ಜಿ ಎಸ್ ಟಿ ಬಿಕ್ಕಟ್ಟು ಪರಿಹರಿಸುವ ಜಾದೂ ಅಲ್ಲ : ಬಂಡವಾಳಕ್ಕೊಂದು ನಿದ್ದೆ ಗುಳಿಗೆ

date: 
Tuesday, 11 July 2017
Image: 

ಸುರಜಿತ್ ಮುಜುಂದಾರ್

ಒಂದೆಡೆಯಲ್ಲಿ ಕಾರ್ಪೊರೇಟ್ ವಲಯದಿಂದ ಮತ್ತು ಶ್ರೀಮಂತರಿಂದ ನೇರ ತೆರಿಗೆಗಳ ಮೂಲಕ ಸಂಗ್ರಹ ಮಾಡುವುದನ್ನು ನಿರ್ಲಕ್ಷಿಸುತ್ತ, ಜಿಎಸ್‍ಟಿಯನ್ನು ತಂದು ತೆರಿಗೆ ನೆಲೆಯನ್ನು ವಿಸ್ತರಿಸುವ ಮಾತಾಡುತ್ತಿರುವುದರಲ್ಲಿಯೇ ವರ್ಗ ಪಕ್ಷಪಾತ ಅಡಗಿದೆ. ಆದ್ದರಿಂದಲೇ ಕಾರ್ಪೊರೇಟ್ ಬಂಡವಾಳ ಇದಕ್ಕೆ ಅಖಂಡ ಬೆಂಬಲ ಕೊಡುತ್ತಿದೆ.

ಜಿಎಸ್‍ಟಿ ಭಾರತೀಯ ಆರ್ಥಿಕ ವ್ಯವಸ್ಥೆಗೆ ಅದ್ಭುತವಾಗಿ ಕೆಲಸ ಮಾಡಿಕೊಡುವ ಜಾದೂ ಶಕ್ತಿ ಹೊಂದಿದೆ ಎಂಬುದು ಭಾರತೀಯ ಬಂಡವಾಳಶಾಹಿಯ ದಿವಾಳಿಕೋರತನದ ಒಂದು ಪ್ರತಿಬಿಂಬ. ಬಹುಶಃ ತಾತ್ಕಾಲಿಕವಾಗಿ ಜಿಎಸ್‍ಟಿ ಬಂಡವಾಳಕ್ಕೆ ಒಂದು ನಿದ್ದೆಗುಳಿಗೆಯಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದೇನೋ.

‘ಸರಕು ಮತ್ತು ಸೇವೆಗಳ ತೆರಿಗೆ’(ಜಿಎಸ್‍ಟಿ)ಯತ್ತ ಪರಿವರ್ತನೆಯ ಸುತ್ತ ಭಾರೀ ಉತ್ಪ್ರೇಕ್ಷೆಗಳನ್ನು ಹರಿಯಬಿಡಲಾಗಿದೆ. ಅದನ್ನು ಭಾರತದ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಜಾದೂ ಪರಿಹಾರ ಎಂಬ ಸ್ಥಾನಕ್ಕೆ ಏರಿಸಲಾಗಿದೆ. ಆದರೆ ಇದಕ್ಕಿಂತ ಸತ್ಯ ದೂರವಾದ ಸಂಗತಿ ಬೇರೆ ಇಲ್ಲ. ಈಗಿರುವ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ಜಿಎಸ್‍ಟಿ ಯ ಸಾಧಕ-ಬಾಧಕಗಳೇನು ಎಂಬ ಪ್ರಶ್ನೆ ಒತ್ತಟ್ಟಿಗಿರಲಿ, ಅದು ತೆರಿಗೆ ವಲಯದಲ್ಲೂ ಭಾರತೀಯ ಆರ್ಥಿಕ ವ್ಯವಸ್ಥೆಯ ಮೂಲಭೂತ ಸವಾಲುಗಳನ್ನು  ಎದುರಿಸಿಲ್ಲ.

