದರೆ ಇದನ್ನು ಬಹಳ ಚೆನ್ನಾಗಿ ಅಭಿವ್ಯಕ್ತಿಸಿರುವವರು ಅಶೋಕ ಮಿತ್ರರವರು) ಜಿಎಸ್‍ಟಿ ಒಂದು ಅತ್ಯಂತ ಪ್ರಜಾಪ್ರಭುತ್ವ-ವಿರೋಧಿ ಕ್ರಮ ಎಂದೇ ಬಹಳ ಕಾಲದಿಂದ ವಾದಿಸುತ್ತಿದ್ದಾರೆ. ಅದು ರಾಜ್ಯ ಸರಕಾರಗಳ ಸಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡು ಅಧಿಕಾರಗಳನ್ನು ಕೇಂದ್ರ ಸರಕಾರದಲ್ಲಿ ಕೇಂದ್ರೀಕರಿಸುತ್ತದೆ. ಅ ಮೂಲಕ ಅದು ನಮ್ಮ ಪ್ರಜಾಪ್ರಭುತ್ವದ ಅನಿವಾರ್ಯ ಭಾಗವಾದ ದೇಶದ ಒಕ್ಕೂಟ ರಚನೆಯ ಮೇಲೆ ಒಂದು ದೊಡ್ಡ ಪ್ರಹಾರವನ್ನು ಮಾಡಿದೆ. ಸಂವಿಧಾನವು ರಾಜ್ಯ ಸರಕಾರಗಳ ವ್ಯಾಪ್ತಿಗೆ ಮಾರಾಟ ತೆರಿಗೆಯನ್ನು ಕೊಟ್ಟಿತ್ತು. ಅದನ್ನು ಎಲ್ಲಿ, ಯಾವ ದರಗಳಲ್ಲಿ ವಿಧಿಸಬೇಕು ಎಂಬುದನ್ನು ಆಯ್ದುಕೊಳ್ಳುವ ಪೂರ್ಣ ಸ್ವಾತಂತ್ರ್ಯ ಅವುಗಳಿಗಿತ್ತು. ಅದರ ಬದಲು ಈಗ ಜಿಎಸ್‍ಟಿ ನಮ್ಮ ಮುಂದಿದೆ. ಇದರ ದರಗಳನ್ನು ಜಿಎಸ್‍ಟಿ ಮಂಡಳಿ ಮಾತ್ರವೇ ನಿರ್ಧರಿಸಬಹುದು. ಈ ಮಂಡಳಿಯಲ್ಲಿ ಕೇಂದ್ರ ಸರಕಾರದೊಂದಿಗೆ ಎಲ್ಲ ರಾಜ್ಯ ಸರಕಾರಗಳು ಇವೆ, ಮತ್ತು ಪ್ರತಿಯೊಂದು ರಾಜ್ಯಕ್ಕೆ ಒಂದೇ ಒಂದು ಮತ ಇರುವುದು.

ಆದರೆ ವಿರೋಧಿಗಳು ಹೇಳುವುದನ್ನು ಮರೆತು ಬಿಡೋಣ. ಅದು ಒಕ್ಕೂಟ ತತ್ವಕ್ಕೆ ವಿರುದ್ಧವಾದ್ದರಿಂದ ಪ್ರಜಾಪ್ರಭುತ್ವ-ವಿರೋಧಿ ಎಂಬುದನ್ನು ಬದಿಗಿಡೋಣ. ಇಲ್ಲಿ ಮುಖ್ಯ ಅಂಶವೆಂದರೆ ಅದನ್ನು ಖಂಡಿತವಾಗಿಯೂ ಒಂದು ಪ್ರಜಾಪ್ರಭುತ್ವ ಕ್ರಮವಾಗಿ, ಭಾರತದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಮುಂದೊಯ್ಯುವ  ಒಂದು ಕ್ರಮವಾಗಿ ತಂದಿಲ್ಲ. ಆದ್ದರಿಂದ ಅದನ್ನು ಭಾರತೀಯ ಸಂಘದೊಳಗೆ ದೇಶೀ ರಾಜರುಗಳ ಸಂಸ್ಥಾನಗಳ ಸಮಗ್ರೀಕರಣಕ್ಕೆ ಸಮಾನವಾದ ಕ್ರಮ ಎಂದು ಕಾಣಲು ಸಾಧ್ಯವಿಲ್ಲ. ಅದರಿಂದಾಗಿ ಮೋದಿಯವರ ಹೋಲಿಕೆ ಸಂಪೂರ್ಣ ತಪ್ಪು. ದೇಶದ ಪ್ರಜಾಸತ್ತಾತ್ಮಕ ಕ್ರಾಂತಿಯ ಕಿಂಚಿತ್ತೂ ತಿಳುವಳಿಕೆ ಇಲ್ಲದ ಒಬ್ಬ ವ್ಯಕ್ತಿ ಮಾತ್ರವೇ ಇಂತಹ ತಪ್ಪು ಮಾಡಲು ಸಾಧ್ಯ.

