ಡಾರ್ಜಿಲಿಂಗ್: ತ್ರಿಪಕ್ಷೀಯ ಮಾತುಕತೆಯೇ ಪರಿಹಾರ ಮಾರ್ಗ

ಸಂಪುಟ: 
27
ಸಂಚಿಕೆ: 
11
date: 
Sunday, 25 June 2017
Image: 

ಟಿಎಂಸಿ ಮತ್ತು ಬಿಜೆಪಿ ಈ ಎರಡೂ ಪಕ್ಷಗಳ ಸಮಯಸಾಧಕ ರಾಜಕಾರಣವು ಡಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದಲ್ಲಿ ಪ್ರತ್ಯೇಕತಾವಾದ ಜೀವಂತವಾಗಿರಲು ಕೊಡುಗೆ ನೀಡಿದೆ. ರಾಜ್ಯ ಸರಕಾರ ದಬ್ಬಾಳಿಕೆಯಿಂದ ಚಳವಳಿಯನ್ನು ದಮನಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಪೊಲೀಸ್ ಪಡೆಗಳು ಮತ್ತು ಸೈನ್ಯವನ್ನು ಕೂಡ ನಿಯೋಜಿಸಲಾಗಿದೆ. ಆದರೆ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಜಿಜೆಎಂ ನಡುವೆ ತ್ರಿಪಕ್ಷೀಯ ಸಂಧಾನ ಮಾತುಕತೆಯ ಹೊರತಾಗಿ ಬೇರಾವುದರಿಂದಲೂ  ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಗುಡ್ಡಗಾಡು ಪ್ರದೇಶಗಳಲ್ಲಿ ಹಿಂಸಾಚಾರ ವ್ಯಾಪಕವಾಗಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಕರೆಯಿಂದಾಗಿ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಪೊಲೀಸ್ ಗೋಲಿಬಾರಿನಲ್ಲಿ ಮೂವರು ಜಿಜೆಎಂ ಬೆಂಬಲಿಗರು ಮೃತಪಟ್ಟಿದ್ದು ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಮೃತಪಟ್ಟಿದ್ದಾರೆ.

ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯ ಬೇಡಿಕೆಯನ್ನು ಜಿಜೆಎಂ ಮತ್ತೆ ಎತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಂಗಾಳಿ ಭಾಷೆಯನ್ನು ಕಡ್ಡಾಯವಾಗಿ ಕಲಿಸಲಾಗುವುದು ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರಚೋದನಕಾರಿ ಹೇಳಿಕೆಯಿಂದಾಗಿ ಚಳವಳಿಯ ಕಿಡಿ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಹೇಳಿಕೆಯು, ನೇಪಾಳಿ ಭಾಷೆ ಶಿಕ್ಷಣ ಮಾಧ್ಯಮವಾಗಿರುವ ಗುಡ್ಡಗಾಡು ಪ್ರದೇಶದ ಜನರಲ್ಲಿ ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರದ ಆದೇಶ ಡಾರ್ಜಿಲಿಂಗ್‍ಗೆ ಅನ್ವಯವಾಗುವುದಿಲ್ಲ ಎಂದು ಮಮತಾ ಆನಂತರ ಸ್ಪಷ್ಟನೆ ನೀಡಿದರೂ ಅದಾಗಲೇ ಹಾನಿ ಆಗಿ ಹೋಗಿತ್ತು.

ವಾಸ್ತವವಾಗಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) 2011ರ ವಿಧಾನಸಭೆ ಚುನಾವಣೆ ವೇಳೆ ಎಡರಂಗದ ವಿರುದ್ಧ ಹೋರಾಡಲಿಕ್ಕಾಗಿ ಜಿಜೆಎಂಗೆ ಉತ್ತೇಜನ ನೀಡಿತ್ತು ಹಾಗೂ ಅದರೊಂದಿಗೆ ಕೈಜೋಡಿಸಿತ್ತು. ಅದಾದ ನಂತರ, ಟಿಎಂಸಿ ಸರಕಾರ ಕೇಂದ್ರದೊಂದಿಗೆ ಸೇರಿ ಜಿಜೆಎಂ ಜೊತೆ ಒಪ್ಪಂದವೊಂದಕ್ಕೆ ಸಹಿಹಾಕಿತ್ತು. 1988ರಲ್ಲಿ ರಚಿತವಾದ ಡಾರ್ಜಿಲಿಂಗ್ ಗೂರ್ಖಾ ಗುಡ್ಡಗಾಡು ಮಂಡಳಿಯ ಬದಲಿಗೆ ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಶನ್-ಜಿಟಿಎ) ಸ್ಥಾಪಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು.

ಆದರೆ, ಟಿಎಂಸಿ ಸರಕಾರ ಅನೇಕ ವಿಚಾರಗಳಲ್ಲಿ ಜಿಟಿಎ ಜೊತೆ ಸಂಘರ್ಷಕ್ಕಿಳಿಯಿತು. ಜಿಜೆಎಂ ಮತ್ತು ಟಿಎಂಸಿ ನಡುವೆ ಬಿರುಕು ಕಾಣಿಸಿಕೊಂಡಿತು. ಜಿಜೆಎಂ ಬಲಿಕೊಟ್ಟು ಅದರ ಲಾಭ ಪಡೆದು ಗುಡ್ಡಗಾಡು ಪ್ರದೇಶದಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಟಿಎಂಸಿ ಯತ್ನಿಸಿದ್ದೇ ಇದಕ್ಕೆ ಕಾರಣ. ಇತ್ತೀಚೆಗೆ ನಡೆದ ಮುನಿಸಿಪಲ್ ಚುನಾವಣೆಗಳಲ್ಲಿ, ದಿವಂಗತ ಸುಭಾಷ್ ಘೀಸಿಂಗ್ ನೇತೃತ್ವದ ಹಿಂದಿನ ಪ್ರಧಾನ ಸಂಘಟನೆ ಗೂರ್ಖಾ ರಾಷ್ಟ್ರೀಯ ವಿಮೋಚನಾ ರಂಗ (ಜಿಎನ್‍ಎಲ್‍ಎಫ್) ಜೊತೆ ಟಿಎಂಸಿ ಒಪ್ಪಂದ ಮಾಡಿಕೊಂಡಿತ್ತು. ಗುಡ್ಡಗಾಡು ಪ್ರದೇಶದ ನಾಲ್ಕು ಮುನಿಸಿಪಾಲಿಟಿಗಳ ಪೈಕಿ ಒಂದರಲ್ಲಿ (ಮಿರಿಕ್) ಟಿಎಂಸಿ ಗೆಲವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಟಿಎಂಸಿಗೆ ಗುದ್ದು ಕೊಡಲು ಜಿಜೆಎಂ ಸಮಯ ಕಾಯುತ್ತಿತ್ತು. ಭಾಷೆ ಕುರಿತ ಸರಕಾರದ ಘೋಷಣೆ ಅದಕ್ಕೆ ಒಂದು ಅಸ್ತ್ರವನ್ನು ಒದಗಿಸಿತು.

ಗುಡ್ಡಗಾಡು ಪ್ರದೇಶಗಳ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಅರ್ಥಪೂರ್ಣ ಅಧಿಕಾರದೊಂದಿಗೆ ಪ್ರಾದೇಶಿಕ ಸ್ವಾಯತ್ತತೆ ನೀಡಬೇಕೆಂದು ಸಿಪಿಐ (ಎಂ) ಸತತವಾಗಿ ಒತ್ತಾಯಿಸುತ್ತಾ ಬಂದಿದೆ. ಆ ಕಾರಣದಿಂದಲೇ 2005ರಲ್ಲಿ ಎಡರಂಗ ಸರಕಾರ ಸಂವಿಧಾನದ ಆರನೇ ಷೆಡ್ಯೂಲ್ ಅನ್ವಯ ಗುಡ್ಡಗಾಡು ಮಂಡಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ಜಿಎನ್‍ಎಲ್‍ಎಫ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಜಿಜೆಎಂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಅನುಷ್ಠಾನ ಮಾಡಲು ಆಗಿರಲಿಲ್ಲ.

ಡಾರ್ಜಿಲಿಂಗ್‍ನಲ್ಲಿ ಪ್ರತ್ಯೇಕತಾವಾದಿ ರಾಜಕೀಯ ಬೆಳೆಯಲು ಬಿಜೆಪಿಯ ಕೊಡುಗೆಯೂ ಇದೆ. 2004 ಮತ್ತು 2014ರಲ್ಲಿ ಜಿಜೆಎಂ ಜೊತೆ ಬಿಜೆಪಿ ಕೈಜೋಡಿಸಿ ಡಾರ್ಜಿಲಿಂಗ್ ಲೋಕಸಭೆ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು.  ಗೂರ್ಖಾಲ್ಯಾಂಡ್ ಬೇಡಿಕೆಯನ್ನು ಪರಿಶೀಲಿಸುವುದಾಗಿ ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು. ಹೀಗಾಗಿ, ಟಿಎಂಸಿ ಮತ್ತು ಬಿಜೆಪಿ ಈ ಎರಡೂ ಪಕ್ಷಗಳ ಸಮಯಸಾಧಕ ರಾಜಕಾರಣವು ಡಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದಲ್ಲಿ ಪ್ರತ್ಯೇಕತಾವಾದ ಜೀವಂತವಾಗಿರಲು ಕೊಡುಗೆ ನೀಡಿದೆ.

ರಾಜ್ಯ ಸರಕಾರವು ದಬ್ಬಾಳಿಕೆಯಿಂದ ಚಳವಳಿಯನ್ನು ದಮನಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಪೊಲೀಸ್ ಪಡೆಗಳು ಮತ್ತು ಸೈನ್ಯವನ್ನು ಕೂಡ ನಿಯೋಜಿಸಲಾಗಿದೆ. ಆದರೆ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಜಿಜೆಎಂ ನಡುವೆ ತ್ರಿಪಕ್ಷೀಯ ಸಂಧಾನ ಮಾತುಕತೆಯ ಹೊರತಾಗಿ ಬೇರಾವುದರಿಂದಲೂ  ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರ ದಬ್ಬಾಳಿಕೆಯನ್ನು ನಿಲ್ಲಿಸಿ ಮಾತುಕತೆಗೆ ಮುಂದಾಗಬೇಕು. ತ್ರಿಪಕ್ಷೀಯ ಮಾತುಕತೆ ನಡೆಸಲು ಕೇಂದ್ರ ಸರಕಾರ ಉಪಕ್ರಮಿಸಬೇಕು ಹಾಗೂ ಜಿಜೆಎಂ ಚಳವಳಿಯನ್ನು ವಾಪಸ್ ಪಡೆದು ಮಾತುಕತೆಯಲ್ಲಿ ಭಾಗವಹಿಸಬೇಕು.
 

 

ಪ್ರಕಾಶ್ ಕಾರಟ್

ಅನು: ವಿಶ್ವ