ಅದನ್ನೇನಾದರೂ ಸುಧಾರಣೆ ಎನ್ನಬಹುದಾದರೆ, ಅದು ಪರೋಕ್ಷ ತೆರಿಗೆ ವ್ಯವಸ್ಥೆಯ ಸುಧಾರಣೆ ಎನ್ನಬಹುದಷ್ಟೇ. ಜಿಎಸ್‍ಟಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದಾಯಗಳನ್ನು ಹೆಚ್ಚಿಸುವದಾದಲ್ಲಿ (ಇದನ್ನೂ  ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ), ಅದು ಪರೋಕ್ಷ ತೆರಿಗೆಗಳ ಮೂಲಕ ಆದಾಯ ಕ್ರೋಡೀಕರಿಸಲು ನೆರವಾಗಬಹುದಷ್ಟೇ. ಇದು ಒಟ್ಟು ತೆರಿಗೆಗಳಲ್ಲಿ ಪರೋಕ್ಷ ತೆರಿಗೆಯ ಪಾಲನ್ನು ಹೆಚ್ಚಿಸಬಹುದು. ಇನ್ನೊಂದೆಡೆಯಲ್ಲಿ ನೇರ ತೆರಿಗೆಗಳ ‘ಹೊರೆ’ಯನ್ನು ಕಡಿಮೆ ಮಾಡಲು ಸರಕಾರ ಮುಂದಾದರೆ ಪರೋಕ್ಷ ತೆರೆಗಳ ಈ ತೂಕ ಇನ್ನಷ್ಟು ಹೆಚ್ಚುತ್ತದೆ. ಜಿಎಸ್‍ಟಿಯ ಉತ್ಕಟ ಬೆಂಬಲಿಗರೂ ಆಗಿರುವ ಕಾರ್ಪೊರೇಟ್‍ಗಳಂತೂ ಈ ಬಗ್ಗೆ ಪದೆ-ಪದೇ ರಾಗಾಲಾಪನೆ ಮಾಡುತ್ತಲೇ ಇವೆ.

ಆದರೆ ನಮ್ಮ ತೆರಿಗೆ ವ್ಯವಸ್ಥೆಯ ಸಮಸ್ಯೆಯೆಂದರೆ ಈಗಾಗಲೇ ಅದರಲ್ಲಿ ಪರೋಕ್ಷ ತೆರಿಗೆಗಳ ಪಾಲು ನೇರ ತೆರಿಗೆಗಳ ದುಪ್ಪಟ್ಟು ಇದ್ದು, ಇದು ಬಡ ದುಡಿಮೆಗಾರರು ತಾವು ಹೊರಬಹುದಾದಕ್ಕಿಂತ ಹೆಚ್ಚಿನ ಹೊರೆಯನ್ನು ಸಹಿಸಿಕೊಳ್ಳುವಂತೆ ಮಾಡಿದೆ. ಜಿಎಸ್‍ಟಿ ಕೂಡ ಪರೋಕ್ಷ ತೆರಿಗೆಗಳು (ಅದರಲ್ಲೂ ಅಬಕಾರಿ ಸುಂಕಗಳು) ಸರಕಾರಗಳಿಗೆ ಆದಾಯ ಬೆಳವಣಿಗೆಯ ಪ್ರಮುಖ ಸಾಧನವಾಗಿರುವ ಮತ್ತು ಸಂಪತ್ತು ತೆರಿಗೆಯನ್ನು ತೆಗೆದುಹಾಕಿರುವ ಹಿನ್ನೆಲೆಯಲ್ಲೇ ಬಂದಿದೆ.

ಅಂತರ್ಗತ ವರ್ಗ ಪಕ್ಷಪಾತ

ಆದ್ದರಿಂದ ಒಂದೆಡೆಯಲ್ಲಿ ಕಾರ್ಪೊರೇಟ್ ವಲಯದಿಂದ ಮತ್ತು ಶ್ರೀಮಂತರಿಂದ ನೇರ ತೆರಿಗೆಗಳ ಮೂಲಕ ಸಂಗ್ರಹ ಮಾಡುವುದನ್ನು ನಿರ್ಲಕ್ಷಿಸುತ್ತ, ಜಿಎಸ್‍ಟಿಯನ್ನು ತಂದು ತೆರಿಗೆ ನೆಲೆಯನ್ನು ವಿಸ್ತರಿಸುವ  ಮಾತಾಡುತ್ತಿರುವುದರಲ್ಲಿಯೇ ವರ್ಗ ಪಕ್ಷಪಾತ ಅಡಗಿದೆ. ಆದ್ದರಿಂದಲೇ ಕಾರ್ಪೊರೇಟ್ ಬಂಡವಾಳ ಇದಕ್ಕೆ ಅಖಂಡ ಬೆಂಬಲ ಕೊಡುತ್ತಿದ್ದರೆ, ಸಣ್ಣ ಬಂಡವಾಳದಾರರು ಇದರ ಪರಿಣಾಮಗಳ ಬಗ್ಗೆ ಆತಂಕಿತರಾಗಿದ್ದಾರೆ.

