ಬಳ್ಳಾರಿಯಲ್ಲಿ ಫ್ಯಾಸಿಸ್ಟ್ ವಿರೋಧಿ ಸಮಾವೇಶ

ಸಂಪುಟ: 
11
ಸಂಚಿಕೆ: 
28
Sunday, 2 July 2017

(ಬಳ್ಳಾರಿಯಲ್ಲಿ ಜೂನ್ ೧೮ ರಂದು ನಡೆದ ಪ್ರಗತಿಪರ ಲೇಖಕರ ಮಾಧ್ಯಮ ಮಿತ್ರರ ಹಾಗೂ ನಾನಾ ಸಂಘಟನೆಗಳ ಕಾರ್ಯಕರ್ತರ ಫ್ಯಾಸಿಸ್ಟ್ ವಿರೋಧಿ ಸಮಾವೇಶದ ವರದಿ)

ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಪ್ರಗತಿಪರ ಲೇಖಕರು, ಮಾಧ್ಯಮ ಮಿತ್ರರು ಹಾಗೂ ನಾನಾ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಜೂನ್ ೧೮ ರಂದು ಹಮ್ಮಿಕೊಂಡಿದ್ದ ಫ್ಯಾಸಿಸ್ಟ್ ವಿರೋಧಿ ಸಮಾವೇಶಕ್ಕೆ ಉತ್ತಮ ಸ್ಪಂಧನೆ ದೊರೆತಿದೆ.

ಗಣಿ ಉದ್ದಿಮೆಯ ಜಂಜಾಟಕ್ಕೆ ಸಿಲುಕಿರುವ ಗಣಿ ನಗರದಲ್ಲಿ ಇಂಥಹ ಚಿಂತನೆಗಳು ನಡೆಯುವುದೇ ಅಪರೂಪ. ಸಮಾವೇಶದಲ್ಲಿ ಸಂಘಟಕರು ನೀರೀಕ್ಷಿಸಿದಂತೆ ಸುಮಾರು ೨೪೬ ಪ್ರತಿನಿಧಿಗಳು ಪಾಲ್ಗೊಂಡು ದೇಶ ಎದುರಿಸುತ್ತಿರುವ ಕೋಮುವಾದದ ಬಗ್ಗೆ ಗಂಭಿರ ಚಿಂತನೆ ನಡೆಸಿದ್ದು ಉತ್ತಮ ಲಕ್ಷಣವಾಗಿದೆ.

ಪ್ರಾರಂಭದಲ್ಲಿ ಸಮಾಜ ವಿಜ್ಞಾನ ವೇದಿಕೆಯ ಪಿಆರ್.ವೆಂಕಟೇಶ್, ಪ್ರಾಸ್ತಾವಿಕವಾಗಿ ಮಾತನಾಡಿ,  ದೇಶದಲ್ಲಿ ಜನಪರ ಚಿಂತನೆಗೆ ಕಡಿವಾಣ ಹಾಕಲು ಹಾಗೂ ಹಲ್ಲೆ ನಡೆಸುತ್ತಿದೆ, ಚಿಂತನೆಗಳನ್ನು ಕೊಲ್ಲಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜನ ಪರ ಚಿಂತಕರಾದ ಪಾನ್ಸಾರೆ, ಎಂಎಂ. ಕಲುಬುರ್ಗಿ ಮತ್ತು ದಾಬೋಲ್ಕರ್‌ರವರ ಹತ್ಯೆ ನಡೆದಿದೆ. ಗೋ ಹತ್ಯೆ ನಿಷೇಧ ಕಾಯ್ದೆ, ಜನ ಸಾಮಾನ್ಯರ ಆಹಾರದ ಹಕ್ಕಿಗೆ ಹಾಗೂ ಚರ್ಮ ಕೆಲಸದ ಮೂಲಕ ಬದುಕು ಕಟ್ಟಿಕೊಳ್ಳುವ ಬಡವರ ಪಾಲಿಗೆ ಇದು ಮರಣ ಶಾಸನವಾಗಿದೆ ಪರಿಣಮಿಸಿದೆ. ಎಲ್ಲರೂ   ಭಯದಲ್ಲಿ ಬದುಕು ಕಳವಳ ದೇಶವನ್ನು ಕಾಡಿದೆ. 

