ಇಸ್ರೇಲ್‍ಗೆ ಮೋದಿ ಭೇಟಿ: ಕೇಡುಂಟು ಮಾಡುವ ಒಂದು ಮೈತ್ರಿ

ಸಂಪುಟ: 
29
ಸಂಚಿಕೆ: 
11
date: 
Sunday, 9 July 2017
Image: 

ಪ್ರಕಾಶ ಕಾರಟ್

ಮೋದಿಯವರ ಇಸ್ರೇಲ್ ಪ್ರವಾಸವು  ಭಾರತ ಅನುಸರಿಸುತ್ತಿರುವ ವಿದೇಶಾಂಗ ನೀತಿಯಲ್ಲಿನ ಸ್ಥಿತ್ಯಂತರದ ಚರಮ ಬಿಂದು. ಇಸ್ರೇಲ್ ಜೊತೆ ಒಂದು ವ್ಯೂಹಾತ್ಮಕ ಸಂಬಂಧವನ್ನು ಬೆಸೆಯುವುದು ಮತ್ತು ಪ್ಯಾಲೇಸ್ತೀನ್ ಗುರಿ ಈಡೇರಿಕೆಗೆ ಭಾರತದ ಬದ್ಧತೆಯನ್ನು ನಿರಂತರವಾಗಿ ದುರ್ಬಲಗೊಳಿಸುವುದು- ಇದು ಅನೇಕ ವರ್ಷಗಳಿಂದ ಬೆಳೆದು ಬಂದಿದೆ. ಜಂಟಿ ಹೇಳಿಕೆಯಲ್ಲಿ ಘೋಷಿಸಲಾಗಿರುವ ‘ವ್ಯೂಹಾತ್ಮಕ ಭಾಗೀದಾರಿಕೆ’ ಇದುವರೆಗೆ ಮುಚ್ಚಿಡಲಾಗಿದ್ದ ಈ ಮೈತ್ರಿಯ ಬಹಿರಂಗ ಘೋಷಣೆಯಾಗಿದೆ. ಅದು ಮೋದಿ ಸರಕಾರದಡಿಯಲ್ಲಿ ವಿದೇಶಾಂಗ ನೀತಿಯಲ್ಲಿ ಆಗಿರುವ ಬಲಪಂಥೀಯ ಪಲ್ಲಟದ ಭಾಗವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಸಾಂಕೇತಿಕವಲ್ಲ, ಅದಕ್ಕಿಂತ ಬಹಳ ಹೆಚ್ಚಿನದ್ದು. ಇದು ಭಾರತದ ಪ್ರಧಾನಿಯೊಬ್ಬರ ಪ್ರಪ್ರಥಮ ಇಸ್ರೇಲ್ ಭೇಟಿ ಮಾತ್ರವೇ ಅಲ್ಲದೆ, ಒಬ್ಬ ಅತ್ಯುನ್ನತ ಭಾರತೀಯ ನಾಯಕ ಇಸ್ರೇಲ್‍ಗೆ ಭೇಟಿ ನೀಡಿದರೂ ರಮಲ್ಲಾ ಮತ್ತು ಪ್ಯಾಲೇಸ್ತೀನಿ ಪ್ರದೇಶಗಳಿಗೆ ಹೋಗದಿರುವ ಸಂದರ್ಭವೂ ಹೌದು.

ಈ ವ್ಯೂಹಾತ್ಮಕ ಮೈತ್ರಿಯ ಕೇಂದ್ರದಲ್ಲಿ ಇರುವುದು  ಪ್ಯಾಲೆಸ್ತೀನಿನ ಮೇಲೆ ವಸಾಹತುಶಾಹಿ ಆಕ್ರಮಣ ಮತ್ತು ಪ್ಯಾಲೆಸ್ತೀನಿ ಜನತೆಯ ಮೇಲಿನ ದಬ್ಬಾಳಿಕೆಯನ್ನು ಗಟ್ಟಿಗೊಳಿಸುವ ಇಸ್ರೇಲ್ ಜೊತೆಗಿನ ಮಿಲಿಟರಿ ಮತ್ತು ಭದ್ರತಾ ಶಾಮೀಲು. ಇದು  ಈ ವಲಯದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಯ ಸಾಧನವಾಗಿ ವರ್ತಿಸುವ ಇಸ್ರೇಲ್ ಪಾತ್ರಕ್ಕೆ ನೆರವು ನೀಡುವ ಒಂದು ಮೈತ್ರಿಯೂ ಆಗಿದೆ. ಮೋದಿ ಭೇಟಿ ಇಸ್ರೇಲ್ ಜೊತೆ 1992ರಲ್ಲಿ ಭಾರತ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಬಂದಿದೆ. 1992ರಿಂದಲೂ ಇಸ್ರೇಲ್ ಜೊತೆ ಭದ್ರತೆ ಮತ್ತು ರಕ್ಷಣಾ ಸಂಬಂಧಗಳು ಅಂದಂದಿನ ಸರಕಾರಗಳ ಅಡಿಯಲ್ಲಿ ಕ್ರಮೇಣವಾಗಿ ವೃದ್ಧಿಸುತ್ತಾ ಬಂದಿವೆ. ಆದರೆ ಇದನ್ನು ಆಳಗೊಳಿಸಿರುವುದು ಮತ್ತು ಅದಕ್ಕೊಂದು ಸೈದ್ಧಾಂತಿಕ ರಚನೆ ನೀಡಿರುವುದು ಬಿಜೆಪಿ ನೇತೃತ್ವದ ಸರಕಾರಗಳ ಆಡಳಿತಾವಧಿಯಲ್ಲಿಯೇ.