ಜಾಗತಿಕ ಬಿಕ್ಕಟ್ಟು ಎರಗುವ ಮೊದಲು ನೇರ ತೆರಿಗೆಗಳಲ್ಲಿ ಹಿಂದಿನದಕ್ಕೆ ಹೋಲಿಸಿದರೆ ಒಂದು ತ್ವರಿತ ಹೆಚ್ಚಳ ಆಗಿತ್ತು. ಆದರೆ ಅದು ಕೂಡ ತೀವ್ರವಾಗಿ ಹೆಚ್ಚುತ್ತಿದ್ದ ಅಮಾನತೆಗಳಿಂದ ಆಗಿತ್ತೇ ವಿನಹ ಕಾರ್ಪರೇಟ್ ಲಾಭಗಳು ಮತ್ತು ಶ್ರೀಮಂತರ ಮೇಲಿನ ತೆರಿಗೆಗಳ ದರಗಳಲ್ಲಿ ಹೆಚ್ಚಳದಿಂದಾಗಿ ಅಲ್ಲ. ಆನಂತರವಂತೂ ಒಟ್ಟು ಜಿಡಿಪಿಯಲ್ಲಿ  ಅನುಪಾತ ವಾಸ್ತವವಾಗಿ ಇಳಿದಿದೆ. 2011-12ರಿಂದ ಆರಂಭಿಸಿರುವ ‘ವಿತ್ತೀಯ ಕ್ರೋಡೀಕರಣ’ ಆಗುತ್ತಿರುವುದು ಸಾರ್ವಜನಿಕ ವೆಚ್ಚಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಜತೆಗೆ  ಪರೋಕ್ಷ ತೆರಿಗೆಗಳ ಮೂಲಕವೇ. ನಿರ್ದಿಷ್ಟವಾಗಿ ಮೋದಿ ಸರಕಾರವಂತೂ ಅಬಕಾರಿ ಸುಂಕಗಳನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲು  ಅಂತರ್ರಾಷ್ಟ್ರೀಯ ತೈಲ ಬೆಲೆಗಳ ಇಳಿಕೆಯ ಪ್ರಯೋಜನವನ್ನು ಬಾಚಿಕೊಂಡಿದೆ.

ಆದಾಯ ಹೆಚ್ಚಿದಂತೆ ತೆರಿಗೆ ದರ ಹೆಚ್ಚಿಸುವ ಪ್ರಶ್ನೆ ನವ-ಉದಾರವಾದೀ ದಾರಿಯ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಧ್ರುವೀಕರಣದ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗುತ್ತದೆ. ಅಸಮಾನತೆಯನ್ನು ಹೆಚ್ಚಿಸುವ ಇನ್ನೊಂದು ಆಯಾಮವೂ ಇದೆ. ಅದೆಂದರೆ ಈಗ ಭಾರತದಲ್ಲಿ ನಡೆಯುತ್ತಿರುವ ಬಂಡವಾಳ ಶೇಖರಣೆಯಲ್ಲಿ ಅಡಗಿರುವ ಮೂಲಭೂತ ವೈರುಧ್ಯ.

ಒಂದೆಡೆಯಲ್ಲಿ ಈ ಬಂಡವಾಳ ಶೇಖರಣೆ ಶ್ರಮಶಕ್ತಿಯನ್ನು ಬಹಳಷ್ಟು ಅಗ್ಗಗೊಳಿಸುವ ವ್ಯವಸ್ಥೆಯನ್ನು ತಂದು, ಆಮೂಲಕ  ತೀವ್ರ ಶೋಷಣೆಯ ಅವಕಾಶಗಳನ್ನು ಹೆಚ್ಚಿಸುವ ತಂತ್ರದ ಮೇಲೆಯೇ  ಹೆಚ್ಚಾಗಿ ಅವಲಂಬಿಸಿದೆ.