ಆದರೆ ಇಂತಹ ಹೋಲಿಕೆ ತಪ್ಪು ಮಾತ್ರವೇ ಅಲ್ಲ, ಅದಕ್ಕಿಂತಲೂ ಕೆಟ್ಟದ್ದು. ಮೋದಿಯವರು ಈ ಮೂಲಕ ಕೇಂದ್ರೀಕರಣವೇ ದೇಶದ ಐಕ್ಯತೆ ಎಂದು ಸಮೀಕರಿಸಿದ್ದಾರೆ. ಅದನ್ನು ಸ್ಪಷ್ಟವಾಗಿಯೂ ಹೇಳಿದ್ದಾರೆ. ರಾಜರುಗಳ ಸಂಸ್ಥಾನಗಳಿಗೆ ಅವರ ವಿರೋಧ ಮತ್ತು ಈ ರಾಜ್ಯಗಳನ್ನು ಭಾರತೀಯ ಸಂಘದೊಂದಿಗೆ ಸಮಗ್ರೀಕರಿಸಿದ್ದಕ್ಕೆ ಪಟೇಲರಿಗೆ ಅವರ ಚಪ್ಪಾಳೆ ಬಹುಸಂಖ್ಯೆಯಲ್ಲಿ ಇಂತಹ ಸಂಸ್ಥಾನಗಳಿರುವುದು ಒಂದು ‘ಗೊಂದಲಮಯತೆ’ಯ ಪರಿಸ್ಥಿತಿಯನ್ನು ತೋರಿಸುತ್ತದೆ ಎಂಬ ಕಾರಣಕ್ಕಾಗಿಯಷ್ಟೇ. ಪಟೇಲರ ಕ್ರಮಕ್ಕೆ ಅವರ ಚಪ್ಪಾಳೆ ಅದು ಭಾರತದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಮುಂದೊಯ್ಯಿತು ಎಂಬುದಕ್ಕಲ್ಲ, ಬದಲಾಗಿ ಬಾಹುಳ್ಯದ ಒಂದು ಸ್ಥಿತಿಯನ್ನು ಕೊನೆಗೊಳಿಸಿತು ಎಂಬುದಕ್ಕಾಗಿ- ಜಿಎಸ್‍ಟಿ ಕೂಡ ಇದೇ ರೀತಿಯಲ್ಲಿ ಬಾಹುಳ್ಯವನ್ನು ಕೊನೆಗೊಳಿಸುತ್ತದೆ ಎಂದು ಅವರು ನಂಬಿದ್ದಾರೆ.  ಅವರ ಈ ಕಣ್ಣೋಟದ ಪ್ರಕಾರ, ಕೇಂದ್ರೀಕೃತ ಏಕರೂಪತೆ ಅಪೇಕ್ಷಣೀಯ, ಒಂದು ಒಕ್ಕೂಟ ರಚನೆಯ ಅನಿವಾರ್ಯ ಲಕ್ಷಣವಾದ ಬಾಹುಳ್ಯ ಅತ್ಯಂತ ಅನಪೇಕ್ಷಣೀಯ, ‘ರಾಷ್ಟ್ರ’ದ ಐಕ್ಯತೆ  ಇಂತಹ ಕೇಂದ್ರೀಕೃತ ಏಕರೂಪತೆಯ ಆಧಾರದಲ್ಲಿ ಮಾತ್ರವೇ ಸಾಧ್ಯ !

