Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕದಿರಲು ಭರವಸೆ

ಸಂಪುಟ: 
11
ಸಂಚಿಕೆ: 
28
Sunday, 2 July 2017

ಮೂರು ದಿನಗಳ ಅಹೋರಾತ್ರಿ ಧರಣಿ ಮುಕ್ತಾಯ

ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿರುವ ’ಡಿ’ ವರ್ಗದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕು ವುದಿಲ್ಲ ಎಂಬ ಭರವಸೆ ಹಿನ್ನೆಲೆಯಲ್ಲಿ ಜೂನ್ ೨೭ ರಿಂದ ಬೆಂಗಳೂರಿನಲ್ಲಿ ಹೊರಗುತ್ತಿಗೆ ನೌಕರರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ೩ ದಿನಗಳ ನಂತರ ಜೂನ್ ೨೯ ರಂದು ರಾತ್ರಿ ಹಿಂಪಡೆಯಲಾಯಿತು. ಸ್ವಾತಂತ್ರ್ಯಉದ್ಯಾನದಲ್ಲಿ ಧರಣಿ ನಡೆಸುತ್ತಿದ್ದ ೩೦೦೦ ಕ್ಕೂ ಹೆಚ್ಚು ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಭೇಟಿ ಮಾಡಿದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶ್ರೀ ಮಣಿವಣ್ಣನ್, ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕುವುದಿಲ್ಲ ಎಂದು ಭರವಸೆ ನೀಡಿದರು. ಈಗಾಗಲೇ ಕೆಲವು ಹಾಸ್ಟೆಲ್‌ಗಳ ವಾರ್ಡನ್‌ಗಳು ಹೋರಾಟದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿರುವ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಶ್ರೀ ಮಣಿವಣ್ಣನ್ ಅವರ ಗಮನಕ್ಕೆ ತಂದಾಗ ಅವರು ಎಲ್ಲಾ ವಾರ್ಡನ್‌ಗಳಿಗೆ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಬಾರದೆಂದೂ, ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕಲು ವಾರ್ಡನ್‌ಗಳಿಗೆ ನೀಡಲಾಗಿದ್ದ ಅಧಿಕಾರವನ್ನು ಹಿಂಪಡೆಯಲಾಗಿದೆ ಎಂದು ಆದೇಶ ಕಳುಹಿಸಿರುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಡಿಯಲ್ಲಿ ಕಳೆದ ಐದಾರು ತಿಂಗಳುಗಳಿಂದ ಮಾಸಿಕ ವೇತನ ಪಾವತಿ ಮಾಡುತ್ತಿಲ್ಲ ಎಂಬ ವಿಷಯವನ್ನು ಗಮನಕ್ಕೆ ತಂದಾಗ ಜುಲೈ ೧೫ ರ ಒಳಗಾಗಿ ಎಲ್ಲಾ ಬಾಕಿ ವೇತನವನ್ನು ಅರಿಯರ‍್ಸ್ ಸಹಿತವಾಗಿ ಪಾವತಿ ಮಾಡಲಾಗುವುದೆಂದು ತಿಳಿಸಿದರು.

ಅಡುಗೆಯವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರ ಸುಮಾರು ೬೦೦೦ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡುವ ಸರ್ಕಾರದ ಕ್ರಮದಿಂದಾಗಿ ಈಗಾಗಲೇ ಆ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಮೂಲಭೂತ ಪ್ರಶ್ನೆಯನ್ನು ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು. ಈ ರೀತಿ ಕೆಲಸ ಕಳೆದುಕೊಳ್ಳುವವರು ಬಹುತೇಕ ದಲಿತರು, ಮಹಿಳೆಯರು, ವಿಧವೆಯರು, ಒಂಟಿ ಮಹಿಳೆಯರೂ ಆಗಿದ್ದಾರೆ ಎಂದು ವಿವರಿಸಿದಾಗ, ಈಗ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಸ್ಥಿತಿಗತಿಗಳ ಬಗ್ಗೆ ವಿವರವಾದ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದೂ ನೇರನೇಮಕಾತಿಯಿಂದ ವಂಚಿತರಾಗುವ ಇವರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸುವುದು ಅಗತ್ಯವಿದೆ ಎಂದುಅವರು ಹೇಳಿದರಲ್ಲದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರೊಡನೆ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆಗಳ ಹಿನ್ನೆಲೆಯಲ್ಲಿ ೩ ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಯಿತು.

೩ ದಿನಗಳ ಅಹೋರಾತ್ರಿಧರಣಿಯಲ್ಲಿ ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ, ಹಾವೇರಿ, ಗದಗ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಚಿಕ್ಕಬಳ್ಳಾಪುರ ಮತ್ತುಕೋಲಾರ ಜಿಲ್ಲೆಗಳಿಂದ ೩೦೦೦ ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.

ಕೆಂಪೇಗೌಡ ಜಯಂತಿ ಹಿನ್ನಲೆಯಲ್ಲಿ ಜೂನ್ ೨೭ ರಂದು ಮೆರವಣಿಗೆ ಮಾಡಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಲು ಪೊಲೀಸ್ ಅನುಮತಿಯನ್ನು ನಿರಾಕರಿಸಲಾಗಿತ್ತು. ಆ ಪ್ರಯುಕ್ತ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲೇ ಮೊದಲ ದಿನ ಹಗಲು ರಾತ್ರಿ ಧರಣಿ ನಡೆಸಲಾಯಿತು. ಮರುದಿನ ಜೂನ್ ೨೮ ರಂದು ಸ್ವಾತಂತ್ರ್ಯ ಉದ್ಯಾನದವದಲ್ಲಿ ಧರಣಿ ಮುಂದುವರಿಸಲು ಅನುಮತಿ ನೀಡಲಾಯಿತಾದರೂ ಧರಣಿ ನಿರತರನ್ನು ಬಸ್ಸುಗಳಲ್ಲಿ ತುಂಬಿಕೊಂಡು ಸ್ವಾತಂತ್ರ್ಯ ಉದ್ಯಾನಕ್ಕೆ ಕರೆದೊಯ್ಯಲು ಪೊಲೀಸರು ಮುಂದಾದರು. ಇದನ್ನು ತಿರಸ್ಕರಿಸಿದ ಪ್ರತಿಭಟನಾಕಾರರು ನಡೆದುಕೊಂಡೇ ಹೋಗಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಕೊನೆಗೆ ಮೆರವಣಿಗೆಯಲ್ಲಿ ಹೋಗಲು ಅನುಮತಿ ದೊರೆಯಿತು. ಮುಂದಿನ ಎರಡು ದಿನಗಳ ಅಹೋರಾತ್ರಿ ಧರಣಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಿತು.

ಧರಣಿ ಸ್ಥಳಕ್ಕೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಉಪಾಧ್ಯಕ್ಷರಾದ ಕೆ.ಎನ್. ಉಮೇಶ್, ಸಹ ಕಾರ್ಯದರ್ಶಿ ಕೆ. ಮಹಾಂತೇಶ, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ, ಯು. ಬಸವರಾಜ, ಬಾಗೇಪಲ್ಲಿ ಮಾಜಿ ಶಾಸಕರು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳೂ ಆಗಿರುವ ಜಿ.ವಿ. ಶ್ರೀರಾಮರೆಡ್ಡಿ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಗೀತಾ, ರಾಜ್ಯ ಸರಕಾರಿ ನೌಕರರ ಒಕ್ಕೂಟದ ಮುಖಂಡರಾದ ಮಠಪತಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಮುಖಂಡರಾದ ಜಯಕುಮಾರ್, ಎಸ್.ಎಫ್.ಐ. ಮುಖಂಡರಾದ ಗುರುರಾಜ ದೇಸಾಯಿ ಮತ್ತು ಬಸವರಾಜ ಪೂಜಾರ್ ಮೊದಲಾದ ಮುಖಂಡರು ಧರಣಿ ಸ್ಥಳಕ್ಕೆ ಭೇಟಿಕೊಟ್ಟು ಹೋರಾಟಕ್ಕೆ ತಮ್ಮ ಬೆಂಬಲವನ್ನೂ ಸೂಕ್ತ ಮಾರ್ಗದರ್ಶನವನ್ನೂ ನೀಡಿದರು. ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ನಿತ್ಯಾನಂದಸ್ವಾಮಿ, ಭೀಮಶೆಟ್ಟಿ ಯಂಪಳ್ಳಿ, ಕೆ. ಹನುಮೇಗೌಡ, ಚಂದ್ರಪ್ಪ ಹೊಸ್ಕೇರಾ, ಅಂಜನೇಯರೆಡ್ಡಿ, ಜಂಬಯ್ಯ ನಾಯಕ್, ಇ.ಆರ್. ಯಲ್ಲಪ್ಪ, ಲಿಂಗಪ್ಪ ಹಣವಾಳ. ಪವಾಡೆಪ್ಪ ಚಲವಾದಿ, ಮೋಹನ್‌ಕಟ್ಟಿಮನಿ. ಶಾಂತಾಗಡ್ಡಿ, ಕಮಲ ಘಂಟಿ, ಗಾಯತ್ರಿ, ಪ್ರೇಮಾ ಮೊದಲಾದವರು ಧರಣಿಯ ನೇತೃತ್ವ ವಹಿಸಿದರು.

ಭೀಮಶೆಟ್ಟಿ ಯಂಪಳ್ಳಿ, ಪ್ರಧಾನ ಕಾರ್ಯದರ್ಶಿ