ದ್ವೇಷದ ವಿರುದ್ಧ ನಮ್ಮೆಲ್ಲರ ದನಿ- ನನ್ನ ಹೆಸರಲ್ಲಿ ಬೇಡ ಹೊಲಸು ಕೃತ್ಯಗಳು

ಸಂಪುಟ: 
11
ಸಂಚಿಕೆ: 
28
Sunday, 2 July 2017

ಕೊನೆಗೂ ದ್ವೇಷ ಹರಡುವವರ ವಿರುದ್ಧ ಪ್ರತಿಭಟನೆ ಮೊಳಗಲಾರಂಭಿಸಿದೆ

ಜೂನ್ ೨೮ ರಂದು ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ೧೨ ಪ್ರಮುಖ ನಗರಗಳಲ್ಲಿ ಸಾಮಾನ್ಯ ನಾಗರಿಕರು  ಗೋರಕ್ಷಣೆಯ ಹೆಸರಿನ ದುಷ್ಕೃತ್ಯಗಳ ವಿರುದ್ಧ ತಮ್ಮ ಮೌನ ಮುರಿದಿದ್ದಾರೆ. ದೇಶದ ಪ್ರಧಾನ ಮಂತ್ರಿಗಳೂ ತಮ್ಮ ದಿವ್ಯಮೌನವನ್ನು ಪರೋಕ್ಷವಾಗಿಯಾದರೂ ಮುರಿಯುವಂತೆ ಮಾಡಿದ್ದಾರೆ.  ವಿದ್ಯಾರ್ಥಿಗಳು, ಶಿಕ್ಷಕರು, ಪತ್ರಕರ್ತರು, ರಾಜಕೀಯ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರು ’ನನ್ನ ಹೆಸರಲ್ಲಿ ಬೇಡ’ ಎಂದು ಈ ದುಷ್ಟತನದ ವಿರುದ್ಧ ದನಿಯೆತ್ತಿದ್ದಾರೆ.

ಜೂನ್ ೨೨ರ ಸಂಜೆ ದಿಲ್ಲಿ ಮಹಾನಗರದ ವ್ಯಾಪ್ತಿಯಲ್ಲೇ ೧೫ ವರ್ಷದ ಬಾಲಕ ಜುನೈದ್‌ನನ್ನು  ಗೋಮಾಂಸ ತಿನ್ನುವವನೆಂದು ಒಂದು ಗುಂಪು ರೈಲ್ವೆ ಬೋಗಿಯಲ್ಲೇ ಬಡಿದು ಸಾಯಿಸಿ, ಅದನ್ನು ಹೆದರಿ ಮೌನವಾಗಿ ನೋಡುತ್ತಿದ್ದ ಸುಮಾರು ೨೦೦ ಜನರ ಮುಂದೆಯೇ ರೈಲು ನಿಲ್ದಾಣಕ್ಕೆ ಎಸೆದರು ಎಂಬ ಭೀಕರ ಸುದ್ದಿ  ಕೊನೆಗೂ ದೇಶದ  ಪ್ರಜ್ಞೆಯನ್ನು ಬಡಿದೆಬ್ಬಿಸಿರುವಂತೆ ಕಾಣುತ್ತದೆ.

’ಸಿಟಿಝನ್’ ವೆಬ್ ಪತ್ರಿಕೆ ಗಮನಿಸಿದಂತೆ ಈ ಮೌನವನ್ನು ಮೊದಲು ಮುರಿದದ್ದು ಸುಮಾರಾಗಿ ಕೂಡಲೇ ಸಿಪಿಐ(ಎಂ)ನ  ಬೃಂದಾ ಕಾರಟ್ ಮತ್ತು ಸಂಗಾತಿಗಳು ಜುನೈದ್‌ನಂತಹ ಸಾವಿನಿಂದ ಹೇಗೋ ಪಾರಾಗಿ ಆಸ್ಪತ್ರೆಯಲ್ಲಿದ್ದ ಆತನ ಸೋದರರನ್ನು ಭೇಟಿಯಾಗಲು ಧಾವಿಸಿದಾಗ. ಮರುದಿನವೇ ಅವರ ನೇತೃತ್ವದ ಸಿಪಿಐ(ಎಂ)ನ  ನಿಯೋಗ ಜುನೈದನ ಮನೆಗೆ ಹೋಗಿ ಬಂದು ಪತ್ರಿಕಾ ಹೇಳಿಕೆ ನೀಡಿತು(ಈ ಸಂಚಿಕೆಯ ಪುಟ ೨ ನೋಡಿ)

ಇದರ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ಸುದ್ದಿ ಹರಿದಾಡಿತು. ಇಬ್ಬರು ವ್ಯಕ್ತಿಗಳು, ಒಬ್ಬ ಕಲಾವಿದೆ ಸಬಾ ದಿವಾನ್ ಮತ್ತು ಒಬ್ಬ ಕಾರ್ಯಕರ್ತೆ ರಾಹುಲ್ ರಾಯ್  ಜಂತರ್ ಮಂತರ್‌ನಲ್ಲಿ ’ನಾಟ್ ಇನ್ ಮೈ ನೇಮ್’ ’ದ್ವೇಷದ ವಿರುದ್ಧ ನಮ್ಮೆಲ್ಲರ ದನಿ’ ಎಂಬ ಹೆಸರಲ್ಲಿ ಮೌನ ಮುರಿಯಲು ಕರೆ ನೀಡಿದರು. ಈ ಕರೆ ದಿಲ್ಲಿಯ ಜನಗಳ ನಡುವೆ ಮಾತ್ರವಲ್ಲ ದೇಶಾದ್ಯಂತ ಹರಡಿತು.

ಜೂನ್ ೨೮ರಂದು ದೇಶದ ಹನ್ನೆರಡು ನಗರಗಳಲ್ಲಿ ಸಾವಿರಾರು ಮಂದಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಬೀದಿಗಿಳಿದರು. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜುನೈದ್‌ನ ಕುಟುಂಬದವರು ಮತ್ತು ಕೆಲವು ದಿನಗಳ ಹಿಂದೆ ರಾಜಸ್ತಾನದಲ್ಲಿ ಗೋರಕ್ಷಕರು ಬಡಿದು ಸಾಯಿಸಿದ  ಹರ್ಯಾಣದ ರೈತ ಪಹ್ಲೂ ಖಾನ್ ಕುಟುಂಬದವರೂ ಭಾಗವಹಿಸಿದರು.  
ಜುನೈದನ ೨೨ ವರ್ಷಗಳ ಸೋದರ ಸಂಬಂಧಿ ಮಹಮ್ಮದ್ ಅಸರುದ್ಧೀನ್ ’ಸ್ವರ್ಗದಲ್ಲಿರುವ ಜುನೈದನಿಂದ ತಾಯಿಗೆ’ ಎಂಬ ಕವನ ಓದಿದರು.

ಬಡಿದು ಸಾಯಿಸುವ ಜನಜಂಗುಳಿ ತಂತ್ರ  ಸಂಘ ಪರಿವಾರ ಅಂಗೀಕರಿಸಿರುವ ಹೊಸ ಕಾರ್ಯತಂತ್ರ. ಅಲ್ಪಸಂಖ್ಯಾತರು ಅಭಿಪ್ರಾಯ ತಿಳಿಸಲು, ಪ್ರತಿಭಟಿಸಲು ಆಗಬಾರದು, ಪ್ರತಿಯೊಬ್ಬರನ್ನೂ ಹೆದರಿಸಿಡಬೇಕು, ಜನ ಪ್ರತಿಭಟಿಸಲು ಹೆದರುವಂತಹ ವಾತಾವರಣ ಸೃಷ್ಟಿಸುವುದು ಅವರ ಕಾರ್ಯಕತಂತ್ರ ಎಂದು ಒಬ್ಬ ಪ್ರಾಧ್ಯಾಪಕರು ಹೇಳಿದರು.

ಬಹಳಷ್ಟು ಜನ ಸರಕಾರ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳುತ್ತಿದ್ದಾರೆ. ಆದರೆ ಸರಕಾರ ತಾನೇನು ಮಾಡಬೇಕೆಂದು ಯೋಜಿಸಿದೆಯೋ ಅದನ್ನೇ ಮಾಡುತ್ತಿದೆ. ಜನ ಅದರ ಅಜೆಂಡಾವನ್ನು ಅರಿಯಬೇಕಾಗಿದೆ’ ಎಂದರು ಸುಭಾಷಿಣಿ ಅಲಿ.

ಜನ ಈ ಅಜೆಂಡಾವನ್ನು ಅರಿಯ ಲಾರಂಭಿಸಿದ್ದಾರೆಯೇ, ಜನರು ಬಾಯಿಮುಚ್ಚಿ ಕೊಂಡಿರುವಂತೆ ಮಾಡುವ ಕಾರ್ಯತಂತ್ರ ವಿಫಲವಾಗಲಾರಂಭಿಸಿದೆಯೇ, ಕಾದು ನೋಡಬೇಕು.