ಇದು ಅತ್ಯಂತ ಆಕ್ಷೇಪಾರ್ಹ ಕಣ್ಣೋಟ. ಏಕರೂಪತೆಯನ್ನು ಮತ್ತು ಕೇಂದ್ರೀಕರಣವನ್ನು ಹೀಗೆ ಆರಾಧಿಸುವವರು ವಿಕೇಂದ್ರೀಕರಣವನ್ನು, ಕೂಡ ವಿರೋಧಿಸಬೇಕು. ತೆರಿಗೆ ದರಗಳಲ್ಲಿ ಬಹುವಿಧಗಳಿವೆ, ಏಕರೂಪತೆ ಇಲ್ಲ ಎಂದು ಕಣ್ಣು ಕೆಂಪಗೆ ಮಾಡಿಕೊಳ್ಳುವುದಾದರೆ ಪಂಚಾಯತುಗಳಿಗೆ ಅಧಿಕಾರಗಳ ವರ್ಗಾವಣೆಯನ್ನು ಕೂಡ ವಿರೋಧಿಸಬೇಕು. ವಿಧ-ವಿಧ ದರಗಳ ಮಾರಾಟ ತೆರಿಗೆಗಳನ್ನು ವಿಧಿಸುವ ರಾಜ್ಯ ಸರಕಾರಗಳನ್ನು ‘ಶಿಸ್ತಿ’ಗೆ ಒಳಪಡಿಸಿ ದರಗಳನ್ನು ನಿಗದಿ ಮಾಡುವ ಅವುಗಳ ಅಧಿಕಾರವನ್ನು ಬಿಟ್ಟು ಕೊಡುವಂತೆ ಮಾಡಬೇಕು ಎಂದಾದರೆ, ಆ ತರ್ಕ ಪಂಚಾಯತುಗಳಿಗೂ ಅನ್ವಯವಾಗಬೇಕಿತ್ತು. ಆದರೆ ಪಂಚಾಯತುಗಳು ವಿಧಿಸುವ ತೆರಿಗೆಗಳು ಅವರ ಗಮನವನ್ನು ಸೆಳೆಯುವುದಿಲ್ಲ, ಏಕೆಂದರೆ ಅವು ಕಾರ್ಪೊರೇಟ್-ಹಣಕಾಸು ಕುಳಗಳ ಕೂಟವನ್ನು ತಟ್ಟುವುದಿಲ್ಲ. ಅಂದರೆ ಪಂಚಾಯತುಗಳ ತೆರಿಗೆ ವಿಧಿಸುವ ಅಧಿಕಾರಗಳಿಂದ ಉಂಟಾಗಿರುವ ‘ಗೊಂದಲಮಯತೆ’ಯಿಂದ ಅವರಿಗೆ ಇದುವರೆಗೆ ಏನೂ ಅನಿಸದಿದ್ದರೆ, ಅದು ಯಾವುದೇ ರೀತಿಯ ತತ್ವಬದ್ಧತೆಯಿಂದಾಗಿ ಇಲ್ಲ, ಬದಲಾಗಿ ಕಾರ್ಪೊರೇಟ್-ಹಣಕಾಸು ಕೂಟದ ಹಿತಾಸಕ್ತಿಗಳ ಬಗ್ಗೆ ಅವರ ಕಾಳಜಿಯಿಂದಾಗಿಯೇ ಎಂಬದು ಸ್ಪಷ್ಟ.

ಬೇರೆ ಮಾತುಗಳಲಿ ಹೇಳುವುದಾದಲ್ಲಿ, ಮೋದಿಯವರ ಕಣ್ಣೋಟದ ಪ್ರಕಾರ, ಕೇಂದ್ರೀಕರಣ ಯಾವಾಗಲೂ ಒಳ್ಳೆಯದೇ, ಅದು ಕಾರ್ಪೊರೇಟ್- ಹಣಕಾಸು ಕುಳಗಳ ಕೂಟಕ್ಕೆ ಹಿತಕಾರಿಯಾಗಿದ್ದರಂತೂ, ವಿಶೇಷವಾಗಿ ಒಳ್ಳೆಯದು.

ಮೋದಿಯವರ ಹೋಲಿಕೆ ಅಪಾಯಕಾರಿ ಲಕ್ಷಣಗಳನ್ನು ಹೊಂದಿದೆ. ಏಕೆಂದರೆ ಅವರ ವ್ಯಾಖ್ಯಾನ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಮತ್ತು ಪ್ರಜಾಪ್ರಭುತ್ವ ಕ್ರಾಂತಿಗೆ ಯಾವುದೇ ಸ್ಥಾನವಿಲ್ಲ. ಇದಕ್ಕೆ ಅವರು ಈ ಪ್ರಶ್ನೆಗಳನ್ನು ದೇಶೀ ರಾಜರುಗಳ ಸಂಸ್ಥಾನಗಳನ್ನು ಭಾರತೀಯ ಸಂಘದೊಳಗೆ ಸಮಗ್ರೀಕರಿಸಿದ ಪಟೇಲರ ಕ್ರಮದ ಬಗ್ಗೆ ಭಾರೀ ಅಭಿಮಾನದಿಂದ ಹೇಳುವಾಗ  ಪರಿಗಣಿಸಿಯೂ ಇಲ್ಲ ಎಂಬುದೇ ಸಾಕ್ಷಿ.

ಇಲ್ಲಿ ಒಂದು ಆಸಕ್ತಿದಾಯಕ ಅಂಶ ಎಂದರೆ, ಜಗತ್ತಿನ ಅತ್ಯಂತ ‘ಸಾಚಾ’ ಬಂಡವಾಳಶಾಹಿ ದೇಶವಾದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಕಾರ್ಪೊರೇಟ್ ಹಿತಗಳನ್ನು ಪ್ರಭುತ್ವದ ಧೋರಣೆಗಳಲ್ಲಿ ಬಹಳ ಭಯ-ಭಕ್ತಿಯಿಂದ ಒಳಗೊಳ್ಳುವ ದೇಶದಲ್ಲಿ ಕೂಡ ಒಕ್ಕೂಟ ತತ್ವಕ್ಕೆ ಬದ್ಧತೆ ಎಷ್ಟೊಂದು ಬಲಿಷ್ಟವಾಗಿದೆಯೆಂದರೆ, ಅಲ್ಲಿ ಎಂದೂ ಕೂಡ ಒಂದು ಏಕರೂಪದ ಸರಕು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆಯನ್ನು ತರಬೇಕು ಎಂಬ ಮಾತು ಕೂಡ ಬಂದಿಲ್ಲ. ಒಕ್ಕೂಟ ತತ್ವ ಎಂಬುದು ಅದರ ಸ್ಥಾಪನೆಯ ನೀತಿಗಳಲ್ಲಿ ಒಂದಾಗಿದ್ದು, ಅದರಿಂದಾಗಿಯೇ ಅದು ವಿವಿಧ ರಾಜ್ಯಗಳಲ್ಲಿ ವಿಧಿಸುವ ಬಹುವಿಧ, ಬಹು-ದರಗಳ ತೆರಿಗೆಗಳ ‘ಗೊಂದಲಮಯತೆ’ಯೊಂದಿಗೇ ದಶಕಗಳ ಕಾಲ ಬಾಳಿ ಬದುಕಿದೆ.  ಇದರಿಂದಾಗಿ ಆ ದೇಶದ ಅಭಿವೃದ್ಧಿ ದರ ಅಥವ ಅದರ ಐಕ್ಯತೆ ಕುಂಠಿತವಾಗಿದೆ ಎಂಬ ಸೂಚನೆ ಕೂಡ ಎಂದೂ ಬಂದಿಲ್ಲ. ತದ್ವಿರುದ್ಧವಾಗಿ, ಈ ಏಕರೂಪತೆ ಇಲ್ಲದ್ದರಿಂದಾಗಿಯೇ, ವಿವಿಧ ರಾಜ್ಯಗಳು ತಮಗೆ ಸರಿಕಂಡಂತೆ ತೆರಿಗೆ ವಿಧಿಸಬಹುದಾದ್ದರಿಂದಲೇ, ಅವು ಒಂದು ಒಕ್ಕೂಟದ ಭಾಗವಾಗಿರಲು ಮುಕ್ತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿದೆ, ಇದರಿಂದ ಅದರ ಐಕ್ಯತೆ ಬಲಿಷ್ಟಗೊಂಡಿದೆ ಎಂಬ ಗಟ್ಟಿಯಾದ ನಂಬಿಕೆ ಅವರಲ್ಲಿ ಇದೆ.

