ಪೇಜಾವರ ಇಫ್ತರ್ ಪಾರ್ಟಿ ``ಹನುಮನ ನೆಗೆತ''ವೇ?

ಸಂಪುಟ: 
11
ಸಂಚಿಕೆ: 
29
Sunday, 9 July 2017

ಪೇಜಾವರ ಸ್ವಾಮೀಜಿ ಮುಸ್ಲಿಮರನ್ನು ಆಹ್ವಾನಿಸಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ಮತ್ತು ಆ ಸಂದರ್ಭದಲ್ಲಿ ಮಠದೊಳಗೆ ನಮಾಜ್ ಮಾಡಲು ಅವಕಾಶ ನೀಡಿದ್ದು, ವಿವಿಧ ರೀತಿಯ ಪ್ರತಿಕ್ರಿಯೆಗಳಿಗೆ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರತಿಕ್ರಿಯೆಗಳನ್ನು ಸ್ಥೂಲವಾಗಿ ಮೂರು  ವಿಧಗಳಾಗಿ ವಿಂಗಡಿಸಬಹುದು. ``ಹಿಂದುತ್ವ'' ಬಣದ ವ್ಯಕ್ತಿಗಳು, ಸಂಘಟನೆಗಳು, ಬೆಂಬಲಿಗರು ಪೇಜಾವರ ಸ್ವಾಮೀಜಿಯವರನ್ನು ಖಂಡಿಸಿದ್ದಾರೆ. ಪ್ರತಿಭಟಿಸಿದ್ದಾರೆ. ಇದು ಒಂದು ``ವಿರೋಧ''ದ ಪ್ರತಿಕ್ರಿಯೆ. ಪೇಜಾವರ ಸ್ವಾಮೀಜಿ ಅವರ ಹೊಸ ನಡೆಯನ್ನು ಸ್ವಾಗತಿಸುತ್ತಲೇ ಮತ್ತು ಹಿಂದುತ್ವ ವಿರೋಧವನ್ನು ಖಂಡಿಸುತ್ತಲೇ, ಅವರ ಇತರ ಹಿಂದಿನ ಮತ್ತು ಇತ್ತೀಚಿನ ನಡೆಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಾ ಈ ನಡೆ ನೈಜವೇ. ಇದು ಹೊಸ ರಾಜಕೀಯ ಕಪಟ ನಾಟಕವೇ ಎಂದು ಕೆಲವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಒಂದು ಎಚ್ಚರಿಕೆಯ ``ಅನುಮಾನ''ದ ಪ್ರತಿಕ್ರಿಯೆ. ಈ ಎರಡು ನಿಲುವುಗಳಲ್ಲಿ ಆಶ್ಚರ್ಯಕರವಾದದ್ದು ಏನೂ ಇಲ್ಲ.

ಬಹುಶಃ ಗಮನಾರ್ಹ ಹೊಸ ಬೆಳವಣಿಗೆ ಎಂದರೆ ಇದೊಂದು ಮಹತ್ವದ ಹೊಸ ಸಕಾರಾತ್ಮಕ ಬೆಳವಣಿಗೆಯೆಂದು ಗ್ರಹಿಸಿದ ಪೇಜಾವರ ಸ್ವಾಮೀಜಿ ಅವರ ಹೊಸ ನಡೆಗೆ ``ಅಸಂದಿಗ್ಧ ಸ್ವಾಗತ'' ನೀಡಿದ ಮೂರನೇ ಬಗೆಯ ಪ್ರತಿಕ್ರಿಯೆ. ಇದರ ಕೆಲವು ಸ್ಯಾಂಪಲುಗಳು.  ಒಬ್ಬರು ``ಉಡುಪಿಯ ಕೋಮು ಸೌಹಾರ್ದವನ್ನು ಇಫ್ತಾರ್ ಕೂಟದ ಮೂಲಕ ನೆನಪಿಸಿ ಪೇಜಾವರ ಸ್ವಾಮೀಜಿ ದೇವರು ಮೆಚ್ಚುವ ಮಾನವ ಪ್ರೀತಿಯ ಕೆಲಸ ಮಾಡಿದ್ದಾರೆ.'' ಮತ್ತು ``ಆ ಊರಿನ ನಿಜವಾದ ಚರಿತ್ರೆಯನ್ನು ಜ್ಞಾಪಿಸಿ ಕೊಟ್ಟಿದ್ದಾರೆ'' ಎಂದಿದ್ದಾರೆ. ಇನ್ನೊಬ್ಬರು ಇದು ``ನಿಜಕ್ಕೂ ಒಂದು ದೊಡ್ಡ ಹೆಜ್ಜೆ. ಇದರಿಂದಾಗಿ ತಾನು ಎದುರಿಸಬೇಕಾದ ವಿರೋಧಗಳ ಎಲ್ಲ ಅರಿವಿದ್ದೂ ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡ ಅವರ ರೀತಿ ನಾಡಿಗೇ ಒಂದು ಮಾದರಿ? ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಲಾಗಾಯ್ತಿನಿಂದ ಇದ್ದ ನಂಟಿನ ಪರಂಪರೆಯನ್ನು ನೆನಪಿಸಿಕೊಂಡಿದ್ದಾರೆ? ಸಾಮಾಜಿಕ ಸ್ನೇಹ ಸೌಹಾರ್ದದ ಬಾಳುವೆಗಾಗಿ ನಡೆದ  ಈ ಹೊಸ ಪರಿಯ ಪೀಠಿಕೆ ಕಂಡು ಅದನ್ನು ಹಂಬಲಿಸುವ ಎಲ್ಲರ ಮನ ತುಂಬಿದೆ. ಕಣ್ಣು ಕಂಬನಿಗೂಡಿದೆ.'' ಎಂದಿದ್ದಾರೆ. ಮಗದೊಬ್ಬರು ``ಪೇಜಾವರ ಶ್ರೀಗಳು ಕರಾವಳಿ ಪ್ರದೇಶದ ಸಾಮಾಜಿಕ ಸಹಜೀವನದ ನೆನಪುಗಳನ್ನು ಇಟ್ಟುಕೊಂಡವರು. ಅವರ ವ್ಯಕ್ತಿತ್ವದಲ್ಲಿರುವ ಮಾನವೀಯ ಕಳಕಳಿ ಈ ಬಗೆಯ ಸೌಹಾರ್ದ ಕೂಟವನ್ನು ಏರ್ಪಡಿಸುವಂತೆ ಪ್ರಚೋದಿಸಿದೆ'' ಎಂದಿದ್ದಾರೆ. ಮತ್ತೊಬ್ಬರಂತೂ ``ಮಠದ ಸಂಪ್ರದಾಯ, ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಹೊಣೆಗಾರಿಕೆ ಹೊತ್ತ'' ``ಕರ್ಮಠ ಪರಂಪರೆಯಲ್ಲೇ ಬಂದ ಪೇಜಾವರರ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ!'' ಎಂದು ಹರ್ಷೋದ್ಗಾರ ಮಾಡಿದ್ದಾರೆ.

ಇವರುಗಳು ತಮ್ಮ ಅನಿಸಿಕೆಗಳನ್ನು ``ಅಸಂದಿಗ್ಧ ಸ್ವಾಗತ''ಕ್ಕೆ ನಿಲ್ಲಿಸದೆ, ಎಚ್ಚರಿಕೆಯ ``ಅನುಮಾನ''ದ ಪ್ರತಿಕ್ರಿಯೆ ನೀಡಿದವರನ್ನು ``ಈ ಸೌಹಾರ್ದ ಕೂಟ ಒಂದು ಪ್ರಜಾತಾಂತ್ರಿಕ ಸಂಕೇತ. ಈ ಸಂಕೇತವನ್ನು ಗೌರವಿಸಿ ಅದರ ಕಳಕಳಿಗೆ ಮಣಿಯಬೇಕೇ ಹೊರತು ಕ್ಷುಲ್ಲಕರಂತೆ ವರ್ತಿಸಬಾರದು'', ``ಪೇಜಾವರರ ನಡೆಯನ್ನು ಟೀಕಿಸುವುದು, ಲೇವಡಿ ಮಾಡುವುದು ಸುಲಭ. ಆದರೆ ಅವರ ನಡೆ ಸಮಾಜದ ಕಣ್ಣನ್ನು ಕಿಂಚಿತ್ತಾದರೂ ತೆರೆಸುವಂಥದ್ದು. ಅದನ್ನು ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ'', ಎಂಬಿತ್ಯಾದಿಯಾಗಿ ಟೀಕಿಸಿದ್ದಾರೆ.

