ಬೆವರು ಹರಿಸಿ ಸಿರಿ ಹೆಚ್ಚಿಸಿದ ಉದ್ಯೋಗ ಖಾತ್ರಿ

ಸಂಪುಟ: 
11
ಸಂಚಿಕೆ: 
29
Sunday, 9 July 2017

ಮಂಡ್ಯ ಜಿಲ್ಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಅನುಭವಗಳು
 

ಅದು 2008ರ ಸಮಯ. ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕಾಯಿದೆ ಅನುಷ್ಠಾನಗೊಂಡ ಹೊಸತು. ಮಳವಳ್ಳಿಯ ನೆಲಮಾಕನಹಳ್ಳಿಯಲ್ಲಿ ಈ ಕಾಯಿದೆಯನ್ನು ಜಾರಿಗೆ ತರಲು ಜನವಾದಿ ಮಹಿಳಾ ಸಂಘಟನೆಯು ಜನರನ್ನು ಪ್ರೇರೇಪಿಸಿ, ಅವರಿಗೆಲ್ಲ ಉದ್ಯೋಗ ಚೀಟಿ ಮತ್ತು ಬ್ಯಾಂಕ್ ಖಾತೆ ಮಾಡಿಸಿಕೊಟ್ಟು, ಗ್ರಾಮ ಪಂಚಾಯತಿಯನ್ನು ಆಗ್ರಹಿಸಿ ಕೆಲಸವನ್ನು ಪಡೆಯಲಾಯಿತು. ಸುಮಾರು 80 ಜನ ಮಹಿಳೆಯರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಸುದ್ದಿ ಊರಲ್ಲೆಲ್ಲ ಗೊತ್ತಾಗಿದ್ದೇ ತಡ, ಊರಿನ ಗುತ್ತಿಗೆದಾರರು, ಜಮೀನುದಾರರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹೌಹಾರಿದರು. ತಮ್ಮ ಹೊಲದ ಕೆಲಸಕ್ಕೆ 30-40 ರೂಪಾಯಿ ಕೂಲಿ ಕೊಡುತ್ತಿದ್ದ ಜಮೀನುದಾರರಿಗೆ, ಕೆಲಸಗಾರರರು ಉದ್ಯೋಗ ಖಾತ್ರಿಯಲ್ಲಿ ಒಮ್ಮೆಲೆ 82 ರೂಪಾಯಿ ಪಡೆದುಕೊಂಡು ಬಿಟ್ಟರೆ ತಮ್ಮಲ್ಲಿಗೆ ಕೆಲಸಕ್ಕೆ ಬರುತ್ತಾರಾ? ಇನ್ನು ತಾವೂ ಕೂಲಿ ಜಾಸ್ತಿ ಕೊಡಬೇಕಾಗುತ್ತಲ್ಲಾ ಎಂಬ ಚಿಂತೆ ಹತ್ತಿತು. ಗುತ್ತಿಗೆದಾರರಿಗೆ, ಕೆಲಸ ತಮ್ಮ ಕೈ ತಪ್ಪುವ ಚಿಂತೆ. ಹೀಗಾಗಿ ಅವರೆಲ್ಲ ಕೆಲಸಕ್ಕೆ ಅರ್ಜಿ ಹಾಕಿದ್ದ ಕೆಲಸಗಾರ ಮಹಿಳೆಯರನ್ನು ಕೆಲಸಕ್ಕೆ ಹೋಗದಂತೆ ತಡೆದರು. ‘ನೀವು ಅಲ್ಲಿ ಕೆಲಸಕ್ಕೆ ಹೋದರೆ ಚರಂಡಿ ಗೋರಬೇಕಾಗುತ್ತೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇನ್ನೇನು ನಾಳೆ ಬೆಳಗ್ಗೆ ಉದ್ಯೋಗ ಖಾತ್ರಿಯ ಕಾಮಗಾರಿ ಆರಂಭವಾಗಬೇಕು ಎನ್ನುವಾಗ ಎಲ್ಲ ಮಹಿಳೆಯರು ಹಿಂದೆ ಸರಿದುಬಿಟ್ಟರು. ಎಷ್ಟು ತಿಳಿಸಿ ಹೇಳಿದರೂ ಕೆಲಸಕ್ಕೆ ಬರಲಿಲ್ಲ.

    ಸರಿ. ಕೆಲಸಗಾರರಿಗೆ ಸರಿಯಾದ ತಿಳುವಳಿಕೆ ಮೂಡಿಸಲು ಹಾಗೂ ಹಳ್ಳಿಯ ಪಟ್ಟಭದ್ರ ಶಕ್ತಿಗಳಿಗೆ ಚುರುಕು ಮುಟ್ಟಿಸಲು ಸಂಘಟನೆಯವರು ತಮ್ಮ ತಮ್ಮ ಮನೆಯ ಸದಸ್ಯರೇ ಮುಂದೆ ನಿಂತು ಕೆಲಸ ಮಾಡಿ ತೋರಿಸುವುದು ಎಂದು ನಿರ್ಧರಿಸಿದರು. ಅದರಂತೆ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ದೇವಿ ಮತ್ತು ಸುಶೀಲ ಹಾಗೂ ಅವರ ಕುಟುಂಬದ 10-15 ಸದಸ್ಯರು ಒಂದು ತಂಡವಾಗಿ ನಿಂತು 8 ದಿನಗಳಲ್ಲಿ ಒಂದು ಕಾಲುವೆಯ ಹೂಳೆತ್ತಿದರು. ಈ ಕೆಲಸಕ್ಕೆ ಅವರಿಗೆ ಮಜೂರಿಯೂ ಬಂತು. ಇದಾದ ಮೇಲೆ ಜನರಿಗೆ ಈ ಕೆಲಸದಲ್ಲಿ ನಂಬಿಕೆ ಬಂತು. ಮರುದಿನದಿಂದಲೇ 50-60 ಜನ ಕೆಲಸಗಾರರು ಬಂದರು. ಕೆರೆ, ಕಟ್ಟೆ, ಕಾಲುವೆಗಳ ಹೂಳೆತ್ತುವುದು, ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಶಾಲಾ ಮೈದಾನ ಅಭಿವೃದ್ಧಿ, ಚರಂಡಿಗಳ ನಿರ್ಮಾಣ, ಇತ್ಯಾದಿ ಹತ್ತಾರು ಕಾಮಗಾರಿಗಳನ್ನು ಮಾಡಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಊರಿನ ಮೂಲಭೂತ ಸೌಲಭ್ಯಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಿದರು. ನೆಲಮಾಕನಹಳ್ಳಿ ಗ್ರಾಮದಲ್ಲಿ ಅಂದು ಆರಂಭವಾದ ಉದ್ಯೋಗ ಖಾತ್ರಿಯ ಕೆಲಸ ಇಂದಿಗೂ ನಿರಂತರವಾಗಿ ನಡೆಯುತ್ತಿದೆ. ಹಾಗೂ ಅಲ್ಲಿಂದ ಮಳವಳ್ಳಿ ತಾಲ್ಲೂಕಿನ 24 ಗ್ರಾಮ ಪಂಚಾಯತಿಗಳಿಗೆ ಮತ್ತು ಮದ್ದೂರು, ಮಂಡ್ಯ ಹಾಗೂ ನಾಗಮಂಗಲ ತಾಲ್ಲೂಕುಗಳಿಗೂ ಹರಡಿಕೊಂಡಿದೆ.

    ಈ ಹರಡಿಕೊಳ್ಳುವಿಕೆ ಸುಲಭವಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಅಡ್ಡಿಗಳು. ಪುರುಷಾಹಂಕಾರದ ತೊಡಕುಗಳು. ಆಡಳಿತ ವರ್ಗದ ನಿರ್ಲಕ್ಷ, ಅಸಹಕಾರ ಅನೇಕ ಸಮಸ್ಯೆಗಳನ್ನು ತಂದೊಡ್ಡಿದವು. ಉದ್ಯೋಗದ ಹಕ್ಕಿನ ಬಗ್ಗೆ, ಕೆಲಸದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅವಕಾಶ ಕೊಡದಂತೆ ನಿರ್ಬಂಧ ಒಡ್ಡುವುದು, ಕೆಲಸಗಾರರನ್ನು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗದಂತೆ ತಡೆ ಒಡ್ಡುವುದು, ಬೆದರಿಕೆ ಹಾಕುವುದು, ಉದ್ಯೋಗ ಖಾತ್ರಿಯ ಕೆಲಸ ನೀಚ ಕೆಲಸ ಎಂಬ ಸುಳ್ಳು ಸುದ್ಧಿ ಹರಡುವುದು, ಕೂಲಿ ಬರುವುದಿಲ್ಲ, ಕಡಿಮೆ ಕೂಲಿ ಕೊಡುತ್ತಾರೆ, ಸರಕಾರ ಈ ಯೋಜನೆಯನ್ನೇ ನಿಲ್ಲಿಸಿ ಬಿಡುತ್ತದೆ ಎಂಬ ಸುಳ್ಳುಗಳನ್ನು ಹೇಳುವುದು; ಉದ್ಯೋಗ ಖಾತ್ರಿ ಕೆಲಸ ಮಾಡಿಸುತ್ತಿದ್ದ ಮಹಿಳೆಯರ ಮೇಲೆ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ನಡೆಸುವುದು, ನೂರಾರು ಜನರ ಉದ್ಯೋಗ ಚೀಟಿಗಳನ್ನು ಕಬ್ಜಾ ಮಾಡಿಕೊಂಡು ಅವರ ಹೆಸರಿನಲ್ಲಿ ದುಡ್ಡು ಹೊಡೆಯುವುದು, ಯಂತ್ರಗಳಲ್ಲಿ ಕೆಲಸ ಮಾಡಿಸಿ ದುಡ್ಡು ಹೊಡೆಯುವುದು... ಹೀಗೆ ಊರಿನ ಪಟ್ಟಭದ್ರ ಹಿತಾಸಕ್ತಿಗಳು ಸ್ವಹಿತಾಸಕ್ತಿಯನ್ನು ಮೆರೆದವು.
 

    ಉದ್ಯೋಗ ಖಾತ್ರಿ ಕಾಯಿದೆಯನ್ನು ಜಾರಿ ಮಾಡಬೇಕಾದ ನೇರ ಜವಾಬ್ದಾರಿ ಇರುವ ಗ್ರಾಮ ಪಂಚಾಯತಿಗಳು ಉದ್ಯೋಗ ಚೀಟಿ ಮಾಡಿಕೊಡದಿರುವುದು, ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಲು ಅಡ್ಡಿಗಳು; ಕೆಲಸಕ್ಕೆ ಅರ್ಜಿ ತೆಗೆದುಕೊಳ್ಳದಿರುವುದು, ಅರ್ಜಿ ತೆಗೆದುಕೊಂಡರೂ ಮುಗ್ಧ ಜನರಿಗೆ ಸ್ವೀಕೃತಿ ಪತ್ರ ಕೊಡದೆ ವಂಚನೆ ಮಾಡುವುದು; ಗಟ್ಟಿ ನೆಲದಲ್ಲಿ ಕೆಲಸ ಕೊಡುವುದು, ತಪ್ಪು ಅಳತೆಯ ಕೆಲಸ ಕೊಡುವುದು, ಕೂಲಿ ಮೊತ್ತ ತಪ್ಪು ಬರೆಯುವುದು, ಕೆಲಸದ ಸ್ಥಳದಲ್ಲಿ ಯಾವುದೇ ಸೌಲಭ್ಯ ಒದಗಿಸದೆ ಇರುವುದು, ಇತ್ಯಾದಿ ಸಮಸ್ಯೆಗಳು ಅಲ್ಲಿಂದಲೂ ಉದ್ಭವಿಸಿದವು. 

    ಆದರೆ ಎದುರಾದ ಪ್ರತಿ ತಡೆಯನ್ನೂ ಸವಾಲೆಂದು ಸ್ವೀಕರಿಸಿದ ಜನವಾದಿಯ ಸಂಗಾತಿಗಳು ಒಂದೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುತ್ತಾ ಮುಂದೆ ಸಾಗಿದರು. ತಡೆ ಒಡ್ಡುವವರನ್ನು ಎದುರು ಹಾಕಿಕೊಳ್ಳುವುದಕ್ಕಿಂತಲೂ ಜನರ ತಿಳುವಳಿಕೆಯನ್ನು ಹೆಚ್ಚಿಸಿ, ಅವರ ಹಕ್ಕನ್ನು ಅವರು ಪಡೆದುಕೊಳ್ಳುವಂತೆ ಸಜ್ಜುಗೊಳಿಸಿದರು. ಮೂರು ವರ್ಷಗಳಿಂದ ಕಾಡುತ್ತಿದ ಬರಗಾಲ ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಕೆಲಸ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಕೆಲಸ ಎಷ್ಟು ಮುಖ್ಯವಾಗಿತ್ತೆಂದರೆ ಊರಿನ ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆ ಸುಲಭವಾಗಿ ಅರ್ಥವಾಯಿತು. ಕೆಲಸಕ್ಕೆ ಅಡ್ಡಿಪಡಿಸುವ ಪಟ್ಟಭದ್ರರನ್ನು ಜನರೇ ಎದುರಿಸತೊಡಗಿದರು. ನೆಲಮಾಕನಹಳ್ಳಿಯ ಕೆಂಪಣ್ಣನ ಕಟ್ಟೆ ಹೂಳೆತ್ತುವ ಕೆಲಸ ನಡೆಯುತ್ತಿತ್ತು. ಊರಿನ ಗುತ್ತಿಗೆದಾರರು ಅದು ತಮ್ಮ ಕೆಲಸ ಎಂದು ಜಿಸಿಬಿ ತಂದು ಕಟ್ಟೆ ಅಂಗಳದಲ್ಲಿ ನಿಲ್ಲಿಸಿಬಿಟ್ಟರು. ಕೆಲಸಗಾರರಿಗೆ ರೋಸಿ ಹೋಯಿತು. ಜಿಸಿಬಿ ಯಂತ್ರಕ್ಕೆ ಅಡ್ಡ ನಿಂತು ಹೇಳಿದರು, ‘ಇದು ಉದ್ಯೋಗ ಖಾತ್ರಿ ಕೆಲಸ, ಇಲ್ಲಿ ಯಂತ್ರಗಳಿಗೆ ಅವಕಾಶ ಇಲ್ಲ’. ಗ್ರಾಮ ಪಂಚಾಯತಿಯ ಅಧ್ಯಕ್ಷರೂ ಗುತ್ತಿಗೆದಾರನ ಪರವಾಗಿ ನಿಂತರು. ಗ್ರಾಮ ಪಂಚಾಯತಿಯ ವಿಶೇಷ ಸಭೆಯೂ ನಡೆಯಿತು. ಅಧ್ಯಕ್ಷ ಜನರ ಪರವಾಗಿಲ್ಲ ಎಂದು ತಿಳಿದ ಜನ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ, ಕೊನೆಗೂ ತಮ್ಮ ಕೆಲಸ ಉಳಿಸಿಕೊಂಡರು.

    ಕೂಳಗೆರೆ ಮತ್ತು ಕೆ. ಬೆಳ್ಳೂರು ಗ್ರಾಮ ಪಂಚಾಯತಿಗಳಲ್ಲಿ ಕಾರ್ಮಿಕ ಬಂಧುಗಳಾದ ಯಶೋಧ ಮತ್ತು ಸುವರ್ಣ ಅವರುಗಳನ್ನು ಅವಹೇಳನ ಮಾಡುವುದು, ಊರಲ್ಲಿ ಅವಮಾನಿಸುವುದು ಕೊನೆಗೆ ದೈಹಿಕ ಹಲ್ಲೆ ನಡೆಸುವವರೆಗೆ ಹೋದರು. ಆದರೆ ಈ ಹೆಣ್ಣು ಮಕ್ಕಳು ಅದ್ಯಾವುದಕ್ಕೂ ಜಗ್ಗದೆ ಗಟ್ಟಿ ನಿಂತರು. ಜನವಾದಿ ಮಹಿಳಾ ಸಂಘಟನೆಯೂ ಈ ಮಹಿಳೆಯರಿಗೆ ಬೆಂಬಲ ನೀಡಿತು.  

    ಉದ್ಯೋಗ ಖಾತ್ರಿಯ ಕೆಲಸಕ್ಕಾಗಿ ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡ ಪ್ರಚಾರ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಭೆಗಳು ಮಹಿಳೆಯರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿತು. ಕೇವಲ ಉದ್ಯೋಗದ ಹಕ್ಕಲ್ಲದೆ ಇತರೆ ಸಾಮಾಜಿಕ ವಿಚಾರಗಳನ್ನೂ ಚರ್ಚೆ ಮಾಡಲು ಆರಂಭಿಸಿದರು. ಇದರಿಂದಾಗಿ ಗುಳಘಟ್ಟ, ದುಗ್ಗನಹಳ್ಳಿ, ಮೊದಲಾದ ಕಡೆಗಳಲ್ಲಿ ಹೆಣ್ಣು ಮಕ್ಕಳು ಮದ್ಯಪಾನ ವಿರೋಧಿ ಆಂದೋಲನ ನಡೆಸಿ, ತಮ್ಮ ಊರುಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಿದ್ದಾರೆ. ತಮ್ಮ ಊರಿನ ಮಹಿಳೆಯರಿಗೆ ವಿಧವಾ ವೇತನ, ವೃದ್ದಾಪ್ಯ ವೇತನ, ಮಕ್ಕಳಿಗೆ ವಿದ್ಯಾರ್ಥಿ ವೇತನ ಇತ್ಯಾದಿ ಸಮಾಜ ಕಲ್ಯಾಣ ಸೌಲಭ್ಯಗಳನ್ನು ಮಾಡಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹೋರಾಟಗಳು ಗ್ರಾಮ ಪಂಚಾಯತಿಯ ಒಳಗೆ ನಡೆಯಬೇಕು, ಅದಕ್ಕಾಗಿ ತಾವು ಪಂಚಾಯತಿಯ ಸದಸ್ಯರಾಗಬೇಕು ಎಂದು ತಿಳಿವು ಬಂದು 2015ರ ಪಂಚಾಯತಿ ಚುನಾವಣೆಯಲ್ಲಿ 7 ಜನ ಮಹಿಳೆಯರು, ಜನವಾದಿ ಮಹಿಳಾ ಸಂಘಟನೆ ಮತ್ತು ಉದ್ಯೋಗ ಖಾತ್ರಿ ಕೆಲಸದಿಂದ ಅರಿವು ಬಂದ ಮಹಿಳೆಯರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗೆದ್ದವರು ಕೆಲವರಾದರೂ, ಸ್ಪರ್ಧಿಸಿದ್ದ ಎಲ್ಲರೂ ಉತ್ತಮ ಸ್ಪರ್ಧೆ ಒಡ್ಡಿದ್ದರು. ಕೆಲವೇ ಮತಗಳ ಅಂತರದಲ್ಲಿ ಸೋತರು. ಹಾಗೂ ಊರಿನಲ್ಲಿ ಅದುವೆರೆಗೂ ಇದ್ದ ಚುನಾವಣೆ ರಾಜಕೀಯದ ನಿಯಮಗಳನ್ನು ಪಲ್ಲಟಗೊಳಿಸಿದರು. ಊರಿನ ರಾಜಕೀಯ ಮುಖಂಡರು, ತೆಂಡೆ ನಾಯಕರು, ಜಮೀನ್ದಾರರ ಆಶೀರ್ವಾದ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಆಗುವುದಿಲ್ಲ ಎಂಬ ಜನರ ತಿಳುವಳಿಕೆಗೆ ಪ್ರತಿಯಾಗಿ ಈ ಹೆಣ್ಣು ಮಕ್ಕಳು ಕೇವಲ ತಮ್ಮ ಕೆಲಸದ ಬಲದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ಸೋತ ಮೇಲೆಯೂ ಮಾಡುತ್ತಿರುವ ಜನಪರ ಕೆಲಸದಿಂದಾಗಿ ಈಗ ಆವರ ಊರಿನ ಎಲ್ಲ ಮಹಿಳೆಯರು ಮುಂದಿನ ಚುನಾವಣೆಯಲ್ಲಿ ಇವರನ್ನೇ ಗೆಲ್ಲಿಸಬೇಕೆಂಬ ನಿರ್ಧಾರ ಮಾಡಿದ್ದಾರೆ.

    ‘ಸಮಾನ ಕೆಲಸಕ್ಕೆ ಸಮಾನ ಕೂಲಿ’ ಎನ್ನುವ ತತ್ತ್ವ ಕೆಲಸಗಾರ ಮಹಿಳೆಯರ ಆತ್ಮವಿಶ್ವಾಸವನ್ನು, ಆರ್ಥಿಕ ಬಲವನ್ನು, ಸಾಮಾಜಿಕ ಸ್ಥಾನ-ಮಾನವನ್ನು ಹೆಚ್ಚಿಸಿದೆ. ಗಂಡಸರಿಗಿಂತ ಹೆಚ್ಚು ಕೆಲಸ ಮಾಡಿದರೂ ಕೂಡ, ಅವರಿಗಿಂತ ಕಡಿಮೆ ಕೂಲಿ ಪಡೆಯುತ್ತಿದ್ದ ಮಹಿಳೆಯರಿಗೆ ಸಮಾನ ಕೂಲಿ ಸಿಗುತ್ತಿರುವುದು ಅಪಾರ ಸಂತಸ ನೀಡಿದೆ. ‘ಎಲ್ಲಿ ಹೋಗಿ, ಎಷ್ಟು ದುಡುದ್ರೂ ಗಂಡಸರಿಗಿಂತ ನಮಗೆ ಕಡಿಮೆ ಕೂಲಿ ಕೊಡೋರು. ಜಾಸ್ತಿ ಕೊಡಿ ಅಂತ ಕೇಳಿದ್ರೆ, ನೀನೇನು ಗಂಡಸಾ ಅನ್ನೋರು. ಮೈಯೆಲ್ಲಾ ಉರಿದು ಹೋಗೋದು. ಆದ್ರೆ, ಏನೂ ಮಾಡಲು ಆಗ್ತಿರಲಿಲ್ಲ. ಈಗ ಸಮಾನ ಕೂಲಿ ಅಂದಾಗ ತುಂಬಾ ಖುಷಿ ಆಯ್ತು’ ಎನ್ನುತ್ತಾರೆ ದೇವಮ್ಮ.  ಮಹಿಳೆಯರಿಗೆ ಆತ್ಮ ಸ್ಥೈರ್ಯ ಹೆಚ್ಚಿಸಿದ ಇದೇ ವಿಷಯ ಗಂಡಸರಿಗೆ ಅಸಮಾಧಾನ ಮೂಡಿಸಿದೆ. ಹೆಂಗುಸ್ರುಗೂ, ನಮ್ಗೂ ಒಂದೇ ಕೂಲಿ ಕೊಟ್ರೆ ಕೆಲಸಕ್ಕೆ ಬರಲ್ಲ ಅಂತ ಕುಳಿತಿರುವ ಗಂಡಸರು, 50 ರೂಪಾಯಾದ್ರೂ ಜಾಸ್ತಿ ಮಾಡ್ಸಿ ಅಂತಿದ್ದಾರೆ. ಜನವಾದಿ ಮಹಿಳಾ ಸಂಘಟನೆಯ ಮೂಲಕ ಕೆಲಸ ನಡೆಯುತ್ತಿರುವ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಶೇ.80 ರಷ್ಟು ಉದ್ಯೋಗ ಖಾತ್ರಿ ಕೆಲಸಗಾರರು ಹೆಂಗಸರು. ಇವರು ಉದ್ಯೋಗ ಖಾತ್ರಿಯ ಕೆಲಸ, ಮನೆಯಲ್ಲಿ ಪಶುಸಂಗೋಪನೆ ಮಾಡಿಕೊಂಡು ಇನ್ನೂ ಉಳಿಯುವ ಸಮಯದಲ್ಲಿ ಹೊಲದ ಕೂಲಿ ಕೆಲಸಕ್ಕೂ ಹೋಗುತ್ತಿದ್ದಾರೆ. ಸಮಾನ ಕೆಲಸದ ತತ್ತ್ವವನ್ನೂ ಅಹಂ ಪ್ರಶ್ನೆ ಮಾಡಿಕೊಂಡಿರುವ ಗಂಡಸರು, ಹೆಂಗಸರು ಹಾರೆ ಹಿಡಿದು ಕೆಲಸ ಮಾಡುವುದು ತಮಗೆ ಅವಮಾನ ಎಂದು ಗೊಣಗುತ್ತಾ ಇದ್ದಾರೆ. ಆದರೆ ಇದಾವ ಗೊಣಗಾಟಕ್ಕೂ ಸೊಪ್ಪು ಹಾಕದ ಮಹಿಳೆಯರು ಉದ್ಯೋಗ ಖಾತ್ರಿಯ ಕೆಲಸದ ಅಂಗಳದಲ್ಲಿ ತಮ್ಮ ಬೆವರು ಹರಿಸಿ, ನೆಲದ ಸಿರಿ ಹೆಚ್ಚಿಸುತ್ತಿದ್ದಾರೆ.

ಇಂತಹ ನೂರಾರು ಅನುಭವಗಳನ್ನು ಸಂಗ್ರಹಿಸಿ ‘ನೆಲದ ಸಿರಿ’ ಎನ್ನುವ ಪುಸ್ತಕವನ್ನೂ ಪ್ರಕಟಿಸಿದೆ ಜನವಾದಿ ಮಹಿಳಾ ಸಂಘಟನೆ. ಉದ್ಯೋಗ ಖಾತ್ರಿ ಕಾಯಿದೆಯ ಅನುಷ್ಠಾನದಲ್ಲಿ ಇದುವರೆಗೆ ಆಗಿರುವ ಅನುಭವಗಳನ್ನು ಸಂಘಟನೆಯ ಸಂಗಾತಿಗಳು ಮತ್ತು ಕೆಲಸಗಾರರ ಮಾತುಗಳಲ್ಲಿ ದಾಖಲಿಸಿರುವ ಈ ಪುಸ್ತಕ ಶ್ರಮ ಸಂಸ್ಕøತಿಯ ದಾಖಲಾತಿಯಲ್ಲಿ ಬಹು ಅಪರೂಪದ ಕೊಡುಗೆ ಎನ್ನಬಹುದು. ಅನುಭವಗಳ ಜೊತೆಗೆ, ಕಾಯಿದೆಯ ಮುಖ್ಯ ಅಂಶಗಳನ್ನು, ಗ್ರಾಮ ಪಂಚಾಯತಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಹಾಗೂ ಯೋಜನೆಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ವಿವರವಾದ ಪಟ್ಟಿಯನ್ನೂ ನೀಡಲಾಗಿದೆ. ಉದ್ಯೋಗ ಖಾತ್ರಿ ಕಾಯಿದೆಯ ಅನುಷ್ಠಾನದಲ್ಲಿ ತೊಡಗಿಸಿಕೊಂಡಿರುವವರಿಗೆ ಕೈಪಿಡಿಯಂತಿದೆ ಈ ಪುಸ್ತಕ.
 

 

- ಸತ್ಯಾ ಎಸ್.