ಇನ್ನೊಂದೆಡೆಯಲ್ಲಿ ಇದೇ ಬಂಡವಾಳ ಶೇಖರಣೆಯ ಪ್ರಕ್ರಿಯೆಗೆ ಅಡ್ಡಿಯಾಗಿ ನಿಂತಿದೆ- ಒಂದೆಡೆಯಲ್ಲಿ ಅಗ್ಗದಲ್ಲಿ ದುಡಿಸಿಕೊಳ್ಳುತ್ತಿರುವುದುÀ  ದುಡಿಮೆಗಾರರ  ಖರೀದಿ ಸಾಮಥ್ರ್ಯವನ್ನು ಕೂಡ ಕುಗ್ಗಿಸಿ ಆರ್ಥಿಕ ವ್ಯವಸ್ಥೆಯಲ್ಲಿ ಸರಕುಗಳ ಬೇಡಿಕೆಯ ಮೇಲೆ ನಿರ್ಬಂಧ ಹಾಕುತ್ತಿದೆ, ಜತೆಗೆ ಕಾರ್ಮಿಕರÀ ‘ಉತ್ಪಾದಕತೆ’ಯನ್ನು ಹೆಚ್ಚಿಸುವ ಅವಕಾಶವನ್ನೂ ಕುಂಠಿತಗೊಳಿಸಿದೆ.

ಕರ್ಷಕ ಬಿಕ್ಕಟ್ಟಿನ ಒಂದು ಸಂಕೇತವಾಗಿ ಕೃಷಿ ಆದಾಯಗಳೂ ಕೆಳ ಮಟ್ಟಕ್ಕೆ ಇಳಿದಿರುವುದು ಈಗಾಗಲೇ ಭಾರತೀಯ ಆರ್ಥಿಕದಲ್ಲಿ ಇರುವ ಸಂಬಳಗಳನ್ನು ಕಡಿಮೆ ಮಟ್ಟಕ್ಕೆ ತಳ್ಳುವ ಪ್ರಕ್ರಿಯೆಯನ್ನು ನವ-ಉದಾರವಾದಿ ವ್ಯವಸ್ಥೆಯಲ್ಲಿ ಇನ್ನಷ್ಟು ತೀವ್ರಗೊಳಿಸಲಾಗಿದೆ. ಕಾರ್ಮಿಕ ಕಾನೂನುಗಳ ಫಲಗಳನ್ನು  ಸಂಘಟಿತ ಉದ್ಯಮ ವಲಯದ ಕಾರ್ಮಿಕರು ಅನಗತ್ಯವಾಗಿ ಪಡೆಯುತ್ತಿದ್ದಾರೆ ಎಂದು ಬಂಡವಾಳಶಾಹಿಗಳು ಚಿತ್ರಿಸುತ್ತಿರುತ್ತಾರೆ. ಆದರೆ ಈ ಕಾರ್ಮಿಕರ ನಿಜವೇತನಗಳೂ ಕಳೆದ ಎರಡೂವರೆ ದಶಕಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿವೆ, ಸರಕುಗಳ ಹೆಚ್ಚಿದ ಮೌಲ್ಯಗಳಲ್ಲಿ ಕಾರ್ಮಿಕರ ಪಾಲು ಹತ್ತನೇ ಒಂದಂಶಕ್ಕಿಳಿದಿದೆ.

ಹೀಗೆ, ತಮ್ಮ ಶ್ರಮಶಕ್ತಿಯ  ಮೂಲಕ ಆದಾಯ ಗಳಿಸಬೇಕಾದ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗಗಳ ಒಂದು ದೊಡ್ಡ ಭಾಗವನ್ನು  ಕಡಿಮೆ ಆದಾಯದ  ಬಂದೀಖಾನೆಯಲ್ಲಿ ಕೂಡಹಾಕಲಾಗಿದೆ. ನಮ್ಮ ಆರ್ಥಿಕ ವ್ಯವಸ್ಥೆ ಇದರಿಂದ ತಪ್ಪಿಸಿಕೊಳ್ಳಲು ಬಿಡುತ್ತಿಲ್ಲ.

ಇನ್ನೊಂದೆಡೆಯಲ್ಲಿ, ಬಂಡವಾಳಶಾಹಿಗಳಿಗೆ ಸಂಬಳದಲ್ಲಿ ಸ್ಥಗಿತತೆ ಮತ್ತು ಇಳಿಕೆಯಿಂದಾಗಿ ಮಿಗುತೆ ಮತ್ತು ಲಾಭದ ಪಾಲು(ಮತ್ತು ಉನ್ನತ ಸಂಬಳದ ಒಂದು ಸಣ್ಣ ಬಿಳಿಕಾಲರ್ ನೌಕರರ ಪಾಲು) ಹಿಗ್ಗಿಸಲು ಸಾಧ್ಯವಾಗಿದೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತಲಾ ಕಾರ್ಮಿಕ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ ಮತ್ತು ಅಗ್ಗದ  ಶ್ರಮಶಕ್ತಿ ಮತ್ತು ಶ್ರಮ ಶಕ್ತಿ ಹೆಚ್ಚಾಗಿ ಬೇಕಾಗುವ ಸೇವೆಗಳು ಅವರಿಗೆ ಲಭ್ಯವಾಗಿದೆ. ಇವೆಲ್ಲ ಒಟ್ಟಾಗಿ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಮಟ್ಟದ ವರೆಗೆ ‘ಸ್ಪರ್ಧಾತ್ಮಕ’ವಾಗಿರಲು ಭಾರತೀಯ ಬಂಡವಾಳ ಮತ್ತು ಭಾರತೀಯ ಆರ್ಥಿಕ ವ್ಯವಸ್ಥೆಗೆ ಆಧಾರವನ್ನೂ ಒದಗಿಸಿದೆ.

ಲಾಭದ ಪಾಲಿನಲ್ಲಿ ಹೆಚ್ಚಳ ಕೆಲವೊಂದು ಅವಧಿಗಳಲ್ಲಿ ಕಾರ್ಪೊರೇಟ್ ವಲಯದಿಂದ ಹೂಡಿಕೆ ತ್ವರಿತವಾಗಿ ಬೆಳೆಯಲು ಕೂಡ ಉತ್ತೇಜನೆ ನೀಡಿದೆ. ಆದರೆ ಇಂತಹ ಹೂಡಿಕೆಯ ವಿಸ್ತರಣೆಯನ್ನು ಕಾಯ್ದುಕೊಳ್ಳಲು ನಿರ್ಬಂಧಿಸಿರುವ ಒಂದು ಮಹತ್ವದ ಅಂಶವೆಂದರೆ ಕಡಿಮೆ ಸಂಬಳದ ಆರ್ಥಿಕ ವ್ಯವಸ್ಥೆಯೊಂದರಲ್ಲಿ  ಸರಕುಗಳ ಬೇಡಿಕೆಗೆ ಉಂಟಾಗುವ ನಿರ್ಬಂಧ. ಉತ್ಪಾದಿತ ಬಳಕೆ ಸರಕುಗಳಿಗೆ ಮಾರುಕಟ್ಟೆ ಒಂದೆಡೆಯಲ್ಲಿ ಬಹುಪಾಲು ಜನರ ಕಡಿಮೆ ಆದಾಯಗಳಿಂದಾಗಿ, ಇನ್ನೊಂದೆಡೆಯಲ್ಲಿ ಏರುತ್ತಿರುವ ಆದಾಯಗಳ ಜನಗಳಿಗೆ ಬೇಕಾಗುವ ಸೇವೆಗಳತ್ತ ಪಲ್ಲಟದಿಂದಾಗಿ  ಸೀಮಿತಗೊಂಡಿದೆ.

