Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಪತ್ರಕರ್ತರಿಗೆ ಜೈಲು ಶಿಕ್ಷೆ : ಕಾನೂನು-ಬಾಹಿರ ಮತ್ತು ಪ್ರಜಾಸತ್ತಾ-ವಿರೋಧಿ ಕ್ರಮ

ಸಂಪುಟ: 
11
ಸಂಚಿಕೆ: 
28
Sunday, 2 July 2017

‘ಹಾಯ್ ಬೆಂಗಳೂರು’ ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಸಂಪಾದಕ ಅನಿಲ್ ರಾಜ್ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ, ರೂ. ೧೦ ಸಾವಿರ ದಂಡ ವಿಧಿಸಲು ವಿಧಾನಸಭೆಯ ಹಕ್ಕು ಬಾಧ್ಯತೆ ಸಮಿತಿ ಶಿಫಾರಸು ಮಾಡಿದೆ. ತಮ್ಮ ವಿರುದ್ಧ ಈ ಇಬ್ಬರೂ ಪತ್ರಕರ್ತರು ಅವಹೇಳನಕಾರಿ ಲೇಖನ ಪ್ರಕಟಿಸಿದ್ದಾರೆ ಎಂದು ಇಬ್ಬರು ಶಾಸಕರು ಸದನಕ್ಕೆ ದೂರು ಸಲ್ಲಿಸಿದ್ದರು. ಅದಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ. ಸ್ಪೀಕರ್ ಕೋಳಿವಾಡ ಅವರ ಈ ನಿರ್ಣಯ ಕಾನೂನು-ಬದ್ಧ ಅಲ್ಲ ಮತ್ತು ಪ್ರಜಾಸತ್ತಾ-ವಿರೋಧಿ ಕ್ರಮ ಕೂಡಾ.

