Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

''ಅಸಂಸದೀಯ'' ಸಂಸದರ ಮೇಲೆ ಕ್ರಮ ಕೈಗೊಳ್ಳಿ!

ಸಂಪುಟ: 
11
ಸಂಚಿಕೆ: 
30
Sunday, 16 July 2017

ದಕ್ಷಿಣ ಕನ್ನಡದಲ್ಲಿ ಬಂಟ್ವಾಳದಲ್ಲಿ ಚೂರಿ ಇರಿತ, ಕೊಲೆ, ದಾಳಿಗಳು ಮುಂತಾದ ಆಗಾಗ ನಡೆಯುತ್ತಿದ್ದ ಅಪರಾಧದ ಘಟನೆಗಳು ನಿಂತು ಶಾಂತಿ ಮೂಡುವ ಸೂಚನೆಗಳು ಕಾಣುತ್ತಿದ್ದಂತೆ, ಬಿಜೆಪಿ ಸಂಸದರು, ಶಾಸಕರು, ನಾಯಕರು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಪುನಃ ಅಶಾಂತಿ ಮೂಡಿಸುವ ಬೆಂಕಿ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಕೊಲೆಯಾಧ ಆರೆಸ್ಸೆಸ್ ಕಾರ್ಯಕರ್ತ ಶರತ್ ಹಂತಕರನ್ನು ಬಂಧಿಸಬೇಕು ಎಂದು ಜಾರಿಯಲ್ಲಿರುವ ಸೆಕ್ಶನ್ 144 ಮುರಿದ ಪ್ರತಿಭಟನಾ ಮೆರವಣಿಗೆಯ ನಾಯಕತ್ವವನ್ನು ಬಿಜೆಪಿ ಸಂಸದರೇ ವಹಿಸಿದ್ದರು. ಎರಡೂ ಕೋಮುಗಳ ವ್ಯಕ್ತಿಗಳು ಹಲ್ಲೆ, ಕೊಲೆಗಳಿಗೆ ಗುರಿಯಾಗಿದ್ದರೂ `ಹಿಂದೂ' ಮತ್ತು ಸಂಘಿ ಕಾರ್ಯಕರ್ತರ ಬಗ್ಗೆ ಮಾತ್ರ ದಾಂಧಲೆ ಎಬ್ಬಿಸುತ್ತಾ, ಜಿಲ್ಲಾ ಉಸ್ತುವಾರಿ ಸಚಿವರು ಕರೆದಿರುವ ಶಾಂತಿ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ. ಒಂದು ಕಡೆ ಸರಕಾರ ದಾಳಿ, ಕೊಲೆ, ದೊಂಬಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಕೂಗಾಡುತ್ತಾ, ಇನ್ನೊಂದು ಕಡೆ ಪೋಲಿಸ್ ಮತ್ತು ಆಡಳಿತದ ಅಧಿಕಾರಿಗಳನ್ನು ಸರಕಾರವನ್ನು ಅಸಹ್ಯ ಭಾಷೆಯಲ್ಲಿ ಬಯ್ಯುತ್ತಾ ಹೀಗಳೆಯುತ್ತಾ ಹಲವು ಕಡೆ ಅವರನ್ನು ತಮ್ಮ ಕರ್ತವ್ಯ ಮಾಡುವಲ್ಲಿ ಅಡೆತಡೆ ಉಂಟು ಮಾಡುತ್ತಾ ತಾವೇ ದೊಂಬಿ ಮಾಡುತ್ತಿದ್ದಾರೆ. ಶರತ್ ಶವಯಾತ್ರೆಯಲ್ಲಿ ಕಲ್ಲು ತೂರಾಟ ನಡೆಸಿದ ಸಂಬಂಧ ಶಂಕಿತರ ಮೇಲೆ ಎಫ್.ಐ.ಆರ್., ಹಾಕಿ ಬಂಧಿಸಲು ಹೊರಟಾಗ ಅದನ್ನು ಟೀಕಿಸಿದ್ದು ಮಾತ್ರವಲ್ಲದೆ ಅಡ್ಡಿಪಡಿಸಿದರಂತೆ. ಹೀಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ತಮ್ಮ ನಗ್ನ ಕೋಮುವಾದವನ್ನು ಪದೇ ಪದೇ ಪ್ರದರ್ಶಿಸುತ್ತಿದ್ದಾರೆ.

ಸಾಲದೆಂಬಂತೆ ಜಿಲ್ಲೆಯ ಹಲವು ಕಡೆ ಸಭೆಗಳನ್ನು ನಡೆಸಿ ಅತ್ಯಂತ ಅಸಹ್ಯ `ಅಸಂಸದೀಯ' ಭಾಷೆ ಬಳಸಿ ಪ್ರಚೋದನಕಾರಿ ಭಾಷಣ ಮಾಡುತ್ತಾ ಬಿಜೆಪಿ ಸಂಸದರು ಮುಖ್ಯಮಂತ್ರಿ, ಮಂತ್ರಿಗಳು, ಅಧಿಕಾರಿಗಳನ್ನು ಬಯ್ಯುತ್ತಾ ತಿರುಗಾಡುತ್ತಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿ ಇರುವುದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ. ``ನಮ್ಮ ಜಿಲ್ಲೆಯಲ್ಲಿ ಏನೇ ಆದರೂ ನೋಡ್ಕೊಂಡು ಸುಮ್ಮನಿರಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ?'' ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ. ಇದು ಅಸಂಸದೀಯ, ಅಸೂಕ್ಷ್ಮ, ತೃತೀಯ ಲಿಂಗಿಗಳಿಗೆ ಅವಮಾನಕಾರಿ, ಮಹಿಳಾ-ವಿರೋಧಿ ಮಾತ್ರವಲ್ಲ, ಪ್ರಚೋದನಕಾರಿ ಹೇಳಿಕೆ ಸಹ. ``ಒಂದು ವೇಳೆ ಪ್ರಭಾಕರ್ ಭಟ್ ಹಾಗೂ ನನ್ನನ್ನು ಮುಟ್ಟಿದ್ದೇ ಆದಲ್ಲಿ, ಅದು ಕಾಂಗ್ರೆಸ್ ಶವ ಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಆಗಲಿದೆ' ಎಂಬ ಎಚ್ಚರಿಕೆ ಕೊಡುವುದು ಸಂಸದರಿಗೆ ಶೋಬೆ ತರುವಂತಹದ್ದಲ್ಲ. ಪ್ರಭಾಕರ ಭಟ್ ಮೇಲೆ ಕೋಮು-ಪ್ರಚೋದನಕಾರಿ ಭಾಷಣ ಮಾಡಿದ್ದು ಸೇರಿದಂತೆ ಹಲವು ಕೇಸುಗಳು ಇವೆ ಎಂಬ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಶಾಂತಿಭಂಗಕ್ಕೆ ಮತ್ತು ಅಪರಾಧಗಳಿಗೆ ಪ್ರಚೋದನೆ ಕೊಡುವಂಥಹದ್ದು ಅಲ್ಲವೆ? ಈ ಹೇಳಿಕೆಯನ್ನು ಖಂಡಿಸುವ ಬದಲು ಇನ್ನೊಬ್ಬ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, `ಷಂಡ ಎಂಬ ಪದಕ್ಕೆ ಉತ್ತರ ಕರ್ನಾಟಕದಲ್ಲಿ ಸಾಂಸ್ಕೃತಿಕ ಹಿನ್ನೆಲೆ ಇದೆ. ಷಂಡ ಪದ ಸಂಸದೀಯ ಪದವೋ ಅಸಂಸದೀಯ ಪದವೋ ಎಂಬ ಬಗ್ಗೆ ಚರ್ಚೆ ನಡೆಯಲಿ. ಈ ರಾಜ್ಯ ಸರ್ಕಾರಕ್ಕೆ ಷಂಡ ಪದಕ್ಕಿಂತಲೂ ಕಠಿಣ ಪದ ಬಳಸಬೇಕು'' ಎಂದು ಅಪ್ಪಣೆ ಕೊಡಿಸಿದ್ದಾರೆ. ಬಿಜೆಪಿ ಸಂಸದರ ಅಸಂದೀಯ ``ಸಂಸ್ಕೃತಿ''ಯನ್ನು ವಿಸ್ತರಿಸುತ್ತಾ, ``ಇತ್ತೀಚೆಗೆ ನೀವು ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿರುವಿರೆಂಬ ಅನಿಸಿಕೆಯನ್ನು ಸತ್ಯ ಮಾಡುತ್ತಿರುವಿರಿ'' ಎಂದು ಮುಖ್ಯಮಂತ್ರಿಗಳನ್ನು ಆರೋಪಿಸಿದ್ದಾರೆ.

`ಗಲಭೆಗೆ ಕಾರಣರಾದ ಯಾವೊಬ್ಬ ಮುಸಲ್ಮಾನನ ಮನೆಗೂ ಪೊಲೀಸರು ಹೋಗಿಲ್ಲ ಅದೇ ಕಾರಣಕ್ಕೆ ಷಂಡರು ಎಂದು ಕರೆಯಲಾಯಿತು. ಹಿಂದೂಗಳು ಪುಗಸಟ್ಟೆ ಸಿಕ್ಕಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಇನ್ನೇನು ಆಯುಧ ಪೂಜೆ ಹಬ್ಬ ಹತ್ತಿರ ಬರುತ್ತಿದ್ದು, ಹಿಂದೂಗಳು ತಮ್ಮ ರಕ್ಷಣೆಗೆ ಶಸ್ತ್ರಗಳನ್ನು ಪೂಜೆ ಮಾಡಿ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಅನಿಸುತ್ತಿಲ್ಲ' ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಹೇಳಿ ``ಸಶಸ್ತ್ರ ದೊಂಬಿ''ಗೆ ಕರೆ ಕೊಟ್ಟಿದ್ದಾರೆ.  ``ನಿರಂತರವಾಗಿ ನಡೆಯುತ್ತಿರುವ ಗಲಭೆ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಕೈವಾಡ ಇದೆ' ಎಂದು ಬಿ.ಎಸ್. ಯಡಿಯೂರಪ್ಪ ಗಂಭೀರ ಆಧಾರ-ರಹಿತ ಆರೋಪ ಮಾಡಿದ್ದಾರೆ. ``ಶರತ್ ಮಡಿವಾಳ ಇವರ ಹತ್ಯೆ ತೀವ್ರ ಖಂಡನೀಯ. ಈ ಕೃತ್ಯದ ಹಿಂದೆ ಕಾಣದ ಕೈ ಕೆಲಸ ಮಾಡಲು ರಾಜ್ಯದಲ್ಲಿರುವ ಆಡಳಿತಾರೂಢರು ನೀಡುತ್ತಿರುವ ಪರೋಕ್ಷ ಸಹಕಾರವೇ ಕಾರಣ'' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದ್ದಾರೆ..  ಕರ್ನಾಟಕದ ಮಾಧ್ಯಡಮ ಲೋಕದಲ್ಲಿ "ಬೆತ್ತಲೆ'' ಭಾಷೆಯ ಪ್ರವರ್ತಕರಾದ ಸಂಸದ ಪ್ರತಾಪ ಸಿಂಹ ಪಾಪ ಹೇಗೆ ಸುಮ್ಮನಿರುತ್ತಾರೆ? ``ಮುಖ್ಯಮಂತ್ರಿ ಪ್ರೀತಿ ಪಾತ್ರರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಹತ್ಯೆ ಮಾಡಿದ್ದಾರೆ'' ಎನ್ನುತ್ತಾ ಆಧಾರ-ರಹಿತ ಆರೋಪದಲ್ಲಿ ಯಡಿಯೂರಪ್ಪ ಅವರನ್ನು ಮೀರಿಸಿದ್ದಾರೆ.

ಸಂಸದರ ಶಾಸಕರ ``ಅಸಂಸದೀಯ'' ಬೇಜವಾಬ್ದಾರ ಪ್ರಚೋದನಕಾರಿ ಭಾಷೆಯನ್ನು ಒತ್ತಟ್ಟಿಗಿಟ್ಟರೂ, ಅವರ ಒತ್ತಾಯದಲ್ಲಿ ಏನಾದರೂ ತರ್ಕ ಇದೆಯೇ? ಹಣ, ಆಸ್ತಿ ಅಥವಾ ವೈಯಕ್ತಿಕ ಸೇಡಿನಿಂದ ವೈಯಕ್ತಿಕ ಕೊಲೆ, ಹಲ್ಲೆ ಗಳು ನಡೆಯುವುದು ಅಪರೂಪವೇನಲ್ಲ. ಕೊಲೆಯಾದ ವ್ಯಕ್ತಿ ರಾಜಕೀಯ ``ಸಾಂಸ್ಕೃತಿಕ'' ಕಾರ್ಯಕರ್ತನಿದ್ದಾಗ ಸಹ ಇದು ಅಸಾಧ್ಯಯವೇನಲ್ಲ. ಇಂತಹ ಅಪರಾಧಗಳು ನಡೆದಾಗ ತನಿಖೆ ನಡೆಸಿ ಅಪರಾಧಿಗಳ ಪತ್ತೆ ಹಚ್ಚುವುದಕ್ಕೆ ಸ್ವಲ್ಪ ಸಮಯ ಹಿಡಿದೇ ಹಿಡಿಯುತ್ತದೆ. ಕೊಲೆ ನಡೆದ ಕೆಲವೇ ದಿನಗಳಲ್ಲಿ ಅಪರಾಧಿ ಹಿಡಿದಿಲ್ಲ ಎಂದು ದಾಂಧಲೆ ಎಬ್ಬಿಸುವುದರ ಹಿಂದೆ ಯಾವುದೇ ತರ್ಕವಿಲ್ಲ. ಅದೂ ``ಆಯ್ದ'' ಕೆಲವೇ ಕೊಲೆಗಳ ಹಿಂದೆ ``ವ್ಯವಸ್ಥಿತ ಷಡ್ಯಂತ್ರ'', ``ಕಾಣದ ಕೈ'' ಎಂದು ಆಧಾರ-ರಹಿತ ಆರೋಪ ಮಾಡುತ್ತಾ ಸಂಸದರು ಶಾಸಕರು ಒಂದು ಕೋಮಿನ ವಕ್ತಾರರಂತೆ ವರ್ತಿಸುವುದು ಸಂವಿಧಾನಕ್ಕೆ ಬಗೆಯುವ ಅಕ್ಷಮ್ಯ ಅಪಚಾರ. ಇಂತಹ ಸಂಸದರನ್ನು ಶಾಸಕರನ್ನು ಅವರನ್ನು ಆರಿಸಿದ ಜನ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ. ಇದು ಬಿಜೆಪಿಯ ಚುನಾವಣಾ-ಪೂರ್ವ ತಂತ್ರ ಎಂಬುದು ಎಲ್ಲರಿಗೂ ಸ್ಪಷ್ಟವಿದ್ದರೂ ಈ ಬಗ್ಗೆ ಕಾಂಗ್ರೆಸ್ ಸರಕಾರದ ``ಸಹಿಷ್ಣುತೆ'' ಅಕ್ಷಮ್ಯ. ಸಂಸದ ನಳಿನ್ ಕಟೀಲ್ ಜಿಲ್ಲೆಗೆ ಬೆಂಕಿ ಇಡುವ ಮಾತನಾಡಿದಾಗ ಅವರ ಮೇಲೆ ಕಟು ದಿಟ್ಟ ಕ್ರಮ ಕೈಗೊಂಡಿದ್ದರೆ ಈ ``ಅಸಂಸದೀಯ'' ಪರ್ವ ನೋಡಬೇಕಾಗಿರಲಿಲ್ಲ.

ಈಗಲೂ ಸರಕಾರ ಶಾಂತಿ ಕದಡುವ ವ್ಯಕ್ತಿಗಳು, ಶಕ್ತಿಗಳು, ಸಂಘಟನೆಗಳ ಮೇಲೆ ದಿಟ್ಟ ಕಟು ಕ್ರಮಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಇತ್ತೀಚಿನ ಕೆಲವು ಸಂಘದ ಕಾರ್ಯಕರ್ತರ ಕೊಲೆಯ ತನಿಖೆ ನಂತರ ಬಂಧಿಸಲಾದ ಪ್ರಮುಖ ಆರೋಪಿಗಳು ಯಾರು ಎಂದು ನೋಡಿದರೆ,  ``ವ್ಯವಸ್ಥಿತ ಷಡ್ಯಂತ್ರ'', ``ಕಾಣದ ಕೈ''ಯ ಆರೋಪಗಳು ತೀರಾ ಆಧಾರ-ರಹಿತವೇನಲ್ಲ! ಪ್ರವೀಣ್ ಪೂಜಾರಿ, ಪ್ರತಾಪ್, ಕಾರ್ತಿಕ್ ರಾಜ್ ಕೊಣಾಜೆ, ವಿನಾಯಕ ಬಾಳಿಗಾ, ಹರೀಶ್ ಪೂಜಾರಿ? ಇವರೆಲ್ಲರ ಕೊಲೆ ಪ್ರಕರಣಗಳಲ್ಲಿ ಆಪಾದಿತರು ಸಂಘ ಪರಿವಾರದ ಸದಸ್ಯರೇ! ಸರಕಾರ ``ವ್ಯವಸ್ಥಿತ ಷಡ್ಯಂತ್ರ'', ``ಕಾಣದ ಕೈ'' ಗಳ ಹಿಂದಿರುವವರನ್ನೂ ಬಂಧಿಸಿ ಅದಕ್ಕೆ ಕೊನೆ ಹಾಕಬೇಕಾಗಿದೆ.

ಶಾಂತಿ ಕಾಪಾಡುವುದು ಸರಕಾರದ ಜವಾಬ್ದಾರಿ ಮಾತ್ರವಲ್ಲ. ಧಾರ್ಮಿಕ ಕಾರಣಗಳಿಗಾಗಿ ಜನರ ನಡುವೆ ಅಶಾಂತಿ ಹಬ್ಬಿಸುವ ಕೆಲಸ ನಡೆಯುತ್ತಿರುವಾಗ ಕರಾವಳಿಯ ಧಾರ್ಮಿಕ ಮುಖಂಡರು, ಮಠಾಧೀಶರು; ಸಾಹಿತಿ-ಕಲಾವಿದರು, ಬುದ್ದಿಜೀವಿಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ನಾಯಕರು ಶಾಂತಿ ಸ್ಥಾಪನೆಗೆ ಮತ್ತು ಶಾಂತಿ ಕದಡುವ ವ್ಯಕ್ತಿಗಳು, ಶಕ್ತಿಗಳು, ಸಂಘಟನೆಗಳ ವಿರುದ್ಧ ತಮ್ಮ ದನಿ ಎತ್ತಬೇಕಾಗಿದೆ.