ಜಾನುವಾರು ಆರ್ಥಿಕತೆ

ಸಂಪುಟ: 
28
ಸಂಚಿಕೆ: 
11
date: 
Sunday, 2 July 2017
Image: 

ಪ್ರೊ. ಟಿ. ಆರ್. ಚಂದ್ರಶೇಖರ

ಕೃಷಿ ಮತ್ತು ತತ್ಸಂಬಂಧಿ ವಲಯದ ಒಟ್ಟು ವರಮಾನದಲ್ಲಿ ಜಾನುವಾರು ಆರ್ಥಿಕತೆಯ ಪಾಲು ಶೇ ೧೮.೫೬. ಈಗ ರೂ. ೨೫,೪೯೬ ಕೋಟಿ ವರಮಾನದ ಜಾನುವಾರು ಮಾರುಕಟ್ಟೆ ಕುಸಿದರೆ ಅದು ನಮ್ಮ ರೈತಾಪಿ ಜನರ ಬದುಕನ್ನು ಮೂರಾಬಟ್ಟೆ ಮಾಡಿಬಿಡುತ್ತದೆ. ನಮ್ಮ ಸಮಾಜದಲ್ಲಿ ಯಾವುದು ಸಮಸ್ಯೆಯಾಗಿಲ್ಲವೋ ಅವುಗಳನ್ನು ಸಮಸ್ಯೆಯನ್ನಾಗಿ ಮಾಡುತ್ತಿರುವ ಇಂದಿನ ಸರ್ಕಾರವು ಬಡತನವನ್ನು ನಿವಾರಿಸುವುದಕ್ಕೆ ಪ್ರತಿಯಾಗಿ ಬಡವರನ್ನು ನಾಶ ಮಾಡುವ ದಿಶೆಯಲ್ಲಿ ಹೊರಟಿರುವಂತೆ ಕಾಣುತ್ತಿದೆ. ನಿಜಕ್ಕೂ ಸರ್ಕಾರಕ್ಕೆ ಜಾನುವಾರುಗಳ ರಕ್ಷಣೆಯು ಪವಿತ್ರವಾದ ಕೆಲಸವಾಗಿದ್ದರೆ ಅದು ಪ್ರತಿ ಆಕಳಿಗೂ ತಿಂಗಳಿಗೆ ಸಾವಿರ ರೂಪಾಯಿ ಸಹಾಯಧನವನ್ನು ಏಕೆ ನೀಡಬಾರದು?

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಜಾನುವಾರು ಮಾರುಕಟ್ಟೆ ನಿಯಂತ್ರಣ ಶಾಸನವು ದೇಶದ ರೈತಾಪಿ ವರ್ಗದಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಶಾಸನಕ್ಕೆ ಸಂಬಂಧಿಸಿದಂತೆ ಸರ್ಕಾರದ ಕೋಮು ಉದ್ದೇಶ ಏನೇ ಇರಲಿ, ಮಾಂಸದ ರಫ್ತು ವ್ಯಾಪಾರಕ್ಕೆ ಧಕ್ಕೆ ಉಂಟಾಗುತ್ತದೆ. ಅದು ನಮ್ಮ ಗ್ರಾಮೀಣ ರೈತಾಪಿ ವರ್ಗದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಾಂಸದ ರಫ್ತು ವ್ಯಾಪಾರದ ಮೇಲೆ ಉಂಟಾಗುವ ಪರಿಣಾಮಕ್ಕಿಂತ ಮುಖ್ಯವಾಗಿ ಜಾನುವಾರು ಆರ್ಥಿಕತೆಯ ಮೇಲೆ ಆ ಮೂಲಕ ರೈತಾಪಿ ವರ್ಗದ ಮೇಲೆ ಉಂಟಾಗಲಿರುವ ಪರಿಣಾಮ ಅಘಾತಕಾರಿಯಾಗಿದೆ.

