ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಧರಣಿ

ಸಂಪುಟ: 
11
ಸಂಚಿಕೆ: 
30
Sunday, 16 July 2017

ಬೆಂಗಳೂರು ನಗರದಲ್ಲಿ ನೂರಾರು ಸ್ಲಂ ಮತ್ತು ಸರ್ಕಾರಿ ಭೂಮಿಗಳಲ್ಲಿ ಕೂಲಿ-ನಾಲಿ ಮಾಡಿ ಬದುಕುವ ದಲಿತರು, ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಕ್ಕೆ ಸೇರಿದ ಜನರು ಗುಡಿಸಲು ಕಟ್ಟಿಕೊಂಡು 30-40 ವರ್ಷಗಳಿಂದ ವಾಸ ಮಾಡುತ್ತಿರುವ ಜನರಿಗೆ ಹಕ್ಕು ಪತ್ರ ಮತ್ತು ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಪುರಭವನದ ಎದುರು ಜುಲೈ 10ರಂದು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಆರ್ ಶ್ರೀನಿವಾಸ್ ರವರು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶಿಕ್ಷಣ, ವಸತಿ, ಆರೊಗ್ಯ, ಉದ್ಯೋಗ ನೀಡಬೇಕಾದದ್ದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ನಮಗೆ ಸ್ವತಂತ್ರ ಬಂದು 70 ವರ್ಷಗಳು ಕಳೆದರೂ ತಲೆಗೊಂದು ಸೂರು ಇಲ್ಲದೆ, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ  ಕಾರ್ಮಿಕರು ನಗರದಲ್ಲಿದ್ದು ಬರುವ ಆದಾಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಲಾರದೆ, ಸರಿಯಾದ ಶಿಕ್ಷಣ ಕೊಡಿಸಲಾಗದೆ, ಕಾಯಿಲೆ ಬಂದಾಗ ಸರಿಯಾದ ಚಿಕಿತ್ಸೆ ಪಡೆಯಲಾರದಂತಾ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹಲವಾರು ಬಾರಿ ಹೋರಾಟಗಳು ನಡೆದಿದ್ದರೂ ಇವತ್ತಿಗೂ ನಿವೇಶನ ಅನ್ನುವುದು ಈ ಜನರಿಗೆ ಮರೀಚಿಕೆಯಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ. ಟಿ. ರಾಮಸ್ವಾಮಿ ಸಮಿತಿ ವರದಿ ಅನ್ವಯ ವಶಪಡಿಸಿಕೊಂಡಿ 41 ಸಾವಿರು ಎಕರೆ ಜಮೀನಿನಲ್ಲಿ ಕನಿಷ್ಠ 1 ಸಾವಿರ ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ಹಂಚಿಕೆಗೆ ಮೀಸಲಿಡಬೇಕು. ಸ್ಲಂಗಳಲ್ಲಿ ವಾಸಿಸುತ್ತಿರುವವರಿಗೆ ಕೂಡಲೇ ನಿವೇಶನಗಳನ್ನು ನೀಡಬೇಕು. ಕೆರೆ ಅಂಗಳದಲ್ಲಿ ಹಾಗೂ ಸರಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡುರುವ ಬಡವರನ್ನು ವಿನಾಕಾರಣ ಒಕ್ಕಲೆಬ್ಬಿಸಬಾರದು.

ಅಸಂಘಟಿತ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಭೂಮಿ ನೀಡಬೇಕು ಹಾಗೂ ಭೂ ಮತ್ತು ನಿವೇಶನಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಷ್ಕರಣೆ ಮಾಡಿ, ಸಂಬಂಧಿಸಿದವರಿಗ ವಿತರಿಸಬೇಕು ಮತ್ತು ನಿವೇಶನ ರಹಿತರಿಗೆ ನೀವೇಶ ನಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಉಮೇಶ್, ಮುಖಂಡರಾದ ಗೌರಮ್ಮ, ಗೋಪಾಲ ಗೌಡ, ಬಿ.ಎನ್ ಮಂಜುನಾಥ, ಟಿ. ಲೀಲಾವತಿ, ನಂಜೇಗೌಡ, ಮತ್ತಿತರರು ಉಪಸ್ಥಿತರಿದ್ದರು.