’ಉಪಾಯವಾಗಿ’ ರೈಲುದರಗಳನ್ನು ಏರಿಸುವ ಹುನ್ನಾರ!

ಸಂಪುಟ: 
11
ಸಂಚಿಕೆ: 
28
date: 
Sunday, 2 July 2017
Image: 

ಗೋರಕ್ಷಣೆ, ರಾಷ್ಟ್ರಭಾಷೆ ಇತ್ಯಾದಿಗಳ ನಡುವೆ ಆರ್ಥಿಕ ರಂಗದಲ್ಲಿ ನವ-ಉದಾರವಾದದ ರಥ ತನ್ನ ಎಂದಿನ ವೇಗದಲ್ಲೇ ಸಾಗುತ್ತಿರುವಂತಿದೆ. ರೈಲು ದರಗಳಲ್ಲಿ ’ಉಪಾಯವಾಗಿ ಹೆಚ್ಚಳ’ ಮಾಡಲು ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಮಂಜೂರಾತಿ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಎಪ್ರಿಲ್ ೨೫ರಂದು ಸ್ವತಃ ಪ್ರಧಾನಿಗಳ ಅಧ್ಯಕ್ಷತೆಯಲ್ಲೇ ಮೂಲರಚನೆ ಮಂತ್ರಾಲಯಗಳ ಸಭೆ ನಡೆದ ನಂತರ ಈ ಮಂಜೂರಾತಿ ಬಂದಿರುವುದಾಗಿ ವರದಿಯಾಗಿದೆ. ಪ್ರಯಾಣಿಕ ದರಗಳಲ್ಲಿ ’ಕ್ರೀಪಿಂಗ” ಹೆಚ್ಚಳವನ್ನು ಜಾರಿಗೆ ತನ್ನಿ ಎಂಬುದು ಪಿಎಂಒ ಮಂಜೂರಾತಿಯಂತೆ. ಆದರೆ ರೈಲ್ವೆ ಇಲಾಖೆ ಇದನ್ನು ’ಅಧಿಕೃತ’ವಾಗಿ ನಿರಾಕರಿಸಿದೆಯಂತೆ.

ಕ್ರೀಪಿಂಗ್ ಅಂದರೆ ತೆವಳಿಕೊಂಡು, ಉಪಾಯವಾಗಿ ಎಂದು ಅರ್ಥ. ಒಬ್ಬ ಹಿರಿಯ ರೈಲ್ವೆ ಮಂಡಳಿ ಸದಸ್ಯರು ಇದರ ಅರ್ಥ ಏನೆಂಬುದು ಸ್ಪಷ್ಟ. ನಾವೀಗ ಅದನ್ನು ರೂಪಿಸಬೇಕಾಗಿದೆ. ಆದರೆ ಇನ್ನೂ ಏನೂ ಅಂತಿಮಗೊಳಿಸಿಲ್ಲ ಎಂದು ಹೇಳಿರುವುದಾಗಿ ’ಇಂಡಿಯನ್ ಎಕ್ಸ್‌ಪ್ರೆಸ್’  ವರದಿ ಹೇಳುತ್ತದೆ. ಬಹುಶಃ ಬಹಳ ವರ್ಷಗಳಿಂದ ಏರಿಸಿರದ ಎಸಿಯೇತರ ದರಗಳಿಂದ ಆರಂಭಿಸಬಹುದು ಎಂದು ಅವರು ಸಂಕೇತ ನೀಡಿದರಂತೆ.

ಇದರ ಅರ್ಥ ಏನೆಂದು ಸ್ವಲ್ಪ ಕಾಯಬೇಕಾದೀತು. ಕಳೆದ ಸಪ್ಟಂಬರ್‌ನಲ್ಲಿ  ’ಫ್ಲೆಕ್ಸಿ’ ದರ ಪದ್ಧತಿ ಎಂಬ ಹೆಸರಿನಲ್ಲಿ ಸೂಪರ್ ಎಕ್ಸ್‌ಪ್ರೆಸ್‌ಗಳಲ್ಲಿ ದರ ಏರಿಕೆ  ಮಾಡಲಾಯಿತು, ಬಹುಶಃ ಈ ಸಪ್ಟಂಬರ್‌ನಲ್ಲಿ ಇಂತಹುದೇ ಇನ್ನೇನಾದರೂ ’ಉಪಾಯ’ ಪ್ರಕಟವಾಗಬಹುದೇನೋ, ಕಾದು ನೋಡಬೇಕು.

ಈ ನಡುವೆ ರೈಲ್ವೆ ಖಾಸಗೀಕರಣದ ಕೆಲಸ ಆರಂಭವಾಗಿದೆ. ದೇಶದಲ್ಲಿ ೨೩ ರೈಲು ನಿಲ್ದಾಣಗಳ ಹರಾಜಿಗೆ ಮೋದಿ ಸರಕಾರ ಸಿದ್ಧವಾಗುತ್ತಿದೆ. ಪಿಪಿಪಿ ಆಧಾರದಲ್ಲಿ ೧೫ ವರ್ಷಗಳ ಲೀಸ್ ಪಡೆಯುವ ಖಾಸಗಿಯವರು ಇದನ್ನು ಆಧುನೀಕರಿಸುತ್ತಾರಂತೆ. ಇಂತಹ ಪಿಪಿಪಿ ಆಧುನೀಕರಣ ಯಾರಿಗೆ ಅಚ್ಚೇ ದಿನ್ ತರಬಹುದು ಎಂಬುದು ಈ ಮೂರನೇ ವರ್ಷದ ಅಂತ್ಯದಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.
ಅಂತೂ ಸಮಾಜದ ಸೇವೆಯ ವ್ಯವಸ್ಥೆಯಾಗಿರುವ ಭಾರತೀಯ ರೈಲ್ವೆಯನ್ನು ನಮ್ಮ ಸಮಾಜದ ’ಆಧ್ಯಾತ್ಮಿಕ’ ಶಕ್ತಿಯ ಬಗ್ಗೆ ದೊಡ್ಡ-ದೊಡ್ಡ ಮಾತುಗಳನ್ನಾಡುವ ಸರಕಾರ  ಈ ಖಾಸಗೀಕರಣದ ಮೂಲಕ ಅದನ್ನು ಹಣ ಉಗುಳುವ ಒಣ ಭೌತಿಕ ಯಂತ್ರವಾಗಿಸುವ ನಿಟ್ಟಿನಲ್ಲಿ ಒಯ್ಯುತ್ತಿದೆ.

 

’ನಾನು ಬಡವ’ ಎಂದು ಬಿಪಿಎಲ್ ಕುಟುಂಬದವರು ಮನೆಮುಂದೆ ಬರೆಸಬೇಕು ಎಂದು ತಾಕೀತು ಮಾಡಿರುವುದು ಮಾನವ ಘನತೆಯ ಉಲ್ಲಂಘನೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಸ್ತಾನದ ಬಿಜೆಪಿ ಸರಕಾರಕ್ಕೆ ನೋಟೀಸು ಕೊಟ್ಟಿದೆ.

ಚುನಾವಣಾ ಆಯೋಗ ’ಕಾಸಿಗಾಗಿ ಸುದ್ದಿ’ಯ ಆರೋಪಕ್ಕೆ ಒಳಗಾಗಿದ್ದ  ಮಧ್ಯಪ್ರದೇಶದ ಹಿರಿಯ ಬಿಜೆಪಿ ಮಂತ್ರಿಯೊಬ್ಬರನ್ನು ಚುನಾವಣೆಗೆ ಅನರ್ಹಗೊಳಿಸಿದೆ.

 

 

 

- ವೇದರಾಜ ಎನ್ ಕೆ.