ಇಸ್ರೇಲ್ 1990ರ ದಶಕದ ಮಧ್ಯಭಾಗದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ಒಂದು ಪ್ರಮುಖ ದೇಶವಾಗಿದೆ. ಕಳೆದ ದಶಕದಲ್ಲಿ, ಇಸ್ರೇಲ್ ಭಾರತಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮಾರಾಟ ಮಾಡುವ ದೇಶವಾಗಿತ್ತು. ತದನಂತರ ಅಮೆರಿಕ ಆ ಸ್ಥಾನವನ್ನು ಪಡೆಯಿತು. 2017 ಎಪ್ರಿಲ್‍ನಲ್ಲಿ ಇಸ್ರೇಲ್‍ನ ವೈಮಾನಿಕ ಕೈಗಾರಿಕೆಗಳಿಂದ 2.6 ಬಿಲಿಯನ್ ಡಾಲರ್ ಮೊತ್ತದ ಶಾರ್ಟ್ ರೇಂಜ್ ಮತ್ತು ಲಾಂಗ್ ರೇಂಜ್ ಬರಾಕ್-8 ಕ್ಷಿಪಣಿಗಳನ್ನು ಖರೀದಿಸಲು ಭಾರತ ಗುತ್ತಿಗೆ ನೀಡಿದೆ. ಕಣ್ಗಾವಲು ಡ್ರೋನ್‍ಗಳನ್ನು ಖರೀದಿಸುವ ಯೋಜನೆಯೂ ಇದೆ. ಇಸ್ರೋ ರಾಕೆಟ್‍ಗಳ ಮೂಲಕ ಇಸ್ರೇಲ್‍ನ ಬೇಹುಗಾರಿಕೆ ಉಪಗ್ರಹಗಳ ಉಡಾವಣೆಯನ್ನು ಭಾರತ ಮಾಡಿದೆ. ಆಂತರಿಕ ಭದ್ರತಾ ವಿಷಯಗಳಲ್ಲಿ ಇಸ್ರೇಲಿ ಭದ್ರತಾ ತಜ್ಞರು ಭಾರತಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ.

ಬಲಪಂಥೀಯ ಪ್ರಾಣ-ಸ್ನೇಹಿತರು

ಬಿಜೆಪಿ ಹಿಂದೂತ್ವವಾದಿ ಕಣ್ಣೋಟವು ಝಿಯೋನಿಸಂ ಎಂಬ ಜನಾಂಗೀಯ-ರಾಷ್ಟ್ರೀಯವಾದಿ ತೊರೆಯೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದೆ. ಇಸ್ರೇಲ್‍ನ ಆಳುವ ಬಲಪಂಥೀಯ ಲಿಕುಡ್ ಪಕ್ಷ ಮತ್ತು ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಸೈದ್ಧಾಂತಿಕ ಪ್ರಾಣ-ಸ್ನೇಹಿತರು..  ಪ್ಯಾಲೆಸ್ತೀನಿ ಜನರನ್ನು ಬಗ್ಗು ಬಡಿದ ಹಾಗೂ ಅರಬ್ ರಾಷ್ಟ್ರಗಳನ್ನು ಎದುರುಹಾಕಿಕೊಂಡ ರೀತಿಗಾಗಿ ಆರ್‍ಎಸ್‍ಎಸ್ ಮತ್ತು ಬಿಜೆಪಿಗಳು ಇಸ್ರೇಲ್‍ಅನ್ನು ಆರಾಧಿಸುತ್ತವೆ. ತಮ್ಮ ಮುಸ್ಲಿಂ-ವಿರೋಧಿ ಧೋರಣೆಯಿಂದಾಗಿ ಅವುಗಳು ಇಸ್ರೇಲ್‍ಅನ್ನು ಅನುಕರಿಸುವಂತೆ ಮಾಡಿವೆ. ಹಾಗೆ ಮಾಡಬೇಕೆಂದು ವಿ.ಡಿ. ಸಾವರ್ಕರ್ 1952ರಲ್ಲೇ   ಭಾರತಕ್ಕೆ ಕರೆ ನೀಡಿದ್ದರು. ವಾಜಪೇಯಿ ಸರಕಾರದ ಅವಧಿಯಲ್ಲಿ 2000ರಲ್ಲಿ ಅಂದಿನ ಗೃಹ ಸಚಿವರಾಗಿ ಎಲ್.ಕೆ. ಆಡ್ವಾಣಿ ಬೇಹುಗಾರಿಕೆ ಮತ್ತು ಭದ್ರತಾ ಸಂಬಂಧ ಕುದುರಿಸಲೆಂದು ಇಸ್ರೇಲ್‍ಗೆ ಭೇಟಿ ನೀಡಿದ್ದರು. ಉಗ್ರ ಬಲಪಂಥೀಯ ಏರಿಯಲ್ ಶರೋನ್ ಭಾರತಕ್ಕೆ ಭೇಟಿ ನೀಡಿದ ಮೊದಲ ಇಸ್ರೇಲಿ ಪ್ರಧಾನಿ. ಮಿಲಿಟರಿ ಮತ್ತು ಭಯೋತ್ಪಾದನೆ-ನಿಗ್ರಹ ಕ್ರಮಗಳ ಸಂಬಂಧ ವೃದ್ಧಿಸಲೆಂದು ಅವರು 2003ರಲ್ಲಿ ಭಾರತಕ್ಕೆ ಬಂದಿದ್ದರು.

ಇಸ್ರೇಲ್ ಜೊತೆ ಬಹಿರಂಗವಾಗಿ ಗುರುತಿಸಿಕೊಳ್ಳುವ ಹಾಗೂ ಪ್ಯಾಲೆಸ್ತೀನಿಯರಿಗೆ ಬರೀ ಬಾಯ್ಮಾತಿನ ಬೆಂಬಲ ವ್ಯಕ್ತಪಡಿಸುವ ಮೂಲಕ ಪ್ಯಾಲೆಸ್ತೀನಿ ಜನತೆಯ ರಾಷ್ಟ್ರೀಯ ವಿಮೋಚನಾ ಹೋರಾಟಕ್ಕೆ ತಾತ್ವಿಕ ಬೆಂಬಲ ನೀಡುವ ಭಾರತದ ದೀರ್ಘ ಕಾಲದ ನೀತಿಯನ್ನು ಮೋದಿ ಸರಕಾರವು ಕಸದ ಬುಟ್ಟಿಗೆ ತಳ್ಳಿದೆ.

ಅಣಕು ಜನತಂತ್ರಕ್ಕೆ ಶ್ಲಾಘನೆ

ಇಸ್ರೇಲ್ ಜನತಾಂತ್ರಿಕ ವ್ಯವಸ್ಥೆಯನ್ನು ಮೋದಿ ಶ್ಲಾಘಿಸಿದ್ದಾರೆ. ಆದರೆ ವಾಸ್ತವವಾಗಿ ಇಸ್ರೇಲ್‍ನಲ್ಲಿ ಅಸ್ತಿತ್ವದಲ್ಲಿರುವುದು ಜನತಂತ್ರದ ಅಣಕವಾಗಿದೆ. ಇಸ್ರೇಲಿ ಪ್ರಭುತ್ವದ ಮೂಲ ಭೌಗೋಳಿಕ ಗಡಿಗಳೊಳಗೆ ವಾಸಿಸುವ ಹಾಗೂ ಇಸ್ರೇಲ್‍ನ ಜನಸಂಖ್ಯೆಯ ಶೇಕಡಾ 21 ರಷ್ಟಾಗುವ 1.7 ಮಿಲಿಯ ಅರಬ್ ಜನರು ಅಲ್ಲಿ ಎರಡನೇ ದರ್ಜೆಯ ನಾಗರಿಕರಾಗಿದ್ದಾರೆ.  ಇಸ್ರೇಲ್ ಒಂದು ಯೆಹೂದಿ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಣೆಯಾಗುವಾಗ ಅವರ ಸ್ಥಾನಮಾನ ಇನ್ನೂ ಕೆಳಕ್ಕಿಳಿಯುವ ಸಂಭವವಿದೆ.

ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಜಾದಲ್ಲಿ ವಾಸಿಸುವ 4.6 ಮಿಲಿಯ ಪ್ಯಾಲೆಸ್ತೀನಿಯರಿಗೆ ವಸ್ತುಶಃ ಅದೊಂದು ಜನಾಂಗದ್ವೇಷಿ ರಾಷ್ಟ್ರವಾಗಿದೆ. ಅವರ ಜಮೀನುಗಳನ್ನು ಕಸಿದುಕೊಳ್ಳಲಾಗಿದೆ. ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರಿಗೆ ಸೇರಿದ ಅತ್ಯುತ್ತಮ ಜಮೀನುಗಳುಮತ್ತು ಸಂಪನ್ಮೂಲಗಳಲ್ಲಿ ಯೆಹೂದಿಗಳ ವಸತಿಗಳು ತಲೆಯೆತ್ತಿವೆ. ಎಂಟು ಮೀಟರ್ ಎತ್ತರದ ಗೋಡೆಗಳು ಪ್ಯಾಲೆಸ್ತೀನಿ ನಗರವಾಸಿಗಳನ್ನು ಅವರದ್ದೇ ನೆಲದಿಂದ ಪ್ರತ್ಯೇಕಿಸಿವೆ. ಗಾಜಾ ಅಂತೂ ನಿರಂತರವಾಗಿ ಆಕ್ರಮಣಕ್ಕೆ ಒಳಗಾಗಿದ್ದು ಅಲ್ಲಿನ ಜನರು  ವಿದ್ಯುಚ್ಛಕ್ತಿಯಿಂದಲೂ ವಂಚಿತರಾಗಿದ್ದಾರೆ. 1967ರ ಯುದ್ಧದ ನಂತರ, ಕಳೆದ 50 ವರ್ಷಗಳಿಂದಲೂ ಇಸ್ರೇಲ್ ಕ್ರೂರವಾಗಿ ವಸಾಹತುಶಾಹಿ ಆಕ್ರಮಣ ಮಾಡಿರುವುದೇ ಕಟು ವಾಸ್ತವ.

ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡಲು ಉಭಯ ಕಡೆಯವರು ಪಣ ತೊಟ್ಟಿ ದ್ದಾರೆ. ಇಸ್ರೇಲ್ ಪ್ರಕಾರವಂತೂ ಅತಿಕ್ರಮಣದ ವಿರುದ್ಧ ಹೋರಾಡುತ್ತಿರುವ ಪ್ಯಾಲೆಸ್ತೀನಿ ಸಂಘಟನೆಗಳು ಹಾಗೂ ಲೆಬನಾನ್‍ನಲ್ಲಿ ಹೆಜ್ಬೊಲ್ಲಾ ಇವರೇ  ಭಯೋತ್ಪಾದಕರು. ಪಶ್ಚಿಮ ಏಷ್ಯಾದಲ್ಲಿ ಭಯೋತ್ಪಾದನೆಗೆ ಇರಾನ್ ಪ್ರಮುಖ ಮೂಲ ಎಂಬುದು ನೇತ್ಯಾನಾಹು ಅಂಬೋಣ. ಮೋದಿ ಪ್ರಕಾರ, ಲಷ್ಕರ್-ಎ-ತೊಯ್ಬಾ ಮತ್ತು ಪ್ರಭುತ್ವ ದಮನದ ವಿರುದ್ಧ ಪ್ರತಿಭಟಿಸುತ್ತಿರುವ ಕಾಶ್ಮೀರಿ ಯುವಜನರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮೋದಿ ಕಣ್ಣಲ್ಲಿ ಅವರಿಬ್ಬರೂ ಭಯೋತ್ಪಾದಕರೇ.

ಮೋದಿ ಭೇಟಿ ವೇಳೆ ಸಹಿ ಹಾಕಲಾದ ಏಳು ಒಪ್ಪಂದಗಳಲ್ಲಿ ಒಂದು ನೀರಿನ ನಿರ್ವಹಣೆಗೆ ಸಂಬಂಧಿಸಿದ್ದು. ನೀರಿನ ಕೊರತೆಯನ್ನು ನಿಭಾಯಿಸಲು ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು  ಅಲ್ಪ ಜಲಸಂಪನ್ಮೂಲವನ್ನು ವಿವೇಕಯುತವಾಗಿ ಬಳಸುವ ಇಸ್ರೇಲ್‍ನ ಸಾಮಥ್ರ್ಯದ ಬಗ್ಗೆ  ಬಹಳವಾಗಿ ಹೇಳಲಾಗುತ್ತದೆ. ಭಾರತದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಈ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಇದಕ್ಕಾಗಿ ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಜಾದ ಜಲಸಂಪನ್ಮೂಲಗಳನ್ನು ಕದಿಯಲಾಗು ತ್ತಿರುವುದನ್ನು ಮರೆಮಾಚಲಾಗುತ್ತಿದೆ. ಉದಾಹರಣೆಗೆ, ಮೌಂಟೇನ್ ಅಖಿಫರ್ ಅನ್ನು ಇಸ್ರೇಲ್ ನಿಯಂತ್ರಿಸುತ್ತದೆ. ಅದರ ಶೇಕಡಾ 80ರಷ್ಟು ಭಾಗ ಪಶ್ಚಿಮ ದಂಡೆಯ ಕೆಳಗಡೆ ಇದೆ. ಕೃಷಿ ಮತ್ತು ಕಾನೂನುಬಾಹಿರ ವಸತಿಗಳ ಬಳಕೆಗಾಗಿ ಇಸ್ರೇಲ್ ಈ ನೀರನ್ನು ಅತಿಯಾಗಿ ಬಳಸಿಕೊಳ್ಳುತ್ತಿದೆ. ಇಸ್ರೇಲ್‍ನ ತಲಾ ದೈನಿಕ ನೀರಿನ ಬಳಕೆಯು ಪ್ಯಾಲೇಸ್ತೀನಿಯ ರದ್ದಕ್ಕಿಂತ ಐದು ಪಟ್ಟು ಹೆಚ್ಚಿಗಿದೆ.

ಬಲಪಂಥೀಯ ಪಲ್ಲಟದ ಭಾಗ

ಇಸ್ರೇಲ್ ಜೊತೆಗಿನ ವ್ಯೂಹಾತ್ಮಕ ಮೈತ್ರಿಯು ಮೋದಿ ಸರಕಾರದಡಿಯಲ್ಲಿ ವಿದೇಶಾಂಗ ನೀತಿಯಲ್ಲಿ ಆಗಿರುವ ಬಲಪಂಥೀಯ ಪಲ್ಲಟದ ಭಾಗವಾಗಿದೆ.

ಅಲಿಪ್ತ, ಸ್ವತಂತ್ರ ವಿದೇಶಾಂಗ ನೀತಿಯನ್ನು ಕೈಬಿಡುವುದು, ಪ್ಯಾಲೆಸ್ತೀನಿ ಜನತೆಯ ಗುರಿಯ ಈಡೇರಿಕೆಗೆ ನಮ್ಮ ಬದ್ಧತೆಗೆ ಬೆನ್ನು ತೋರಿಸುವುದು ಮತ್ತು ಅಮೆರಿಕ-ಇಸ್ರೇಲ್-ಭಾರತ ಕೂಟ ನಿರ್ಮಿಸಬೇಕೆಂಬ  ಹಿಂದೂತ್ವ  ಗುರಿಯ ಅನುಸರಣೆ, ಇವೆಲ್ಲವೂ ಭಾರತದ ಒಳಗಡೆ ಶಕ್ತಿಗಳ ಬಲಾಬಲಗಳಲ್ಲಿ ಆಗಿರುವ ಬದಲಾವಣೆ ಮತ್ತು ಬಲಪಂಥೀಯ ಪಲ್ಲಟದ  ಪ್ರತಿಬಿಂಬವಾಗಿದೆ.

ಸಾಮ್ರಾಜ್ಯಶಾಹಿ-ಪರ ಮತ್ತು ಪ್ರತಿಗಾಮಿ ವಿದೇಶಾಂಗ ನೀತಿಯ ಬದಲಾವಣೆಗಾಗಿ ನಡೆಯುವ ಹೋರಾಟವು ಭಾರತದಲ್ಲಿ ಆಡಳಿತದಲ್ಲಿರುವ ಹಿಂದೂತ್ವವಾದಿ ಶಕ್ತಿಗಳ ವಿರುದ್ಧದ ಹೋರಾಟದ ಭಾಗವಾಗಿ ಇರಬೇಕು. ಈ ಶಕ್ತಿಗಳು ಸಾಮ್ರಾಜ್ಯಶಾಹಿ-ಪರವಾಗಿರುವಂತವೂ ಆಗಿವೆ, ಮತ್ತು ಇತರೆಲ್ಲರನ್ನೂ ಹೊರಗಿಡುವ ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವಂತವೂ ಆಗಿವೆ. ಇದು ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ಸಾರ್ವಭೌಮತೆಗೆ ಕೇಡು ಉಂಟು ಮಾಡುವಂತದ್ದು.

 

 

                        ಅನು: ವಿಶ್ವ