ದಕ್ಷಿಣ ಆಫ್ರಿಕಾ ಕಮ್ಯೂನಿಸ್ಟ್ ಪಕ್ಷ ತ್ರಿಪಕ್ಷೀಯ-ಮೈತ್ರಿಯ ಮರು ಸಂಯೋಜನೆಗೆ ಕರೆ

ಸಂಪುಟ: 
11
ಸಂಚಿಕೆ: 
29
date: 
Sunday, 9 July 2017
Image: 

ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ.ಎನ್.ಸಿ.) ಆಳವಾದ ಬಿಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿದೆ.  ಇತ್ತೀಚಿನ ಸ್ಥಳೀಯ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ನಿಜವಾದ ಕುಸಿತವನ್ನು ಕಾಣಲಾರಂಬಿಸಿದೆ. ಈ ಬಿಕ್ಕಟ್ಟು ಸಹಜವಾಗಿಯೇ ಪ್ರಸ್ತುತ ದಕ್ಷಿಣ ಆಫ್ರಿಕಾದ ತ್ರಿಪಕ್ಷೀಯ ಮೈತ್ರಿಕೂಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ತ್ರಿಪಕ್ಷೀಯ ಮೈತ್ರಿಕೂಟದಲ್ಲಿ – ಆಡಳಿತರೂಢ ಎ.ಎನ್.ಸಿ., ಎಸ್.ಎ.ಸಿ.ಪಿ (ದಕ್ಷಿಣ ಆಪ್ರಿಕನ್ ಕಮ್ಯುನಿಸ್ಟ್ ಪಕ್ಷ), ಕೊಸಾಟು (ದಕ್ಷಿಣ ಆಫ್ರಿಕನ್ ಟ್ರೇಡ್ ಯೂನಿಯನ್ ಕಾಂಗ್ರೆಸ್) – ಮೂರು ಸಂಘಟನೆಗಳು ಇವೆ. ಕಮ್ಯುನಿಸ್ಟ್ ಪಕ್ಷ ಮತ್ತು ಕೊಸಾಟು ಗಳು ಇತ್ತೀಚೆಗೆ ಎ.ಎನ್.ಸಿ. ನೇತೃತ್ವದ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾದಾನ ವ್ಯಕ್ತಪಡಿಸಿವೆ. ಹಾಗೆಯೇ ಮೈತ್ರಿಕೂಟದ ಸಾಮಾನ್ಯ ಒಪ್ಪಂದದ ಗುರಿಯಾದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯ (ಎನ್.ಡಿ.ಆರ್) ದಾರಿಯಿಂದ ತಪ್ಪುತ್ತಿರುವುದಕ್ಕೆ ಎಎನ್‍ಸಿ ನಾಯಕತ್ವವೇ ಜವಾಬ್ದಾರ ಎಂದಿವೆ. ಇದ್ಯಾವುದಕ್ಕೂ ಎ.ಎನ್.ಸಿ. ಸ್ಪಂದಿಸದಿರುವುದರಿಂದ ಕಮ್ಯುನಿಸ್ಟ್ ಪಕ್ಷ ಮೈತ್ರಿಕೂಟವನ್ನು ಮರು ಸಂಯೋಜನೆ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಕಾರ್ಮಿಕ ವರ್ಗ ಮತ್ತು ಬಡ ಸಮುದಾಯಗಳಲ್ಲಿ ಭದ್ರ ನೆಲೆ ಹೊಂದಿ, ಜನಸಮೂಹಗಳನ್ನು ಸಜ್ಜುಗೊಳಿಸುವ ಕೆಲಸ ಕೈಗೆತ್ತಿಕೊಂಡಿದೆ.

ವರ್ಣಬೇಧ ನೀತಿಗಳ ವಿರುದ್ಧ – ತ್ರಿಪಕ್ಷೀಯ ಮೈತ್ರಿಕೂಟ

ವರ್ಣಬೇಧ ನೀತಿಗಳ ವಿರುದ್ಧ ಜತೆಗೂಡಿ ಹೋರಾಡಿದ ಎ.ಎನ್.ಸಿ, ಕಮ್ಯುನಿಸ್ಟ್ ಪಕ್ಷ ಮತ್ತು ಕೊಸಾಟು 1994 ರಲ್ಲಿ ವರ್ಣಬೇಧ ನೀತಿಗಳ ವಿರುದ್ಧ ಸ್ವಾತಂತ್ರ್ಯ ಪಡೆದ ನಂತರ, ದೇಶವನ್ನು ಆಳುವ ತ್ರಿಪಕ್ಷೀಯ ಒಕ್ಕೂಟದಲ್ಲಿ ಒಂದಾಗಲು ನಿರ್ಧರಿಸಿದ್ದವು.

1955 ರಲ್ಲಿಯೇ “ಫ್ರೀಡಂ ಚಾರ್ಟರ್” (ಸ್ವಾತಂತ್ರ್ಯ ಸನ್ನದು)ನಲ್ಲಿ ಅಂಗೀರಿಸಿದ ನೀತಿಗಳು  ಆಡಳಿತ ನಡೆಸುವುದಕ್ಕೆ ಆಧಾರವಾಗಿರುವ ಬಗ್ಗೆ ಎಲ್ಲರೂ ಒಪ್ಪಂದಕ್ಕೆ ಬಂದಿದ್ದರು. ಈ ‘ಫ್ರೀಡಂ ಚಾರ್ಟರ್’ ಸಮಾಜವಾದಿ ದಸ್ತಾವೇಜು ಆಗಿರಲಿಲ್ಲ. ಆದರೆ ಕಾರ್ಯ ನಿರ್ವಹಿಸಲು ಉತ್ತಮ ದಸ್ತಾವೇಜು ಆಗಿತ್ತು. ಭೂಮಿ ಪುನರ್-ಹಂಚಿಕೆ ಮತ್ತು ಖನಿಜ ಸಂಪತ್ತು ಮತ್ತು ಏಕಸ್ವಾಮ್ಯ–ಮಾಲಿಕತ್ವದ ಉದ್ಯಮಗಳ ರಾಷ್ಟ್ರೀಕರಣವನ್ನು ಒಳಗೊಂಡಿತ್ತು. ನೆಲ್ಸನ್ ಮಂಡೇಲಾರು ಇದೊಂದು ಕ್ರಾಂತಿಕಾರಿ ದಾಖಲೆ ಎಂದು ಕರೆದಿದ್ದರು. ದಕ್ಷಿಣ ಆಫ್ರ್ರಿಕಾದ ಹಿಂದಿನ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ತೊಡೆದು ಹಾಕದ ಹೊರೆತು, ಈ ಬದಲಾವಣೆಗಳನ್ನು ಸಾಧಿಸಲಾಗುವುದಿಲ್ಲ ಎಂದಿದ್ದರು.

ವರ್ಣಬೇಧೋತ್ತರ ದಕ್ಷಿಣ ಆಫ್ರಿಕಾದ ಸಂವಿಧಾನ ಜನಾಂಗೀಯ ಮತ್ತು ಭಾಷೆಯ ಸಮಾನತೆಯ ಬಗೆಗಿನ ‘ಫ್ರೀಡಂ ಚಾರ್ಟರ್’ ಅಂಶಗಳನ್ನು ಒಳಗೊಂಡಿತು. ಆದರೆ ಸಂವಿಧಾನವು ಉದ್ಯಮ-ಗಣಿಗಳ ರಾಷ್ಟೀಕರಣಕ್ಕೆ ಅಥವಾ ಭೂಮಿ ಮರುಹಂಚಿಕೆಗೆ ಸಂಬಂಧಿಸಿದಂತೆ, ಅಂಶಗಳನ್ನು ಒಳಗೊಂಡಿರಲಿಲ್ಲ. ಈ ಮಿತಿಗಳ ನಡುವೆಯೂ ಕಮ್ಯುನಿಸ್ಟ್ ಪಕ್ಷ ಆಳುವ ಮೈತಿಕೂಟದ ಭಾಗವಾಗಿರಲು ನಿರ್ಧರಿಸಿತ್ತು. ಮೈತ್ರಿಕೂಟದ ಪ್ರಮುಖ ಅಂಗವಾದ ಎ.ಎನ್.ಸಿ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯ ಪ್ರಧಾನ ಗುರಿಯಿಂದ ದೂರ ಸರಿಯದಂತೆ ನೋಡಿಕೊಳ್ಳುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು.

`ಫ್ರೀಡಂ ಚಾರ್ಟರ್’ ನಿಂದ ದೂರ ಸರಿದ ಎ.ಎನ್.ಸಿ.

1996 ರ ನಂತರ, ಮೆಬೆಕಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಎಎನ್‍ಸಿ ಅನುಸರಿಸಿದ ನೀತಿಗಳು `ಫ್ರೀಡಂ ಚಾರ್ಟರ್’ ನಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿವೆ. ಗಿಯರ್(ಜಿ.ಇ.ಎ.ಆರ್.) ಎಂದು ಕರೆಯಲಾದ ಈ ನೀತಿಗಳಲ್ಲಿ ಸ್ವಲ್ಪ ಮಟ್ಟಿನ ಬೆಳವಣಿಗೆ, ಉದ್ಯೋಗವಕಾಶಗಳ ಹೆಚ್ಚಳ ಮತ್ತು ಸಂಪತ್ತಿನ ಪುನರ್ ವಿತರಣೆ ಇದ್ದಾಗ್ಯೂ ಸಹ,  ಪ್ರಧಾನವಾಗಿ ಇವು ನವ-ಉದಾರವಾದ ಕಾರ್ಯತಂತ್ರದ ನೀತಿಗಳಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಆದಾಯದ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿವೆ.

2000 ದ ದಶಕದ ಆರಂಭದಲ್ಲಿ “ಜಾಗತಿಕ ಮತ್ತು ದೇಶಿಯ ಬಂಡವಾಳ ವಿಭಾಗಗಳ ನಡುವಿನ ವರ್ಗ ಮೈತ್ರಿಯ” ಪರಿಣಾಮವಾಗಿ ಈ ನೀತಿಗಳು ಜಾರಿಯಾದವು. ದೇಶಿಯ ಬಂಡವಾಳ ವಿಭಾಗ `ಕರಿಯ ಬೂಜ್ರ್ವಾ’ ಮತ್ತು ಸರಕಾರಿ ಅಧಿಕಾರಸ್ಥರ ಸಹಭಾಗಿತ್ವದ ಕೂಟವಾಗಿತ್ತು. ದೇಶೀಯ ಬಂಡವಾಳಗಾರರು ಹೆಚ್ಚಾಗಿ ಕುದುರಿಕೊಳ್ಳಲು ಗಿಯರ್ ಅವಕಾಶ ಒದಗಿಸಿದೆ. ಈ ನೀತಿಗಳಿಗೆ ಕಾರಣರಾದ ಎ.ಎನ್.ಸಿ, ನಾಯಕತ್ವವನ್ನು ಸೋಲಿಸಿ ದೂರ ಮಾಡುವುದರಿಂದ, `ರಾಷ್ಟ್ರೀಯ ಪ್ರಜಾಪ್ರಭುತ್ವ ಕ್ರಾಂತಿ’ ಯ ಪಥದತ್ತ ಸಾಗಲು ತೊಡಕು ನಿವಾರಿಸಬಹುದು ಎಂದು ಕಮ್ಯುನಿಸ್ಟ್ ಪಕ್ಷ ಆಗ ನಂಬಿತ್ತು.

ಈ ಹಿನ್ನೆಲೆಯಲ್ಲಿ ಎಎನ್‍ಸಿ ಯ 52 ನೇ ಸಮ್ಮೇಳನವು “ಪೋಲೋಕ್ವಾನೆ” ಯಲ್ಲಿ 2007 ರಲ್ಲಿ ಜರುಗಿತು. “ಮೆಬೆಕಿ’ ನೇತೃತ್ವದ ಗುಂಪು ಸೋಲನ್ನು ಅನುಭವಿಸಿತು. ಜುಮಾ ಎ.ಎನ್.ಸಿ ಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಮುಂದುವರೆದ `ಮೆಬೆಕಿ’ ನೀತಿಗಳು

ಅಧ್ಯಕ್ಷ ಜುಮಾ ರವರು ಆರಂಭದಲ್ಲಿ ಹಿಂದಿನ ಮೆಬೆಕಿ ಆಡಳಿತ ಅನುಸರಿಸಿದ ನವ-ಉದಾರವಾದ ನೀತಿಗಳನ್ನು ರದ್ದು ಮಾಡುವ ಭರವಸೆಯನ್ನು ನೀಡಿದರಾದರೂ ಸಹ, ನಿಧಾನವಾಗಿ ಎಎನ್‍ಸಿ ಮತ್ತು ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಗಟ್ಟಿಗಳಿಸಿಕೊಂಡ ನಂತರ, `ಫ್ರೀಡಂ ಚಾರ್ಟರ್’ ಅಜೆಂಡಗಳನ್ನು ತಿರುಚಲು ಮುಂದಾದರು. ತಮ್ಮ ಸ್ವಂತ `ಕಪ್ಪು ಬೂಜ್ರ್ವಾ’ ವಿಭಾಗಗಳ ಹಿತಾಸಕ್ತಿಗಳನ್ನು ಉತ್ತೇಜಿಸಲು ಆರಂಭಿಸಿದರು. ನಿರ್ದಿಷ್ಟವಾಗಿ ಹೆಸರಿಸುವುದಾದರೆ, ಭಾರತೀಯ ಮೂಲದ ಉದ್ಯಮಿ ಗುಪ್ತ ಅವರನ್ನು ಬೆಳೆಸಲು ಕುಮ್ಮಕ್ಕು ಕೊಟ್ಟರು. ಇದು ಕಮ್ಯುನಿಸ್ಟ್ ಪಕ್ಷಕ್ಕೆ  ಇರಿಸು-ಮುರಿಸು ಉಂಟುಮಾಡಿತು. ಅಧ್ಯಕ್ಷ ಜುಮಾ ರವರು ಅಪಾಯಕಾರಿ ಚಮಚಾ ಬಂಡವಾಳಶಾಹಿಗಳ ಜಾಲದ ಕೇಂದ್ರಬಿಂದುವಾಗಿದ್ದಾರೆ.

ಈ ಜಾಲ ಹಣ  ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ದುಬೈ ಮತ್ತು ಇತರೆಡೆ ಇರುವ ಖಾಸಗಿಯವರಿಗೆ ಹಸ್ತಾಂತರಿಸುವ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಾಶ ಮಾಡುವುದರಲ್ಲಿ ತೊಡಗಿದೆ. ರಾಜಕೀಯ ಆಶ್ರಯ ಮತ್ತು ಹಣದ ಬಲದಿಂದ ಎ.ಎನ್.ಸಿ ಯ ಆಂತರಿಕ ಪ್ರಜಾಸತ್ತೆಯನ್ನು ಕೆಡಿಸಲಾಗುತ್ತಿದೆ. ಮಂತ್ರಿಮಂಡಲ ಮತ್ತು ಪಾರ್ಲಿಮೆಂಟಿನ ಮೇಲ್ವಿಚಾರಣೆಗೆ ನಿಲುಕದ ಕಾರ್ಪೊರೇಟ್ ವಶವಾದ ಬದಲಿ ಪ್ರಭುತ್ವ ಅಧಿಕಾರ ಚಲಾಯಿಸುತ್ತಿದೆ ಎಂದು ಕಮ್ಯುನಿಸ್ಟ್ ಪಕ್ಷ  ತೀರ್ಮಾನಕ್ಕೆ ಬಂದಿದೆ. ಜುಮಾ ಅಧ್ಯಕ್ಷೀಯ ಅವಧಿಯಲ್ಲಿ ಎ.ಎನ್.ಸಿ. ವೇದಿಕೆಗಳಿಂದ ಸರಕಾರದ ನೀತಿಗಳ ಬಗ್ಗೆ ತನ್ನ ಟೀಕೆಯನ್ನು ನಿಲುವುಗಳನ್ನು ಹೇಳಲಾರಂಭಿಸಿತು. ಅದಕ್ಕೆ ಸ್ಪಂದನೆ ಸಿಗದಿದ್ದಾಗ ಸಾರ್ವಜನಿಕವಾಗಿಯೇ ಟೀಕಿಸಲು ಆರಂಭಿಸಿತು. ಅಧ್ಯಕ್ಷ ಜುಮಾ ಅವರ ರಾಜಿನಾಮೆ ಕೇಳಲು ಆರಂಭಿಸಿತು. ಈಗ `ರಾಷ್ಟ್ರೀಯ ಪ್ರಜಾಪ್ರಭುತ್ವ ಕ್ರಾಂತಿ’ ಸಾಧಿಸಲು ತ್ರಿಪಕ್ಷೀಯ ಮೈತ್ರಿಕೂಟ ಅಸಮರ್ಥವಾಗಿದೆ ಎಂಬ ನಿರ್ಣಯಕ್ಕೆ ಬಂದಿದೆ.

`ರಾಷ್ಟ್ರೀಯ ಪ್ರಜಾಪ್ರಭುತ್ವ ಕ್ರಾಂತಿ’ ರಕ್ಷಿಸಿ ಆಳಗೊಳಿಸುವ ಹೋರಾಟ ಒಂದು ನಿರ್ಣಾಯಕ ಹಂತ ಮುಟ್ಟಿದೆ. ಈ ಹೋರಾಟದ ಕ್ಷೇತ್ರ ಸರಕಾರದ ಒಳಗೂ, ತ್ರಿಪಕ್ಷೀಯ ಮೈತ್ರಿಕೂಟದಲ್ಲೂ, ರಾಷ್ಟ್ರೀಯ ಪ್ರಾಂತೀಯ ಸ್ಥಳೀಯ ಮಟ್ಟದಲ್ಲೂ ಎಲ್ಲೆಲ್ಲೂ ಹರಡಿಕೊಂಡಿದೆ. ಸರಕಾರ, ಪಕ್ಷ, ಸಂಘಟನೆಗಳ ಕಾರ್ಯಕರ್ತರ ಕ್ರಾಂತಿಕಾರಿ ರಾಜಕೀಯದ ಬೇರುಗಳನ್ನು ಅಲುಗಾಡಿಸುವ ಮಟ್ಟಿಗೆ, ಸಾರ್ವಜನಿಕರ ಬದಲು ಸ್ವಂತದ ಖಾಸಗಿಯವರ ಹಿತಾಸಕ್ತಿ ಎತ್ತಿ ಹಿಡಿಯುವ ರೋಗ ಹರಡುತ್ತಿದೆ. ಎ.ಎನ್.ಸಿ. ನಾಯಕತ್ವ ಒಳಜಗಳಗಳಿಂದ ಬಾಧಿತವಾಗಿದ್ದು, ಈ ರೋಗವನ್ನು ಗುಣಪಡಿಸುವ ಶಕ್ತಿ ಉಳಿಸಿಕೊಂಡಿಲ್ಲ.  ಎ.ಎನ್.ಸಿ.ಯ ಚುನಾವಣಾ ಜನಬೆಂಬಲ ಕುಸಿಯುತ್ತಿದ್ದು, ಕಳೆದ ಸ್ಥಳೀಯ ಚುನಾವಣೆಗಳ ನಂತರ ವಿಘಟನೆಗೊಳ್ಳುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ಅದು ಬಹುಮತ ಗಳಿಸುವ ಸಾಧ್ಯತೆ ಸಹ ಕಡಿಮೆಯಿದೆ ಎಂದು ಕಮ್ಯುನಿಸ್ಟ್ ಪಕ್ಷದ ಈ ವರ್ಷ ನಡೆಯಲಿರುವ 14ನೇ ಮಹಾಧಿವೇಶನದ ಮೊದಲಿನ ಕೇಂದ್ರ ಸಮಿತಿ ಅಂದಾಜಿಸಿದೆ.

ತ್ರಿಪಕ್ಷೀಯ ಆಡಳಿತ ಇದೀಗ ಬಿರುಕು

ದಕ್ಷಿಣ ಆಫ್ರಿಕಾದ ಎರಡುವರೆ ದಶಕಗಳ ಈ ತ್ರಿಪಕ್ಷೀಯ ಆಡಳಿತವು ವರ್ಣಬೇಧ ನೀತಿಗಳ ತಾರತಮ್ಯದಿಂದ ಬಳಲುತ್ತಿದ್ದ ಜನರಿಗೆ ಹಲವು ಪರಿಹಾರವನ್ನು ಜಾರಿಗೆ ತರುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸನ್ನು ಕಂಡುಕೊಂಡಿದ್ದು ನಿಜ. ಆದಾಗ್ಯೂ ಒಂದು ಕಡೆ ಕಾರ್ಮಿಕ ವರ್ಗದ ಬಲಾಬಲಗಳನ್ನು ರೂಪಾಂತರಿಸಲು ಗಮನಾರ್ಹವಾದ ಯಶಸ್ಸು ಕಂಡಿರಲಿಲ್ಲ. ಆದರೆ, ಮತ್ತೊಂದೆಡೆ, ಬಲವಾದ ಕರಿಯ ಬಂಡವಾಳಶಾಹಿ ವರ್ಗ ಎಎನ್‍ಸಿ ಯ ಮೂಲಕ ಪ್ರಭುತ್ವದ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದ್ದಾರೆ ಎಂಬ ವಾಸ್ತವತೆ ಇದೀಗ ಬಯಲಿಗೆ ಬರುತ್ತಿದೆ. ಈ ವರ್ಗವು `ಫ್ರೀಡಂ ಚಾರ್ಟರ್’ ಅಥವಾ ರಾಷ್ಟ್ರೀಯ ಪ್ರಜಾಪ್ರಭುತ್ವ ಕ್ರಾಂತಿಯ ಪಥಕ್ಕೆ ಅಂಟಿಕೊಳ್ಳುವ ಬದಲು, ಇದಕ್ಕೆ ತದ್ವಿರುದ್ಧವಾಗಿ ದೇಶವನ್ನು ಆ ಪಥದಿಂದ ದೂರವಿಡಲು ಬಯಸುತ್ತಿದೆ. ಈ ಬೆಳವಣಿಗೆಗಳು ಆಡಳಿತ ತ್ರಿಪಕ್ಷೀಯ ಮೈತ್ರಿಕೂಟಕ್ಕೆ ಅಪಾಯಕಾರಿಯಾಗಿವೆ.

ಈ ಕರಿಯ ಬಂಡವಾಳಶಾಹಿ ವರ್ಗ ತನ್ನ ಯಜಮಾನಿಕೆಯ ವಿರುದ್ಧ ಯಾವುದೇ ಸವಾಲನ್ನು ತಡೆಗಟ್ಟುವ ದೃಷ್ಠಿಯಿಂದ, ಬಲಪಂಥೀಯ ‘ಆಫ್ರಿಕಾನ್’ ಪ್ರತ್ಯೇಕತಾ ಧೋರಣೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ವರ್ಣಬೇಧ ನೀತಿಗಳ ವಿರುದ್ಧ ನಡೆಸಿದ ಹೋರಾಟದ ಸಾಧನೆಗಳನ್ನು ಹಾಗೂ ಮೌಲ್ಯಗಳನ್ನು ಅಂಶಗಳನ್ನು ಸಂವಿಧಾನದಿಂದ ಕಿತ್ತುಹಾಕುವ ಸಾಧ್ಯತೆಯೂ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಹಾಗೂ ಸಂವಿಧಾನಾತ್ಮಕ ಅಗತ್ಯಗಳ ರಕ್ಷಣೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯನ್ನು ಸ್ವಷ್ಟವಾಗಿ ಅರಿತುಕೊಂಡು, ತ್ರಿಪಕ್ಷೀಯ ಮೈತ್ರಿಕೂಟವನ್ನು ಪುನರ್ ಸಂಯೋಜಿಸುವ ಅವಶ್ಯಕತೆ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ. 

ಎ.ಎನ್.ಸಿ. ತಕ್ಕ ಸರಿಪಡಿಸುವಿಕೆ ಮಾಡಿಕೊಳ್ಳದಿದ್ದರೆ ಅದಕ್ಕೆ ಬದಲಿಯಾಗಿ ಹೊಸ ಬಹು-ವರ್ಗಿಯ  ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗವೊಂದನ್ನು ಕಟ್ಟುವ ಬಗ್ಗೆ 33 ಸಂಘಟನೆಗಳ 230 ಪ್ರತಿನಿಧಿಗಳು ಸೇರಿ ಒಂದು ಸಮಾವೇಶವನ್ನು ಸಂಘಟಿಸಲು  ಕಮ್ಯುನಿಸ್ಟ್ ಪಕ್ಷ ಮುಂದಾಗಿದೆ.  ಎ.ಎನ್.ಸಿ.ಯ ಬದಲಾದ ವರ್ಗ ಸ್ವರೂಪದ ಹಿನ್ನೆಲೆಯಲ್ಲಿ ಎಷ್ಟರ ಮಟ್ಟಿಗೆ ಇದು ಸಾಧ್ಯ ಎಂದು ಕಾದು ನೋಡಬೇಕಾಗಿದೆ.  ಎ.ಎನ್.ಸಿ.ಯ ಬದಲಾದ ವರ್ಗ ಸ್ವರೂಪದ ಹಿನ್ನೆಲೆಯಲ್ಲಿ ತ್ರಿಪಕ್ಷೀಯ ಮೈತ್ರಿಕೂಟವನ್ನು ಪುನರ್ ಸಂಯೋಜಿಸುವ ಅಗತ್ಯ ಬಿದ್ದರೆ ಅದರಿಂದ ಹೊರಬರುವ ನಿರ್ಣಾಯಕ ಘಟ್ಟದಲ್ಲಿ ಕಮ್ಯುನಿಸ್ಟ್ ಪಕ್ಷ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು `ರಾಷ್ಟ್ರೀಯ ಪ್ರಜಾಪ್ರಭುತ್ವ ಕ್ರಾಂತಿ’ ರಕ್ಷಿಸಿ ಆಳಗೊಳಿಸುವ ಹೋರಾಟವನ್ನು ದೃಢವಾಗಿ ಮುನ್ನಡೆಸುತ್ತದೆ ಎಂದು ಆಶಿಸಬೇಕಾಗಿದೆ.

 

 

- ನಾಗರಾಜ ನಂಜುಂಡಯ್ಯ