ಕರ್ನಾಟಕದಲ್ಲಿ ಸದ್ಯ ಆಕಳುಗಳ ಸಂಖ್ಯೆ ೯೫ ಲಕ್ಷವಾದರೆ ಎಮ್ಮೆಗಳ ಸಂಖ್ಯೆ ೩೪ ಲಕ್ಷ. ಒಟ್ಟು ಜಾನುವಾರುಗಳಲ್ಲಿ ಇವುಗಳ ಪ್ರಮಾಣ ಕ್ರಮವಾಗಿ ಶೇ. ೨೨.೪೭ ಮತ್ತು ಶೇ. ೧೧.೯೭. ನಮ್ಮ ರಾಜ್ಯದ ೨೦೧೬-೧೭ರ ಒಟ್ಟು ವರಮಾನ ರೂ. ೧೦.೦೩ ಲಕ್ಷ ಕೋಟಿ. ಇದರಲ್ಲಿ ಕೃಷಿ ಮತ್ತು ತತ್ಸಂಬಂದಿ ವಲಯದ ವರಮಾನ ರೂ. ೧.೨೧ ಲಕ್ಷ ಕೋಟಿ. ನಮ್ಮ ರಾಜ್ಯದಲ್ಲಿ ೨೦೧೬-೧೭ರ ಜಾನುವಾರು ಆರ್ಥಿಕತೆಯ ವರಮಾನ ರೂ. ೨೨,೫೪೩ ಕೋಟಿ. ಕೃಷಿ ಮತ್ತು ತತ್ಸಂಬಂಧಿ ವಲಯದ ಒಟ್ಟು ವರಮಾನದಲ್ಲಿ ಜಾನುವಾರು ಆರ್ಥಿಕತೆಯ ಪಾಲು ಶೇ ೧೮.೫೬. (ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೧೬-೧೭, ಪುಟಗಳು: ೩೪-೩೭). ರಾಷ್ಟ್ರಮಟ್ಟದಲ್ಲಿ ಕೃಷಿಯ ಒಟ್ಟು ಉತ್ಪನ್ನದಲ್ಲಿ ಜಾನುವಾರು ಆರ್ಥಿಕತೆಯ ಕಾಣಿಕೆ ಶೇ. ೨೫ರಷ್ಟಿದೆ. ಈ ಆರ್ಥಿಕತೆಯ ೨೦೧೦-೧೧ರಲ್ಲಿನ ಒಟ್ಟು ಉತ್ಪತ್ತಿ ರೂ. ೩.೪೧ ಲಕ್ಷ ಕೋಟಿ. ಜಾನುವಾರುಗಳನ್ನು ನೈಸರ್ಗಿಕ ಬಂಡವಾಳ ಎಂದು ಕರೆಯಲಾಗಿದೆ. ಬಂಡವಾಳ ಹೂಡಿಕೆಗೆ  ಜಾನುವಾರುಗಳು ಜನ್ಮ ನೀಡುವ ಕರುಗಳು ಬಡ್ಡಿಯಿದ್ದಂತೆ. ಆದರೆ ದನಗಾಹಿಗಳು ಗೋವುಗಳನ್ನು ಮಾರಾಟ ಮಾಡದೆ ಎಷ್ಟು ಕರುಗಳನ್ನು ಸಾಕಿಕೊಂಡಿರಬಹುದು?

ಇದರಿಂದ ನಮ್ಮ ರಾಜ್ಯದಲ್ಲಿ ರೈತಾಪಿ ವರ್ಗದ ಬದುಕಿನಲ್ಲಿ ಜಾನುವಾರುಗಳ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ. ಆದರೆ ಈಗ ಕೇಂದ್ರ ತಂದಿರುವ ಜಾನುವಾರು ಮಾರುಕಟ್ಟೆ ನಿಯಂತ್ರಣ ಶಾಸನದಿಂದ ತೀವ್ರ ತೊಂದರೆಗೆ ಒಳಗಾಗುವವರು ರೈತಾಪಿ ಮಂದಿ.  ಒಂದಲ್ಲ ಒಂದು ರೀತಿಯಲ್ಲಿ ಇದು ಹೈನುಗಾರಿಕೆ ಉದ್ಯೋಗದಲ್ಲಿ ನಿರತರಾಗಿರುವ ರೈತರ ವರಮಾನವಾಗಿದೆ. ಈ ಜಾನುವಾರು ಆರ್ಥಿಕತೆಯು ಬಿಕ್ಕಟ್ಟಿಗೆ ಒಳಗಾದರೆ ನಮ್ಮ ಸಣ್ಣ, ಅತಿ ಸಣ್ಣ ಕೃಷಿಕರಿಗೆ ಅಪಾರ ನಷ್ಠವಾಗುತ್ತದೆ. ಈಗ ಕೇಂದ್ರ ಸರ್ಕಾರ ತಂದಿರುವ ಜಾನುವಾರು ಮಾರುಕಟ್ಟೆ ನಿಯಮಗಳ ಅಧಿಸೂಚನೆಯು ಖಂಡಿತವಾಗಿ ಜಾನುವಾರು ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಅದನ್ನು ಅವಲಂಬಿಸಿಕೊಂಡಿರುವವರ ಬದುಕು ಮೂರಾಬಟ್ಟೆಯಾಗುತ್ತದೆ. ಈಗಾಗಲೆ ರೈತಾಪಿ ಜನರು ಬರದಿಂದ, ವರಮಾನದ ಕುಸಿತದಿಂದ, ಬೆಲೆಗಳ ಅನಿಶ್ಚಿತತೆಯಿಂದ, ಹವಾಮಾನದ ವೈಪರೀತ್ಯದಿಂದ ಹೈರಾಣವಾಗಿದ್ದಾರೆ. ಈಗ ಈ ಅಧಿಸೂಚನೆಯು ಅವರನ್ನು ಮತ್ತಷ್ಟು ಸಂಕಷ್ಟಗಳಿಗೆ ಒಳಪಡಿಸುತ್ತದೆ.

ಆಕಳು ಸಾಕಣೆಗೆ ಸಬ್ಸಿಡಿ ಕೊಡಲಿ

ಜಾನುವಾರು ಮಾರುಕಟ್ಟೆ ನಿಯಮಗಳ ಅಧಿಸೂಚನೆಯು ಅನೇಕ ರೀತಿಯಲ್ಲಿ ಜಾನುವಾರು ಆರ್ಥಿಕತೆಯನ್ನು ನಾಶಗೊಳಿಸುತ್ತದೆ. ಉದಾಹರಣೆಗೆ ಜಾನುವಾರು ಮಾರುಕಟ್ಟೆಯಲ್ಲಿ ಕಟುಕರಿಗೆ ಮಾರಾಟ ಮಾಡುವುದಿಲ್ಲ ಅಂತ ಮಾರಾಟಗಾರರು ಮತ್ತು ಖರೀದಿಗಾರರು ಮುಚ್ಚಳಿಕೆ ಬರೆದು ಕೊಡಬೇಕು. ಇವೆಲ್ಲವೂ ಮಾರುಕಟ್ಟೆಯನ್ನು ನಾಶಮಾಡುವ ಕ್ರಮಗಳಾಗಿವೆ. ಕೇಂದ್ರ ಸರ್ಕಾರವು ’ಕನಿಷ್ಟ ಸರ್ಕಾರ; ಗರಿಷ್ಟ ಪರಿಪಾಲನೆ’ ಎಂದ ಘೋಷಣೆ ಮೇಲೆ ಅಧಿಕಾರಕ್ಕೆ ಬಂದು ಈಗ ಜನರ ಆಹಾರದ ಮೇಲೆ, ರೈತಾಪಿಗಳ ವರಮಾನದ ಮೇಲೆ, ಜಾನುವಾರುಗಳ ಮಾರಾಟದ ಮೇಲೆ - ಪ್ರತಿಯೊಂದರ ಮೇಲೂ ತನ್ನ ನಿಯಂತ್ರಣ ಸ್ಥಾಪಿಸಲು ಪ್ರಯತ್ನ ನಡೆಸುತ್ತಿದೆ. ಸರ್ಕಾರ ಗರಿಷ್ಠವಾಗುತ್ತಿದೆ. ತಾನು ಹಾಕಿಕೊಂಡಿರುವ ನಿಯಮಕ್ಕೆ ವಿರುದ್ಧವಾಗಿ ಅದು ನಡೆದುಕೊಳ್ಳುತ್ತಿದೆ. ಇದು ಅಭಿವೃದ್ಧಿಯನ್ನು ಆದ್ಯತೆ ಮಾಡಿಕೊಂಡಿರುವ ಸರ್ಕಾರದ ಮಾತುಗಳಾಗುವುದು ಸಾಧ್ಯವಿಲ್ಲ. ಅದರ ಮತ್ತೊಂದು ಘೋಷಣೆಯಾದ ’ಸಬ್ ಕಾ ಸಾತ್; ಸಬ್ ಕಾ ವಿಕಾಸ್’ ಅನ್ನುವುದು ಸಹ ಕೇವಲ ಪೊಳ್ಳು ಘೋಷಣೆಯಾಗುತ್ತಿದೆ.

ನಮ್ಮ ಸಮಾಜದಲ್ಲಿ ಜಾನುವಾರು ಆರ್ಥಿಕತೆಯಲ್ಲಿನ ಹೈನುಗಾರಿಕೆಯು ಮುಕ್ಕಾಲು ಮೂರು ವೀಸೆ ಪಾಲು ಮಹಿಳೆಯರದ್ದಾಗಿದೆ. ಹೈನುಗಾರಿಕೆ ಅನ್ನುವುದು ಬರಗಾಲದ ವಿರುದ್ಧ ವಿಮೆಯಾಗಿದೆ. ಹಾಲು, ಬೆಣ್ಣೆ, ಮೊಸರು, ಕುಳ್ಳು ಮಾರಾಟ ಮಾಡಿ ಲಕ್ಷಾಂತರ ಮಹಿಳೆಯರು ಕುಟುಂಬವನ್ನು ನಡೆಸಲು ಅಗತ್ಯವಾದ ವರಮಾನ ಗಳಿಸುತ್ತಿದ್ದಾರೆ. ಈಗಾಗಲೆ ರಾಜ್ಯದ ಒಟ್ಟು ವರಮಾನದಲ್ಲಿ ಕೃಷಿಯ ಪಾಲು ನಿಕೃಷ್ಟವಾಗುತ್ತಿದೆ. ಈಗ ರೂ. ೨೫,೪೯೬ ಕೋಟಿ ವರಮಾನದ ಜಾನುವಾರು ಮಾರುಕಟ್ಟೆ ಕುಸಿದರೆ ಅದು ನಮ್ಮ ರೈತಾಪಿ ಜನರ ಬದುಕನ್ನು ಮೂರಾಬಟ್ಟೆ ಮಾಡಿಬಿಡುತ್ತದೆ. ನಮ್ಮ ಸಮಾಜದಲ್ಲಿ ಯಾವುದು ಸಮಸ್ಯೆಯಾಗಿಲ್ಲವೋ ಅವುಗಳನ್ನು ಸಮಸ್ಯೆಯನ್ನಾಗಿ ಮಾಡುತ್ತಿರುವ ಇಂದಿನ ಸರ್ಕಾರವು ಬಡತನವನ್ನು ನಿವಾರಿಸುವುದಕ್ಕೆ ಪ್ರತಿಯಾಗಿ ಬಡವರನ್ನು ನಾಶ ಮಾಡುವ ದಿಶೆಯಲ್ಲಿ ಹೊರಟಿರುವಂತೆ ಕಾಣುತ್ತಿದೆ. ನಿಜಕ್ಕೂ ಸರ್ಕಾರಕ್ಕೆ ಜಾನುವಾರುಗಳ ರಕ್ಷಣೆಯು ಪವಿತ್ರವಾದ ಕೆಲಸವಾಗಿದ್ದರೆ ಅದು ಪ್ರತಿ ಆಕಳಿಗೂ ತಿಂಗಳಿಗೆ ಸಾವಿರ ರೂಪಾಯಿ ಸಹಾಯಧನವನ್ನು ಏಕೆ ನೀಡಬಾರದು?

ಖಾಸಗಿ ಉದ್ದಿಮೆಗಳ ಲಕ್ಷಾಂತರ ಕೋಟಿ ವಸೂಲಾಗದ ಸಾಲವನ್ನು ಮನ್ನಾ ಮಾಡುವುದಾದರೆ ನಮ್ಮ ಸಮಾಜದಲ್ಲಿರುವ ಪ್ರತಿ ಆಕಳಿಗೂ ಸಬ್ಸಿಡಿ ನೀಡುವ ನೀತಿಯನ್ನು ಜಾರಿಗೆ ತರಬಹುದು. ಉದ್ದಿಮೆಯ ಮೇಲೆ ಗೋತೆರಿಗೆ ವಿಧಿಸಬಹುದು. ಗ್ರಾಮೀಣ ರೈತಾಪಿಗಳ ಮೇಲೆ ಸದರಿ ಶಾಸನವು ಅಪ್ರತ್ಯಕ್ಷ ತೆರಿಗೆ ರೀತಿಯ ಪರಿಣಾಮ ಉಂಟು ಮಾಡುತ್ತದೆ. ನಗರ ಪ್ರದೇಶದಲ್ಲಿನ ನೌಕರಶಾಹಿ, ವ್ಯಾಪಾರಿ-ವಣಿಕ ಸಮಾಜದ ಮೇಲೆ ಇದರ ಹೊರೆಯನ್ನು ಹೇರಬಹುದು. ಇದಕ್ಕೆ ಸರ್ಕಾರ ತಯಾರಿದ್ದಂತೆ ಕಾಣುತ್ತಿಲ್ಲ. ಗೋರಕ್ಷಣೆಯ ಬಗ್ಗೆ ಅಬ್ಬರಿಸುತ್ತಿರುವ ಜನರು ಮತ್ತು ಸರ್ಕಾರ ಗೋಪೋಷಣೆ-ಗೋಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ. ಯಾವುದನ್ನು ನಾವು ಆಶಾಡಭೂತಿತನ ಎಂದು ಕರೆಯುತ್ತೇವೆಯೋ ಅದಕ್ಕೆ ಇಲ್ಲಿದೆ ಅಸಲು ನಿದರ್ಶನ!. ಒಂದು ಅಧ್ಯಯನದ ಪ್ರಕಾರ ಹಾಲು ಕೊಡುವುದು ನಿಂತ ವಯಸ್ಸಾದ ಹಸುಗಳನ್ನು ಸಾಕಲು ತಲಾ ಪ್ರತಿದಿನ ರೂ. ೬೫ ಖರ್ಚಾಗುತ್ತದೆ. ಗೋರಕ್ಷಣೆ ಬಗ್ಗೆ ಕಾಳಜಿ ಇರುವುದಾದರೆ ಸರ್ಕಾರವು ಗೋವು ಸಾಕುವವರಿಗೆ ಸಬ್ಸಿಡಿ ನೀಡುವ ಬಗ್ಗೆ ಯೋಚಿಸಬೇಕು.  ನಮ್ಮ ಕೃಷಿ ವಲಯದ ಸ್ವರೂಪ ಬದಲಾಗುತ್ತಿದೆ. ಬೆಳೆಗಳನ್ನು ಬೆಳೆಯುವ ಕೃಷಿಗಿಂತ ಹೈನು ಉದ್ದಿಮೆ ಅಗ್ರ ಸ್ಥಾನ ಪಡೆದುಕೊಳ್ಳುತ್ತಿದೆ. ಈ ಹೈನು ಉದ್ದಿಮೆಗೆ ಈಗ ದಕ್ಕೆ ಉಂಟಾಗಿದೆ.

ಯಾವುದು ಫ್ಯಾಷನ್ನು?

ಇತ್ತೀಚಿಗೆ ರೈತರ ಕಷ್ಟಕಾರ್ಪಣ್ಯಗಳಿಗೆ ರಾಜ್ಯ ಸರ್ಕಾರಗಳು ಸ್ಪಂದಿಸಿ ಸಾಲ ಮನ್ನಾ ಮಾಡುವ ಕ್ರಮ ತೆಗೆದುಕೊಳ್ಳುತಿದ್ದರೆ ಕೇಂದ್ರ ಹಣಕಾಸು ಮಂತ್ರಿಯವರು ಸಾಲ ಮನ್ನಾ ಕ್ರಮಕ್ಕೆ ಸಂಬಂಧಿಸಿದಂತೆ ಒಂದು ನಯಾಪೈಸೆ ನೆರವನ್ನು ಕೇಂದ್ರ ರಾಜ್ಯಗಳಿಗೆ ನೀಡುವುದಿಲ್ಲ ಎಂದು ಹೇಳಿದ್ದರೆ ಮತ್ತೊಬ್ಬ ಕೇಂದ್ರ ಮಂತ್ರಿ ಸಾಲ ಮನ್ನಾ ಅನ್ನುವುದು ಫ್ಯಾಷನ್ನಾಗಿ ಬಿಟ್ಟಿದೆ ಎಂಬ ನುಡಿಮುತ್ತನ್ನು ಉದುರಿಸಿದ್ದಾರೆ. ಸಾಲಮನ್ನಾ ಪ್ಯಾಷನ್ನಾದರೆ ಜಾನುವಾರು ರಾಜಕಾರಣ ಏನು ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬೇಕಾಗುತ್ತದೆ. ಗೋರಕ್ಷಕರು ಆಕಳ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುತ್ತಿರುವುದು ಫ್ಯಾಷನ್ನಲ್ಲವೆ!! ಬಡತನ ನಿವಾರಣೆಯ ಬಗ್ಗೆ ಮಾತನ್ನಾಡುವುದಕ್ಕೂ ಸಿದ್ಧವಿಲ್ಲದ ಜನರು ಜಾನುವಾರು ಮಾರುಕಟ್ಟೆಯನ್ನು ಹಾಳು ಮಾಡಲು ಹೊರಟ್ಟಿದ್ದಾರೆ.

ಗೋಸೇವೆಯೋ ಗೋರಕ್ಷಣೆಯೋ!!

ಮಹಾತ್ಮ ಗಾಂಧೀಜಿಯನ್ನು ಮತ್ತು ಅವರ ವಿಚಾರಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಾ ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನರು ತಿಳಿದುಕೊಳ್ಳಬೇಕಾದುದೇನೆಂದರೆ ಗಾಂಧೀಜಿ ಗೋವು ರಾಜಕಾರಣ ವಿಚಾರದಲ್ಲಿ ಗೋಸೇವೆ ಎಂಬ ಪರಿಭಾವನೆಯನ್ನು ರೂಢಿಗೆ ತಂದರು. ಗೋರಕ್ಷಣೆ ಎಂಬುದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ ಅಥವಾ ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವುದನ್ನು ಅವರು ಒಪ್ಪಲಿಲ್ಲ. ಜನರು ಗೋವಿಗಾಗಿ ಜನರನ್ನು ಕೊಲ್ಲುವುದುರ ವಿರುದ್ಧ ಅವರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಗೋಸೇವೆ ಮತ್ತು ಗೋಪೋಷಣೆ ಅವರು ಪ್ರತಿಪಾದಿಸಿದ ವಿಚಾರ. ಇಂದು ಗೋಸೇವೆಯಾಗಲಿ ಅಥವಾ ಗೋಪೋಷಣೆಯಾಗಲಿ ಮುಖ್ಯವಾಗಿಲ್ಲ. ಗೋರಕ್ಷಣೆ ಅನ್ನುವುದು ಅಲ್ಪಸಂಖ್ಯಾತರ ವಿರುದ್ಧದ ರಾಜಕಾರಣವಾಗಿಬಿಟ್ಟಿದೆ. ಮುಸ್ಲಿಮರನ್ನು ಕೊಲ್ಲುವುದರಿಂದ ಗೋವುಗಳನ್ನು ರಕ್ಷಿಸುವುದು ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ಬಹುಸಂಖ್ಯಾತರು ಗೋವುಗಳ ಮಾಲೀಕರಾಗಿದ್ದಾರೆ. ಅವರು ಗೋವುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದರೆ ಗೋವುಗಳನ್ನು ಮಾಂಸಕ್ಕಾಗಿ ಕಡಿಯುವ ಪ್ರಮೇಯ ಬರುವುದಿಲ್ಲ. ಜಾನುವಾರುಗಳ ಮಾಲೀಕರು ಅವುಗಳನ್ನು ಮಾರಾಟ ಮಾಡದಿರುವುದು ಅಸಾಧ್ಯ. ರಸ್ತೆಗಳಲ್ಲಿ ಅನಾಥವಾಗಿ ತಿರುಗಾಡುವ ಹಸುಗಳ ಮೈಮುಟ್ಟಿ ನಮಸ್ಕಾರ ಮಾಡಿಕೊಂಡರೆ ಅವುಗಳ ರಕ್ಷಣೆ ಮಾಡಿದಂತಲ್ಲ. ಅವುಗಳ ಶೋಷಣೆಯನ್ನು ನಿಲ್ಲಿಸಿ ಪೋಷಣೆಗೆ ಬಹುಸಂಖ್ಯಾತರು ಮುಂದಾಗಬೇಕು. ಬಹುಸಂಖ್ಯಾತರಲ್ಲಿ ಜಾನುವಾರು ಆರ್ಥಿಕತೆಯನ್ನು ಅವಲಂಬಿಸಿಕೊಂಡಿರುವವರು ಅತಿಸಣ್ಣ ಮತ್ತು ಸಣ್ಣ ಹಿಡುವಳಿದಾರರು.

ಧರ್ಮ, ವ್ಯಾಪಾರ ಮತ್ತು ರಾಜಕಾರಣ ಏಕತ್ರಗೊಂಡಾಗ!!

ಧರ್ಮ ಮತ್ತು ರಾಜಕಾರಣಗಳ ನಡುವಿನ ಸಂಬಂಧದ ಬಗ್ಗೆ ಟೀಕೆ ಮಾಡಲಾಗುತ್ತಿತ್ತು. ಇದೊಂದು ಅಪವಿತ್ರ ಸಂಬಂಧ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಧರ್ಮ ಮತ್ತು ರಾಜಕಾರಣಗಳ ಜೊತೆಗೆ ವ್ಯಾಪಾರ-ವಾಣಿಜ್ಯಗಳು ಸೇರಿಕೊಂಡಿವೆ.  ಧಾರ್ಮಿಕ ಆಚರಣೆ, ಸಂಪ್ರದಾಯಗಳನ್ನು ವ್ಯಾಪಾರದ ಸಾಧನಗಳಾಗಿ ಬಳಸಿಕೊಳ್ಳುವುದು ವ್ಯಾಪಕವಾಗಿ ಬೆಳೆಯುತ್ತಿದೆ. ಉದಾಹರಣೆಗೆ ಚಿನ್ನಬೆಳ್ಳಿ ವ್ಯಾಪಾರಿಗಳು ಅಕ್ಷಯ ತೃತಿಯ ದಿನದಂದು ಚಿನ್ನ ಕೊಂಡರೆ ಅದೃಷ್ಟ ಎಂದು ಹೇಳುತ್ತಾ ಮುಗ್ದ ಜನರನ್ನು ತಮ್ಮತ್ತ ಸೆಳೆಯುತಿದ್ದಾರೆ. ಸಾಧುಸಂತರ ಸಂಸ್ಥೆಗಳು ಕಾರ್ಪೋರೇಟ್ ಸ್ವರೂಪ ಪಡೆದುಕೊಳ್ಳುತ್ತಿವೆ. ಮಹರ್ಷಿಗಳು, ಗುರೂಜಿಗಳು, ಸಾಧುಗಳು, ಸಂತರು ಸಾವಿರಾರು ಕೋಟಿ ಬಂಡವಾಳಿಗಳಾಗಿದ್ದಾರೆ. ಗೋರಕ್ಷಣೆಯ ರಾಜಕಾರಣವೂ ಇದೇ ಬಗೆಯ ಏಕತ್ರ ಪ್ರಣಾಳಿಕೆಗೆ ಒಂದು ನಿದರ್ಶನವಾಗಿದೆ. ಈ ಎಲ್ಲ ಆರ್ಭಟಗಳು, ಅಬ್ಬರಗಳು, ಗೋವಿನ ಹೆಸರಿನಲ್ಲಿ ಅಲ್ಪಸಂಖ್ಯಾತರ ಹತ್ಯೆಗಳು - ಇವೆಲ್ಲವುಗಳ ನಡುವೆ ಗಾಂಧೀಜಿ ಹೇಳುತ್ತಿದ್ದ ಗೋಸುಧಾರಣೆ, ಗೋಪೋಷಣೆ, ಜಾನುವಾರು ಅಭಿವೃದ್ಧಿ ಮೂಲೆಗುಂಪಾಗಿಬಿಟ್ಟಿವೆ. ಈ ಎಲ್ಲ ಆಟಾಟೋಪಗಳ ನಡುವೆ ಸಂಕಷ್ಟಕ್ಕೆ, ದುಸ್ಥಿತಿಗೆ ಒಳಗಾಗುತ್ತಿರುವವರು ಬಡವರು, ಅಂಚಿನಲ್ಲಿರುವವರು ಮತ್ತು ಭೂಹೀನರು. ಈ ಬಗೆಯ ಅಪವಿತ್ರ ಸಂಬಂಧಕ್ಕೆ ಕೊನೆ ಹೇಳಬೇಕಾದರೆ, ಗೋವುಗಳ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಕೊನೆ ಹಾಡಬೇಕೆಂದರೆ ಜನರು ಜಾಗೃತರಾಗಬೇಕು ಮತ್ತು ಸಂಘಟಿತರಾಗಬೇಕು.