Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಮೇ ಗೆದ್ದೂ ಸೋತರು, ಕಾರ್ಬಿನ್ ಸೋತೂ ಗೆದ್ದರು!

ಸಂಪುಟ: 
11
ಸಂಚಿಕೆ: 
27
date: 
Sunday, 25 June 2017
Image: 

ವರ್ಗ ರಾಜಕೀಯ ಮುನ್ನೆಲೆಗೆ ಬಂದಿದೆ

ಬ್ರಿಟನ್ ಸಂಸತ್ 650 ಸದಸ್ಯರ ಬಲಹೊಂದಿದೆ. ಇದೇ ಜೂನ್ 8 ರಂದು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಪ್ರಧಾನಿ ತೆರೇಸಾ ಮೇ ನೇತೃತ್ವದ ಕನ್ಸರ್ವೇಟೀವ್ ಪಕ್ಷವು 318 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ್ಯೂ ಬಹುಮತಕ್ಕೆ ಇನ್ನು 8 ಸ್ಥಾನಗಳು ಕಡಿಮೆಯಿದ್ದು, ಇದೀಗ ಅಲ್ಪ ಸಂಖ್ಯಾತ ಸರ್ಕಾರವಾಗಿದೆ. ಚುನಾವಣೆಗೆ ಇನ್ನು ಮೂರು ವರ್ಷಗಳ ಅವಧಿ ಇದ್ದರೂ ಸಹ, ಪ್ರಧಾನಿ ತೆರೇಸಾ ಮೇ ಯವರು, ತನ್ನ ಒಣ ಪ್ರತಿಷ್ಠಿತೆಯನ್ನು ಪಣಕ್ಕಿಟ್ಟು ಅನಗತ್ಯವಾಗಿ ಕ್ಷಿಪ್ರ ಚುನಾವಣೆ ನಡೆಸಿ, ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಎರಡು ವರ್ಷಗಳ ಹಿಂದೆ 331 ಸ್ಥಾನ ಗಳಿಸಿದ್ದ ಇವರ ಕನ್ಸರ್ವೇಟೀವ್ ಪಕ್ಷವು 13 ಸ್ಥಾನಗಳನ್ನು ಕಳೆದುಕೊಂಡಿದೆ. ಸ್ಕಾಟ್‍ಲ್ಯಾಂಡಿನಲ್ಲಿ ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ಬೆಂಬಲದಲ್ಲಿ ತೀವ್ರ ಕುಸಿತ ಇಲ್ಲದಿದ್ದರೆ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದರು.
 

