ಇಫ್ತಾರ್ ಕೂಟಕ್ಕೂ, ವಿವಾದಕ್ಕೂ ರಾಮಮಂದಿರಕ್ಕೂ ಸಂಬಂಧ?

ಸಂಪುಟ: 
11
ಸಂಚಿಕೆ: 
28
Sunday, 2 July 2017

ಸುಪ್ರೀಂ ಕೋರ್ಟ್ ಅಯೋ ಧ್ಯೆ ವಿವಾದವನ್ನು ಮೀಡಿಯೇಷನ್ ಮೂಲಕ ಬಗೆಹರಿಸಲು ಸಲಹೆ ನೀಡಿದೆ. ರಾಮ ದೇವಸ್ಥಾನ ನಿರ್ಮಾಣದ ರೂಪುರೇಷೆ ನವಂಬರ್ ನಲ್ಲಿ ಎಂದಿದ್ದಾನೆ ಸಾಕ್ಷಿ ಮಹಾರಾಜ್. ಮಹತ್ವದ ಸಭೆ ಉಡುಪಿಯಲ್ಲಿ ನಡೆಯಲಿದೆಯಂತೆ. ಈ ಬಾರಿ ರಾಜಧರ್ಮದ ಬಗ್ಗೆ ಮೋದಿ ಮಾತಾಡುತ್ತಿದ್ದಂತೆ ಸಂಘಪರಿವಾರದ ಪೋಲಿ ಪಟಾಲಂ ವಿವಾದಿತ ಜಾಗದಲ್ಲಿ ದೇವಸ್ಥಾನ ನಿರ್ಮಿಸುತ್ತದೆ. ಅದಕ್ಕೂ ಹಿಂದೆ ಮಧ್ಯಸ್ಥಿಕೆ ಪ್ರಯತ್ನವನ್ನು ನಡೆಸಿದರೆ ಅದಕ್ಕೆ ಛೀಫ್ ಮೀಡಿಯೇಟರ್ ಆಗಲು ಈಗ ಪೇಜಾವರ ಸ್ವಾಮೀಜಿ ಸಿದ್ಧರಾಗಿಯೇ ಈ ಇಫ್ತಾರ್ ಕೂಟ ನಡೆಸಿದ್ದು. ಎಲ್ಲವೂ ಸಂಘಪರಿವಾರದ ಮಾಸ್ಟರ್ ಪ್ಲಾನ್ ಗೆ ಅನುಗುಣವಾಗಿ. ಇಫ್ತಾರ್ ವಿರುದ್ಧದ ಪ್ರತಿಭಟನೆಯೂ ಇದರ ಭಾಗವೇ..

-ಬಾಲಕೃಷ್ಣ ಶೆಟ್ಟಿ

ಉಡುಪಿ ಕೃಷ್ಣ ಮಠ ಕಟ್ಟಲು ಮುಸ್ಲಿಮರೇ ಭೂಮಿ ನೀಡಿದ್ದು ಎಂದು ಪೇಜಾವರ ಶ್ರೀಗಳು ಹೇಳುವ ಮೂಲಕ, ಉಡುಪಿಯಲ್ಲಿ ನಡೆಯುವ ರಾಮ ಮಂದಿರ ಕಟ್ಟುವ ಸಭೆಗೆ ಸಿದ್ಧತೆಯೇ?

ಉಡುಪಿ ಕೃಷ್ಣ ಮಠ ಕಟ್ಟಲು ಮುಸ್ಲಿಮರೇ ಭೂಮಿ ನೀಡಿದ್ದು:ಎಂದು ಪೇಜಾವರ ಶ್ರೀಗಳು ಹೇಳುವ ಮೂಲಕ, ಉಡುಪಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ರಾಮ ಮಂದಿರ ಕಟ್ಟವ ಸಭೆಯಲ್ಲಿ ಪೇಜಾವರ ಶ್ರೀಗಳು.. ಇದೇ ರಾಗ ಸಂಯೋಜನೆ ಮಾಡಿ.. ಉಡುಪಿ ಕೃಷ್ಣ ಮಠ ಕಟ್ಟಲು ಭೂಮಿ ಕೊಟ್ಟ ಮುಸ್ಲಿಮರು.. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಮುಸ್ಲಿಮರು ಭೂಮಿ ಬಿಟ್ಟು ಕೊಡಿ ಎಂಬ ವರಸೆಯಲ್ಲಿ ಕ್ಯಾತೆ ತೆಗೆದರು ಅಚ್ಚರಿ ಪಡಬೇಕಾಗಿಲ್ಲ ಎಂದು ನನಗೆ ಅನಿಸುತ್ತಿದೆ.

-ವಾಸುದೇವ ರೆಡ್ಡಿ

‘ಮಠದಲ್ಲಿ ಇಫ್ತಾರ್’ ಒಂದು ನಾಟಕ ಅಲ್ಲದಿದ್ದರೆ, ತನ್ನ ಸದಸ್ಯರೇ ಬೀದಿ ಜಗಳ ಮಾಡುತ್ತಿರುವಾಗ ಆರೆಸ್ಸೆಸ್ ಯಾರನ್ನಾದರೂ ಕರೆಸಿ ಬುದ್ದಿವಾದ ಹೇಳಿದೆಯೇ? ಯಾರಿಗಾದರೂ ಎಚ್ಚರಿಕೆ ನೀಡಿದೆಯೇ? ಯಾರನ್ನಾದರೂ ಸಂಘದಿಂದ ಉಚ್ಚಾಟಿಸಿದೆಯೇ? ಪೇಜಾವರ ಶ್ರೀಗಳು ಮಾಡಿದ್ದು ಸರಿ ಅಥವಾ ತಪ್ಪು ಎಂದು ಆರೆಸ್ಸೆಸ್ ನ ಉನ್ನತ ಮುಖಂಡರು ಹೇಳಿದ್ದಾರೆಯೇ. ಬಿಜೆಪಿ ಪಕ್ಷದದಿಂದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆಂದು ಬಿಂಬಿಸಲ್ಪಡುವ ಸಂತೋಷ್ ಅವರು ಈ ವಿಷಯದಲ್ಲಿ ಮೌನವಾಗಿರುವುದೇಕೆ? ಕೇಶವ ಕೃಪ ಮೌನವಾಗಿರುವುದೇಕೆ? ಪೇಜಾವರರ ನಡೆ ಸರಿ ಎನ್ನುವುದಾದರೆ ಮುತಾಲಿಕ್, ಶೋಭಾ ರಂತವರ ಬಾಯಿ ಮುಚ್ಚಿಸಲು ಆರೆಸ್ಸೆಸ್ ಮುಂದಾಗುತ್ತಿಲ್ಲವೇಕೆ? ಪೇಜಾವರರ ನಡೆ ಸರಿಯಿಲ್ಲ ಎನ್ನುವುದಾದರೆ ಶ್ರೀಗಳನ್ನು ವಿಶ್ವ ಹಿಂದೂ ಪರಿಷತ್ ನಿಂದ ಉಚ್ಚಾಟಿಸುತ್ತಿಲ್ಲವೇಕೆ? ಅಷ್ಟ ಮಠದ ಸ್ವಾಮೀಜಿಯೊಬ್ಬರು ’ಪೇಜಾವರರ ನಡೆಯೂ ಸರಿ ಇದೆ, ಶ್ರೀರಾಮ ಸೇನೆಯ ಪ್ರತಿಭಟನೆಯೂ ಸರಿ ಇದೆ’ ಎಂದು ಹೇಳಿರುವುದು ಏನನ್ನು ಸೂಚಿಸುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸರಳ. ಅವರ ಈ ಕಿತ್ತಾಟ ನಿಜವಲ್ಲ. ಅದೊಂದು ನಾಟಕ. ಇವರು ಸಂಘಪರಿವಾರ ರಚಿಸಿದ ನಾಟಕದ ಕತೆಯ ಪಾತ್ರದಾರಿಗಳಷ್ಟೆ.

-ಸಿ. ಸಿದ್ದಯ್ಯ