ಕೋಮು ದಳ್ಳುರಿಯಲ್ಲಿ ಸೌಹಾರ್ದತೆ ಸಹಬಾಳ್ವೆ ಸುಟ್ಟು ಕರಕಲಾಗುತ್ತಿರುವ, ಭಾರತ, ಕರ್ನಾಟಕ ಮತ್ತು ಕರಾವಳಿಯಲ್ಲಿ ಕವಿದಿರುವ ಕರಾಳ ಕತ್ತಲಲ್ಲಿ ಈ ಬಗ್ಗೆ ಆತಂಕ ಕಾಳಜಿ ಹೊಂದಿರುವ ಬಹುಸಂಖ್ಯಾತರಿಗೆ ಪೇಜಾವರರ ಇಫ್ತರ್ ಕೂಟ ಆಶಾಕಿರಣದಂತೆ ಕಂಡಿದ್ದರೆ ಆಶ್ಚರ್ಯವೇನಿಲ್ಲ. ಪೇಜಾವರರ ಇಫ್ತರ್ ಕೂಟವನ್ನು ಕೋಮುವಾದಿ ಧೋರಣೆಯಿಂದ ವಿರೋಧಿಸುವ ಭಜರಂಗ ದಳ, ಶ್ರೀರಾಮಸೇನೆಯ ಪ್ರತಿಭಟನೆಗಳಿಗೆ, ವ್ಯಾಪಕ ಬೆಂಬಲ ಸಿಗದಿರುವುದು, ಮಾತ್ರವಲ್ಲ ವಿರೋಧ ಖಂಡನೆ ವ್ಯಕ್ತವಾಗಿರುವುದು ಸಮಾಧಾನದ ವಿಷಯ. ಸಕಾರಾತ್ಮಕ ಬೆಳವಣಿಗೆ. ಅದರಲ್ಲೂ ಸಾಮಾನ್ಯವಾಗಿ ತಟಸ್ಥರಾಗಿರುವ ಮೌನವಾಗಿರುವ ಹಲವು ಪ್ರಜ್ಞಾವಂತರು ಇಫ್ತರ್ ಕೂಟ ಬೆಂಬಲಿಸಿ ಭಜರಂಗ ದಳ, ಶ್ರೀರಾಮಸೇನೆಯ ವಿರೋಧ ಖಂಡಿಸಿರುವುದು ಗಮನಾರ್ಹವೇ. ಆದರೆ ಇವರುಗಳು ಗ್ರಹಿಸಿದಂತೆ ಪೇಜಾವರ ಇಫ್ತರ್ ಪಾರ್ಟಿ ``ಹನುಮನ ನೆಗೆತ''ವೇ? ನೆಗೆತ ಬಿಡಿ, ನೈಜವಾದದ್ದೇ? ಅದು ಬಿಡಿ ಭಜರಂಗ ದಳ, ಶ್ರೀರಾಮಸೇನೆಯ ``ವಿರೋಧ'' ನೈಜವೇ ಎಂದೂ ಪರಿಶೀಲಿಸಬೇಕಾಗಿದೆ.