ಇದರಿಂದಾಗಿ ಪ್ರಧಾನಿ ಮೆ ಅತಂತ್ರದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೇ ಜೂನ್ 19 ರಿಂದ ಆರಂಭಗೊಳ್ಳುವ (ಈಗಾಗಲೇ ಆರಂಭಗೊಂಡಿದೆ) ಬ್ರೆಕ್ಸಿಟ್ ಮಾತುಕತೆಯಲ್ಲಿ ಪಾಲ್ಗೊಳ್ಳುವ ಮುನ್ನ, ಸಂಸತ್ ಚುನಾವಣೆ ನಡೆಸಿ ತನ್ನ ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಯುರೋಪಿನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ತನ್ನ ನಿಲುವನ್ನು ಗರ್ವದಿಂದ ಎತ್ತಿಯಿಡಿಯಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ. ಇವರು ಚುನಾವಣೆಯಲ್ಲಿ ಕೊಟ್ಟಂತ ಘೋಷಣೆ “ಬಲವಾದ ಮತ್ತು ಸ್ಥಿರವಾದ” (Strong and stable) ಹೋಗಿ, ಇದೀಗ ದುರ್ಬಲ, ಅನಿಶ್ಚಿತತೆಯ ಹಾಗೂ ಅಲುಗಾಡುವ ಸರ್ಕಾರ ಬಂದಿದೆ. ಅಲ್ಲದೆ, ಬ್ರೆಕ್ಸಿಟ್ ಮಾತುಕತೆಯಲ್ಲಿ ಮೇ ಯವರ ಸ್ಥಿತಿ ಮತ್ತಷ್ಟು ಕುಗ್ಗಿ ಹೋಗುವ ಸಂಭವ ಕಾಣುತ್ತಿದೆ. ಕ್ಷಿಪ್ರ ಚುನಾವಣೆ ನಡೆಸಿ, `ಕಲ್ಲಿನ ಬಂಡೆಗೆ ತಲೆ ಚಚ್ಚಿಕೊಂಡಂತಾಗಿದೆ’ ಪ್ರಧಾನಿ ತೆರೇಸಾ ಮೇ ಯವರ ಸ್ಥಿತಿ ಎಂದು ಬ್ರಿಟನ್ನಿನ ಮಾಧ್ಯಮಗಳು, ರಾಜಕೀಯ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ವಿರೋಧ ಪಕ್ಷದ ಜೆರೆಮಿ ಕಾರ್ಬಿನ್ ನಾಯಕತ್ವದ ಲೇಬರ್ ಪಕ್ಷ 30 ಸೀಟುಗಳನ್ನು ಹೆಚ್ಚಿಗೆ ಪಡೆದು 260 ಸ್ಥಾನಗಳನ್ನು ಪಡೆದಿದೆ. ಸ್ಕಾಟಿಶ್ ನ್ಯಾಷನಲ್ ಪಾರ್ಟಿ 35, ಲಿಬರಲ್ ಡೆಮಾಕ್ರಟ್ಸ್ 12, ಇತರರು 23 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ತೆರೇಸಾ ಮೆ ಯವರ ಕ್ಷಿಪ್ರ ಚುನಾವಣೆಯ ಜೂಜಿಗೆ ಸೂಕ್ತ ಉತ್ತರ ನೀಡಿದ್ದಾರೆ. ಸ್ಕಾಟಿಶ್ ನ್ಯಾಷನಲ್ ಪಾರ್ಟಿ 21 ಸೀಟುಗಳನ್ನು ಕಳೆದುಕೊಂಡಿದೆ.

ಸಂಸತ್‍ನಲ್ಲಿ ಉಂಟಾಗಿರುವ ಪೂರ್ಣ ಅತಂತ್ರ ಬಿಕ್ಕಟ್ಟುಗಳಿಂದಾಗಿ, ಮೆ’ಯವರ ಸರ್ಕಾರ ಬದುಕುಳಿಯುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ಸಂಶಯಾಸ್ಪದವಾದ ಹಿಂಬದಿ ಒಪ್ಪಂದಗಳು ಏರ್ಪಾಡಾಗಿ, ಸುದೀರ್ಘಕಾಲದ ಸಾಂವಿಧಾನಿಕ ಕಾರ್ಯ ವಿಧಾನಗಳ ಅಭೂತಪೂರ್ವ ಅಡೆ-ತಡೆಗಳು ಉಂಟಾಗುವ ಸಂಭವ ಕಾಣುತ್ತಿದೆ. ಹಣದುಬ್ಬರ ದ ತೀವ್ರ ಏರಿಕೆ ಮತ್ತು ಜೀವನ ಮಟ್ಟದ ಮೇಲೆ ಪರಿಣಾಮ ಬೀರಿ ಮತ್ತಷ್ಟು ಕುಸಿತಕ್ಕೆ ಎಡೆಮಾಡಿಕೊಡುತ್ತದೆ.
 

ಅತಂತ್ರ ಟೊರಿ ಸರಕಾರ

ಬ್ರಿಟಿಷ್ ಮತ್ತು ಅಂತರರಾಷ್ಟ್ರೀಯ ಬಂಡವಾಳಶಾಹಿಯ ದೃಷ್ಟಿಯಲ್ಲಿ ಮೇ ಯವರ ದುರಂತಮಯ ತಪ್ಪುಗ್ರಹಿಕೆಯನ್ನು ಕಾರ್ಮಿಕ ನಾಯಕ ಜೆರೆಮಿ ಕಾರ್ಬಿನ್ ಮತ್ತು ಅವರ ಲೇಬರ್ ಪಡೆಯ ಕಾರ್ಯಕರ್ತರು ಪ್ರತಿಭಾ ಪೂರ್ಣವಾಗಿ ಬಳಸಿಕೊಂಡರು. ಹಾಗೂ ಬ್ರಿಟಿಷ್‍ರಲ್ಲಿ ವರ್ಗ ರಾಜಕೀಯವನ್ನು ಪುನರುಜ್ಜೀವನಗೊಳಿಸಿದರು. ಮಾತ್ರವಲ್ಲದೆ ಮಾಜಿ ಲೇಬರ್ ಪ್ರಧಾನಿ ಟೊನಿ ಬ್ಲೇರ್ ಅವರ ರಾಜಕೀಯ ಧೋರಣೆ “ಮೂರನೇ ಮಾರ್ಗ”ವನ್ನು ಹೂತು ಹಾಕಿದ್ದಾರೆ.

ರಾಜಕೀಯ ಬಿಕ್ಕಟ್ಟು ವಿಪರೀತ ದುರಂತದ ಮಟ್ಟ ಮುಟ್ಟಿದೆ. ಮತದಾನವಾದ ಒಂದು ವಾರದ ನಂತರ, ತೆರೇಸಾ ಮೇ ಯವರು ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ, ಸರ್ಕಾರವನ್ನು ರಚಿಸಲು ಸಾಧ್ಯವಾಗಿರಲಿಲ್ಲ. ತನ್ನ ತಪ್ಪಿನ ಅರಿವಿನಿಂದಾಗಿ ಆಗಿರುವ ಮುಖಭಂಗವನ್ನು ಒಪ್ಪಿಕೊಳ್ಳದೆ, ತೀವ್ರ ಪ್ರತಿಗಾಮಿ ಪಕ್ಷವಾದ ಟೋರಿ-ಡೆಮಾಕ್ರಾಟಿಕ್ ಯೂನಿಯನಿಸ್ಟ್ ಪಕ್ಷ(ಡಿ.ಯು.ಪಿ) ಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಉಳಿಸಿಕೊಳ್ಳಲು ಅಸಂವಿಧಾನಿಕ ಹಾಗೂ ಬ್ರಿಟಿಷ್ ಜನತೆಯ ವಿರುದ್ಧ ಹೆಜ್ಜೆ ಇಡಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದರಿಂದ ಕನ್ಸರ್ವೇಟಿವ್ ಪಕ್ಷದಲ್ಲೇ ಒಡಕು ಉಂಟಾಗುವ ಸಂಭವ ಹೆಚ್ಚಾಗಿದೆ. ಡಿಯುಪಿ ಉತ್ತರ ಐರ್ಲೆಂಡಿನ ಮೂಲದ ಕ್ಯಾಥೋಲಿಕ್-ವಿರೋಧಿ  ಪಕ್ಷವಾಗಿದೆ. ಅದು ಹಿಂದೆ ಭಯೋತ್ತಾದಕ ಕೃತ್ಯಗಳಲ್ಲೂ ತೊಡಗಿತ್ತು. ಡಿಯುಪಿ ಯೊಂದಿಗೆ ಮೈತ್ರಿ ವಿರುದ್ಧ ಇಂದಲ್ಲ ನಾಳೆಯಾದರೂ ಕನ್ಸರ್ವೇಟಿವೆ ಪಕ್ಷದೊಳಗೆ ಬಿರುಗಾಳಿ ಏಳಬಹುದು. ರಾಣಿಯ ಭಾಷಣದ ಮೇಲೆ ಮತದಾನ ನಡೆದಾಗಲೇ ಮೆ ಸರಕಾರದ ಭವಿಷ್ಯ ನಿರ್ಧಾರ ಆಗಲಿದೆ.

ತೆರೇಸಾ ಮೆ ಯವರು ಎರಡು ಪ್ರಮುಖ ಚುನಾವಣಾ ಘೋಷಣೆಗಳು ಇದೀಗ ಮಣ್ಣುಪಾಲಾಗಿ ಹೋಗಿದೆ. ಒಂದು “ಬಲವಾದ ಮತ್ತು ಸ್ಥಿರವಾದ” ಸರ್ಕಾರ ನೀಡುವುದು. ಲೇಬರ್ ಪಕ್ಷದ ನಾಯಕ ಕಾರ್ಬಿನ್ ಅವರದ್ದು “ಅವ್ಯವಸ್ಥೆಯ ಮೈತ್ರಿ” ಹಾಗೂ ಅವರೊಬ್ಬ “ಭಯೋತ್ಪಾದಕರ ಹಿತೈಷಿ” ಎಂಬುದು ಮತ್ತೊಂದು ಘೋಷಣೆ. ಬದಲಾಗಿ ಈಗ ಮೆ ಯವರದ್ದೇ “ಅವ್ಯವಸ್ಥೆಯ ಮೈತ್ರಿ” ಹಾಗೂ ಅವರೊಬ್ಬ “ಭಯೋತ್ಪಾದಕರ ಹಿತೈಷಿ” ಎಂದಾಗಿ ಬಿಟ್ಟಿದೆ.

ಹೀಗೆ ಅತಂತ್ರ ಸ್ಥಿತಿಯಿಂದ ಕಂಗೆಟ್ಟು ಹೋಗಿರುವ ಬ್ರಿಟನ್ ರಾಜಕೀಯ ಅಂತರಾಷ್ಟ್ರೀಯವಾಗಿ ಗಮನ ಸೆಳೆದಿದೆ. ಬ್ರ್ರೆಕ್ಸಿಟ್ ಮಾತುಕತೆಗಳನ್ನು ಮುಂದು ಹಾಕುವ ನಿಟ್ಟಿನಲ್ಲಿಯೂ ಸಲಹೆಗಳು ಬಂದಿದೆ. ಈ ಮಧ್ಯೆ ಬ್ರೆಕ್ಸಿಟ್ ಮಂತ್ರಿ ಜಾರ್ಜ್ ಬ್ರಿಡ್ಜ್ ರವರು ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ, ಬ್ರೆಕ್ಸಿಟ್ ಮಾತುಕತೆ ಮೇಲೆ ಅಘಾತವಾದ ಪರಿಣಾಮವನ್ನು ಉಂಟುಮಾಡುವ ಸನ್ನಿವೇಶ ಎದುರಾಗಿರುವುದು ಮೇ ಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬ್ರಸೆಲ್ಸಿನಲ್ಲಿ ನಡೆಯುವ ಬ್ರೆಕ್ಸಿಟ್ ಮಾತುಕತೆಗಳು ಯಾವಾಗ ಆರಂಭಗೊಂಡರೂ ಸಹ, ಅದೊಂದು ನುಂಗಲಾರದ ತುತ್ತಾಗಲಿದೆ. ಒಂದು ವರ್ಷದ ಹಿಂದೆ ಬ್ರೆಕ್ಸಿಟ್ ಜನಮತಸಂಗ್ರಹ ನಡೆದಾಗ ಶೇ. 52 ಪರ ಹಾಗೂ ಶೇ. 48 ವಿರೋಧ ಮತಗಳು ಬಿದ್ದವು. ಇದನ್ನು ಮತ್ತಷ್ಟು ಬಲಯುತ ಮಾಡುವ ಹಾದಿಯಲ್ಲಿ ಕ್ಷಿಪ್ರ ಚುನಾವಣೆಗೆ `ಮೇ’ ಮುಂದಾದರು. ಬ್ರೆಕ್ಸಿಟ್ ಬಗ್ಗೆ ಟೊರಿ ಪಕ್ಷದೊಳಗೆ ಮೊದಲಿಂದಲೂ ತೀವ್ರ ಭಿನ್ನಾಭಿಪ್ರಾಯಗಳು ಇದ್ದವು. ಚುನಾವಣೆ ನಂತರ ಇವು ಇನ್ನೂ ಜೋರಾಗಿವೆ. ಮೆ ಟೊರಿಯ ಎರಡು ಬಣಗಳ ಸಮತೋಲನ ಗೊಳಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.

ಸೋತವರು ಗೆದ್ದವರಂತೆ ಗೆದ್ದವರು ಸೋತಂತೆ ಕಾಣುತ್ತಿದ್ದಾರೆ

ಬ್ರಿಟಿಷ್ ಪ್ರಸ್ತುತ ಪರಿಸ್ಥಿತಿ ಎಲ್ಲಾ ರೀತಿಯ ರಾಜಕೀಯ ತರ್ಕವನ್ನು ಮೀರಿ ನಿಂತಿದೆ. ಚುನಾವಣೆಯಲ್ಲಿ ವಿಜಯಶಾಲಿಗಳು ಸೋತವರಂತೆ, ಸೋತವರು ವಿಜೇತರಂತೆ ಕಾಣುತ್ತಿದ್ದಾರೆ. ಏಕೆಂದರೆ ಬ್ರಿಟಿಷ್‍ನ ಪ್ರತಿಯೋಬ್ಬರು ಬದಲಾವಣೆಯ ದಿಕ್ಕನ್ನೂ ಎದುರು ನೋಡಲು ಬಯಸುತ್ತಿದ್ದಾರೆ.

ಈ ಅಸಮಾನ್ಯ ಅದ್ಬುತ ರಾಜಕೀಯ ಬದಲಾವಣೆಯ ನಡುವೆ ಜೆರೆಮಿ ಕಾರ್ಬಿನ್ ರವರ ಅದ್ಭುತ ಚುನಾವಣಾ ಪ್ರಚಾರ, ಕಾರ್ಮಿಕ ಸಂದೇಶ, ಉತ್ಸಾಹಭರಿತ ಹೊಸ ಮಾರ್ಗಗಳು ಬ್ರಿಟಿಷ್ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಒಂದು ತಲೆಮಾರಿನಲ್ಲೇ ಅತ್ಯಂತ ರ್ಯಾಡಿಕಲ್ ಮ್ಯಾನಿಪೆಸ್ಟೋ, ಲೇಬರ್ ಸದಸ್ಯರು ಬೀದಿ-ಬದಿಗಳಲ್ಲಿ ಮನೆಗಳ ಬಾಗಿಲು ತಟ್ಟಿ, ಸಾಮಾಜಿಕ-ಜಾಲತಾಣಗಳ ಮೂಲಕ ಕೈಗೊಂಡ ಪ್ರಚಾರದ ಭರಾಟೆ, ವಿವಿಧ ಬಗೆಯ ಸಂದೇಶಗಳ ಮೂಲಕ ಕಾರ್ಬಿನ್ ಅವರ ಅದ್ಭುತ ಚುನಾವಣಾ ಪ್ರಚಾರ ಈ ಚುನಾವಣೆಯ ವಿಶೇಷತೆಯಾಗಿತ್ತು. ಕೇವಲ ಐದು ವಾರಗಳ ಅವಧಿಯಲ್ಲಿ ಕಾರ್ಬಿನ್ ಜನತೆಯನ್ನು ಅದರಲ್ಲೂ ಕಾರ್ಮಿಕರನ್ನು ಲೇಬರ್ ಗೆ ಮತ ನೀಡುವಂತೆ ಉತ್ತೇಜಿಸಿದರು. ಚುನಾವಣೆ ಘೋಷಣೆಯಾದಾಗ ಏಪ್ರಿಲ್ ತಿಂಗಳ ಮಧ್ಯದಲ್ಲಿ ಕೇವಲ 24-25 ಪ್ರತಿಶತ ಬೆಂಬಲವಿತ್ತು. ಅದ್ಭುತ ಪ್ರಚಾರದ ಆಕರ್ಷಣೆಯಿಂದಾಗಿ, ಶೇ.41 ರಷ್ಟು ಮತಗಳ ಬೆಂಬಲ ಲೇಬರ್ ಪಕ್ಷಕ್ಕೆ ಅಂತಿಮವಾಗಿ ದೊರಕಿತು. ಶೇ. 10ರಷ್ಟು ಹೆಚ್ಚಿನ ಮತ ಗಳಿಸಿತು. ಇದು 1945ರ ನಂತರ ಲೇಬರ್ ಪಡೆದ ಅತ್ಯಂತ ಹೆಚ್ಚಿನ ಮತ ಹೆಚ್ಚಳ. ಅದರಲ್ಲೂ ಯುವಜನತೆ ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿ ಮತಗಟ್ಟೆಗೆ ಬಂದು ಲೇಬರ್ ಗೆ ಮತ ನೀಡಿದ್ದಯ ಗಮನಾರ್ಹವಾಗಿತ್ತು. ವಲಸೆಗಾರ-ವಿರೋಧಿ ಉಗ್ರ ಬಲಪಂಥೀಯ ಇಂಡಿಪೆಂಡೆಂಟ್ ಪಕ್ಷ ಶೇ. 10 ರಷ್ಟು ಮತ ಕಳೆದುಕೊಂಡಿದ್ದು, ಇದನ್ನು ಲೇಬರ್ ಪಕ್ಷ ಪೂರ್ಣವಾಗಿ (ಅಥವಾ ಅದರ ದೊಡ್ಡ ಭಾಗ) ಬಾಚಿಕೊಂಡಂತೆ ಕಾಣುತ್ತದೆ.

ಕಾರ್ಬಿನ್ ಒಬ್ಬ ವೃತ್ತಿ ನಿರತ ಜನಪ್ರಿಯ ಲೇಬರ್ ರಾಜಕೀಯ ನಾಯಕನಾಗಿ ಹೊಮ್ಮಿ, 1980 ರಿಂದಲೇ ಸಂಸತ್ ಸದಸ್ಯನಾಗಿ ಅಪಾರ ಅನುಭವ ಹೊಂದಿದ್ದಾರೆ. ಪ್ರತಿಯೊಂದು ಪ್ರಮುಖ ವಿಷಯಗಳಲ್ಲಿಯೂ ಇವರ ಸೈದ್ಧಾಂತಿಕ ಬದ್ಧತೆ ಅಚಲ, ಅನನ್ಯ. ಅದು ದಕ್ಷಿಣ ಆಪ್ರಿಕಾದ ವರ್ಣಬೇದ ನೀತಿ ವಿರುದ್ಧ ಇರಲಿ, ಅಥವಾ 2003 ರಲ್ಲಿ ಟೋನಿ ಬ್ಲೇರ್‍ರ ಇರಾಕ್ ಮೇಲಿನ ಆಕ್ರಮಣವನ್ನು ತಡೆಗಟ್ಟುವ ಯತ್ನಗಳು ಇರಲಿ. ಇಸ್ಲಿಂಗ್ಟ್‍ನ್ ಉತ್ತರದ ಸಂಸದರಾಗಿ, ಪ್ರಗತಿಶೀಲರಾಗಿ ಕಾರ್ಮಿಕರ ಹಕ್ಕುಗಳ ಬಗ್ಗೆ ಕಳೆದ 2015 ರ ಚುನಾವಣೆಯಲ್ಲಿ ಹಾಗೂ ಈ 2017 ರ ಚುನಾವಣೆಯಲ್ಲಿ ನೇರವಾಗಿ ಕಾರ್ಮಿಕರನ್ನು ಸೆಳೆಯುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದರ ಫಲವೇ ಲೇಬರ್ ಪಕ್ಷದ ಈ ಉನ್ನತ ಮಟ್ಟದ ಸಾಧನೆ. ಸುಮಾರು 20 ಸಾವಿರ ತಳ ಮಟ್ಟದ ಕಾರ್ಯಕರ್ತರು ದುಡಿದಿದ್ದು ಲೇಬರ್ ಪಕ್ಷವನ್ನು ಬರಿಯ ಪಾರ್ಲಿಮೆಂಟರಿ ಪಕ್ಷದಿಂದ ಸಾಮಾಜಿಕ ಚಳುವಳಿಯ ರೀತಿಯಲ್ಲೂ ನಡಸುವಲ್ಲಿ ಕಾರ್ಬಿನ್ ಯಶಸ್ವಿಯಾಗಿದ್ದಾರೆ.

ವರ್ಗ ರಾಜಕೀಯ ಮರುಸ್ಥಾಪನೆ

ಇವರ ಚುನಾವಣಾ ಯಶಸ್ವಿನ ಹಿನ್ನೆಲೆಯಲ್ಲಿ ಗಮನಾರ್ಹ ಅಂಶವೆಂದರೆ, ಚುನಾವಣಾ ಪ್ರಣಾಳಿಕೆಯ ಪ್ರಮುಖ ಘೊಷಣೆ “ಕೇವಲ ಕೆಲವೇ ಕೆಲವರಿಗಲ್ಲ ಹಲವರಿಗಾಗಿ” (For the many, not the few) ಎಂದು ರಾಷ್ಟ್ರದ ಮುಂದೆ ಬಿಂಬಿಸಿದ್ದು. ಹಿಂದೆದೂ ಕಂಡರಿಯದ ಇದು ಎಡಪಂಥೀಯ ರ್ಯಾಡಿಕಲ್ ಮ್ಯಾನಿಫೆಸ್ಟೊ ಆಗಿತ್ತು.  ಪ್ರಮುಖವಾಗಿ ಬ್ರಿಟಿಷ್ ರಾಜಕೀಯದಲ್ಲಿ ವರ್ಗ ರಾಜಕೀಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಲಕ್ಷಾಂತರ ಜನರನ್ನು ಸೆಳೆಯಿತು. ಅವರ ಧೈನಂದಿನ ಜೀವನದ ವಿಷಯಗಳಾದ - ಮಿತವ್ಯಯದ ದಾಳಿಯಲ್ಲಿ ಸೊರಗಿದ ಆರೋಗ್ಯ ಶಿಕ್ಷಣ ವ್ಯವಸ್ಥೆಯ ದುರವಸ್ಥೆ, ವಸತಿ ರಹಿತರ ಗೋಳು, ಇವೆಲ್ಲ ಆಳುತ್ತಿರುವವರ ನೀತಿಗಳ ಭಾಗವಾಗಿ ನಡೆಯುತ್ತದೆ ಎಂದು ಸಮರ್ಥವಾಗಿ ವಿವರಿಸಿರುವ ಪ್ರಣಾಳಿಕೆಯಿಂದ ಬ್ರಿಟಿಷ್ ಜನರು ಆಕರ್ಷಿತರಾದರು. ಈ ಸಂದೇಶಗಳು ಎಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿತ್ತೆಂದರೆ, ಬಲಪಂಥೀಯರಿಗೆ ಸಾಮಾನ್ಯವಾಗಿ ಲಾಭವಾಗಬಹುದಾದಂತ ಈ ಅವಧಿಯಲ್ಲಿ ಬಂದ ಭಯೋತ್ಪಾದಕ ದಾಳಿಗಳು ಸಹ ಅವರಿಗೆ ಪ್ರಯೋಜನವಾಗಲಿಲ್ಲ.

ಪ್ರಧಾನಿ ಮೆ ಕಂಗೆಟ್ಟು ಹೋಗಿದ್ದಾರೆ. ಲೇಬರ್ ನಾಯಕ ಜೆರೆಮಿ ಕಾರ್ಬಿನ್ ಅವರ ಎಡ ಪಂಥದ ಮೈತ್ರಿ ಜನರ ಮನ ಗೆದ್ದಿದೆ. ಬ್ರಿಟನ್‍ನಲ್ಲಿ ವರ್ಗ ರಾಜಕೀಯ ಮರುಸ್ಥಾಪನೆಯ ಗಾಳಿ ಬೀಸಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ರಿಟನ್ ಮತ್ತೊಂದು ಚುನಾವಣೆ ಹೆಚ್ಚು ಕಡಿಮೆ ಖಚಿತವಿದೆ. ಇನ್ನೊಮ್ಮೆ ಚುನಾವಣೆ ನಡೆದರೆ ಎಡಪಂಥೀಯ ಕಾರ್ಯಕ್ರಮಮದ ಆಧಾರದಲ್ಲಿ ಲೇಬರ್ ಬಹುಮತದ ಸರಕಾರದ ಸಾಧ್ಯತೆ ಬಹಳ ಹೆಚ್ಚಿದೆ. ಇದು ಅಭಿವೃದ್ಧ ಬಂಡವಾಳಶಾಹಿ ದೇಶದ ರಾಜಕೀಯದಲ್ಲಿ ಒಂದು ದೊಡ್ಡ ಬದಲಾವಣೆ ತರಬಹುದು.
 

 

 

ನಾಗರಾಜ ನಂಜುಂಡಯ್ಯ