ಹಿಂದೂ ಸಾಮಾಜಿಕ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳು : ಡಾ. ಬಿ.ಆರ್. ಅಂಬೇಡ್ಕರ್

ಸಂಪುಟ: 
27
ಸಂಚಿಕೆ: 
11
date: 
Sunday, 25 June 2017
Image: 

ಇತ್ತೀಚೆಗೆ ‘ಲೆಫ್ಟ್ ವರ್ಲ್ಡ್ ಡಾ.ಬಿ.ಆರ್. ಅಂಬೇಡ್ಕರ್ ಅವರ ‘ಇಂಡಿಯಾ ಅಂಡ್ ಕಮ್ಯುನಿಸಂ’ ಎಂಬ ಅಪೂರ್ಣ ಪುಸ್ತಕದ ಲಭ್ಯವಿರುವ ಭಾಗಗಳನ್ನು ಡಾ. ಆನಂದ್ ತೇಲತುಂಬ್ಡೆ ಅವರ ದೀರ್ಘ ಮುನ್ನುಡಿಯೊಂದಿಗೆ ಪ್ರಕಟಿಸಿದೆ. ಡಾ. ತೇಲತುಂಬ್ಡೆ ಅವರು ತಮ್ಮ ಮುನ್ನುಡಿಯಲ್ಲಿ ಕಮ್ಯುನಿಸಂ ಮತ್ತು ಮಾಕ್ರ್ಸ್‍ವಾದದ ಬಗ್ಗೆ ಅಂಬೇಢ್ಕರ್ ಅವರ ಚಿಂತನೆಗಳು, ಅಂಬೇಡ್ಕರ್ ಮತ್ತು ಕಮ್ಯುನಿಸ್ಟರ ನಡುವೆ ಬಿರುಕಿಗೆ ಚಾರಿತ್ರಿಕ ಕಾರಣಗಳು ಮತ್ತು ಈಗ ಭಾರತದ ಬಡ ಮತ್ತು ದಮನಿತ ಜನತೆಯ ವಿಮೋಚನೆಗೆ ಅಗತ್ಯವಾದ ಕಮ್ಯುನಿಸ್ಟರು ಮತ್ತು ಅಂಬೇಡ್ಕರ್ ವಾದಿಗಳ ನಡುವಿನ ಐಕ್ಯತೆಯನ್ನು ಯಾವ ನೆಲೆಯ ಮೇಲೆ ಕಟ್ಟಬಹುದು ಎಂಬ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಈ ಪುಸ್ತಕವನ್ನು ನಾನು ಓದುತ್ತಿದ್ದಾಗ ಅದರ “ಹಿಂದೂ ಸಾಮಾಜಿಕ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳು” ಎಂಬ ಅಧ್ಯಾಯ ನನ್ನನ್ನು ಬಹುವಾಗಿ ಸೆಳೆಯಿತು. ಅದರಲ್ಲಿ ಹಿಂದೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಂಬೇಢ್ಕರ್ ಅವರ ಒಳನೋಟಗಳು ವಿಶಿಷ್ಟವಾದುವು ಎಂದು ಅನಿಸಿತು. ಈ ಬಾರಿಯ ಅಂಕಣಕ್ಕೆ ಅದರ ಸಂಗ್ರಹಾನುವಾದವನ್ನೇ ಕೊಟ್ಟಿದ್ದೇನೆ.

ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿನ ವಿಶಿಷ್ಟ ಲಕ್ಷಣಗಳು ಮೂರು. ಇವುಗಳಲ್ಲಿ ಬಹು ಮುಖ್ಯವಾದುದು (ಸೂಪರ್‍ಮ್ಯಾನ್) ಮಹಾಪುರುಷನ ಆರಾಧನೆ. ಈ ದೃಷ್ಟಿಯಲ್ಲಿ ಹಿಂದೂ ಸಾಮಾಜಿಕ ವ್ಯವಸ್ಥೆ ನೀಷೆಯ ಮಹಾವಾಣಿಯ ಅನುಷ್ಠಾನದಂತಿದೆ. (ತನ್ನ ಮಹಾಪುರುಷನ ಪರಿಕಲ್ಪನೆಯನ್ನು ಮನುಸ್ಮøತಿಯಿಂದ ಪಡೆದದ್ದಾಗಿ ಸ್ವತಹ ನೀಷೆಯೇ ಹೇಳಿದ್ದನ್ನು ಅಂಬೇಡ್ಕರ್ ಇಲ್ಲಿ ಉದ್ಧರಿಸುತ್ತಾರೆ.) ಮನುಸ್ಮøತಿಯನ್ನು ಅನುಪಮವಾದ ಬೌದ್ಧಿಕ ಗ್ರಂಥವೆಂದು ಹೊಗಳುವ ನೀಷೆ, ಅದನ್ನು ಕಂದಾಚಾರಗಳ ಕಂತೆಯಾದ ಬೈಬಲ್ಲಿನ ಜೊತೆ ಪ್ರಸ್ತಾಪಿಸುವುದೂ ಸಹ ಪಾಪವೆಂದು ಹೇಳುತ್ತಾನೆ. ಸಿರಿವಂತಿಕೆ, ಕ್ರೌರ್ಯ ಮತ್ತು ಅಮಾನುಷ ಅಧಿಕಾರದ ಆರಾಧಕನೆಂದು ತನ್ನ ತಾಯ್ನಾಡಿನಲ್ಲೇ, ಒಂದುರೀತಿಯ ಬಹಿಷ್ಕಾರಕ್ಕೆ ಒಳಗಾಗಿದ್ದ ನೀಷೆ ಸೃಜಿಸಿದ ಸೂಪರ್‍ಮ್ಯಾನ್ ಮತ್ತು ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಮನು ಎತ್ತಿಹಿಡಿಯುವ ಬ್ರಾಹ್ಮಣ ಈ ಇಬ್ಬರ ಮಧ್ಯೆ ಅಗಾಧ ಸಾಮ್ಯತೆ ಇದೆ. ಎಷ್ಟೋ ವಿಷಯಗಳಲ್ಲಿ ಮನುವಿನ ಬ್ರಾಹ್ಮಣ ನೀಷೆಯ ಸೂಪರ್‍ಮ್ಯಾನ್‍ಗಿಂತಲೂ ಒಂದು ಕೈ ಹೆಚ್ಚು. ಸಾಮಾನ್ಯಜನರ ಪರವಾಗಿ ಆಲೋಚನೆ ಮಾಡುವವರಿಗೆ ನೀಷೆಯ ಸೂಪರ್‍ಮ್ಯಾನ್‍ನನ್ನು ದ್ವೇಷಿಸುವುದಕ್ಕಿಂತಾ ಹೆಚ್ಚಿನ ದ್ವೇಷಕ್ಕೆ ಮನು ಪ್ರಣೀತ ಬ್ರಾಹ್ಮಣ ಪಾತ್ರನಾಗುತ್ತಾನೆ.
 

ಸೂಪರ್‍ಮ್ಯಾನ್ ಆರಾಧನೆ

ಸ್ವಯಂಭೂ ಆದ ಪ್ರಜಾಪತಿಯ ಮುಖದಿಂದ ಜನಿಸಿದ ಬ್ರಾಹ್ಮಣ ವೇದದ ಅನಂತ ಸಾಕಾರರೂಪ ಎನ್ನುತ್ತಾನೆ ಮನು. ಎಲ್ಲ ಸಂಪತ್ತೂ ಬ್ರಾಹ್ಮಣನಿಗೇ ಸೇರಿದ್ದು. ಮತ್ರ್ಯರು ಜೀವಿಸುವುದೇ ಬ್ರಾಹ್ಮಣನ ದಯೆಯಿಂದ. ಬ್ರಾಹ್ಮಣ ಕಾನೂನನ್ನು ಮೀರಿದವನು. ರಾಜನಿಗಿಂತ ಮೇಲಿರುವವನು. ರಾಜನಾದವನು ಬೆಳಗಾಗಿ ಎದ್ದು ವೇದಪಾರಂಗತನಾದ ಬ್ರಾಹ್ಮಣನನ್ನು ಪೂಜಿಸಿ ಅವನ ಸಲಹೆಯನ್ನು ಪಾಲಿಸಬೇಕು. ಹುಟ್ಟಿನಿಂದ, ಜ್ಞಾನದಿಂದ ಮತ್ತು ಯಜ್ಞೋಪವೀತದಿಂದಾಗಿ ಶ್ರೇಷ್ಠನಾದ ಬ್ರಾಹಣ ಎಲ್ಲ ವರ್ಗಗಳ ಒಡೆಯ. ಅವನು ಯಾವುದೇ ಅಪರಾಧವನ್ನು ಮಾಡಿದರೂ ಅವನಿಗೆ ಶಿಕ್ಷೆಇಲ್ಲ. ಅವನು ಯಾರಿಗೂ ಬಾಧ್ಯನಲ್ಲ. ಸಾಮಾನ್ಯ ಜನರ ಕಲ್ಯಾಣದ ಬಗ್ಗೆ ಅವನು ತಲೆಕೆಡಿಸಿಕೊಳ್ಳಬೇಕಿಲ್ಲ. ಅವನು ಯಾರಿಗೂ ಏನನ್ನೂ ಕೊಡಬೇಕಿಲ್ಲ. ಆದರೆ ದಾನವನ್ನು ಸ್ವೀಕರಿಸುವುದು ಅವನ ಹಕ್ಕು. ಸಾಮಾನ್ಯ ಜನರು ಇರುವುದೇ ಬ್ರಾಹ್ಮಣನ ಸೇವೆ ಮಾಡುವುದಕ್ಕಾಗಿ. ಜ್ಞಾನದ ಮೇಲೆ ಅವನೊಬ್ಬನಿಗೇ ಅಧಿಕಾರವಿರುವುದು.

ಹಿಂದೂ ಸಾಮಾಜಿಕ ವ್ಯವಸ್ಥೆಯ ಮತ್ತೊಂದು ವಿಶಿಷ್ಟತೆಯೆಂದರೆ ಅದರ ಸಂರಕ್ಷಣೆಗೆ ಯೋಜಿಸಿರುವ ತಂತ್ರ. ಈ ತಂತ್ರ ಎರಡು ರೀತಿಯದು: ತಂತ್ರ 1. ಹಿಂದೂ ಸಾಮಾಜಿಕ ವ್ಯವಸ್ಥೆಯ ಸಂರಕ್ಷಣೆ ರಾಜನ ಹೆಗಲಮೇಲಿದೆ. ವೈಶ್ಯ ಮತ್ತು ಶೂದ್ರರು ತಮ್ಮ ತಮ್ಮ ವರ್ಗಗಳಿಗೆ ವಹಿಸಿರುವ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜನಿಗೆ ಇದೆ. ಅದು ಅವನ ಕರ್ತವ್ಯ. ಅವನು ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ರಾಜನೂ ಶಿಕ್ಷಾರ್ಹನೇ ಆಗುತ್ತಾನೆ. ಅಂಥ ಸಂದರ್ಭದಲ್ಲಿ ಬ್ರಾಹ್ಮಣ ರಾಜನ ವಿರುದ್ಧ ಬೇಕಾದರೂ ದಂಗೆ ಎದ್ದು ರಾಜನನ್ನು ಶಿಕ್ಷಿಸಬಹುದು.

ಮನುವಿನ ಪ್ರಕಾರ ರಾಜನ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹಿಂದೂ ಸಾಮಾಜಿಕ ವ್ಯವಸ್ಥೆಯ ಸಂರಕ್ಷಣೆಯಿಂದ ಲಾಭ ಪಡೆಯುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹೀಗೆ ಮೂರು ಮೇಲ್ವರ್ಗಗಳಿಗೂ ಇದೆ. ಆದರೆ ಶೂದ್ರರಿಗೆ ಮಾತ್ರ ಇಲ್ಲ. ಒಂದುವೇಳೆ ಕ್ಷತ್ರಿಯರೂ ರಾಜನೊಂದಿಗೆ ಶಾಮೀಲಾಗಿ ವ್ಯವಸ್ಥೆಯ ನಾಶಕ್ಕೆ ಮುಂದಾದರೆ? ಆಗ ವ್ಯವಸ್ಥೆಯನ್ನು ರಕ್ಷಿಸುವ ಹೊಣೆಯನ್ನು ಮನು ಬ್ರಾಹ್ಮಣನಿಗೆ ಕೊಡುತ್ತಾನೆ. ಬ್ರಾಹ್ಮಣ ತನಗೆ ಅನ್ಯಾಯವಾದರೆ ರಾಜನಿಗೆ ದೂರು ಕೊಡಬೇಕಿಲ್ಲ. ತಾನೇ ನೇರವಾಗಿ ಅನ್ಯಾಯ ಮಾಡಿದವರನ್ನು ಶಿಕ್ಷಿಸಬಹುದು. ಈ ಕಾರಣಕ್ಕಾಗಿ ಬ್ರಾಹ್ಮಣ ಆಯುಧವನ್ನು ಹೊಂದಿರಬಹುದು.

ತಂತ್ರ 2. ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಸಂರಕ್ಷಿಸಲು ಬಳಸುವ ಎರಡನೆಯ ತಂತ್ರ ಅದ್ವಿತೀಯವಾದುದು. ಬಹುಶಃ ಇದೇ ಹಿಂದೂ ಸಾಮಾಜಿಕ ವ್ಯವಸ್ಥೆಯ ನಿಜವಾದ ವಿಶಿಷ್ಟತೆ.
ಸಾಮಾಜಿಕ ವ್ಯವಸ್ಥೆಯನ್ನು ಸಶಸ್ತ್ರ ದಂಗೆಯಿಂದ ರಕ್ಷಿಸಿಕೊಳ್ಳಲು ಆಳುವವರ ವಿರುದ್ಧ ಏಳುವ ದಂಗೆಯ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ. ಒಂದು: ಅನ್ಯಾಯದ ಭಾವನೆ. ಎರಡು: ಅನ್ಯಾಯವಾಗಿದೆಯೆಂದು ಗ್ರಹಿಸುವ ಸಾಮಥ್ರ್ಯ. ಮೂರು: ಶಸ್ತ್ರಾಸ್ತ್ರಗಳ ಲಭ್ಯತೆ.

ದಂಗೆಯನ್ನು ನಿಭಾಯಿಸುವುದರಲ್ಲಿ ಎರಡು ವಿಧಾನಗಳಿವೆ. ಮೊದಲನೆಯ ವಿಧಾನ ದಂಗೆಯೇ ಏಳದಂತೆ ನೋಡಿಕೊಳ್ಳುವುದು. ಎರಡನೆಯ ವಿಧಾನ ದಂಗೆಯೆದ್ದಮೇಲೆ ಹತ್ತಿಕ್ಕುವುದು.
ದಂಗೆ ಏಳದಂತೆ ನೋಡಿಕೊಳ್ಳವ ಸಾ ಧ್ಯತೆ ಇದೆಯೆ, ಅಥವಾ ಹತ್ತಿಕ್ಕುವುದನ್ನುಳಿದು ಅನ್ಯ ಮಾರ್ಗವಿಲ್ಲವೆ ಎಂಬುದು ದಂಗೆ ಏಳಲು ಕಾರಣವಾದ ಮೂರು ಅಂಶಗಳನ್ನು ನಿಯಂತ್ರಿಸುವ ನಿಯಮ ಯಾವುದು ಎಂಬ ಮೂರನೆಯ ಅಂಶವನ್ನು ಅವಲಂಬಿಸಿದೆ.

ಸಾಮಾಜಿಕ ವ್ಯವಸ್ಥೆಯು ಜನರಿಗೆ ದಂಗೆ ಏಳುವ ಅವಕಾಶವನ್ನು ಕೊಡದಿದ್ದಾಗ, ಶಿಕ್ಷಣದ ಹಕ್ಕನ್ನು ಕೊಡದಿದ್ದಾಗ, ಶಸ್ತ್ರಾಸ್ತ್ರಗಳನ್ನು ಬಳಸುವ ಹಕ್ಕನ್ನು ಕೊಡದಿದ್ದಾಗ ವ್ಯವಸ್ಥೆಯ ವಿರುದ್ಧ ಜನರು ದಂಗೆಯೇಳದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ.

ಸಾಮಾಜಿಕ ವ್ಯವಸ್ಥೆಯು ಶಿಕ್ಷಣದ ಹಕ್ಕನ್ನು ಕೊಟ್ಟಿದ್ದಾಗ, ಶಸ್ತ್ರಾಸ್ತ್ರಗಳ ಬಳಕೆಗೆ ಅನುಮತಿ ಕೊಟ್ಟಿದ್ದಾಗ, ಅನ್ಯಾಯಕ್ಕೊಳಗಾದವರು ದಂಗೆಯೆದ್ದರೆ ಅದನ್ನು ತಡೆಯಲಾಗುವುದಿಲ್ಲ. ಆಗ ಸಾಮಾಜಿಕ ವ್ಯವಸ್ಥೆಯನ್ನು ಉಳಿಸುವ ಏಕೈಕ ಮಾರ್ಗ ಹಿಂಸೆ-ಕ್ರೌರ್ಯಗಳನ್ನು ಬಳಸಿ ದಂಗೆಯನ್ನು ಹತ್ತಿಕ್ಕುವುದು.

ದಂಗೆಯೇಳದಂತೆ...

ಹಿಂದೂ ಸಾಮಾಜಿಕ ವ್ಯವಸ್ಥೆಯು ಮೊದಲನೆಯ ವಿಧಾನವನ್ನು ಅಳವಡಿಸಿಕೊಂಡಿದೆ. ಕೆಳವರ್ಗಗಳ ಸಾಮಾಜಿಕ ಅಂತಸ್ತನ್ನು ಮುಂಬರುವ ಪೀಳಿಗೆಗಳಿಗೂ ಅನ್ವಯವಾಗುವಂತೆ ಸ್ಥಗಿತಗೊಳಿಸಿಬಿಟ್ಟಿದೆ. ಅವರ ಆರ್ಥಿಕ ಅಂತಸ್ತನ್ನೂ ಸಹ ಸ್ಥಗಿತಗೊಳಿಸಿದೆ. ಸಾಮಾಜಿಕ ಅಂತಸ್ತು ಮತ್ತು ಆರ್ಥಿಕ ಅಂತಸ್ತುಗಳ ನಡುವೆ ವ್ಯತ್ಯಾಸವೇ ಇಲ್ಲವಾದ್ದರಿಂದ ಅತೃಪ್ತಿ ಬೆಳೆಯುವ ಸಾಧ್ಯತೆಯೇ ಇಲ್ಲ.

ಕೆಳವರ್ಗಗಳಿಗೆ ಶಿಕ್ಷಣದ ಹಕ್ಕನ್ನು ಹಿಂದೂ ಸಾಮಾಜಿಕ ವ್ಯವಸ್ಥೆ ನಿರಾಕರಿಸಿದೆ. ಇದರ ಪರಿಣಾಮವಾಗಿ ಯಾರೊಬ್ಬರಿಗೂ ತಮ್ಮ ದುಸ್ಥಿತಿಯೇ ಅತೃಪ್ತಿಗೆ ಮೂಲವಾಗಬಹುದೆಂಬ ಅರಿವೇ ಇಲ್ಲ. ಅರಿವಿದ್ದರೂ ಅದು ತಮ್ಮ ದುಸ್ಥಿತಿಗೆ ಯಾರೂ ಕಾರಣರಲ್ಲ, ವಿಧಿ, ಹಣೆಬರಹದ ಫಲ ಎಂಬ ಅರಿವು ಮಾತ್ರ.

ಅತೃಪ್ತಿ ಇದೆ ಎಂದಿಟ್ಟುಕೊಳ್ಳೋಣ. ಅದರ ಬಗ್ಗೆ ಅರಿವಿದೆ ಎಂದೂ ಇಟ್ಟುಕೊಳ್ಳೋಣ. ಆಗಲೂ ಸಹ ಹಿಂದೂ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಕೆಳವರ್ಗಗಳ ದಂಗೆ ಸಾಧ್ಯವಿಲ್ಲ. ಏಕೆಂದರೆ ವ್ಯವಸ್ಥೆಯು ಜನಸಮುದಾಯಗಳಿಗೆ ಶಸ್ತ್ರಾಸ್ತ್ರಗಳನ್ನು ಬಳಸುವ ಹಕ್ಕನ್ನು ನಿರಾಕರಿಸುತ್ತದೆ.

ಮುಸ್ಲಿಮರು ಅಥವಾ ನಾಜಿóಗಳ ಸಾಮಾಜಿಕ ವ್ಯವಸ್ಥೆಗಳು ಇದಕ್ಕೆ ತದ್ವಿರುದ್ಧವಾದವುಗಳು. ಅವರು ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಡುತ್ತಾರೆ. ಜ್ಞಾನ ಪಡೆಯುವ ಹಕ್ಕನ್ನು ಕೊಡುತ್ತಾರೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಹಕ್ಕನ್ನು ಕೊಡುತ್ತಾರೆ. ಜನರು ದಂಗೆಯೆದ್ದರೆ ಅದನ್ನು ಹಿಂಸೆ-ಕ್ರೌರ್ಯಗಳಿಂದ ಹತ್ತಿಕ್ಕುವ ದ್ವೇಷ-ಅಸಮ್ಮತಿಯ ಹೊಣೆಯನ್ನೂ ಹೊಂದಿರುತ್ತಾರೆ.

ಅವಕಾಶಗಳ ಸ್ವಾತಂತ್ರ್ಯವನ್ನು ನಿರಾಕರಿಸುವುದು, ಜ್ಞಾನಸಂಪಾದನೆಯ ಸ್ವಾತಂತ್ರ್ಯವನ್ನು ನಿರಾಕರಿಸುವುದು, ಶಸ್ತ್ರಾಸ್ತ್ರಗಳ ಹಕ್ಕನ್ನು ನಿರಾಕರಿಸುವುದು ಅತ್ಯಂತ ಕ್ರೂರವಾದ ಅನ್ಯಾಯ. ಇದರಿಂದ ಫಲಿತವಾಗುವ ಸತ್ಯ: ಮನು ಮನುಷ್ಯರನ್ನು ವಿರೂಪಗೊಳಿಸುತ್ತಾನೆ, ನಿರ್ವೀರ್ಯರನ್ನಾಗಿ ಮಾಡುತ್ತಾನೆ. ಹಿಂದೂ ಸಾಮಾಜಿಕ ವ್ಯವಸ್ಥೆಯು ಹೀಗೆ ಮಾಡಲು ಹೇಸುವುದಿಲ್ಲ. ಇದರಿಂದ ಸಿಕ್ಕಿರುವ ಲಾಭಗಳು ಎರಡು. ಮೊದಲನೆಯದು: ಹೇಯ ರೀತಿಯದಾದರೂ ಅತ್ಯಂತ ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಸಂರಕ್ಷಿಸುವ ವಿಧಾನವನ್ನು ಅದು ಕಂಡುಕೊಂಡಿರುವುದು. 2. ಅತ್ಯಂತ ಅಮಾನುಷ ರೀತಿಯಲ್ಲಿ ಮನುಷ್ಯರನ್ನು ನಿರ್ವೀರ್ಯಗೊಳಿಸುವ ವಿಧಾನವನ್ನು ಅಳವಡಿಸಿಕೊಂಡರೂ ಸಹ ಹಿಂದೂಗಳು ಅತ್ಯಂತ ಮಾನವೀಯ ದೃಷ್ಟಿಯ ಜನರೆಂಬ ಗೌರವವನ್ನು ತಂದುಕೊಟ್ಟಿರುವುದು.

ನಾಜಿಗಳು ಹಿಂದುಗಳಿಂದ ಕಲಿಯುವುದು ಬಹಳಷ್ಟಿತ್ತು. ಜನಸಮುದಾಯವನ್ನು ಹತ್ತಿಕ್ಕಲು ಹಿಂದೂಗಳು ರೂಪಿಸಿರುವ ತಂತ್ರವನ್ನು ಅವರೇನಾದರೂ ಅಳವಡಿಸಿಕೊಂಡಿದ್ದಿದ್ದರೆ ಅವರು ಹಿಂಸೆ-ಕ್ರೌರ್ಯಗಳನ್ನು ಬಳಸದೆಯೂ ಯಹೂದಿಗಳನ್ನು ತುಳಿದು, ತಾವು ಮಾನವೀಯ ಒಡೆಯರೆಂದು ಜಗತ್ತಿಗೆ ತೋರಿಸಿಕೊಳ್ಳಬಹುದಿತ್ತು.

ಸಾಮಾಜಿಕ ದಿವ್ಯತೆ ಮತ್ತು ಪಾವಿತ್ರತೆ

ಹಿಂದೂ ಸಾಮಾಜಿಕ ವ್ಯವಸ್ಥೆಯ ಮೂರನೆಯ ವಿಶಿಷ್ಟ ಲಕ್ಷಣ: ಸಾಮಾಜಿಕ ದಿವ್ಯತೆ ಮತ್ತು ಪಾವಿತ್ರತೆ. ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳುವಂತೆ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ದೇವರೇ ಸೃಷ್ಟಿಸಿದ್ದಾನೆ. ಆದ್ದರಿಂದ ಅದು ಪವಿತ್ರವಾದದ್ದು. ಹೀಗಾಗಿ ಅದನ್ನು ಯಾರೂ ಬದಲಿಸುವಂತಿಲ್ಲ. ಸುಧಾರಿಸುವಂತಿಲ್ಲ. ಟೀಕಿಸುವಂತಿಲ್ಲ.

ಇದು ಕೇವಲ ವಿಶಿಷ್ಟ ಮಾತ್ರವಲ್ಲ ಅಸಾಧಾರಣವಾದ ವ್ಯವಸ್ಥೆ. ಏಕೆಂದರೆ ಪ್ರಪಂಚದ ಇತರ ಭಾಗದ ಜನರು ಸಹ ಪಾವಿತ್ರತೆಯನ್ನು ನಾನಾ ರೀತಿಗಳಲ್ಲಿ ತಮಗೆ ಅಂಟಿಸಿಕೊಂಡವರಾಗಿದ್ದಾರೆ. ಕಲ್ಲು, ಮಣ್ಣು, ಪ್ರಾಣಿ, ಹಕ್ಕಿ, ಬೆಟ್ಟ ಗುಡ್ಡ, ಮರ ಗಿಡ ಎಲ್ಲವನ್ನೂ ಪವಿತ್ರವೆಂದು ಪರಿಗಣಿಸಿದವರಿದ್ದಾರೆ. ಆದರೆ ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಧರ್ಮದ ಮೂಲಕ ಪವಿತ್ರವೆಂದು ನಿರ್ಧರಿಸುವ ನಿದರ್ಶನ ಬೇರೆಲ್ಲೂ ಕಾಣಸಿಗುವುದಿಲ್ಲ.

ಬೇರೆ ಬೇರೆ ದೇಶಗಳಲ್ಲಿ ಇರುವ ಪ್ರಜಾಪ್ರಭುತ್ವವಾಗಲಿ, ನಾಜಿ óಸಮಾಜವಾಗಲಿ, ಬೋಲ್ಷೆವಿಸ್ಟಾಗಲಿ ಎಲ್ಲವೂ ಸಾಮಾಜಿಕವಾಗಿ ಸಂಘಟಿತವಾದವುಗಳು. ಯಾವುವೂ ಧಾರ್ಮಿಕವಾಗಿ ಪವಿತ್ರವೆಂದು ಪರಿಗಣಿತವಾಗಿಲ್ಲ. ಆದರೆ ಇಂಡಿಯಾದಲ್ಲಿ ಮಾತ್ರ ಹಿಂದೂ ಸಾಮಾಜಿಕ ವ್ಯವಸ್ಥೆಗೆ ಮಾತ್ರ ಧಾರ್ಮಿಕ ಪಾವಿತ್ರ್ಯತೆ ಅಂಟಿಕೊಂಡಿದೆ. ಪ್ರಾಚೀನ ಈಜಿಪ್ಟ್, ಪರ್ಷಿಯಾ, ರೋಮ್, ಗ್ರೀಸ್ ಮುಂತಾದ ದೇಶಗಳಲ್ಲಿನ ಅವರದೇ ಆದ ಸಾಮಾಜಿಕ ವ್ಯವಸ್ಥೆಗಳಲ್ಲಿ ವಿವಿಧ ಸಾಮಾಜಿಕ ಅಂತಸ್ತುಗಳಿಗೆ ಸೇರಿದ ಜನರಿದ್ದರು.

ಆದರೆ ಯಾರ ವೃತ್ತಿಗೂ ಧಾರ್ಮಿಕ ಪಾವಿತ್ರತೆ ಇರಲಿಲ್ಲ. ಅವೆಲ್ಲಾ ಸಾಮಾಜಿಕವಾಗಿದ್ದವು. ಯಾವ ದೇಶದಲ್ಲೂ ವೃತ್ತಿ, ಅಂದರೆ ಜೀವನಯಾಪನೆಗಾಗಿ ಜನರು ಕೈಗೊಳ್ಳುವ ಉದ್ಯೋಗಕ್ಕೆ ಪಾವಿತ್ರ್ಯತೆಯ ಸೋಂಕು ಇಲ್ಲ. ಆರ್ಥಿಕ ಚಟುವಟಿಕೆಗಳು ಧರ್ಮದ ಪರಿಧಿಯ ಆಚೆಗೇ ಇರುವಂಥವು. ಬೇಟೆಗಾರಿಕೆಯಾಗಲಿ, ಪಶುಸಂಗೋಪನೆಯಾಗಲಿ, ವ್ಯವಸಾಯವಾಗಲಿ ಧರ್ಮವಿಲ್ಲದೆ ಇಲ್ಲ. ಆದರೆ ಅವು ಯಾವುವೂ ಧಾರ್ಮಿಕ ಪಾವಿತ್ರ್ಯತೆಯನ್ನು ಹೊಂದಿಲ್ಲ. ಊಳಿಗಮಾನ್ಯ ಪದ್ಧತಿಯಲ್ಲಿ ಅದರದೇ ಆದ ಪದವಿ, ಅಧಿಕಾರ, ಅಂತಸ್ತುಗಳಿದ್ದರೂ, ಯಜಮಾನ, ಆಳು, ಯೋಧ, ನಾಯಕ, ಖಳನಾಯಕರಿದ್ದರೂ ಅವರ್ಯಾರೂ ಮತ್ತು ಅವರು ಮಾಡುವ ಯಾವ ಕೆಲಸವೂ ಧಾರ್ಮಿಕವಾಗಿ ಪವಿತ್ರ ಅಥವಾ ಅಪವಿತ್ರವಾಗಿರಲಿಲ್ಲ. ಕೇವಲ ಸಾಮಾಜಿಕವಾಗಿದ್ದವು. ಆರ್ಥಿಕವಾಗಿದ್ದವು.

ಇಡೀ ಪ್ರಪಂಚದಲ್ಲಿ ಹಿಂದೂಗಳು ಮಾತ್ರ ತಮ್ಮ ಸಾಮಾಜಿಕ ವ್ಯವಸ್ಥೆಗೆ-ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ ಧಾರ್ಮಿಕತೆಯನ್ನು ಅಂಟಿಸಿ ಪವಿತ್ರ, ಅನಂತ ಮತ್ತು ಬದಲಾವಣೆಗೆ ಒಳಪಡದಂಥ ವ್ಯವಸ್ಥೆಯನ್ನಾಗಿಸಿದ್ದಾರೆ. ಇಡೀ ಪ್ರಪಂಚದಲ್ಲಿ ಹಿಂದೂಗಳು ಮಾತ್ರ ತಮ್ಮ ಆರ್ಥಿಕ ವ್ಯವಸ್ಥೆಗೆ-ವಿವಿಧ ಕೆಲಸಗಳನ್ನು ಮಾಡುವ ಜನರ ನಡುವಿನ ಸಂಬಂಧಗಳಿಗೆ ಧರ್ಮವನ್ನು ಜೋಡಿಸಿ ಕೆಲಸವನ್ನು ಪವಿತ್ರ, ಅನಂತ ಮತ್ತು ಬದಲಾವಣೆಗೆ ಒಳಪಡದಂಥ ವ್ಯವಸ್ಥೆಯನ್ನಾಗಿಸಿದ್ದಾರೆ.

ಹೀಗಾಗಿ, ಹಿಂದೂಗಳು ಒಂದು ಪವಿತ್ರ ಧಾರ್ಮಿಕ ಸಂಕೇತ ವ್ಯವಸ್ಥೆಯನ್ನು ಹೊಂದಿದ ಜನ ಎಂದು ಮಾತ್ರ ಹೇಳಿದರೆ ಸಾಲದು. ಹಾಗೆ ನೋಡಿದರೆ, ಕ್ರೈಸ್ತ, ಯಹೂದಿ, ಮುಸಲ್ಮಾನ ಮುಂತಾದ ಎಲ್ಲ ಧರ್ಮಗಳ ಜನರಿಗೂ ಅವರವರದೇ ಆದ ದಾರ್ಮಿಕ ಸಂಕೇತಗಳ ವ್ಯವಸ್ಥೆ ಇದೆ. ಆದರೆ ಅವರು ತಮ್ಮ ಧಾರ್ಮಿಕ ನಂಬಿಕೆಯನ್ನು ಮಾತ್ರ ಪವಿತ್ರವೆಂದು ಪರಿಗಣಿಸುತ್ತಾರೆಯೇ ಹೊರತು ಹಿಂದೂಗಳು ಮಾಡುವಂತೆ ಅವರ ಇಡೀ ಸಾಮಾಜಿಕ ವ್ಯವಸ್ಥೆಗೇ, ಮನುಷ್ಯ-ಮನುಷ್ಯರ ನಡುವಿನ ಸಂಬಂಧ, ವ್ಯವಹಾರಕ್ಕೇ ಪಾವಿತ್ರತೆಯನ್ನು ಅಂಟಿಸುವುದಿಲ್ಲ. ಈ ವಿಷಯದಲ್ಲಿ ಹಿಂದೂಗಳಂಥ ಜನ ಇಡೀ ಪ್ರಪಂಚದಲ್ಲೇ ಯಾರೂ ಇಲ್ಲ. ಹಿಂದೂಗಳ ಈ ಅಸಾಧಾರಣ ವಿಶಿಷ್ಟತೆಯೇ ಹಿಂದೂ ಧರ್ಮವು ಕಾಲದ ಹೊಡೆತಗಳನ್ನು, ವಿವಿಧ ಆಕ್ರಮಣಕಾರರ ದಾಳಿಗಳನ್ನು ಮೀರಿ ಉಳಿದುಕೊಳ್ಳುವಂತೆ ಮಾಡಿದೆ.

ಹಿಂದೂ ಧರ್ಮದ ಈ ವಿವರಣೆಯನ್ನು ಒಬ್ಬ ಕಟ್ಟಾ ಹಿಂದೂ ಸಂಪ್ರದಾಯವಾದಿಯು ಸರಿಯಾದ ವಿವರಣೆಯೆಂದು ಒಪ್ಪಿಕೊಳ್ಳುತ್ತಾನೆ. ಸುಧಾರಣಾವಾದಿ ಮಾತ್ರ ಒಪ್ಪಿಕೊಳ್ಳಲು ಹಿಂಜರಿಯಬಹುದು. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಇದೆಲ್ಲಾ ಗತಕಾಲದ ವಿವರಣೆಯಾಗಿಬಿಡುತ್ತದೆ ಎಂದು ಆತ ಹೇಳಬಹುದು. ಆದರೆ ಅದು ನಿಜವಲ್ಲ. ಇಲ್ಲಿ ಮರೆಯಬಾರದ ಸಂಗತಿ ಏನೆಂದರೆ ಎಷ್ಟೋ ಧಾರ್ಮಿಕ ಸಂಸ್ಥೆಗಳು ನಂಬಿಕೆಗಳ ಸ್ಥಿತಿಗೆ ಇಳಿದು ಅವನತಿ ಹೊಂದಿದಮೇಲೂ ಅನೇಕ ವೇಳೆ ಮುಂದುವರೆಯುತ್ತವೆ. ಹಾಗೆ ಮುಂದುವರೆಯಲಿ, ಇಲ್ಲದಿರಲಿ, ಹಳೆಯ ಚಾಳಿಗಳಾಗಿ ಜೀವಂತವಾಗಿರುತ್ತವೆ. ಹಿಂದೂ ಸಾಮಾಜಿಕ ವ್ಯವಸ್ಥೆಯು ಹಿಂದೂಗಳ ಚಾಳಿಯಾಗಿಬಿಟ್ಟಿದೆ. ಹೀಗಾಗಿ ಈಗಲೂ ಜೀವಂತವಾಗಿದೆ. ಇದನ್ನು ಯಾರೂ ಅಲ್ಲಗೆಳೆಯಲಾರರು.
 

 

ಪ್ರೊ. ವಿ. ಎನ್. ಲಕ್ಷ್ಮಿನಾರಾಯಣ