ಕಾವಲುಕೋರತನದ ದಿನಗಳಲ್ಲಿ ತುರ್ತು ಪರಿಸ್ಥಿತಿಯ ನೆನಪು

ಸಂಪುಟ: 
11
ಸಂಚಿಕೆ: 
28
date: 
Sunday, 2 July 2017
Image: 

ಈ ವಾರ ಜೂನ್ 26ರಂದು 42 ವರ್ಷಗಳ ಹಿಂದೆ ಈ ದಿನ ಹೇರಲ್ಪಟ್ಟ ಆಂತರಿಕ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳಲಾಯಿತು. ಹಿರಿಯ ಮಂತ್ರಿಗಳೊಬ್ಬರು ಆ ತುರ್ತು ಪರಿಸ್ಥಿತಿಯಲ್ಲಿ ಪ್ರತಿಭಟಿಸದವರಿಗೆ ಈಗ ನಾಗರಿಕ ಹಕ್ಕುಗಳ ಬಗ್ಗೆ ಮಾತಾಡುವ ಹಕ್ಕಿಲ್ಲ ಎಂದಿದ್ದಾರೆ. ಆನಂತರ ಹುಟ್ಟಿದವರಿಗೆ ನಾಗರಿಕ ಹಕ್ಕುಗಳು ಬೇಕಿಲ್ಲ ಎಂದಿರಬಹುದೇ?

ಮತ್ತೊಬ್ಬ ಮಂತ್ರಿಗಳು ನಮ್ಮ ಪಠ್ಯಕ್ರಮದಲ್ಲಿ ಇದನ್ನು ಸೇರಿಸಬೇಕು ಎಂದಿದ್ದಾರೆ. ಖಂಡಿತಾ ಸೇರಿಸಬೇಕು, ಆಗಿನ ಘೋಷಿತ ತುರ್ತು ಪರಿಸ್ತಿತಿಯನ್ನು,ನಂತರದ ೧೯೮೪ರ, ೨೦೦೨ರ ಮತ್ತು ಈಗ ವಿಶೇಷವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ ಮಟ್ಟಿಗೆ ಅಘೋಷಿತವಾಗಿರುವ ತುರ್ತು ಪರಿಸ್ತಿತಿಗಳನ್ನು ಕೂಡ ಸೇರಿಸಬೇಕು ಎಂದು ವ್ಯಂಗ್ಯಚಿತ್ರಕಾರರೊಬ್ಬರು ಹೇಳಿದ್ದಾರೆ.

ಇನ್ನೊಬ್ಬ ವ್ಯಂಗ್ಯಚಿತ್ರಕಾರ, ಹೇಮಂತ ಮೊರ್‍ಪಾರಿಯ ಆಗಿನ ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಆಗಿನ ತುರ್ತು ಪರಿಸ್ಥಿತಿ ಸರಕಾರ ರಾಷ್ಟ್ರಪತಿಗಳಿಂದ ಬೇಕಾದಾಗಲೆಲ್ಲ ಸಹಿಮಾಡಿಸಿಕೊಂಡ ಸುಗ್ರೀವಾಜ್ಞೆಗಳ ಆಳ್ವಿಕೆಯ ಬಗ್ಗೆ ಟಿಪ್ಪಣಿ ಮಾಡಿದ ವ್ಯಂಗ್ಯಚಿತ್ರದಲ್ಲಿ ಬಾತ್‌ರೂಂನಿಂದ ರಾಷ್ಟ್ರಪತಿಗಳು ’ಇನ್ನೇನಾದರೂ ಸುಗ್ರೀವಾಜ್ಞೆಗಳಿದ್ದರೆ ತುಸು ಕಾಯಲು ಹೇಳಿ’ ಎನ್ನುತ್ತಾರೆ. ಆದರೆ ಈಗಿನ ಸರಕಾರ ರಾಷ್ಟ್ರಪತಿಗಳಿಗೆ ಆ ತೊಂದರೆಯನ್ನೂ ಕೊಡಬೇಕಾಗಿಲ್ಲ. ಅವರು ಅಬು ಅವರ ಕ್ಷಮೆ ಕೋರಿ ಬರೆದ ವ್ಯಂಗ್ಯಚಿತ್ರವಿದು.

ಈ ನಡುವೆ ಕೆಲವು ದಿನಗಳ ಹಿಂದಷ್ಟೇ ಆರು ರೈತರ ಪ್ರಾಣ ಬಲಿ ಪಡೆದಿರುವ ಮಧ್ಯಪ್ರದೇಶದ ಬಿಜೆಪಿ ಸರಕಾರ ಜುಲೈ ೧ರಿಂದ ಸಪ್ಟಂಬರ್ ೩೦ರ ವರೆಗೆ ಜಿಲ್ಲಾ ಕಲೆಕ್ಟರುಗಳು ಯಾವುದೇ ಆರೋಪ, ಯಾವುದೇ ವಿಚಾರಣೆಯಿಲ್ಲದೆ ನಾಗರಿಕರನ್ನು ಬಂಧಿಸಬಹುದು ಎಂದು ಅಧಿಸೂಚನೆ ಹೊರಡಿಸಿದೆ. ರೈತರ ಚಳುವಳಿಯಿಂದ ಮತ್ತು ಜಿಎಸ್‌ಟಿಯ ವಿರುದ್ಧವೂ ಇಂತಹ ಚಳುವಳಿ ಭುಗಿಲೇಳಬಹುದು ಎಂದಬ ಭೀತಿಯಿಂದ ಅದು ಇಂತಹ ಕರಾಳ ಕ್ರಮಕ್ಕೆ ಇಳಿದಿದೆ ಎನ್ನಲಾಗುತ್ತಿದೆ.

ಅಚ್ಚೇ ದಿನ್‌ಗಳ 19 ಸ್ಕೀಮ್‌ಗಳು ಹಿಂದಿನ ದಿನಗಳ ಹೆಸರು ಬದಲಿಸಿದ ಸ್ಕೀಮುಗಳಷ್ಟೇ

ಪದಗಳ ಕಸರತ್ತು ಅಚ್ಚೇ ದಿನ್‌ಗಳ ಒಂದು ಎದ್ದು ಕಾಣುವ ಅಂಶ. ಇದು ಈ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿಗಳು ಪ್ರಕಟಿಸಿರುವ 23 ಸ್ಕೀಮುಗಳು ಯುಪಿಎ ಸರಕಾರದ ಸ್ಕೀಮುಗಳೇ, ಅಬ್ಬರದ ಹೆಸರುಗಳಷ್ಟೇ ಅವುಗಳಲ್ಲಿನ ಹೊಸತನ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜೀ ಯುಪಿಎ ಮಂತ್ರಿ ಶಶಿ ತರೂರ್ ಹೇಳಿದ್ದರು.

ಇದನ್ನು ಪರೀಕ್ಷಿಸಲು ಹೊರಟ ಫ್ಯಾಕ್ಟ್‌ಚೆಕ್.ಇನ್ ವೆಬ್ ತಾಣದ ಸಿಬ್ಬಂದಿಯ ಪ್ರಕಾರ ಇವುಗಳಲ್ಲಿ 19 ಸ್ಕೀಮುಗಳ ವಿಷಯದಲ್ಲಿ ೧೯ರಲ್ಲಿ ಅವರು ಹೇಳಿದ್ದು ನಿಜ. ಕೆಲವು ಸ್ಕೀಮುಗಳ ಹೆಸರು ಮಾತ್ರ ಬದಲಾಗಿದ್ದರೆ, ಇನ್ನು ಕೆಲವುಗಳಲ್ಲಿ ಹೆಸರು ಬದಲಾವಣೆಯೊಂದಿಗೆ ಕೆಲವು ಹೆಚ್ಚಿನ ಸೌಲಭ್ಯಗಳನ್ನು ಕಾಲಕ್ಕೆ ಅನುಗುಣವಾಗಿ ಸೇರಿಸಲಾಗಿದೆಯಷ್ಟೇ.

ಉಳಿದವುಗಳಲ್ಲಿ ಎರಡರ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ಆ ವಿಷಯದ ಸ್ಕೀಮುಗಳಿದ್ದರೂ ಭಿನ್ನವಾಗಿದ್ದಂತೆ ಕಾಣುತ್ತದೆ. ಇನ್ನೆರಡಲ್ಲಿ ಒಂದು ಹಿಂದಿನ ಎನ್‌ಡಿಎ ಸರಕಾರ ತಂದ ಯೋಜನೆಯಾದರೆ, ಮತ್ತೊಂದು ಈ ಸರಕಾರವೇ ತಂದ ಸ್ಕೀಮು.

 

 

- ವೇದರಾಜ ಎನ್ ಕೆ.