ಸದನದ ಹೊರಗಿನ ನಡವಳಿಕೆ ಬಗ್ಗೆ ಬರೆಯುವುದನ್ನೂ ಸದನದ ಹಕ್ಕುಚ್ಯುತಿ ಎಂದು ಪರಿಗಣಿಸಲು ಬರುವುದಿಲ್ಲ. ಶಾಸಕರ ಬಗ್ಗೆ ಅವಹೇಳನಕಾರಿ ಮತ್ತು ಸುಳ್ಳು ವರದಿ ಪ್ರಕಟಿಸಿದ್ದರೆ, ಅದು ಸದನದ ಅಥವಾ ಶಾಸಕರ ಹಕ್ಕುಚ್ಯುತಿ ಆಗುವುದಿಲ್ಲ. ಮಾತ್ರವಲ್ಲ, ಹಕ್ಕುಚ್ಯುತಿ ಸಮಿತಿಗಾಗಲಿ ಸದನಕ್ಕಾಗಲಿ ಅಥವಾ ಶಾಸಕಾಂಗದ ಯಾವುದೇ ಭಾಗಕ್ಕಾಗಲಿ ಶಿಕ್ಷೆ ಕೊಡುವ ಅಧಿಕಾರವಿಲ್ಲ. ಈ ಇಬ್ಬರು ಪತ್ರಕರ್ತರು ತಪ್ಪಿತಸ್ಥರು ಎಂದು ನಿರ್ಣಯಿಸುವ ಮೊದಲು ಸಮಿತಿಯಾಗಲಿ ಸದನವಾಗಲಿ ‘ಆರೋಪ ಎದುರಿಸುತ್ತಿರುವ ವ್ಯಕ್ತಿಗಳಿಗೆ’ ವಿವರಣೆ ನೀಡಲು ಅವಕಾಶವನ್ನು ಕೊಡಬೇಕಾಗಿತ್ತು. ಸಹಜ ನ್ಯಾಯ ತತ್ವವನ್ನು ಪಾಲಿಸಬೇಕಾಗಿತ್ತು. ಸಮಿತಿಯ  ಮುಂದೆ ಹಾಜರಾಗಲಿಲ್ಲ ಎಂಬುದರ ಮೇಲೆನೇ ಇಷ್ಟು ಕಟು ನಿರ್ಣಯಕ್ಕೆ ಬರುವುದು ಸರಿಯಲ್ಲ. ಅಪರಿಮಿತ ಅಧಿಕಾರ ಇರುವ ಸದನ ಅದನ್ನು ಬಳಸುವಾಗ ಸಂಯಮ ತೋರಿಸಬೇಕಾಗಿತ್ತು. ಆದರೆ ಅದ್ಯಾವುದೂ ನಡೆಯಲೇ ಇಲ್ಲ.. ಕಾನೂನು ಪರಿಣತರು ಮತ್ತು ಕೆಲವು ಮಾಜಿ ಸ್ಪೀಕರ್ ಗಳು ಕೂಡಾ ಇದು ಕಾನೂನುಬದ್ಧ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಶಾಸಕರ ಸಾರ್ವಜನಿಕ ಬದುಕು, ಭ್ರಷ್ಟಾಚಾರ, ಮತ್ತಿತರ ನಡವಳಿಕೆಗಳ ಬಗ್ಗೆ ತನಿಖೆ ಮಾಡಿ ಆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಹಕ್ಕು ಪತ್ರಿಕೆಗಳಿಗೆ ಇದೆ. ಅದು ಪತ್ರಿಕೆಗಳ ಕರ್ತವ್ಯ ಕೂಡಾ. ಆದರೆ ಈ ಪತ್ರಿಕೆಗಳು ಶಾಸಕರ ವಿರುದ್ಧ ಉದ್ದೇಶಪೂರ್ವಕವಾಗಿ ಯಾವುದೇ ಪುರಾವೆ ಆಧಾರವಿಲ್ಲದೆ ಅವಹೇಳನಕಾರಿ ಸುಳ್ಳು ವರದಿ ಬರೆದರೆ ಅದಕ್ಕೆ ಕಾನೂನುಬದ್ಧ ಪರಿಹಾರ ಇದೆ. ಆಪಾದಿತ ಶಾಸಕರು ಈ ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ಶಾಸಕರು ಇದರ ಬದಲು ಹಕ್ಕುಚ್ಯುತಿ ಸಮಿತಿಗೆ ದೂರು ಕೊಟ್ಟಿರುವುದು, ಅವರಿಗೆ ಕೋರ್ಟಿಗೆ ಹೋಗಿ ತಮ್ಮ ಕೇಸು ಗೆಲ್ಲುವ ಸಾಧ್ಯೆತೆ ಇಲ್ಲವೇನೋ, ಆಪಾಧನೆಗಳು ನಿಜವೇನೋ. ಅವರು ತಮ್ಮ ಅಧಿಕಾರ ಬಳಸಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಏನೋ ಎಂಬ ಸಂದೇಹಕ್ಕೆ ಎಡೆಕೊಡುತ್ದದೆ.

ಸ್ಪೀಕರ್ ಕೋಳಿವಾಡ ಈಗಾಗಲೇ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಮಾಧ್ಯಮಗಳನ್ನು ‘ಹದ್ದುಬಸ್ತಿಗೆ ತರಲು” ಕಟು ಕಾನೂನು ತರಬೇಕು ಎಂದು ಸಮಿತಿ ರಚಿಸಲು ಹೊರಟಿದ್ದರು. ಆದರೆ ಇದಕ್ಕೆ ಬಂದ ತೀವ್ರ ಪ್ರತಿರೋಧ ಮತ್ತು ನೇಮಿತವಾದ ಶಾಸಕರೇ ಇದನ್ನು ವಿರೋಧಿಸಿದ್ದರಿಂದ ಅದು ಬಿದ್ದು ಹೋಯಿತು. ಆದರೆ ಸ್ಪೀಕರ್ ಕೋಳಿವಾಡ ಅವರ ಮೇಲೆ ಮಾಧ್ಯಮ-ವಿರೋಧಿ ಪ್ರಜಾಸತ್ತೆ-ವಿರೋಧಿ ಹಣೆಪಟ್ಟಿ ಬಿದ್ದು ಬಿಟ್ಟಿದೆ. ಆ ಹಿನ್ನೆಲೆಯಲ್ಲಿ ಈ ನಿರ್ಣಯ ಇನ್ನಷ್ಟು ಸಂಶಯಕ್ಕೆ ಎಡೆಕೊಟ್ಟಿದೆ.

ಇದರರ್ಥ ಮಾಧ್ಯಮಗಳ ಮೇಲೆ ಯಾವುದೇ ನಿಬಂಧನೆಗಳು ಇರಬಾರದು ಎಂದಲ್ಲ. ಖಂಡಿತ (ಕೋಮುಗಲಭೆಯಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಚಟುವಟಿಕೆಯಲ್ಲಿ ತೊಡಗುವುದು ಮುಂತಾದ) ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದಾಗ, ಪೇಯ್ಡ್ ನ್ಯೂಸ್ ನಂತಹ ಭ್ರಷ್ಟ ಕ್ರಮಗಳಲ್ಲಿ ತೊಡಗಿದಾಗ, ಟಿ.ಆರ್.ಪಿ.ಗಾಗಿ ಅನೈತಿಕ ಮಾರ್ಗ ಅನುಸರಿಸಿದಾಗ, ವ್ಯಕ್ತಿತ್ವ-ಹನನದಲ್ಲಿ ತೊಡಗಿದಾಗ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದು ನಿಜ. ಆದರೆ ಇವುಗಳಲ್ಲಿ ಹಲವನ್ನು ಈಗಿರುವ ಕಾನೂನುಗಳನ್ನು ಬಳಸಿ ಕೈಗೊಳ್ಳಬಹುದು. ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ, ಅವುಗಳ ಬಾಯಿ ಮುಚ್ಚುವ ಯಾವುದೇ ಕ್ರಮ ಪ್ರಜಾಪ್ರಭುತ್ವ-ವಿರೋಧಿ ಆಗುತ್ತದೆ. ಮಾಧ್ಯಮರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದರ ಸ್ವಾತಂತ್ರ್ಯದ ರಕ್ಷಣೆ ಪ್ರಜಾಪ್ರಭುತ್ವದ ರಕ್ಷಣೆಗೆ ಅಗತ್ಯ.

ಸ್ಪೀಕರ್ ಕೋಳಿವಾಡ ಅವರ ಈ ದುಡುಕಿನ ಕ್ರಮಗಳಿಗೆ ಮುಖ್ಯಮಂತ್ರಿ ಕಡಿವಾಣ ಹಾಕಿದ್ದಾರೆ. ಸದ್ಯಕ್ಕೆ ಪತ್ರಕರ್ತರನ್ನು ಬಂದಿಸದಂತೆ ನಿರ್ಧೇಶನ ಕೊಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನಿಂದ ಕರ್ನಾಟಕದ ಉಸ್ತುವಾರಿ ಸದಸ್ಯ ಕೆ.ಸಿ.ವೇಣುಗೋಪಾಲ ಸಹ ಪತ್ರಕರ್ತರ ಬಂಧನವನ್ನು ವಿರೋಧಿಸಿದ್ದಾರೆ. ಅವರು “ಕಾಂಗ್ರೆಸ್ ಮಾಧ್ಯತಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮವನ್ನು ಖಂಡಿಸುವುದು” ಎಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕೋಳಿವಾಡ ಬಂಧನಕ್ಕೆ ಒತ್ತಡ ಹಾಕುತ್ತಿದ್ದು, ಇದು ಶಾಸಕಾಂಗ-ಕಾರ್ಯಾಂಗಗಳ ನಡುವೆ ಘರ್ಷಣೆಗೂ ಕಾರಣವಾಗಬಹುದು ಎನ್ನಲಾಗಿದೆ. ಪತ್ರಕರ್ತರು ಸ್ಪೀಕರ್ ಆಜ್ಞೆಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಅದಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿಗಳು ವಿಳಂಬ ನೀತಿ ಅನುಸರಿಸದೆ, ಪತ್ರಕರ್ತರ ಬಂಧನದ ಆಜ್ಞೆಯನ್ನು ಹಿಂದಕ್ಕೆ ತೆಗೆಯುವಂತೆ ಕ್ರಮ ವಹಿಸಬೇಕು. ಮಾಧ್ಯನಮಗಳು ಮತ್ತು ಎಲ್ಲಾ ಪ್ರಜಾಪಭುತ್ವವಾದಿಗಳು ಇದಕ್ಕೆ ತೀವ್ರ ಒತ್ತಡ ಹೇರಬೇಕು. ಅದಕ್ಕೆ ಇಬ್ಬರೂ ಪತ್ರಕರ್ತರ ವೈಯಕ್ತಿಕ ತಪ್ಪು-ಒಪ್ಪುಗಳು ಅಡ್ಡಿಯಾಗಬಾರದು.