ಸೇಲಂನಿಂದ ಚೆನ್ನೈವರೆಗೆ ಜಾತಿಭಂಡತನ ವಿರೋಧಿಸಿ 400 ಕಿ.ಮೀ. ಪಾದಯಾತ್ರೆ

ಸಂಪುಟ: 
11
ಸಂಚಿಕೆ: 
29
Sunday, 9 July 2017

ತಮಿಳುನಾಡಿನಲ್ಲಿ ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ವಿಶಿಷ್ಟ ಪಾದಯಾತ್ರೆ ನಡೆಯಿತು. ಅದು ‘ವiರ್ಯದಾ ಹತ್ಯೆ’ ಎಂದು ಹೇಳುವ, ವಾಸ್ತವವಾಗಿ ಜಾತಿ ಭಂಡತನದ ವಿರುದ್ಧ ಜನರ ಗಮನ ಸೆಳೆಯಲು ಮತ್ತು ಇದನ್ನು ಪರಿಣಾಮಕಾರಿಯಾಗಿ ತಡೆಯಲು ಸರಕಾರವನ್ನು ಬದ್ಧಗೊಳಿಸುವ ಒಂದು ಕಾನೂನು ತರಬೇಕೆಂದು ಆಗ್ರಹಿಸಿ ಈ ಪಾದಯಾತ್ರೆಯನ್ನು ತಮಿಳುನಾಡು ಅಸ್ಪೃಶ್ಯತಾ ನಿರ್ಮೂಲನಾ ರಂಗ(ಟಿಎನ್‍ಯುಇಎಫ್) ಸಂಘಟಿಸಿತ್ತು.  ರಂಗದ ಪ್ರಧಾನ ಕಾರ್ಯದರ್ಶಿ ಸ್ಯಾಮುವೆಲ್ ರಾಜ್ ಇದರ ನೇತೃತ್ವ ವಹಿಸಿದ್ದರು.

ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಇಂತಹ ಸುಮಾರು 200 ಹತ್ಯೆಗಳು ನಡೆದಿವೆ. ಸಾಮಾನ್ಯವಾಗಿ ಇವು ಅಂತರ್ಜಾತೀಯ ವಿವಾಹಗಳ ಸಂದರ್ಭದಲ್ಲಿ ‘ಜಾತಿ ಮರ್ಯಾದೆ’ ರಕ್ಷಿಸುವ ಹೆಸರಲ್ಲಿ ನಡೆಸಿರುವ ಹತ್ಯೆಗಳು.ಜ್ಬಲಿಯಾದವರಲ್ಲಿ ದಲಿತರು ಮತ್ತು ಮಹಿಳೆಯರ ಸಂಖ್ಯೆಯೇ ಹೆಚ್ಚು. ಸಾಮಾನ್ಯವಾಗಿ ಹುಡುಗ ಅಥವ ಹುಡುಗಿಯ ಸಂಬಂಧಿಕರೇ ಈ ಹತ್ಯೆಗಳನ್ನು ನಡೆಸಿರುತ್ತಾರೆ. ಆದರೆ ಇತ್ತೀಚೆಗೆ ಒಂದು ಪ್ರಕರಣದಲ್ಲಿ  ಜಾತಿ ಸಂಘಟನೆಯವರು ಗೋಕುಲ್‍ರಾಜ್ ಎಂಬವನನ್ನು ಅಪಹರಿಸಿ ‘ಜಾತಿ ಮರ್ಯಾದೆ ಉಳಿಸಲು’ ಅವನನ್ನು ಸಾಯಿಸಿದ್ದಾರೆ.

ಪ್ರಭುತ್ವ ಯಂತ್ರ, ಅದರಲ್ಲೂ ಪೋಲೀಸರು ಸಾಮಾನ್ಯವಾಗಿ ಇಲ್ಲಿ ಕೊಲೆಗಡುಕರ  ಪಕ್ಷಪಾತಿಗಳೇ ಆಗಿರುತ್ತಾರೆ, ವಿಭಿನ್ನ ಜಾತಿಗಳ ದಂಪತಿಗಳನ್ನು ಪ್ರತ್ಯೇಕಿಸುವ ವರೆಗೂ ಹೋಗಿದ್ದಾರೆ. ಇವೆಲ್ಲದರ ವಿರುದ್ಧ ಜನಾಭಿಪ್ರಾಯ ಕ್ರೋಡೀಕರಿಸುವಲ್ಲಿ  ಮತ್ತು ಸರಕಾರದ ಗಮನವನ್ನೂ ಸೆಳೆಯುವಲ್ಲಿ ಈ 13 ದಿನಗಳ ಪಾದಯಾತ್ರೆ ಯಶಸ್ವಿಯಾಗಿದೆ.