ಆರ್ಥಿಕ ವ್ಯವಸ್ಥೆಯಲ್ಲಿ ಬೇಡಿಕೆಯ ವಿಧಾನ ಕೂಡ ಹೆಚ್ಚಿನ ಆಮದು ಮತ್ತು ಹೆಚ್ಚಿನ ಬಂಡವಾಳದತ್ತ ತಿರುಗಿದೆ. ಭಾರತೀಯ ಕೈಗಾರಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವಲ್ಲಿ ಕಡಿಮೆ ಸಂಬಳದ ವ್ಯವಸ್ಥೆ ಇದಕ್ಕಿಂತ ಮುಂದೆ ಹೋಗಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ಅಗ್ಗದ ಶ್ರಮಶಕ್ತಿಯ ಮೇಲೆಯೇ ವಿಪರೀತವಾಗಿ ಅವಲಂಬಿಸಿರುವುದು, ಅದರ ಜತೆಗೆ ಸಾರ್ವಜನಿಕ ಶಿಕ್ಷಣದ ಆರೋಗ್ಯದ ಕೆಳಮಟ್ಟ ಮತ್ತು ಇತರ ಮೂಲರಚನೆಗಳ ಕೆಳಮಟ್ಟವೂ ಸೇರಿ ಶ್ರಮದ ಉತ್ಪಾದಕತೆಯನ್ನು ಉತ್ತಮ ಪಡಿಸಲು ಬಾಧಕಗಳಾಗಿವೆ.

ಹೀಗೆ ಅಗ್ಗದ ಶ್ರಮಶಕ್ತಿ ಇದ್ದರೂ ಭಾರತದಲ್ಲಿ ಕೈಗಾರಿಕೆಗೆ ರಫ್ತಿನ ಮೂಲಕ ತ್ವರಿತ ವಿಸ್ತರಣೆ ಸಾಧಿಸಲು ಸಾಧ್ಯವಾಗಿಲ್ಲ. ಕೈಗಾರಿಕಾ ಉತ್ಪಾದನೆ ಕಾರ್ಪೊರೇಟ್ ಹೂಡಿಕೆಗಳನ್ನು ಬಳಸಿಕೊಳ್ಳುವಲ್ಲಿ ಒಂದು ಮಹತ್ವದ ವಲಯವೂ ಹೌದು, ಮತ್ತು ಹೂಡಿಕೆಯಿಂದ ಅತಿ ಹೆಚ್ಚು ನೇರ ಬೇಡಿಕೆ ನಿರ್ಮಿಸುವ ವಲಯವೂ ಹೌದು. ಆದ್ದರಿಂದ ಬಂಡವಾಳ ಶೇಖರಣೆಯ ಪ್ರಕ್ರಿಯೆಯನ್ನು ಮತ್ತೆ-ಮತ್ತೆ ಬೇಡಿಕೆಯ ಕೊರತೆ ಬಾಧಿಸಿದೆ. ಭಾರತದಲ್ಲಿ ಹೂಡಿಕೆಯಲ್ಲಿ ಸ್ಥಗಿತತೆಯ ಪ್ರಸಕ್ತ ಅವಧಿ ನವ-ಉದಾರವಾದಿ ಯುಗ ಆರಂಭವಾದ ಮೇಲೆ ಕಾಣುತ್ತಿರುವ ಅತಿ ದೀರ್ಘ ಅವಧಿ.

ಬಿಕ್ಕಟ್ಟು ಆಳವಾಗಿದೆ, ಬಹಳ ದಿನ ಉಳಿಯುವಂತದ್ದು

ವಿತ್ತೀಯ ಧೋರಣೆ ನವ-ಉದಾರವಾದಿ ಬೆಳವಣಿಗೆಯ ದಿಕ್ಕು ಭಾರತೀಯ ಬಂಡವಾಳಶಾಹಿ ಯನ್ನು ಯಾವ ಇಕ್ಕಟ್ಟಿಗೆ ತಳ್ಳಿದೆಯೋ ಅದನ್ನು ಸರಿಪಡಿಸುವಲ್ಲಿ ಒಂದು ಮಹತ್ವದ ಪಾತ್ರ ವಹಿಸುತ್ತದೆಂಬುದೇನೋ ನಿಜ. ಈ ಇಕ್ಕಟ್ಟು ಬಹಳ ಆಳವಾಗಿದೆ ಮತ್ತು ಬಹಳ ಕಾಲ ಉಳಿಯುವಂತದ್ದು  ಎಂಬ ಎಲ್ಲ ಸಂಕೇತಗಳೂ ಇವೆ. ಮೂಲರಚನೆಗಳು, ಕೃಷಿ ಮತ್ತು ಸಾಮಾಜಿಕ ಸೇವೆಗಳ ಮೇಲೆ ಸಾರ್ವಜನಿಕ ಖರ್ಚುಗಳನ್ನು ಹೆಚ್ಚಿಸಿ, ಅದಕ್ಕಾಗಿ ತೆರಿಗೆ ತೆರಲು ಸಾಧ್ಯವಿರುವವರಿಂದ ಹೆಚ್ಚಿನ ಸಂಪನ್ಮೂಲಗಳನ್ನು ಸಂಗ್ರಹಿಸಿ ಈ ಇಕ್ಕಟ್ಟಿನ ಹಿಂದಿರುವ ಅಸಮತೋಲನಗಳನ್ನು ಸರಿಪಡಿಸಬಹುದು.

