ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ ಯಾಕಾಗಿ?

ಸಂಪುಟ: 
27
ಸಂಚಿಕೆ: 
11
date: 
Sunday, 25 June 2017
Image: 

ಒಬ್ಬ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಂಕೇತಿಕ ಕ್ರಮದಿಂದ ಹಿಂದೂತ್ವ ಮೇಲ್ಜಾತಿ ಅಜೆಂಡಾ ಕುರಿತು ದಲಿತ ಸಮುದಾಯದಲ್ಲಿ ಆಳವಾಗಿ ಬೇರೂರಿರುವ ಅನುಮಾನ ಮತ್ತು ಆಕ್ರೋಶವನ್ನು ಕಡಿಮೆ ಮಾಡಲಾಗುವುದಿಲ್ಲ. ಅಲ್ಲದೆ ಆರ್‍ಎಸ್‍ಎಸ್ ನಿರ್ದೇಶನದಂತೆ ನಡೆಯುವ ಒಂದು ಸರಕಾರ ಇರುವಾಗ, ಈಗ 2017ರಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ-ಎನ್‍ಡಿಎ ಅಭ್ಯರ್ಥಿಯನ್ನು ವಿರೋಧಿಸುವುದು ಎಲ್ಲಕ್ಕಿಂತ ಅಗತ್ಯವಾಗಿದೆ.

ಬಿಜೆಪಿ ಮೈತ್ರಿಕೂಟವು ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ ಕೋವಿಂದ್ ಅವರನ್ನು ನೇಮಿಸಿರುವುದು, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ತನ್ನ ಮನುಷ್ಯನನ್ನು ಪ್ರತಿಷ್ಠಾಪಿಸುವ ಅವಕಾಶ ಕೈತಪ್ಪಿ ಹೋಗುವುದನ್ನು ಆರ್‍ಎಸ್‍ಎಸ್ ಬಿಟ್ಟುಕೊಡಲಾರದು ಎಂಬ ನಿರೀಕ್ಷೆಯನ್ನು ದೃಢಪಡಿಸಿದೆ.

ಕೋವಿಂದ್ ಅವರ ಆಯ್ಕೆಯು ದಲಿತರು ಈ ನೆಲದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಕುರಿತ ಬಿಜೆಪಿಯ ಕಾಳಜಿಯ ದ್ಯೋತಕವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ದಲಿತರ ನಡುವೆ  ವಿಶ್ವಾಸಾರ್ಹತೆಯನ್ನು ಮರಳಿ ಗಳಿಸುವ ಈ ಯತ್ನದ ಹಿಂದೆ ಬಿಜೆಪಿ ಆಯ್ಕೆ ಮಾಡಿರುವ ವ್ಯಕ್ತಿಯು ಆರ್‍ಎಸ್‍ಎಸ್‍ನ ಹಿಂಬಾಲಕ ಎನ್ನುವ ವಾಸ್ತವತೆಯಿದೆ.

ಒಬ್ಬ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಗೆ ಪ್ರಸ್ತಾವಿಸುವ ಮೂಲಕ ಕಳೆದ ಎರಡು ವರ್ಷಗಳಿಂದ ಕ್ಷತಿಗೊಂಡಿರುವ ತನ್ನ ದಲಿತ-ಪರ ಇಮೇಜನ್ನು ಪುನಃ ಕಟ್ಟಿಕೊಳ್ಳಬಹುದೆಂಬುದು ಬಿಜೆಪಿಯ ಆಶಯವಾಗಿದೆ. ಸಂಘ ಪರಿವಾರ ನಿರಂತರವಾಗಿ ದಲಿತರ ಮೇಲೆ ದಾಳಿಗಳನ್ನು ನಡೆಸುತ್ತಿದೆ. ರೋಹಿತ್ ವೇಮುಲ ಸಾವು, ಉನಾದಲ್ಲಿ ದಲಿತ ಯುವಕರ ಮೇಲಿನ ಹಲ್ಲೆ, ಸಹರಾನ್‍ಪುರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಹಸುಗಳ ವ್ಯಾಪಾರ ಮತ್ತು ಚರ್ಮೋದ್ಯಮದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ದಲಿತ ಸಮುದಾಯದವರನ್ನು ದಾಳಿಯ ಗುರಿ ಮಾಡುವುದು ಇನ್ನೂ ಮುಂದುವರಿದಿದೆ. ಒಬ್ಬ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಂಕೇತಿಕ ಕ್ರಮದಿಂದ ಹಿಂದೂತ್ವ ಮೇಲ್ಜಾತಿ ಅಜೆಂಡಾ ಕುರಿತು ದಲಿತ ಸಮುದಾಯದಲ್ಲಿ ಆಳವಾಗಿ ಬೇರೂರಿರುವ ಅನುಮಾನ ಮತ್ತು ಆಕ್ರೋಶವನ್ನು ಕಡಿಮೆ ಮಾಡಲಾಗುವುದಿಲ್ಲ.

ರಾಮನಾಥ ಕೋವಿಂದ್ ಅವರ ವೈಯಕ್ತಿಕ ಅಥವಾ ಸಾರ್ವಜನಿಕ ಜೀವನದ ಗುಣಗಳು ಇಲ್ಲಿನ ಪ್ರಶ್ನೆಯಲ್ಲ. ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಲ್ಲಿ ವಿಶೇಷವೇನಾದರೂ ಇದ್ದಲ್ಲಿ ಅದು ಅವರು ಆರ್‍ಎಸ್‍ಎಸ್ ದೃಷ್ಟಿಕೋನ ಮತ್ತು ಮೌಲ್ಯಗಳಿಗೆ ದೃಢವಾಗಿ ಅಂಟಿಕೊಂಡಿರುವುದು. “ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಭಾರತಕ್ಕೆ ಹೊರಗಿನದು” ಎಂಬ ಆರ್‍ಎಸ್‍ಎಸ್ ಅಭಿಪ್ರಾಯವೇ ಕೋವಿಂದ್ ಅಭಿಪ್ರಾಯವಾಗಿದೆ. ಕ್ರೈಸ್ತರು ಅಥವಾ ಮುಸ್ಲಿಮರನ್ನು ದಲಿತ ವರ್ಗಕ್ಕೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

1992ರ ಅಧ್ಯಕ್ಷೀಯ ಚುನಾವಣೆ ನಂತರದಿಂದ (ಅಂದರೆ ಬಿಜೆಪಿಯು ಸಂಸತ್ತಿನಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದಾಗಿನಿಂದ) ಸಿಪಿಐ (ಎಂ) ಒಂದು ನಿಲವನ್ನು ತಳೆದಿದೆ. ಬಿಜೆಪಿ- ಆರ್‍ಎಸ್‍ಎಸ್ ಕೂಟಕ್ಕೆ ಸೇರಿದ ವ್ಯಕ್ತಿ ಅಥವಾ ಅವುಗಳಿಂದ ಪ್ರಭಾವಿತವಾಗುವ ಸಾಧ್ಯತೆಯಿರುವ ವ್ಯಕ್ತಿ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಬಾರದು ಎನ್ನುವುದೇ ಆ ನಿಲವು. ಅದರಾಚೆ ನಡೆದ ಎಲ್ಲಾ ರಾಷ್ಟ್ರಪತಿ ಚುನಾವಣೆಗಳಲ್ಲಿ ಪಕ್ಷ ಈ ನಿಲವಿಗೆ ದೃಢವಾಗಿ ಬದ್ಧವಾಗಿದೆ.

ಆರ್‍ಎಸ್‍ಎಸ್ ನಿರ್ದೇಶನದಂತೆ ನಡೆಯುವ ಒಂದು ಸರಕಾರ ಇರುವಾಗ, ಈಗ 2017ರಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ-ಎನ್‍ಡಿಎ ಅಭ್ಯರ್ಥಿಯನ್ನು ವಿರೋಧಿಸುವುದು ಎಲ್ಲಕ್ಕಿಂತ ಅಗತ್ಯವಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಹೋರಾಡಲು ಪ್ರತಿಪಕ್ಷಗಳು ಒಬ್ಬ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ. ರಾಷ್ಟ್ರಪತಿಯಾದವರು ಗಣರಾಜ್ಯ ಮತ್ತು ಸಂವಿಧಾನದ ಸಂರಕ್ಷಕರಾಗಿರಬೇಕು ಎನ್ನುವುದನ್ನು ಈ ಸ್ಪರ್ಧೆ ಸಾರುತ್ತದೆ. ಬಿಜೆಪಿ-ಆರ್‍ಎಸ್‍ಎಸ್ ಈ ಎರಡನ್ನೂ ನಿರಾಕರಿಸ ಬಯಸುತ್ತದೆ.

(ಪ್ರಕಾಶ ಕಾರಟ್ ಅವರು ‘ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆಗೆ ಈ ಸಂಪಾದಕೀಯವನ್ನು ಬರೆದ ನಂತರ ಜೂನ್ 22 ರಂದು ಸಭೆ ಸೇರಿದ ಕಾಂಗ್ರೆಸ್, ಎಡಪಕ್ಷಗಳು, ಆರ್‍ಎಲ್‍ಡಿ, ಸಮಾಜವಾದಿ ಪಕ್ಷ, ಬಿಎಸ್‍ಪಿ, ಜೆಡಿ-ಎಸ್ ಮತ್ತಿತರ ಒಟ್ಟು 17 ಪ್ರತಿಪಕ್ಷಗಳ ಪ್ರತಿನಿಧಿಗಳು ಈ ಹಿಂದೆ ಲೋಕಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮತ್ತು ಐದು ಬಾರಿ ಲೋಕಸಭೆಗೆ ಆರಿಸಿ ಬಂದಿರುವ ಮೀರಾ ಕುಮಾರ್ ಅವರನ್ನು ತಮ್ಮ ಜಂಟಿ ಅಭ್ಯರ್ಥಿಯಾಗಿ ಆರಿಸಿದ್ದಾರೆ.)

 

 

ಪ್ರಕಾಶ್ ಕಾರಟ್