ಗೋವಿನ ಹೆಸರಲ್ಲಿ ಮೂರು ವರ್ಷಗಳಲ್ಲಿ 61 ಹಿಂಸಾಚಾರ, ಬಲಿಯಾದವರಲ್ಲಿ 86% ಮುಸ್ಲಿಮರು

ಸಂಪುಟ: 
11
ಸಂಚಿಕೆ: 
28
Sunday, 2 July 2017

2010ರ ನಂತರ ಜೂನ್ 25, 2017ರ ವರೆಗೆ ಸುಮಾರು 8 ವರ್ಷಗಳಲ್ಲಿ ಗೋವಿನ ಹೆಸರಲ್ಲಿ 63 ಹಿಂಸಾತ್ಮಕ ಘಟನೆಗಳು ವರದಿಯಾಗಿವೆ. ಇದರಲ್ಲಿ 61 ಅಂದರೆ 97% ಮೋದಿಯವರ ‘ಅಚ್ಛೇ ದಿನ್’ಗಳು ಆರಂಭವಾದ ಮೇಲೆ 3 ವರ್ಷಗಳಲ್ಲಿ ನಡೆದವುಗಳು. ಇವುಗಳಲ್ಲಿ 28 ಅಮಾಯಕ ಭಾರತೀಯರು ಬಲಿಯಾಗಿದ್ದಾರೆ. ಇವರಲ್ಲಿ 23 ಮಂದಿ ಅಂದರೆ 86% ಮುಸ್ಲಿಮರು. ಗಾಯಗೊಂಡಿರುವ ಭಾರತೀಯರ ಸಂಖ್ಯೆ 124. ನಿಜ ಇದು ಸರಕಾರೀ ಅಂಕಿ-ಅಂಶವಲ್ಲ. ಅವರಲ್ಲಿ ಇಂತಹ ಅಂಕಿ-ಅಂಶಗಳಿಲ್ಲ. ಇದು ಕಳೆದ ಹತ್ತು ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮಗಳಲ್ಲಿ ವರದಿಯಾದ ಘಟನೆಗಳನ್ನು ಕಲೆ ಹಾಕಿ ‘ಇಂಡಿಯಾಸ್ಪೆಂಡ್’ನ ಓಜಸ್ವಿ ರಾವ್ ಮತ್ತು ಡೆಲ್ನಾ ಅಬ್ರಹಾಂ ಕಂಡ ಸಂಗತಿಗಳಲ್ಲಿ ಎರಡು.

ಇನ್ನಷ್ಟು ನೋಡಿ:

 • ಭಾರತದ 29 ರಾಜ್ಯಗಳಲ್ಲಿ 19 ರಲ್ಲಿ ಇಂತಹ ಹಿಂಸಾಚಾರಗಳು ನಡೆದಿವೆ. ಅತಿ ಹೆಚ್ಚು ಉತ್ತರ ಪ್ರದೇಶದಲ್ಲಿ (10), ನಂತರದ ಸ್ಥಾನಗಳು ಹರ್ಯಾಣ (9), ಗುಜರಾತ್ (6), ಕರ್ನಾಟಕ (6), ಮಧ್ಯಪ್ರದೇಶ (4), ರಾಜಸ್ತಾನ (4) ಮತ್ತು ದಿಲ್ಲಿ (4). ಇವುಗಳಲ್ಲಿ ಕರ್ನಾಟಕ ಮತ್ತು ದಿಲ್ಲಿ ಬಿಟ್ಟು ಉಳಿದವೆಲ್ಲ ಬಿಜೆಪಿ ಆಳ್ವಿಕೆಯ ರಾಜ್ಯಗಳು. ಇವೆರಡು ಬಿಜೆಪಿ ಅಧಿಕಾರಕ್ಕೆ ಏನಕೇನ ಪ್ರಕಾರೇಣ ಬರಲು ಬಲವಾದ ಹೊಂಚು ಹಾಕಿರುವ ರಾಜ್ಯಗಳು ಎಂಬುದು ಆಕಸ್ಮಿಕವಲ್ಲ.
   
 •  79% ಉತ್ತರ ಭಾರತದಲ್ಲೇ ನಡೆದಿವೆ, 21% ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಡೆದಿವೆ. ಈ ಪ್ರದೇಶಗಳಲ್ಲಿ ನಡೆದ 13 ಹಿಂಸಾಚಾರಗಳಲ್ಲಿ ಕರ್ನಾಟಕದಲ್ಲಿಯೇ 6 ನಡೆದಿವೆ ಎಂಬದು ಗಮನಾರ್ಹ.
   
 •  ಇವುಗಳಲ್ಲಿ 33, ಅಂದರೆ 52% ಸುಳ್ಳು ಊಹಾಪೋಹಗಳಿಂದ ನಡೆಸಿದವುಗಳು.
   
 •  ಈ ಹಿಂಸಾಚಾರಗಳಲ್ಲಿ 32ರ (51%) ಗುರಿ ಮುಸ್ಲಿಮರು, 5 ಹಲ್ಲೆಗಳ ಗುರಿ ದಲಿತರು(8%), 3ರಲ್ಲಿ(5%) ಸಿಖ್ಖರು ಇರಬಹದು(ಆದರೆ ಇದು ಸ್ಪಷ್ಟವಾಗಿಲ್ಲ), ಒಂದು ಕ್ರೈಸ್ತರ ವಿರುದ್ಧ. 13 ಘಟನೆಗಳಲ್ಲಿ(21%) ಹಲ್ಲೆಯ ಗುರಿ ಯಾವ ಧರ್ಮದವರೆಂದು ವರದಿಯಾಗಿಲ್ಲ.
   
 •  ಇವುಗಳಲ್ಲಿ 3 ಕೇಸುಗಳಲ್ಲಿ ಯಾರನ್ನೇ ಆಗಲಿ ಬಂಧಿಸಿದ ವರದಿಗಳಿಲ್ಲ, 13 ಕೇಸುಗಳಲ್ಲಿ ಹಲ್ಲೆಗೆ ಗುರಿಯಾದವರ ಮೇಲೆಯೇ ಕೇಸು ಹಾಕಲಾಗಿದೆ.
   
 •  ಇವುಗಳಲ್ಲಿ 23ರಲ್ಲಿ ಹಲ್ಲೆಕೋರರಲ್ಲಿ ಹಿಂದೂ ಬಲಪಂಥೀಯ ಗುಂಪುಗಳು, ವಿಹೆಚ್‍ಪಿ, ಭಜರಂಗ ದಳ ಮತ್ತು ಗೋರಕ್ಷಕರು ಎಂದು ಸ್ಪÀಷ್ಟವಾಗಿದೆ.
   
 •  ಮೋದಿಯವರು ಪ್ರಧಾನಿಯಾದ ಮೇಲೆ ನಡೆದ 61 ಘಟನೆಗಳಲ್ಲಿ ಮೊದಲ 19 ತಿಂಗಳಲ್ಲಿ ನಡೆದದ್ದು 16, 2016ರಲ್ಲಿ 25 ಮತ್ತು 2017ರಲ್ಲಿ ಜೂನ್ 25ರ ವರೆಗೆ ಇನ್ನೂ ಅರ್ಧ ವರ್ಷ ಕಳೆಯುವ ಮೊದಲೇ ಕಳೆದ ವರ್ಷದ 75% ದಷ್ಟು ಅಂದರೆ 20 ಆಗಲೇ ನಡೆದಿವೆ.
   

ಈ ವರದಿ ಬಂದ ಮೇಲೆ ಮತ್ತೊಂದು ದಾಳಿ ಬಿಜೆಪಿಯ ಆಳ್ವಿಕೆಯ ಝಾರ್ಖಂಡ್‍ನಿಂದ ಜೂನ್ 27ರಂದು ವರದಿಯಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ಮುಸ್ಲಿಮ್ ಕುಟುಂಬವೊಂದರ ಮೇಲೆ ದಾಳಿ ನಡೆದು ಅವರ ಮನೆಯನ್ನು ಸುಟ್ಟು ಹಾಕಲಾಗಿದೆ.

ಪ್ರಧಾನಿಗಳ ಸ್ವಂತ ರಾಜ್ಯದ ಉನಾದಲ್ಲಿ ನಾಲ್ವರು ದಲಿತರ ಮೇಲೆ ಅಮಾನುಷ ದಾಳಿ ಜಗಜ್ಜಾಹೀರಾದ ಮೇಲೆ ಭುಗಿಲೆದ್ದ ಆಕ್ರೋಶದಿಂದಾಗಿ ಮಾನ್ಯ ಪ್ರಧಾನಿಗಳು ಬಾಯಿ ತೆರೆದು ಅವರು ಸಾಚಾ ಗೋರಕ್ಷಕರಲ್ಲ ಎಂದರು. ಆದರೆ ಉಳಿದಂತೆ ಅವರ ದಿವ್ಯ ಮೌನ ಕಿವಿ ಗಡಚಿಕ್ಕುವಂತೆ ಮುಂದುವರೆದಿದೆ.
 

ಜೂನ್ 28 ರ ದೇಶವ್ಯಾಪಿ ಪ್ರತಿಭಟನೆಯ ನಂತರ ಮತ್ತೆ ಸ್ವಲ್ಪ ಬಾಯಿ ತೆರೆದಿದ್ದಾರೆ. ಗೋಭಕ್ತಿಯ ಹೆಸರಲ್ಲಿ ಜನರನ್ನು ಸಾಯಿಸುವುದನ್ನು ಒಪ್ಪಲಾಗದು, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಅವರು ಅಹಮದಾಬಾದಿನಲ್ಲಿ ಹೇಳಿದರು.
 

ಆದರೆ ಹಾಗೆ ಹೇಳಿದ ದಿನವೇ ಝಾರ್ಖಂಡದಲ್ಲಿ ಅಸ್ಗರ್ ಅನ್ಸಾರಿ ಎಂಬ ಡ್ರೈವರ್ ಗೋಮಾಂಸ ಸಾಗಿಸುತ್ತಿದ್ದಾನೆ ಎಂದು ಒಂದು ಗುಂಪು ಆತನನ್ನು ಬಡಿದು ಸಾಯಿಸಿದೆ. ಈ ಮೂಲಕ ಕಳೆದ ಮೂರು ವರ್ಷಗಳಲ್ಲಿ ದ್ವೇಷ ಪ್ರಚಾರಕ್ಕೆ ಬಲಿಯಾದವರ ಸಂಖ್ಯೆ 63 ಕ್ಕೆ ಏರಿದೆ.