ಪಶ್ಚಿಮ ಬಂಗಾಲದಲ್ಲಿ ಕೋಮು ಧ್ರುವೀಕರಣದ ರಾಜಕೀಯದಲ್ಲಿ ಹತ್ತಿ ಉರಿದ ಬದುರಿಯ

ಸಂಪುಟ: 
11
ಸಂಚಿಕೆ: 
29
Sunday, 9 July 2017

ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ಬದುರಿಯದಲ್ಲಿ ಜುಲೈ 4ರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ರ್ಯಾಪಿಡ್ ಆಕ್ಷನ್ ಪೋರ್ಸ್ ಮತ್ತು ಬಿಎಸ್‍ಎಫ್‍ನ 400 ಸಿಬ್ಬಂದಿ ಈಗ ಅಲ್ಲಿ ಪರಿಸ್ತಿತಿಯನ್ನು ಹತೊಟಿಯಲ್ಲಿಡಲು ಹೆಣಗುತ್ತಿದ್ದಾರೆ ಎಂದು ವರದಿಯಾಗಿದೆ.

ಈ ನಡುವೆ ಪರಿಸ್ತಿತಿಯನ್ನು ಶಮನಗೊಳಿಸುವ  ಪ್ರಶ್ನೆಯ ಬದಲು ರಾಜ್ಯದಲ್ಲಿ ಆಳುವ ಟಿಎಂಸಿ ಮತ್ತು ಕೇಂದ್ರದಲ್ಲಿ ಆಳುವ ಬಿಜೆಪಿ ನಡುವೆ ಕೆಸರೆರಚಾಟ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರದಿಂz ನೇಮಕಗೊಂಡ ರಾಜ್ಯಪಾಲರ ನಡುವೆ ಮಾತಿನ ಬಾಣಗಳು ಓಡಾಡುತ್ತಿವೆಯಷ್ಟೆ.

ಜುಲೈ 4ರಂದು  ಫೇಸ್‍ಬುಕ್‍ನಲ್ಲಿ ಮುಸ್ಲಿಂ ಪವಿತ್ರ ಕ್ಷೇತ್ರವೊಂದರ ಬಗ್ಗೆ ಕೆಟ್ಟ ಟಿಪ್ಪಣಿಯ ನಂತರ ಇಂತಹ ಪರಿಸ್ಥಿತಿ ಉಂಟಾಗಿದೆ. ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ಫೇಸ್‍ಬುಕ್‍ನಲ್ಲಿ ಈ ಟಿಪ್ಪಣಿ ಹರಿದಾಡಿದ ನಂತರ ಪೋಲಿಸರು ಆತನನ್ನು ಬಂಧಿಸಿದರು. ಆದರೆ ಅದರೊಂದಿಗೆ ಪರಿಸ್ತಿತಿ ಹತೋಟಿಗೆ ಬರುವ ಬದಲು ಅದು ಉದ್ವಿಗ್ನಗೊಂಡಿದೆ.

ಬಾಂಗ್ಲಾದೇಶ ಗಡಿಯ ಸಮೀಪವಿರುವ ಈ ಪ್ರದೇಶ ಹಿಂದುಗಳು ಮತ್ತು ಮುಸ್ಲಿಮರು ಪರಸ್ಪರ ಸೌಹಾರ್ದದಿಂದ ಬದುಕುತ್ತಿದ್ದ ಪ್ರದೇಶ. ಆದರೆ 2011ರ ವಿಧಾನಸಭಾ ಚಉನಾವಣೆಗಳ ನಂತರದಿಂದ ಇಲ್ಲಿ ಕೋಮು ಧ್ರುವೀಕರಣದ  ಪ್ರಕ್ರಿಯೆ ಆರಂಬವಾಯಿತು. ಅದರ ದುಷ್ಪಲವೇ ಈ ಘಟನೆ ಎನ್ನಲಾಗಿದೆ.

