“ತಿಂಗಳ ಪ್ಯಾಡ್ ಮ್ಯಾಲನೂ ರೊಕ್ಕ ತಿನ್ತಾರ”

ಸಂಪುಟ: 
11
ಸಂಚಿಕೆ: 
29
Sunday, 9 July 2017

 

ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಶೇ. 12 ಜಿ.ಎಸ್.ಟಿ. ತೆರಿಗೆ ಹಾಕಿದ್ದು ದೇಶಾದ್ಯಂತ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಕಲಬುರಗಿ ಬೀದಿಯಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವತಿಯರು, ವಿದ್ಯಾರ್ಥಿನಿಯರು ದನಿಯೆತ್ತರಿಸಿ ಕೈಯೆತ್ತಿ ಧಿಕ್ಕಾರ “ಕೇಂದ್ರ ಸರಕಾರದ ಜಿಎಸ್ಟಿ ನೀತಿಗೆ....” ಹೇಳಿದರು. ಪ್ರತಿಭಟನೆಯನ್ನು ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಂಘಟಿಸಿತ್ತು. ಪ್ರತಿಭಟನೆಯ ನಂತರ ಕೇಂದ್ರ ಹಣಕಾಸು ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿ ಪತ್ರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಶೇ. 12 ಜಿ.ಎಸ್.ಟಿ. ತೆರಿಗೆಯನ್ನು ತಕ್ಷಣ ಹಿಂತೆಗೆಯಬೇಕು. ಇಲ್ಲವೆ ಉಗ್ರ ಹೋರಾಟ ಎದುರಿಸಲು ತಯಾರಾಗಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಒಬ್ಬ ಮಹಿಳೆ ಹೇಳ್ತಿದ್ದಳು “ನಮ್ ತಿಂಗಳ ಪ್ಯಾಡ್ ಮ್ಯಾಲನೂ ಇವ್ರಿಗಿ ರೊಕ್ಕ ತಿನ್ಲಾಕ್ ಸಾಕಾಗವಲ್ದು.. ಹೊಟ್ಟಿಗಿ ಏನ್ ತಿಂತಾರಾ?”

ವಿದ್ಯಾರ್ಥಿನಿ ಹಿಂಗ ಹೇಳಿದಳು, “ಕೇಂದ್ರ ಸರಕಾರದೋರು ಬೇಟಿ ಬಚಾವೊ ಬೇಟಿ ಪಢಾವೊ ಅಂತ ಸುಳ್ಳ ಪ್ರಚಾರಕ. ಖರೆ ಕಾಳಜಿ ಇದ್ರ ಸ್ಯಾನಿಟರಿ ನ್ಯಾಪ್ಕಿನ್ ಮ್ಯಾಲ ಟ್ಯಾಕ್ಸ್ ಹಾಕಲಿಕ್ ಹ್ಯಾಂಗ್ ಸಾಧ್ಯ ಇತ್ತು? ಅವರ ಮಾತೃ ಭಕ್ತಿ ದೇಶ ಭಕ್ತಿ ಎಲ್ಲ ಬೋಗಸ್… ಮಂದಿಗಿ ಮಳ್ಳ ಮಾಡಾದು ಇನ್ ಮುಂದ ಸಾಧ್ಯ ಇಲ್ಲ… ಸ್ಯಾನಿಟರಿ ಪ್ಯಾಡ್ ಮ್ಯಾಲಿನ್ ಟ್ಯಾಕ್ಸ್ ತೆಗಿಬೇಕು. ಉತ್ತಮ ಗುಣಮಟ್ಟದ್ದು ಪ್ಯಾಡ್ ಎಲ್ಲ ಹೆಣ್ಮಕ್ಕಳಿಗಿ ವಿತರಿಸಬೇಕು. ಇಲ್ಲಾಂದ್ರ ದೇಶ ಅಂಬಾದು ಹೋರಾಟದ ಅಂಗಳ ಆಗ್ತದ..”

 

ಭಾರತದಲ್ಲಿ ಶೇಕಡ 71 ರಷ್ಟು ಜನತೆಯ ಜೀವನದ ಆದಾಯವು ಕೇವಲ 20 ರೂಪಾಯಿ ಎಂಬುದು ಕೇಂದ್ರ ಸರಕಾರದ ಸಮೀಕ್ಷೆಯಾಗಿದೆ. ಇವರಲ್ಲಿ ಅರ್ಧದಷ್ಟು ಮಹಿಳೆಯರು ಎಂಬುದನ್ನು ಮರೆಯಬಾರದು. ಯುವತಿಯರು ತಿಂಗಳ ಋತುಸ್ರಾವದ ಹೊತ್ತಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಬಳಸುವುದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಉಚಿತವಾಗಿ ವಿತರಿಸಬೇಕು ಎಂಬುದು ಮಹಿಳಾ ಸಂಘಟನೆಗಳ ಒತ್ತಾಯವಾಗಿದೆ. ಕರ್ನಾಟಕದ ಸರಕಾರಿ ಹೈಸ್ಕೂಲುಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಅಗತ್ಯವಿರುವ ಎಲ್ಲ ಮಹಿಳೆಯರಿಗೂ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ವಿತರಿಸಬೇಕು. ಮತ್ತು ಈ ಕ್ರಮವು ದೇಶದಾದ್ಯಂತ ಜಾರಿಯಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕೇಂದ್ರ ಸರಕಾರವು ಜಿಎಸ್‍ಟಿ ಜಾರಿಗೊಳಿಸುವ ಕಾರ್ಪೋರೆಟ್ ಕಣ್ಣೊಟದ ಹಿನ್ನೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಸಹ ಐಶಾರಾಮಿ ಪಟ್ಟಿಗೆ ತಳ್ಳಿ ಶೇ.12ರಷ್ಟು ತೆರಿಗೆ ಹೇರಿರುವುದನ್ನು ಮನವಿಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ಮಹಿಳೆಯರ ಸಂಕಟ ಸಮಸ್ಯೆಗಳನ್ನು ಅರಿತುಕೊಳ್ಳಲು ತಾಯ್ತನದ ಜರೂರಿ ಇರುತ್ತದೆ. ಆದರೆ ನಮ್ಮ ದೇಶದ ಪ್ರದಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗಾಗಲಿ ಹಣಕಾಸು ಸಚಿವ ಅರುಣ ಜೇಟ್ಲಿಯವರಿಗಾಗಲಿ ತಾಯ್ತನ ದೂರ ಉಳಿಯಿತು ಕನಿಷ್ಠ ಕಾಮನ್ ಸೆನ್ಸ್ ಸಹ ಇಲ್ಲವೆಂಬುದಕ್ಕೆ ನ್ಯಾಪ್ಕಿನ್ ಮೇಲೆ ಹೇರಿದ 12% ತೆರಿಗೆ ಸಾಕ್ಷಿಯಾಗಿದೆ. ಬಡ ಮಹಿಳೆಯರು, ಕೆಳಮದ್ಯಮ ವರ್ಗದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ದುಬಾರಿ ಹಣ ತೆರಲು ಹೇಗೆ ಸಾಧ್ಯ? ಹಿಂದೆ ಸಹ ದುಬಾರಿ ಹಣ ತೆತ್ತು ಕೊಳ್ಳುವುದು ಕಷ್ಟದ್ದಾಗಿರುವುದರಿಂದ ಉಚಿತ ವಿತರಣೆಗೆ ಆಗ್ರಹಿಸಲಾಗಿತ್ತು.  ಆದರೀಗ ಇನ್ನಷ್ಟು ತೆರಿಗೆ ಹಾಕುವ ಮೂಲಕ ಕನಿಷ್ಠ ಮಟ್ಟಿಗಾದರೂ ಮಹಿಳಾ ಸಂವೇದನೆಯಿಲ್ಲದ ಸರಕಾರ ತಾನೆಂಬುದು ಸಬೂತು ಮಾಡಿದಂತಾಗಿದೆ. ಬಿಜೆಪಿ ಪಕ್ಷದಲ್ಲಿರುವ ಮಹಿಳೆಯರು ಈ ಕುರಿತು ಮೌನವಾಗಿರುವುದು ಖಂಡನಾರ್ಹವಾದದ್ದು. ತೆರಿಗೆ ಕೊಡಲಾಗದಿದ್ದರೆ ಮನೆಯಲ್ಲಿ ಅಡುಗೆ ಮಾಡಿಕೊಂಡು ಉಣ್ಣಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು ನೋಡಿದರೆ ನ್ಯಾಪ್ಕಿನ್ ವಿಷಯಕ್ಕೂ ಇಂತಹದೇ ಅಮಾನವೀಯ ನಿಲುವು ಹೊಂದಿದ್ದಾರೆ ಎಂದಂತೆ ಎಂದು ಮನವಿಯಲ್ಲಿ ಟೀಕಿಸಲಾಗಿದೆ.

ಜಗಕೆ ತಂದ ಜನನಿಯ ಅಸ್ಮಿತೆ ಘನತೆಗೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರದ ತೆರಿಗೆ ನೀತಿ ಖಂಡನಾರ್ಹ. ಅಭಿವೃದ್ಧಿ ವಿರೋಧಿಯಾದ ಅಮಾನವೀಯ ತೆರಿಗೆ ಪದ್ಧತಿಯನ್ನು ಕೂಡಲೇ ಕೈಬಿಡಬೇಕು. ನ್ಯಾಪ್ಕಿನ್ ಮೇಲಿನ 12% ತೆರಿಗೆಯನ್ನು ಹಿಂಪಡೆಯಬೇಕು. ಮತ್ತು ಉಚಿತವಾಗಿ ದೇಶದಾದ್ಯಂತ ಉತ್ತಮ ಗುಣಮಟ್ಟದ ನ್ಯಾಪ್ಕಿನ್ ವಿತರಿಸಬೇಕೆಂದು ಎಂದು ಮನವಿ ಆಗ್ರಹಿಸಿದೆ. ಆಗ್ರಹಿಸುತ್ತೇವೆ.