ಜೂನ್ 9ರಂದು ಸೇಲಂನಲ್ಲಿ ಈ ಪಾದಯಾತ್ರೆಯನ್ನು ಟಿಎನ್‍ಯುಇಎಫ್ ಅಧ್ಯಕ್ಷ ಪಿ.ಸಂಪತ್ ಅವರು ಉದ್ಘಾಟಿಸಿದರು. ವಿಸಿಕೆಯ ಸಂಸ್ಥಾಪಕ ಮುಖಂಡ ತಿರುಮಾವಳಗನ್ ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದರು. ಮೊದಲ ದಿನ ‘ಮರ್ಯಾದಾ ಹತ್ಯೆ’ಗೆ ತುತ್ತಾದ ಐದು ಮಂದಿಯ ಸಂಬಂಧಿಗಳು, ಮಾರಿಮುತ್ತು  ಹೆಂಡತಿ ಅಭಿರಾಮಿ, ನಂದಿನಿಯ ತಾಯಿ, ಐಶ್ವರ್ಯಳ ತಂದೆ, ಗೋಕುಲ್‍ರಾಜ್ ತಾಯಿ, ವಿಮಲಾದೇವಿಯ ಪತಿ  ಭಾಗವಹಿಸಿದ್ದು ಇನ್ನೊಂದು ವಿಶೇಷವಾಗಿತ್ತು. ಮುಂದೆ ಸೇಲಂನಲ್ಲಿ ಕಲೈ ಸೆಲ್ವಿಯ ಸೋದರಿ ಭಾಗವಹಿಸಿದರು, ತಿಂಡಿವಾಣಂನಲ್ಲಿ ಶಂಕರ್ ಹೆಂಡತಿ ಕೌಸಲ್ಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು ಚೆನ್ನೈನಲ್ಲಿ ಕಲ್ಪನಾಳ ಪತಿ ಭಾಗವಹಿಸಿದರು.

ಪಾದಯಾತ್ರೆ ಸೇಲಂ, ವಿಲ್ಲುಪುರಂ, ಕಾಂಚೀಪುರಂ ಜಿಲ್ಲೆಗಳಲ್ಲಿ ಸಂಚರಿಸಿ ಜೂನ್ 22ರಂದು ಚೆನ್ನೈ ತಲುಪಿತು. ಅದು ಚೆನ್ನೈ ಪ್ರವೇಶಿಸಲು ಪೋಲಿಸರು ಅಡ್ಡಿಪಡಿಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಇದನ್ನು ಪ್ರತಿಭಟಿಸಿದಾಗ ನೂರಾರು ಮಂದಿಯನ್ನು ಬಂಧಿಸಲಾಯಿತು.

ಪ್ರತಿದಿನ 25 ಕಿ.ಮೀ. ಕ್ರಮಿಸಿದ ಪಾದಯಾತ್ರೆ ದಿನದ ಕೊನೆಯಲ್ಲಿ ಸಾರ್ವಜನಿಕ ಸಭೆಯನ್ನು ಸಂಘಟಿಸಲಾಗಿತ್ತು. ಜೂನ್ 21ರಂದು ಚೆನ್ನೈನಲ್ಲಿ ಹಿರಿಯ ಕಮ್ಯುನಿಸ್ಟ್ ಮುಖಂಡ ಎನ್.ಶಂಕರಯ್ಯ ಮತ್ತು ನಿವೃತ್ತ ನ್ಯಾಯಮೂರ್ತಿ ಹರಿಪ್ರಥಮನ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ತಮಿಳುನಾಡಿನಲ್ಲಿ ಜಾತಿ ಅತ್ಯಾಚಾರಗಳ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳು, ವಿಸಿಕೆ, ಬಿಎಸ್‍ಪಿ, ಆಧಿ ತಮಿಳರ್ ಕಚ್ಚಿ, ಆದಿ ತಮಿಳರ್ ಪೆರವಯಿ ಮುಂತಾದ ಐದಾರು ಸಂಘಟನೆಗಳು ಈ ಪಾದಯಾತ್ರೆಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಇನ್ನೊಂದು ಮುಖ್ಯ ಅಂಶವಾಗಿತ್ತು.

ವಿದ್ಯಾರ್ಥಿ, ಯುವಜನರು, ಮಹಿಳೆಯರ ಸಾಮೂಹಿಕ ಸಂಘಟನೆಗಳು ಮಾತ್ರವಲ್ಲ, ವಿಮಾನೌಕರರ ಸಂಘಟನೆ ಮತ್ತಿತರ ಸಂಘಟನೆಗಳೂ ಸಕ್ರಿಯ ಬೆಂಬಲ ನೀಡಿದವು.

ಜನಸಾಮಾನ್ಯರ ನಡುವೆ ಜಾತಿನಿರ್ಮೂಲನಕ್ಕೆ ಬೆಂಬಲ ಹೆಚ್ಚಿದ್ದು ಈ ಪಾದಯಾತ್ರೆಯ ಅನುಭವಗಳಲ್ಲಿ ಒಂದು ಎಂದು ಸ್ಯಾಮುವೆಲ್ ರಾಜ್ ಹೇಳುತ್ತಾರೆ. ಹಣಸಂಗ್ರಹದಲ್ಲಿ ನೆರವು ಮತ್ತು ಇತರ ರೀತಿಗಳಲ್ಲಿ ಜನ ಸಹಾಯ ಮಾಡಿದರು. ಬಹಳಷ್ಟು ಮಂದಿ ಜಾತಿಯನ್ನು ಒಂದು ಅಡ್ಡಿಯಾಗಿ ಕಾಣುತ್ತಾರೆ. ಆದರೆ ಜಾತಿಯ ವಿರುದ್ಧ ಹೋರಾಡಬೇಕಾದರೆ ಒಂದು ನಿರಂತರ ಸ್ವರೂಪದ ಬೃಹತ್ ಜನತಾ ಆಂದೋಲನದ ಅಗತ್ಯವಿದೆ, ಆಗ ಮಾತ್ರವೇ ಜನಗಳ ಮನೋಭಾವದಲ್ಲಿ ಬದಲಾವಣೆÉ ಬರಲು ಸಾಧ್ಯ ಎಂದು ಅವರು ಹೇಳುತ್ತಾರೆ.

ಜೂನ್ 29ರಂದು ಟಿಎನ್‍ಯುಇಎಫ್ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 14 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದೆ.