ಕೆಂಪು ನೆಲದ ಮಾತು. .

ಸಂಪುಟ: 
11
ಸಂಚಿಕೆ: 
30
Sunday, 16 July 2017

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಂಪಿ ವಿ.ವಿ. ಭೇಟಿ ನೀಡಿದಾಗ ಅವರ “ತ್ರಿಪುರಾದ ರಾಜಕೀಯ ಅರ್ಥಶಾಸ್ತ್ರ” ಉಪನ್ಯಾಸದಿಂದ ಪ್ರಭಾವಿತರಾದ ಪ್ರೊ, ಚಂದ್ರ ಪೂಜಾರಿ ಮತ್ತು ಪ್ರೊ. ರಹಮತ್ ತರೀಕೆರೆ ಅವರು ತ್ರಿಪುರಾದ ಅಧ್ಯಯನ ಪ್ರವಾಸ  ಕೈಗೊಳ್ಳುವ ನಿರ್ಧಾರ ಮಾಢಿದರು. ಅವರು ಸಂಘಟಿಸಿ, ಜೂನ್ ನಲ್ಲಿ ತ್ರಿಪುರಾಕ್ಕೆ ಭೇಟಿ ನೀಡಿದ ಅಧ್ಯಯನ ತಂಡದಲ್ಲಿ ಅವರ ಜತೆಗೆ ಪ್ರಭಾಕರ ಎ.ಎಸ್., ಅರುಣ್ ಜೋಳದ ಕೂಡ್ಲಿಗಿ, ಕಿರಣ್ ಗಾಜನೂರು, ನೀಲಾ ಕೆ., ಪ್ರಭು ಖಾನಾಪುರೆ, ಮೀನಾಕ್ಷಿ ಬಾಳಿ, ಎಸ್.ವೈ. ಗುರುಶಾಂತ್ ಅವರುಗಳು ಇದ್ದರು. ಅಧ್ಯಯನ ತಂಡ ತ್ರಿಪುರಾ ಪ್ರವಾಸ ಮಾಡುತ್ತಿದ್ದಂತೆ, ಪ್ರಮುಖವಾಗಿ ಅರುಣ್ ಮತ್ತು ಕಿರಣ್ ಅವರ ಉತ್ಸಾಹದಿಂದ ಅವರ ಫೇಸ್ ಬುಕ್ ಸ್ನೇಹಿತರೆಲ್ಲರಿಗೂ ತಂಡದ ಒಳನೋಟಗಳಿಂದ ಕೂಡಿದ ಕಮೆಂಟುಗಳು, ಚಿತ್ರ, ಲೈವ್ ವಿಡಿಯೋ ಮೂಲಕ ತಾವೇ ತಂಡದ ಭಾಗವಾದ ಅನುಭವ. ಇಲ್ಲಿ ಕಿರಣ್ ‘ಜನಶಕ್ತಿ’ಗೆ ವಿಶೇಷವಾಗಿ ಬರೆದ ಅವರ ಸ್ಥೂಲ ವಿಶ್ಲೇಷಣೆಯ ಲೇಖನದ ಜತೆ ಅವರ ಕೆಲವು ಫೇಸ್ ಬುಕ್ ಕಮೆಂಟು, ಚಿತ್ರಗಳೂ ಇವೆ. ತಂಡ ತ್ರಿಪುರಾದ ಅಧ್ಯಯನ ಪ್ರವಾಸದ ವಿವರಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸುವುದಾಗಿ ಹೇಳಿದ್ದಾರೆ. ಪುಸ್ತಕಕ್ಕೆ ಕಾಯುತ್ತಿರುವಾಗಲೇ, ತಂಡದ ಇತರ ಸದಸ್ಯರ ಲೇಖನಗಳನ್ನೂ ‘ಜನಶಕ್ತಿ’ಯಲ್ಲಿ ನಿರೀಕ್ಷಿಸಿ.

ತ್ರಿಪುರ ಎಂಬ ಸಣ್ಣ ರಾಜ್ಯದ ಹೆಸರು. ಭಾರತದ ರಾಜಕಾರಣದಲ್ಲಿ ಆಗಾಗ ಕೇಳಿ ಬರುತ್ತಿರುತ್ತದೆ. ಅದಕ್ಕೆ ಕಾರಣ ಕಳೆದ ಮೂರು ದಶಕಗಳ ನಿರಂತರವಾದ ಎಡರಂಗದ ಆಡಳಿತ ಅಲ್ಲಿ ರೂಪಿಸಲು ಪ್ರಯತ್ನಿಸಿರುವ ರಾಜಕೀಯ ಬದಲಾವಣೆಯ ಪರ್ವ (Political Transformation) ಎಂದು ಹಲವಾರು ರಾಜಕೀಯ ಶಾಸ್ತ್ರಜ್ಞರು ಗುರುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರಾಜಕೀಯ ವಿಜ್ಞಾನಿಯೂ ತ್ರಿಪುರ ನೆಲವನ್ನು ಒಮ್ಮೆ ತಾಕಬೇಕು. ಅಲ್ಲಿನ ಸಮಾಜೋ-ಆರ್ಥಿಕ ರಚನೆಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಸಾಧ್ಯವಾದರೆ ಆ ನೆಲದ ಜನರೊಟ್ಟಿಗೆ ಬೆರೆಯಬೇಕು ಎಂಬ ಅಕಾಂಕ್ಷೆ ಹೊಂದಿರುತ್ತಾನೆ.

ನನ್ನ ಅದೃಷ್ಟಕ್ಕೆ ಕರ್ನಾಟಕದಿಂದ “ತ್ರಿಪುರ ಅಧ್ಯಯನ ತಂಡದ” ಭಾಗವಾಗುವ ಅವಕಾಶ ಪ್ರೊ. ರಹಮತ್ ತರೀಕೆರೆ ಮತ್ತು ಪ್ರೊ. ಚಂದ್ರ ಪೂಜಾರಿ ಒದಗಿಸಿದರು. ಈ ಕಾರಣಕ್ಕಾಗಿ ನಾನು ಇವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ.

ಭ್ರಷ್ಟಾಚಾರ ಇದೆಯಾ?
ನಾನು : ಸಾರ್ ಪಂಚಾಯಿತಿ ಮಟ್ಟದಲ್ಲಿ ನಿಮ್ಮಲ್ಲಿ ಭ್ರಷ್ಟಾಚಾರ ಇದೆಯಾ?
ಅವರು : ಕ್ಷಮಿಸಿ ಈ ಪ್ರಶ್ನೆಗೆ ನಾನು ಉತ್ತರಿಸಿದರೆ ತಪ್ಪಾಗುತ್ತದೆ ತಾವು ಹೊರಗಿನ ಜನರನ್ನು ಮಾತನಾಡಿಸಿ ಅನ್ಯತಾ ಭಾವಿಸಬೇಡಿ... (ಈ ಕಾನ್ಫಿಡೆನ್ಸ್ ಆಶ್ಚರ್ಯ ಆಯಿತು)
ಇದು ನಾನು ಮಾತನಾಡಿಸಿದ ಬಹುಪಾಲು ತ್ರಿಪುರ ಪಂಚಾಯಿತಿ ಮಟ್ಟದ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮನಸ್ಥಿತಿ...
 

 

2011ರ ಜನಸಂಖ್ಯಾ ವರದಿಯ ಪ್ರಕಾರ ಈ ರಾಜ್ಯದ ಒಟ್ಟು ಜನಸಂಖ್ಯೆ 36.7 ಲಕ್ಷ.  ತನ್ನ ಗಡಿಯ ಮೂರು ಭಾಗಗಳನ್ನು ಬಾಂಗ್ಲಾ ದೇಶದೊಂದಿಗೆ ಹಂಚಿಕೊಂಡಿರುವ ಈ ಪುಟ್ಟ ಈಶಾನ್ಯ ರಾಜ್ಯ ಕೇವಲ 10,491 ಕಿಲೋಮಿಟರ್ ವಿಸ್ತಿರ್ಣ ಹೊಂದಿದೆ. ಗಾತ್ರ, ಜನಸಂಖ್ಯೆ ಮತ್ತು ವ್ಯಾಪ್ತಿಯ ದೃಷ್ಟಿಯಿಂದ ಅತ್ಯಂತ ಪುಟ್ಟದಾಗಿ ಕಾಣುವ ಈ ರಾಜ್ಯ ತನ್ನ ಚರಿತ್ರೆಯ ದೃಷ್ಟಿಯಿಂದ ಸಮಕಾಲೀನ ಭಾರತಕ್ಕೆ ಮಾದರಿ ಆಗಬಹುದಾದ ಮಹತ್ವದ ಅಂಶಗಳನ್ನು ಪ್ರತಿಪಾದಿಸುತ್ತಿದೆ.

ಸತತವಾಗಿ ರಾಜವಂಶ, ಕೇಂದ್ರಿಯ ಆಡಳಿತ, ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಸಂಘರ್ಷದ ಚರಿತ್ರೆಯನ್ನು ಕಂಡಿರುವ ತ್ರಿಪುರಾ ನಾಗರೀಕ ಅಂತಿಮವಾಗಿ ಅಹಿಂಸೆ ಮತ್ತು ಉತ್ತಮ ಆಡಳಿತ ನೀಡುವ ರಾಜಕೀಯ ಆಯ್ಕೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಈ ಕಾರಣಕ್ಕಾಗಿಯೇ ಕಳೆದ ಮೂರು ದಶಕಗಳಿಂದ ಇಲ್ಲಿ ಎಡರಂಗ ರಾಜ್ಯಾಧಿಕಾರವನ್ನು ಹಿಡಿದಿದೆ ಮತ್ತು ಭಾರತದ ಒಟ್ಟು ರಾಜಕೀಯ ವಾತಾವರಣಕ್ಕಿಂತ ಭಿನ್ನವಾದ ಸಂಗತಿಗಳನ್ನು, ಮಾದರಿಗಳನ್ನು ತ್ರಿಪುರಾದಲ್ಲಿ ರೂಪಿಸಿದೆ.

ನಮ್ಮ ಏಳು ದಿನಗಳ ಅಲ್ಪಾವಧಿಯ ಪ್ರವಾಸದಲ್ಲಿ ನಾನು ಗ್ರಹಿಸಿದಂತೆ ಇಲ್ಲಿನ ಸರ್ಕಾರ ನಾಲ್ಕು ಮುಖ್ಯವಾದ ಅಂಶಗಳ ಮೇಲೆ ಆಡಳಿತವನ್ನು ನಿರೂಪಿಸಿಕೊಂಡು ಬರುತ್ತಿದೆ. ಅವುಗಳು ಈ ಕೆಳಗಿನಂತಿವೆ.

1)    ಸೈದ್ಧಾಂತಿಕ ಬದ್ಧತೆಯುಳ್ಳ ಸರ್ಕಾರ

2)    ಸುಸ್ಥಿರ ಅಭಿವೃದ್ದಿ ಮಾದರಿಯ ಅಳವಡಿಕೆ

3)    ಸಾಮುದಾಯಿಕ ಕೃಷಿ ಮತ್ತು ಸಂಘಟಿತ ದುಡಿಮೆಯಂತಹ ಯೋಜನೆಗಳು

4)    ಅಹಿಂಸಾ ತತ್ವದ ಮುಂದಾಳತ್ವ ಮತ್ತು ಜನಸ್ನೇಹಿ ಆಡಳಿತ

ನಾನು ಹಿಂದೆ ಪ್ರಸ್ತಾಪಿಸಿದಂತೆ ತ್ರಿಪುರ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರಲು ಅತಿ ಮುಖ್ಯ ಕಾರಣ ಅಲ್ಲಿನ ರಾಜಕೀಯ ಬದಲಾವಣೆಯ ಪರ್ವ(Political Transformation). ಯಾವ ಚರಿತ್ರೆ ಸಂಘರ್ಷ ಮತ್ತು ಹೋರಾಟದ ಚರಿತ್ರೆಯಾಗಿತ್ತೋ ಆ ನೆಲವನ್ನು ಸೌಹಾರ್ಧತೆ ಮತ್ತು ಸುಸ್ಥಿರ ಅಭಿವೃದ್ದಿಯ ಕಡೆ(Sustainable Development) ಚಲಿಸುವಂತೆ ಮಾಡಿದ್ದು ಇಲ್ಲಿನ ಎಡಪಕ್ಷಗಳ ಯಶಸ್ಸಿನ ಗುಟ್ಟು ಅನ್ನಿಸುತ್ತದೆ. ಇಷ್ಟು ಗಟ್ಟಿಯಾಗಿ ಮತ್ತು ನಿರಂತರವಾಗಿ ಒಂದು ಸೈದ್ಧಾಂತಿಕತೆ ರಾಜ್ಯವನ್ನು ಆಳಬೇಕಾದರೆ ಅಲ್ಲಿನ ರಾಜಕೀಯ ನಾಯಕತ್ವ ಸೈದ್ಧಾಂತಿಕ ಬದ್ಧತೆಯನ್ನು ಹೊಂದಿರಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ತ್ರಿಪುರ ಚುನಾವಣೆ ಕ್ರಮ ಮತ್ತು ಅಲ್ಲಿನ ಮಂತ್ರಿ, ಮುಖ್ಯಮಂತ್ರಿಗಳ ದಿನಚರಿ ನೋಡಿದರೆ ಆಶ್ಚರ್ಯವಾಗುತ್ತದೆ.

ಸಹಕಾರಿ ಕೃಷಿಯ ಶಕ್ತಿಯ ಅನಾವರಣ
ತ್ರಿಪುರಾದ ದುರ್ಗಾಬಾರಿ ಸಹಕಾರಿ ಟೀ ಸಂಘ ಸುಮಾರು 1136 ಎಕರೆಗಳಲ್ಲಿ ಟೀ ಸೊಪ್ಪು ಬೆಳೆದು
ಅದನ್ನು ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.  ಇಲ್ಲಿ ಯಾರೂ ಮಾಲೀಕರಿಲ್ಲ ಬದಲಾಗಿ
ಸಹಕಾರಿ ತತ್ವದಲ್ಲಿ ಕೃಷಿ ನಡೆಯುತ್ತಿದೆ ಕಳೆದ ವರ್ಷ ಇವರು ಸುಮಾರು 12 ಲಕ್ಷ ರೂಪಾಯಿಗಳಷ್ಟು ಹಣವನ್ನು ಆದಾಯ ತೆರಿಗೆ ಕಟ್ಟಿದ್ದಾರೆ...

 

ಇಲ್ಲಿನ ಶಾಸಕ ಕೇವಲ 10 ರಿಂದ 12 ಸಾವಿರ ಹಣವನ್ನು ಖರ್ಚುಮಾಡಿ ವಿಧಾನ ಸಭಾ ಚುನಾವಣೆ ಗೆಲ್ಲುತ್ತಾನೆ, ಒಬ್ಬ ಮಂತ್ರಿಯಿಂದ ಹಿಡಿದು ವಿಧಾನ ಸಭೆಯ ಸಭಾಪತಿಯವರೆಗೆ ಎಲ್ಲರೂ ಪ್ರತಿ ದಿನ ತಮ್ಮ ಕ್ಷೇತ್ರಗಳ ಪಕ್ಷದ ಕಛೇರಿಯಲ್ಲಿ ಜನರಿಗೆ ಲಭ್ಯ ಇರುತ್ತಾರೆ. ಮುಖ್ಯಮಂತ್ರಿ, ಸಂಸದರು ಮತ್ತು ಸಂಪುಟದ ಬಹುತೇಕ ಮಂದಿ ಪ್ರತಿ ರಾತ್ರಿ 7.30 ರಿಂದ ತ್ರಿಪುರ ರಾಜಧಾನಿ ಅಗರ್ತಲಾದಲ್ಲಿನ ಪಕ್ಷದ ಕಛೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತಾರೆ, ಎಂಬುದೇ ಅಲ್ಲಿನ ರಾಜಕೀಯ ನಾಯಕತ್ವಕ್ಕೆ ಇರುವ ಸೈದ್ಧಾಂತಿಕ ಬದ್ಧತೆಯನ್ನು ತೋರಿಸುತ್ತದೆ. ಈ ಪ್ರಗತಿಪರ ದೃಷ್ಟಿಕೋನ ಸಾಮಾನ್ಯವಾಗಿ ಆಳುವ ವರ್ಗ, ಸಮುದಾಯಗಳಲ್ಲಿ ಹುಟ್ಟು ಹಾಕಬಹುದಾದ ಜಾತಿ/ಧರ್ಮ ಇತ್ಯಾದಿ ವಿಚ್ಛಿದ್ರಕಾರಕ ಚರ್ಚೆಗಳಿಗೆ ಅವಕಾಶವನ್ನೇ ನೀಡಿಲ್ಲ.

ಇನ್ನು ಅಭಿವೃದ್ಧಿಯ ವಿಚಾರಕ್ಕೆ ಬರುವುದಾದರೆ ತ್ರಿಪುರ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಮತ್ತು ಕೇಂದ್ರದಲ್ಲಿ ಆಳುವ ಪಕ್ಷಗಳ ರಾಜಕೀಯ ತಂತ್ರ ಇತ್ಯಾದಿ ಹಲವು ಮಿತಿಗಳ ನಡುವೆಯೂ ಮಹತ್ವದ ಸಾಧನೆಯನ್ನು ಮಾಡಿದೆ.

ಆದರೆ ನಾವು ಈ ಅಭಿವೃದ್ಧಿಯ ಮಾದರಿಯನ್ನು ಕರ್ನಾಟಕ, ಗುಜರಾತ್ ನಂತಹ ಬೃಹತ್ ಆದಾಯ ಹೊಂದಿರುವ ರಾಜ್ಯಗಳಿಗೆ ಹೋಲಿಸಿ ನೋಡಲಾಗದು. ಏಕೆಂದರೆ ಇಂದಿಗೂ ತ್ರಿಪುರಾ ಸರ್ಕಾರ ಅಲ್ಲಿನ ಜನರ ಮೇಲೆ ಮನೆ ಕಂದಾಯವನ್ನು ವಿಧಿಸಿಲ್ಲ. .! ಅದಕ್ಕೆ ಬದಲಾಗಿ ಅಲ್ಲಿರುವ ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಸಾಮುದಾಯಿಕ ನೆಲೆಯ ಅಭಿವೃದ್ದಿಯ (Community centric Development module) ಮಾದರಿಯನ್ನು ತ್ರಿಪುರ ರಾಜಕೀಯ ನಾಯಕತ್ವ ರೂಪಿಸಿಕೊಟ್ಟಿದೆ ಎಂಬ ಅರ್ಥದಲ್ಲಿ ವಿಶ್ಲೇಷಣೆಯನ್ನು ಮಾಡಬಹುದು ಅನ್ನಿಸುತ್ತದೆ.

ಉದಾಹರಣೆಯಾಗಿ ನೋಡುವುದಾರೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತ್ರಿಪುರಾದಂತಹ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಾಲಿಗೆ ಮಹತ್ವದ ಸಂಪನ್ಮೂಲ. ಇದನ್ನು ಬಳಸಿಕೊಂಡು ಇಲ್ಲಿನ ಸರ್ಕಾರ ಆ ಯೋಜನೆಯ ಭಾಗವಾಗಿ ಕೆಲಸಗಾರರಿಗೆ ನೂರು ಮಾನವ ದಿನಗಳ ಕೆಲಸವನ್ನು ಕೊಡುವುದಕ್ಕಷ್ಟೆ ಸೀಮಿತವಾಗದೆ ಆ ನೂರು ಮಾನವ ದಿನಗಳನ್ನು ಬಳಸಿಕೊಂಡು ಉಳಿದ 265 ದಿನಗಳು ಆ ಒಟ್ಟು ಕುಟುಂಬದ ಬದುಕಿಗೆ ಆಧಾರ ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಿದೆ.

ಅದರ ಭಾಗವಾಗಿ ಇಂದು ತ್ರಿಪುರಾದ ಗ್ರಾಮೀಣ ಭಾಗದ ಪ್ರತಿ ಮನೆಯಲ್ಲಿಯೂ ಮೀನು ಸಾಕಾಣಿಕೆ ಹೊಂಡಗಳನ್ನು ನಿರ್ಮಿಸಿಕೊಟ್ಟಿದೆ. ತ್ರಿಪುರಾದಲ್ಲಿ ಬಂಗಾಳಿಗಳು ಬಹುಸಂಖ್ಯೆಯಲ್ಲಿ ಇರುವುದರಿಂದ ಮೀನು ಅತ್ಯಂತ ಮಹತ್ವದ ಆಹಾರವಾಗಿದೆ. ಆದ್ದರಿಂದ ಪ್ರತಿ ಮನೆಯ ಮುಂದಿನ ಜಾಗದಲ್ಲಿ ಮೀನು ಸಾಕಾಣಿಕೆ ಹೊಂಡಗಳನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೊರೆಯುವ ನೂರು ಮಾನವ ದಿನಗಳಲ್ಲಿ ನಿರ್ಮಿಸುವ ಯೋಜನೆ ರೂಪಿಸಿರುವ ಸರ್ಕಾರ ಅದರಲ್ಲಿ ಭಾಗಶಃ ಯಶಸ್ವಿಯಾಗಿದೆ.

ಇದರ ಆಚೆಗೆ ಅಗರ್ತಲಾದ ನಗರ ಸಭೆ ನಗರದ ಬಡವರಿಗಾಗಿ ವಾರ್ಷಿಕ 60 ದಿನಗಳ ಉದ್ಯೋಗ ಖಾತರಿ ಯೋಜನೆಯೊಂದನ್ನು ರೂಪಿಸಿದೆ. ಈ ಎಲ್ಲಾ ಸಂಗತಿಗಳನ್ನು ತ್ರಿಪುರಾ ರಾಜಕೀಯ ನಾಯಕತ್ವ ಹೇಗೆ ಅಭಿವೃದ್ದಿಯನ್ನು ಜನಕೇಂದ್ರಿತವಾಗಿ ಮತ್ತು ಸುಸ್ಥಿರ ಮಾದರಿಯಲ್ಲಿ ರೂಪಿಸಿದೆ ಎಂಬುದಕ್ಕೆ ಉದಾಹರಣೆಯಾಗಿ ಕೊಡಬಹುದಾಗಿದೆ.

ಆಶ್ಚರ್ಯಕ್ಕೆ ಕಾರಣ ಬೇಕೆ...!
ತ್ರಿಪುರದಿಂದ ಪ್ರತಿನಿಧಿಸುವ ಲೋಕಸಭಾ ಸದಸ್ಯ ಕಾಮ್ರೇಡ್. ಶಂಕರ್ ಪ್ರಸಾದ್ ದತ್ತ ಅವರು ಸಂಜೆ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾಮಾನ್ಯರಂತೆ ಓದುತ್ತಿದ್ದಾರೆ....

ಈ ರೀತಿಯ ಹಲವಾರು ಯೋಜನೆಗಳು ಇಲ್ಲಿನ ಸರ್ಕಾರ ರೂಪಿಸಿದೆ ಸಾಮುದಾಯಿಕ ಕೃಷಿ ಮತ್ತು ಸಹಕಾರಿ ಸಂಘಗಳು ಅವುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಲ್ಲದೆ ಇಲ್ಲಿನ ಸರ್ಕಾರ 58 ವರ್ಷ ದಾಟಿದ ಸೈಕಲ್ ತಳ್ಳುವವನು, ರಿಕ್ಷಾ ಒಡಿಸುವವನು, ಕೂಲಿ, ವಿಧವೆ, ಪರಿತ್ಯಕ್ತೆ ಇತ್ಯಾದಿ ಎಲ್ಲಾ ವರ್ಗದ ಜನರಿಗೆ ಒಟ್ಟು 33 ವಿವಿಧ ಮಾದರಿಯ ಸಾಮಾಜಿಕ ಪಿಂಚಣಿ ವ್ಯವಸ್ಥೆಯನ್ನು ರೂಪಿಸಿದೆ. ಪ್ರತಿ ಒಂದು ಕಿಲೋಮಿಟರ್ ದೂರಕ್ಕೆ ಸುಸಜ್ಜಿತ ಸರ್ಕಾರಿ ಶಾಲೆಗಳನ್ನು ನಿರ್ಮಿಸಿದೆ, ಇಂದಿಗೂ ಇಲ್ಲಿನ ಬಹುಪಾಲು ಜನರು ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಈ ಎಲ್ಲಾ ಒಟ್ಟು ಪ್ರಯತ್ನದ ಭಾಗವಾಗಿ ಇಂದು ತ್ರಿಪುರಾ ಶೇ 97.7 ರಷ್ಟು ಸಾಕ್ಷರತೆಯನ್ನು ಸಾಧಿಸಿದೆ. ದೇಶದ ರಾಜ್ಯಗಳ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ 6ನೇ ಸ್ಥಾನದಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ  ಜನರು ಸ್ವಾವಲಂಬಿಗಳಾಗಿ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ.

ಮೇಲುನೋಟಕ್ಕೆ ಒಟ್ಟು ತ್ರಿಪುರಾದ ಅಭಿವೃದ್ದಿಯ ಮಾದರಿ ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಲ್ಲಿ ಸಮುದಾಯಗಳ ನಡುವೆ ಹೆಚ್ಚು ಅಂತರ ಉಳಿಸಿದಂತೆ ಕಾಣುವುದಿಲ್ಲ ಇದಕ್ಕೆ ಕಾರಣ ರಾಜಕೀಯ ಬದ್ಧತೆ ಮತ್ತು ಸುಸ್ಥಿರ ಅಭಿವೃದ್ದಿಯ ಮಾದರಿಯ ಅಳವಡಿಕೆ ಅನ್ನಿಸುತ್ತದೆ. ಇದರ ಪರಿಣಾಮವಾಗಿ ಇಲ್ಲಿನ ಸಮಾಜದಲ್ಲಿನ ಸಂಪನ್ಮೂಲ ಹಂಚಿಕೊಂಡು ಉಣ್ಣುವ ಮಾದರಿಯೊಂದು ಕಾಣುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಚಾರಿತ್ರಿಕವಾಗಿ ರೂಪುಗೊಂಡ ರಾಜಕೀಯ ವೈಚಾರಿಕತೆ ಇಲ್ಲಿನ ಜನರ ಪ್ರಜ್ಞೆಯನ್ನು ಬಹಳಷ್ಟು ಪ್ರಭಾವಿಸಿದೆ. ಇದರ ಅರ್ಥ ತ್ರಿಪುರಾದಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿದೆ, ಆಳುವವರಿಗೆ ಜನರು ಯಾವ ಪ್ರಶ್ನೆಯನ್ನು ಕೇಳುತ್ತಿಲ್ಲ, ತ್ರಿಪುರಾ ಭೂಮಿಯ ಮೇಲಿನ ಸ್ವರ್ಗ ಎಂಬ ಪ್ರತಿಮೆಗಳನ್ನು ನಾನು ಕಟ್ಟುತ್ತಿಲ್ಲ ಅಥವಾ ಹಾಗೆ ವಾದಿಸುತ್ತಿಲ್ಲ..!

ತ್ರಿಪುರಾದ ಮೊದಲ ಕಾರ್ಖಾನೆ...
ತ್ರಿಪುರ ತನ್ನ ಭೌಗೋಳಿಕತೆಯ ಕಾರಣಕ್ಕೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದೆ. ಇಷ್ಟರ ನಡುವೆಯೂ ಉದ್ಯೋಗ
ಸೃಷ್ಟಿಯ ಕಾರಣಕ್ಕೆ ಇಲ್ಲಿರುವ ಬಿದಿರನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆ ರೂಪಿಸಿದೆ...

ಎಲ್ಲಾ ರಾಜ್ಯಗಳಂತೆ ಇಲ್ಲಿನ ಜನರೂ ತ್ರಿಪುರಾದ ರಾಜಕೀಯ ನಾಯಕತ್ವದ ಕುರಿತು ಬೇಸರ ಹೊಂದಿದ್ದಾರೆ. ಅದರಲ್ಲಿಯೂ ಯುವ ಸಮುದಾಯ ಸಾಕಷ್ಟು ಎಡಪಕ್ಷಗಳ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ತ್ರಿಪುರಾದಲ್ಲಿ ಶೇಕಡಾ 38% ರಷ್ಟು ಆಡಳಿತ ವಿರೋಧಿ ಮನೋಭೂಮಿಕೆಯ ಜನರಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ವಿರೋಧ ಕೇವಲ ಧರ್ಮ, ಜಾತಿ, ಜನಾಂಗ ಇತ್ಯಾದಿ ತೆಳು ಸಾಮಾಜಿಕ  ಅಸ್ಮಿತೆಗಳ ಆಧಾರದಲ್ಲಿ ವಿಂಗಡಣೆಗೊಂಡ ವಿರೋಧವಾಗದೆ ಒಂದು ರಾಜ್ಯ ನಿರ್ವಹಿಸಲು ಸೋತಿರುವ ಉದ್ಯೋಗ, ಆಹಾರ, ವೈದ್ಯಕೀಯ ಸೌಲಭ್ಯ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ವಿರೋಧಗಳಾಗಿವೆ. ಈ ಅರ್ಥದಲ್ಲಿ ಇಲ್ಲಿನ ಜನ ತಮ್ಮ ರಾಜಕೀಯ ನಾಯಕತ್ವಕ್ಕೆ ಸಕಾರಾತ್ಮಕ ಮತ್ತು ಸ್ವ-ವಿಮರ್ಶಾತ್ಮಕ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಯುವಜನರ ಈ ಪ್ರಜ್ಞೆ ಸಹ ಇಲ್ಲಿನ ಎಡರಂಗ ರೂಪಿಸಿರುವ ರಾಜಕೀಯ ಅರಿವಿನ ಭಾಗವಾಗಿರುವುದು ನಾವು ಗಮನಿಸಬೇಕಾದ ಸಂಗತಿಯಾಗಿದೆ.

ಒಟ್ಟಾರೆ ಕೆಂಪು ನೆಲದ ರಾಜಕೀಯ ಮತ್ತು ಸಾಮಾಜಿಕ ರಚನೆ ಸಾಕಷ್ಟು ಮಿತಿಗಳ ನಡುವೆ ಹಲವಾರು ಸಕಾರಾತ್ಮಕ ಸಂಗತಿಗಳನ್ನು, ರಾಜಕೀಯ ಪ್ರಬುದ್ಧತೆಯನ್ನು, ಜನಚಳುವಳಿ ರೂಪಿಸಿರುವ ಸಾಮಾಜಿಕ/ಆರ್ಥಿಕ ರಚನೆಗಳ ಕುರಿತು ಸಾಕಷ್ಟು ಆಸಕ್ತಿಕರ ಸಂಗತಿಗಳನ್ನು, ನಮ್ಮ ಸಾಮಾಜಿಕ ಸಂಧರ್ಭಕ್ಕೆ ಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಪ್ರಶ್ನೆಗಳನ್ನು ನನ್ನಲ್ಲಿ ರೂಪಿಸಿದೆ.

ಪಂಚಾಯಿತಿ ರಾಷ್ಟೀಯ ಪ್ರಶಸ್ತಿ ವಿಜೇತ

ನನ್ನ ಮತ್ತು ಅರುಣ್ ಮಧ್ಯ ಇರುವ ವ್ಯಕ್ತಿಯ ಹೆಸರು ರಾಕಲ್ ದಾಸ್ ಪರಿಶಿಷ್ಟ ಜಾತಿಗೆ ಸೇರಿದ ಇವರು ತ್ರಿಪುರಾದ ಜಿರಾನಿಯಾ ಪಂಚಾಯಿತಿಯ ಅಧ್ಯಕ್ಷ ಆಗಿದ್ದಾರೆ. ಈ ಬಾರಿಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕಾರಣಕ್ಕೆ ಈ ಪಂಚಾಯಿತಿ ರಾಷ್ಟೀಯ ಪ್ರಶಸ್ತಿ ಪಡೆದಿದೆ.

ನವ ದೆಹಲಿಯಲ್ಲಿ ನಡೆಯಲಿದ್ದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಇವರನ್ನು ಊರಿನ ಜನ ಹೊಸ ಬಟ್ಟೆ, ಶೂ ಇತ್ಯಾದಿ ಕೊಟ್ಟು ರೈಲು ಹತ್ತಿಸಿದ್ದಾರೆ.

ಇವರನ್ನು ನೋಡಿ ಒಮ್ಮೆ ತಮ್ಮ ಕಾರಿಗೆ ಪಂಚಾಯಿತಿ ಅಧ್ಯಕ್ಷ ಎಂದು ಅನಧಿಕೃತ ಬೋರ್ಡ್ ತಗುಲಿಸಿಕೊಂಡು ತಿರುಗುವ ಮಂದಿ ನೆನಪಾಗಿ ನನಗೆ ನಾಚಿಕೆ ಆಯಿತು....

 

 

 

- ಡಾ. ಕಿರಣ್ ಎಂ ಗಾಜನೂರು