ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸಿ!

ಸಂಪುಟ: 
11
ಸಂಚಿಕೆ: 
27
Sunday, 25 June 2017

ಕಲ್ಲಡ್ಕದಲ್ಲಿ ಪದೇ ಪದೇ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಚೂರಿ ಇರಿತ, ಕೊಲೆ, ಹಲ್ಲೆ, ದೊಂಬಿ ಇಲ್ಲಿ ಸಾಮಾನ್ಯ. ಹೆಚ್ಚು ಕಡಿಮೆ ಕಳೆದ 4 ವಾರಗಳಿಂದ ಸತತವಾಗಿ ನಿಷೇಧಾಜ್ಞೆಯಲ್ಲಿದೆ. ಇತ್ತೀಚೆಗೆ ಮೇ 26 ಮತ್ತು ಜೂನ್ 13ರಂದು ನಡೆದ ಚೂರಿ ಇರಿತಗಳು, ಜೂನ್ 21ರಂದು ಎಸ್.ಡಿ.ಪಿ.ಐ. ಕಾರ್ಯಕರ್ತನ ಕೊಲೆ - ಹೀಗೆ ಸತತವಾಗಿ ಹಿಂಸಾಚಾರ ನಡೆಯತ್ತಲೇ ಇದೆ. ಪ್ರತಿ ಹಿಂಸಾಚಾರದ ಘಟನೆ ಅದು ವೈಯಕ್ತಿಕ ದ್ವೇಷದ ಕಾರಣವಾಗಿರಲಿ ಇನ್ನೇನೇ ಇರಲಿ, ಅದು ಕೋಮು ಗಲಭೆ-ದೊಂಬಿಗೆ ತಿರುಗುವುದು ಕಲ್ಲಡ್ಕದ ವಿಶೇಷ. ಇದು ಬರಿಯ ಕಳೆದ ಕೆಲವು ವಾರಗಳ ವಿದ್ಯಮಾನ ಅಲ್ಲ. ಇದು ಹಲವು ವರ್ಷಗಳಿಂದ ನಡೆದು ಬಂದಿದೆ.

ಒಂದು ಧರ್ಮದ ವ್ಯಕ್ತಿಯ ವಾಹನದಿಂದ ಚಿಮ್ಮಿದ ಕೆಸರು ಮತ್ತೊಂದು ಧರ್ಮದವರ ಮೇಲೆ ಬಿದ್ದ ಘಟನೆ ಸಹ ಕೋಮುದೊಂಬಿಗೆ ತಿರುಗುತ್ತದೆ. ಒಂದು ಧರ್ಮದ ವ್ಯಾಪಾರಿಯ ಅಂಗಡಿಯಲ್ಲಿದ್ದ ಕೊಳೆತ ಟೊಮೆಟೊ ಎಸೆಯುವಾಗ ಇನ್ನೊಂದು ಧರ್ಮದ ವ್ಯಕ್ತಿಯ ಮೇಲೆ ಬಿದ್ದ ಘಟನೆ ಕೋಮು ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಇದೇನು ಆಕಸ್ಮಿಕವಲ್ಲ. ಇದು ಯೋಜಿತ. ಮತ್ತು ಇದು ಮುಂದುವರಿಯುತ್ತಿರುವುದಕ್ಕೆ ಕಾರಣ, ಈ ಕೋಮು ಗಲಭೆಗಳನ್ನು ಯೋಜಿಸುತ್ತಿರುವವರು ಪ್ರಬಲ ಶಕ್ತಿ-ವ್ಯಕ್ತಿಗಳು. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ಭರವಸೆ.  ಕಲ್ಲಡ್ಕದ ಈ ಅಪಕೀರ್ತಿಗೆ ಒಂದು ಪ್ರಮುಖ ಕಾರಣ ಇದೇ ಪಟ್ಟಣದ ಹೆಸರು ಹೊತ್ತ ಒಬ್ಬ ವ್ಯಕ್ತಿ - ಕಲ್ಲಡ್ಕ ಪ್ರಭಾಕರ ಭಟ್.
 

