Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಂಘಪರಿವಾರದ ವಿಷಪ್ರಚಾರ ಭೀತಿಯ ಸನ್ನಿವೇಶ ಸೃಷ್ಟಿಸಿದೆ

ಸಂಪುಟ: 
11
ಸಂಚಿಕೆ: 
28
Sunday, 2 July 2017

-ಸಂತೃಸ್ತ ಕುಟುಂಬದ ಮನೆಗೆ ಭೇಟಿ ನೀಡಿದ ಸಿಪಿಐ(ಎಂ) ನಿಯೋಗ

ಜೂನ್ ೨೪ರಂದು  ಜುನೈದ್ ಶಕೀಲ್ ಮತ್ತು ಹಾಶಿಂ ಸೋದರರ ಮನೆಗೆ ಹೋದ ಸಿಪಿಐ(ಎಂ) ಮುಖಂಡರ ನಿಯೀಗವೊಂದು ಅವರ ಕುಟುಂಬದವರನ್ನು ಭೇಟಿ ಮಾಡಿತು. ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ಮಹಮ್ಮದ್ ಸಲೀಂ(ಸಂಸದ್ ಸದಸ್ಯರು), ಹಯಾಣ ರಾಜ್ಯ ಕಾರ್ಯದರ್ಶಿ ಸುರಿಂದರ್ ಮಲಿಕ್,   ದಿಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರಾದ  ಆಶಾ ಶರ್ಮ, ಸತ್‌ಬೀರ್ ಸಿಂಗ್ ಮತ್ತಿತರ ಸ್ಥಳೀಯ ಮುಖಂಡರಿದ್ದ  ನಿಯೋಗ ಹರ್ಯಾಣದಲ್ಲಿರುವ ಅವರ ಹಳ್ಳಿ ಖಂಡವ್ಲಿಯಲ್ಲಿ ದಿಲ್ಲಿ-ಮಥುರ ಲೋಕಲ್ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ ಈ ಸೋದರರ ಶೋಕಗ್ರಸ್ತ ತಂದೆ ಜಲಾಲುದ್ದೀನ್, ತಾಯಿ ಸಾಯಿರಾ ಮತ್ತಿತರ ಕುಟುಂಬದ ಸದಸ್ಯರನ್ನು ಸಂತೈಸಿದರು. ಕೋಮುವಾದ ಪ್ರೇರಿತ ಕ್ರಿಮಿನಲ್‌ಗಳು ನಡೆಸಿರುವ ಈ ಹೀನ ಅಪರಾಧದ ವಿರುದ್ಧ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿದರು.

ಬಹಳಷ್ಟು ಕಷ್ಟ-ತ್ಯಾಗಗಳಿಂದ ಈ  ಮೂವರು ಮಕ್ಕಳನ್ನು ಬೆಳೆಸಿದ್ದೆ, ಶಿಕ್ಷಣ ಕೊಡಿಸಿದ್ದೆ ಎಂದ ಸಾಯಿರಾ ಜುನೈದ್ ಈಗಷ್ಟೇ ಸೂರತ್‌ನ ಮದರಸಾದಲ್ಲಿ ತನ್ನ ಶಿಕ್ಷಣವನ್ನು ಮುಗಿಸಿದ್ದ ಎಂದರು. ಅದರ ಸಂತೋಷದ ಆಚರಣೆಗೆಂದು ಈ ಮಕ್ಕಳಿಗೆ ೧೫೦೦ರೂ. ಹೊಸ ಬಟ್ಟೆಗಳನ್ನು ಖರೀದಿಸಲು ಕೊಟ್ಟಿದ್ದರಂತೆ. ಜುನೈದ್ ರೋಜಾದಲ್ಲಿದ್ದ, ಆದ್ದರಿಂದ ಆ ದಿನ ಒಂದು ಹನಿ ನೀರನ್ನೂ ಕುಡಿದಿರಲಿಲ್ಲ ಎಂದು ಹೇಳುತ್ತ ಆಕೆ ಅತ್ತರು. ಉಪವಾಸ ಮುಗಿಸಲು ಅವರು ಮನೆಗೆ ಧಾವಿಸಿದ್ದರು, ಆದರೆ ಅವನಿಗೆ ಕೊನೆಯ ತುತ್ತನ್ನೂ ಕೊಡಲಾಗಲಿಲ್ಲ ಎಂದರು.

ಈ ಘಟನೆಯ ಬಗ್ಗೆ ಖೇದ ವ್ಯಕ್ತಡಿಸಲಾದರೂ ಸರಕಾರದ ಅಥವ ಆಳುವ ಪಕ್ಷದ ಯಾರೂ ಕೂಡ ಕುಟುಂಬದವರನ್ನು ಸಂಪರ್ಕಿಸಿಲ್ಲ ಎಂದು ತಿಳಿದು ಬಂತು ಎಂದಿರುವ ನಿಯೋಗ ತಂದೆ ಮತ್ತು ಸೋದರರನ್ನು ಪೋಲೀಸ್ ಠಾಣೆಗೆ ಹಲವು ಬಾರಿ ಕರೆಯಲಾಗಿದೆ, ಆದರೆ ಇದುವರೆಗೆ ಒಬ್ಬ ಕ್ರಿಮಿನ???ನನ್ನು ಮಾತ್ರ ಬಂಧಿಸಲಾಗಿದೆ ಎಂದಿದೆ.

ಮುಸ್ಲಿಮರೆಂದು ಟೋಪಿ, ಗಡ್ಡದಿಂದ ಗುರುತಿಸಬಹುದಾದ ಯುವಕರು ದಿಲ್ಲಿಗೆ ಹೋಗುವ, ಅಲ್ಲಿಂದ  ಬರುವ ರೈಲುಗಳಲ್ಲಿ ಕೆಲವು ಗುಂಪುಗಳ ಕೋಮುವಾದಿ ಬೈಗುಳಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಅಲ್ಲಿಯ ಜನ ನಿಯೋಗಕ್ಕೆ ತಿಳಿಸಿದರು.

ಬ್ಯಾಟರಿ ಚಾಲಿತ ಮೈಕ್‌ಗಳನ್ನು ಹಿಡಿದ ಭಜನಾ ಮಂಡಳಿಗಳು ಹಲವು ರೈಲು ಬೋಗಿಗಳನ್ನು ಧಾರ್ಮಿಕ ವಲಯಗಳಾಗಿ ಪರಿವರ್ತಿಸಿವೆ, ಯಾರಾದರೂ ಮುಸ್ಲಿಮರು ಪ್ರವೇಶಿಸಿದಾಗ ಅವರ ಬಗ್ಗೆ ಅವಹೇಳನಕಾರಿ ಟಿಪ್ಪಣಿಗಳನ್ನು ಮಾಡುತ್ತಾರೆ. ಇಂತಹ ಕಿರುಕುಳಗಳು ಈಗ ಸಾಮಾನ್ಯ ಸಂಗತಿಯಾಗಿದ್ದು ಪ್ರಯಾಣ ಮಾಡುವಾಗ ಭೀತಿ, ಭಯ ಕಾಡುತ್ತಿರುತ್ತದೆ, ಪೋಲೀಸರಿಗೆ ಹಲವು ಬಾರಿ ದೂರು ನೀಡಿದರೂ ಅದನ್ನು ಕಿವಿಗೆ ಹಾಕಿಕೊಂಡಿಲ್ಲ ಎಂದೂ ನಿಯೋಗಕ್ಕೆ ತಿಳಿದು ಬಂತು.

ಜೂನ್ ೨೨ರ ಘಟನೆಯಂತೂ ಸಂಪೂರ್ಣವಾಗಿ ಕೋಮುವಾದಿ ಪರಿಗಣನೆಗಳಿಂದಲೇ ನಡೆದದ್ದು, ಇಲ್ಲವಾದರೆ ಸಶಸ್ತ್ರ ಮಂದಿಯನ್ನು ರೈಲಿನೊಳಕ್ಕೆ ಹೇಗೆ ಬಿಡಲಾಗುತ್ತದೆ  ಎಂದು ಕೇಳಿರುವ ನಿಯೋಗ ಆರಂಭದಲ್ಲಿ ಹಲ್ಲೆ ಮಾಡಿದ ಎಲ್ಲರ ಬಳಿಯೂ  ದೊಡ್ಡ ಚಾಕುಗಳಿದ್ದವು ಎಂದಿದೆ. ಈ ಮೂವರನ್ನು ಬಡಿಯುವಂತೆ ಅವರು ಇತರ ಪ್ರಯಾಣಿಕರನ್ನೂ ಉದ್ರೇಕಿಸಿದರು. ಜನರಿಂದ ತುಂಬಿದ ರೈಲಿನಲ್ಲಿ ಇಂತಹ  ಘಟನೆಗಳು ನಡೆಯುತ್ತದೆಂದರೆ, ಅದನ್ನು ಎಸಗುವವರಿಗೆ ರಾಜಕೀಯ ಬೆಂಬಲ ಮತ್ತು ಪೋಷಣೆಯಿದೆ ಎಂದೇ ಅರ್ಥ.

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸಂಘ ಪರಿವಾರದ ನಿರಂತರ ವಿಷಪೂರಿತ  ಅಪಪ್ರಚಾರದಿಂದಲೇ ಇಂತಹ ಸನ್ನಿವೇಶಗಳು, ಮುಸ್ಲಿಮರು ಸಾರ್ವಜನಿಕ ಸ್ಥಳಗಳಲ್ಲಿ ತಾವು ಸುರಕ್ಷಿತರಲ್ಲ ಎಂಬ ಭಾವನೆ ಉಂಟಾಗುವ, ಇಂತಹ ಸ್ಥಳಗಳನ್ನು ಕೋಮುಗ್ರಸ್ತಗೊಳಿಸಿರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೀಗ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ನ ವಾಸ್ತವ ಎಂದು ನಿಯೋಗ ಟಿಪ್ಪಣಿ ಮಾಡಿದೆ.

ಈ ನಿಯೋಗದ ಭೇಟಿಯ ನಂತರ ಸಿಪಿಐ(ಎಂ) ೧. ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು, ೨.  ಕ್ರಿಮಿನಲ್‌ಗಳ ರಾಜಕೀಯ ಸಂಪರ್ಕಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ೩. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಲ್ಲಿ ಭದ್ರತೆ ಒದಗಿಸಬೇಕು, ೪. ಕುಟಂಬದವರಿಗೆ ಪರಿಹಾರ ಒದಗಿಸಬೇಕು ಮತ್ತು ೫. ಶಕೀಲ್ ಮತ್ತು ಹಾಶಿಂಗೆ ಸರಿಯಾದ ಪುಕ್ಕಟೆ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿದೆ.

ಸಿಪಿಐ(ಎಂ) ಈ ಘಟನೆ ಮತ್ತು ಇತರ ಇಂತಹ ಘಟನೆಗಳ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.