ರೈತರ ದೇಶವ್ಯಾಪಿ ಐಕ್ಯ ಹೋರಾಟ-ಮಂದಸೌರ್‍ನಿಂದ ಕಿಸಾನ್ ಮುಕ್ತಿ ಯಾತ್ರಾದೊಂದಿಗೆ ಆರಂಭ

ಸಂಪುಟ: 
11
ಸಂಚಿಕೆ: 
29
Sunday, 9 July 2017

ಕಾರ್ಪೊರೇಟ್ ಮುಷ್ಟಿಯಿಂದ ರೈತಾಪಿಗಳನ್ನು ರಕ್ಷಿಸಿ!
ಮಾನವ ಕುಲವನ್ನು ಉಳಿಸಿ! ದೇಶವನ್ನು ಉಳಿಸಿ!

ಈ ಘೋಷಣೆಗಳೊಂದಿಗೆ ಜುಲೈ 6ರಂದು, ರೈತ-ವಿರೋಧಿ, ಕಾರ್ಪೊರೇಟ್-ಪರ ಧೋರಣೆಗಳ ವಿರುದ್ಧ ರೈತರ ಹೋರಾಟದಲ್ಲಿ ಪೋಲಿಸ್ ಗುಂಡುಗಳು ಆರು ರೈತರನ್ನು ಬಲಿ ತೆಗೆದುಕೊಂಡ ಮಂದಸೌರ್‍ನಿಂದ 162 ರೈತ ಸಂಘಟನೆಗಳು ಒಟ್ಟಾಗಿ ಯೋಜಿಸಿರುವ ಕಿಸಾನ್ ಮುಕ್ತಿ ಯಾತ್ರಾ ಬಿಜೆಪಿ ರಾಜ್ಯ ಸರಕಾರ ಒಡ್ಡಿದ ಅಡ್ಡಿ-ಆತಂಕಗಳ ನಡುವೆಯೇ ಆರಂಭವಾಗಿದೆ.

ಇದನ್ನು ವಿಫಲಗೊಳಿಸಲು ಮಧ್ಯಪ್ರದೇಶದ ಬಿಜೆಪಿ ಸರಕಾರ ಆ ರಾಜ್ಯದ ಹಿರಿಯ ರೈತ ಮುಖಂಡ, ಜನತಾ ಆಂದೋಲನಗಳ ರಾಷ್ಟ್ರೀಯ ಮೈತ್ರಿಕೂಟ (ಎನ್‍ಎಪಿಎಂ)ದ ರಾಷ್ಟ್ರೀಯ ಸಂಯೋಜಕರು ಮತ್ತು ಭೂಮಿ ಅಧಿಕಾರ್ ಆಂದೋಲನ್‍ದ ಒಬ್ಬ ಮುಖಂಡರೂ ಆಗಿರುವ ಡಾ. ಸುನೀಲಂ ಅವರನ್ನು ಬಂಧಿಸಿತು.

ಆದರೂ ಸ್ವರಾಜ್ಯ ಇಂಡಿಯಾದ ಮುಖಂಡ ಯೋಗೇಂದ್ರ ಯಾದವ್, ನರ್ಮದಾ ಬಚಾವ್ ಆಂದೋಲನದ ಮೇಧಾ ಪಾಟ್ಕರ್, ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ, ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಸುಭಾಷೀಣಿ ಅಲಿ, ಮತ್ತಿತರ ಮುಖಂಡರ ನೇತೃತ್ವದಲ್ಲಿ ಮೆರವಣಿಗೆ ಪೋಲಿಸ್ ಗೋಲೀಬಾರ್ ನಡೆದ ಪಿಪಲಿಯ ಮಂಡಿಯತ್ತ ಹೊರಟಿತು. ರೈತರು ಈ ಮೆರವಣಿಗೆಯಲ್ಲಿ ಭಾಗವಹಿಸದಂತೆ ಮಾಡಲು ಮಂದಸೌರ್‍ಗೆ ಬರುವ ರಸ್ತೆಗಳನ್ನೆಲ್ಲ ಅಡ್ಡ ಗಟ್ಟಿಲಾಗಿದ್ದರೂ  ಲೆಕ್ಕಿಸದೆ ಸಾವಿರಾರು ರೈತರು ರೈತ ಮುಖಂಡರನ್ನು ಬರಮಾಡಿಕೊಂಡರು,

