ನೋಟು ರದ್ಧತಿಯ ನಂತರ ಜಿಎಸ್‍ಟಿ : ಮಿಂಚಿನ ಪ್ರಹಾರ ಯಾರ ಮೇಲೆ?

ಸಂಪುಟ: 
11
ಸಂಚಿಕೆ: 
29
date: 
Sunday, 9 July 2017

ಜೂನ್ 30-ಜುಲೈ1 ರ ಮಧ್ಯರಾತ್ರಿ 5 ಕೋಟಿರೂ. ವೆಚ್ಚದಲ್ಲಿ ಹೊಸದಾಗಿ ಜಗಮಗಗೊಳಿಸಿದ ಸಂಸದ್ ಭವನದಲ್ಲಿ ‘ಜಿಎಸ್‍ಟಿಯೊಂದಿಗೆ ಸಮಾಗಮ’ದ  ಹೊಸ ‘ಇತಿಹಾಸ’ ಸೃಷ್ಟಿಸಲಾಗಿದೆ. ಇದಕ್ಕೆ ಶೇರು ಮಾರುಕಟ್ಟೆ ಭಾರೀ ಉತ್ಸಾಹದಿಂದ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಜತೆಜತೆಗೇ ಪ್ರಧಾನಿಗಳ ತವರು ರಾಜ್ಯದ ಸೂರತ್ ಸೇರಿದಂತೆ ದೇಶದಲ್ಲಿ ಹಲವೆಡೆಗಳಲ್ಲಿ ಜವಳಿ ವಲಯದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿರುವ ಸುದ್ದಿಗಳೂ ಬರುತ್ತಿವೆ. ಹಲವು ಸರಕುಗಳ ಬೆಲೆಗಳು ಏರಿರುವ ಸುದ್ದಿಗಳೂ ಬಂದಿವೆ. ನಿಜ ಕಾರುಗಳ, ಅದರಲ್ಲೂ ಐಷಾರಾಮಿ ಕಾರುಗಳ ಬೆಲೆಗಳು ಇಳಿದಿರುವ ಸುದ್ದಿಗಳೂ ಜತೆಗಿವೆ.

ನಮ್ಮ ರಾಜ್ಯದ ನೇಕಾರರು ಕಂಗಾಲಾಗಿದ್ದಾರೆ ಎಂದು ವರದಿಯಾಗಿದೆ (ಎಂ.ಮಹೇಶ, ಪ್ರಜಾವಾಣಿ, ಜುಲೈ4). ‘ಶಹಾಪುರ ಸೀರೆ’ಗೆ ಈ ಹಿಂದೆ ಇದ್ದ 12-14ಶೇ. ತೆರಿಗೆ ಈಗ 23.5%ಕ್ಕೆ ಏರಿರುವುದು ನೇಕಾರರು ಮತ್ತು ಕುಟುಂಬದವರಿಗೆ ಬರಸಿಡಿಲಿನಂತಾಗಿದೆ. ‘ಸತತ ಬರಗಾಲದಿಂದಾಗಿ ವಹಿವಾಟು ಕುಸಿದು ಸಂಕಷ್ಟ ಅನುಭವಿಸುತ್ತಿದ್ದೇವೆ. ನೋಟುಗಳ ರದ್ದತಿಯ ನಂತರವೂ ತೊಂದರೆಗೆ ಸಿಲುಕಿದ್ದೆವು. ಇದೀಗ, ಜಿಎಸ್‍ಟಿಯೂ ಹೊರೆಯಾಗಿದೆ. ನಮಗೆ ನಮ್ಮದೇ ಆದ ಮಾರುಕಟ್ಟೆ ಇಲ್ಲ. ಹೀಗಾಗಿ, ಮಧ್ಯವರ್ತಿಗಳ ಅವಲಂಬನೆ ಅನಿವಾರ್ಯ. ಅವರು ಜಿಎಸ್‍ಟಿ ಹೊರೆ ಹೊರಲು ಸಿದ್ಧ ಇಲ್ಲ’ ಎಂದು ಅವರು ಹೇಳುತ್ತಿದ್ದಾರಂತೆ.

ರಾಜಸ್ತಾನ ಬಟ್ಟೆ ವ್ಯಾಪಾರಿಗಳ ಸಂಘ ಜೂನ್ 27ರಿಂದ ನಾಲ್ಕು ದಿನಗಳ ಮುಷ್ಕರ ನಡೆಸಿದೆ. ಗುಜರಾತಿನ ಜವಳಿ ವರ್ತಕರು ಜುಲೈ1ರಂದು ಹೆಚ್ಚಿನ ಬಟ್ಟೆ ಅಂಗಡಿಗಳ ಬಾಗಿಲು ಹಾಕಿ ಜಿಎಸ್‍ಟಿಗೆ ‘ಸ್ವಾಗತ’ ಕೋರಿದರು. ಪಶ್ಚಿಮ ಬಂಗಾಲದಲ್ಲಿ ಒಮದೂವರೆ ಲಕ್ಷ ವ್ಯಾಪಾರಿಗಳು ಕೂಡ ಇದನ್ನೇ ಮಾಡಿದರು. ಮುಂಬೈಯಲ್ಲಿ ಬಟ್ಟೆ ವ್ಯಾಪಾರಿಗಳು ಪ್ರತಿಭಟನಾ ರ್ಯಾಲಿ ನಡೆಸಿದರು. ದಿಲ್ಲಿಯಲ್ಲಿ ಈ ಒಂದು ವಾರ ಚಾಂದನಿ ಚೌಕದ ಪ್ರಖ್ಯಾತ ಜವಳಿ ಮಾರುಕಟ್ಟೆಯೂ ಮುಷ್ಕರಗಳನ್ನು ಕಂಡಿದೆ.  

ಬೆಂಗಳೂರಿನಲ್ಲೂ ಜೂನ್ 30ರಂದು ಪ್ರತಿಭಟನೆ ನಡೆದಿದೆ. ತಮಿಳುನಾಡಿನಲ್ಲಿ ಈರೋಡ್ ಕೈಮಗ್ಗ ಬಟ್ಟೆ ವರ್ತಕರ ಸಂಘ ಜುಲೈ 5ರಿಂದ ಅನಿರ್ದಿಷ್ಟ ಮುಷ್ಕರದ ಎಚ್ಚರಿಕೆ ನೀಡಿತು.
ಗುಜರಾತಿನ ಜವಳಿ ನಗರವೆನಿಸಿದ ಸೂರತ್ ನಲ್ಲಿ ಒಂದು ವಾರಕ್ಕಿಂತಲೂ ಹೆಚ್ಚು ಸಮಯದಿಂದ ಬೀದಿಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆಯಂತೆ. ನೋಟುರದ್ಧತಿಯಿಂದ ಚೇತರಿಸಿಕೊಳ್ಳುತ್ತಿರುವ ತಮಗೆ ಇದೊಂದು ಹೊಸ ಪ್ರಹಾರ ಎಂಬುದೇ ಅವರ ಆಕ್ರೋಶ.

ತಮಾಷೆಯೆಂದರೆ ಅಲ್ಲಿ ಜಿಎಸ್‍ಟಿ ಇದೀಗ ಬಿಜೆಪಿಯೊಳಗೇ ರಾಜಕೀಯ ಕಿತ್ತಾಟದ ಪ್ರಶ್ನೆಯಾಗಿದೆಯಂತೆ. ಇಲ್ಲಿಯ ಜವಳಿ ವರ್ತಕರು ಬಿಜೆಪಿಯ ಕಟ್ಟಾ ಬಿಜೆಪಿ ಬೆಂಬಲಿಗರು. 2014ರ ಸಾರ್ವತ್ರಿಕ ಚುನಾವಣೆಗಳ ವೇಳೆಯಲ್ಲಿ ಇಲ್ಲಿಂದಲೇ ದೇಶದ ಹಲವು ನಗರಗಳಿಗೆ ‘ಅಬ್ ಕೀ ಬಾರ್ ಮೋದಿ ಸರಕಾರ್’ ಎಂದು ಮುದ್ರಿಸಿದ ಸೀರೆಗಳ ಬಂಡಲ್‍ಗಳು ದೇಶದ ವಿವಿಧ ನಗರಗಳಿಗೆ ರವಾನಿಸಲ್ಟಟ್ಟಿದ್ದವಂತೆ. ಅದರ ಮರುವರ್ಷ ‘ಸಬ್‍ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಪಟ್ಟಿಯೊಂದಿಗೆ ಇಂತಹ ಸೀರೆಗಳ ಬಂಡಲ್‍ಗಳು ಬಿಹಾರಕ್ಕೆ ಅಲ್ಲಿಯ ವಿಧಾನಸಭಾ ಚುನಾವಣೆಗಳ ವೇಳೆಯಲ್ಲಿ ಕಳಿಸಲ್ಪಟ್ಟವಂತೆ. ಈಗ ಜುಲೈ 3ರಂದು ಇಲ್ಲಿ ಸೀರೆ ವರ್ತಕರ ಮೇಲೆ ಲಾಠೀ ಪ್ರಹಾರ ಕೂಡ ನಡೆದಿದೆ.

