ಟ್ರಂಪ್ ನಾಡಿನಲ್ಲಿ ಮೋದಿ ಅದೇ ಅಡಿಯಾಳು ಪಾತ್ರ

ಸಂಪುಟ: 
28
ಸಂಚಿಕೆ: 
11
date: 
Sunday, 2 July 2017
Image: 

ಪ್ರಕಾಶ ಕಾರಟ್

ಮೋದಿಯವರು ಮೂರು ಬಾರಿ ಟ್ರಂಪ್ ಅವರನ್ನು ಅಪ್ಪಿಕೊಳ್ಳುವ ಡಾಂಭಿಕ ಪ್ರಯತ್ನUಳನ್ನು ನಡೆಸಿದರೂ, ಭೇಟಿಯ ಕೊನೆಯಲ್ಲಿ ಪ್ರಕಟಿಸಿದ ಜಂಟಿ ಹೇಳಿಕೆ ಮಾತ್ರ ಅಮೆರಿಕದ ಕಾಳಜಿಗಳಿಗೇ ಆದ್ಯತೆ ನೀಡಿ ಭಾರತದ ಹಿತಗಳನ್ನು ಬುದ್ಧಿ ಪೂರ್ವಕವಾಗಿ ಉಪೇಕ್ಷಿಸಿರುವುದನ್ನು ತೋರಿಸುತ್ತದೆ. ಇದೇನೂ ಅನಿರೀಕ್ಷಿತವಲ್ಲ. ಆದರೆ ಮೋದಿ ಸರಕಾರಕ್ಕೆ ಇತರ ದೇಶಗಳ ಮೇಲೆ ದಾಳಿ ಮಾಡಲು ತನ್ನ ಪ್ರದೇಶವನ್ನು ಬಳಸಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಖಾತರಿಪಡಿಸಬೇಕು ಎಂದು ತಾಕೀತು ಮಾಡಿರುವುದೇ ಬಡಾಯಿಯ ಸಂಗತಿ.

ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಐದನೇ ಭೇಟಿ ಹಾಗೂ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಮೊದಲ ಅಧಿಕೃತ ಭೇಟಿಯು ಭಾರತ-ಅಮೆರಿಕ ವ್ಯೂಹಾತ್ಮಕ ಸಂಬಂಧದಲ್ಲಿ ಭಾರತದ ಅಧೀನ ಪಾತ್ರವನ್ನು ದೃಢಪಡಿಸಿದೆ.

ಶ್ವೇತಭವನಕ್ಕೆ ಮೋದಿ ಭೇಟಿಯನ್ನು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕೆಲವು ಅನುಮಾನಗಳೊಂದಿಗೆ ನೋಡಲಾಗುತ್ತಿತ್ತು. ಟ್ರಂಪ್ ಅನೇಕ ವಿಚಾರಗಳಲ್ಲಿ ಭಾರತದ ಹಿತಾಸಕ್ತಿಗಳ ಮೇಲೆ ಪ್ರತಿಕೂಲ  ಪರಿಣಾಮ ಉಂಟುಮಾಡುವಂಥ ಮುಂದೇನಾಗಬಹುದು ಎಂದು ಊಹಿಸಲಾಗದ ಮತ್ತು ನಕಾರಾತ್ಮಕ ಧೋರಣೆಗಳನ್ನು ತಳೆದಿದ್ದೇ ಇಂಥ ಸಂಶಯಗಳು ಮೂಡಲು ಕಾರಣ. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದ ಕುರಿತು ಭಾರತದ ನಿಲವಿನ ಬಗ್ಗೆ ಟ್ರಂಪ್ ಟೀಕೆ, ಎಚ್೧ ಬಿ ವೀಸಾ ಮೇಲಿನ ನಿರ್ಬಂಧ ಮತ್ತು ಭಾರತದಂಥ ದೇಶಗಳಿಗೆ ಅಮೆರಿಕದಿಂದ ಉದ್ಯೋಗಗಳ ರಫ್ತಿಗೆ ನಿಷೇಧ ಹೇರಲು ಒತ್ತು ನೀಡಿರುವುದು ಇವೇ ಮೊದಲಾದ ಮಗ್ಗುಲ ಮುಳ್ಳುಗಳನ್ನು ತಪ್ಪಿಸಬೇಕಾಗಿತ್ತು.

ಇಂತಹ ಸನ್ನಿವೇಶದಲ್ಲಿ ಅಮೆರಿಕಾದ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡಲು ಎಷ್ಟು ಬೇಕಾದರೂ ಮಣಿಯುವ ಧೋರಣೆಯನ್ನು ಮೋದಿ ಸರಕಾರ ತಳೆದಿದೆ. ಅಮೆರಿಕ ಭೇಟಿಯ ಕೊನೆಯಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಇದರ ಛಾಯೆ ದಟ್ಟವಾಗಿದೆ.

ರಕ್ಷಣೆ ಮತ್ತು ಭದ್ರತೆ ಸಹಕಾರವನ್ನು ಇನ್ನೂ ಆಳಗೊಳಿಸಲು ಪ್ರತಿಜ್ಞೆ ಮಾಡಲಾಗಿದೆ. ಭಾರತಕ್ಕೆ ಹೆಚ್ಚು ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡುವುದು ಭಾರತ-ಅಮೆರಿಕ ಮಿಲಿಟರಿ ಸಹಯೋಗದ ಒಂದು ಪ್ರಮುಖ ಗುರಿ. ಸಹಜವಾಗಿಯೇ ಇದು ಅಮೆರಿಕದ ಹಿತಾಸಕ್ತಿ. ಇದಕ್ಕೆ ಅನುಗುಣವಾಗಿ  ಜಂಟಿ ಹೇಳಿಕೆ ಸಾಗರ ರಕ್ಷಕ ಮಾನವರಹಿತ ವೈಮಾನಿಕ ವ್ಯವಸ್ಥೆಯಾದ ವೈಮಾನಿಕ ಡ್ರೋನ್‌ಗಳನ್ನು ಎರಡು ಬಿಲಿಯ ಡಾಲರ್ ವೆಚ್ಚದಲ್ಲಿ ಭಾರತ ಖರೀದಿಸಲಿದೆ ಎಂದು ಘೋಷಿಸಿದೆ.

ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿ ಪ್ರಮಾಣ ಹೆಚ್ಚಳಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಕಂಪೆನಿಗಳು ಮತ್ತು ಭಾರತದ ಖಾಸಗಿ ಕಂಪೆನಿಗಳ ನಡುವಿನ ಜಂಟಿ ಉದ್ದಿಮೆಗಳು ಇನ್ನಷ್ಟು ಪುಷ್ಟಿ ನೀಡುತ್ತವೆ. ಅಮೆರಿಕದ ಅತಿ ದೊಡ್ಡ ಶಸ್ತ್ರಾಸ್ತ್ರ ತಯಾರಿಕೆ ಕಂಪೆನಿಯಾದ ಲಾಕ್‌ಹೀಡ್ ಮಾರ್ಟಿನ್, ಭಾರತದಲ್ಲಿ ಎಫ್ ೧೬ ಫೈಟರ್ ಯುದ್ಧ ವಿಮಾನಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿ ಟಾಟಾ ಗುಂಪಿನ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂಬರುವ ಜುಲೈ ತಿಂಗಳ ಮಲಬಾರ್ ಜಂಟಿ ನೌಕಾ ಪಡೆ ಕವಾಯತಿನ ಬಗ್ಗೆಯೂ ಜಂಟಿ ಘೋಷಣೆಯಲ್ಲಿ ಪ್ರಸ್ತಾವಿಸಲಾಗಿದೆ. ಈ ಕವಾಯತಿನಲ್ಲಿ ಭರತ ಮತ್ತು ಅಮೆರಿಕದ ನೌಕೆಗಳಲ್ಲದೆ ಜಪಾನ್ ನೌಕಾಪಡೆಯ ನೌಕೆಗಳೂ ಭಾಗವಹಿಸಲಿವೆ.

ಹಿಂದೂ ಮಹಾಸಾಗರ ಮತ್ತು ಶಾಂತ ಸಾಗರ ವಲಯದಲ್ಲಿ ಅಮೆರಿPಕ್ಕೆ ಬೆಂಬಲವಾಗಿ ವ್ಯೂಹಾತ್ಮಕ ಗುರಿಗಳನ್ನು ಈಗಾಗಲೇ ನಿಗದಿಪಡಿಸಲಾಗಿದ್ದು ಇದೀಗ ತಮ್ಮ ಸಹಭಾಗಿತ್ವವು ಏಷ್ಯಾ ಶಾಂತಸಾಗರ ವಲಯದಲ್ಲಿ ’ಜವಾಬ್ದಾರಿಯುತ ನಾಯಕತ್ವವಾಗಿದೆ’ ಎಂದು ಉಭಯ ನಾಯಕರು ವರ್ಣಿಸಿದ್ದಾರೆ. ಜಂಟಿ ಹೇಳಿಕೆಯು ದಕ್ಷಿಣ ಚೀನಾ ಸಮುದ್ರ ಕುರಿತಂತೆ  ’ಈ ಪ್ರದೇಶದಾದ್ಯಂತ ನೌಕೆಗಳ ಸಂಚಾರ, ವಿಮಾನ ಹಾರಾಟ  ಮತ್ತು ವಾಣಿಜ್ಯದ ಸ್ವಾತಂತ್ರ್ಯವನ್ನು ಗೌರವಿಸುವುದು ಅಗತ್ಯ’ ಎಂಬ ಧೋರಣೆಯನ್ನು ಪುನರುಚ್ಚರಿಸಿದೆ.ಈ ಮೂಲಕ ಚೀನಾದ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ತಾನು ಸಿದ್ಧ ಎಂದು ಮೋದಿ ಹಸಿರು ನಿಶಾನೆ ತೋರಿಸಿದಂತಾಗಿದೆ.

ಡಿಪಿಆರ್‌ಕೆ (ಅಂದರೆ ಉತ್ತರ ಕೊರಿಯಾ)ಯ ಮುಂದುವರಿದ ಪ್ರಚೋದನೆಗಳನ್ನು ಜಂಟಿ ಹೇಳಿಕೆ ಖಂಡಿಸಿದ್ದು ಇದು ಉತ್ತರ ಕೊರಿಯಾ ಕುರಿತ ಪ್ರಸಕ್ತ ಟ್ರಂಪ್ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ’ಡಿಪಿಆರ್‌ಕೆಯ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಎದುರಿಸಲು ಒಟ್ಟಾಗಿ ಕಾರ್ಯನಿರ್ವಹಿಸಲು ಸಿದ್ಧ,’ ಈ ಕಾರ್ಯಕ್ರಮವನ್ನು ಬೆಂಬಲಿಸುವ ಎಲ್ಲರನ್ನೂ ಹೊಣೆ ಯಾಗಿಸಲೂ ಭಾರತ ಬದ್ಧ ಎಂಬುದಾಗಿ ಇದೇ ಮೊದಲ ಬಾರಿಗೆ ಹೇಳಲಾಗಿದೆ. ಡಿಪಿಆರ್‌ಕೆ ವಿರುದ್ಧ ಭಾರತ ಇಂಥ ಸಕ್ರಿಯ ನಿಲವು ತಳೆದಿದ್ದು ಇದೇ ಮೊದಲ ಸಲವಾಗಿದೆ.

ಅಮೆರಿಕದೊಳಗೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುವಂತೆ ನೋಡಿಕೊಳ್ಳಲು ಭಾರತ ಶ್ರಮಿಸುತ್ತದೆ ಎಂದು ಟ್ರಂಪ್‌ಗೆ ಭಾರೀ ಭರವಸೆ ನೀಡಲು ಮೋದಿಯವರು ಸರ್ವಪ್ರಯತ್ನ ಮಾಡಿರುವಂತೆ  ಕಾಣುತ್ತದೆ. ಬೋಯಿಂಗ್‌ನಿಂದ ೧೦೦ ಪ್ರಯಾಣಿಕ ವಿಮಾನಗಳನ್ನು ಖರೀದಿಸುವುದಾಗಿ ಭಾರತ ಘೋಷಿಸಿರುವುದನ್ನು ಟ್ರಂಪ್ ಸ್ವಾಗತಿಸಿದ್ದಾರೆ.

ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಇದು ನೆರವಾಗುತ್ತದೆ ಎಂದವರು ಹೇಳಿದ್ದಾರೆ. ಆರು ಪರಮಾಣು ಸ್ಥಾವರ ಸ್ಥಾಪನೆಗಾಗಿ ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಂಪೆನಿ ಮತ್ತು ಭಾರತೀಯ ಅಣುಶಕ್ತಿ ನಿಗಮ ನಡುವೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಜಂಟಿ ಹೇಳಿಕೆ ಪ್ರಸ್ತಾವಿಸಿದೆ. ವೆಸ್ಟಿಂಗ್‌ಹೌಸ್ ದಿವಾಳಿಯಾಗಿರುವುದಾಗಿ ಇತ್ತೀಚೆಗೆ ಘೋಷಿಸಿದೆ. ಪರಮಾಣು ಯೋಜನೆಯನ್ನು ನಿಜವಾಗಿಯೂ ಮುಂದುವರಿಸುವ ಬಗ್ಗೆ ವೆಸ್ಟಿಂಗ್‌ಹೌಸ್ ಮತ್ತು ಅದರ ಮಾಲಿಕ ತೋಷಿಬಾಗೇ ಖಾತರಿ ಇಲ್ಲದಿರುವ ಸಮಯದಲ್ಲಿ ಆ ಕಂಪನಿಯ ಪುನರುಜ್ಜೀವನಕ್ಕೆ ಭಾರತೀಯ ತೆರಿಗೆದಾರರ ಹಣವನ್ನು ಖರ್ಚು ಮಾಡಲು ಮೋದಿ ಸರಕಾರ ನಿರ್ಧರಿಸಿದೆ.

ಟ್ರಂಪ್ ಆಡಳಿತ ಹೇಗಾದರೂ ತನ್ನ ದೇಶದ ಮಾರುಕಟ್ಟೆಯನ್ನು  ಕಾಯ್ದುಕೊಳ್ಳುವ ನಿಲುವು ತಳೆದಿದ್ದರೂ ಜಂಟಿ ಹೇಳಿಕೆ ಮುಕ್ತ ಮತ್ತು ನ್ಯಾಯಸಮ್ಮತ ವಾಣಿಜ್ಯ ನೀತಿಗಳನ್ನು ರಕ್ಷಿಸುವ ಗೋಸುಂಬೆತನದ  ಮಾತುಗಳನ್ನು ಆಡಿದೆ. ಉಭಯ ದೇಶಗಳ ನಡವಿನ ವಾಣಿಜ್ಯ ಸಂಬಂಧಗಳ ಬಗೆಗೆ ಒಂದು ಸಮಗ್ರ ಪರಾಮರ್ಶೆ ನಡೆಸಬೇಕೆಂಬ ಪ್ರಸ್ತಾವನೆಯ ಹಿಂದೆ ಅಪಶಕುನದ ಛಾಯೆಯಿದೆ. ಭಾರತಕ್ಕೆ ಅಮೆರಿಕದ ವಸ್ತುಗಳನ್ನು ರಫ್ತು ಮಾಡುವುದಕ್ಕೆ ಇರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು ಮತ್ತು ವಾಣಿಜ್ಯ ಕೊರತೆಯನ್ನು ತಗ್ಗಿಸಬೇಕು ಎಂದು ಮಾತುಕತೆ ವೇಳೆ ಮೋದಿಗೆ ಟ್ರಂಪ್ ಹೇಳಿರುವ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕಾಗುತ್ತದೆ.

ತಂತ್ರಜ್ಞಾನ ಮತ್ತು ಸಂಶೋಧನೆಗಳ ರಕ್ಷಣೆಗೆ ಕ್ರಮಗಳು ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳ ಕಟ್ಟುನಿಟ್ಟಿನ ಅನ್ವಯ, ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತು ಸಿದ್ಧ ವಸ್ತುಗಳು ಹಾಗೂ ಸೇವೆಗಳು ಮೊದಲಾದ ಕ್ಷೇತ್ರಗಳಿಗೆ ಹೆಚ್ಚೆಚ್ಚು ಅವಕಾಶ ತೆರೆಯುವುದು ಇವೇ ಮೊದಲಾದವನ್ನು ಈ ಮರುಪರಿಶೀಲನೆ ಒಳಗೊಂಡಿರುತ್ತದೆ. ಅಮೆರಿಕಾಕ್ಕೆ ಭಾರತೀಯ ಮಾರುಕಟ್ಟೆಯನ್ನು ತೆರೆದು ಕೊಡಲು ಹೆಚ್ಚೆಚ್ಚು  ಪ್ರಯತ್ನಗಳನ್ನು ನಡೆಸಲಾಗುವುದು ಎಂದೇ ಇದರ ಅರ್ಥ. 

ಸರಕು ಉತ್ಪಾದನೆ ಮತ್ತು ತಂತ್ರಜ್ಞಾನ ಹೂಡಿಕೆ ಮೂಲಕ ’ಮೇಕ್ ಇನ್ ಇಂಡಿಯಾ’ವನ್ನು ಪ್ರೋತ್ಸಾಹಿಸಲು ಭಾರತಕ್ಕೆ ಅಮೆರಿಕ ಹೇಗೆ ನೆರವಾಗಬಲ್ಲದು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಭಾರತದ ಹವಾಮಾನ ಬದಲಾವಣೆ ಒಡಂಬಡಿಕೆಗಳ ಬದ್ಧತೆಯನ್ನು ಪೂರ್ಣಗೊಳಿಸಲು ಅಮೆರಿಕವು ಭಾರತಕ್ಕೆ ಅಮೆರಿಕ ಹೇಗೆ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ಜಂಟಿ ಘೋಷಣೆ ಚಕಾರವೆತ್ತಿಲ್ಲ. ಭಾರತೀಯ ಉದ್ಯೋಗಿಗಳಿಗೆ ಎಚ್೧ಬಿ ವೀಸಾ ಮುಂದುವರಿಸುವ ವಿಚಾರದಲ್ಲಿ ಯಾವುದೇ ಆಶ್ವಾಸನೆ ನೀಡಿಲ್ಲ.

ಮೋದಿ ಸರಕಾರ ಜಂಟಿ ಹೇಳಿಕೆಗೆ ಸಂಬಂಧಿಸಿ ಬಡಾಯಿ ಕೊಚ್ಚಿಕೊಳ್ಳಬಹುದಾದ ಏಕೈಕ ಫಲಶ್ರುತಿಯೆಂದರೆ, ಇತರ ದೇಶಗಳ ಮೇಲೆ ದಾಳಿ ಮಾಡಲು ತನ್ನ ಪ್ರದೇಶವನ್ನು ಬಳಸಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಖಾತರಿಪಡಿಸಬೇಕು ಎಂದು ತಾಕೀತು ಮಾಡಿರುವುದು. ಈ ಹಿಂದೆ ಅಧ್ಯಕ್ಷ ಬರಾಕ್ ಒಬಾಮಾರೊಂದಿಗೆ  ಮಾಡಿದ್ದ ಜಂಟಿ ಘೋಷಣೆಗಳಲ್ಲಿ ಮುಂಬಯಿ ಮತ್ತು ಇತರ ಭಯೋತ್ಪಾದಕ ಆಕ್ರಮಣಗಳನ್ನು ನಡೆಸಿದವರನ್ನು ಪಾಕಿಸ್ತಾನ ಶಿಕ್ಷಿಸಿ ನ್ಯಾಯ ಒದಗಿಸಬೇಕು ಎಂದು ಕರೆ ನೀಡಲಾಗಿತ್ತು. ಅದಕ್ಕೆ ಈಗ ಇದನ್ನು ಸೇರಿಸಲಾಗಿದೆ. ಏನೇ ಇದ್ದರೂ ಅಪಘಾನಿಸ್ತಾನದಲ್ಲಿನ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪಾಕಿಸ್ತಾನ ಒಂದು ಪ್ರಮುಖ ಪಾತ್ರಧಾರಿ ಎಂಬ ಅಭಿಪ್ರಾಯವನ್ನು ಟ್ರಂಪ್ ಆಡಳಿತ ಮುಂದುವರಿಸಿದೆ.

ಪರಸ್ಪರ ಎದುರಾದಾಗ ಮೋದಿಯವರು ಟ್ರಂಪ್ ಅವರನ್ನು ಅಪ್ಪಿಕೊಳ್ಳುವ ಡಾಂಭಿಕ ಪ್ರಯತ್ನUಳನ್ನು ನಡೆಸಿದರೂ, ಜಂಟಿ ಹೇಳಿಕೆಯಂತೂ ಅಮೆರಿಕದ ಕಾಳಜಿಗಳಿಗೇ ಆದ್ಯತೆ ನೀಡಿ ಭಾರತದ ಹಿತಗಳನ್ನು ಬುದ್ಧಿ ಪೂರ್ವಕವಾಗಿ ಉಪೇಕ್ಷಿಸಿರುವುದನ್ನು ತೋರಿಸುತ್ತದೆ. ಇದು ನಿರೀಕ್ಷಿತವೇ.

 

 

ಅನು: ವಿಶ್ವ