ಜುಲೈ 26ರಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ

Thursday, 13 July 2017

`ಕಟ್ಟಡ ನಿರ್ಮಾಣ ಹಾಗೂ ಇತರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸಚಿವರ ಮತ್ತು ಶಾಸಕರ ಮನೆಗೆ ಮುತ್ತಿಗೆ ಹಾಗೂ ಪ್ರತಿಭಟನೆಯನ್ನು ಜಲೈ 26ರಂದು ಹಮ್ಮಿಕೊಳ್ಳಲಾಗಿದೆ' ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶರವರು ತಿಳಿಸಿದರು.

ಜುಲೈ 13ರಂದು ಕೋಲಾರ ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ `ಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರವೇ ಸ್ಥಾಪನೆ ಮಾಡಿರುವ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ 11,20,097 ಲಕ್ಷ ಮಂದಿ ಕಾರ್ಮಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ. `ಕಾರ್ಮಿಕರ ನೋಂದಣಿ ಹಾಗೂ ಸೆಸ್ ಮೂಲಕ ರೂ 56,50,17 ಕೋಟಿ ಸಂಗ್ರಹವಾಗಿದೆ. ಆದರೆ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಇದುವರೆಗೂ ರೂ.117 ಕೋಟಿ ಮಾತ್ರ ವೆಚ್ಚ ಮಾಡಿದೆ. ಉಳಿದ ಹಣವನ್ನು ಏನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಇದುವರೆಗೂ ಉತ್ತರ ನೀಡುವಲ್ಲಿ ಅಸಡ್ಡೆ ತೋರುತ್ತಿದ್ದಾರೆ' ಎಂದು ಆರೋಪಿಸಿದರು.

`ಈ ಹಿಂದೆ ಮಂಡಳಿಯವರು ರೂ.750 ಕೋಟಿ ಹಣವನ್ನು ದುಂದವೆಚ್ಚ ಮಾಡಲು ಪ್ರಯತ್ನಿಸುತ್ತಿದ್ದರು, ಇದರ ವಿರುದ್ಧ ಸಿಐಟಿಯುವ ನಡೆಸಿದ ಹೋರಾಟದಿಂದ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವೆಚ್ಚ ಮಾಡಲು ಮುಂದಾಗಿದೆ' ಎಂದರು.

`ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾಗಿರುವ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸೌಕರ್ಯಗಳನ್ನು ನೀಡಬೇಕು. ಕಾರ್ಮಿಕರು ನೊಂದಣಿ ಮಾಡಿಸಿಕೊಳ್ಳಲು ಇರುವ ಆನ್ ಲೈನ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಕಟ್ಟಡ ನಿರ್ಮಾಣ ಮಾಡಲು ಇರುವ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಸರ್ಕಾರ ಘೋಷಿಸಿರುವಂತೆ ವಸತಿ ಸಹಿತ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಬಹುದಿನಗಳಿಂದ ಹೋರಾಟಗಳನ್ನು ನಡೆಸಿದ್ದರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ' ಎಂದು ಆರೋಪಿಸಿದರು.

`ಜಾನುವಾರು ಮಾರಾಟ ನಿಷೇಧದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಕಾರ್ಮಿಕರ ಹಾಗೂ ಬಡವರ ಹಿತದೃಷ್ಟಿಯಿಂದ ಕಸ್ತೂರಿ ರಂಗನ್ ವರದಿ ಜಾರಿಯನ್ನು ರದ್ದುಪಡಿಸಬೇಕು ಸರ್ಕಾರದ ಮುಂದೆ ಪ್ರಮುಖವಾಗಿ ಬೇಡಿಕೆಗಳನ್ನು ಇಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರದ ವಿರುದ್ಧ ಜುಲೈ 26ರಿಂದ ಹಂತಹಂತವಾಗಿ ಹೋರಾಟಗಳನ್ನು ನಡೆಸಲು ತೀರ್ಮಾನಿಸಲಾಗಿದೆ' ಎಂದು ಹೇಳಿದರು.

`ಜುಲೈ 26ರಂದು ಸಚಿವರ ಹಾಗೂ ಶಾಸಕರ ಮನೆಗೆ ಮುತ್ತಿ, ಆ.14ರಂದು ಮಧ್ಯರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಸೆ.14ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು. ಇದುಯಾವುದಕ್ಕೂ ಸರ್ಕಾರ ಮಣಿಯದಿದ್ದರೆ ಮುಂದಿನ ಹೋರಾಟವನ್ನು ತೀವ್ರಗೊಳಿಸಲಾಗುವುದು' ಎಂದು ಎಚ್ಚರಿಸಿದರು. ಫೆಡರೇಷನ್‍ನ ರಾಜ್ಯ ಸಮಿತಿ ಸದಸ್ಯ ವಿಜಯಕೃಷ್ಣ, ಜಿಲ್ಲಾ ಕಾರ್ಯದರ್ಶಿ ಎಂ.ಭೂಮರಾಜ್, ಜಿಲ್ಲಾ ಖಂಜಾಂಚಿ ಎನ್.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.