ಪೋಲೀಸರು ತಡೆದಲ್ಲಿಯೇ ಹನ್ನನ್ ಮೊಲಲ್ ಮತ್ತಿತರರು ಹುತಾತ್ಮರಿಗೆ ಪುಷ್ಪಾರ್ಚನೆ ಮಾಡುವುದನ್ನು ತಡೆಯಲು ಆಡಳಿತಕ್ಕಾಗಲಿಲ್ಲ. ಆದರೆ ಹುತಾತ್ಮ ಸ್ಮಾರಕವನ್ನು ನಿರ್ಮಿಸಲು ಬಿಡಲಿಲ್ಲ. ಎಲ್ಲ ಪ್ರಮುಖ ಮುಖಂಡರು ಸೇರಿದಂತೆ ಸುಮಾರು 1500 ಜನರನ್ನು ಬಂಧಿಸಿ 35 ಕಿ.ಮೀ. ದೂರ ಒಯ್ದು ಬಿಡುಗಡೆ ಮಾಡಿತು. ಅಲ್ಲಿಂದ ಮೆರವಣಿಗೆ ಮುಂದುವರೆದಿದೆ. ಅದು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮೂಲಕ ಸಂಚರಿಸಿ ಜುಲೈ 18ರಂದು ದಿಲ್ಲಿ ತಲುಪಲಿದೆ.
 

ಬಿಜೆಪಿ ಸರಕಾರದ ಈ ದಮನ ಪ್ರಯತ್ನವನ್ನು ಅಖಿಲ ಭಾರತ ಕಿಸಾನ್ ಸಭಾ ಖಂಡಿಸಿದೆ ಹಾಗೂ ಈ ಸರ್ವಾಧಿಕಾರಶಾಹಿಯನ್ನು ಯಶಸ್ವಿಯಾಗಿ ಪ್ರತಿರೋಧಿಸಿ ನಿಂತ ರೈತರನ್ನು ಅಭಿನಂದಿಸಿದೆ. ಯಾತ್ರೆಗೆ ಇನ್ನಷ್ಟು ಅಡ್ಡಪಡಿಸದಂತೆ, ಪ್ರತಿಭಟಿಸುವ ರೈತರ ಹಕ್ಕನ್ನು ನಿರಾಕರಿಸದಂತೆ ಕೇಂದ್ರ ಹಾಗೂ ರಾಜ್ಯಸರಕಾರಗಳಿಗೆ ಎಚ್ಚರಿಕೆ ನೀಡಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ರೈತ-ವಿರೋಧಿ ಧೋರಣೆಗಳ ವಿರುದ್ಧ ಭುಗಿಲೆದ್ದಿರುವ ಆಕ್ರೋಶದಲ್ಲಿ ರೈತ ಸಂಘಟನೆಗಳ ಒಂದು ವಿಶಾಲ ಮೈತ್ರಿಕೂಟ  ‘ರಾಷ್ಟ್ರೀಯ ಕಿಸಾನ್ ಮಹಾಸಂಘ’ ಮೂಡಿ ಬಂದಿದೆ. ಇದರ ಕರೆಯ ಮೇರೆಗೆ ಜುಲೈ 3ರಂದು ನೂರಾರು ರೈತರು ದಿಲ್ಲಿಯ  ಜಂತರ್ ಮಂತರ್‍ನಲ್ಲಿ   ಪ್ರತಿಭಟನೆ ನಡೆಸಿ ನೀತಿ ಆಯೋಗದತ್ತ ಮೆರವಣಿಗೆ ನಡೆಸಿದರು. ಮೆರವಣಿಗೆಯನ್ನು ಮಧ್ಯದಲ್ಲಿಯೇ ತಡೆಯಲಾಯಿತು. ಈ ಸಂಘಟನೆ ಮತ್ತು ಇತರ ರೈತರು ಮತ್ತು ಆದಿವಾಸಿಗಳ ಸಂಘಟನೆಗಳ ಐಕ್ಯ ವೇದಿಕೆಗಳೂ ದೇಶಾದ್ಯಂತ ಒಂದು ಐಕ್ಯ ರೈತ ಹೋರಾಟಕ್ಕೆ ಅಣಿಯಾಗುತ್ತಿವೆ.

ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ, ಭೂಮಿ ಅಧಿಕಾರ್ ಆಂದೋಲನ್  ಜುಲೈ 3ರ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವು. ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ರೈತರ ಎರಡು ಪ್ರಮುಖ ಬೇಡಿಕೆಗಳಾದ ಸಮಗ್ರ ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಫಲದಾಯಕ ಬೆಲೆ ಇವುಗಳ ಮೇಲೆ ನಡೆಸುವ ಹೋರಾಟಗಳಿಗೆ ಬೆಂಬಲ ಮತ್ತು ಸೌಹಾರ್ದ ವ್ಯಕ್ತಪಡಿಸಿದರು. ಮಧ್ಯಪ್ರದೇಶದಲ್ಲಿ ರೈತರ ಮೇಲೆ ಹಾಕಿರುವ ಸುಳ್ಳು ಕೆಸುಗಳನ್ನೆಲ್ಲ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ ಅವರು ಜುಲೈ 6ರಿಂದ ಮಂದಸೌರ್‍ನಿಂದ ಆರಂಭವಾಗಲಿರುವ ‘ಕಿಸಾನ್ ಮುಕ್ತಿ ಯಾತ್ರಾ’ದಲ್ಲಿ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಕರೆಯಂತೆ ಜುಲೈ18ರ ದಿಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಈ ನಡುವೆ ರೈತಾಪಿಗಳು, ಅದಿವಾಸಿಗಳು, ದಲಿತರು ಮತ್ತು ಅರಣ್ಯವಾಸಿಗಳ ಭೂಮಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳ ಮೈತ್ರಿಕೂಟವಾದ ಭೂಮಿ ಆಧಿಕಾರ್ ಆಂದೋಲನ(ಬಿಎಎ) ದ 3ನೇ ಅಖಿಲ ಭಾರತ ಸಮ್ಮೇಳನ ಪ್ರಧಾನ ಮಂತ್ರಿಗಳಿಗೆ ರೈತರ ಬೇಡಿಕೆ ಪಟ್ಟಿಯನ್ನು ಸಲ್ಲಿಸಬೇಕು ಎಂದು ನಿರ್ಧರಿಸಿದೆ.

* ಜುಲೈ 18ರ ದಿಲ್ಲಿ ಪ್ರತಿಭಟನೆಯ ನಂತರ ಆಗಸ್ಟ್ 9ರಂದು ಎಲ್ಲ ಜಿಲ್ಲೆಗಳಲ್ಲಿ ರೈತರ ಬೃಹತ್ ರ್ಯಾಲಿಗಳನ್ನು ಸಂಘಟಿಸಬೇಕು, ಆಮೇಲೆ ಸಂಬಧಪಟ್ಟ ರಾಜ್ಯಸರಕಾರಗಳ ಪ್ರತಿಕ್ರಿಯೆಯನ್ನು ಅನುಸರಿಸಿ ಆಯಾಯ ರಾಜ್ಯಗಳಲ್ಲಿ ಹೋರಾಟದ ಮುಂದಿನ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದು ಅದು ಹೇಳಿದೆ.

  • ನರ್ಮದಾ ಕಣಿವೆಯಿಂದ ಸುಮಾರು 40,000 ಕುಟುಂಬಗಳನ್ನು ಯಾವುದೇ ಪರಿಹಾರ, ಪುನರ್ವಸತಿ ಮತ್ತು ಪುನರ್ನೆಲೆ ಕಲ್ಪಿಸದೆ ಕಾನೂನುಬಾಹಿರವಾಗಿ ಬಲವಂತದಿಂದ ಒಕ್ಕಲೆಬ್ಬಿಸುವುದರ ವಿರುದ್ಧ ನರ್ಮದಾ ಬಚಾವ್ ಆಂದೋಲನ(ಎನ್‍ಬಿಎ)ಕ್ಕೆ ಬೆಂಬಲ ಸೂಚಿಸಿದ ಬಿಎಎ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‍ನ ಕಾರ್ಯಕರ್ತರ ಸಮಾವೇಶವನ್ನು ಎನ್‍ಬಿಎಯೊಂದಿಗೆ ನಡೆಸಿ ಮುಂದಿನ ಕಾರ್ಯಾಚರಣೆಯನ್ನು ರೂಪಿಸಲು ನಿರ್ಧರಿಸಿದೆ.
     