ಆ ವಿದ್ಯಾರ್ಥಿ ಅಂತಹ ಟಿಪ್ಪಣಿ ಹಾಕಲು ಸಾಧ್ಯವಿಲ್ಲೆಂಬುದು ಆತನ ಕುಟುಂಬದ ಮುಸ್ಲಿಂ ನೆರೆ-ಕರೆಯವರ ಖಡಾಖಂಡಿತ ಆಭಿಪ್ರಾಯ. ಆತನೂ ಪೋಲೀಸರಿಗೆ ಹಾಗೆಯೇ ಹೇಳಿದ್ದಾನಂತೆ. ಇನ್ನೊಂದೆಡೆಯಲ್ಲಿ ಬಿಜೆಪಿ ಮಂದಿ ಈ ಗಲಭೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು ಆ ಫೇಸ್‍ಬುಕ್ ಟಿಪ್ಪಣಿಯ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುದನ್ನು ಹಲವರು ಗಮನಿಸಿದ್ದಾರೆ. ಅಲ್ಲದೆ ಕೇಸರಿಪಡೆಗಳ ಫೇಸ್‍ಬುಕ್ ಟಿಪ್ಪಣಿಗಳಲ್ಲಿ ಇಲ್ಲಿನ ಉದ್ವಿಗ್ನ ಪರಿಸ್ತಿತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆಯಂತೆ.

“ಎಲ್ಲಿದೆ ಆಡಳಿತ, ರಾಜ್ಯ ಸರಕಾರ ಇಲ್ಲಿಯ ಜನತೆಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ” ಎಂದು ಸಿಪಿಐ(ಎಂ)ನ ಹಿರಿಯ ಮುಖಂಡ ಹಾಗೂ ಸಂಸದ್ ಸದಸ್ಯ ಮಹಮ್ಮದ್ ಸಲೀಂ ಹೇಳಿದ್ದಾರೆ. ಮುಖ್ಯಮಂತ್ರಿ-ರಾಜ್ಯಪಾಲರ ನಡುವಿನ ಜಟಾಪಟಿಯನ್ನು ಟೀಕಿಸುತ್ತ  ‘ಇದೇನು ವೈಯಕ್ತಿಕ ವಿಷಯವೇ?’ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳು ಕೋಮುವಾದಿ ರಾಜಕೀಯಕ್ಕೆ ನೆರವಾಗುತ್ತಿದ್ದಾರೆ, ತಕ್ಷಣ ಸರ್ವಪಕ್ಷ ಸಭೆಯನ್ನು ಕರೆಯಲಿ ಎಂದು ಆಗ್ರಹಿಸಿದ್ದಾರೆ.

ಇನ್ನೊಂದೆಡಯಲ್ಲಿ ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಆಗ್ರಹಿಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸುತ್ತ ಎಡರಂಗದ ಅಧ್ಯಕ್ಷ ಬಿಮನ್ ಬಸು ಈಗ ಆಗಬೇಕಾದ್ದು ತಕ್ಷಣ ಈ ಪ್ರದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸುವ ಕೆಲಸ, ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಆಗ್ರಹ ಬಿಜೆಪಿಯ ರಾಜಕೀಯ ಆಟವನ್ನು ತೋರಿಸುತ್ತದೆ ಎಂದಿದ್ದಾರೆ.

ಈ ನಡುವೆ ಜುಲೈ 7ರಂದು ರಾಜ್ಯದಾದ್ಯಂತ ಜನರು ಎಡರಂಗದ ಕರೆಯಂತೆ ಶಾಂತಿ ಮತ್ತು ಕೋಮುಸೌಹಾರ್ದಕ್ಕೆ ಬೀದಿಗಿಳಿದು ಮೆರವಣಿಗೆ ನಡೆಸುತ್ತಿದ್ದಾರೆ. ರಾಜಧಾನಿ ಕೊಲ್ಕತಾದ ಬೀದಿಗಳಿಂದ ಹಿಡಿದು ಜಂಗಲ್‍ಮಹಲ್‍ನ ಒಳನಾಡಿನ ವರೆಗೆ, ಬದ್ರ್ವಾನ್ ಪಟ್ಟಣದಿಂದ ಹಿಡಿದು ಸಿಮ್ರಪಾಲ್‍ನ ಹಳ್ಳಿಗಳ ವರೆಗೆ ಎಲ್ಲೆಲ್ಲೂ ಕೆಂಬಾವುಟಗಳನ್ನು ಹಿಡಿದು ಸಾಗಿರುವ ಮೆರವಣಿಗೆಗಳಲ್ಲಿ ರಾಜ್ಯ ದೀರ್ಘಕಾಲದ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಉಳಿಸಿಕೊಳ್ಳಬೇಕೆಂಬ ಸಂದೇಶವನ್ನು ಸಾರು ತ್ತಿದ್ದಾರೆ.