ಲಿಂಚಿಂಗ್ ಕೊಲೆಯಲ್ಲವೇ?

ಸಂಪುಟ: 
30
ಸಂಚಿಕೆ: 
11
date: 
Sunday, 16 July 2017
Image: 

 - ಪ್ರೊ. ರಾಜೇಂದ್ರ ಚೆನ್ನಿ

ಇಂದಿನ ಇಡೀ ರಾಜಕೀಯ ವ್ಯವಸ್ಥೆಯು ಇವುಗಳನ್ನು ಕೊಲೆಯೆಂದು ಒಪ್ಪುತ್ತಿಲ್ಲ. ಏಕೆಂದರೆ
ಈ ಪ್ರಭುತ್ವದ ಸಿದ್ಧಾಂತಗಳ ಮೂಲವಾಗಿರುವ ಆರ್.ಎಸ್.ಎಸ್ ಮೊದಲಿನಿಂದಲೂ
"ಸೈದ್ಧಾಂತಿಕ ಕೊಲೆಗಳನ್ನು" ಸಮರ್ಥಿಸುತ್ತಲೇ ಬಂದಿದೆ.

'ಲಿಂಚಿಂಗ್' ಎನ್ನುವ ಪದವನ್ನು ನಾನು ಮೊದಲು ನೋಡಿದ್ದು ಅಮೇರಿಕದ ಕಪ್ಪು ಜನರ ಮೇಲೆ ಅಲ್ಲಿಯ ಜನಾಂಗೀಯ ದ್ವೇಷದ ಸಂಘಟನೆಯಾಗಿದ್ದ ಕೆ.ಕೆ.ಕೆ. (ಕೂ ಕ್ಲುಕ್ಸ್ ಕ್ಲಾನ್) ಮಾಡುತ್ತಿದ್ದ ಮಾರಣಾಂತಿಕ ಹಲ್ಲೆಗಳ ಕಥನಗಳಲ್ಲಿ. ಒಂದು ಗುಂಪು ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಹೊಡೆದು ಸಾಯಿಸುವುದು ಎಂಬುದು ಅದರ ಅರ್ಥ. ಆದರೆ ಅದನ್ನು ಕೊಲೆಯೆಂದು ಯಾಕೆ ಕರೆಯುವುದಿಲ್ಲವೆಂದು ಯೋಚಿಸಿದಾಗ ಎಲ್ಲೋ ಆಳದಲ್ಲಿ ಅದನ್ನು ಸಮರ್ಥಿಸುವ ಮನೋಭಾವನೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಾಗುತ್ತದೆ. ಅದೇ ರೀತಿ ಇಂಡಿಯ ದೇಶದಲ್ಲಿ ಕೋಮು ಗಲಭೆಯಲ್ಲಿ ಹತ್ಯೆಗಳಾದಾಗ ಅವುಗಳನ್ನು ಕೊಲೆಯೆಂದು ಕರೆಯುವುದಿಲ್ಲ. ಈ ಘಟನೆಗಳಿಗೆ ಒಂದು ನ್ಯಾಯಬದ್ಧತೆ ಇದೆಯೆನ್ನುವ ಹಾಗೆ ಅಥವಾ ಅವು ಆ ಕ್ಷಣದ ಉನ್ಮಾದದಲ್ಲಿ ಆಗಿರುವ ಸಂಗತಿಗಳು, ಪೂರ್ವ ನಿಯೋಜಿತವಲ್ಲವೆಂದು ಭಾವಿಸಲಾಗುತ್ತದೆ. ಹೀಗೆಂದು ನಮ್ಮ ಮಾಧ್ಯಮಗಳು ಪರೋಕ್ಷವಾಗಿ ವ್ಯಾಖ್ಯಾನಿಸುತ್ತವೆ.