ಇದಕ್ಕಾಗಿ ಪೇಜಾವರ ಸ್ವಾಮಿಜಿ ಅವರ ಹಿಂದಿನ ಮತ್ತು ಇತ್ತೀಚಿನ ನಡೆಗಳನ್ನು ಗಮನಿಸೋಣ. ಈಗಲೂ ಅವರು ಸಂಘ ಪರಿವಾರದ ಭಾಗವಾಗಿರುವ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು. ಅವರು ಬಾಬ್ರಿ ಮಸೀದಿ ಉರುಳಿಸುವ ಚಳುವಳಿಯ ಪ್ರಮುಖ ನೇತಾರರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಬಾಬ್ರಿ ಮಸೀದಿ ಧ್ವಂಸ ಮತ್ತು ನಂತರದ ಸತತ ಸಂಘಟಿತ ಮುಸ್ಲಿಂ-ದ್ವೇಷದ ಅಭಿಯಾನದ ಫಲವೇ ಇಂದಿನ ಕರಾಳ ಸ್ಥಿ ತಿ. ಈಗ ``ಬಾಬ್ರಿ ಮಸೀದಿ ಧ್ವಂಸಗೊಳಿಸದಂತೆ ತಡೆಯಲು ಶಕ್ತಿಮೀರಿ ಪ್ರಯತ್ನಿಸಿದೆ'' ಎಂಬ ಅವರ ಹೇಳಿಕೆಗೆ ಪುಷ್ಟಿ  ಕೊಡುವ ಯಾವುದೇ ಪುರಾವೆ ಇಲ್ಲ. ಅವರ ಹೇಳಿಕೆ  ನಿಜವಲ್ಲ ಎಂದು ಸಿದ್ಧ ಪಡಿಸಲು ಬೇಕಾದಷ್ಟು ಪುರಾವೆಗಳಿವೆ. ಮಾತ್ರವಲ್ಲ, ಅವರ ಹೇಳಿಕೆ ಒಪ್ಪಿಕೊಳ್ಳುವ ಭೋಳೆತನ ತೋರಿಸಿದರೂ ಈಗಲೂ ``ರಾಮಮಂದಿರ ಅಲ್ಲೇ ಕಟ್ಟುವುದು ನನ್ನ ಕನಸು'' ಎಂಬ ಅವರ ಹೇಳಿಕೆಯೇ ಬಾಬ್ರಿ ಮಸೀದಿ ಧ್ವಂಸಕ್ಕೆ ಸಮರ್ಥನೆ ಅಲ್ಲವೇ?

``ಸೌಹಾರ್ದತೆ ಮತ್ತು ಸಹಬಾಳ್ವೆ''ಗಳ ಬಗ್ಗೆ ಇತ್ತೀಚೆಗೆ ಸ್ವಾಮಿಜಿಗೆ ``ಜ್ಞಾನೋದಯ'' ಆಗಿದೆ ಎಂದು ಕೊಂಡರೂ, ಈಗಲೂ ಅವರು ಭಾಗವಾಗಿರುವ ಸಂಘ ಪರಿವಾರದ ನೇತೃತ್ವದಲ್ಲೇ ನಡೆಯುತ್ತಿರುವ ಕಲ್ಲಡ್ಕ ಕೋಮು ದಳ್ಳುರಿ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಇಫ್ತರ್ ಕೂಟದ ದಿನವೇ ದೆಹಲಿಯ ಬಳಿ ಸಂಘಟಿತ ಹಿಂಸಾಚಾರಕ್ಕೆ ಬಲಿಯಾದ ಜುನೈದ್ ಬಗ್ಗೆ ಏಕೆ ಈ ಗಡಚಿಕ್ಕುವ ಮೌನ? ಇಫ್ತರ್ ಕೂಟದ ಮುಂದುವರಿಕೆಯಾಗಿ ಕನಿಷ್ಟ ಈ ಹಿಂಸಾಚಾರ ನಿಲ್ಲಬೇಕು ಎಂದು ಕರೆ ಯಾಕೆ ಕೊಡುತ್ತಿಲ್ಲ? ಇದನ್ನು ಎಚ್ಚರಿಕೆಯ ಅನುಮಾನದಿಂದ ನೋಡುತ್ತಿರುವವರು ಮಾತ್ರ ಹೇಳುತ್ತಿಲ್ಲ.