ಆದರೆ ಇದಕ್ಕೆ ಅಗ್ಗದ ಶ್ರಮಶಕ್ತಿಯ ವ್ಯವಸ್ಥೆಯಿಂದ  ಮತ್ತು ಅದಕ್ಕೆ ಸಂಬಂಧಪಟ್ಟಂತೆ ದೊಡ್ಡ ಬಂಡವಾಳಿಗರಿಗೆ ಇಂತಹ ಪ್ರಯೋಜನಗಳನ್ನು ತಂದು ಕೊಟ್ಟ ಬೆಳವಣಿಗೆಯ ದಾರಿಯಿಂದ ದೂರ ಸರಿಯ ಬೇಕಾಗುತ್ತದೆ. ಆದರೆ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಶಾಹಿಯ ಮತ್ತು ಭಾರತೀಯ ದೊಡ್ಡ ಬಂಡವಾಳಿಗರ ವರ್ಗ ಕಣ್ಣೋಟದಿಂದಾಗಿ ಇಂತಹ ಯಾವ ಪಲ್ಲಟವನ್ನೂ ಅವರು ಪರಿಹಾರವಾಗಿ ಕಾಣುವುದಿಲ್ಲ, ಬದಲಾಗಿ ಅವರ ಬಿಕ್ಕಟ್ಟಿನ ಉಲ್ಬಣ ಎಂದೇ ಬಗೆಯುತ್ತಾರೆ. ಆದ್ದರಿಂದ ಅವರು ಸಾಂಪ್ರದಾಯಿಕ ಆರ್ಥಿಕ ಧೋರಣೆಗಳಿಗೇ ಅಂಟಿಕೊಂಡಿರುತ್ತಾರೆ. ಅವರ ಅಪಾರ ಶಕ್ತಿಯಿಂದಾಗಿ ಭಾರತೀಯ ಪ್ರಭುತ್ವವೂ ಅದಕ್ಕೆ ಬದ್ಧವಾಗಿರುವಂತೆ ಮಾಡಬಲ್ಲರು.

ಆದರೆ ಬಿಕ್ಕಟ್ಟನ್ನು ಪರಿಹರಿಸಲಾಗದ ತಮ್ಮ ಅಸಮರ್ಥತೆಯಿಂದಾಗಿ ಅವರು ನವ-ಉದಾರವಾದಿ ಚೌಕಟ್ಟನ್ನು ತ್ಯಜಿಸುವ ಬದಲು ಅದರೊಳಗೇ ಒಂದು ಪರಿಹಾರ ಪಡೆಯುವ ಹತಾಶ ಪ್ರಯತ್ನ ನಡೆಸುತ್ತಾರೆ. ಜಿಎಸ್‍ಟಿ ಭಾರತೀಯ ಆರ್ಥಿಕ ವ್ಯವಸ್ಥೆಗೆ ಅದ್ಭುತವಾಗಿ ಕೆಲಸ ಮಾಡಿಕೊಡುವ ಜಾದೂ ಶಕ್ತಿ ಹೊಂದಿದೆ ಎಂಬುದು ಭಾರತೀಯ ಬಂಡವಾಳಶಾಹಿಯ ದಿವಾಳಿಕೋರತನದ ಒಂದು ಪ್ರತಿಬಿಂಬ. ಬಹುಶಃ ತಾತ್ಕಾಲಿಕವಾಗಿ ಜಿಎಸ್‍ಟಿ ಬಂಡವಾಳಕ್ಕೆ ಒಂದು ನಿದ್ದೆಗುಳಿಗೆಯಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದೇನೋ.