ಇಫ್ತಾರ್ ಕೂಟ ಸಹ ರಾಜಕೀಯ ನಾಟಕವೇ?

ಸಂಪುಟ: 
11
ಸಂಚಿಕೆ: 
28
Sunday, 2 July 2017

(ಪೇಜಾವರ ಸ್ವಾಮೀಜಿಗಳಿಗೆ ಮುನೀರ್ ಕಾಟಿಪಳ್ಳ ಪತ್ರ)

ಬಾಬ್ರಿ ಮಸೀದಿ ಉರುಳಿದ ನಂತರ ದೇಶ ಹಿಂದಿನಂತಿರಲು ಸಾಧ್ಯವಿಲ್ಲ ಎಂಬ ಪ್ರಜ್ಞಾವಂತರ ಆತಂಕ ಇಂದು ನಿಜವಾಗಿದೆ. ಉರುಳಿಸುವ ಚಳವಳಿಯ ನೇತಾರರರಾಗಿದ್ದ ತಾವು ಮಾತ್ರ ಇಂದು ಧ್ವಂಸಗೊಳಿಸದಂತೆ ತಡೆಯಲು ಶಕ್ತಿಮೀರಿ ಯತ್ನಿಸಿದೆ. ಹಿಂದು ಮುಸ್ಲಿಮರು ಸೌಹಾರ್ದದಿಂದ ಬದುಕಬೇಕು" ಎಂದು ಕರೆನೀಡುತ್ತಿದ್ದೀರಿ. ಇನ್ನೊಂದೆಡೆ ರಾಮಮಂದಿರ ಅಲ್ಲೇ ನಿರ್ಮಾಣವಾಗುವುದು ನನ್ನ ಕನಸು" ಅನ್ನುತ್ತೀರಿ.

ಆದರೆ ಈಗಲಾದರೂ ತಾವು ಸಂಘಪರಿವಾರ ಮುಸ್ಲಿಂ ವಿರೋಧಿ ರಾಜಕಾರಣವನ್ನು ಕೊನೆಗೊಳಿಸಲು (ಅದು ಅಸಾಧ್ಯ) ಪ್ರಯತ್ನಿಸಬೇಕು. ಸಾಧ್ಯವಿಲ್ಲದಿದ್ದರೆ ಕನಿಷ್ಟ ತಾವಾದರೂ ಪರಿವಾರದಿಂದ ಹೊರಬಂದು ಕೋಮುವಾದದ ಅಪಾಯದ ವಿರುದ್ದ ಒಂದು ಆಂದೋಲವನ್ನು ಕೈಗೊಳ್ಳಬೇಕು. ಇದೆಲ್ಲ ಅಸಾದ್ಯ ಅಂದಾದರೆ ತಮ್ಮ ವಿರೋಧಿಗಳು ಆರೋಪಿಸುವಂತೆ ಇಫ್ತಾರ್ ಕೂಟವು ಸಹ ಅಸ್ಪೃಶ್ಯತೆಯ ವಿರುದ್ಧ ದಲಿತರ ಕೇರಿಯಲ್ಲಿನ ತಮ್ಮ ಪಾದಯಾತ್ರೆಯಂತೆ ರಾಜಕೀಯ ನಾಟಕ, ಸಂಘಪರಿವಾರದ ರಾಜಕೀಯ ತಂತ್ರದ ಒಂದು ಜಾಣ ನಡೆ ಎಂದು ಮುಸ್ಲಿಂ ಸಮುದಾಯ ಭಾವಿಸುವ ಸಾಧ್ಯತೆಯೇ ಹೆಚ್ಚು.

ಹಿರಿಯರಾದ ಶ್ರೀ ಪೇಜಾವರ ಸ್ವಾಮೀಜಿಗಳಿಗೆ ವಂದನೆಗಳು.
 
ಮುಸ್ಲಿಮರ ಪಾಲಿಗೆ ಪವಿತ್ರವಾಗಿರುವ ರಂಜಾನ್ ವ್ರತಾಚರಣೆಯ ಕೊನೆಯ ದಿನ ತಾವು ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು, ಇಫ್ತಾರ್ ಗೆ ಆಗಮಿಸಿದ ಮುಸಲ್ಮಾನರಿಗೆ ಮಠದ ಆವರಣದಲ್ಲಿ ನಮಾಜಿಗೆ ಅವಕಾಶ ಕಲ್ಪಿಸಿದ್ದು ತಿಳಿದು ತುಂಬಾ ಖುಷಿ ಪಟ್ಟೆ. ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಶರವೇಗದಲ್ಲಿ ದೇಶದಲ್ಲಿ ಹಬ್ಬುತ್ತಿದೆ. ಆಹಾರ, ಉಡುಗೆಯ ಕಾರಣಕ್ಕೆ ಮುಸ್ಲಿಮರನ್ನು ಅನುಮಾನಿಸುವ, ’ಸಾರ್ವಜನಿಕರು’ ಗುಂಪು ಸೇರಿ ರೈಲು, ಮಾರುಕಟ್ಟೆಗಳಲ್ಲಿ ಹಲ್ಲೆ ನಡೆಸುವ ಅಪಾಯಕಾರಿ ಸಂದರ್ಭದಲ್ಲಿ ಪ್ರಮುಖ ಮಠ, ಹಿರಿಯ ಯತಿಯೊಬ್ಬರು ಇಫ್ತಾರ್ ಕೂಟ ಆಯೋಜಿಸುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಅದಕ್ಕಾಗಿ ತಮ್ಮನ್ನು ಮನಪೂರ್ವಕವಾಗಿ ಅಭಿನಂದಿಸುತ್ತೇನೆ. ಅದೇ ಸಂದರ್ಭ ಇಫ್ತಾರ್ ಸಭೆಯಲ್ಲಿದ್ದ ಮುಸ್ಲಿಮರನ್ನುದ್ದೇಶಿಸಿ ತಾವು ಆಡಿದ ಒಂದೆರೆಡು ಮಾತುಗಳು ನನ್ನಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿವೆ. ಅದನ್ನು ತಮ್ಮಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.

"ಬಾಬ್ರಿ ಮಸೀದಿ ಧ್ವಂಸಗೊಳ್ಳುವುದನ್ನು ತಪ್ಪಿಸಲು ಶಕ್ತಿಮೀರಿ ನಾನು ಪ್ರಯತ್ನಿಸಿದೆ" ಎಂದು ಹೇಳಿದ್ದೀರಿ. ಸಾಮಾನ್ಯ ತಿಳುವಳಿಕೆಯ ಪ್ರಕಾರ ಬಾಬ್ರಿ ಮಸೀದಿ ಕೆಡವಲಿಕ್ಕಾಗಿಯೇ ಸಂಘ ಪರಿವಾರ ರಾಮಮಂದಿರ ಆಂದೋಲನವನ್ನು ಹುಟ್ಟು ಹಾಕಿತ್ತು. ಮಸೀದಿ ಕೆಡವುವ ಉದ್ದೇಶದಿಂದಲೆ ಅಯೋಧ್ಯೆಯಲ್ಲಿ ಕರಸೇವೆಯ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಲಾಗಿತ್ತು. (ಹಾಗೆ ಮಸೀದಿ ಕೆಡಹಿಯೇ ಸಿದ್ದ ಎಂದು ದೇಶಾದ್ಯಂತ ಚಳವಳಿಗೆ ಇಳಿದಿದ್ದ ವಿಶ್ವಹಿಂದೂ ಪರಿಷತ್ ಗೆ ತಾವು ಉಪಾಧ್ಯಕ್ಷರು, ಮಾತೃಸಂಸ್ಥೆ ಸಂಘಪರಿವಾರ ತಮ್ಮನ್ನು ಮಾರ್ಗದರ್ಶಕ ಅಂತಲೇ ಸಂಭೋಧಿಸುತ್ತದೆ) ಹಾಗೆ ಸೇರಿಸಲಾದ ಜನಜಂಗುಳಿಯ ನಾಯಕತ್ವ ವಹಿಸಿದವರಲ್ಲಿ ತಾವೂ ಒಬ್ಬರು. ಒಡೆಯಲಿಕ್ಕಾಗಿಯೇ ಕಾರ್ಯಕ್ರಮ ಆಯೋಜಿಸಿ, ಅದಕ್ಕೆ ನಾಯಕತ್ವ ಕೊಟ್ಟು "ನನಗೆ ನೋವಾಗಿದೆ, ತಡೆಯಲು ಯತ್ನಿಸಿದೆ" ಎಂದರೆ ನಂಬುವುದಾದರು ಹೇಗೆ? ಅದಲ್ಲದೆ ಅಂದು ಮಸೀದಿಯ ಮಿನಾರಗಳು ಉರುಳಿ ಬೀಳುತ್ತಿದ್ದಾಗ ತಮ್ಮ ಶಿಷ್ಯೆ ಸಾಧ್ವಿ ಉಮಾಭಾರತಿ, ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಸಹಿತ ಪರಿವಾರದ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಕ್ಕೆ ತಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದಿರಿ. ಒಂದೆಡೆ ರಾಮಮಂದಿರ ಅಲ್ಲಿಯೇ ನಿರ್ಮಾಣ ಆಗಬೇಕು ಎಂದು ಅಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೀರಿ. ಇನ್ನೊಂದೆಡೆ ಮಸೀದಿ ಉರುಳಿದ್ದು ದುಃಖದ ಸಂಗತಿ ಎನ್ನುತ್ತೀರಿ. ಇದು ಹೇಗೆ ಸಾ ಧ್ಯ? ಈ ರೀತಿಯ ದ್ವಂದ್ವ ನಿಮ್ಮಂತ ಹಿರಿಯರಿಗೆ ಶೋಭಿಸುವುದಿಲ್ಲ.

ಇನ್ನು "ಹಿಂದು ಮುಸ್ಲಿಮರು ಸಹೋದರರಂತೆ ಬಾಳಬೇಕು, ಬಾಂಧವ್ಯ ಬೆಳೆಯಬೇಕು. ಅಂತಹ ಉದ್ದೇಶದಿಂದ ಇಫ್ತಾರ್ ಆಯೋಜಿಸಿದ್ದೇನೆ" ಅಂದಿದ್ದೀರಿ. ಆದರೆ ಅದು ಸಾಧ್ಯ ಅಂತ ತಮಗೆ ಅನಿಸುತ್ತದೆಯೇ ಶ್ರೀಗಳೆ?

ಉತ್ತರ ಪ್ರದೇಶದ ಅಖ್ಲಾಕ್ ನನ್ನು ಫ್ರಿಜ್ಜಲ್ಲಿ ದನದ ಮಾಂಸ ಇರುವ ಅನುಮಾನದಲ್ಲಿ ಮನೆಗೆ ನುಗ್ಗಿ ಥಳಿಸಿ ’ಗ್ರಾಮಸ್ಥರು’ ಥಳಿಸಿ ಕೊಂದರು. ರಾಜಸ್ತಾನದ ರೈತ ಪೆಹ್ಲೂ ಖಾನ್ ಪಶುಪಾಲನೆಗೆ ಜಾನುವಾರು ಸಾಗಿಸುತ್ತಿರುವಾಗ ಗೋಹತ್ಯೆಯ ಅನುಮಾನದಲ್ಲಿ ಗೋರಕ್ಷಕ ದಳದವರು ರಸ್ತೆ ಬದಿಯಲ್ಲಿ ಕೊಂದು ಹಾಕಿದರು. ಮೊನ್ನೆ ದೆಹಲಿಯ ರೈಲಿನಲ್ಲಿ ಹದಿನೈದರ ಹರೆಯದ ಬಾಲಕ ಜುನೈದ್ ಮತ್ತವನ ಸಹೋದರರನ್ನು ’ಸಾರ್ವಜನಿಕರು’ ತುಂಬಿದ ರೈಲಿನಲ್ಲಿ ಓಡಾಡಿಸಿ ಬಡಿದರು. ಇಫ್ತಾರ್ ಅನ್ನು ತಾಯಿಯೊಂದಿಗೆ ಆಚರಿಸಲು ಧಾವಿಸುತ್ತಿದ್ದ ಜುನೈದ್ ಸತ್ತೇ ಹೋದ. ದೆಹಲಿ ಜೆ ಎನ್ ಯು ವಿದ್ಯಾರ್ಥಿ ನಜೀಬ್ ಕಾಣೆಯಾಗಿ ವರ್ಷವಾಗುತ್ತ ಬಂದಿದೆ. ಈವರೆಗೆ ಆತನ ಸಾವಿನ ಸುದ್ದಿಯನ್ನು ಖಾತರಿ ಪಡಿಸಲು ಆಡಳಿತಕ್ಕೆ ಸಾಧ್ಯವಾಗಲಿಲ್ಲ.

ಇವು ಖಂಡಿತವಾಗಿಯೂ ಬಿಡಿ ಘಟನೆಗಳಲ್ಲ. ದೇಶಾದ್ಯಂತ ವ್ಯಾಪಿಸಿರುವ ಪರಿಸ್ಥಿತಿಯ ಕೆಲ ತುಣುಕುಗಳಷ್ಟೆ. ನಾನು, ನೀವು ಇಬ್ಬರೂ ವಾಸಿಸುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ನಾನು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿ ಇಂಥ ಘಟನೆಗಳು ದಿನ ನಿತ್ಯದ ವಿದ್ಯಮಾನ. ಜುನೈದ್, ನಜೀಬ್ ತಾಯಂದಿರು ಪುತ್ರಶೋಕದಿಂದಲೆ ಈ ಬಾರಿ ಈದ್ ಆಚರಿಸಿದರು. ಇದು ಆ ತಾಯಂದಿರ ಶೋಕ, ಆತಂಕ ಮಾತ್ರವಲ್ಲ. ಇಡೀ ಇಂಡಿಯಾದ ಮುಸ್ಲಿಮರ ಆತಂಕ.  ತಮ್ಮನ್ನು ಈ ಪ್ರಜಾಪ್ರಭುತ್ವ ದೇಶದಲ್ಲಿ ಹೇಗೆ ಬೇಕಾದರು ನಡೆಸಿಕೊಳ್ಳಬಹುದು, ’ಉದ್ರಿಕ್ತ’ ಜನಜಂಗುಳಿ ಸಾರ್ವಜನಿಕವಾಗಿಯೇ ಹೊಡೆದು ಸಾಯಿಸಬಹುದು, ಅಡುಗೆ ಮನೆಗೆ ನುಗ್ಗಿ ಪರೀಕ್ಷಿಸಬಹುದು ಎಂಬುದನ್ನು ಅರಗಿಸಿಕೊಳ್ಳಲಾಗದೆ ಸಮುದಾಯ ಚಡಪಡಿಸುತ್ತಿದೆ. ಭಯದಿಂದ ವಿಹ್ವಲಗೊಂಡಿದೆ. ಇನ್ನು ವ್ಯಾಪಕಗೊಳ್ಖುತ್ತಿರುವ ಮುಸ್ಲಿಂ ವಿರೋಧಿ ಅಭಿಯಾನಗಳಿಂದ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯದ ಅಭಿವೃದ್ದಿಗೆ ಬೇಕಾದ ಯಾವ ಯೋಜನೆಯನ್ನೂ ಸರಕಾರಗಳು ಕೈಗೊಳ್ಳದಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದು ಸಾಮಾಜಿಕವಾಗಿ, ಆರ್ಥಿಕವಾಗಿ ಮುಸ್ಲಿಮರನ್ನು ದಲಿತರ ಬದುಕಿಗಿಂತಲೂ ಕೆಳಹಂತಕ್ಕೆ ಬಲವಂತವಾಗಿ ತಳ್ಳುತ್ತಿದೆ.

ಇಷ್ಟೊಂದು ಪ್ರಮಾಣದಲ್ಲಿ ಮುಸ್ಲಿಂ ವಿರೋಧಿ ಭಾವನೆ ಬಹುಸಂಖ್ಯಾತ ಸಮುದಾಯದಲ್ಲಿ ಯಾಕೆ ಗಟ್ಟಿಯಾಗಿ ಬೇರೂರುತ್ತಿದೆ ಎಂದು ಆಲೋಚಿಸಿದ್ದೀರಾ ಪ್ರಿಯ ಸ್ವಾಮೀಜಿ -  ಇಂದು ಈ ಮಟ್ಟಿಗಿನ ಸ್ಥಿತಿ ನಿರ್ಮಾಣವಾಗಲು ಎರಡೂವರೆ ದಶಕದ ಹಿಂದೆ ತಾವು ಭಾಗವಾಗಿದ್ದ ’ರಾಮ ಜನ್ಮ ಭೂಮಿ’ ಚಳವಳಿಯನ್ನು ಸಂಘಪರಿವಾರ ತೀವ್ರಗೊಳಿಸಿದ್ದು, ಬಾಬ್ರಿ ಮಸೀದಿ ಉರುಳಿ ಬಿದ್ದದ್ದು ಕಾರಣ. ಅಂದು ಮಸೀದಿ ಉರುಳಿಸಿ, ಆ ದ್ವೇಷಪೂರಿತ ವಾತಾವರಣವನ್ನು ಬಳಸಿಕೊಂಡು ಹಿಂದುತ್ವದ ರಾಜಕಾರಣವನ್ನು ಸಂಘಪರಿವಾರ ದೇಶಾದ್ಯಂತ ಹರಡಿತು. ಅಂದು ಹಚ್ಚಿದ ಬೆಂಕಿಯ ಬೆಳಕಿನಲ್ಲಿ ತನ್ನ ಅಜೆಂಡಾದಲ್ಲಿದ್ದ ಗೋಹತ್ಯೆ, ಮತಾಂತರ, ಸಮಾನ ನಾಗರಿಕ ಸಂಹಿತೆ, ರಾಷ್ಟ್ಟ್ರೀಯತೆ ಮುಂತಾದ ವಿಷಪೂರಿತ ವಿಷಯಗಳನ್ನು ಮುಂದಿಟ್ಟು ದೇಶದಲ್ಲಿ ಮುಸ್ಲಿಂ ವಿರೋಧಿ ಭಾವನೆಯನ್ನು ತಳಮಟ್ಟದಲ್ಲೇ ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಯಿತು. ಬಾಬ್ರಿ ಮಸೀದಿ ಉರುಳಿದ ನಂತರ ದೇಶ ಹಿಂದಿನಂತಿರಲು ಸಾಧ್ಯವಿಲ್ಲ ಎಂಬ ಪ್ರಜ್ಞಾವಂತರ ಆತಂಕ ಇಂದು ನಿಜವಾಗಿದೆ. ಉರುಳಿಸುವ ಚಳವಳಿಯ ನೇತಾರರರಾಗಿದ್ದ ತಾವು ಮಾತ್ರ ಇಂದು ಧ್ವಂಸಗೊಳಿಸದಂತೆ ತಡೆಯಲು ಶಕ್ತಿಮೀರಿ ಯತ್ನಿಸಿದೆ. ಹಿಂದು ಮುಸ್ಲಿಮರು ಸೌಹಾರ್ದದಿಂದ ಬದುಕಬೇಕು" ಎಂದು ಕರೆನೀಡುತ್ತಿದ್ದೀರಿ. ಇನ್ನೊಂದೆಡೆ ರಾಮಮಂದಿರ ಅಲ್ಲೇ ನಿರ್ಮಾಣವಾಗುವುದು ನನ್ನ ಕನಸು" ಅನ್ನುತ್ತೀರಿ.

ಮಸೀದಿ ಧ್ವಂಸದ ನಂತರ ಕಾಣಿಸಿಕೊಂಡ ಮತೀಯ ಅಪನಂಬಿಕೆ, ದ್ವೇಷ, ಮತಾಂಧತೆ. ಇದೆಲ್ಲವನ್ನೂ ತಾವು ಭಾಗಿಯಾಗಿರುವ ಸಂಘಟನೆ ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿರುವಂತದ್ದು. ಈಗ ತಾವು ತಮ್ಮ ಪರಿವಾರದ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಇಫ್ತಾರ್ ಕೂಟ ಆಯೋಜಿಸಿದ್ದೀರಿ. ನಮಾಜ್ ಗೆ ಅವಕಾಶ ಕಲ್ಪಿಸಿದಿರಿ. ಸಂತೋಷ. ದೇಶದಲ್ಲಿ ಮತ್ತೆ ಬಾಬರಿ ಮಸೀದಿ ಧ್ವಂಸದ ಪೂರ್ವ ದಿನಗಳು ಮರಳಲು ಇಂತಹ ಎಷ್ಟು ಕೆಲಸಗಳು ನಡೆದರೂ ಸಾಲದು. ಅದರೊಂದಿಗೆ ಬಾಬರಿ ಮಸೀದಿ ಧ್ವಂಸದ ಆಂದೋಲನದಲ್ಲಿ ಭಾಗಿಯಾಗಿದ್ದಕ್ಕೆ, ಈಗಿನ ಅಸಹಿಷ್ಣು ಸ್ಥಿತಿಯ ಬಗ್ಗೆ ತಮ್ಮ ಆತಂಕ ಪ್ರಾಮಾಣಿಕವಾದದ್ದೇ. ಆದರೆ ಈಗಲಾದರೂ ತಾವು ಸಂಘಪರಿವಾರ ಮುಸ್ಲಿಂ ವಿರೋಧಿ ರಾಜಕಾರಣವನ್ನು ಕೊನೆಗೊಳಿಸಲು (ಅದು ಅಸಾಧ್ಯ) ಪ್ರಯತ್ನಿಸಬೇಕು. ಸಾಧ್ಯವಿಲ್ಲದಿದ್ದರೆ ಕನಿಷ್ಟ ತಾವಾದರೂ ಪರಿವಾರದಿಂದ ಹೊರಬಂದು ಕೋಮುವಾದದ ಅಪಾಯದ ವಿರುದ್ದ ಒಂದು ಆಂದೋಲವನ್ನು ಕೈಗೊಳ್ಳಬೇಕು. ಇದೆಲ್ಲ ಅಸಾದ್ಯ ಅಂದಾದರೆ ತಮ್ಮ ವಿರೋಧಿಗಳು ಆರೋಪಿಸುವಂತೆ ಇಫ್ತಾರ್ ಕೂಟವು ಸಹ ಅಸ್ಪೃಶ್ಯತೆಯ ವಿರುದ್ಧ ದಲಿತರ ಕೇರಿಯಲ್ಲಿನ ತಮ್ಮ ಪಾದಯಾತ್ರೆಯಂತೆ ರಾಜಕೀಯ ನಾಟಕ, ಸಂಘಪರಿವಾರದ ರಾಜಕೀಯ ತಂತ್ರದ ಒಂದು ಜಾಣ ನಡೆ ಎಂದು ಮುಸ್ಲಿಂ ಸಮುದಾಯ ಭಾವಿಸುವ ಸಾಧ್ಯತೆಯೇ ಹೆಚ್ಚು.

ಹಾಗಾಗದಿರಲಿ ಎಂದು ಹಾರೈಸುತ್ತಾ ನನ್ನ ಪತ್ರವನ್ನು ಕೊನೆಗಾಣಿಸುತ್ತೇನೆ.

ನಮಸ್ಕಾರ.
 
ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ
ಮುನೀರ್ ಕಾಟಿಪಳ್ಳ. ರಾಜ್ಯಾಧ್ಯಕ್ಷರು, ಡಿ.ವೈ.ಎಫ್.ಐ.