``ನಮಗೆ ಮುಸ್ಲಿಮರು ವಿರೋಧಿಗಳಲ್ಲ. ಈ ಕೆಲಸವನ್ನು ಶ್ರೀಗಳು ಐವತ್ತು ವರ್ಷಗಳ ಹಿಂದೆಯೇ ಮಾಡಿದ್ದರೆ ಈಗ ಹಿಂದು ಮುಸ್ಲಿಮರ ನಡುವೆ ಇರುವ ದ್ವೇಷಕಾರುವ ಸ್ಥಿತಿ ಇರುತ್ತಿರಲಿಲ್ಲ. ನಮ್ಮ ಸುತ್ತ ಮುತ್ತ ಮುಸ್ಲಿಮರಿದ್ದಾರೆ. ನಾವೂ ಕೂಡ ಮುಸ್ಲಿಮರ ಜತೆ ಉತ್ತಮ ಭಾಂದವ್ಯ ಬಯಸುತ್ತೇವೆ. ನಮಗೂ ಇಫ್ತಾರ್ ಇಫ್ತಾರ್ ಕೂಟ ಮಾಡುವ ಆಸೆ ಇದೆ. ಆದರೆ, ಈಗ ಅಂತಹ ವಾತಾವರಣ ಇಲ್ಲ. ಪರಸ್ಪರ ಅಪನಂಬಿಕೆ, ದ್ವೇಷ ಇದೆ. ಇದಕ್ಕೆಲ್ಲ ಕಾರಣ ನಮಗೆ ಮಾರ್ಗದರ್ಶನ ಮಾಡಿದ ಶ್ರೀಗಳು. ಈಗ ಶ್ರೀಗಳು ಇಫ್ತಾರ್ ಕೂಟ ಮಾಡಿ ನಮ್ಮನ್ನು ದಾರಿ ತಪ್ಪಿಸಿದ್ದಾರೆ. ನಾವು ಅವರನ್ನು ನಂಬಿ ಮೋಸಹೋಗಿದ್ದೇವೆ." ಎನ್ನುತ್ತಾರೆ ಶ್ರೀ ರಾಮ ಸೇನೆಯ ಪ್ರಧಾನ ಕಾರ್ಯದರ್ಶಿ. ಮತ್ತು ಮಂಗಳೂರಿನ ಬಜರಂಗ ದಳದ ಸ್ಥಾಪಕ ಮುಖಂಡರಾದ ಪ್ರವೀಣ್ ವಾಲ್ಕೆ. ಇದರರ್ಥ ಪೇಜಾವರ ಸ್ವಾಮಿಜಿ ಕರೆ ಕೊಟ್ಟರೆ ಕರಾವಳಿಯಲ್ಲಿ ಸೌಹಾರ್ದ ನೆಲೆಸಬಹುದು ಎಂದಲ್ಲವೇ? ಇದಕ್ಕೆ ಅವರು ಯಾಕೆ ಮನಸ್ಸು ಮಾಡುತ್ತಿಲ್ಲ? ಇದಕ್ಕೆ ಉತ್ತರ ಹುಡುಕಲು ಇನ್ನೊಂದು ಬೆಳವಣಿಗೆಯನ್ನು ಗಮನಿಸಬೇಕು.

ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಸರಕಾರ ಬಂದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ತಯಾರಿ ಭರದಿಂದ ಸಾಗಿದೆ. ಮಂದಿರದ ವಿನ್ಯಾಸ ತಯಾರಾಗಿದೆ. ಕಟ್ಟಡ ಸಾಮಗ್ರಿಗಳು ಶೇಖರಣೆಯಾಗುತ್ತಿದೆ ಎಂಬ ವರದಿಗಳು ಬಂದಿವೆ. ಬಿಜೆಪಿ ಸಂಸದ ಮತ್ತು ಇನೊಬ್ಬ  ಕಠ್ಢರ್ `ಯತಿವರ್ಯ' ಸಾಕ್ಷಿ ಮಹಾರಾಜ್ ಸದ್ಯದಲ್ಲೇ ಉಡುಪಿಯಲ್ಲಿ ಸಭೆ ಸೇರಲಿರುವ ಧರ್ಮ ಸಂಸತ್ತಿನಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ನಿರ್ಣಯ ಕೈಗೊಳ್ಳುವುದು. ನವೆಂಬರ್ ನೊಳಗೆ ರಾಮಮಂದಿರ ಕಟ್ಟುವ ಕೆಲಸ ಆರಂಭವಾಗುವುದು ಎಂದು ಹೇಳಿದ್ದಾರೆ. ಪೇಜಾವರ ಸ್ವಾಮಿಜಿ ಸಂಘ ಪರಿವಾರ ಪ್ರಣೀತ ಧರ್ಮ ಸಂಸತ್ತಿನ ಸದಸ್ಯರು ಕೂಡಾ. ಇದರ ಬಗ್ಗೆ ಪೇಜಾವರ ಸ್ವಾಮಿಜಿಯನ್ನು ಕೇಳಿದಾಗ ಅದು ಸಾಕ್ಷಿ ಮಹಾರಾಜ್ ``ವೈಯಕ್ತಿಕ ಅಭಿಪ್ರಾಯ'' ಎಂದಿದ್ದಾರೆ. ಅದನ್ನು ನಿರಾಕರಿಸಿಲ್ಲ. ``ವೈಯಕ್ತಿಕ ಅಭಿಪ್ರಾಯ'' ಧರ್ಮ ಸಂಸತ್ತಿನ ನಿರ್ಣಯವಾಗುವುದು ಬಹಳ ಸುಲಭವೆಂದು ಎಲ್ಲರಿಗೂ ಗೊತ್ತು.