ಆದರೂ ಅತ್ತ ಇಲ್ಲಿಂದ ದಿಲ್ಲಿ ತಲುಪಿದ ಪ್ರಧಾನ ಮಂತ್ರಿಗಳು ಈ ಜಿಎಸ್‍ಟಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಆಯುಧ ಎಂದಿರುವುದನ್ನು ಗಮನಿಸಿ. ‘ಸತ್ಯೋತ್ತರ’ ಎಂಬ ಟ್ರಂಪ್-ಮೋದಿ ಯುಗತರ್ಕದ ಮತ್ತೊಂದು ಉದಾಹರಣೆ!

ಜಿಎಸ್‍ಟಿಯ ಗೊಂದಲ ಕೇವಲ ಜವಳಿ ಉದ್ದಿಮೆಗೇ ಸೀಮಿತವಾಗಿಲ್ಲ. ಅಡುಗೆ ಅನಿಲದ ದರಗಳಲ್ಲಿ 32 ರೂ.ವರೆಗೆ ಹೆಚ್ಚಳವಾಗಿದೆ, ಇದು ಆರು ವರ್ಷಗಳಲ್ಲೇ ಅತಿ ಹೆಚ್ಚು ಎಂದು ಪಿಟಿಐ ವರದಿ ಮಾಡಿದೆ. ಪ್ರಧಾನಿಗಳು ‘ದಿವ್ಯಾಂಗ’ರೆಂದು ವರ್ಣಿಸಿರುವವರಿಗೆ ಅವರ ಜಿಎಸ್‍ಟಿ ಭಾರೀ ಪ್ರಹಾರ ಮಾಡಿದೆ-ಅವರು ತಮ್ಮ ವಿಕಲತೆಯನ್ನು ನಿವಾರಿಸಿಕೊಳ್ಲಲು ಬಳಸುವ ಸಾಧನಗಳು ಈ ಪ್ರಹಾರಕ್ಕೆ ಒಳಗಾಗಿವೆ. ಒಂದು ರಾಷ್ಟ್ರ, ಒಂದು ತೆರಿಗೆ ಎಂಬುದರಿಂದ ಖುಶಿಪಡಬೇಕಾಗಿದ್ದ್ದ ಸಾಗಾಣಿಕೆ ವಲಯದಲ್ಲೂ ಗೊಂದಲ ಹರಡಿದೆ.

ಆದರೆ ಜಿಎಸ್‍ಟಿ ಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅದರ ಬೆಂಬಲಿಗರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಹಾಪುರ ನೇಕಾರರ ಈ ತೋಳಲಾಟವನ್ನು ಗಮನಿಸಿ-‘ಜಿಎಸ್‍ಟಿಯಡಿ ನೋಂದಣಿ ಮಾಡಿಕೊಳ್ಳದ್ದರಿಂದ ಮಧ್ಯವರ್ತಿಗಳು ನಮ್ಮಲ್ಲಿ ಸೀರೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನೋಂದಣಿ ಮಾಡಿಸಿದರೆ ಕಂಪ್ಯೂಟರ್‍ನಲ್ಲಿ ದಾಖಲಿಸುವುದು, ಕಾಲ, ಕಾಲಕ್ಕೆ ಲೆಕ್ಕಪತ್ರ ಸಲ್ಲಿಸುವ ಮಾಹಿತಿ ಗೊತ್ತಾಗುವುದಿಲ್ಲ. ನೋಂದಣಿ ಮಾಡಿಸದಿದ್ದರೆ ಮಾರಾಟ ಸಾಧ್ಯವಾಗುವುದಿಲ್ಲ. ಹೀಗಾಗಿ, ಜಿಎಸ್‍ಟಿಯು ನಮ್ಮ ಪಾಲಿಗೆ ಅಡಕತ್ತರಿಯಂತಾಗಿದೆ’.

ಈ ಅಡಕತ್ತರಿ ಹಲವರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದರ್ಥವೇ?

ಅದೇನೇ ಇರಲಿ, ‘ಒಂದು ರಾಷ್ಟ್ರ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ...’ ಇತ್ಯಾದಿ ‘ಒಂದು’ಗಳ ಮಂದಿಯ ಈ ಹೊಸ ‘ಒಂದು ರಾಷ್ಟ್ರ, ಒಂದು ತೆರಿಗೆ’ ಸದ್ಯಕ್ಕೆ ಒಂದು ತೆರಿಗೆಯನ್ನಂತೂ ತಂದಿಲ್ಲ, ಹೊಸದೊಂದು ಹೊರೆಯನ್ನೆ ಹಾಕಿರುವಂತೆ ಕಾಣುತ್ತದೆ.

 

 

 

- ವೇದರಾಜ ಎನ್ ಕೆ.