“ಮಾರ್ಕ್ಸ್ 200 ಮತ್ತು ಕ್ಯಾಪಿಟಲ್ 150”

ಸಂಪುಟ: 
11
ಸಂಚಿಕೆ: 
30
Sunday, 16 July 2017

 

ಮಾರ್ಕ್ಸ್ ಅವರ ಜನ್ಮದಿನ ಮೇ 5 1818 ಆಗಿದ್ದು, ಈ ಮೇ 5ರಿಂದ ಮುಂದಿನ ಮೇ 5ರ ವರೆಗೆ ಮಾರ್ಕ್ಸ್ ಅವರ ದ್ವಿಶತಾಬ್ದಿ ವರ್ಷ. ಸೆಪ್ಟೆಂಬರ್ 14, 1867 ಮಾರ್ಕ್ಸ್ ಅವರ ಮೇರುಗ್ರಂಥ ‘ದಾಸ್ ಕ್ಯಾಪಿಟಲ್’ ಮೊದಲ ಸಂಫುಟ ಪ್ರಕಟವಾದ ದಿನವಾಗಿದ್ದು ಈ ವರ್ಷ ಆ ಗಮನಾರ್ಹ ದಿನದ 150ನೇ ವಾರ್ಷಿಕ. ಇವೆರಡೂ ದಿನಗಳನ್ನು ನೆನಪಿಸಿಕೊಂಡು ಈ ವರ್ಷವನ್ನು ಸೂಕ್ತವಾಗಿ ಆಚರಿಸಲು, ಮಾರ್ಕ್ಸ್ ವಾದದ ಪ್ರಸಾರದಲ್ಲಿ ಬಹಳ ಕಾಲ ನೆನಪಿಟ್ಟುಕೊಳ್ಳಬಹುದಾದ ದೀರ್ಘಕಾಲವಾಗಿ ಪರಿಣಾಮಕಾರಿಯಾದ ಏನಾದರೂ ಮಾಡಬೇಕಾದ್ದು ಅಗತ್ಯ. ಇಂದಿನ ಜಗತ್ತು ಹಾದು ಹೋಗುತ್ತಿರುವ ಬಿಕ್ಕಟ್ಟಿಗೆ ಪರಿಹಾರಕ್ಕೆ ಮಾರ್ಕ್ಸ್ ನ ಬರಹಗಳತ್ತ (ಅದರಲ್ಲೂ ‘ದಾಸ್ ಕ್ಯಾಪಿಟಲ್’ನತ್ತ) ಬಂಡವಾಳಶಾಹಿ-ಪರ ಬುದ್ಧಿಜೀವಿಗಳೂ ಹೊರಳುತ್ತಿರುವ ಇಂದಿನ ಸಂದರ್ಭದಲ್ಲಿ ಇದು ತುರ್ತಿನ ಕೆಲಸ.

ಈಗ ಮಾರ್ಕ್ಸ್ ಅವರ ಕೆಲವೇ ಕೃತಿಗಳು ಕನ್ನಡದಲ್ಲಿ ಲಭ್ಯವಿದೆ. ಮಾರ್ಕ್ಸ್ ವಾದದ ಸಾರ ಎನ್ನಬಹುದಾದ ಪ್ರಮುಖ ಕೃತಿಗಳೂ ಕನ್ನಡದಲ್ಲಿ ಲಭ್ಯವಿಲ್ಲ. ಅವನ್ನು ಕನ್ನಡದಲ್ಲಿ ತರುವುದು ಈ ವಿಶೇಷ ಸಂದರ್ಭದಲ್ಲಿ ಮಾಡಬೇಕಾದ ಕನಿಷ್ಟ ಕೆಲಸ. ಆದರೆ ಈ ಪ್ರಮುಖ ಕೃತಿಗಳನ್ನು (‘ದಾಸ್ ಕ್ಯಾಪಿಟಲ್’ ಮೊದಲ ಸಂಪುಟ ಸೇರಿದಂತೆ) ತರಲು ಮಾರ್ಕ್ಸ್ ವಾದ ಬಲ್ಲ ಪರಿಣತ ಲೇಖಕರ/ಅನುವಾದಕರ ತಂಡಗಳು ಸೇರಿದಂತೆ ಹಲವು ಮತ್ತು ದೊಡ್ಡ ಪ್ರಮಾಣದ ಸಂಪನ್ಮೂಲಗಳ ಅಗತ್ಯ ಇದೆ. ಅನುವಾದಕ್ಕೆ ಮೊದಲು ಪಾರಿಭಾಷಿಕ ಶಬ್ದಕೋಶ ರಚನೆ, ಅನುವಾದ, ಅನುವಾದದ ನಿಖರತೆ ಓದಿಸಿಕೊಂಡು ಹೋಗುವ ಗುಣಗಳನ್ನು ಪರೀಕ್ಷಿಸುವ, ಪ್ರೂಫ್ ರೀಡಿಂಗ್ ಮಾಡುವ ತಂಡಗಳು ಬೇಕಾಗುತ್ತದೆ.

ಇಂದಿನ ಸಂದರ್ಭದಲ್ಲಿ ಪ್ರಿಂಟ್ ಪುಸ್ತಕ ಅಲ್ಲದೆ ಇಲೆಕ್ಟ್ರಾನಿಕ್ ರೂಪದಲ್ಲೂ ಇದನ್ನು ಪ್ರಕಟಿಸುವ ಅನಿವಾರ್ಯತೆ ಇದೆ. ಈ ಪುಸ್ತಕಗಳು ಕಾಲೇಜು, ವಿ.ವಿ., ಲೈಬ್ರರಿಗಳನ್ನು ತಲುಪುವಂತೆ ಮಾರಾಟ, ಪ್ರಚಾರಗಳ ವಿಶೇಷ ವ್ಯವಸ್ಥೆಯ ಅಗತ್ಯವೂ ಇದೆ. ಇದು ಒಂದು ಪ್ರಕಾಶನ ಸಂಸ್ಥೆಯ ಅಳವಿಗೆ ಮೀರಿದ್ದು. ಹಲವು ಎಡ/ಪ್ರಗತಿಪರ ಪ್ರಕಾಶನ ಸಂಸ್ಥೆಗಳು ಈ ಕೆಲಸದಲ್ಲಿ ಕೈಜೋಡಿಸದೆ ಈ ಕೆಲಸ ಕಷ್ಟಸಾಧ್ಯವಿದೆ. ಅದೇ ರೀತಿಯಲ್ಲಿ ಮಾರ್ಕ್ಸ್ ವಾದ ಬಲ್ಲ ಎಲ್ಲ ಪರಿಣತ ಕನ್ನಡ ಲೇಖಕ/ಅನುವಾದಕರನ್ನು ಇದಕ್ಕಾಗಿ ಅಣಿ ನೆರೆಸದೆ ಸಹ ಈ ಕೆಲಸ ಕಷ್ಟಸಾಧ್ಯ. ಆದ್ದರಿಂದ ಈ ಇಡೀ ಕೆಲಸವನ್ನು ಒಂದು ಪ್ರಾಜೆಕ್ಟ್ ತರಹ ನಿರ್ವಹಿಸಬೇಕಾಗಿದ. ಈ ಪ್ರಾಜೆಕ್ಟಿನಡಿಯಲ್ಲಿ ಬರುವ ಪುಸ್ತಕಗಳು ಬರಿಯ ಬಿಡಿ ಪುಸ್ತಕಗಳಾಗಿರದೆ, ಮುಂದಿನ ಪೀಳಿಗೆಗೆ ಮಾರ್ಕ್ಸ್ ವಾದದ ಪ್ರಮುಖ ಸಾರ ಕೊಡುವ ಪುಸ್ತಕಗಳ ಸಮಗ್ರ ಸಂಪುಟವಾಗಿರಬೇಕು. 

ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಎಡಪಂಥೀಯ/ ಮಾರ್ಕ್ಸ್ ವಾದಿ/ ಪ್ರಗತಿಪರ ಪುಸ್ತಕಗಳ ಪ್ರಮುಖ ಪ್ರಕಾಶಕರಾದ ನವಕರ್ನಾಟಕ ಮತು ಕ್ರಿಯಾ ಸೇರಿ ಈ ಪ್ರಾಜೆಕ್ಟ್ಟನ್ನು ಜಂಟಿಯಾಗಿ ಸಾಕಾರಗೊಳಿಸಲು ನಿರ್ಧರಿಸಿವೆ ಎಂಬುದು ಸಂತೋಷದ ಸಂಗತಿ.

ಈ ಪ್ರಾಜೆಕ್ಟಿನಲ್ಲಿ ಈ ಕೆಳಗಿನ ಮಾರ್ಕ್ಸ್ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

Capital Vol. I

Economic and Philosophic Manuscripts of 1844

The Eighteenth Brumaire of Louis Bonaparte

Marx on India

The Civil War in France (Paris Commune) 1871

Contribution to critique of political economy

The Poverty of Philosophy

ಇವಲ್ಲದೆ ಕೆಲವು ನಿರ್ದಿಷ್ಟ ವಿಷಯಗಳ (ಉದಾ: ಪರಿಸರ, ಸಂಸ್ಕೃತಿ) ಬಗ್ಗೆ ಮಾಕ್ರ್ಸ್ ಬರಹಗಳ ಆಯ್ದ ಒಂದು ಪುಸ್ತಕವನ್ನೂ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿ-ಯುವಜನರಿಗೆ ಉದ್ದೇಶಿತವಾದ ಮಾಕ್ರ್ಸ್ ಓದಿಗೆ ಪ್ರವೇಶಿಕೆಯಾಗುವ (ಸಾಧ್ಯವಿದ್ದರೆ ಕಾಮಿಕ್ಸ್ ರೂಪದಲ್ಲಿ) ಪ್ರಕಟಿಸಲೂ ನಿರ್ದರಿಸಲಾಗಿದೆ.

“ಮಾರ್ಕ್ಸ್ 200 ಕ್ಯಾಪಿಟಲ್ 150” ಸ್ಮರಣಾರ್ಥ ಪುಸ್ತಕ ಪ್ರಕಟಣೆ ಅಲ್ಲದೆ, ಇಡೀ ವರ್ಷ ವಿಶೇóಷ ಉಪನ್ಯಾಸಗಳೂ ಮತ್ತು ವಿಚಾರ ಸಂಕಿರಣಗಳನ್ನು ಸ್ವತಂತ್ರವಾಗಿ ಅಥವಾ ಇತರ ಸಂಸ್ಥೆಗಳ ಜತೆ ಸೇರಿ ಏರ್ಪಡಿಸುವುದು. ಇಂತಹ ಸಂದರ್ಭಗಳನ್ನು ಪ್ರಕಟಣೆಗೆ ಸಿದ್ಧವಾದ ಪುಸ್ತಕಗಳನ್ನು ಬಿಡುಗಡೆ ಮಾಡುವುದು ಎಂದೂ ನಿರ್ಧರಿಸಲಾಗಿದೆ.

ಪುಸ್ತಕಗಳ ಪ್ರಸಾರ ಹೆಚ್ಚಿಸಲು ಪ್ರಕಟಣಾ-ಪೂರ್ವ ವಿಶೇಷ ರಿಯಾಯಿತಿ ಕೂಪನುಗಳನ್ನು ಮಾಡಲಾಗುವುದು. ಪುಸ್ತಕಗಳ ಬೆಲೆ ಕಡಿಮೆ ಮಾಡಲು ಪ್ರಾಜೆಕ್ಟಿನ ಉದ್ದೇಶಗಳಲ್ಲಿ ಆಸಕ್ತ ವ್ಯಕ್ತಿ/ಸಂಘಟನೆಗಳಿಂದ ಸಹಾಯಧನ ಸಂಗ್ರಹಿಸಲಾಗುವುದು.

ಮೊದಲ ಹೆಜ್ಜೆಯಾಗಿ ಈ ಪ್ರಾಜೆಕ್ಟಿನಲ್ಲಿ ಭಾಗವಹಿಸಬಲ್ಲ ಅಥವಾ ಈ ಬಗ್ಗೆ ಸಲಹೆ/ಸೂಚನೆ ನೀಡಬಲ್ಲ ಪರಿಣತರ, ಲೇಖಕರ, ಅನುವಾದಕರ ಒಂದು ಸಭೆಯನ್ನು ಜೂನ್ 25ರಂದು ನಡೆಸಲಾಯಿತು. ಈ ಸಭೆಯಲ್ಲಿ 40 ಜನ ಹಾಜರಿದ್ದರು. ಸಭೆಯಲ್ಲಿ ಹಾಜರಿದ್ದವರಲ್ಲದೆ 5 ಜನ ಈಮೇಲ್/ಫೋನ್ ಮೂಲಕ ಪ್ರಾಜೆಕ್ಟಿನಲ್ಲಿ ಪಾಲುಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಇನ್ನೂ 10 ಜನ ಅನುವಾದ ಕಾರ್ಯದಲ್ಲಿ ನೆರವಾಗುವುದಾಗಿ ತಿಳಿಸಿದ್ದಾರೆ. ಅವರಲ್ಲಿ ಕೆಲವರು ನಿರ್ದಿಷ್ಟ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದ್ದಾರೆ.

ಜೂನ್ 25ರ ಸಮಾಲೋಚನೆ ಸಭೆಯಲ್ಲಿ ಮತ್ತು ಆ ಮೇಲಿನ ಚರ್ಚೆಗಳ ಆಧಾರದ ಮೇಲೆ ಪ್ರಾಜೆಕ್ಟಿನ ಸ್ಥೂಲ ಯೋಜನೆ, ಕಾರ್ಯವಿಧಾನ ಮತ್ತು ಆರಂಭಿಕ ಕೆಲಸದ ಹಂಚಿಕೆಯೊಂದನ್ನು ತಯಾರಿಸಲಾಗಿದೆ. ಅನುವಾದದ ಯೋಜನೆ, ಕಾರ್ಯವಿಧಾನದ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲು ಇದೇ ಜುಲೈ 29 ರಂದು ಬೆಂಗಳೂರಿನಲ್ಲಿ ಒಂದು ಕಾರ್ಯಾಗಾರ ನಡೆಸಲಾಗುತ್ತಿದೆ.

 

 

 

ವಸಂತರಾಜ್ ಎನ್.ಕೆ.