ಸುಪ್ರೀಂ ಕೋರ್ಟು ಅಯೋಧ್ಯೆಳ ವಿವಾದವನ್ನು ಮೀಡಿಯೇಶನ್ ಮೂಲಕ ಬಗೆಹರಿಸಲು ಸಲಹೆ ನೀಡಿದೆ. ಅದಕ್ಕೆ ಮುಸ್ಲಿಮರನ್ನು ಒಪ್ಪಿಸುವ, ``ಸೌಹಾರ್ದಯುತ ಸಹಬಾಳ್ವೆ''ಗಾಗಿ ಅವರೇ ``ಸ್ವ-ಇಚ್ಛೆ''ಯಿಂದ ಬಾಬರಿ ಮಸೀದಿ ಪ್ರದೇಶವನ್ನು ಬಿಟ್ಟು ಕೊಡಲು ``ಒತ್ತಡ'' ಹಾಕಲು ತಯಾರಿ ನಡೆದಿದೆ. ಅಗತ್ಯ ಬಿದ್ದರೆ ಪ್ರದೇಶವನ್ನು ``ವಶಪಡಿಸಿಕೊಳ್ಳಲೂ'' ಯೋಜನೆ ಹಾಕಲಾಗಿದೆ. ಇದಕ್ಕೆ ಮುಸ್ಲಿಮರನ್ನು ತಯಾರು ಗೊಳಿಸುವ ಜವಾಬ್ದಾರಿಯನ್ನು ಸಂಘ ಪರಿವಾರ ಪೇಜಾವರ ಸ್ವಾಮಿಜಿಗೆ ಕೊಟ್ಟಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳ ಆರಂಭವೇ  ಉಡುಪಿಯ ಇಫ್ತರ್ ಕೂಟ. ಉಡುಪಿ ಕೃಷ್ಣ ಮಠ ಕಟ್ಟಲು ಮುಸ್ಲಿಮರೇ ಭೂಮಿ ನೀಡಿದ್ದು (ಹಿಂದೆ ಯಾವಾಗಲೂ ಸಾರ್ವಜನಿಕವಾಗಿ ಹೇಳದಿದ್ದವರು) ಎಂದು ಅವರು ಪದೇ ಪದೇ ಹೇಳುತ್ತಿರುವುದು ಇದೇ ಹಿನ್ನೆಲೆಯಲ್ಲಿ. ಎಂಬುದು ಒಂದು ಥಿಯರಿ.

`ಉಡುಪಿ ಚಲೋ' ನಡೆದಾಗ ಮಠದ ರಕ್ಷಣೆಗೆ ನಿಂತರೆಂದು ಮುಸ್ಲಿಮರ ಒಂದು ಗುಂಪಿಗೆ ಮಠದಲ್ಲಿ ಇಫ್ತಾರ್ ಉಡುಗೊರೆ ನೀಡಲಾಗಿದೆ. ಆದ್ದರಿಂದಲೇ "ಇಫ್ತಾರ್ ನಿಂದ, ಗೋಭಕ್ಷಕರಿಂದ ಮಠ ಅಪವಿತ್ರಗೊಂಡಿತು" ಎಂಬ ವಾದವನ್ನು ತಳ್ಳಿಹಾಕಲಾಗಿದೆ. ಶುದ್ದೀಕರಣದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಆದರೆ ದಲಿತರ ಉಡುಪಿ ಚಲೋ ನಡೆದಾಗ ಪೇಜಾವರ ಶ್ರೀಗಳ ಶಿಷ್ಯರು, ಬ್ರಿಗೇಡ್'ಗಳು ಉಡುಪಿ ಅಪವಿತ್ರ ಆಯಿತೆಂದು ಹುಯಿಲೆಬ್ಬಿಸಿ ಶುದ್ದೀಕರಣ ನಡೆಸಿದ್ದರು. `ಉಡುಪಿ ಚಲೋ' ಮಠದ ವಿರುದ್ದ ನಡೆದ ಕಾರ್ಯಕ್ರಮವಾಗಿರಲಿಲ್ಲ. ಮೆರವಣಿಗೆ ನಡೆದದ್ದು ಮಠದ ದಾರಿಯಲ್ಲೂ ಅಲ್ಲ ಎಂದು ಈ ಥಿಯರಿಯ ಪ್ರತಿಪಾದಕರು ಹೇಳುತ್ತಾರೆ.

ಪೇಜಾವರ ಸ್ವಾಮಿಜಿಯ ಹಿಂದಿನ ಮತ್ತು ಇತ್ತೀಚಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿಂದೆ ಹೇಳಿದ ``ಹನುಮನ ನೆಗೆತ'' ನಿರೂಪಣೆಗಿಂತ, ಈ ಥಿಯರಿ ಸತ್ಯಕ್ಕೆ ಹೆಚ್ಚು ಹತ್ತಿರವಿರುವಂತೆ ಕಾಣುತ್ತದೆ. ಮಾತ್ರವಲ್ಲ,  ಒಬ್ಬ ಹಳೆಯ `ಕಟ್ಟರ್ ನಾಯಕ` ರಾತ್ರೋರಾತ್ರಿ `ಮೆದು ನಾಯಕ'ನಾಗುವುದು, ಹೊಸ `ಕಟ್ಟರ್ ನಾಯಕ’ ಉದಯವಾಗುವುದು, ಸಂಘ ಪರಿವಾರದ ರಾಜಕೀಯ ನಡೆಯ ಮಾಸ್ಟರ್ ಪ್ಲಾನುಗಳ ತಂತ್ರಗಳಲ್ಲಿ ಒಂದು. ಈ ತಂತ್ರದ ಭಾಗವಾಗಿಯೇ ವಾಜಪೇಯಿ `ರಾಜಧರ್ಮ' ಪಾಲಿಸುವ `ಮೆದು ನಾಯಕ'ನಾದ್ದು, ಅಡ್ವಾಣಿ ``ರಥಯಾತ್ರೆ''ಯ `ಕಟ್ಟರ್ ನಾಯಕ`ನಾದ್ದು. ಆ ಮೇಲೆ ಅಡ್ವಾಣಿ ಜಿನ್ನಾ ಮೆಚ್ಚುವ `ಮೆದು ನಾಯಕ'ನಾದ್ದು, ಮೋದಿ ``ಹಮ್ ಪಾಂಚ್, ಹಮಾರಾ ಪಚ್ಚೀಸ್' ಎಂದು ಬೆಂಕಿ ಉಗುಳುವ `ಕಟ್ಟರ್ ನಾಯಕ`ನಾದ್ದು. ಈಗಾಗಲೇ ಮುಂದಿನ ಕಟ್ಟರ್ ನಾಯಕ' ಪಾತ್ರಕ್ಕೆ ಆದಿತ್ಯನಾಥ ಯೋಗಿ ಬಣ್ಣ ಹಚ್ಚುತ್ತಿದ್ದಾರೆ. ಇದೇ ರೀತಿಯ ಕಟ್ಟರ್-ಮೆದು ನಾಯಕ ಯತಿವರ್ಯರಲ್ಲೂ ತರುವ  ಸಂಘ ಪರಿವಾರದ ಮಾಸ್ಟರ್ ಪ್ಲಾನಿನಲ್ಲಿ ಪೇಜಾವರ ಸ್ವಾಮಿಜಿ ಹೊಸ `ಮೆದು ನಾಯಕ'. ಹೊಸ ಕಠ್ಠರ್ ನಾಯಕ ಸಾಕ್ಷಿ ಮಹಾರಾಜ್.

ಒಂದು ಕಡೆ ದಲಿತರ-ಮುಸ್ಲಿಮರ ಮೇಲೆ ಹಿಂದೆಂದೂ ಕಂಡು ಕೇಳರಿಯದ ದಮನ, ಎಲ್ಲಾ ಜನರ ಮೇಲೆ ನವ-ಉದಾರವಾದಿ ನೀತಿಗಳ ಉಗ್ರ ಪ್ರಹಾರ. ಇದರ ಫಲವಾಗಿ ಜನರ ಆಕ್ರೋಶ ಬೇರೆಡೆಗೆ ತಿರುಗಿಸಲು ಇನ್ನೊದು ಕಡೆ  ನೋಟು ನಿಷೇಧ, ಜಿ.ಎಸ್.ಟಿ. ಮುಂತಾದ ಬೊಗಳೆ ಕಾರ್ಯಕ್ರಮಗಳು. ಮುಲಾಮು ಹಚ್ಚಲು ದಲಿತ ರಾಷ್ಟ್ರಪತಿ, ಮುಸ್ಲಿಮರ ಜತೆ ಸೌಹಾರ್ದ ಸಹಬಾಳ್ವೆ, ಆ ಮೂಲಕ ``ರಾಮಮಂದಿರ ಅಲ್ಲೇ ಕಟ್ಟುವೆವು''? ಎಂಬ ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಹೊಡೆಯುವ ಹುನ್ನಾರ - ಈ ಸ್ಥೂಲ ಚಿತ್ರದ ಹಿಂದೆ ಇಟ್ಟು ನೋಡಿದರೆ ಪೇಜಾವರ ಇಫ್ತರ್ ಕೂಟದ ನಿಜಸ್ವರೂಪ ತಿಳಿಯುತ್ತದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತು ಆ ಮೇಲೆ ಬರುವ 2019ರ ಲೋಕಸಭಾ ಚುನಾವಣೆಗೂ ಇದು ತಯಾರಿ.
ಪೇಜಾವರ ಇಫ್ತರ್ ಕೂಟಕ್ಕೆ `` ``ಅಸಂದಿಗ್ಧ ಸ್ವಾಗತ'' ನೀಡಿದ, ಅದಕ್ಕೆ ಎಚ್ಚರಿಕೆಯ ಅನುಮಾನ'' ವ್ಯಕ್ತ ಪಡಿಸಿದವರನ್ನು ಟೀಕಿಸಿದ, ಹಲವರು ಪ್ರಾಮಾಣಿಕವಾಗಿ ಗ್ರಹಿಸಿದಂತೆ ಅದು ``ಹನುಮನ ನೆಗೆತ'' ಖಂಡಿತ ಅಲ್ಲ. ಸಂಘ ಪರಿವಾರದ  ಮಾಸ್ಟರ್ ಪ್ಲಾನಿನಂತೆ  ಪೇಜಾವರ ಸ್ವಾಮಿಜಿ ಹಳೆಯ `ಕಟ್ಟರ್ ನಾಯಕ’ ರಾತ್ರೋರಾತ್ರಿ `ಮೆದು ನಾಯಕ'ನಾಗುವ ಪ್ರಕ್ರಿಯೆಯ ಆರಂಭ. ಇದನ್ನು ಪ್ರಜ್ಞಾವಂತರಿಗೆ, ಜನತೆಗೆ ಅರ್ಥ ಮಾಡಿಸುವ ರಾಜಕೀಯ ಜವಾಬ್ದಾರಿ ಎಡ-ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲಿದೆ.