ಜಿಎಸ್‌ಟಿ-ರಾಜ್ಯಗಳ ಹಕ್ಕುಗಳ ಮೇಲೆ ಅಭೂತಪೂರ್ವ ಪ್ರಹಾರ

ಸಂಪುಟ: 
11
ಸಂಚಿಕೆ: 
28
date: 
Sunday, 2 July 2017
Image: 

ಜುಲೈ 1, 2017ರಿಂದ ತರುತ್ತಿರುವ ’ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್’, ಅಂದರೆ , ಸರಕು ಮತ್ತು ಸೇವೆಗಳ ತೆರಿಗೆ, ಸಂಕ್ಷಿಪ್ತವಾಗಿ, ಜಿಎಸ್‌ಟಿ, ರಾಜ್ಯಗಳ ಹಕ್ಕುಗಳ ಮೇಲಿನ  ಪ್ರಹಾರವನ್ನು ಒಂದು ಅಭೂತಪೂರ್ವ ಮಟ್ಟಕ್ಕೆ ಒಯ್ಯುತ್ತಿದೆ. ಇದು ಸುಸ್ಪಷ್ಟ, ಸ್ವಯಂವೇದ್ಯ ಮತ್ತು ವಿವಾದಾತೀತ, ಯಾರೂ ಕೂಡ ಇದನ್ನು ನಿರಾಕರಿಸುತ್ತಿಲ್ಲ, ಆದರೆ ’ಅಭಿವೃದ್ಧಿ’ ಹೆಸರಲ್ಲಿ ಸಮರ್ಥಿಸುತ್ತಿದ್ದಾರೆ.

’ಅಭಿವೃದ್ಧಿ’ಯ ಈ ವಿಚಾರ ಸಂವಿಧಾನಿಕ ಮೌಲ್ಯಗಳಿಂದ ಭಿನ್ನವಾಗಿ, ಕೇವಲ ಜಿಡಿಪಿ ಆಧಾರದಲ್ಲೇ ನಿರೂಪಿಸಿರುವಂತದ್ದು. ಅಷ್ಟೇ ಅಲ್ಲ, ರಾಜ್ಯಗಳನ್ನು ಸಂಪನ್ಮೂಲಗಳಿಗಾಗಿ ಕೇಂದ್ರದ ಮುಂದೆ ಕೈಚಾಚುವ ಸ್ಥಾನಕ್ಕೆ ಇಳಿಸಿದರೆ, ತನ್ಮೂಲಕ ಒಕ್ಕೂಟ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿದಂತಾಗುತ್ತದೆ ಎಂಬ ನಮ್ಮ ಸಂವಿಧಾನದ ಅರಿವಿನ ಉಲ್ಲಂಘನೆ ಕೂಡ

ಎನ್ನುತ್ತಾರೆ ಪ್ರೊ. ಪ್ರಭಾತ್ ಪಟ್ನಾಯಕ್

ಭಾರತೀಯ ಸಂವಿಧಾನ ರಾಜಕೀಯ ಒಕ್ಕೂಟ ರಚನೆಗೆ ಪೂರಕವಾಗಿ ಒಂದು ವಿತ್ತೀಯ ಒಕ್ಕೂಟ ರಚನೆಯನ್ನೂ ಸ್ಥಾಪಿಸಿದೆ. ರಾಜ್ಯಗಳನ್ನು ಸಂಪನ್ಮೂಲಗಳಿಗಾಗಿ ಕೇಂದ್ರದ ಮುಂದೆ  ಕೈಚಾಚುವ ಸ್ಥಾನಕ್ಕೆ ಇಳಿಸಿದರೆ ಅದು ತನ್ಮೂಲಕ ಒಕ್ಕೂಟ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿದಂತಾಗುತ್ತದೆ ಎಂಬ ಅರಿವು ಸಂವಿಧಾನಕ್ಕೆ ಇತ್ತು. ಆದ್ದರಿಂದಲೇ ಅದು ಕೇಂದ್ರಕ್ಕೆ ವಿಧಿಸಲು ಬಿಟ್ಟ ತೆರಿಗೆಗಳಿಗಿಂತ ಭಿನ್ನವಾಗಿ,  ಕೆಲವು ನಿರ್ದಿಷ್ಟ ತೆರಿಗೆಗಳನ್ನು ರಾಜ್ಯಗಳು ವಿಧಿಸಬೇಕು ಮತ್ತು ಹಣಕಾಸು ಆಯೋಗ ಎಂಬ ಸಂಸ್ಥೆಯನ್ನು ಐದು ವರ್ಷಕೊಮ್ಮೆ ರಚಿಸಬೇಕು ಎಂದು ನಿರ್ದಿಷ್ಟಪಡಿಸಿತು. ಈ ಆಯೋಗದ ಆವಶ್ಯಕತೆ ಕಂಡು ಬಂದದ್ದು, ಕೇಂದ್ರಕ್ಕೆ ಬಿಟ್ಟ ತೆರಿಗೆಗಳಿಂದ ಅದರ ಖರ್ಚಿನ ಜವಾಬ್ದಾರಿಗಳಿಗಿಂತ ಹೆಚ್ಚಿನ ಮೊತ್ತ ಬರುತ್ತದೆ, ಅದರೆ ರಾಜ್ಯಗಳ ವಿಷಯದಲ್ಲಿ ಅದು ತದ್ವಿರುದ್ಧವಾಗಿದೆ ಎಂಬ ಸಂಗತಿಯಿಂದಾಗಿ.