ಕಲ್ಲಡ್ಕ ಪ್ರಭಾಕರ ಭಟ್ ಕಲ್ಲಡ್ಕ ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡದ ಕೋಮುವಾದೀಕರಣದ ಕೋಮು ಕಲಹಗಳ, ಕೋಮು ದೊಂಬಿಗಳ ಸೂತ್ರಧಾರ. ಆರೆಸ್ಸೆಸ್ ನ ದಕ್ಷಿಣ ಭಾರತ ಮಟ್ಟದ ನಾಯಕ ಈತ. ಸೂತ್ರಧಾರ ಎಂದರೆ ಹಿಂದೆ ನಿಂತು ಗಲಭೆಗಳನ್ನು ನಡೆಸುವುದು ಮಾತ್ರವಲ್ಲ. ಆತನ ಭಾಷಣಗಳು ಅಕ್ಷರಶಃ ಕೋಮು ಬೆಂಕಿ ಉಗುಳುವಂತಹುದು. ಸಂಘ ಗ್ಯಾಂಗ್ ನ ರಾಜಕೀಯ ಬಂಡವಾಳ ಖಾಲಿಯಾದಾಗ ಚುನಾವಣೆಗಳ ಮೊದಲು ನಡೆಸುವ ಹಿಂದೂ ಸಮಾಜೋತ್ಸವಗಳಲ್ಲಿ ಆತ ದಕ್ಷಿಣ ಕನ್ನಡದ ಎರಡು ದೊಡ್ಡ ಅಲ್ಪ ಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ವಿರುದ್ಧ ಕಾರುವ ಕೋಮು ವಿಷ, ಶಿವಸೇನೆಯ ನಾಯಕ ಬಾಳಾ ಠಾಕ್ರೆಯನ್ನು ನಾಚಿಸುವಂತೆ ಇರುತ್ತದೆ. ಆತನನ್ನು “ಮಂಗಳೂರಿನ ಬಾಳಾ ಠಾಕ್ರೆ” ಎಂದು ಕರೆಯಲಾಗುತ್ತದೆ. ಆತನ ಎಷ್ಟೋ ಭಾಷಣಗಳ ವಿರುದ್ಧ ಕೋಮುದ್ವೇಷ-ಪೂರಿತ ದೂರು, ಮೊಕದ್ದಮೆಗಳನ್ನು ಹಾಕಲಾಗಿದೆ.

ಆದರೆ ಎಂದೂ ಬಾಳಾ ಠಾಕ್ರೆಯಂತೆ ಆತನನ್ನು ಬಂಧಿಸಲಾಗಿಲ್ಲ. ಈ ಎರಡೂ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳು ಕಾಂಗ್ರೆಸ್ ಸರಕಾರಗಳು ಮತ್ತು ಆಡಳಿತ. ಏಕೆಂದರೆ ಅವರು ಕಾನೂನು ಪ್ರಕಾರ ಇಂತಹ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಬದಲಾಗಿ ಆತನೊಂದಿಗೆ ‘ಅನಾಕ್ರಮಣ’ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲವು ಕಾಂಗ್ರೆಸಿಗರು ಶಾಮೀಲು ಕೂಡಾ ಆಗಿದ್ದಾರೆ. ಆದ್ದರಿಂದ ಕಲ್ಲಡ್ಕ ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಅವ್ಯಾಹತವಾಗಿ ಕೋಮು ದಳ್ಳುರಿಯಲ್ಲಿ ನಲುಗುತ್ತಿದೆ.
 

ಬೆಂಗಳೂರಿನಲ್ಲಿ ಯಾವುದೇ ಸರಕಾರ ಇರಲಿ, ಕಲ್ಲಡ್ಕ ಪ್ರಭಾಕರ ಭಟ್ ದಕ್ಷಿಣ ಕನ್ನಡದ ‘ಬದಲಿ’ ಅಥವಾ ‘ನಿಜವಾದ’ ಸರ್ಕಾರ ಎನ್ನಲಾಗುತ್ತದೆ. ಅಥವಾ ಉಸ್ತುವಾರಿ ಮಂತ್ರಿ ಎನ್ನೋಣವೇ?! ಜಿಲ್ಲೆಯ ಸಿವಿಲ್ ಮತ್ತು ಪೋಲಿಸ್ ಅಧಿಕಾರಿಗಳ ನೇಮಕ, ಟ್ರಾನ್ಸಫರ್ ಆತನ ಸಮ್ಮತಿಯೊಂದಿಗೆ ನಡೆಯುತ್ತದೆ ಎನ್ನಲಾಗುತ್ತದೆ. ಬಾಳಾ ಠಾಕ್ರೆಯ ಬಗ್ಗೆ ಹೇಳುತ್ತಿದ್ದಂತೆ, ಪ್ರಭಾಕರ ಭಟ್ ನನ್ನು ಬಂಧಿಸಿದರೆ ಇಡೀ ದಕ್ಷಿಣ ಕನ್ನಡ ಹತ್ತಿ ಉರಿಯುತ್ತದೆ ಎಂದು ಆಡಳಿತ, ಪೋಲಿಸ್ ಮತ್ತು ರಾಜಕೀಯ ನಾಯಕರನ್ನು ಬೆದರಿಸಲಾಗುತ್ತದೆ. ಇದನ್ನು ಹೌದಾ ಎಂದು ಯಾರೂ ಟೆಸ್ಟ್ ಮಾಡಲು ಹೋಗಿಲ್ಲ.

ಆದರೆ ಇದನ್ನು ಮಾಡದೆ ಯಾವುದೇ ಸರಕಾರ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತೇವೆ ಎಂದು ಶಪಥ ಮಾಡುವುದು ಆತ್ಮವಂಚನೆಯಾಗುತ್ತದೆ. ಬೊಗಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆಕ್ಯುಲರ್ ಮತ್ತು ಎಡ ಶಕ್ತಿಗಳು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಲು ಬೇಕಾದಷ್ಟು ಪುರಾವೆಗಳಿವೆ. ಆತನ “ಕೋಮುದ್ವೇಷ”ದ ಭಾಷಣಗಳ ದೊಡ್ಡ ಲೈಬ್ರರಿಯೇ ಇದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೇ. ಕಳೆದ ಚುನಾವಣೆ ಪ್ರಚಾರದ ಸಮಯದಲ್ಲ್ಲಿ ಆ ಮೇಲೆ ಮಂತ್ರಿಗಳಾದ ರಮಾನಾಥ ರೈ ಮತ್ತು ಯು.ಟಿ. ಖಾದರ್, ಕಾಂಗ್ರೆಸ್ ಸರಕಾರ ಬಂದರೆ ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸುತ್ತೇವೆ ಎಂದು ಜಿಲ್ಲೆಯ ಜನತೆಗೆ ಆಶ್ವಾಸನೆ ಕೊಟ್ಟಿದ್ದರು. 4 ವರ್ಷ ವಿಳಂಬವಾಗಿದ್ದರೂ, ಈಗಲಾದರೂ ರಮಾನಾಥ ರೈ ಅವರಿಗೆ ಇನ್ನೊಂದು ಚುನಾವಣೆ ಹತ್ತಿರ ಬರುತ್ತಿರುವಾಗಲಾದರೂ ಆ ಆಶ್ವಾಸನೆ ಈಡೇರಿಸುವ ಮನಸ್ಸಾಗಿದ್ದರೆ ಅದನ್ನು ಎಲ್ಲರೂ ಸ್ವಾಗತಿಸಬೇಕು. ಟೀಕಿಸಬೇಕಾಗಿಲ್ಲ.
 

ರಮಾನಾಥ ರೈ ಈ ಬಗ್ಗೆ ಎಸ್.ಪಿ.ಯವರಿಗೆ ನೀಡಿದ ಆದೇಶ ಸರಿಯಾಗಿಯೇ ಇದೆ. ಅದು ಅವರ ಸಂವಿಧಾನಬದ್ಧ ಕರ್ತವ್ಯವೂ ಹೌದು. ಅದನ್ನು ವೈಯಕ್ತಿಕವಾಗಿ ಎಸ್.ಪಿ,ಗೆ ಹೇಳಬೇಕಿತ್ತೊ ಮೀಟಿಂಗ್ ನಲ್ಲಿ ಹೇಳಬೇಕಿತ್ತೊ ಎಂಬುದು ಬೇರೆ ವಿಚಾರ. ಆ ಮೀಟಿಂಗಿನಲ್ಲಿ ಇದ್ದವರೆಲ್ಲಾ ಅಧಿಕಾರಿಗಳು. ಅದರ ವಿಡಿಯೋ ಹೇಗೆ ಮಾಧ್ಯಮಗಳಿಗೆ ತಲುಪಿತು ಎಂಬ ಬಗ್ಗೆ ತನಿಖೆಗೆ ಆಜ್ಞೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಸದನದಲ್ಲಿ ಇದು ಒಂದು ಅಪರಾಧವೋ ಎಂಬಂತೆ ಸದನದಲ್ಲಿ ರೈ ಗಳ ಮೇಲೆ ಮುಗಿ ಬಿದ್ದ ಬಿಜೆಪಿ ಸದಸ್ಯರಿಗೆ ಸಂವಿಧಾನ ಕಾನೂನು ಪಾಠ ಹೇಳಬೇಕಾಗಿದೆ. ಬಿಜೆಪಿಯ ಈ ಅರಚಾಟವನ್ನೇ ತಾರಕಕ್ಕೆ ಒಯ್ದ ಮಾಧ್ಯಮಗಳಿಗೂ ಈ ಪಾಠ ಹೇಳಬೇಕಾಗಿದೆ. ರಮಾನಾಥ ರೈ ಅವರನ್ನು ಪರಿಣಾಮಕಾರಿಯಾಗಿ ಬೆಂಬಲಿಸದ ಗೃಹ ಮಂತ್ರಿ ಮತ್ತು ಕಾಂಗ್ರೆಸ್ ಗೂ ಈ ಪಾಠ ಹೇಳಬೇಕಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ ಮಾತ್ರವಲ್ಲ, ಆಗಾಗ ದಕ್ಷಿಣ ಕನ್ನಡದಲ್ಲಿ “ಕೋಮುದ್ವೇಷ” ಹಬ್ಬಿಸುವ ಭಾಷಣ ಮಾಡುವ ಎಲ್ಲರನ್ನು ಬಂಧಿಸಬೇಕು. ಸಂಸದ ನಳಿನ್ ಕಟೀಲ್ ಇಡೀ ಜಿಲ್ಲೆಗೆ ಬೆಂಕಿ ಹಚ್ಚುವ ಭಾಷಣಕ್ಕೂ ಆತನನ್ನು ಬಂಧಿಸಬೇಕು. ಸಂಘ ಗ್ಯಾಂಗಿನ ಬೆದರಿಕೆಗೆ ಮಣಿಯದೆ ಪಿಣರಾಯಿ ವಿಜಯನ್ ಭೇಟಿಯ ಸಂದರ್ಭದಲ್ಲಿ, ಅವರು, ಸಿಪಿಐ(ಎಂ) ಮತ್ತು ರಾಜ್ಯ/ಜಿಲ್ಲಾ ಆಡಳಿತ ತೋರಿಸಿದ ಸ್ಥೈರ್ಯವನ್ನು ಮತ್ತೊಮ್ಮೆ ತೋರಿಸಬೇಕಾಗಿದೆ.