ಗುಜರಾತಿನಲ್ಲಿ ಭೀಕರ ಪ್ರಮಾಣದ ಜನಾಂಗೀಯ ಹತ್ಯೆ ನಡೆದಾಗ ಅಲ್ಲಿಯ ಮುಖ್ಯ ಮಂತ್ರಿಗಳು "ಅದು ಕ್ರಿಯೆಗೆ ಪ್ರತಿಕ್ರಿಯೆ" ಎಂದು ವಿವರಿಸಿದ್ದರು. ಇತ್ತೀಚೆಗೆ 20 ತಿಂಗಳಲ್ಲಿ 19 ಕೊಲೆಗಳು ಗೋರಕ್ಷಣೆಯ ಹೆಸರಿನಲ್ಲಿ ನಡೆದಿವೆ. ಇವು ಸಾರ್ವಜನಿಕವಾಗಿ ನಡೆದಿವೆ. ಹಾಗೂ ಬಹುಪಾಲು ಮೊಬೈಲ್ ವಿಡಿಯೋಗಳಲ್ಲಿ, ಫೋಟೊಗಳಲ್ಲಿ ದಾಖಲೆ ಕೂಡ ಆಗಿವೆ. ಆದರೆ ಇಂದಿನ ಇಡೀ ರಾಜಕೀಯ ವ್ಯವಸ್ಥೆಯು ಇವುಗಳನ್ನು ಕೊಲೆಯೆಂದು ಒಪ್ಪುತ್ತಿಲ್ಲ. ಏಕೆಂದರೆ ಈ ಪ್ರಭುತ್ವದ ಸಿದ್ಧಾಂತಗಳ ಮೂಲವಾಗಿರುವ ಆರ್.ಎಸ್.ಎಸ್ ಮೊದಲಿನಿಂದಲೂ "ಸೈದ್ಧಾಂತಿಕ ಕೊಲೆಗಳನ್ನು" ಸಮರ್ಥಿಸುತ್ತಲೇ ಬಂದಿದೆ. ಜರ್ಮನಿಯಲ್ಲಿ ಹಿಟ್ಲರ್‍ನ ಪಕ್ಷವು ಯಹೂದಿಗಳನ್ನು ಕೊಲ್ಲುವುದೇ ಅಂತಿಮ ಪರಿಹಾರ (ದಿ ಫೈನಲ್ ಸೊಲ್ಯೂಶನ್) ಎಂದಿದ್ದನ್ನು ಮತ್ತು ಆ ಬಗೆಗಿನ ಕಾರ್ಯಾಚರಣೆಗಳನ್ನು ಆರ್.ಎಸ್.ಎಸ್.ನ ಸೈದ್ಧಾಂತಿಕ ಗುರುಗಳು ಮೆಚ್ಚಿ ಸಮರ್ಥಿಸಿದ್ದರು. ಗೋಲ್ವಾಲ್ಕರ್ ಹಿಂದು ರಾಷ್ಟ್ರದ "ಇತರರನ್ನು" ಹೀಗೆಯೇ ಮಾಡಿ ಶುದ್ಧೀಕರಣಗೊಳಿಸಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಈ ಬಗೆಯ ಚಿಂತನೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವ ಪಕ್ಷದ ಪ್ರಭುತ್ವವು ಮುಸ್ಲಿಮ್‍ರ ಕೊಲೆಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತಿದೆ. ಇದರ ಹಿಂದಿನ ರಾಜಕಾರಣವು ಬಹಳ ಸರಳವಾಗಿದೆ. ಇಂಥ ಭಯೋತ್ಪಾದನೆಯ ಮೂಲಕ ಮುಸ್ಲಿಮ್ ಜನಾಂಗವನ್ನು ಇದ್ದರೂ ಇಲ್ಲದಂತೆ ಮಾಡುವುದು, ಯಾವ ಪ್ರತಿರೋಧವೂ ಇಲ್ಲದೆ ಬಹುಮತದ ಆಳ್ವಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದು. ಆದ್ದರಿಂದಲೇ ದೇಶದ ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ ಗೋ ಭಯೋತ್ಪಾದಕರನ್ನು ಕ್ಲಾಸ್‍ನಲ್ಲಿ ಸೀಮೆಸುಣ್ಣ ಕದ್ದ ಮಕ್ಕಳಿಗೆ ಬೈಯುವಂತೆ ಬೈದಿದ್ದಾರೆ. ಆದ್ದರಿಂದಲೇ ಆ ಭಾಷಣ ಆಗಿ 24 ಗಂಟೆಯಲ್ಲಿ ಇನ್ನೊಂದು ಕೊಲೆ ನಡೆದಿದೆ.

ಇಡೀ ದೇಶವೇ ಈ ಸಾರ್ವಜನಿಕ ಕೊಲೆಗಳು ಸಂಕೇತಿಸುವ ನೈತಿಕ ಅಧಃಪತನದ ಬಗ್ಗೆ ತೀವ್ರ ಕಳವಳದಿಂದ ಚಿಂತಿಸಬೇಕಾಗಿದೆ. "ಸಕಲ ಜೀವಿಗಳ ಲೇಸನ್ನು" ಬಯಸುವ ನೂರಾರು ಸಾಂಸ್ಕøತಿಕ ಸಂಪ್ರದಾಯಗಳು, ಭಕ್ತಿ ಸಂಪ್ರದಾಯಗಳ ದೇಶದಲ್ಲಿ ಮನುಷ್ಯ ಜೀವಿಗಳ ಕೊಲೆಯನ್ನು ಸಮರ್ಥಿಸುವಂಥ ಅಥವಾ ನಿಷ್ಕ್ರಿಯವಾಗಿ ಅದನ್ನು ನೋಡುವಂಥ ಸಾವಿನ ಸ್ಥಿತಿಯನ್ನು ನಮ್ಮ ಸಾಮುದಾಯಿಕ ನೈತಿಕತೆಯು ತಲುಪಿದೆ. ಇಂಥ ಕೊಲೆಗಾರ ರಾಜಕೀಯವನ್ನು ಅಲಕ್ಷಿಸಿ ನಾಯಕನ ಕುರುಡು ಆರಾಧನೆಯಲ್ಲಿ ತೊಡಗಿರುವ ಸಮೂಹ ಸನ್ನಿಯಲ್ಲಿರುವ ಜನಸಮುದಾಯವು ಭಾರತದ ಕೊನೆಗಾಲವನ್ನು ಬರಮಾಡಿಕೊಳ್ಳುತ್ತದೆಯೆ? ನಮ್ಮೆಲ್ಲ ವಿಮರ್ಶೆ, ಅನುಮಾನ ಹಾಗೂ ವಿರೋಧಗಳೇನೆ ಇದ್ದರೂ ಭಾರತೀಯ ನಾಗರೀಕತೆ ಅಪಾರವಾದ ಬಹುಮುಖತ್ವವನ್ನು ಸಾವಿರಾರು ವರ್ಷ ನಿರಂತರವಾಗಿ ಕಾಪಾಡಿಕೊಂಡು ಬಂದ ನಾಗರೀಕತೆ. ವಿಶ್ವದ ಇನ್ನಾವ ನಾಗರೀಕತೆಯೂ ಇಂಥ ಬಹುತ್ವದ ಚರಿತ್ರೆಯನ್ನು ಹೊಂದಿಲ್ಲ. ಕೇವಲ ನೂರು ವರ್ಷಗಳ ಚರಿತ್ರೆ ಇರುವ ಕೆಲವೇ ವರ್ಷಗಳ ರಾಜಕೀಯ ಅಧಿಕಾರ ಪಡೆದಿರುವ ಒಂದು ಸಂಸ್ಥೆ, ಒಂದು ಪಕ್ಷವು ಈ ಭಾರತೀಯ ನಾಗರೀಕತೆಯನ್ನು ಮುಗಿಸಲು ನಾವು ಬಿಡಬೇಕೆ? ಇದು ಕೆಲವರಿಗೆ ಅತಿಶಯೋಕ್ತಿಯಾಗಿ ಅಥವಾ ವಿಪರ್ಯಾಸವಾಗಿ ಕಾಣಬಹುದು.     ನಮ್ಮೆದುರಿಗೆ ಇರುವ ಸವಾಲುಗಳು 'ಐಚಿತಿ ಚಿಟಿಜ oಡಿಜeಡಿ' ನ ಸಮಸ್ಯೆಗಳಲ್ಲ. ಇವು ಮೂಲತಃ ನಾಗರೀಕತೆಯ ಪ್ರಶ್ನೆಗಳು. ಭಾರತೀಯ ನಾಗರೀಕತೆಯು ತನ್ನ ವಿಶಿಷ್ಟವಾದ ಚರಿತ್ರೆಯಿಂದಾಗಿ ಅಸಂಖ್ಯ ಭಾಷೆ, ಜಾತಿ, ಧರ್ಮ ಹಾಗೂ ಸಂಸ್ಕøತಿಗಳ ಬಹುತ್ವದ ಹಾಗೂ ಸಹಬಾಳ್ವೆಯ ನಾಗರೀಕತೆಯಾಗಿದೆ. ಇದು ಈ ನಾಗರೀಕತೆಯ ಜೀವಶಕ್ತಿಯಾಗಿದೆ. ಇದು ನಾಶವಾದರೆ ಈ ನಾಗರೀಕತೆ ಉಳಿಯುವ ಯಾವ ಸಾಧ್ಯತೆಯೂ ಇಲ್ಲ. ಬಹುತ್ವವನ್ನು ನಾಶ ಮಾಡುವುದನ್ನೇ ತನ್ನ ಉದ್ದೇಶವಾಗಿಟ್ಟು ಕೊಂಡಿರುವ ಸಂಸ್ಥೆಯು ಈಗ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದೆ. ಇದರ ವಿರುದ್ಧ ಈಗಲೂ ನಾವು ಜನಾಂದೋಲನಗಳನ್ನು ಕಟ್ಟದಿದ್ದರೆ ಒಂದು ನಾಗರೀಕತೆಯ ಅವಸಾನಕ್ಕೆ ನಾವು ಸಾಕ್ಷಿಯಾಗುತ್ತೇವೆ.