ಇಂಥಹ ಪರಿಸ್ತಿತಿಯಲ್ಲಿ ಲೇಖಕರ ಬರಹದ ದಾರಿ ಯಾವುದಿರಬೇಕೆಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ಆದರೆ ಕೆಲವರು ನಾನು ಎಡವೂ ಅಲ್ಲ ಬಲವೂ ಅಲ್ಲ ಎಂಬ ಅಪ್ರಮಾಣಿಕ ವಾಸ್ತವವಾದಿಗಳು ಎಂಬ ಎಡಬಿಡಂಗಿ ಹೇಳಿಕೆ ನೀಡುವ ಮೂಲಕ ಬರಹಗಾರರ ದಿಕ್ಕನ್ನು ಊನಗೊಳಿಸಲು ಹವಣಿಕೆ ನಡೆಸಿದ್ದಾರೆ. ಇದು ಇಡೀ ಸಾಹಿತ್ಯದ ಒಟ್ಟು ಮೌಲ್ಯಕ್ಕೆ ದಕ್ಕೆ ತರುವ ನೀತಿಯಾಗಿದೆ ಎಂದರು.

ಈಗ ಕೋಮು ಮತ್ತು ಸರ್ವಾಧಿಕಾರ ಜೊತೆಗೂಡಿದ ಆಡಳಿತ ಅಸ್ಥಿತ್ವಕ್ಕೆ ಬಂದಿದ್ದು, ಹಿಂದಿಗಿಂತಲೂ ಕ್ರೂರ ಸನ್ನಿವೇಶಗಳನ್ನು ಬರಹಗಾರರು ಎದುರಿಸ ಬೇಕಾಗಿದೆ. ಇಂಥಹ ಸಂದರ್ಭದಲ್ಲಿ ಜೈವಿಕ ಹಾಗೂ  ಸಾಂಸ್ಕೃತಿಕ ಸನ್ನಿವೇಶವನ್ನು ರೂಪಿಸಲು  ಲೇಖಕರು ಮಾಧ್ಯಮ  ಮಿತ್ರರು ಮತ್ತು ಪ್ರಗತಿಪರ ಸಂಘಟನೆ ಕಾರ್ಯಕರ್ತರು ಶ್ರಮಿಸಬೇಕಿದೆ. ಸಮಾವೇಶವು ಇಂಥಹ ಗಂಭಿರ ಚಿಂತನೆಯ ಸುದುದ್ದೇಶ ಹೊಂದಿದೆ ಎಂದರು. 

ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ವಿಜ್ಙಾನಿ ಹಾಗೂ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ ಎನ್ ನಾಗರಾಜ್ ಮಾತನಾಡಿ, ಪ್ರಜಾಪ್ರಭುತ್ವವನ್ನು ನಾಶಗೊಳಿಸುವುದು, ಪ್ರಜಾಸತ್ತಾತ್ಮಕ ಅಂಗಗಳನ್ನು, ಸಂಸ್ಥೆಗಳನ್ನು ನಾಶಗೊಳಿಸಿ ದೇಶದ ಎಲ್ಲ ಅಂಗಗಳನ್ನೂ ಆವರಿಸುವ ಸರ್ವಾಧಿಕಾರಿ ವ್ಯವಸ್ಥೆಯೇ ಫ್ಯಾಸಿಸಂ ಎಂದರು.

ಇಂತಹ ಬಾಹುಗಳು ದೇಶದ ಎಲ್ಲಾ ಅಂಗಗಳೂ ಸೇರಿದಂತೆ ಸಂವಿಧಾನವನ್ನು ಆವರಿಸಿ ಅವುಗಳ ಮೇಲೆ ಕ್ರೂರ ಹಾಗೂ ನಗ್ನ ದಬ್ಬಾಳಿಕೆ ಪ್ರಾರಂಭಗೊಂಡಿದೆ. ಈ ಸ್ವರೂಪವೇ ಫ್ಯಾಸಿಸಂನ ಲಕ್ಷಣ ವಾಗಿದೆ. ಜಗತ್ತಿನ ಇತಿಹಾಸಕ್ಕೆ ಈ ಸ್ಥಿತಿ ಹೊಸದೇನಲ್ಲ. ಮೊದಲು ಇಟಲಿ, ಜರ್ಮನಿಯಲ್ಲಿ ಕಾಣಿಸಿಕೊಂಡಿತ್ತು. ಕೋಮುವಾದದ ಸಖ್ಯದೊಂದಿಗಿನ ಕಾರ್ಪೋರೇಟ್ ಸಂಸ್ಥೆಯ ಸರ್ಕಾರಗಳ ಮೂಲಕ ಜಾರಿಗೆ ತಂದ ಆರ್ಥಿಕ ನೀತಿಗಳಿಂದ ಜನರು ರೊಚ್ಚಿಗೇಳುವ ಸಂದರ್ಭದಲ್ಲಿ ಫ್ಯಾಸಿಸಂ ಅನ್ನು ಹೇರಲಾಗುತ್ತಿದೆ.

ಧರ್ಮ ಮತ್ತು ಜಾತಿಯ ಅಧಾರದಲ್ಲಿ ಜನರನ್ನು ವಿಭಜಿಸಿ ಅಧಿಕಾರದ ಚುಕ್ಕಾಣೆ ಹಿಡಿದ ಬಿಜೆಪಿ,  ಜರ್ಮನಿಯ ಹಿಟ್ಲರ್‌ನಂತೆ  ಜ್ಯೂಗಳ ವಿರುದ್ಧ ಅಲ್ಲಿನ ಜನರನ್ನು ಎತ್ತಿ ಕಟ್ಟಿದಂತೆ ಭಾರತದಲ್ಲೂ ಮುಸ್ಲಿಮರ ವಿರುದ್ಧ, ದಲಿತರ ವಿರುದ್ಧ. ಸಮತಾವಾದಿಗಳ ವಿರುದ್ಧ, ಸಂಘಟಿತ ಹಿಂದೂ ಕೋಮುವಾದಿಗಳ ಸಾಮೂಹಿಕ ದಂಗೆಯನ್ನು ಎತ್ತಿ ಕಟ್ಟಲಾಗುತ್ತಿದೆ. ಕೋಮುವಾದವನ್ನೇ ಅಸ್ತ್ರವಾಗಿಸಿಕೊಂಡು ಜನರ ನಡುವೆ ಸಂಘರ್ಷ ಹುಟ್ಟು ಹಾಕುವ ಮೂಲಕ ತಮ್ಮ ಅನೀತಿಯ ವಿರುದ್ಧ ಭುಗಿಳೇಳುವ ಜನವಿರೋಧದ ದಿಕ್ಕನ್ನು ದಿಕ್ಕೆಡಿಸಲು ಮುಂದಾಗಿದ್ಧಾರೆ. ಎಂದರು.

ಕಾರ್ಪೋರೇಟ್ ಶಕ್ತಿಗಳ ಸಹಾಯದಿಂದ ಅಧಿಕಾರಕ್ಕೆ ಬಂದ ಸರ್ಕಾರ ಒಂದು ಕಡೆ ಕಾರ್ಪೋರೇಟ್ ಶಕ್ತಿಗಳ ಹಿತ ಕಾಪಾಡುತ್ತಲೇ ತನ್ನ ನೀತಿಗಳನ್ನು ಸರ್ಕಾರದ ಮೂಲಕ ಜಾರಿಗೆ ತರುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ ಎಂದು ನಾಗರಾಜ್ ಆರೋಪಿಸಿದರು. ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಸಚಿವ ಸಂಪುಟದ ಉಪಸಮಿತಿಗಳನ್ನು ರದ್ದುಗೊಳಿಸಲಾಯಿತು, ಯೋಜನಾ ಆಯೋಗವನ್ನು ರದ್ದುಗೊಳಿಸಲಾಯಿತು ಇದರಿಂದಾಗಿ ರಾಜ್ಯ ಸರ್ಕಾರಗಳನ್ನು ಇಂದು ಕೇಂದ್ರವನ್ನು ಯಾವುದಕ್ಕೂ ಏನನ್ನೂ ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಹಿಂದೆ ಯಾವುದೇ ಗೋರಕ್ಷಣೆಯ ಹಿತಾಸಕ್ತಿ ಇಲ್ಲ ಬದಲಾಗಿ, ಬೃಹತ್ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡುವ ಉದ್ಯಮಿಗಳ ಹಿತ ಕಾಯುತ್ತಲೇ ಭಾರತದ ಗ್ರಾಮೀಣ ಪ್ರದೇಶವನ್ನು ಕೋಮುವಾದೀಕರಣಗೊಳಿಸುವ, ದೇಶದ ಎಲ್ಲ ದನದ ಜಾತ್ರೆಗಳನು ಗಲಾಟೆಯ ಸ್ಥಳಗಳನ್ನಾಗಿ ಮಾರ್ಪಡಿಸುವ ಹುನ್ನಾರ ಇದೆ ಎಂದರು.

ಗೋಷ್ಠಿಗಳು :

ಭಾರತದ ಸಂಸ್ಕೃತಿಯಲ್ಲಿ ಕೋಮು ವಿರೋಧಿ ನೆಲೆಗಳು

ಹಂಪಿ ಕನ್ನಡ ವಿವಿಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ರಹಮತ್ ತರೀಕೆರೆ ಮಾತನಾಡಿ, ನಮಗೆಲ್ಲ ಕೂಡಿ ಬದುಕಬೇಕೆಂಬ ಆಲೋಚನೆ ಇದೆ, ಹೀಗಾಗಿ ಈ ಸಾಮರಸ್ಯವನ್ನು ಕಾಪಾಡಲು ನಾವೆಲ್ಲ ಶ್ರಮಿಸಬೇಕಿದೆ, ಕೇವಲ ಕೋಮುವಾದದ ವಿರೋಧ ಎಂದರೆ ಸಾಮರಸ್ಯದಿಂದ ಬದುಕುತ್ತಿರುವುದು ಅದರೆ ಬಗ್ಗೆ ಸದಾ ಮಾತಾಡುವುದು, ವಿಚಾರವನ್ನು ಬೆಳೆಸುವುದೇ ಪರ್ಯಾಯವಾಗಿದೆ ಎಂದರು.    

ಭಾರತದಲ್ಲಿ ಇರುವಷ್ಟು ಸಾಂಸ್ಕೃತಿಕ ವೈವಿಧ್ಯತೆ ಬೇರೆಲ್ಲೂ ಇಲ್ಲ. ಹಿಂದಿಯನ್ನು ನಾವು ಏಕರೂಪಿ ಭಾಷೆ ಎನ್ನುತ್ತೇವೆ ಆದರೆ ಅದನ್ನು ಹಲವು ರೀತಿಯಲ್ಲಿ ಬಳಸುವ ಜನ ಭಾರತದಲ್ಲಿದ್ದಾರೆ. ಭಾಷೆಯ ಬಳಕೆಯಲ್ಲೂ ಕೂಡ ಬಹುತ್ವವನ್ನು ಮತ್ತು ಬಹುತ್ವದಲ್ಲಿ ಏಕತೆಯನ್ನು ಗುರುತಿಸಬಹುದು ಎಂದರು.

ಭಾರತದ ಸಂಸ್ಕೃತಿ ಬಹುತ್ವದ ಸಂಸ್ಕೃತಿ, ಅದು ಸಾಕಷ್ಟು ವೈವಿದೈತೆಯನ್ನು ಒಳಗೊಂಡಿದೆ. ಕರ್ನಾಟಕವನ್ನೇ ಉದಾಹರಿಸುವುದಾದರೆ ಇಲ್ಲಿ ರಾಗಿಮುದ್ದೆಯಂತೆ ಸಾಕಷ್ಟು ರೀತಿಯ ಆಹಾರ ವೈವಿಧ್ಯಗಳಿವೆ ಎಂದರು.

ದೇಶ ಎಂದೂ ಒಂದೇ ಸಂಸ್ಕೃತಿ, ಒಂದೇ ಧರ್ಮದ ಬೀಡಾಗಿರಲಿಲ್ಲ. ದೇಶವನ್ನು ಕಟ್ಟುವವರು ಮೊದಲು ದೇಶವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಈ ದೇಶದ ಗುರು ಪಂಥ ಹಾಗೂ ಸೂಫಿಸಂ ಈ ದೇಶದ ಆರೋಗ್ಯವನ್ನು ಕಾಪಾಡಿದೆ, ಮಾತ್ರವಲ್ಲ ಜಾತ್ಯಾತೀತತೆಯನ್ನು ಬೋಧಿಸಿದೆ. ಜಾತ್ಯಾತೀತ ಎಂಬ ಪದವನ್ನು ನಾವು ಇತ್ತೀಚೆಗೆ ಕಂಡುಕೊಂಡಿದ್ದೇವೆ ಅಷ್ಟೆ. ಆದರೆ ಅದನ್ನು ಬಾಳಿ ಬದುಕಿದ ಜನ ಭಾರತದ ಜನ. ಕೋಟ್ಯಾಂತರ ಜನ ಜಾತ್ಯಾತೀತತೆಯನ್ನು ಸೌಹಾರ್ದತೆಯನ್ನು ದಿನನಿತ್ಯ ಬದುಕುತ್ತಿದ್ದಾರೆ. ಆದರೆ ಸಂವಿಧಾನದ ಆಶಯ ಕಾಪಾಡುವವರು ಅದನ್ನು ಹಾಳುಗೆಡವುವದನ್ನು ಕಾಣುತ್ತಿದ್ದೇವೆ, ಸಾಮಾನ್ಯ ಜನರಿಂದಲೇ ಜಾತ್ಯಾತೀತತೆ ಉಳಿದಿದೆ ಎಂದು ತರೀಕೆರೆ ಅಭಿಪ್ರಾಯಪಟ್ಟರು.

ಭಾರತದ ಸಂಗೀತ ಕ್ಷೇತ್ರ ಬಹುತ್ವವನ್ನು ಒಳಗೊಂಡ ಕ್ಷೇತ್ರ. ನಮ್ಮ ಹಾಡುಗಾರರು ಧರ್ಮದ ಎಲ್ಲೆಯನ್ನು ಮೀರಿ ಹಾಡಿದರು. ಅಮೀರ್ ಖುಸ್ರೋ ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಭಾರತದ ಘರಾನಾಗಳ ಪರಂಪರೆಯ ಇತಿಹಾಸ ತೆಗೆದು ನೋಡಿದರೆ ಅಲ್ಲಿ ಹಿಂದೂ ಮುಸ್ಲಿಂ ಹಿನ್ನೆಲೆಯ ಗುರು ಶಿಷ್ಯ ಪರಂಪರೆಯನ್ನು ಕಾಣುತ್ತೇವೆ. ಧರ್ಮದ ಮಿತಿ ಮೀರಿದರೆ  ದೊಡ್ಡ ಸಾಹಿತಿಯಾಗಲು ಸಾಧ್ಯವೇ ಇಲ್ಲ. ರಾಮನ ಬಗ್ಗೆ ಇಕ್ಬಾಲ್ ಬರೆದದ್ದು ಇದಕ್ಕೆ ಉದಾಹರಣೆ. ಆದರೆ ಇಕ್ಬಾಲ್ ಬರೆದ ರಾಮ ಈಗಿನ ಬಿಲ್ಲು ಬಾಣ ಹಿಡಿದು ನಿಂತ ರಾಮನಲ್ಲ, ಆ ರಾಮ ಮಾನವೀಯ ನೆಲೆಯ ರಾಮ ಎಂದರು. ಈಗ ಎಲ್ಲ ಧರ್ಮದವರಲ್ಲೂ ಪಾವಿತ್ರತೆಯ ಹುಚ್ಚು ಕಾಣುತ್ತಿದೆ. ಭಾರತದ ಸಂಸ್ಕೃತಿ ಅದು ಮಿಶ್ರ ಸಂಸ್ಕೃತಿ, ಅದರಲ್ಲಿ ಎಲ್ಲವೂ ಅಡವಾಗಿವೆ. ದುರಂತವೆಂದರೆ ಮೂಲಭೂತವಾದದತ್ತ ಎಲ್ಲ ಧರ್ಮಗಳು ಸಾಗುತ್ತಿರುವುದು ಅಪಾಯದ ಸಂಗತಿಯಾಗಿದೆ ಎಂದರು.
 
ಕೋಮುವಾದ ಮತ್ತು ಸಾಂಸ್ಕೃತಿಕ ಅಪಾಯಗಳು

ಮಹಿಳಾ ಹೋರಾಟಗಾರರಾದ ಸಿರಿಮನೆ ಮಲ್ಲಿಗೆ ಮಾತನಾಡಿ, ಭಾರತ ದೇಶದಲ್ಲಿ ಕೋಮುವಾದದ ಹಿನ್ನಲೆಯಲ್ಲಿ ನಡೆದ ಬಾಂಗ್ಲ, ಪಾಕಿಸ್ಥಾನ ವಿಭಜನೆಯ ಸಂದರ್ಭದಲ್ಲಿ ಉಂಟಾದ ಸಾಂಸ್ಕೃತಿಕ ಅಪಾಯಗಳನ್ನು ವಿವರಿಸಿದರು.

ನಂತರ ಬಾಬರಿ ಮಸೀದಿ ಧ್ವಂಸ ಹಾಗೂ ಗುಜರಾತ್ ಗಲಭೆಗಳ ನರಕ ದೃಶ್ಯವನ್ನು ಸಭಿಕರಿಗೆ ಕಟ್ಟಿಕೊಟ್ಟರು. ಆ ಸಂದರ್ಭದಲ್ಲೆಲ್ಲ ಈ ದೇಶದ ಸಾಂಸ್ಕೃತಿಕ ವೈವಿಧ್ಯತೆ ಯಾವ ದಾಳಿಯಿಂದಲೂ ನಾಶವಾಗದು ಎಂಬ ಆಶಾವಾದ ದೇಶದ ಪ್ರಗತಿಪರ ಚಿಂತಕರದ್ದಾಗಿತ್ತು. ಆದರೆ ಅದೀಗ ಇಡೀ ದೇಶವನ್ನೇ ವ್ಯಾಪಿಸಿರುವುದನ್ನು ನಾವೆಲ್ಲ ಆತಂಕದಿಂದ ನೋಡುವಂತಾಗಿದೆ ಎಂದರು. 

ಮೊದಲು ನಿರ್ದಿಷ್ಟ ಪ್ರದೇಶ ನಿರ್ದಿಷ್ಟ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿತ್ತು. ಆದರೆ ಅದು ಈಗ ಇಡೀ ದೇಶವನ್ನು ವ್ಯಾಪಿಸಿದೆ ಏಕರೂಪಿ ಸಂಸ್ಕೃತಿಯನ್ನು ಬಹುತ್ವದ ಸಂಸ್ಕೃತಿಯ ಮೇಲೆ ಒತ್ತಾಯವಾಗಿ ಹೇರಲಾಗುತ್ತಿದೆ. ಒಂದು ವೇಳೆ ಅಂತಹ ಏಕರೂಪಿ ಸಂಸ್ಕೃತಿಯ ವಿರುದ್ಧ ಮಾತನಾಡಿದರೆ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶೇಷವಾಗಿ ಮಹಿಳೆಯ ವಿಚಾರದಲ್ಲಿ ಕೂಡ ಏಕರೂಪಿ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ. ಅತ್ಯಾಚಾರ ನಡೆದರೆ ಆಕೆ ಹಾಕುವ ಬಟ್ಟೆಗಳೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಹೆಣ್ಣೆಂದರೆ ಸಂಸ್ಕೃತಿಯ ಪ್ರತೀಕ ಎನ್ನುವ ಜನರೇ ಮುಸ್ಲಿಂ ಯುವತಿಯರು ಬುರ್ಖಾ ಧರಿಸಿ ಕಾಲೇಜುಗಳಿಗೆ ಬಂದರೆ ಅದನ್ನು ವಿರೋಧಿಸುವ ಮೂಲಕ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಪ್ರಯತ್ನಗಳು ನಡೆದಿವೆ.

ದೃಶ್ಯ ಮಾಧ್ಯಮಗಳ ಮೂಲಕ ಕೂಡ ಏಕರೂಪಿ ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಿರಾತಂಕವಾಗಿ ಸಾಗಿದ್ದು, ಇಂದು ಎಲ್ಲರೂ ಗೃಹಪ್ರವೇಶಗಳಿಗೆ ಹಸುವನ್ನು ನುಗ್ಗಿಸಿಯೇ ಗೃಹಪ್ರವೇಶ ಮಾಡುವ ಆಚರಣೆ ರೂಢಿಯಾಗುತ್ತಿದೆ. ದೀಪಾವಳಿಯಂತಹ ಹಬ್ಬಗಳನ್ನು ಟಿವಿಯಲ್ಲಿ ಕೂತ ಜ್ಯೋತಿಷಿಗಳ ಮೂಲಕ ಏಕಸಂಸ್ಕೃತಿಯ ಆಚರಣೆ ಮಾಡುವಂತೆ ಹುರಿದುಂಬಿಸುವಂತಹ ಪ್ರಯತ್ನ ಸಾಗಿದೆ. ಜ್ಯೋತಿಷ್ಯ ವಾಸ್ತುಗಳ ಮೂಲಕ ಮಹಿಳೆಯರು ಮೌಢ್ಯದತ್ತ ಸಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಗಳಿಗೆ ಸತ್ಯಬಾಬು, ಮಾಳಮ್ಮ, ಜಂಬಯ್ಯ ನಾಯಕ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ವಕೀಲರಾದ ಕೋಟೇಶ್ವರ್‌ರಾವ್, ಮಲ್ಲಿಕಾರ್ಜುನ ರೆಡ್ಡಿ, ಪತ್ರಕರ್ತ ಯಾಳ್ಪ ವಲೀಭಾಷಾ, ಎಚ್.ಅಂಜಿನಪ್ಪ, ಕವಿಯತ್ರಿ ಈರಮ್ಮ, ಕರುಣಾನಿಧಿ, ವಂಸತ ಕಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಾವೇಶವನ್ನು ಸಮಾಜನ ವಿಜ್ಙನ ವೇದಿಕೆ. ಟಿಪ್ಪು ಸುಲ್ತಾನ ಅಭಿಮಾನಿಗಳ ವೇದಿಕೆ. ಡಿಎಸ್‌ಎಸ್ (ಸಾಗರ ಬಣ), ಯುವ ಜಾಗೃತಿ ವೇದಿಕೆ. ಭಾರತ ವಿದ್ಯಾರ್ಥಿ ಫೇಡರೇಷನ್, ಸಮುದಾಯ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದವು.

 

 

ವರದಿ: ಪಿ.ಆರ್. ವೆಂಕಟೇಶ್, ಬಳ್ಳಾರಿ