ಹಿಂದುತ್ವ ಮಂದಿ ಬಹಳವಾಗಿ ಪ್ರೀತಿಸುವ ಸರ್ವಾಧಿಕಾರಶಾಹಿ ಮತ್ತು ಏಕರೂಪತೆ ಜಿಎಸ್‍ಟಿ ತೆರಿಗೆ ಪ್ರಸ್ತಾವದಲ್ಲಿ ಪ್ರತಿಫಲನಗೊಂಡಿದೆ. ಇದನ್ನು, ಬೇರೆ ಯಾರೂ ಅಲ್ಲ, ಸ್ವತÀಃ ಮೋದಿಯವರೇ ತಮ್ಮ ಹೋಲಿಕೆಯ ಮೂಲಕ ವ್ಯಕ್ತಪಡಿಸಿದ್ದಾರೆ. ವಿಡಂಬನೆಯೆಂದರೆ ರಾಜ್ಯಗಳ ಅಧಿಕಾರಗಳನ್ನು ಮೊಟಕು ಮಾಡುವ ಮೂಲಕ ಜಿಎಸ್‍ಟಿ ‘ಗೊಂದಲಮಯತೆ’ಯನ್ನು ಮೀರಿನಿಂತಿದೆ ಎಂದು  ಬೀಗುವ ಮೋದಿಯವರ ಭಾಷಣವೇ ಜಿಎಸ್‍ಟಿಯ ಟೀಕಾಕಾರರು ಬಹಳ ದಿನಗಳಿಂದ ಎತ್ತುತ್ತಿರುವ ಅಂಶವನ್ನು ಸಾಬೀತು ಮಾಡಿದೆ. ಈ ಟೀಕಾಕಾರರು ಒಂದು ಪ್ರಜಾಪ್ರಭುತ್ವದಲ್ಲಿ ಇಂತಹ ‘ಗೊಂದಲಮಯತೆ’ ಅನಿವಾರ್ಯವಾಗಿದೆ, ಏಕೆಂದರೆ ವಿಭಿನ್ನ ತತ್ವ ಸಿದ್ಧಾಂತಗಳ ವಿವಿಧ ರಾಜಕೀಯ ಪಕ್ಷಗಳು ನಡೆಸುವ ವಿವಿಧ ರಾಜ್ಯ ಸರಕಾರಗಳು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ತಮ್ಮ ವಿಭಿನ್ನ ಪರಿಕಲ್ಪನೆಗಳನ್ನು ಜಾರಿಗೆ ತರಲು ಅವಕಾಶವನ್ನು ಕೊಡುತ್ತದೆ. ಇಂತಹ ಅವಕಾಶವನ್ನು ಕಲ್ಪಿಸುವುದು ಮೋದಿಯವರಿಗೆ ‘ಅಸಹ್ಯ’ವೆನಿಸುವಂತಹ ‘ಗೊಂದಲಮಯತೆ’ಯನ್ನು ತರುತ್ತದೆ. ಆದರೆ ಇದು ಪ್ರಜಾಪ್ರಭುತ್ವದ ಅಭಿನ್ನ ಅಂಗ.

ಹಿಂದುತ್ವ ಶಕ್ತಿಗಳು  ಹೊಂದಿರುವ ಮತ್ತು ಜುಲೈ 1ರಂದು ಸೆಂಟ್ರಲ್ ಹಾಲ್‍ನಲ್ಲಿ ಮೋದಿಯವರು  ಜಿಎಸ್‍ಟಿ ಎಂಬುದು ದೇಶೀ ರಾಜರುಗಳ ಸಂಸ್ಥಾನಗಳ ಸಮಗ್ರೀಕರಣದ ಸಾಧನೆಗೆ ಸಮನಾದುದು ಎಂಬ ದಾರಿ ತಪ್ಪಿಸುವ ಹೋಲಿಕೆಯ ಮೂಲಕ ವ್ಯಕ್ತಪಡಿಸಿರುವ ಕೇಂದ್ರೀಕರಣ ಮತ್ತು ಏಕರೂಪತೆಯ ಗೀಳು ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಒಂದು ತೀವ್ರ ಬೆದರಿಕೆಯನ್ನು ಒಡ್ಡಿದೆ.