  • ಏಳು ಆದಿವಾಸಿ ರೈತರು ಬಲಿದಾನ ನೀಡಿದ ಝಾರ್ಖಂಡ್‍ನ ರೈತರ, ಆದಿವಾಸಿಗಳ ಸತತ ಹೋರಾಟದಿಂದಾಗಿ ಅಲ್ಲಿಯ ರಾಜ್ಯಪಾಲರು ಸಿಎನ್‍ಟಿಎ ಮತ್ತು ಎಸ್‍ಪಿಟಿಎ ಎಂಬ ಗೇಣಿ ಕಾಯ್ದೆಗಳಿಗೆ ಕಾರ್ಪೊರೇಟ್ -ಪರ ತಿದ್ದುಪಡಿಗಳನ್ನು ಸೂಚಿಸಿರುವ ಮಸೂದೆಗಳನ್ನು ಹಿಂದಕ್ಕೆ ಕಳೆಸಬೇಕಾಗಿ ಬಂದಿದೆ. ಈಗಲೂ ಅಲ್ಲಿನÀ ಬಿಜೆಪಿ ಸರಕಾರ ಈ ತಿದ್ದುಪಡಿಗಳನ್ನು ತರಲು ಮುಂದಾದರೆ ಬಿಎಎನ ಝಾರ್ಖಂಡ್ ಘಟಕ ಜುಲೈ 12ರಿಂದ ರಾಜ್ಯ ವಿಧಾನ ಸಭಾ ಕಲಾಪಗಳು ಆರಂಭವಾಗುವ ದಿನದಿಂದ ರಾಂಚಿಯಲ್ಲಿ ಧರಣಿ ಮುಷ್ಕರ ನಡೆಸಲು ನಿರ್ಧರಿಸಿದೆ.  ಇದನ್ನು ಇತರ ಆದಿವಾಸಿ ಸಂಘಟನೆಗಳೊಂದಿಗೆ ಅಖಿಲ ಭಾರತ ಹೋರಾಟವಾಗಿ ರೂಪಿಸಿ  ಪಾರ್ಲಿಮೆಂಟ್ ಚಲೋ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಬಿಎಎ ಹೇಳಿದೆ.
     
  • ಬಿಎಎ ನಿಯೋಗವೊಂದು ಸಂಸತ್ ಸದಸ್ಯರೊಂದಿಗೆ ಸಹರಾಣಪುರಕ್ಕೆ ಭೇಟಿ ನೀಡಿ ಅಲ್ಲಿ ಹಿಂಸಾಚಾರಕ್ಕೆ ಒಳಗಾದ ದಲಿತರನ್ನು ಭೇಟಿ ಮಾಡಿ ನಂತರ ಅವರಿಗೆ ರಕ್ಷಣೆನೀಡುವಂತೆ ಆಗ್ರಹಿಸಲು ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗುತ್ತದೆ.
     

ಈ ನಡುವೆ ಜುಲೈ 7ರಂದು ಗೋರಕ್ಷಣೆಯ ಜೆಸರಲ್ಲಿ ಜನಗಳನ್ನು ಬಡಿದು ಸಾಯಿಸುವುದನ್ನು ಪ್ರತಿಭಟಿಸಿ ಎಲ್ಲ ಪಂಚಾಯತ್/ಬ್ಲಾಕ್ ಮಟ್ಟಗಳಲ್ಲಿ ಪ್ರತಿಭಟನಾ ದಿನವನ್ನು ಆಚರಿಸಲು ಬಿಎಎ ಕರೆ ನೀಡಿದೆ.