ಆದರೆ ಕೇಂದ್ರ ನಂತರದ ವರ್ಷಗಳಲ್ಲಿ ರಾಜ್ಯಗಳಿಗೆ ಸಂಪನ್ಮೂಲಗಳ ಕೊರತೆ ಉಳಿಯುವಂತೆ, ಅವು ಕೇಂದ್ರದ ಸದಾಶಯದ ಮೇಲೆ ಅವಲಂಬಿಸಿರುವಂತೆ, ಮತ್ತು  ಸಾಧ್ಯವಾದಷ್ಟೂ ಅವುಗಳನ್ನು ಯಾಚನೆಯ ಮಟ್ಟಕ್ಕೆ ಇಳಿಸುವಂತೆ ಹಲವು ಸಾಧನಗಳನ್ನು ಬಳಸಿದೆ. ಅವನ್ನಿಲ್ಲಿ ನಾವು ಚರ್ಚಿಸಬೇಕಾಗಿಲ್ಲ. ಉದಾಹರಣೆಗೆ, ಹಣಕಾಸು ಆಯೋಗದ ವ್ಯಾಪ್ತಿ ಕೇಂದ್ರದ  ಪಾಲಿಗೆ ಬರುವ ಎಲ್ಲ ಸಂಪನ್ಮೂಲಗಳನ್ನು ತಲುಪದಂತೆ(ಒಂದು ಗಮನಾರ್ಹ ಭಾಗ ಕೇಂದ್ರ ಇಲಾಖೆಗಳ ಮೂಲಕ, ಅಂದರೆ ಕೇಂದ್ರದ ಮರ್ಜಿಗೆ ಅನುಸಾರವಾಗಿಯೇ, ರಾಜ್ಯಗಳಿಗೆ ವರ್ಗಾವಣೆಯಾಗುವುದು ಮುಂದುವರಿಯುವಂತೆ) ಮತ್ತು ಹಣಕಾಸು ಆಯೋಗದ  ಸ್ವರೂಪ ಹಾಗೂ ಅದರ ಕಾರ್ಯಕ್ಷೇತ್ರವನ್ನು ತಾನೇ ಏಕಪಕ್ಷೀಯವಾಗಿ ನಿರ್ಧರಿಸುವಂತೆ  ನೋಡಿಕೊಂಡಿದೆ. ಇದು ಸಂವಿಧಾನದ ಆಶಯದ ಉಲ್ಲಂಘನೆಯಾಗಿದ್ದು, ಇದನ್ನು ಸತತವಾಗಿ ಎತ್ತುತ್ತಲೇ ಬರಲಾಗಿದೆ.

ಸಂವಿಧಾನದ ಮೂಲರಚನೆಯ ಪ್ರಶ್ನೆ

ಜುಲೈ ೧, ೨೦೧೭ರಿಂದ ತರುತ್ತಿರುವ ’ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್’(ಅಂದರೆ , ಸರಕು ಮತ್ತು ಸೇವೆಗಳ ತೆರಿಗೆ-ಅನು) ಈ ಪ್ರಹಾರವನ್ನು ಒಂದು ಅಭೂತಪೂರ್ವ ಮಟ್ಟಕ್ಕೆ ಒಯ್ಯುತ್ತಿದೆ. ಇದು ರಾಜ್ಯಗಳ ಸಂವಿಧಾನಿಕ ಹಕ್ಕುಗಳ ಒಂದು ಔಪಚಾರಿಕ  ಮೊಟಕು ಎಂದೇ ಹೇಳಬೇಕು. ಇದು ಸುಸ್ಪಷ್ಟ, ಸ್ವಯಂವೇದ್ಯ ಮತ್ತು ವಿವಾದಾತೀತ, ಯಾರೂ ಕೂಡ ಇದನ್ನು ನಿರಾಕರಿಸುತ್ತಿಲ್ಲ(ಆದರೆ ’ಅಭಿವೃದ್ಧಿ’ ಹೆಸರಲ್ಲಿ ಸಮರ್ಥಿಸುತ್ತಿದ್ದಾರೆ). ಸಂವಿಧಾನ ನಿರ್ದಿಷ್ಟವಾಗಿ ರಾಜ್ಯಗಳಿಗೆಂದೇ ಕೊಡಮಾಡಿರುವ, ರಾಜ್ಯಗಳ ಆದಾಯಗಳ ಪ್ರಮುಖ ಮೂಲವಾಗಿರುವ(ಸುಮಾರು ೮೦%ದಷ್ಟು) ಮಾರಾಟ ತೆರಿಗೆಯ ಜಾಗದಲ್ಲಿ  ಜಿಎಸ್‌ಟಿ ಯನ್ನು ಕೂರಿಸಿ ಮತ್ತು ಜಿಎಸ್‌ಟಿ ದರಗಳನ್ನು ಜಿಎಸ್‌ಟಿ ಮಂಡಳಿ ಮಾತ್ರವೇ ನಿರ್ಧರಿಸಬಹುದೆಂದು ವಿಧಿಸಿರುವುದು ರಾಜ್ಯಗಳ ಅಧಿಕಾರಗಳನ್ನು ತೆಗೆದು ಹಾಕುವ ಕ್ರಮ ಎಂಬುದು ಸುಸ್ಪಷ್ಟ; ಏಕೆಂದರೆ ಈ ಜಿಎಸ್‌ಟಿ ಮಂಡಳಿಯಲ್ಲಿ ಪ್ರತಿಯೊಂದು ರಾಜ್ಯ ಕೇಂದ್ರದೊಂದಿಗೆ ಒಂದು ಸದಸ್ಯ ಮಾತ್ರ ಆಗಿರುವುದರಿಂದ ತಾನು ವಿಧಿಸಬಹುದಾದ ದರಗಳನ್ನು ಬದಲಿಸುವ ಶಕ್ತಿ ಅದಕ್ಕೆ ಉಳಿಯುವುದಿಲ್ಲ.

ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರದ ನಷ್ಟಕ್ಕೆ ಪರಿಹಾರ ಕೊಡಲಾಗುತ್ತದೆಯೇ, ಎಂದಿನ ವರೆಗೆ ಮತ್ತು ಎಷ್ಟರ ಮಟ್ಟಿಗೆ ಕೊಡಲಾಗುತ್ತದೆ, ಮತ್ತು ಈ ಅಧಿಕಾರಗಳನ್ನು ಈಗಿರುವಂತೆ ರಚಿತವಾಗಿರುವ ರಾಜ್ಯ ಸರಕಾರಗಳು ತಮ್ಮ ಆದಾಯಗಳನ್ನು ಸ್ವಲ್ಪ ಕಾಲದ ವರೆಗೆ ಉಳಿಸಿ ಕೊಡುವ ಆಶ್ವಾಸನೆಗಳಿಗೆ ಪ್ರತಿಯಾಗಿ ಬಿಟ್ಟು ಕೊಡಲು ಸಿದ್ಧ ಇವೆಯೇ ಎಂಬುದು ಇಲ್ಲಿನ ಪ್ರಶ್ನೆ ಅಲ್ಲವೇ ಅಲ್ಲ. ರಾಜ್ಯಗಳ ಹಕ್ಕುಗಳ ಪ್ರಶ್ನೆ ರಾಜ್ಯ ಸರಕಾರಗಳು ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಬಿಟ್ಟು ಕೊಡಲು ಅಥವ ಕೊಡದಿರಲು ಸಿದ್ಧ ಇವೆಯೇ ಎಂಬುದನ್ನು ಮೀರಿ ಹೋಗುತ್ತದೆ. ಇದು ಸಂವಿಧಾನದ ಮೂಲ ರಚನೆಗೆ ಸಂಬಂಧಪಟ್ಟ ಪ್ರಶ್ನೆ. ಯಾರಾದರೂ ದೇಶವನ್ನು ಒಂದು ’ಹಿಂದೂರಾಷ್ಟ್ರ’ ಎಂದು ಘೋಷಿಸಲು, ಒಂದು ನಿರ್ದಿಷ್ಟ ಸಮಯದಲ್ಲಿ ಎಲ್ಲ ರಾಜ್ಯ ಸರಕಾರಗಳು ಒಮ್ಮತದಿಂದ ಒಪ್ಪಿದರೂ ಕೂಡ  (ಅದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದರಿಂದಾಗಿ) ಹೇಗೆ ಸಾಧ್ಯವಿಲ್ಲವೋ, ಹಾಗೆಯೇ, ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಒಂದು ನಿರ್ದಿಷ್ಟ ಸಮಯದಲ್ಲಿ ಅಂತಹ ಒಂದು ವ್ಯವಸ್ಥೆಯನ್ನು ಸ್ಥಾಪಿಸಲು ಒಮ್ಮತ ಹೊಂದಿದರೂ ಕೂಡ ರಾಜ್ಯಗಳ ಅಧಿಕಾರಗಳನ್ನು ಯಾರೂ ತೆಗೆದು ಹಾಕಲು ಸಾಧ್ಯವಿಲ್ಲ, ಏಕೆಂದರೆ ಅಂತಹ ಒಂದು ವ್ಯವಸ್ಥೆ  ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸುತ್ತದೆ.

ಜಿಡಿಪಿ ವೃದ್ಧಿ ತರುತ್ತದೆಯೇ?

ಜಿಎಸ್‌ಟಿ  ಎಂಬುದು ಜಿಡಿಪಿಯ ವೃದ್ಧಿಗೆ ಬಹಳಷ್ಟು ಕೊಡುಗೆ ನೀಡುತ್ತದೆ ಎಂಬುದು ಸಂಪೂರ್ಣವಾಗಿ ಒಂದು ಖೋಟಾ ಆರ್ಥಿಕ ಲೆಕ್ಕಾಚಾರದ ಕಸರತ್ತು. ಜಿಡಿಪಿ ವೃದ್ಧಿ ೨ರಿಂದ ೩% ಏರುತ್ತದೆ ಎಂಬ ಮಾತೆಲ್ಲವೂ ವಾಸ್ತವ ಸಂಗತಿಗಳನ್ನು ಆಧರಿಸಿರದ ಊಹೆಗಳ ಮೇಲೆ ನಿಂತಿರುವ ಸೈದ್ಧಾಂತಿಕ ಮಾದರಿಗಳಿಂದ ಪಡೆದವುಗಳೇ. ಉದಾಹರಣೆಗೆ, ಆರ್ಥಿಕ ವ್ಯವಸ್ಥೆಯಲ್ಲಿ ಬೇಡಿಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ, ಬಂಡವಾಳಿಗರ ಹೂಡಿಕೆ ನಿರ್ಧಾರಗಳು ಮಾರುಕಟ್ಟೆ ಬೆಳವಣಿಗೆಯ ನಿರೀಕ್ಷೆಗೆ ಸಂಬಂಧಪಟ್ಟ ಪರಿಗಣನೆಗಳನ್ನು ಆಧರಿಸಿರುವುದಿಲ್ಲ, ಇತ್ಯಾದಿ ಇತ್ಯಾದಿ. ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನಿಂದ ಭಾರತದ ವೃದ್ಧಿ ದರ ನಿಧಾನಗೊಂಡರೆ, ಆಗ ಬಂಡವಾಳಿಗರ ಹೂಡಿಕೆಗಳು ಇಳಿಯುತ್ತವೆ, ಆಗ ಎಷ್ಟೇ ತೆರಿಗೆ ಸುಧಾರಣೆ ಕೈಗೊಂಡರೂ ಅವರ ’ಗೂಳಿ ಚೈತನ್ಯ’ಗಳನ್ನು ಉದ್ದೀಪಿಸಿ ಅವರು ಹೆಚ್ಚು ಹೂಡಿಕೆ ಮಾಡುವಂತೆ ಮಾಡಲಾಗದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ತೆರಿಗೆ ಸುಧಾರಣೆಗಳು ಬಂಡವಾಳಿಗರ ಹೂಡಿಕೆ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆ ತರಲಾರವು, ಅದು ಮೂಲತಃ ಮಾರುಕಟ್ಟೆ ಬೆಳವಣಿಗೆಯ ನಿರೀಕ್ಷೆಯ ಮೇಲೆಯೇ ನಡೆಯುವಂತದ್ದು. ನಿಜ, ಬಂಡವಾಳಿಗರು ಜಿಎಸ್‌ಟಿಯಂತಹ ತಮಗೆ ಅನುಕೂಲಕರವಾದ ತೆರಿಗೆ ಸುಧಾರಣೆಗಳ ಮೇಲೆ ಒತ್ತಡ ಹಾಕುತ್ತಾರೆ. ಇಂತಹ ಸುಧಾರಣೆಗಳ ಗಳಿಕೆಗಳನ್ನು ಅವರು  ತಮ್ಮ ಜೇಬಿಗೆ ಸೇರಿಸಿಕೊಳ್ಳುತ್ತಾರೆ, ಆದರೆ ಅದು ಹೆಚ್ಚಿನ ಹೂಡಿಕೆ ಮತ್ತು ವೃದ್ಧಿಯನ್ನೇನೂ ಪ್ರೋತ್ಸಾಹಿಸುವುದಿಲ್ಲ.

ಇಷ್ಟೇ ಅಲ್ಲ, ಸಂವಿಧಾನಿಕ ಮೌಲ್ಯಗಳಿಂದ ಭಿನ್ನವಾಗಿ, ಕೇವಲ ಜಿಡಿಪಿ ಆಧಾರದಲ್ಲೇ ನಿರೂಪಿಸಿರುವ ’ಅಭಿವೃದ್ಧಿ’ಯ ವಿಚಾರವನ್ನು ತಿರಸ್ಕರಿಸಬೇಕಾಗಿದೆ. ಕಾರ್ಮಿಕರ ಮುಷ್ಕರಗಳನ್ನು, ಮತ್ತು ಒಟ್ಟಾರೆಯಾಗಿ ಸಾರ್ವಜನಿಕರ ಪ್ರತಿಭಟನೆಗಳನ್ನು ತಡೆದರೆ ಹೂಡಿಕೆ ಮತ್ತು ಬೆಳವಣಿಗೆಯನ್ನು ಏರುತ್ತದೆ, ಆದ್ದರಿಂದ ಅಂತಹ ವ್ಯವಸ್ಥೆ ಮಾಡಬೇಕು ಎಂಬ ತರ್ಕವನ್ನು ಹೇಗೆ ತಿರಸ್ಕರಿಸಬೇಕೋ, ಹಾಗೆಯೇ, ಜಿಎಸ್‌ಟಿ ಉನ್ನತ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರಿಂದ ಅದನ್ನು ಅಂಗೀಕರಿಸಬೇಕು ಎಂಬ ತರ್ಕವನ್ನೂ ತಿರಸ್ಕರಿಸ ಬೇಕಾಗಿದೆ.

ಏಕೆಂದರೆ ಇಂತಹ ಉನ್ನತ ಬೆಳವಣಿಗೆಯ ದಾವೆಗಳು ಹುಸಿ ದಾವೆಗಳಷ್ಟೇ ಅಲ್ಲ, ’ಅಭಿವೃದ್ಧಿ’ಯ ವಿಚಾರದಲ್ಲಿ ಪ್ರಜಾಪ್ರಭುತ್ವ ಎಂಬುದೂ ಸೇರಿರಬೇಕು. ರಾಜ್ಯಗಳ ಹಕ್ಕುಗಳನ್ನು ಮೊಟಕು ಮಾಡುವುದು ಕಾರ್ಮಿಕ ಸಂಘಟನೆಯ ಹಕ್ಕುಗಳನ್ನು ಅಥವ ನಾಗರಿಕ ಹಕ್ಕುಗಳನ್ನು ಮೊಟಕು ಮಾಡುವಂತೆಯೇ, ಪ್ರಜಾಪ್ರಭುತ್ವ  ವಿರೋಧಿಯಾದದ್ದು ಮತ್ತು ಒಂದು ಸರ್ವಾಧಿಕಾರಶಾಹಿ ಕೇಂದ್ರೀಕೃತ ರಾಜಕೀಯ ವ್ಯವಸ್ಥೆಯತ್ತ ಸಾಗುವಂತದ್ದು.

ಅಮೆರಿಕಾದ ಉದಾಹರಣೆ

ಈ ಸಂದರ್ಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಉದಾಹರಣೆಯಿಂದ ಬಹಳಷ್ಟು ಅಂಶಗಳನ್ನು ತಿಳಿಯಬಹುದು. ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ಒಂದು ಸiರೂಪದ ಜಿಎಸ್‌ಟಿ ಯಲ್ಲಿ ವಿವಿಧ ದರಗಳಿದ್ದರೂ(ಸದ್ಯಕ್ಕೆ ಸರಕುಗಳ ಮೇಲೆ ನಾಲ್ಕು ದರಗಳನ್ನು ಸೂಚಿಸಲಾಗಿದೆ), ಒಂದು ರಾಷ್ಟ್ರೀಯ ಮಾರುಕಟ್ಟೆಯನ್ನು ನಿರ್ಮಿಸಲು ಅಗತ್ಯ ಎಂಬ ತರ್ಕವನ್ನು ಹೂಡಲಾಗುತ್ತದೆ. ಕುತೂಹಲದ ಸಂಗತಿಯೆಂದರೆ, ಅಮೆರಿಕಾದಲ್ಲಿ ಇಂತಹ ಒಂದು ಸಮರೂಪದ ತೆರಿಗೆ ದರ ಇಲ್ಲ, ಅದರ ವಿವಿಧ ಸಂಸ್ಥಾನಗಳಲ್ಲಿ ಮತ್ತು ಸರಕುಗಳಲ್ಲಿ ಹಲವಾರು ದರಗಳಿವೆ. ಇಂತಹ, ಜಗತ್ತಿನ ಅತ್ಯಂತ ಬಲಿಷ್ಟ ಬಂಡವಾಳಶಾಹಿ ದೇಶ ಒಂದು ಏಕೀಕೃತ ಮಾರುಕಟ್ಟೆ ಹೊಂದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ ತಾನೇ!

ಅಮೆರಿಕಾ ಏಕೆ ನಮ್ಮ ಜಿಎಸ್‌ಟಿಯಂತಹ ಒಂದು ಸಮರೂಪದ ದರವನ್ನು ಹೊಂದಿಲ್ಲ ಎಂಬುದಕ್ಕೆ ಕಾರಣ ಅದು ಒಕ್ಕೂಟ ತತ್ವಕ್ಕೆ ಅಪಾರ ಬೆಲೆ ಕೊಡುತ್ತದೆ. ಅಲ್ಲಿ ಈ ತತ್ವವನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂಬುದರ ಒಂದು ಸಂಕೇತ ಎಂದರೆ, ಸೆನೆಟ್‌ನಲ್ಲಿ ಪ್ರತಿಯೊಂದು ಸಂಸ್ಥಾನಕ್ಕೆ, ಅದು ದೊಡ್ಡದಿರಲಿ, ಸಣ್ಣದಿರಲಿ, ಸಮಾನವಾಗಿ ಇಬ್ಬರು ಪ್ರತಿನಿಧಿಗಳಿದ್ದಾರೆ. ನ್ಯೂಯಾರ್ಕ್, ಕ್ಯಾಲಿಫೊರ್ನಿಯದಂತಹ ದೊಡ್ಡ ಸಂಸ್ಥಾನಗಳೂ, ದೆಲವೇರ್ ಅಥವ ರ್‍ಹೋಡ್ಸ್ ಐಲ್ಯಾಂಡ್ ನಂತಹ ಪುಟ್ಟ ಸಂಸ್ಥಾನಗಳಂತೆ ಇಬ್ಬರೇ ಪ್ರತಿನಿಧಿಗಳನ್ನು ಹೊಂದಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜಗತ್ತಿನ ಅತ್ಯಂತ ಶಕ್ತಿಶಾಲಿ ಬಂಡವಾಳಶಾಹಿ ದೇಶ ಕೂಡ, ಅದು ಯಾವ ಬುನಾದಿಯ ಮೇಲೆ ಸ್ಥಾಪನೆಗೊಂಡಿದೆಯೋ, ಅಂತಹ ಒಕ್ಕೂಟ ತತ್ವದಂತಹ ಕೆಲವು ಸಂವಿಧಾನಿಕ ಮೌಲ್ಯಗಳನ್ನು ಬಂಡವಾಳಿಗರ ಆದ್ಯತೆಗಳಿಗಿಂತ ಮೇಲೆ ಇಡಬಯಸುತ್ತದೆ.

ಭಾರತ ಹಾಗೆ ತನ್ನ ಸಂವಿಧಾನಿಕ ಮೌಲ್ಯಗಳನ್ನು  ಮೇಲೆಂದು ಭಾವಿಸದಿರಲು ಕಾರಣಗಳೇನಿಲ್ಲ. ಸರಕುಗಳು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆಯನ್ನು ತರುತ್ತಿರುವುದು ಸಂವಿಧಾನದ ಮೂಲರಚನೆಗೆ ವಿರುದ್ಧವಾದದ್ದು ಮಾತ್ರವಲ್ಲ, ದೇಶದ ಐಕ್ಯತೆಗೂ ಒಂದು ಗಂಭೀರ ಬೆದರಿಕೆ ಒಡ್ಡುತ್ತದೆ. ವಿರೋಧಾಭಾಸವೆಂದರೆ ಇದು ವಿತ್ತೀಯ ವ್ಯವಸ್ಥೆಯ ಮೂಲಕ ದೇಶವನ್ನು ಏಕೀಕರಿಸುತ್ತದೆ ಎಂದು ಅದನ್ನು ಸಮರ್ಥಿಸಿ ಕೊಳ್ಳಲಾಗುತ್ತಿದೆ. ಅದು ರಾಜ್ಯಗಳ ಹಕ್ಕುಗಳನ್ನು ಮೊಟಕು ಮಾಡುತ್ತದೆ ಮತ್ತು ಆಮೂಲಕ ಒಂದು ಸರ್ವಾಧಿಕಾರಶಾಹಿ ರಾಜಕೀಯ ವ್ಯವಸ್ಥೆಯತ್ತ ಒಯ್ಯುವಂತಾಗುವುದು ಒಂದು ಅಪಾಯಕಾರಿ ಬೆಳವಣಿಗೆ.

ರಾಜ್ಯಗಳಿಗೆ ಸಂಪನ್ಮೂಲಗಳನ್ನು ಎತ್ತುವ ದಾರಿ ಇಲ್ಲವಾದ್ದರಿಂದ ಅವು ತಮ್ಮನ್ನು ಪಾರು ಮಾಡಲು ಕೇಂದ್ರದತ್ತವೇ ತಿರುಗಬೇಕಾಗುತ್ತದೆ. ಇದು ಕೇಂದ್ರಕ್ಕೆ ತನಗೆ ಪ್ರಿಯವೆನಿಸಿದವುಗಳನ್ನು ಎತ್ತಿ ಹಿಡಿಯಲು, ರಾಜ್ಯ ಸರಕಾರಗಳನ್ನು ತನ್ನ ಕೈಬೆರಳುಗಳಲ್ಲಿ ಕುಣಿಸಲು ಅವಕಾಶ ಕಲ್ಪಿಸುತ್ತದೆ. ಆಗ ’ನಮ್ಮ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದರೆ, ನಾವು ನಿಮಗೆ ಅನುಕೂಲ ಮಾಡಿ ಕೊಡಬಹುದು’, ಅಥವ ’ನಮ್ಮ ರಾಷ್ಟ್ರದ ಹಿಂದೂಕಾರಣವನ್ನು ಬೆಂಬಲಿಸಿದರೆ, ನಾವು ನಿಮಗೆ ಅನುಕೂಲ ಮಾಡಿ ಕೊಡಬಹುದು’ ಇತ್ಯಾದಿ, ಇತ್ಯಾದಿ ಸಂಕೇತಗಳನ್ನು ತೋರಿಸಲು ಅವಕಾಶ ಸಿಗುತ್ತದೆ.

ಪ್ರಜಾಪ್ರಭುತ್ವಕ್ಕಾಗಿ ಹೋರಾಟದ ಭಾಗ

ಸಂಕ್ಷಿಪ್ತವಾಗಿ,  ಜಾತ್ಯತೀತತೆಗಾಗಿ ಹೋರಾಟ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಮ್ಮ ಒಕ್ಕೂಟವಾದಿ ರಾಜಕೀಯ ವ್ಯವಸ್ಥೆಯ, ಆಮೂಲಕ ಜಿಎಸ್‌ಟಿ ಬುಡಮೇಲು ಮಾಡಬೇಕೆಂದಿರುವ ವಿತ್ತೀಯ ಒಕ್ಕೂಟತತ್ವದ ರಕ್ಷಣೆಗೆ ಹೋರಾಟದೊಂದಿಗೆ ಅವಿಭಾಜ್ಯ  ಕೊಂಡಿಯನ್ನು ಹೊಂದಿದೆ.

ಈಗಾಗಲೇ ಕೇಂದ್ರೀಕರಣದ ಈ ಸಂಗತಿ  ಬೃಹತ್ ಪ್ರಮಾಣದ ವಿರೋಧ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭುಗಿಲೇಳುವಂತೆ ಮಾಡಿದೆ. ಜಿಎಸ್‌ಟಿ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕುರಿತ ಸಂವಿಧಾನದ ೩೭೦ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದ ಹೂಡಲಾಗುತ್ತಿದೆ. ಇದು ಸಮರ್ಥನೀಯ ವಾದ. ಆದರೂ ಅದನ್ನು ಎಳ್ಳಷ್ಟೂ ಪರಿಗಣಿಸದೆ ಒಂದು  ನಿರ್ದಿಷ್ಟ ಗಡುವಿನ ನಂತರ ಜಿಎಸ್‌ಟಿಯನ್ನು ತಂದೇ ತೀರಬೇಕೆಂದು ಮುಂದೊತ್ತುತ್ತಿರುವುದು ಆ ರಾಜ್ಯದಲ್ಲಿ ಜನಗಳ ನಡುವೆ ಹರಡಿರುವ ವೈಷಮ್ಯದ ಭಾವನೆಯ ಬಗ್ಗೆ ಭಾರತೀಯ ಆಳುವ ವರ್ಗಗಳಿಗೆ ಮತ್ತು ಕಾರ್ಪೊರೇಟ್ ಹತೋಟಿಯ ಮಾಧ್ಯಮಗಳಿಗೆ ಏನೇನೂ ಕಾಳಜಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ನಿಜ ಹೇಳಬೇಕೆಂದರೆ, ನವದೆಹಲಿಯಲ್ಲಿ ಜಿಎಸ್‌ಟಿ ಸಂವಿಧಾನದ ೩೭೦ನೇ ವಿಧಿಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚರ್ಚೆಯನ್ನೇ ಮಾಡಲಾಗಿಲ್ಲ.

ಜಿಎಸ್‌ಟಿ ವ್ಯವಸ್ಥೆ ಒಂದು ಕನಿಷ್ಟ ಜಿಎಸ್‌ಟಿಯನ್ನು  ನಿಗದಿ ಮಾಡಿ, ಅದಕ್ಕಿಂತ ಹೆಚ್ಚಿನ ದರಗಳನ್ನು ವಿಧಿಸಲು ರಾಜ್ಯ ಸರಕಾರಗಳು ಸ್ವತಂತ್ರವಾಗಿವೆ ಎಂದಿದ್ದರೆ ಸಂಗತಿ ಬೇರೆಯೇ ಆಗುತ್ತಿತ್ತು. ಆದರೆ ತೆರಿಗೆ ದರಗಳನ್ನು ನಿಗದಿ ಪಡಿಸುವ ವಿಷಯದಲ್ಲಿ ರಾಜ್ಯಗಳನ್ನು ಜಿಎಸ್‌ಟಿ ಮಂಡಳಿಗೆ ಅಡಿಯಾಳಾಗಿಸಿ, ಅದು ರಾಜ್ಯಗಳ ಹಕ್ಕುಗಳ ಮೇಲೆ ಪ್ರಹಾರ ಮಾಡಿದೆ. ಇದನ್ನು ಒಪ್ಪಲಾಗದು.